ಎನ್ಕೌಂಟರ್ ನಡೆದದ್ದು ಹೇಗೆ?
18 ಸೆಪ್ಟೆಂಬರ್ 2008ರಂದು ಬಾಟ್ಲಾ ಹೌಸ್ ಮೊಹಲ್ಲಾಕ್ಕೆ ಕಾಲಿಟ್ಟ ಮೋಹನ್ ಚಂದ್ ಶರ್ಮಾರಿಗೆ ತಾವು ಹುಡುಕುತ್ತಿದ್ದ ವ್ಯಕ್ತಿಯ ಬಗ್ಗೆ ಕೇವಲ ಎರಡೇ ವಿಷಯಗಳು ಗೊತ್ತಿದ್ದವು: 'ಆ ವ್ಯಕ್ತಿಗೆ ಮುಂದಿನ ಹಲ್ಲುಗಳಿಲ್ಲ' ಮತ್ತು 'ಆತನಿಗೆ ಭಾರತದ ಅತ್ಯಂತ ಅಪಾಯಕಾರಿ ಉಗ್ರರೊಂದಿಗೆ ನಂಟಿರಬಹುದು' ಎನ್ನುವುದು. ದೆಹಲಿಯ ಆಗಸ್ಟ್ ತಿಂಗಳ ಬಿಸಿಲಿಗೆ ಬೆವರುತ್ತಾ, ವಿಚಿತ್ರ ರೀತಿಯಲ್ಲಿ ಕಟ್ಟಲಾಗಿದ್ದ ಮೆಟ್ಟಿಲುಗಳನ್ನು ಏರಿದ ಶರ್ಮಾ ಧಗೆ ತಾಳಲಾಗದೆ ತಮ್ಮ ಬುಲೆಟ್ ಪ್ರೂಫ್ಜಾಕೆಟ್ ಅನ್ನು ಬಿಚ್ಚಿಬಿಟ್ಟರು. ತಾವು ಹುಡುಕುತ್ತಿರುವ ವ್ಯಕ್ತಿಗಳು ಸಶಸ್ತ್ರರಾಗಿರುತ್ತಾರೆಂದು ಭಾವಿಸಲು ಅವರ ಬಳಿ ಯಾವ ಕಾರಣಗಳೂ ಇರಲಿಲ್ಲ. ಆದರೆ ಅವರು ಅಂದುಕೊಂಡದ್ದು ಸುಳ್ಳಾಗಿತ್ತು.
ಕೆಲವು ದಿನಗಳ ಹಿಂದೆ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಶರ್ಮಾರ ಕೊಲೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ನ ಉಗ್ರ ಶಹಜಾದ್ ಅಹಮದ್ ತಪ್ಪಿತಸ್ಥ ಎಂದು ತೀರ್ಪಿತ್ತಿದೆ. ಹಾಗೆಂದು ಬಾಟ್ಲಾ ಹೌಸ್ ಎನ್ಕೌಂಟರ್ ನ್ಯಾಯಬದ್ಧವಾಗಿತ್ತೋ/ ಇಲ್ಲವೋ ಎನ್ನುವುದನ್ನು ಇತ್ಯರ್ಥ ಮಾಡಲು ಈ ತೀರ್ಪಿನ ಅವಶ್ಯಕತೆಯಿತ್ತು ಎನ್ನುವಂತಿಲ್ಲ. ಏಕೆಂದರೆ ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಈ ಪ್ರಶ್ನೆಗೆ 2009ರಲ್ಲೇ ಉತ್ತರಿಸಿತ್ತು. ತದನಂತರ ಸುಪ್ರಿಂ ಕೋರ್ಟ್ ಕೂಡ ಹೀಗೆಯೇ ಹೇಳಿತ್ತು.
ಹಲವಾರು ವಾರಗಳ ನಿರಂತರ ತನಿಖೆ ಶರ್ಮಾರನ್ನು ಬಾಟ್ಲಾಹೌಸ್ನ ಔ-18 (ಶಹಜಾದ್ ತಂಗಿದ್ದ ಮನೆ) ಮುಂದೆ ತಂದು ನಿಲ್ಲಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಜುಲೈ 27ರಂದು ಅಹಮದಾಬಾದ್ನಲ್ಲಿ ಬಾಂಬ್ ಸ್ಫೋಟ ನಡೆಸಿದ ನಂತರ ವಿವಿಧ ರಾಜ್ಯಗಳ ಪೊಲೀಸರು 2005ರಿಂದ ಬಗೆಹರಿಸಲಾಗದ ಬಹಳಷ್ಟು ಪ್ರಕರಣಗಳಲ್ಲಿ ಈ ಉಗ್ರಸಂಘಟನೆಯ ಪಾತ್ರವಿರಬಹುದೇ ಎನ್ನುವುದನ್ನು ತನಿಖೆ ಮಾಡತೊಡಗಿದರು.
ಗುಜರಾತ್ ದಾಳಿಗಾಗಿ 'ಕದ್ದ ಕಾರುಗಳನ್ನು' ಒದಗಿಸಿದ ಅಫ್ಜಲ್ ಉಸ್ಮಾನಿ ಎಂಬಾತನನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಬಂಧಿಸಿತು. ವಿಚಾರಣೆಯ ವೇಳೆ ಉಸ್ಮಾನಿ, ತಾನು ಆ ಕಾರುಗಳನ್ನು ಇಂಡಿಯನ್ ಮುಜಾಹಿದ್ದೀನ್ನ ಉಗ್ರ ಕಯಾಮುದ್ದೀನ್ ಕಪಾಡಿಯಾಗೆ ಕೊಟ್ಟಿದ್ದಾಗಿ ಹೇಳಿದ್ದ. ಈ ಸಮಯದಲ್ಲೇ ಆತ ಇಂಡಿಯನ್ ಮುಜಾಹಿದ್ದೀನ್ನ ಇನ್ನೊಬ್ಬ ಕಮಾಂಡರ್ 'ಬಷೀರ್'ನ ಬಗ್ಗೆ ಬಾಯಿಬಿಟ್ಟದ್ದು. 'ಬಷೀರ್ಗೆ ಮುಂದಿನ ಹಲ್ಲುಗಳಿಲ್ಲ, ಆತ ಜುಲೈ 26ರಂದೇ ಅಹಮದಾಬಾದ್ನಿಂದ ತೆರಳಿ ದೆಹಲಿಯ ಜಾಮಿಯಾನಗರದ ಬಾಟ್ಲಾ ಹೌಸ್ನಲ್ಲಿ ಅಡಗಿಕೊಂಡಿದ್ದಾನೆ' ಎಂದಾತ ಪೊಲೀಸರಿಗೆ ಹೇಳಿದ.
ಇನ್ನು ಎರಡನೇ ಪ್ರಮುಖ ಮಾಹಿತಿಯನ್ನು ಗುಜರಾತ್ ಪೊಲೀಸ್ ಕ್ರೈಂ ಬ್ರಾಂಚ್ ಕಲೆಹಾಕಿತು. ಗುಜರಾತ್ನ ಭರೂಚ್ ನಿವಾಸಿಯೊಬ್ಬ ಪೊಲೀಸರಿಗೆ ಫೋನ್ ಮಾಡಿ, 'ಅಹಮದಾಬಾದ್ ಸ್ಫೋಟಕ್ಕೆ ಬಳಸಿದ ಕಾರುಗಳನ್ನು ತನ್ನ ಬಾಡಿಗೆದಾರನ ಹತ್ತಿರ ನೋಡಿದ್ದೆ' ಎಂದು ಹೇಳಿದ. ಡೆಪ್ಯೂಟಿ ಕಮಿಷನರ್ ಅಭಯ್ ಚೌದಸ್ಮಾರಿಗೆ- ಆ ಬಾಡಿಗೆದಾರನ ಮೊಬೈಲ್ ಫೋನ್ ಅಹಮದಾಬಾದ್ ಸ್ಫೋಟದ ನಂತರ ಸ್ವಿಚ್ ಆಫ್ ಆಗಿದೆ ಎನ್ನುವ -ಚಿಕ್ಕ ಸುಳಿವು ಸಿಕ್ಕಿತು. ಕರೆ ದಾಖಲೆಗಳನ್ನು ತಡಕಾಡಿದಾಗ, ಅಹಮದಾಬಾದ್ ಸ್ಪೋಟದ ವೇಳೆ ಸಂಚುಕೋರರು ಬಳಸಿದ 5 ಮೊಬೈಲ್ಗಳಲ್ಲಿ ಆ 'ಬಾಡಿಗೆದಾರನ' ಮೊಬೈಲ್ ಕೂಡ ಒಂದಾಗಿತ್ತೆಂದು ತಿಳಿಯಿತು.
ಆದರೆ ದೋಷಿಗಳು ಅರಿವಿಲ್ಲದೇ ಒಂದು ಚಿಕ್ಕ ತಪ್ಪು ಮಾಡಿದ್ದರು. 16-22ಜುಲೈ, 2008ರ ನಡುವೆ ಗುಜರಾತ್ನಲ್ಲಿ ರೆಜಿಸ್ಟರ್ ಆದ ಈ 5 ಫೋನುಗಳ ಪೈಕಿ ಒಂದನ್ನು ದೆಹಲಿಯ ಜಾಮಿಯಾನಗರ ಏರಿಯಾದಲ್ಲಿ ಬಳಸಲಾಗಿತ್ತು. ಈ ಫೋನಿಗೆ ಕೇವಲ 5 ಕರೆಗಳು ಬಂದಿದ್ದವು. ಅವೂ ಜಾಮಿಯಾನಗರದ ಪಬ್ಲಿಕ್ ಬೂತುಗಳಿಂದ. ತದನಂತರ ಇದೇ ಫೋನ್ ಜುಲೈ 24ರಂದು ಅಹಮದಾಬಾದ್ನಲ್ಲಿ ಆ್ಯಕ್ಟಿವ್ ಆಯಿತು!
ಅಹಮದಾಬಾದ್ ಸ್ಫೋಟಕ್ಕೆ ಮತ್ತು ಜಾಮಿಯಾನಗರಕ್ಕೆ ಸಂಬಂಧವಿದೆಯೆನ್ನುವುದನ್ನು ಪುಷ್ಠೀಕರಿಸಲು ಪೊಲೀಸರಿಗೆ ಇನ್ನೊಂದು ಸುಳುಹು ಸಿಕ್ಕಿತು- 19 ಜುಲೈರಂದು ಭರೂಚ್ನಲ್ಲಿ ಬಳಸಲಾದ ಸೆಲ್ಫೋನ್ಗೆ ಮುಂಬೈನಿಂದ ಕರೆಯೊಂದು ಬರುತ್ತದೆ(ಇದು ಉತ್ತರಪ್ರದೇಶದಿಂದ ರೆಜಿಸ್ಟರ್ ಆದ ನಂಬರ್). ಈ ಉತ್ತರಪ್ರದೇಶದ ನಂಬರ್ಗೆ ದೆಹಲಿಯ ಜಾಮಿಯಾನಗರದ ನಿವಾಸಿ ಮೊಹಮ್ಮದ್ ಆತಿಫ್ ಅಮೀನ್ನಿಂದಲೂ ಕರೆ ಬಂದಿತ್ತು! ಈ ಎಲ್ಲಾ ಮಾಹಿತಿಗಳನ್ನು ಹರವಿಕೊಂಡು ಕುಳಿತ ಪೊಲೀಸರಿಗೆ, ಒಂದೋ ಆತಿಫ್ ಅಮೀನ್ 'ಬಷೀರ್'ಗೆ ರಕ್ಷಣೆ ಕೊಟ್ಟಿದ್ದಾನೆ ಅಥವಾ ಇವರಿಬ್ಬರೂ ಒಂದೇ ವ್ಯಕ್ತಿ ಇರಬಹುದು ಎನ್ನುವ ಅನುಮಾನ ಬಂತು. ಈ ಸಮಸ್ಯೆಯನ್ನು ಬಗೆಹರಿಸಲು ಶರ್ಮಾರಿಗೆ ಹೇಳಲಾಯಿತು.
ಸಬ್ ಇನ್ಸ್ಪೆಕ್ಟರ್ ಧರ್ಮಿಂದರ್ ಕುಮಾರ್, ಮೋಹನ್ ಚಾಂದ್ ಶರ್ಮಾ ಮತ್ತು ಹೆಡ್ ಕಾನ್ಸ್ಟೆಬಲ್ ಬಲವಂತ್ ರಾಣಾ ಬಷೀರ್ನನ್ನು ಹುಡುಕುತ್ತಾ ಬಾಟ್ಲಾ ಹೌಸ್ಗೆ ಹೊರಟರು. ಶರ್ಮಾ ತಾವು ವೋಡಾಫೋನ್ ಕಂಪನಿಯ ಸೆಲ್ಸಮೆನ್ನಂತೆ ವೇಷ ಬದಲಿಸಿದರು. ಅಮೀನ್ನ ಮನೆಯ ಸುಳಿವು ಸಿಗುತ್ತಿದ್ದಂತೆಯೇ ಶರ್ಮಾ ಬ್ಯಾಕ್ಅಪ್ಗಾಗಿ ರಾಣಾನನ್ನು ಕರೆದರು.
ತಾವು ಪೊಲೀಸ್ ಅಧಿಕಾರಿಗಳೆಂದು ಬಲವಂತ್ ರಾಣಾ ಕೂಗಿದರೂ ಕೂಡ ಒಳಗಿನಿಂದ ಉತ್ತರ ಬರಲಿಲ್ಲ. `L' ಆಕೃತಿಯ ಮೊಗಸಾಲೆಯಲ್ಲಿ ನಡೆದು ಹೋದಾಗ ಅವರಿಗೆ ಆ ಮನೆಯ ಎರಡನೇ ಬಾಗಿಲು ಎದುರಾಯಿತು. ಬಾಗಿಲು ತೆರದೇ ಇತ್ತು. ಶರ್ಮ ಮತ್ತು ರಾಣಾ ಒಳಗೆ ಹೋಗುತ್ತಿದ್ದಂತೆಯೇ, ಬಾಗಿಲಿನ ಎದುರುಗಡೆಯಿಂದ ಮತ್ತು ಬಲಬದಿಯಿಂದ ಶರ್ಮಾರ ಮೇಲೆ ದಾಳಿ ಮಾಡಲಾಯಿತು. ಹೊರಗಿದ್ದ ಪೊಲೀಸರು ಗುಂಡಿನ ಸದ್ದು ಕೇಳಿ ಮೇಲೆ ಧಾವಿಸಿ ಬಂದಾಗ, ಇನ್ನಿಬ್ಬರು ಉಗ್ರರು ಮುಂದಿನ ಬಾಗಿಲಿಂದ ತಪ್ಪಿಸಿಕೊಂಡುಬಿಟ್ಟರು. ದಾಳಿಯಲ್ಲಿ ಆತಿಫ್ ಅಮೀನ್ ಮತ್ತು ಮೊಹಮದ್ ಸಾಜಿದ್ ಮೃತಪಟ್ಟರೆ, ತಪ್ಪಿಸಿಕೊಂಡ ಸಾಜಿದ್ ಅಹಮದ್ ಮುಂಬೈನ ಸಮಾಜವಾದಿ ಪಕ್ಷದ ನಾಯಕನೊಬ್ಬನ ರಕ್ಷಣೆ ಪಡೆದ! ನಂತರ ಆ ರಾಜಕಾರಣಿ ಪೊಲೀಸರ ಒತ್ತಡಕ್ಕೆ ಮಣಿದು ಸಾಜಿದ್ನನ್ನು ವಶಕ್ಕೊಪ್ಪಿಸಿದ.
ಬಾಟ್ಲಾ ಹೌಸ್ನಂಥ ಘಟನೆ ಅಮೆರಿಕ ಅಥವಾ ಯುರೋಪ್ನಲ್ಲಿ ನಡೆದಿದ್ದರೆ ಅದರ ವೈಖರಿಯೇ ಬೇರೆಯಿರುತ್ತಿತ್ತು ಎಂದು ಹೇಳುತ್ತಾರೆ ಪರಿಣತರು. ಸರಿಯಾದ ಶಸ್ತ್ರಾಸ್ತ್ರಗಳಿಲ್ಲದೆ, ಪೂರ್ವತಯಾರಿಯಿಲ್ಲದೆ ಅಲ್ಲಿನ ಸ್ಪೆಷಲ್ ಅಸಾಲ್ಟ್ ಟೀಮ್ಗಳು ಕಾರ್ಯಾಚರಣೆಗಿಳಿಯುವುದಿಲ್ಲ. ಅವರಿಗೆ ದೊರೆಯುವಂಥ ಸೌಲಭ್ಯಗಳಿಗೆ ಹೋಲಿಸಿ ನೋಡಿದರೆ, ಶರ್ಮಾ ಮತ್ತವರ ತಂಡ ತಮ್ಮ ಕೈಲಾದಷ್ಟು ಪ್ರಯತ್ನ ಪಟ್ಟಿತು ಎಂದೇ ಹೇಳಬೇಕು. ವೈದ್ಯಕೀಯ ವರದಿಗಳ ಪ್ರಕಾರ, ಶರ್ಮಾರಿಗೆ ಎರಡು ದಿಕ್ಕಿನಿಂದ ಗುಂಡೇಟುಗಳು ತಗುಲಿದ್ದವು. ಒಂದು ಗುಂಡು ಎಡ ಭುಜದಿಂದ ಹೊಕ್ಕು ಬಲತೊಳಿನ ಮೂಲಕ ಹೊರಬಂದರೆ, ಇನ್ನೊಂದು, ಅವರ ಹೊಟ್ಟೆಯನ್ನು ಸೀಳಿ ಪೃಷ್ಠದ ಮೂಲಕ ಹೊರಬಂದಿತ್ತು. ಅವರ ಹೊಟ್ಟೆಗೆ ಗಾಯ ಮಾಡಿದ್ದು ಅಮೀನ್ ಎಂತಲೂ ಮತ್ತು ಅವರ ಭುಜಕ್ಕೆ ಗುಂಡು ಹಾರಿಸಿದ್ದು ಮೊಹಮ್ಮದ್ ಸಾಜಿದ್ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
ಆದರೆ ಗುಂಡೇಟು ತಿಂದ ಶರ್ಮಾರ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾದಾಗ ದೊಡ್ಡ ಗದ್ದಲವೇ ಎದ್ದಿತು. 'ಅವರ ಶರ್ಟ್ನ ಮುಂಭಾಗದಲ್ಲಿ ರಕ್ತದ ಕಲೆಯೇ ಇಲ್ಲ, ಹಾಗಾಗಿ ಅವರಿಗೆ ಹಿಂದಿನಿಂದಲೇ ಯಾರೋ(ಪೊಲೀಸರೇ) ಗುಂಡು ಹಾರಿಸಿದ್ದಾರೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆದರೆ, 'ಗುಂಡು ಒಳಹೊಕ್ಕ ಜಾಗಕ್ಕಿಂತ, ಹೊರ ಬರುವ ಜಾಗದಲ್ಲೇ ಹೆಚ್ಚು ಹಾನಿ ಮಾಡುತ್ತದೆ' ಎನ್ನುತ್ತಾರೆ ವಿಧಿವಿಜ್ಞಾನ ತಜ್ಞರು. ಶರ್ಮಾರ ಚಿತ್ರವನ್ನು ಗಮನಿಸಿದಾಗಲೂ ಇದು ಸ್ಪಷ್ಟವಾಗುತ್ತದೆ. ವರ್ಷಗಳಿಂದ ದಿಗ್ವಿಜಯ್ ಸಿಂಗ್ರಂಥ ರಾಜಕಾರಣಿಗಳು ಉತ್ತರಭಾರತದ ಮುಸಲ್ಮಾನರ ಅಭದ್ರತೆಗಳಿಂದ(ಸಾಮುದಾಯಿಕ ಪ್ರತೀಕಾರವೆದುರಿಸುವ ಮತ್ತು ಬಲಿಪಶುಗಳನ್ನಾಗಿಸುವ) ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಕುಟಿಲತೆಯ ಮೇಲೆ ನಿರ್ಮಾಣವಾಗಿರುವ ಹಾನಿಕಾರಕ ರಾಜಕೀಯವಿದು!
ಅಮೆರಿಕದ ಡೆಲವೇರ್ ವಿಶ್ವವಿದ್ಯಾಲಯದ 'ಇಸ್ಲಾಮಿಕ್ ಸ್ಟಡೀಸ್'ನ ನಿರ್ದೇಶಕ ಮಕ್ತೇದಾರ್ ಖಾನ್ 2008ರ ತಮ್ಮ ಲೇಖನವೊಂದರಲ್ಲಿ, ಮುಸಲ್ಮಾನರನ್ನು ಪ್ರತಿನಿಧಿಸುವ ಹೆಸರಿನಲ್ಲಿ ಎಲ್ಲಾ ತಪ್ಪನ್ನೂ ಮುಚ್ಚಿಹಾಕುವ 'ಬೌದ್ಧಿಕ ಅಪ್ರಾಮಾಣಿಕ'ರ ಮೇಲೆ ಹರಿಹಾಯುತ್ತಾರೆ. ಖಾನ್ ಹೇಳುವುದೇನೆಂದರೆ...
'ಜಿಹಾದಿ ಉಗ್ರವಾದ ಎನ್ನುವುದೇ ಅಸ್ತಿತ್ವದಲ್ಲಿಲ್ಲ ಎಂದು ಕೆಲವರು ಹೇಳುತ್ತಾರೆ. ಅಲ್ಲದೆ ಉಗ್ರವಾದಕ್ಕೆ ಅಮೆರಿಕ, ಇಸ್ರೇಲ್ ಮತ್ತು ಭಾರತದ ನೀತಿಗಳೇ ಮುಖ್ಯ ಕಾರಣ ಎಂದೂ ದೂಷಿಸುತ್ತಾರೆ. ಜಿಹಾದಿ ಹಿಂಸಾಚಾರಕ್ಕೆ ಮೂಲ ಕಾರಣ ಈ ಮೂರೂ ದೇಶಗಳ ಹಿಂಸಾತ್ಮಕ ಯುದ್ಧಗಳು(ಪ್ಯಾಲೆಸ್ತೀನ್, ಇರಾಕ್ ಮತ್ತು ಕಾಶ್ಮೀರದಲ್ಲಿ)ಎಂದು ಸಮಜಾಯಿಶಿ ನೀಡುತ್ತಾರೆ. ಜಿಹಾದಿ ಉಗ್ರವಾದವೇ ಇಲ್ಲ ಎಂದು ಮೊದಲಿಗೆ ಹೇಳಿದವರು, ನಂತರ ಅದರ ಸಮರ್ಥನೆ ನೀಡುತ್ತಾರೆ'
***
ದೆಹಲಿ ಹೈಕೋರ್ಟ್ನ ತೀರ್ಪಿನಿಂದ ಈ ಯುದ್ಧ ಅಂತ್ಯವಾಗುವುದಿಲ್ಲ: ಈ ತೀರ್ಪಿನ ವಿರುದ್ಧ ಕೆಲವರು ಮೇಲ್ಮನವಿ ಸಲ್ಲಿಸಬಹುದು ಮತ್ತು ಇನ್ನುಳಿದ ರಾಜ್ಯಗಳಲ್ಲಿನ ಕೇಸುಗಳು ಬಗೆಹರಿಯುವುದಕ್ಕೂ ವರ್ಷಗಳು ಹಿಡಿಯಬಹುದೇನೋ?!
- ಪ್ರವೀಣ್ ಸ್ವಾಮಿ
ಖ್ಯಾತ ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

