ವಿದ್ಯಾರ್ಥಿ ಮಿತ್ರರಿಗೊಂದು ಓಲೆ
ಮಕ್ಕಳೇ, ಶಾಲೆಗಳು ಆರಂಭವಾಗುತ್ತಿವೆ. ನೀವು ಸಿದ್ಧರಾಗಿದ್ದೀರಿ ತಾನೇ? ಎರಡು ತಿಂಗಳವರೆಗೆ ರಜೆಯ ಮಜಾ ಅನುಭವಿಸಿದ್ದೀರಿ. ವಿವಿಧ ಊರು-ಕೇರಿಗೆ ಭೇಟಿ ನೀಡಿ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ಪಾಲಕರೊಟ್ಟಿಗೆ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ ಮಾಡಿ, ಲೋಕಾನುಭವ ಪಡೆದುಕೊಂಡು ಮರಳಿದ್ದೀರಿ. ಹೊಸ ಸ್ಥಳ, ಹೊಸ ಪರಿಚಯ, ಹೊಸ ಭಾವನೆಯೊಂದಿಗೆ ಒಂದಿಷ್ಟು ನವಚೈತನ್ಯ ಮತ್ತು ಹೊಸ ಸ್ಫೂರ್ತಿಯನ್ನು ನಿಮ್ಮದಾಗಿಸಿಕೊಂಡಿದ್ದೀರಿ. ಲವಲವಿಕೆಯಿಂದ ತುಂಬಿ ತುಳುಕುತ್ತಿದ್ದೀರೆಂದು ಕಾಣುತ್ತದೆ.
ಬದುಕನ್ನು ವಿಕಾಸಗೊಳಿಸಲು ಇದೆಲ್ಲದರ ಅಗತ್ಯವಿದೆ. ವಿದ್ಯೆಯೊಂದಿಗೆ ವಿಕಾಸವು ಆಗಬೇಕಾಗುತ್ತದೆ. ಇಂದಿನದು ಪದವಿಗಾಗಿ ವಿದ್ಯೆ. ಅದು ಮುಗಿದುಹೋಗುತ್ತದೆ. ವಿಕಾಸ ಹಾಗಲ್ಲ. ಅದು ಬದುಕಿನುದ್ದಕ್ಕೂ ನಡೆಯುವ ಪ್ರಕ್ರಿಯೆ. ವಿದ್ಯೆಯನ್ನು ತನ್ನದಾಗಿಸಿಕೊಂಡವನು, ವಿದ್ಯಾವಂತನೆನಿಸಿಕೊಳ್ಳುತ್ತಾನೆ. ವಿಕಾಸದ ಹಂತಗಳನ್ನು ಮುಟ್ಟುತ್ತಾ ಹೋದವನು ವಿಚಾರವಂತನಾಗುತ್ತಾನೆ. ವಿಚಾರವಂತನೇ ಮುಂಬರುವ ದಿನಗಳಲ್ಲಿ ಪ್ರಜ್ಞಾವಂತ. ಈಗ ಮಳೆಗಾಲ. ಅದು ಸುರಿಯಲು ಆರಂಭವಾಗುತ್ತಿದ್ದಂತೆ ಭೂಮಿಯನ್ನು ಹದಗೊಳಿಸುವ ಕ್ರಿಯೆಗೆ ಚಾಲನೆ ದೊರೆಯುತ್ತದೆ. ಇದೇ ರೀತಿಯಾಗಿ ಕಲಿಕೆಯೆಂಬ ಕೃಷಿಗೂ ಸಿದ್ಧತೆಯ ಅಗತ್ಯವಿದೆ. ಮೊದಲು ಕಲಿಯುವ ಪ್ರವೃತ್ತಿಯಲ್ಲಿ ಆಸಕ್ತಿ ಕುದುರಬೇಕು. ವಿದ್ಯೆಯೆಂಬ ಭೂಮಿಯನ್ನು ಹಸನುಗೊಳಿಸಲು ಆಸಕ್ತಿಯೆಂಬ ನೇಗಿಲು. ಏಕಾಗ್ರತೆ ಮತ್ತು ಕುತೂಹಲವೆಂಬ ಎತ್ತುಗಳು. ಜ್ಞಾನ-ವಿಜ್ಞಾನ-ವ್ಯವಧಾನವೆಂಬ ಬೀಜಗಳು. ಪಠ್ಯಕ್ರಮವೆಂಬ ಬದುಗಳು. ವಿದ್ಯಾರ್ಥಿಯೇ ಇಲ್ಲಿ ಕೃಷಿಕ. ಫಲವೆಂದರೆ, ಯಶಸ್ಸು. ವಿದ್ಯಾರ್ಥಿಯು ಕಲಿಕೆಯ ವಿಚಾರದಲ್ಲಿ ಭಾವನಾತ್ಮಕವಾದ ಸದಭಿರುಚಿಯನ್ನು ಇಟ್ಟುಕೊಂಡು, ಅದನ್ನು ವ್ಯವಸಾಯ ಎಂಬಂತೆ ಮುಂದುವರೆಸಬೇಕು. ಫಸಲು ಉತ್ತಮವಾಗಿ ಬಂದರೆ, ಆ ವರ್ಷದ ಬದುಕು ನಿಶ್ಚಿಂತ-ನಿರಾಳ. ಆ ಪ್ರಕಾರವಾಗಿ ಪ್ರತಿವರ್ಷ ಉತ್ತಮ ಫಲಿತಾಂಶವನ್ನು ಪಡೆದರೆ ಮಾತ್ರ, ಉಜ್ವಲ ಭವಿಷ್ಯ. ತರಗತಿಗೆ ತಕ್ಕುದಾದ ಸಮವಸ್ತ್ರ, ಕಾಲಲ್ಲಿ ಬೂಟುಗಳು. ಚೀಲದಲ್ಲಿ ಅವತ್ತಿಗೆ ಬೇಕಾಗುವ ಪಠ್ಯಪುಸ್ತಕಗಳು ಮತ್ತು ನೋಟ್ಬುಕ್ಕುಗಳು. ಬಹುತೇಕ ವಿದ್ಯಾರ್ಥಿಗಳು ಹೊಸಪುಸ್ತಕಗಳನ್ನು ಪಾಲಕರಿಂದ ಖರೀದಿಸಿಕೊಳ್ಳುತ್ತಾರೆ. ಬಡತನದ ನಡುವೆ ನಾನು ಕಲಿಯುತ್ತಿದ್ದರಿಂದ ಮುಂದಿನ ತರಗತಿಗೆ ಹೋದ ವಿದ್ಯಾರ್ಥಿಗಳ ಪುಸ್ತಕಗಳನ್ನು ಅರ್ಧಬೆಲೆಗೆ ಖರೀದಿಸಿ, ಅವುಗಳಿಗೆ ಹೊಸ ರೊಟ್ಟು ಹಾಕುತ್ತಿದ್ದೆ. ಹಳೆ ಪುಸ್ತಕ, ಹೊಸ ರೊಟ್ಟು. ಹೊಸ ನೋಟ್ಬುಕ್ಗಳು. ಜಾಮಿಟ್ರಿ ಬಾಕ್ಸ್, ಪೆನ್, ಪೆನ್ಸಿಲ್ ಎಲ್ಲವನ್ನು ಖರೀದಿಸಿದ್ದೀರಾ?
ಬಡತನವೆಂದು ಹೇಳಿಕೊಂಡು ಪಾಲಕರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಸಾಲಿನಲ್ಲಿ ನಿಂತು ಸಂದರ್ಶನಕ್ಕೆ ಬರುತ್ತಾರೆ. ಮೊನ್ನೆ ಹೀಗಾಯ್ತು - ತಂದೆಯು ಮಗನೊಂದಿಗೆ ಬಂದ. ಏನು ತೊಂದರೆಯಪ್ಪ ಎಂದು ಕೇಳಿದೆ. ಬಡತನ ಸ್ವಾಮಿ. ಏಳು ಹೆಣ್ಣುಮಕ್ಕಳು. ಹಾಗಾದರೆ ಈತ ಎಂಟನೆಯವನಿರಬೇಕಲ್ಲವೆ ಎಂದು ಕೇಳಿದೆ. ಆತ - ಹೌದು ಎಂದ. ಗಂಡುಮಗು ಜನಿಸುವವರೆಗೂ ಅವರು ಮಕ್ಕಳ ಸಂತಾನವನ್ನು ಪಡೆಯುತ್ತ ಹೋಗಿದ್ದಾರೆ. ಏಳುಜನ ಹೆಣ್ಣುಮಕ್ಕಳನ್ನು ಮದುವೆ ಮಾಡಿ, ಮಗನ ಓದಿಗೆ ಕಷ್ಟವೆಂದು ನಿಂತುಕೊಂಡ ಅವರನ್ನು ನೋಡಿ ನಿಜವಾಗಿಯೂ ಮರುಕವೆನಿಸಿತು. ಬಡತನದ ಹಿಂದೆ ಅಜ್ಞಾನ. 'ಮಗನ ವಿದ್ಯೆಗೆ ಯಾವುದೇ ಕಾರಣಕ್ಕೂ ತೊಂದರೆ ಮಾಡಬಾರದು. ಸ್ವಲ್ಪ ಓದಿಸಿದರೆ ಸಾಕು, ತಮ್ಮ ಬದುಕನ್ನು ತಾವೇ ಮುಂದೆ ಕಟ್ಟಿಕೊಳ್ಳುತ್ತಾರೆ. ಓದಲು ನಿನಗೆ ಸೂಕ್ತ ಅವಕಾಶ ಇದೆಯೇ?' ಎಂದು ಕೇಳಿದಾಗ, 'ಇಲ್ಲ' ಅಂದನಾತ. ತಂದೆಯು ಗ್ರಾಮಾಂತರ ಪ್ರದೇಶದಲ್ಲಿ ಒಂದು ಚಿಕ್ಕ ಹೋಟೆಲ್ ನಡೆಸುತ್ತಿದ್ದು, ಆಗಾಗ ಶಾಲೆ ಬಿಡಿಸಿ, ತನ್ನ ಮಗನನ್ನು ಕಪ್ಪು-ಬಸಿ ತೊಳೆಯಲು ಹಚ್ಚುತ್ತಾನೆಂಬುದನ್ನು ತಿಳಿದುಕೊಂಡೆ. ತಂದೆಗೆ ಇನ್ನು ಮುಂದೆ ಹಾಗೆ ಮಾಡದಂತೆ ತಾಕೀತು ಮಾಡಿದೆ. ಮಕ್ಕಳ ವ್ಯಾಸಂಗಕ್ಕೆ ಪಾಲಕರಾದವರು ಯಾವುದೇ ಕಾರಣಕ್ಕೂ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಓದುವ ಆಸಕ್ತಿಯಿದೆ. ಅನುಕೂಲತೆಯಿಲ್ಲ. ಅನುಕೂಲತೆಗಳಿವೆ ಓದುವ ಆಸಕ್ತಿ ಇಲ್ಲ. ತಿಳಿದುಕೊಂಡಷ್ಟು ಬದುಕು ಸುಲಭವಲ್ಲ. ಸವಾಲುಗಳೊಟ್ಟಿಗೆ ಸಾಗಬೇಕಾದ ಸಂದರ್ಭ. ಸವಾಲು-ಸಮಸ್ಯೆ ಪುನಃ ಪುನಃ ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ಸಮಾಧಾನದಿಂದ ಸ್ವೀಕರಿಸಿ, ಬದುಕು ಕಟ್ಟುವ ಕಲೆಗೆ ಒಳಗಾಗಬೇಕಾಗುತ್ತದೆ. ಸದಾಕಾಲ ಸಕಾರಾತ್ಮಕವಾಗಿ ಆಲೋಚಿಸುವ ವಿಧಾನವನ್ನು ರೂಢಿಸಿಕೊಳ್ಳುವುದು ಸೂಕ್ತ. ಪರೀಕ್ಷೆ ದೂರ ಇದ್ದಾಗ ಚಿನ್ನಾಟ, ಹತ್ತಿರಹತ್ತಿರವಾದಂತೆ ಭಯದಾಟ. ಪರೀಕ್ಷೆಯು ಭಯವಾಗಿ ಕಾಡಬಾರದೆಂದರೆ, ಅಂದಂದಿನ ಪಾಠ-ಪ್ರವಚನವನ್ನು ಅಂದಂದೇ ಮೆದುಳಿನಲ್ಲಿ ದಾಖಲೆ (ರಿಜಿಸ್ಟ್ರೇಶನ್) ಆಗಬೇಕು. ಸರಿಯಾಗಿ ದಾಖಲೆಯಾದದ್ದು ಯಥಾವತ್ತಾಗಿ ಉಳಿಯುತ್ತದೆ (ರಿಟೈನ್). ಮೆದುಳಿನಂಗಳದಲ್ಲಿ ದಾಖಲೆಯಾಗಿ ಉಳಿದಿರುವುದನ್ನು, ಯಾವಾಗಬೇಕಾದರು ನೆನಪಿಸಿಕೊಳ್ಳಬಹುದು (ರೀಕಾಲ್). ಪಾಠವನ್ನು ಕೇಳಲು ಸೂಕ್ತವಾದ ಸಿದ್ಧತೆಯೆಂದರೆ, ಇದುವೆ ಆಗಿದೆ. ಸಿದ್ಧತೆ, ಅದು ವಿದ್ಯಾರ್ಥಿ ಬದುಕಿನ ಬದ್ಧತೆ. ಈ ಸಿದ್ಧತೆಯೊಂದಿಗೆ ತರಗತಿಗಳಿಗೆ ಹೋಗುತ್ತೀರಿ ತಾನೇ?
ನಿಮ್ಮ ಓದು ಯಶಸ್ವಿಯಾಗಲಿ. ನಿಮ್ಮ ಭವಿಷ್ಯ ಉಜ್ವಲವಾಗಲಿ, ಸುಭದ್ರವಾಗಲಿ, ಶುಭವಾಗಲಿ.
-ಡಾ. ಶಿವಮೂರ್ತಿ ಮುರುಘಾ ಶರಣರು
ಶ್ರೀ ಮುರುಘಾಮಠ, ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

