ಈಗಿನದ್ದಲ್ಲ ಭಾರತ-ಜಪಾನ್ ಸಂಬಂಧ
ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಜಪಾನ್ ಭೇಟಿಯನ್ನು ಭಾರತದ ಭಾವಿ ಸಾಮರಿಕ ಉದ್ದೇಶಗಳನ್ನು ಪೂರ್ಣಗೊಳಿಸಿಕೊಳ್ಳಲು ಅತ್ಯಂತ ಅವಶ್ಯಕ ನಡೆಯೆಂದು ಕರೆಯಬಹುದು. ಹಾಗೆ ನೋಡಿದರೆ ಜಪಾನ್ನಲ್ಲಿ ಮನಮೋಹನ್ ಸಿಂಗ್ ಅವರ ಜನಪ್ರಿಯತೆ ತುಸು ಹೆಚ್ಚಾಗಿಯೇ ಇದೆ. ಈ ವಿಷಯ ಕಳೆದ ಬಾರಿ ಟೋಕಿಯೋ ಯಾತ್ರೆ ಕೈಗೊಂಡಾಗ ನನ್ನ ಅನುಭವಕ್ಕೆ ಬಂದಿತ್ತು. ಸಾಮರಿಕ ಮತ್ತು ಆರ್ಥಿಕ ದೃಷ್ಟಿಯಿಂದ ಕೈಗೊಳ್ಳಲಾದ ಮನಮೋಹನ್ ಸಿಂಗ್ ಅವರ ಜಪಾನ್ ಯಾತ್ರೆ ಮೇ 29ಕ್ಕೆ ಮುಗಿಯಬೇಕಿತ್ತು, ಆದರೆ ಮುಕ್ತಾಯದ ಅವಧಿ ವಿಸ್ತಾರವಾಗಿ, ಕೊನೆಗೆ ಅದು ಮೇ. 30ರವರೆಗೂ ಹೋಯಿತು. ಬಹುಶಃ ಈ ವಿಷಯ ಎಲ್ಲರಿಗೂ ಗಮನಕ್ಕೆ ಬಂದಿದೆಯೋ ಇಲ್ಲವೋ ತಿಳಿಯದು, ಆದರೆ ಭಾರತೀಯರ ಜೀವನ ಶೈಲಿಯ ಮೇಲೆ ಜಪಾನ್ನಂತೆ ಬೇರಾವ ದೇಶವೂ ಅಷ್ಟೊಂದು ಪರಿಣಾಮ ಬೀರಿಲ್ಲ. ಉದಾಹರಣೆಯಾಗಿ ಮಾರುತಿ ಸುಜುಕಿಯನ್ನೇ ತೆಗೆದುಕೊಳ್ಳಿ. ಅದು ದೇಶದ ನಕ್ಷೆಯನ್ನೇ ಬದಲಿಸಿಬಿಟ್ಟಿತು. ಇನ್ನು ಮಾರುತಿ 800 ಕಾರು ನಮ್ಮ ಪರಿವಹನದ ರೂಪು-ರಂಗಿಗೆ ಕ್ರಾಂತಿಕಾರಿ ರೀತಿಯಲ್ಲಿ ಹೊಸ ಪರಿಭಾಷೆಯನ್ನೇ ಕೊಟ್ಟುಬಿಟ್ಟಿತು. ನಂತರ ಮೆಟ್ರೋ ರೇಲ್ವೆ ಇದೇ ಕೆಲಸವನ್ನು ಹೊಸ ರೀತಿಯಲ್ಲಿ ಇನ್ನಷ್ಟು ಅದ್ಭುತವಾಗಿ ಮಾಡಿತು. ಪ್ರತಿಯೊಂದು ಮನೆಯಲ್ಲೂ ತೋಶಿಬಾ, ಕೆನನ್, ಸೋನಿ, ನಿಕಾನ್ನಂತಹ ಎಲೆಕ್ಟ್ರಾನಿಕ್ ಉಪಕರಣಗಳು ಹಾಸು ಹೊಕ್ಕವು. ಅವೆಲ್ಲ ನಮ್ಮ ಜೀವಿನದ ಅವಿಭಾಜ್ಯ ಅಂಗಗಳಾದವು.
ಚೀನಾ ಲದಾಖ್ಗೆ ಹೊಕ್ಕು ಹಿಂದುಸ್ತಾನದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿರುವ ಈ ಸಮಯದಲ್ಲಿ ಜಪಾನ್ನೊಂದಿಗೆ ಹೆಚ್ಚುತ್ತಿರುವ ಸಂಬಂಧ ಭವಿಷ್ಯದ ದೃಷ್ಟಿಯಿಂದ ಶುಭಶಕುನವೆಂದೇ ಹೇಳಬಹುದು. ಜಪಾನ್ ದಿಲ್ಲಿಯಿಂದ ಮುಂಬೈವರೆಗಿನ ಔದ್ಯೋಗಿಕ ಕಾರಿಡಾರನ್ನು, ಅಂದರೆ 'ಕೇವಲ ಸಾಮಾನು ಹೊರುವ' ರೈಲ್ವೇ ಕಾರಿಡಾರನ್ನು ಮುಂಬೈ ಮತ್ತು ಹಾವ್ಡಾ ವರೆಗೂ ತೆಗೆದುಕೊಂಡು ಹೋಗಿ ಭಾರತದ ಔದ್ಯೋಗಿಕ ಪರಿವಾಹನದ ಚಹರೆಯನ್ನೇ ಬದಲಿಸಲಿದೆ. ಜಪಾನ್ ಈಗ ಆರ್ಥಿಕ ಸಂಕಷ್ಟದಲ್ಲಿದ್ದರೂ ಅದು ಭಾರತದ ಸಹಾಯಕ್ಕೆ ಮುಂದಾಗಿದೆ! ಇದೇ ಅಲ್ಲವೇ ಸ್ನೇಹವೆಂದರೆ?
ಹಾಗೆ ನೋಡಿದರೆ ಭಾರತ ಮತ್ತು ಜಪಾನ್ನ ಸಂಸ್ಕೃತಿಗಳು ಎರಡು ಸಾವಿರ ವರ್ಷಗಳಿಂದಲೂ ಸಮನ್ವಯತೆಸಾಧಿಸುತ್ತಾ ಬಂದಿವೆ. ಅಲ್ಲಿ ಈಗಲೂ ಗಣಪತಿ, ಸರಸ್ವತಿ ಮತ್ತು ಶಿವ ಮಂದಿರಗಳಿವೆ. ಅಲ್ಲಿನ ಶಿಂತೋ ಸಂಪ್ರದಾಯ ಪ್ರಾಚೀನ ಹಿಂದೂ ಧರ್ಮದ ಒಂದು ಪ್ರತಿರೂಪವಾಗಿಯೇ ಕಾಣುತ್ತದೆ. ಅಲ್ಲಿನ ಪುರಾತನ ನಗರ ನಾರಾದಲ್ಲಿ ಇಂದ್ರ, ವರುಣ ಮತ್ತು ಶಿವನ ಪ್ರತಿಮೆಗಳಿವೆ. ಪ್ರಾಚೀನ ಬೌದ್ಧ ಮಂದಿರಗಳಲ್ಲೂ ಕೂಡ ಭಾರತದಿಂದ ಅಲ್ಲಿಗೆ ಹೋಗಿದ್ದ ಸುಮಾರು 10 ಬೌದ್ಧ ಭಿಕ್ಷುಗಳ ಪ್ರತಿಮೆಗಳು ಕಾಣಿಸುತ್ತವೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಡಾ. ಮನಮೋಹನ್ ಸಿಂಗ್ ಅವರು ಜಪಾನ್ಗೆ ತೆರಳಿದ್ದು ಮತ್ತು ಅವರ ಯಾತ್ರಾ ಅವಧಿ ಒಂದು ದಿನಕ್ಕೆ ವಿಸ್ತರಣಗೊಂಡ ಸಂದೇಶಗಳೆಲ್ಲ ವಸ್ತುತಃ : ಚೀನಾದ ಮುಂದೆ ಭಾರತದ ಬಲಿಷ್ಠ ಸ್ಥಿತಿಯನ್ನು ಸ್ಪಷ್ಟವಾಗಿ ಎದುರಿಗಿಡುತ್ತವೆ. ಆಶ್ಚರ್ಯದ ಸಂಗತಿಯೆಂದರೆ ಈ ವರ್ತಮಾನದ ಪರಿಪಕ್ವ ವಿಶ್ಲೇಷಣೆ ಮಾಡುವ ಬದಲು, ಚೀನಾದ ಮಾಧ್ಯಮಗಳೆಲ್ಲ ಭಾರತ-ಜಪಾನ್ ಸಂಬಂಧದ ಬಗ್ಗೆ ಉಗ್ರ ಆಲೋಚನಾತ್ಮಕ ಪ್ರತಿಕ್ರಿಯೆಗಳನ್ನೇ ನೀಡಿವೆ. ಅಲ್ಲದೆ ಜಪಾನ್ ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಎಂದು ಕಟು ಶಬ್ದಗಳಿಂದಲೂ ನಿಂದಿಸಿವೆ. ಚೀನಾ ಈ ರೀತಿ ಮೈ ಪರಚಿಕೊಳ್ಳುತ್ತಿರುವುದನ್ನು ನೋಡಿದಾಗ ಮನಮೋಹನ್ ಸಿಂಗ್ ಅವರ ಜಪಾನ್ ಯಾತ್ರೆ ಸಂಪೂರ್ಣ ಯಶಸ್ವಿಯಾಗಿದೆ ಎಂದನಿಸುವುದಿಲ್ಲವೇ? ಚೀನಾ ಜಪಾನ್ನ ಸೆಂಕಾಕು ದ್ವೀಪ ತನಗೆ ಸೇರಬೇಕಾದದ್ದು ಎಂದು ಹೇಳುತ್ತಿದೆ. ಅಲ್ಲದೆ ದಕ್ಷಿಣ ಚೀನಾ ಮಹಾಸಾಗರದಲ್ಲಿ ತನ್ನ ನಿಯಂತ್ರಣವನ್ನು ಜಪಾನಿ ಗಡಿಯ ಅತಿ ಹತ್ತಿರದಲ್ಲಿ, ಅಂದರೆ ವಿಯತ್ನಾಮ್ ಮತ್ತು ಫಿಲಿಪೀನ್ಸ್ನ ಸಾಗರ ಸೀಮೆಗಳ ವರೆಗೆ ವಿಸ್ತರಿಸಿಕೊಳ್ಳಲು ಸಿದ್ಧವಾಗಿದೆ. ಸೇಂಕಾಕು ದ್ವೀಪಗಳ ವಿಚಾರವಾಗಿ ಚೀನಾ ಮತ್ತು ಜಪಾನ್ ನಡುವೆ ಈಗ ಶೀತಲ ಯುದ್ಧ ಶುರುವಾಗಿದೆ. ಈ ಪರಿಸ್ಥಿತಿಯಲ್ಲಿ ಜಪಾನ್ಗೂ ಕೂಡ ಭಾರತದೊಂದಿಗೆ ಮೈತ್ರಿ ಮಾಡಿಕೊಳ್ಳಲೇಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ. 3 ವಾರಗಳ ಹಿಂದೆ ಜಪಾನ್ನ ಉಪಪ್ರಧಾನಮಂತ್ರಿ ತಾರೋ ಆಸೋ ದೆಹಲಿಗೆ ಬಂದಾಗ- 'ಚೀನಾ ಮತ್ತು ಜಪಾನ್ನ ನಡುವೆ ಸುಮಾರು ಒಂದೂವರೆ ಸಾವಿರ ವರ್ಷಗಳ ಸಂಬಂಧವಿದೆ. ಆದರೆ ಇದುವರೆಗೆ ಯಾವ ಸಮಯದಲ್ಲೂ ಕೂಡ ಚೀನಾ ಮತ್ತು ಜಪಾನ್ನ ನಡುವೆ ಸ್ನೇಹ ಹುಟ್ಟಲಿಲ್ಲ' ಎಂದು ಹೇಳಿದ್ದರು. ಹಾಗೆ ನೋಡಿದರೆ ಭಾರತದ ಜಪಾನ್ನೊಂದಿಗಿನ ಆರ್ಥಿಕ ಸಂಬಂಧ ಸದ್ಯಕ್ಕೆ ಚೀನಾಕ್ಕೆ ಹೋಲಿಸಿದರೆ ಅತಿ ಕಡಿಮೆ ಮಟ್ಟದಲ್ಲಿದೆ. ಆದರೆ 'ಎರಡೂ ದೇಶಗಳ ನಡುವಿನ ಸ್ನೇಹ ವೃದ್ಧಿಗೆ ವರ್ತಮಾನ ಸಮಯದಷ್ಟು ಮಹತ್ವಪೂರ್ಣ ಸಮಯ ಹಿಂದೆಂದೂ ಬಂದಿರಲಿಲ್ಲ. ಹಾಗಾಗೇ ಇಬ್ಬರ ನಡುವಿನ ಆರ್ಥಿಕ ವಹಿವಾಟು ಈಗ ತೀವ್ರವಾಗಿ ಹೆಚ್ಚಾಗಲಿದೆ' ಎನ್ನುತ್ತಾರೆ ಮನಮೋಹನ್ ಸಿಂಗ್ ಅವರು.
ಹಿಂದಿರುಗುವಾಗ ಮನಮೋಹನ್ ಸಿಂಗ್ ಅವರು ಬ್ಯಾಂಕಾಕ್ನಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಅಲ್ಲಿ ಅವರಿಗೆ ಥಾಯ್ಲ್ಯಾಂಡ್ನ ಸಾಮ್ರಾಟ 'ಭೂಮಿಬಲ ಅತುಲ್ಯ ತೇಜ್'ನಿಗೆ ಭೌದ್ಧಗಯಾದಿಂದ ತೆಗೆದುಕೊಂಡು ಹೋದ ಬೌದ್ಧಿ ವೃಕ್ಷದ ಒಂದು ಚಿಕ್ಕ ಸಸಿಯನ್ನು ಕಾಣಿಕೆಯಾಗಿ ಕೊಡಲಾಯಿತು. ಥಾಯ್ ಪ್ರಧಾನಿ ಯಿಂಗಲುಕ್ ಶಿನಾವಾತ್ರಾ ಅವರ ಜೊತೆಗೆ ಭಾರತ ಏಳು ಮಹತ್ವಪೂರ್ಣ ಒಪ್ಪಂದಗಳನ್ನು ಮಾಡಿಕೊಂಡಿತು. ಭಾರತ ಮತ್ತು ಥಾಯ್ಲ್ಯಾಂಡ್ನ ನಡುವಿನ ಆರ್ಥಿಕ ವ್ಯಾಪಾರ ಸುಮಾರು 8 ಬಿಲಿಯನ್ ಡಾಲರ್ಗಳಷ್ಟಿದ್ದು ಇದರಲ್ಲಿ ಪ್ರತಿವರ್ಷವೂ ಸುಮಾರು 15 ಪ್ರತಿಶತದಷ್ಟು ಏರಿಕೆಯಾಗುತ್ತಿದೆ. ಆ ದೇಶದಲ್ಲಿ ಭಾರತದ 20 ಕೋಟಿ ಅಮೆರಿಕನ್ ಡಾಲರ್ ಬಂಡವಾಳದ 25 ಬೃಹತ್ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಪೂರ್ವಾಂಚಲ ಭಾರತ, ಥಾಯ್ಲ್ಯಾಂಡ್, ಮ್ಯಾನ್ಮಾರ್ ನಡುವಿನ ರಾಜಮಾರ್ಗ 2016ರಲ್ಲಿ ತೆರೆದುಕೊಳ್ಳಲಿದೆ. ಇದರಿಂದಾಗಿ ಈ ದೇಶಗಳ ನಡುವಿನ ಸರಕು ಸಾಗಾಣೆ ಹೆಚ್ಚಾಗಲಿದೆ.
ಇದೇ ರೀತಿ ಬ್ಯಾಂಕಾಕ್-ಅಹಮದಾಬಾದ್, ಫುಕೆಟ್-ದಿಲ್ಲಿ ಮತ್ತು ಫುಕೆಟ್- ಮುಂಬೈ ನಡುವೆ ವಾಯು ಮಾರ್ಗ ಪ್ರಾರಂಭ ಮಾಡುವ ಒಪ್ಪಂದ ಕಾರ್ಯರೂಪಕ್ಕೆ ಬಂದರೆ ಪರ್ಯಟನೆಗೆ ಬಹಳ ಪ್ರೋತ್ಸಾಹ ಸಿಗಲಿದೆ. ಸದ್ಯಕ್ಕೆ ಭಾರತ ಮತ್ತು ಥಾಯ್ಲ್ಯಾಂಡ್ನ ನಡುವೆ ವಾರಕ್ಕೆ 150 ಹಾರಾಟಗಳು ನಡೆಯುತ್ತಿವೆ. ಆದರೆ ಎಲ್ಲಕ್ಕಿಂತ ಮಹತ್ವಪೂರ್ಣವಾದ ವಿಷಯ ಭಾರತ ಮತ್ತು ಥಾಯ್ಲ್ಯಾಂಡ್ ನಡುವಿನ ಸುರಕ್ಷತಾ ಸಹಯೋಗದ್ದು. ಪೂರ್ವಾಂಚಲದ ಗಡಿ ಭಾಗದಲ್ಲಿ ನಡೆಯುತ್ತಿರುವ ಅಪರಾಧ ಮತ್ತು ಆತಂಕವಾದವನ್ನು ತಡೆಗಟ್ಟುವುದಕ್ಕೆ ಈ ಸಹಯೋಗ ಒಂದು ಮೈಲಿಗಲ್ಲಾಗಲಿದೆ ಎಂದೇ ಹೇಳಬಹುದು.
ಈ ನೆಲೆಗಟ್ಟಿನಲ್ಲಿ ಭಾರತದ ಪೂರ್ವೋನ್ಮುಖಿ ನೀತಿಯ ಕ್ಷಿತಿಜದ ಮೇಲೆ ಜಪಾನ್ ಮತ್ತು ಅನ್ಯ ಪೂರ್ವ ದೇಶಗಳ ಜೊತೆಗೆ ಬೆಳೆಯುತ್ತಿರುವ ಸಹಯೋಗ, ನಮ್ಮ ಚಿಂತೆಯನ್ನು ಕಡಿಮೆ ಮಾಡಿ ಭವಿಷ್ಯದ ದೃಷ್ಟಿಯಿಂದ ಶುಭಸೂಚಕವಾಗಲಿದೆ ಎಂದೇ ಹೇಳಬಹುದು.
-ತರುಣ್ ವಿಜಯ್, ರಾಜ್ಯಸಭಾ ಸದಸ್ಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

