ಅಂಕಣಗಳು

ಹ್ಯಾಪಿ ಬರ್ತ್‌ಡೇ ಜಾರ್ಜ್

Published On :

ಬಂಗಲೆ ನಂಬರ್ 3, ಕೃಷ್ಣ ಮೆನನ್ ಮಾರ್ಗ, ದೆಹಲಿ.
ಅದೊಂದು ಕಾಲದಲ್ಲಿ ಈ ಮನೆಗೆ ಗೇಟ್ ಇರಲಿಲ್ಲ. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲ. ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ಆದರೆ, ಈಗ ಅಲ್ಲಿ ಅಷ್ಟು ಸುಲಭವಾಗಿ ಯಾರಿಗೂ ಒಳಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಭದ್ರತಾ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ!  
ಅಂದ ಹಾಗೆ ಆ ಮನೆ ದೇಶದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರದ್ದು. ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿರುವ ಜಾರ್ಜ್ ಈಗ ಇದ್ದೂ ಇಲ್ಲಂದಂಥ ಸ್ಥಿತಿಯಲ್ಲಿದ್ದಾರೆ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ...ಹೀಗೆ ಏನೆಲ್ಲ ವಿಶೇಷಣಗಳನ್ನು ನೀಡಿದರೂ ಜಾರ್ಜ್‌ಗೆ ಅನ್ವರ್ಥಕವಾಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ತಾವು ನಂಬಿದ ಸಿದ್ಧಾಂತವನ್ನು ತ್ಯಜಿಸದೇ ಅವರು ರಾಜಕೀಯ ಜೀವನದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು. ಹಾಗಂತ, ಸುಮ್ಮನೆ ಸಿಕ್ಕ ಅಥವಾ ಪಡೆದ ಅಧಿಕಾರದಲ್ಲಿ ವಿಜೃಂಭಿಸಿ ಇಳಿಯಲಿಲ್ಲ. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಹೆಗ್ಗಳಿಕೆ.
1930 ಜೂನ್ 3ರಂದು ಮಂಗಳೂರಿನ ಕ್ಯಾಥೋಲಿಕ್ ಕುಟುಂಬದ ಜೊಸೇಫ್ ಫರ್ನಾಂಡಿಸ್ ಮತ್ತು ಅಲಿಸ್ ಮಾರ್ಥಾ ಫರ್ನಾಂಡಿಸ್ ಅವರ 6 ಮಕ್ಕಳಲ್ಲಿ ಜಾರ್ಜ್ ಹಿರಿಯರು. ಈ ಸಂಪ್ರದಾಯಸ್ಥ ಕುಟುಂಬ ಜಾರ್ಜ್ ಅವರನ್ನು ಪಾದ್ರಿ ತರಬೇತಿಗಾಗಿ ಬೆಂಗಳೂರಿಗೆ ಕಳುಹಿಸಿತು. ಜಾರ್ಜ್ ಒಳಗೆ ಒಬ್ಬ ಹೋರಾಟಗಾರ ಜಾಗೃತಗೊಂಡಿದ್ದು ಇದೇ ಅವಧಿಯಲ್ಲಿ. ಪಾದ್ರಿ ತರಬೇತಿಯನ್ನು ಬಿಟ್ಟು ಮುಂಬೈಗೆ ತೆರಳಿದಾಗ ಅವರಿಗೆ ಕೇವಲ 19 ವರ್ಷ. ಅಲ್ಲಾದರೂ ಅವರಿಗೆ ಪರಿಚಯದವರಿರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳ ಬದಿಯಲ್ಲೇ ಮಲಗಿದ್ದುಂಟು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು.
ಈ ಹಂತದಲ್ಲಿ ಸಮಾಜವಾದಿ ನಾಯಕ ಲೋಹಿಯಾ ಹಾಗೂ ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೋ ಅವರ ಸಂಪರ್ಕ ಜಾರ್ಜ್ ಅವರಿಗೆ ದೊರಕಿತು. ಇಲ್ಲಿಂದಲೇ ಜಾರ್ಜ್ ಅವರ ಹೋರಾಟದ ಮಜಲುಗಳು ಆರಂಭವಾದವು. ಕಾರ್ಮಿಕ ಚಳವಳಿಯಲ್ಲಿ ಜಾರ್ಜ್ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಇದೇ ಅವರನ್ನು 1961ರ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆಯ್ಕೆಯಾಗುವಂತೆ ಮಾಡಿತು. 6 ವರ್ಷದ ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಿಂದ ಸ್ಪರ್ಧೆಗಿಳಿದರು. ಅವರ ಎದುರಾಳಿಯಾಗಿದ್ದವರು ಕಾಂಗ್ರೆಸ್‌ನ ಅಂದಿನ ಜನಪ್ರಿಯ ನಾಯಕ ಎಸ್.ಕೆ. ಪಾಟೀಲ್. ಜಾರ್ಜ್ ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಪಾಟೀಲ್ ಅವರನ್ನು ಜಾರ್ಜ್ ಪರಾಭವಗೊಳಿಸಿದ್ದರು. ಆಗಲೇ ಇವರಿಗೆ '"George, The Giant Killer'ಎಂಬ ನಿಕ್‌ನೇಮ್ ಅಂಟಿಕೊಂಡದ್ದು.
ಹೀಗೆ ಜಾರ್ಜ್ ರಾಜಕೀಯ ಉನ್ನತಿ ಸಾಧಿಸುತ್ತ ಸಾಗಿದರು. 1974ರ ಹೊತ್ತಿಗೆ ಜಾರ್ಜ್ ಮನೆ ಮಾತಾದರು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಆಗ ಅಕ್ಷರಶಃ ದೇಶ 'ಸ್ಥಗಿತ'ವಾಗಿತ್ತು. ಈ ಮುಷ್ಕರಕ್ಕೆ ಉದ್ಯಮ ವಲಯದ ಎಲ್ಲ ವಿಭಾಗಗಳಿಂದಲೂ ಅಪಾರ ಬೆಂಬಲ ದೊರೆಕಿತ್ತು. ಮೂರು ವಾರಗಳ ಈ ಭಯಂಕರ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಅಭದ್ರತೆ ಹುಟ್ಟಿಸಿತು. ಇದೇ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದMovement for changeಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದರು. ಇದೆಲ್ಲದರ ಫಲವಾಗಿ ಅಂತಿಮವಾಗಿ ಇಂದಿರಾ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಬಿಟ್ಟರು. ಪ್ರತಿಪಕ್ಷ ನಾಯಕರನ್ನೆಲ್ಲ ಬಂಧಿಸಿ ಸೆರೆಮನೆಗೆ ಅಟ್ಟಲಾಯಿತು. ಆಗ ಜಾರ್ಜ್ ಮತ್ತು ಅವರ ಜತೆಗಿದ್ದವರು ಭೂಗತರಾದರು. ಬರೋಡಾದಿಂದ ಡೈನಮೈಟ್ ತಂದು ಕಚೇರಿಗಳನ್ನು ಸ್ಫೋಟಿಸುವ ಯೋಜನೆ ಹಾಕಿಕೊಂಡರು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಬಂಧನಕ್ಕೊಳಗಾದರು. ಸರ್ಕಾರಿ ಕಚೇರಿಗಳನ್ನು ಸ್ಫೋಟಿಸಲು ಡೈನಮೈಟ್ ಕದ್ದ ಆರೋಪವನ್ನು ಜಾರ್ಜ್ ಮೇಲೆ ಹೊರಿಸಿ ಬಂಧಿಸಲಾಯಿತು. ಇದೇ ಮುಂದೆ 'ಬರೋಡಾ ಡೈನಮೈಟ್‌' ಪ್ರಕರಣ ಎಂದು ಪ್ರಸಿದ್ಧಿಯಾಯಿತು. ಯಾವುದೇ ಚಾರ್ಜ್‌ಷೀಟ್ ಇಲ್ಲದೆಯೇ ಅವರನ್ನು 9 ತಿಂಗಳು ತಿಹಾರ್ ಜೈಲಿನಲ್ಲಿಡಲಾಯಿತು. ಅಲ್ಲಿಂದಲೇ ಅವರು ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಇಷ್ಟಕ್ಕೆಲ್ಲ ಕಾರಣ ಜಾರ್ಜ್ ಅವರನ್ನು ಬಂಧಿಸಿದ ಕ್ಷಣದಲ್ಲಿ ಅವರ ಕೋಳ ತೊಟ್ಟು ಕೈ ಮೇಲೆತ್ತಿದ್ದ ಫೋಟೋ!
ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋತು ಸುಣ್ಣವಾದರೆ, ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ ನಾಯಕರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಜಾರ್ಜ್ ಅವರು ಈ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾದರು. ಜಾರ್ಜ್ ಎಷ್ಟು ಖಡಕ್ ಆಗಿದ್ದರೆಂದರೆ ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕದ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾದರು. ಅವೆರಡೂ ಕಂಪನಿಗಳು ಭಾರತವನ್ನು ಬಿಟ್ಟು ಹೊರಡಬೇಕಾಯಿತು. ಮುಂದೆ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಅಷ್ಟೊತ್ತಿಗೆ ಒಂದಾಗಿದ್ದ ಕಾಂಗ್ರೆಸ್ಸೇತರ ನಾಯಕರೆಲ್ಲ ಒಡೆದು ಚಿಲ್ಲಾಪಿಲ್ಲಿಯಾದರು. ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಜತೆ ಕೈಜೋಡಿಸಬೇಕಾಯಿತು. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‌ಡಿಎ) ಸಂಚಾಲಕರೂ ಆದರು. 1998ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಜಾರ್ಜ್ ಅವರು ದೇಶದ ರಕ್ಷಣಾ ಸಚಿವರಾದರು. ವಿಪರ್ಯಾಸವೆಂದರೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾರ್ಜ್ ಅಣ್ವಸ್ತ್ರ ವಿರೋಧಿಸುತ್ತಲೇ ಬಂದಿದ್ದರು. ಆದರೂ, ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿತು. ಮುಂದೊಂದು ದಿನ ಅದನ್ನು ಅವರು ಸಮರ್ಥಿಸಿಕೊಂಡರು ಕೂಡಾ. ಆದರೆ, ರಕ್ಷಣಾ ಸಚಿವರಾಗಿದ್ದಾಗ ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಅವರನ್ನು ಕಂಗೆಡಿಸಿದವು. ಮಂತ್ರಿ ಸ್ಥಾನವನ್ನೂ ಬಿಟ್ಟುಕೊಡಬೇಕಾಯಿತು. ಆದರೆ, ತನಿಖೆಯ ನಂತರ ಅವರು ಶುದ್ಧಹಸ್ತರು ಎಂದು ತೀರ್ಮಾನವಾದಾಗ ಮತ್ತೆ ವಾಜಪೇಯಿ ಕ್ಯಾಬಿನೇಟ್ ಸೇರಿ ರಕ್ಷಣಾ ಸಚಿವರಾದರು. ಆದರೆ, ಹಗರಣ ಬೇಟೆ ಅವರ ಬೆನ್ನು ಬಿಡಲಿಲ್ಲ. 'ಕಾಫಿನ್‌ಗೇಟ್‌'(ಶವಪೆಟ್ಟಿಗೆ) ಹಗರಣ ಅವರನ್ನು ಸುತ್ತಿಕೊಂಡಿತು. ಕಾರ್ಗಿಲ್ ಯುದ್ಧದ ವೇಳೆ ಸೇನೆ ಶವಪೆಟ್ಟಿಗೆಗಳನ್ನು ಖರೀದಿಸುವಾಗ ನಡೆಯಿತು ಎನ್ನಲಾದ ಹಗರಣವಿದು.
ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿನ ಗಮನ ಸೆಳೆದಿದ್ದು ಜಾರ್ಜ್ ಅವರು, 'ಭಾರತದ ನಂಬರ್ 1 ವೈರಿ ಪಾಕಿಸ್ತಾನವಲ್ಲ, ಅದು ಚೀನಾ' ಎಂದಾಗ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹಾಗೆಯೇ, ಜಾರ್ಜ್ ಕೂಡಾ ನೇಪಥ್ಯಕ್ಕೆ ಸರಿಯುವ ಕಾಲ ಶುರುವಾಯಿತು. ಸ್ವಲ್ಪ ದಿನದಲ್ಲಿ ಅವರಿಗೆ ಅಲ್ಜೈಮರ್ ಕಾಯಿಲೆ ಉಲ್ಬಣಗೊಂಡು ಅವರು ಸಾರ್ವಜನಿಕ ಜೀವನದಿಂದಲೇ ದೂರ ಸರಿಯಬೇಕಾಯಿತು.
ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಸಂಸತ್‌ನಲ್ಲಿ ಅವರು ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಸಾರ್ವಜನಿಕ ಭಾಷಣಕ್ಕೆ ನಿಂತರೆ ಪ್ರಖರ ಸಮಾಜವಾದಿಯಾಗಿ ಬಿಡುತ್ತಿದ್ದರು. ಅಂಥ ವ್ಯಕ್ತಿತ್ವದ ಜಾರ್ಜ್ ಈಗ ನಿಸ್ತೇಜರಾಗಿದ್ದಾರೆ. ತುಂಬ ಸರಳವಾಗಿಯೇ ಬದಕು ನಡೆಸಿದ ಜಾರ್ಜ್ ಇಂದು (ಸೋಮವಾರ) 83ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಾಯಿಲೆಯಿಂದಾಗಿ ಅವರು ಇಂದು ಎಲ್ಲವನ್ನೂ ಮರೆತಿರಬಹುದು, ಆದರೆ ನಾವು ಅವರನ್ನು ಮರೆಯುವುದು ಬೇಡ.

- ಮಲ್ಲಿಕಾರ್ಜುನ ತಿಪ್ಪಾರ, ಕನ್ನಡಪ್ರಭ
mtippar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.