ಪರಿಶುದ್ಧನಿಗೆ ಭಯವೇಕೆ?
ಸ್ವಾತಂತ್ರ್ಯೋತ್ತರ ಕಾಲದ ಸಂವಿಧಾನದ ರೂಪು ರೇಷೆಗಳ ರಚನೆಯಿಂದ ಮೊದಲ್ಗೊಂಡು ಸ್ಥಾಪಿತವಾದ ಆಡಳಿತದ ಹರವುಗಳಿಗೆ ಪೋಷಕ ಶಕ್ತಿಯಾಗಿ ರಚನೆಗೊಂಡವು ರಾಜಕೀಯ ಪಕ್ಷಗಳು. ಉದಾತ್ತ ಮೌಲ್ಯಗಳ, ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯ ಮನೋಭಾವ ಹೊಂದಿರುವ ಮೇಲ್ಪಂಕ್ತಿಯ ರಾಜಕಾರಣಿಗಳಿಂದ ಶ್ರೀಮಂತವಾಗಿದ್ದ ರಾಜಕೀಯ, ಕಾಲಾನುಕ್ರಮದಲ್ಲಿ ಯಾವ ಮಟ್ಟಕ್ಕಿಳಿಯಿತು ಎನ್ನುವುದನ್ನು ಸದ್ಯ ನಾವೆಲ್ಲರೂ ನೋಡಿ ದಂಗು ಬಡಿದು ಹೋಗಿದ್ದೇವೆ. ನಮ್ಮ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ನೆಲೆಗಟ್ಟನ್ನು ಮೂಲೆಗುಂಪಾಗಿಸಿ ಅವಕಾಶವಾದಿ, ಕೀಳುಮಟ್ಟದ ತಂತ್ರಗಾರಿಕೆಯ ಕಳಾಹೀನ ಧೋರಣೆಗಳನ್ನು ಮೈಗೂಡಿಸಿಕೊಳ್ಳುತ್ತಲೇ ಸಾಗುತ್ತಿವೆ. ರಾಜಕೀಯ ಪಕ್ಷಗಳ ಈ ಧೋರಣೆಯ ಪೊರೆ ಕಳಚಿ, ಪಾರದರ್ಶಕತೆಯ ಸಾಧ್ಯತೆಯೊಂದನ್ನು ತೆರೆಯುವಂತೆ ಮಾಡುವ ಐತಿಹಾಸಿಕ ನಿರ್ಧಾರವೊಂದನ್ನು ಕೇಂದ್ರ ಮಾಹಿತಿ ಆಯೋಗವು ಮಾಡಿರುವುದು ಭೇಷ್ ಎನಿಸುವ ಘನಕಾರ್ಯವಾಗಿದೆ. ಕೇಂದ್ರ ಮಾಹಿತಿ ಆಯೋಗವು ರಾಜಕೀಯ ಪಕ್ಷಗಳೂ ಮಾಹಿತಿ ಹಕ್ಕು ಅಧಿನಿಯಮದ ವ್ಯಾಪ್ತಿಯಡಿಯಲ್ಲಿ ತಮ್ಮ ಕಾರ್ಯಗಳಿಗೆ ಸಂಬಂಧಿಸಿದಂತೆ ಉತ್ತರದಾಯಿತ್ವ ಹೊಂದಬೇಕೆಂದು ಹೇಳಿದೆ. ಇದರ ಮೊದಲ ಹಂತವಾಗಿ 6 ಪ್ರಮುಖ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರಜೆಗಳು ಬಯಸುವ ಮಾಹಿತಿಯನ್ನು ನೀಡಬೇಕಾಗಿದೆ. ಕ್ರಮೇಣ ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುವಂತೆ ಮಾಡುವುದು ಆರ್ಟಿಐನ ಇಂಗಿತ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಪಕ್ಷವು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ನೇಮಿಸಬೇಕೆಂದು ಆಯೋಗ ತನ್ನ ನಿರ್ಧಾರದಲ್ಲಿ ತಿಳಿಸಿದೆ.
ಕೇಂದ್ರ ಮಾಹಿತಿ ಆಯೋಗವೇನೋ ಉತ್ತಮ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂದು ನಿಡುಸುಯ್ಯುವ ೆಮೊದಲೇ ರಾಜಕೀಯ ಪಕ್ಷಗಳು ಆಯೋಗದ ನಿರ್ಧಾರದ ವಿರುದ್ಧ ಒಕ್ಕೊರಲ ವಿರೋಧ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್, ಸಿಪಿಯಂ, ಸಿಪಿಐ, ಜೆಡಿಯು, ಎನ್ಸಿಪಿ ಪಕ್ಷಗಳು ನೇರವಾಗಿ ಇದನ್ನು ವಿರೋಧಿಸಿವೆ. ಬಿ.ಜೆ.ಪಿ ಮಾತ್ರ ಪ್ರಾಯಶಃ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ನಿರ್ಧಾರವನ್ನು ಸ್ವಾಗತಿಸಿದಂತೆ ಕಂಡುಬರುತ್ತಿದೆ.
ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಕಡಿಮೆಯೇನಲ್ಲ. ಕೋಟ್ಯಂತರ ರುಪಾಯಿಗಳ ಬೃಹತ್ ಮೊತ್ತ ದೇಣಿಗೆಗಳ ರೂಪದಲ್ಲಿ ಪಕ್ಷಗಳ ನಿಧಿಯ ಹೆಸರಿನಲ್ಲಿ ಸಂಗ್ರಹವಾಗುತ್ತಿದೆ. ಬೇಕೆಂದ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಅಭ್ಯರ್ಥಿ ಎಂದು ಬಿಂಬಿಸುತ್ತಾರೆ. ಪ್ರತಿನಿಧಿಗಳನ್ನೇ ಸೆಳೆಯುವ, ಮಾರಾಟ ಮಾಡುವ ದುಸ್ಸಾಹಸಕ್ಕಿಳಿಯುತ್ತಾರೆ. ಚುನಾವಣಾ ಪ್ರಚಾರಗಳಿಗೆ ಕದ್ದು ಮುಚ್ಚಿ ಕೋಟಿ ಕೋಟಿ ಸುರಿಯುತ್ತಿದ್ದಾರೆ. ಎಲ್ಲದಕ್ಕೂ ನಕಲಿ ಲೆಕ್ಕ, ಪುಕ್ಕಟೆ ಸಮರ್ಥನೆ ಕೊಟ್ಟು ಬಚಾವಾಗುತ್ತಿದ್ದಾರೆ. ಕಾರ್ಪೊರೆಟ್ ವಲಯದವರು, ಉದ್ಯಮಿಗಳು, ಧನಿಕರು, ಕಂಪೆನಿಗಳು ಕೂಡ ಒಂದು ಪಾಲನ್ನು ಪಕ್ಷಗಳ ಹುಂಡಿಗೆ ಸುರಿಯುವ ಪ್ರಕ್ಷೇಪಣಾ ತಂತ್ರವನ್ನು ಹೂಡುತ್ತಾರೆ. ಹೀಗೆ ಸಂಗ್ರಹವಾದ ಹಣವೇ ಚುನಾವಣೆಯ ಸಂದರ್ಭದಲ್ಲಿ ಮತದಾರನಿಗೆ ಅಕ್ರಮವಾಗಿ ಹಂಚುವ ನೋಟಿನಿಂದ ಹಿಡಿದು ಸಂಸತ್ತಿನಲ್ಲಿ ಮತಕ್ಕಾಗಿ ಹಂಚುವ ನೋಟಿನವರೆಗೂ ಸರಬರಾಜಾಗಿರುವುದು ಎಂದರೆ ಅತಿಶಯವಲ್ಲ. ಯಾವ ಹಣವಂತ ತಾನೆ ವೈಯಕ್ತಿಕ ಹಿತಾಸಕ್ತಿಯಿಲ್ಲದೆ ಇಷ್ಟೊಂದು ದೇಣಿಗೆ ನೀಡುತ್ತಾನೆ ನೀವೆ ಯೋಚಿಸಿ? ಅಂದರೆ ಅವರು ಪಕ್ಷಗಳಿಗೆ ನೀಡಿದ ಕಾಣಿಕೆಗೆ ಪ್ರತಿಯಾಗಿ ವಾಮಮಾರ್ಗಗಳ ಮೂಲಕ ಸಂಪಾದಿಸಲು ಸರ್ಕಾರದ ಹಾಗೂ ರಾಜಕೀಯ ಪಕ್ಷಗಳ ಸಹಾಯ ಪಡೆಯುತ್ತಾರೆ ಎನ್ನುವುದು ಶತಸಿದ್ಧ. ನಾವು ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆಗೆ ಕಾಲ ಕಾಲಕ್ಕೆ ಲೆಕ್ಕ ನೀಡುತ್ತೇವೆಂಬ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲಿ ಹುರುಳಿದೆಯೇ? ಚುನಾವಣಾ ಆಯೋಗದ ಬಿಗಿಪಟ್ಟಿನ ಹೊರತಾಗಿಯೂ ಕಳೆದವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿಯೇ ರಾಜಾರೋಷವಾಗಿ ಹೆಲಿಕಾಪ್ಟರ್ನಲ್ಲಿ ಲಕ್ಷಾಂತರ ರು. ಸಾಗಿಸುತ್ತಾರೆಂದರೆ ಯಾರನ್ನು ನಂಬಬೇಕು ಸ್ವಾಮಿ!
ಕಾಂಗ್ರೆಸ್ನ ಜನಾರ್ಧನ್ ದ್ವಿವೇದಿಯವರು ಆಯೋಗದ ಈ ನಿರ್ಧಾರ ಪ್ರಜಾಸತ್ತಾತ್ಮಕ ಸಂಸ್ಥೆಗೆ ಹಾನಿಯನ್ನುಂಟುಮಾಡುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ. 2005 ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆಯಿಂದ ಕಳೆದ 7 ವರ್ಷಗಳಲ್ಲಿ ಅದ್ಯಾವ ಸಂಸ್ಥೆಗಳೆಲ್ಲಾ ಹಾನಿಗೊಳಗಾಗಿವೆ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ನೀಡಬೇಕಾಗಿದೆ! ವಿರೋಧಿಗಳಿಗೆ ಪಕ್ಷಗಳನ್ನು ಹಳಿಯಲು ಮಾಹಿತಿ ಹಕ್ಕು ಕಾಯಿದೆ ಒಂದು ಪೂರಕ ಸಾಧನವಾಗಲಿದೆ ಎಂಬ ಅಭಿಪ್ರಾಯಗಳು ಹೊರ ಬರುತ್ತಿವೆ. ಒಂದೊಮ್ಮೆ ಆ ಬಗೆಯಲ್ಲಿ ಯಾರೇ ಪ್ರಯತ್ನಿಸಿದರೂ ನಮ್ಮ ದೇಶದ ಕಾನೂನು ವ್ಯವಸ್ಥೆ ಸತ್ಯಾಂಶವನ್ನೇ ತಾನೇ ಹೊರತರುವುದು. ಕೊಲೆ ಆರೋಪ ಹೊರಿಸಿದಾಕ್ಷಣ ಕೊಲೆಗಾರನಾಗಬೇಕೆಂದಿಲ್ಲವಲ್ಲ? ಶರದ್ ಯಾದವ್ ಈ ನಿರ್ಧಾರದ ವಿರುದ್ಧ ಹುಯಿಲೆಬ್ಬಿಸಿದ್ದಾರೆ. ಅರುಣ್ ಜೇಟ್ಲಿ ಈ ನಿರ್ಧಾರವನ್ನು ಸ್ವಾಗತಿಸುವುದರೊಂದಿಗೆ ಬಿಸಿಸಿಐ, ಎನ್ಜಿಒಗಳಂತಹ ಸಂಸ್ಥೆಗಳೂ ಕೂಡಾ ಈ ವ್ಯಾಪ್ತಿಗೆ ಒಳಪಡಬೇಕೆಂದು ಹೇಳಿದ್ದಾರೆ.
ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ತಮ್ಮಲ್ಲಿಯೇ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹಿಂದೇಟು ಹಾಕುವ ಇವರುಗಳು ಇನ್ನು ಆಡಳಿತದಲ್ಲಿ ಅದ್ಯಾವ ಪರಿಯ ಪಾರದರ್ಶಕತೆಯನ್ನು ತಂದಾರು ನೀವೆ ಹೇಳಿ? ಪರಿಶುದ್ದನಾಗಿರುವವನಿಗೆ ಭಯದ ಹಂಗ್ಯಾಕೆ? ರಾಮಾಯಣದಲ್ಲಿ ಸೀತೆ ಪರಿಶುದ್ದವಾಗಿದ್ದರಿಂದಲೇ ಅಗ್ನಿ ಪರೀಕ್ಷೆಗೆ ಒಳಗಾಗಲು ಹಿಂದೇಟು ಹಾಕಲಿಲ್ಲ. ಆದರೆ ನಮ್ಮ ರಾಜಕೀಯ ಪಕ್ಷಗಳು...!
-ಸಂದೇಶ್. ಎಚ್ . ನಾಯ್ಕ್
ಹಕ್ಲಾಡಿ, ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

