ಅಂಕಣಗಳು

ಬೆಂಗಳೂರು ಮಾತ್ರ ಕಸ ನಗರವೇ?

Published On :

ನನ್ನ ಒಬ್ಬ ಜಿಗರಿ ದೋಸ್ತ್ ಬಹಳ ದಿನಗಳ ನಂತರ ನನ್ನಲ್ಲಿ ಎರಡು ದಿನಗಳ ಭೆಟ್ಟಿಗೆ ಬಂದಿದ್ದ. ಕೆಲವು ದಿನಗಳ ಹಿಂದೆ, ಅವನನ್ನು ಧಾರವಾಡ ಹಳೇ ಬಸ್ ಸ್ಟ್ಯಾಂಡಿನಲ್ಲಿ ಬರ ಮಾಡಿಕೊಂಡು ಅಲ್ಲಿಂದ ಶಕ್ತಿನಗರ-ವಿದ್ಯಾಗಿರಿ ಧಾರವಾಡದ ನಮ್ಮ ಮನೆಗೆ ಹೋಗಲೆಂದು ಬಸ್ಸ್ಟ್ಯಾಂಡ್ ಹೊರಗಡೆಯೇ ನಿಂತ ರಿಕ್ಷಾ ಕೇಳಲು, ಅವನು ನೂರು ರೂಪಾಯಿ ಬೇಡಿದ ನಂತರ ಎಂಬತ್ತು ರೂಪಾಯಿಗೆ ಬರುತ್ತೇನೆ ಅದಕ್ಕಿಂತ ಕಡಿಮೆ ಅಸಾಧ್ಯ ಎಂದು ಹೇಳಿದ. ನನ್ನ ಗೆಳೆಯ 'ಏಕೆ ಇಲ್ಲಿ ಮೀಟರ್ ಪದ್ಧತಿ ಇಲ್ಲೇನು' ಅಂತಾ ಕೇಳಲು, ಆ ರಿಕ್ಷಾವಾಲಾ  'ನಾವು ಅವರಿವರಿಗೆ ತಿಂಗಳಾ ಕಂತು ಕೊಡಬೇಕ್ರಿ ನಾವರಾ ಏನು ಮಾಡೋಣ' ಅಂದನು.
ನಾವು ಸಿಟಿ ಬಸ್ ಮೂಲಕ ಗಾಂಧಿನಗರ ಬಸ್ಸ್ಟಾಪಿಗೆ ಬಂದಿಳಿದು ನಡೆದುಕೊಂಡೇ ಹೊರಟೆವು, ಮನೆಯ ಕಡೆಗೆ. ಕೆಲವೇ ಫೂಟು ಅಂತರದಲ್ಲಿರುವ ಈಶ್ವರಗುಡಿಯ ಹತ್ತಿರ ಇರುವ ಬುಲ್ಲಾ ಫ್ಲ್ಯಾಟಿನಲ್ಲಿಯ ರಾಶಿ  ರಾಶಿ ಕಸ ಪ್ಲ್ಯಾಸ್ಟಿಕ್ ಇತ್ಯಾದಿ ಕಂಡು ನನ್ನ ಗೆಳೆಯ 'ಏನೋ ಇದ ಮುಖ್ಯ ರಸ್ತೆ ಬದಿಗೆ ಇಂಥಾ ದುರ್ಗಂಧ ವಾಸ್ತಿಯ ಕಸದ ರಾಶಿ' ಎಂದು ಮೂಗು ಮುಚ್ಚಿಕೊಂಡ. 'ಹೌದಪ್ಪಾ ನಮ್ಮ ಧಾರ್ವಾಡ, ಹುಬ್ಬಳ್ಳಿ ಹೀಂಗೆ ಆಗ್ಯಾವ ಈಗೀಗ' ಎಂದು ಹೇಳುತ್ತ ಮುಂದೆ ಸಾಗಿದೆವು.
ಕೂಗಳತೆಯ ಅಂತರದಲ್ಲಿ ರಸ್ತೆ ಪಕ್ಕದಲ್ಲಿ ತಗಡಿನ ಕಸ ಶೇಖರಣಾ ಡಬ್ಬಿ ನೋಡಿ ನನ್ನ ಗೆಳೆಯ 'ಇದೆಂಥ ಕಸ ಬೀಸಾಡೋ ಡಬ್ಬಿ? ಎರಡೂ ಮಗ್ಗಲು ಜಂಗು ತಿಂದು ದೊಡ್ಡ ಬಾಗಿಲ ಹಾಗೆ ಡ್ಯಾಮೇಜ್ ಆಗ್ಯಾವ. ಹಂದಿ-ನಾಯಿ ಒಳಗ ಹೋಗಿ ಮಜಾ ಮಾಡಿ ಬರತಾವಲ್ಲ. ಇವಕ್ಕ ಯಾರ ಕಂಟ್ರೋಲು ಇದ್ದಾಂಗ ಕಾಣೂದಿಲ್ಲ. ಸುತ್ತ ಬಿದ್ದ ರಾಶಿ-ರಾಶಿ ಕಸ. ಏನಪಾ ಧಾರವಾಡ ಅಂದ್ರ' ಅಂದ. ಅಲ್ಲೇ ಸ್ವಲ್ಪ ನಿಂತು ಅತ್ತಿತ್ತ ಕಣ್ಣು ಹಾಯಿಸಿದ. 'ಏನೋ ಗಟಾರದಾಗೂ ಎತ್ತರದ ಜೊಂಡು ಬೆಳೆದ ನಿಂತಾವಲ್ಲ. ಇಲ್ಲಿ ನೋಡ-ಈ ಕೆ.ಇ.ಬಿ. ಜಿಂಕ್ಷನ್ ಬಾಕ್ಸ್ ಪರಿಸ್ಥಿತಿ. ಎಲ್ಲಾ ತಂತಿ ಖುಲ್ಲ, ಖುಲ್ಲಾ ಅವ. ಬಾಗಲ ಇಲ್ಲೇ ಇಲ್ಲಾ. ಆತ್ಮ ಹತ್ಯಾಕ ಯೋಗ್ಯ ಜಾಗಾ ಅದ ಬಿಡ' ಎಂದ. ನಾನು ನಿರುತ್ತನಾಗಿಯೇ ಮುಂದೆ ಅವನನ್ನು ಶಕ್ತಿನಗರ 3ನೇ ಮುಖ್ಯರಸ್ತೆಗೆ ಹೋಗುವ ದಾರಿಗೆ ಬಂದೆವು. ಅಲ್ಲಿಯೇ ಪಕ್ಕದಲ್ಲಿದ್ದ ಒಂದು ಖುಲ್ಲಾ ಫ್ಲಾಟ್ ತುಂಬೆಲ್ಲ ರಾಶಿ ರಾಶಿ ಕಸ, ಪ್ಲಾಸ್ಟಿಕ್ ನೋಡುತ್ತ ನಿಂತ. ಮಗ್ಗಲಿಗೆ ಇದ್ದ ಗಟಾರ ಹೊಲಸಿನಿಂದ ತುಂಬಿದ್ದನ್ನು ನೋಡಿ 'ಏನೋ ಇದೆಲ್ಲಾ' ಎಂದ. 'ಹೌದಪಾ ಅಲ್ಲಲ್ಲಿ ತಮ್ಮ ತಮ್ಮ ಮನೆಯಲ್ಲಿ ಕೂಡಿಟ್ಟ ಕಸ ಒಬ್ಬ ಮುನಿಸಿಪಾಲಿಟಿ ಸ್ವಚ್ಛತಾ ಕೆಲಸದಾಕಿ ಎಲ್ಲಾ ತಂದು ಇಲ್ಲೇ ಒಗೀತಾಳ. ಆಕೆಗೆ ಒಗಿಲಿಕ್ಕೆ ವ್ಯವಸ್ಥಿತ ಟಿನ್ ಇಲ್ಲಾ. ನಮ್ಮ ಈ ಮಹಾನಗರ ಕಾರ್ಪೋರೇಷನ್ ಕೆಲಸನ ಹೀಂಗ' ಎಂದು ಹೇಳಿದೆ.
ಆಗ ನಾನು ಅವನಿಗೆ ವಿವರವಾಗಿ ಹೀಗೆ ಹೇಳಿದೆ. 'ಇಲ್ಲಿ ಕಾರ್ಪೋರೇಷನ್ ಇದೆ, ಚುನಾಯಿತ ಪ್ರತಿನಿಧಿಗಳೂ ಇದ್ದಾರೆ. ಆದರೆ ತಮ್ಮ ತಮ್ಮ ವಾರ್ಡಿನ ಬೇಕು ಬೇಡಗಳನ್ನು ಅರಿಯಲು ಇವರಲ್ಲಿ ಪುರಸೊತ್ತಿಲ್ಲ. ಸಿಪಾಯಿ, ಸಿಬ್ಬಂದಿ ಹಾಜರಿ ಪುಸ್ತಕದಲ್ಲಿ ಮಾತ್ರ ಇದ್ದಾರೆ. ಅವರಿಗೆ ಪ್ರತಿ ತಿಂಗಳು ಪಗಾರ ವಿತರಣೆಯಲ್ಲಿ ಯಾವುದೇ ಅಡೆ-ತಡೆ ಇಲ್ಲ. ಅವರಿಗೆ ಕಾಲಕಾಲಕ್ಕೆ ತಪ್ಪದೇ ಸಮವಸ್ತ್ರ ಪೂರೈಸುತ್ತಿದ್ದಾರೆ. ಆದರೆ ಕೆಲಸಕ್ಕೆ ಮಾತ್ರ ಇವರು ಗೈರು ಹಾಜರ. ಯಾಕೆಂದರೆ ಅವರ ವೇತನ ಅವರಿವರ ಮಧ್ಯೆ ಬಾಚಿ ಹೋಗುತ್ತದೆ ಎಂದು ಪ್ರಬುದ್ಧ ಜನ ಆಡಿಕೊಳ್ಳುತ್ತಿದ್ದಾರೆ. ಈ ಮಹಾನಗರದಲ್ಲಿ ಗಟಾರ ಸ್ವಚ್ಛ ಮಾಡುವ ಸಿಬ್ಬಂದಿಗೂ ಕೊರತೆ ಇಲ್ಲ. ಎಂದೋ ಒಂದು ದಿನ ನಾಗರಿಕರ ಕಿರಿ-ಕಿರಿ ಶಮನಗೊಳಿಸಲೆಂದು ಬಂದು ಅಲ್ಲಲ್ಲಿ ಒಂದೆರಡು ಗಟಾರದಲ್ಲಿಯ ರಾಡಿ-ಕಸವನ್ನು ಹೊರಗೆ ತೆಗೆದು ಅಲ್ಲಲ್ಲಿ ದಂಡೆಯ ಮೇಲೆಯೇ ಹಾಕಿ ಹೋಗುತ್ತಾರೆ. ಕೆಲಸದ ಸಮಯದಲ್ಲಿ ಮೊಬೈಲ್ ಫೋನ್ನಲ್ಲಿ ಹಾಡು ಕೇಳುವುದರಲ್ಲಿಯೇ ನಿರತರಿವರು. ಎಲ್ಲಾ ಕೆಲಸ ಪೂರೈಸಲಾಗಿದೆ ಎಂದು ಕಾರ್ಪೋರೇಷನ್ದಲ್ಲಿ ಖರ್ಚು ಮಾತ್ರ ಸರಿಯಾಗಿ ಸಮಯಕ್ಕನುಸಾರವಾಗಿ ಬೀಳುವುದರಲ್ಲಿ ಚ್ಯುತಿ ಇಲ್ಲ. ಕಾರ್ಪೊರೇಷನ್ನಿಗೆ ವಾಹನ, ವಿಶೇಷವಾಗಿ ಕಸ ಸಾಗಿಸುವ ವಾಹನಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಇವುಗಳ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೂ ಕೊರತೆ ಇಲ್ಲ, ಕಾರ್ಪೊರೇಷನ್ ಹಾಜರಿ ಪುಸ್ತಕ ಪ್ರಕಾರ. ಗಾಡಿ ಸುಸ್ಥಿತಿಯಲ್ಲಿ ಇರುವುದೂ ಕಡಿಮೆಯೇ. ಆದರೂ ಅದರ ಮೇಲೆ ಉಪಯೋಗಿಸಲ್ಪಡುವ ಡೀಸೆಲ್ ಖರ್ಚು ಹೆಚ್ಚಾಗುತ್ತಲೇ ಇದೆ. ಈ ವಾಹನಗಳು ಅವರಿವರ ಖಾಸಗಿ ಕೆಲಸದಲ್ಲಿ ನಿರತವಾಗಿರುವುದೂ ಕಂಡು ಬರುತ್ತದೆ.
ಸ್ವಲ್ಪ ಸಮಯದ ಹಿಂದೆ ಡಿ.ಸಿ. ಅಂತಾ ಕಾರ್ಯ ನಿರ್ವಹಿಸುತ್ತಿದ್ದ ದರ್ಪಣ ಜೈನ ಎಂಬ ಅಧಿಕಾರಿ ಮಹಾನಗರ ಸುಧಾರಣೆಗೆ ತೀರಾ ಶ್ರಮ ವಹಿಸಿ ದುಡಿದರು. ಅಲ್ಲಲ್ಲಿಯ ಎಲ್ಲಾ ಕೆರೆಗಳ ಸುಧಾರಣೆ ಸಾಧಿಸಿದರು. ಸಾಧನಕೇರಿ ಕೆರೆಯನ್ನು ಒಂದು ಆಕರ್ಷಕ ಮನರಂಜನೆಯ ಸ್ಥಾನವಾಗಿಸಿದ್ದಾರೆ. ದಿನಾಲೂ ನೂರಾರು ಜನ ಇದರ ಸವಿ ಅನುಭವಿಸುತ್ತಿದ್ದಾರೆ. ಇಂಥವರು ಕಾರ್ಪೋರೇಷನ್ ಅಧಿಕಾರಿ ಆಗಿ ಬಂದರೆ ಪರಿಸ್ಥಿತಿ ಸುಧಾರಿಸಬಹುದು' ಎಂದು ಅವನಿಗೆ ಹೇಳಿ ಕೆರೆ ವೀಕ್ಷಿಸಲೂ ಅವನನ್ನು ಕರೆದೊಯ್ದೆ. ನಾನು ಇನ್ನೂ ಏನೇನೋ ಹೇಳಬೇಕೆಂದೂ ಮಾಡಿದ್ದೆ. ಆಗ ನನ್ನ ಮಿತ್ರ 'ಸಾಕಪ್ಪ ಸಾಕು ಮಾಡು. ಎಷ್ಟಾದರೂ ನಾಯಿ ಬಾಲ ಡೊಂಕೇ ಅಲ್ಲವೇ' ಎಂದು ಉದ್ಗಾರ ತೆಗೆದ. ಸಾಮಾನ್ಯ ಜನತೆಯ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಕೊನೆ ಕಾಣುತ್ತಿಲ್ಲ ಎಂದ. ನನ್ನಲ್ಲಿ ಎರಡು ದಿನ ಆತಿಥ್ಯ ಸ್ವೀಕರಿಸಿ ಮರಳಿ ತನ್ನ ಊರಿಗೆ ಹೋದ ನನ್ನ ಗೆಳೆಯ, ಆಗಾಗ ಫೋನ ಮಾಡಿ ಪರಿಸ್ಥಿತಿಯ ಬಗ್ಗೆ ಕೇಳುತ್ತಿರುತ್ತಾನೆ ಕೇಳಿ ನಗುತ್ತಾನೆ.

- ದೀಕ್ಷಿತ ಯ.ಚಿ.
ಧಾರವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.