ಅಂಕಣಗಳು

'ಜಗುಲಿ' ಕೊಟ್ಟಿದ್ದಕ್ಕೆ ಖುಷಿ

Published On :

ನಮ್ಮ ನೆಚ್ಚಿನ ಕನ್ನಡಪ್ರಭದ ಪೆಪ್ಪರ್‌ಮಿಂಟ್ ಅಂಕಣದಲ್ಲಿ ತಾ. 6.7.2013ರಂದು ಪ್ರಕಟವಾದ 'ಹುಡುಕಬಲ್ಲಿರಾ?' ಪದಬಂಧ ಅರ್ಥಪೂರ್ಣವಾಗಿತ್ತು. ಅದನ್ನು ರಚಿಸಿದವರು ತಮ್ಮ ಕಚೇರಿಯ ಸಿಬ್ಬಂದಿಯೆ? ಹಾಗಿದ್ದರೆ ಅವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸಿ. ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಹಿತ್ಯ ಕುರಿತಾದ ಇಂತಹ ಪದಬಂಧಗಳನ್ನು ಪ್ರಕಟಿಸುವ ಮೂಲಕ ಪದಬಂಧದಲ್ಲಿಯ ವಿಷಯ ಅರಿತು ಪಟ್ಟಿ ಮಾಡಲು ವಾಚಕರಿಗೆ ಅವಕಾಶ ನೀಡಿ.
-ಯವನಪ್ಪ. ಪಿ. ಮರೋಳ, ಪೊ: ಹೊಸರಿತ್ತಿ, ತಾ. ಹಾವೇರಿ. ಜಿ. ಹಾವೇರಿ

ಪ್ರಸ್ತುತತೆಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳನ್ನು ವಾರವಿಡಿ ಉಣಬಡಿಸುತ್ತಿದ್ದೀರಿ. ಶನಿವಾರದ (ಜುಲೈ 13) ಪತ್ರಿಕೆ ಕುರಿತು ಹೊಗಳಿದರೆ, ಪದಗಳೇ ಸಪ್ಪೆ ಸಪ್ಪೆಯಾಗುತ್ತದೆ. ಪ್ರತಾಪ್‌ಸಿಂಹರ "ಈಟ್ ಇಂಡಿಯ ಕಂಪನಿ" ಲೇಖನ, ನಿಜಕ್ಕೂ ವಿಶ್ವಸಂಸ್ಥೆಯಲ್ಲಿ ನಿಂತು ಭಾಷಣ ಮಾಡುತ್ತಿರುವಂತೆ ಇತ್ತು. ಧನ್ಯವಾದಗಳು.
-ಜಾವಗಲ್ ಕೃಷ್ಣಶರ್ಮ, 98445 98425

ಕನ್ನಡಪ್ರಭ ಓದುಗರ ಮೆಚ್ಚಿನ ಅಂಕಣವಾಗಿದ್ದ 'ಜಗುಲಿ'ಯನ್ನು ಮತ್ತೆ ಪ್ರಾರಂಭಿಸಿರುವುದು ಸಂತಸ ತಂದಿದೆ, ಈ ಅಂಕಣವನ್ನು ಸ್ವಲ್ಪ ವಿಸ್ತರಿಸಿ ಪ್ರತಿನಿತ್ಯ ನಾಲ್ಕು ಓದುಗರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಕನ್ನಡಪ್ರಭ ಹೊಸತನವನ್ನು ಸೃಷ್ಟಿಸುವತ್ತ ಹೆಜ್ಜೆ ಇಡುತ್ತಿರುವ ಪತ್ರಿಕೆ, ಹೀಗಿರುವಾಗ 'ಬೈಟು ಕಾಫಿ' ಸಂಚಿಕೆಯಲ್ಲಿ ಅದು ಮಾಡಬೇಡಿ.. ಇದು ಮಾಡಿ ಎನ್ನುತ್ತಾ ಓದುಗರ ತಲೆ ಕೆಡಿಸುವ 'ದಿನಭವಿಷ್ಯ' ಬೇಡ. 'ಫೇಸ್‌ಬುಕ್‌'ನಲ್ಲೇ ತಮ್ಮೆಲ್ಲಾ ಫೋಟೋಗಳನ್ನು ಪ್ರದರ್ಶಿಸುವ ಕಾಲವಿದು. ಹೀಗಿರುವಾಗ ನೀವು ಮದುವೆ, ಮುಂಜಿ, ನಾಮಕರಣಗಳ ಫೋಟೋ ಪ್ರಕಟಿಸುವ ಅಗತ್ಯವುಂಟೆ? ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗುವ ಶೃತಿಭಟ್ ಅವರ ಅಂಕಣ 'ಶೃತಿಲಯ'ವನ್ನು ಒಂದು ವಾರ ಪುಟ 5ರಲ್ಲಿ ಪ್ರಕಟಿಸಿದರೆ ಮತ್ತೊಂದು ವಾರ ಪುಟ 6ರಲ್ಲಿ ಪ್ರಕಟಿಸುತ್ತೀರ. ಒಂದು ನಿರ್ದಿಷ್ಟ 'ಕಾಲಂ'ನಲ್ಲಿ ಪ್ರಕಟಿಸಿದರೆ ಅದನ್ನು ಕತ್ತರಿಸಿ  ಸಂಗ್ರಹಿಸಿಡಲು ಅನುಕೂಲವಾಗುತ್ತದೆ.
-ಫ್ಯಾಷನ್ ಡಿಸೈನರ್ ಮಧು, ಹಾಸನ, 99457 - 37427

'ತಪ್ಪಾಯ್ತು ತಿದ್ಕೊತೀವಿ' ಅಂಕಣದಲ್ಲಿ ಬಹಳಷ್ಟು ತಪ್ಪುಗಳನ್ನು ಓದುಗರು ತೋರಿಸಿ ಕೊಡುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಾದರೂ ಎಷ್ಟರ ಮಟ್ಟಿಗೆ ತಿದ್ದುಪಡಿ ಆಗುತ್ತದೆಯೋಗೊತ್ತಿಲ್ಲ. ನಾವು ಬರೆದ ಲೇಖನಗಳನ್ನು, ಪತ್ರಗಳನ್ನು ಓದಿ, ಸರಿಯಾಗಿ ಪ್ರಕಟಿಸುವ ಜವಾಬ್ದಾರಿ ಇರಬೇಕು. ನಿಮ್ಮ ವರದಿಗಳಿಗೂ, ಲೇಖನಗಳಿಗೂ ನಿಜವಾದ ಅರ್ಥದ ಪ್ರೂಫ್ ರೀಡಿಂಗ್ ಬೇಕು. ಈ ಅಂಕಣಕ್ಕೆ 'ತಪ್ಪಾಯಿತು ತಿದ್ಕೋತೀವಿ' ಅನ್ನುವುದಕ್ಕಿಂತಲೂ "ತಪ್ಪಾಯಿತು ಒಪ್ಕೋತೀವಿ" ಅನ್ನುವುದು ಹೆಚ್ಚು ಸೂಕ್ತವೇನೋ?
-ಬಿ.ಎನ್. ಭರತ, 91, ಮಧುರ ಚೇತನ ಕಾಲನಿ, ಕುಸುಗಲ್ ರಸ್ತೆ, ಹುಬ್ಬಳ್ಳಿ-580 023.

ವಿಶ್ವೇಶ್ವರ ಭಟ್ಟರ ರವಾಂಡಾ ಡೈರಿಯನ್ನು ಓದಿ ಹೊಸಲೋಕವೊಂದನ್ನು ಕಂಡ ಅನುಭವವಾದರೆ, ಮೊನ್ನೆ ಗುರುವಾರ ದಿನಾಂಕ 18/7ರಂದು ಅವರ ಲೇಖನ 'ಮಸೈಮರಾ ಮೃಷ್ಟಾನ್ನ, ಬನ್ನೇರುಘಟ್ಟ ಹಾಗಲಕಾಯಿ' ಓದಿ ಅತ್ಯಂತ ರೋಮಾಂಚನವಾಯಿತು. ನಾವೂ ಕೂಡಾ ಪ್ರಾಣಿಪ್ರಿಯರೇ... ಡಿಸ್ಕವರಿ, ಎನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ಗಳು ನಮಗೆ ಅತ್ಯಂತ ಪ್ರಿಯ. ನೀವು ಹೇಳಿದಂತೆ ಅದರಲ್ಲಿ ತೋರಿಸುವ ಪ್ರಾಣಿಗಳ ಬೇಟೆಗಳ ವಿಡಿಯೋ ಚಿತ್ರೀಕರಣದ ಬಗ್ಗೆ ನಾವು ಸದಾ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದೆವು. ಪ್ರತಿ ಸಲ ನೋಡುವಾಗಲೂ ಅದೇನೋ ಹೊಸತನ ರೋಮಾಂಚನ! ಮಸೈಮರಾದ ಬಗ್ಗೆ ನಿಮ್ಮ ಸ್ವಂತ ಅನುಭವ ಓದಿ ನಿಜಕ್ಕೂ ಅತ್ಯಂತ ಖುಷಿಯಾಯ್ತು. ಕಣ್ಮುಂದೆ ಕಟ್ಟುವಂತೆ ಬರೆಯುವ ನಿಮ್ಮ ಬರವಣಿಗೆ ಶೈಲಿ ನಮ್ಮನ್ನು ಒಮ್ಮೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಪ್ರೇರೇಪಣೆ ನೀಡದಿರದು.
-ವಿಜಯಾ ಎ. ಡೋಂಗ್ರೆ

ಫಾರಿನ್ ಕ್ರೇಜಿನೆಸ್ ಎಂಬುದು ವಿಶ್ವೇಶ್ವರಭಟ್ಟರನ್ನೂ ಬಿಡಲಿಲ್ಲ ಅಂತ ಅನಿಸಿದ್ದು ಅವರ ಜುಲೈ 18ರ 'ನೂರೆಂಟು ನೋಟ' ಲೇಖನ ಓದಿದಾಗಲೇ. ಅಲ್ಲಾ ಸ್ವಾಮಿ, ವಿದೇಶದಲ್ಲೆಲ್ಲೋ ಸಾಕಷ್ಟು ಪ್ರಾಣಿಗಳನ್ನು ನೋಡಿ ಬಂದವರಿಗೆ ನಮ್ಮ ಬೆಂಗಳೂರಿನ ಬನ್ನೇರುಘಟ್ಟದ ನ್ಯಾಷನಲ್ ಪಾರ್ಕ್ ವೀಕ್ಷಣೆ, ಒಳ್ಳೆಯ ಊಟದ ನಂತರ ಹಾಗಲಕಾಯಿ ತಿಂದಂತಾಯಿತಂತೆ?! ಉಚ್ಚರಿಸಲೂ ಕಷ್ಟವಾದ ಮಸೈಮರಾ ಪ್ರವಾಸ ಮಾಡಿಸಿದ್ದ ಲೇಖಕರಿಗೆ ಧನ್ಯವಾದ. ಒಂದು ವಿಷಯ ಸಮಸ್ಯೆಗೆ ಈಡು ಮಾಡುತ್ತಿದೆ. ನಮ್ಮಲ್ಲಿ ಒಂದು ಕಾಡು ಹಂದಿಯೋ, ಕರಡಿಯೋ ಅಥವಾ ಆನೆಯೋ ಬಂದರೆ ಇಷ್ಟೊಂದು ಗಾಬರಿಯಾಗುವಾಗ ಸಾವಿರಾರು ವನ್ಯಮೃಗಗಳ ನೆಲೆಯಾದ ಮಸೈಮರಾವು ಮನುಷ್ಯನಿಗೆ ಏನೂ ಅಪಾಯ ಒಡ್ಡಿಲ್ಲವೇ? ಅಥವಾ ಅಲ್ಲಿ ಜನವಸತಿಯೇ ಇಲ್ಲವೇ?
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ, ಉತ್ತರಕನ್ನಡ-581338, ಮೊ. 9632 821920

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.