ನಂಬದ ಕುಮಾರ, ಅಸಮಾಧಾನದ ಅವತಾರ..!

ಆತ್ಮವಿಶ್ವಾಸ ದಡ ಸೇರಿಸುತ್ತದೆ. ಆದರೆ ಆತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ...
Updated on: 

ಬೇರೆಯವರ ವೈಫಲ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವೇ? ಪರಿಶ್ರಮ, ತಂತ್ರಗಾರಿಕೆ, ಸಂಘಟಿತ ಪ್ರಯತ್ನ, ಒಟ್ಟಾಗಿ ಕರೆದೊಯ್ಯದಿದ್ದರೆ ಗುರಿ ಮುಟ್ಟಲು ಸಾಧ್ಯವೇ?

ಆತ್ಮವಿಶ್ವಾಸ ದಡ ಸೇರಿಸುತ್ತದೆ. ಆದರೆ ಆತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಮುಳುಗಿಸಿ ಬಿಡುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಎರಡನೆಯದನ್ನು ಅವುಚಿಕೊಂಡ ಜಾತ್ಯತೀತ ಜನತಾದಳ ಇದೀಗ ಆಂತರಿಕ ಹಗೆಯ ಬೇಗುದಿಯಲ್ಲಿ ತೊಳಲಾಡುತ್ತಿದೆ.
ಚುನಾವಣೆಗೆ ಮೊದಲಾಗಲಿ, ನಂತರವಾಗಲಿ ದೇವೇಗೌಡರ ಮಾತಿಗೆ ಅವರ ಕುಮಾರ'ಸ್ವಾಮಿ' ಕಿಮ್ಮತ್ತು ಕೊಡದ ಪ್ರಯುಕ್ತ ಜೆಡಿಎಸ್ ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಆ 'ತೃಪ್ತಿ'ಯನ್ನು ಕುಮಾರಸ್ವಾಮಿ ಒಬ್ಬರೇ ಅಪಹರಿಸಿಬಿಟ್ಟರು. ಇದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದೆ.
ನಿಜ, ಚುನಾವಣೆಗೆ ಮೊದಲು ಕುಮಾರಸ್ವಾಮಿ ಅವರ ಆತ್ಮವಿಶ್ವಾಸ ಎಷ್ಟಿತ್ತೆಂದರೆ 'ರಾಜಕೀಯ ಭೀಷ್ಮ' ಎಂದೇ ಕರೆಸಿಕೊಂಡಿರುವ ತಂದೆ ದೇವೇಗೌಡರು ಸೇರಿದಂತೆ ಪಕ್ಷದ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೋಜಿಗೇ ಹೋಗಲಿಲ್ಲ. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಾಗಲಿ, ಚುನಾವಣೆ ತಂತ್ರ, ಪ್ರಚಾರ ಕೌಶಲ್ಯಗಳನ್ನು ರೂಪಿಸುವಾಗಲಾಗಲಿ ಅವರ ಜತೆ ಚರ್ಚಿಸುವ ಸೌಜನ್ಯವನ್ನೂ ತೋರಲಿಲ್ಲ. ತಾವು ಹೆಣೆದಿದ್ದೇ ರಣತಂತ್ರ ಎಂದು ಪರಿಭಾವಿಸಿಕೊಂಡರು. ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಾಗಿ ಭ್ರಮಿಸಿಕೊಂಡರು. ತಮ್ಮ ಮಾತನ್ನು ಕೇಳಿದ್ದೇ ಆದರೆ ಜೆಡಿಎಸ್ ನೆರವಿಲ್ಲದೇ ಬೇರಾರೂ ಸರಕಾರ ರಚಿಸಲು ಸಾಧ್ಯವಿಲ್ಲ ಎಂದು ದೇವೇಗೌಡರು ಪರಿಪರಿಯಾಗಿ ಹೇಳಿದ್ದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಜಂಭದ ಕುದುರೆಯಂತೆ ಗುರಿಯತ್ತ ಹೆಜ್ಜೆ ಹಾಕಿದರು. ಆದರೆ ಅವರು 'ಕಾಪು' ಧರಿಸಿಬಿಟ್ಟಿದ್ದರು. ಹೀಗಾಗಿ ಪಕ್ಕದಲ್ಲೇ ಸಾಗಿದ ಕಾಂಗ್ರೆಸ್ ಕುದುರೆ ತಮಗಿಂತ ಮೊದಲೇ ಗುರಿ ಮುಟ್ಟಿದ್ದು ಅವರಿಗೆ ಕಾಣಿಸಲೇ ಇಲ್ಲ.
ಚುನಾವಣೆಗೆ ಮೊದಲು ಬಿಜೆಪಿ ಮೂರು ಭಾಗವಾಗಿದ್ದೇ ತಮ್ಮ ಗೆಲುವು ಎಂದು ಕುಮಾರಸ್ವಾಮಿ ಸಂಭ್ರಮಿಸಿದರು. ಯಡಿಯೂರಪ್ಪ ನೇತೃತ್ವದ ಕೆಜೆಪಿಯು ಬಿಜೆಪಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆ ನಿಜವೂ ಆಯಿತು. ಆದರೆ ಇದರಿಂದ ಜೆಡಿಎಸ್‌ಗೆ ಆದ ಲಾಭವೇನೂ ಇಲ್ಲ. ಬೇರೆಯವರ ವೈಫಲ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವೇ? ಪರಿಶ್ರಮ, ತಂತ್ರಗಾರಿಕೆ, ಸಂಘಟಿತ ಪ್ರಯತ್ನ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಟ್ಟಾಗಿ ಕರೆದೊಯ್ಯದಿದ್ದರೆ ಗುರಿ ಮುಟ್ಟಲು ಸಾಧ್ಯವೇ? ಆದರೆ ಕುಮಾರಸ್ವಾಮಿ ಅವರು ಇವೆಲ್ಲವನ್ನೂ ಬದಿಗೊತ್ತಿ, ಕೆಲವರನ್ನು ಮಾತ್ರ ಪಕ್ಕದಲ್ಲಿ ಇಟ್ಟುಕೊಂಡ ಪ್ರಯುಕ್ತ ಅಧಿಕಾರ ಮರೀಚಿಕೆಯಾಯಿತು. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಬಯಕೆ ಹಾಗೆಯೇ ಉಳಿಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಜೆಡಿಎಸ್‌ನವರು ನಿದ್ದೆ ಕಳೆದುಕೊಂಡರು.
ಇರಲಿ, ಇದು ಹಳೆಯ ಕತೆಯಾಯಿತು. ಹೊಸ ವಿಚಾರ ಏನೆಂದರೆ ಚುನಾವಣೆ ನಂತರವೂ ಕುಮಾರಸ್ವಾಮಿ ಅವರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ ಎಂಬುದು. ಇದು ಇತರ ಮುಖಂಡರು ಹಾಗೂ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆ ನಂತರವಾದರೂ ಕುಮಾರಸ್ವಾಮಿ ಅವರು ಸಭೆ ಕರೆದು ಸಮಾಲೋಚನೆ ನಡೆಸುತ್ತಾರೆ, ಚುನಾವಣೆ ವೈಫಲ್ಯ ಮತ್ತು ಅದಕ್ಕೆ ಕಾರಣಗಳ ಬಗ್ಗೆ ಪರಾಮರ್ಶೆ ನಡೆಸುತ್ತಾರೆ ಎಂದು ಅವರೆಲ್ಲ ಅಂದುಕೊಂಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಪಕ್ಷ ಸಂಘಟನೆಗೆ ಮುಂದಾಗುತ್ತಾರೆ. ಆ ಪ್ರಕ್ರಿಯೆಯಲ್ಲಿ ತಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆಸೆಯೂ ಅವರದಾಗಿತ್ತು. ಅವರ ಆಸೆ ಇನ್ನೂ ಆಸೆಯಾಗಿಯೇ ಇದೆ. ಕುಮಾರಸ್ವಾಮಿ ಅವರ ಉಪೇಕ್ಷೆ ದಿನೇ ದಿನೇ ಆ ಆಸೆಯನ್ನು ಇಷ್ಟಿಷ್ಟೇ ಕಮರಿಸುತ್ತಿದ್ದು, ಅನ್ಯ ಮಾರ್ಗೋಪಾಯಗಳ ಅನ್ವೇಷಣೆಯಲ್ಲಿ ಇತರ ನಾಯಕರು ನಿರತರಾಗಿದ್ದಾರೆ. ಕುಮಾರಸ್ವಾಮಿ ಅಸಡ್ಡೆ ಹೀಗೆಯೇ ಮುಂದುವರಿದರೆ ಮುಂದೇನು ಮಾಡಬೇಕು? ತಮ್ಮ ಅಹವಾಲನ್ನು ಯಾರಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಅ ಆಹವಾಲಲ್ಲಿ ಏನೇನು ಅಂಶಗಳು ಅಡಕವಾಗಿರಬೇಕು? ಆ ಆಹವಾಲಿಗೂ ಬೆಲೆ ಸಿಗದಿದ್ದರೆ ಯಾವ ದಾರಿ ತುಳಿಯಬೇಕು ಎಂಬ ಚಿಂತನೆ ನಡೆಸಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಅವರ ಅಸಮಾಧಾನಕ್ಕೆ ಇನ್ನಷ್ಟು ಬಲವಾದ ಕಾರಣಗಳಿವೆ. ಚುನಾವಣೆಯಲ್ಲಿ ಜೆಡಿಎಸ್ ಆಡಳಿತರೂಢ ಬಿಜೆಪಿಯನ್ನು ಹಿಂದಿಕ್ಕಿ ಪ್ರಮುಖ ಪ್ರತಿಪಕ್ಷ ಆದದ್ದು ಸರಿಯಷ್ಟೇ. ಆದರೆ ಪ್ರತಿಪಕ್ಷ ನಾಯಕನ ಆಯ್ಕೆ ಸಂದರ್ಭದಲ್ಲಿ ರೀತಿ-ರಿವಾಜುಗಳನ್ನು ಪಾಲಿಸಲೇ ಇಲ್ಲ. ಜೆಡಿಎಸ್ ಶಾಸಕಾಂಗ ಸಭೆ ಕರೆಯುವ ಮೊದಲೇ ಕುಮಾರಸ್ವಾಮಿ ಅವರು ತಾವೇ ನಾಯಕ ಎಂದು ಘೋಷಿಸಿಕೊಂಡುಬಿಟ್ಟರು. ಪಕ್ಷದ ಇತರ ನಾಯಕರು ಹಾಗೂ ಶಾಸಕರಲ್ಲಿ ಮಡುಗಟ್ಟಿದ್ದ ಅಸಮಾಧಾನ ಟಿಸಿಲೊಡೆಯಲು ಕಾರಣವಾದದ್ದೇ ಆಗ. ಚುನಾವಣೆಗೆ ಮೊದಲಂತೂ ತಮ್ಮನ್ನು ಯಾವುದಕ್ಕೂ ಪರಿಗಣಿಸಲಿಲ್ಲ. ಹೋಗಲಿ ಶಾಸಕಾಂಗ ನಾಯಕನ ಆಯ್ಕೆ ಸಂದರ್ಭದಲ್ಲಾದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಅದನ್ನೂ ಮಾಡಲಿಲ್ಲವಲ್ಲಾ. ಶಾಸಕಾಂಗ ಸಭೆ ಕರೆದಿದ್ದರೆ ಯಾರೂ ಕುಮಾರಸ್ವಾಮಿ ಆಯ್ಕೆ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಪೈಪೋಟಿ ಕೊಡುವ ಪ್ರಶ್ನೆಯಂತೂ ಇಲ್ಲವೇ ಇಲ್ಲ. ಸೌಜನ್ಯ ಮತ್ತು ವಿಶ್ವಾಸ ಮಾತ್ರ ಅವರೆಲ್ಲರ ನಿರೀಕ್ಷೆಯಾಗಿತ್ತು. ಆದರೆ ಕುಮಾರಸ್ವಾಮಿ ಈ ಅವಕಾಶವನ್ನೂ ತಪ್ಪಿಸಿಕೊಂಡುಬಿಟ್ಟರು. ವಿದ್ಯುನ್ಮಾನ ಮಾಧ್ಯಮಕ್ಕೆ ಹೇಳಿಕೆ ನೀಡುವ ಉನ್ಮಾದದಲ್ಲಿ ತಾವೇ ಪ್ರತಿಪಕ್ಷ ನಾಯಕ ಎಂದು ಸಾರಿಕೊಂಡರು. ಶಾಸಕಾಂಗ ಸಭೆ ಕರೆಯುವ ಮೊದಲೇ ಏಕಾಏಕಿ ಅವರು ನೀಡಿದ ಈ ದುಡುಕಿನ ಹೇಳಿಕೆ ದೇವೇಗೌಡರಿಗೂ ಬೇಸರ ತರಿಸಿದ್ದು ಸುಳ್ಳಲ್ಲ. ಸಹೋದರ ರೇವಣ್ಣ ನಖಶಿಖಾಂತ ಉರಿದುಹೋದರು. ಇನ್ನು ಶಾಸಕರ ಬಗ್ಗೆ ಹೇಳುವಂತೆಯೇ ಇಲ್ಲ. ಲಾವಾರಸದ ಅಭ್ಯಂಜನ.
ಇದು ಇಷ್ಟಕ್ಕೆ ಮುಗಿದಿಲ್ಲ. ಕುಮಾರಸ್ವಾಮಿ ಅವರು ಏಕಕಾಲಕ್ಕೆ ಎರಡು ಹುದ್ದೆಗಳನ್ನು ಅನುಭವಿಸುತ್ತಿರುವುದೂ ಇತರ ನಾಯಕರ ಹೊಟ್ಟೆಯಲ್ಲಿ ಕಳ್ಳಿಹಾಲು ಸುರಿದಂತಾಗಿದೆ. ಕುಮಾರಸ್ವಾಮಿ ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಎರಡೂ ಸ್ಥಾನಗಳನ್ನು ನಿಭಾಯಿಸುತ್ತಿದ್ದಾರೆ. ಅವರು ಪ್ರತಿಪಕ್ಷ ನಾಯಕರಾದ ನಂತರ ಅನ್ಯಜಾತಿ ಅಥವಾ ಕೋಮಿನವರಿಗೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಬಹುದು ಎಂದು ಪಕ್ಷದ ಬೇರೆ ನಾಯಕರು ನಿರೀಕ್ಷಿಸಿದ್ದರು. ಲಿಂಗಾಯತರು, ಹಿಂದುಳಿದ ವರ್ಗದವರು, ದಲಿತರು ಅಥವಾ ಅಲ್ಪಸಂಖ್ಯಾತರಿಗೆ ಬಿಟ್ಟುಕೊಟ್ಟರೆ ಪಕ್ಷ ಮತ್ತಷ್ಟು ಬಲವಾಗುತ್ತದೆ, ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ನೆರವಾಗುತ್ತದೆ ಎಂಬುದು ಈ ನಿರೀಕ್ಷೆ ಹಿಂದಿನ ಭಾವನೆಯಾಗಿತ್ತು. ಆದರೆ ಆ ನಿರೀಕ್ಷೆಮತ್ತು ಭಾವನೆ ಎರಡೂ ಹುಸಿಯಾಗಿವೆ. ರಾಜ್ಯಾಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟುಕೊಡುವಂತೆ ದೇವೇಗೌಡರು ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ, ಕುಮಾರಸ್ವಾಮಿ ಅವರ ನಕಾರಾತ್ಮಕ ಧೋರಣೆಯಿಂದ ಅದು ಪ್ರಸ್ತಾಪದ ಹಂತದಲ್ಲೇ ನಿಂತಿದೆ. ಗೌಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕುಮಾರಸ್ವಾಮಿ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರು. ಇನ್ನು ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ (ಚೀಫ್ ವಿಪ್) ಸ್ಥಾನವನ್ನೂ ರೇವಣ್ಣ ಅವರಿಗೇ ಕೊಟ್ಟುಬಿಟ್ಟರೆ, ಎಲ್ಲ ಹುದ್ದೆಗಳು ಒಂದೇ ಕುಟುಂಬದ ಕಬ್ಜದಲ್ಲೇ ಇದ್ದಂತಾಗುತ್ತದೆ ಎಂಬುದು ಶಾಸಕರ ಕುಹಕ.
ಅಧಿಕಾರವನ್ನು ತಾವೇ ಅನುಭವಿಸುವುದರಲ್ಲಿ ಆನಂದ. ಬೇರೆಯವರಿಗೆ ಕೊಟ್ಟು ಅನುಭವಿಸುವುದರಲ್ಲಿ ಪರಮಾನಂದ ಕಾಣಬಹುದು ಎಂಬುದನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸಾಬೀತು ಮಾಡಿದ್ದಾರೆ. ಮನಮೋಹನ್‌ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಕಟ್ಟಿದ ಮಾತ್ರಕ್ಕೆ ಸೋನಿಯಾಗಾಂಧಿ ಅವರಿಗೆ ಅಧಿಕಾರ ಇಲ್ಲ, ಪಕ್ಷದಲ್ಲಿ ಅವರ ಮಾತು ನಡೆಯುವುದಿಲ್ಲ ಎಂದು ಅರ್ಥವೇ? ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಅವರು ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸುತ್ತಿಲ್ಲವೇ? ಕುಮಾರಸ್ವಾಮಿ ಅವರು ಇದನ್ನು ಏಕೆ ಅರ್ಥ ಮಾಡಿಕೊಳ್ಳಬಾರದು? ರಾಜ್ಯಾಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಏಕೆ ಬಿಟ್ಟುಕೊಡಬಾರದು ಎಂಬ ಪ್ರಶ್ನೆ ಪಕ್ಷದಲ್ಲಿ ಉದ್ಭವಿಸಿದೆ. ಇದಕ್ಕೆ ಉತ್ತರ ನೀಡುವ ಸ್ಥಾನದಲ್ಲೂ ಕುಮಾರಸ್ವಾಮಿ ಅವರೇ ಇದ್ದಾರೆ.
ಮತ್ತೊಂದು ವಿಚಾರ. ಇದು ಗಹನವಾದದ್ದು ಸಹ. ಕುಮಾರಸ್ವಾಮಿ ಅವರು ಯಾರನ್ನೂ ನಂಬುವುದಿಲ್ಲ, ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಾರೆ ಎಂಬ ಬೇಸರ ಇತರ ನಾಯಕರದ್ದು. ಬೇರೆಯವರು ಬೆಳೆಯಬಾರದು, ಅವರು ಬೆಳೆದು ತಮಗೇ ಪ್ರತಿಸ್ಪರ್ಧಿ ಆಗಬಾರದು ಎಂಬ ಸ್ವಹಿತ ಚಿಂತನೆ ಈ ಅನುಮಾನಗಳ ಹಿಂದೆ ಕೆಲಸ ಮಾಡುತ್ತಿರುತ್ತದೆ. ಎಲ್ಲ ನೀರು ಸೇರಿದರೆ ಸಮುದ್ರ. ಆ ನೀರು ಬೇಡ, ಈ ನೀರು ಬೇಡ ಎಂದರೆ ಅದು ತುಂಬುವುದಾದರೂ ಹೇಗೆ? ಪಕ್ಷವನ್ನು ಕಟ್ಟುವುದಾದರೂ ಹೇಗೆ? ಬೆಳೆಸುವುದಾದರೂ ಹೇಗೆ? ಎಂಬ ಚಿಂತೆಭರಿತ ಪ್ರಶ್ನೆ ಅವರದ್ದು. ಹಿಂದೆ ಕುಮಾರಸ್ವಾಮಿ ಅವರ ಬಲಗೈ, ಎಡಗೈ, ಹೃದಯ, ಕಣ್ಣು ಆಗಿದ್ದ ಆಪ್ತ ಗೆಳೆಯರೆಲ್ಲ ಈಗ ಒಂದಷ್ಟು ಅಂತರ ಕಾಯ್ದುಕೊಂಡಿದ್ದು, ನಿಸ್ತೇಜರಾಗಿದ್ದಾರೆ. ಪಿ.ಜಿ.ಆರ್. ಸಿಂಧ್ಯ, ಚಲುವರಾಯಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ್, ಬಾಲಕೃಷ್ಣ, ಜಮೀರ್ ಅಹಮದ್ - ಇನ್ನೂ ಮೊದಲಾದ ನಾಯಕರೆಲ್ಲ ಕುಮಾರಸ್ವಾಮಿ ಅವರ ನಂಬಿಕೆ ಕೊರತೆಯಿಂದ ನರಳುತ್ತಿದ್ದಾರೆ. ವೀರೇಂದ್ರ ಪಾಟೀಲ್ ಬೆಳೆಯಬಾರದು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬೆಳೆಯಬಾರದು ಎಂದು ರಾಜೀವ್‌ಗಾಂಧಿ, ಸೋನಿಯಾ ಗಾಂಧಿ ಅಂದುಕೊಂಡಿದ್ದರೆ ಕಾಂಗ್ರೆಸ್ ಬೆಳೆಯುತ್ತಿತ್ತೇ? ಜನತಾ ಪರಿವಾರ ಮುಖಂಡರೂ ಹೀಗೆ ಪ್ರತಿಕೂಲ ಚಿಂತನೆ ಮಾಡಿದ್ದರೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಲು ಸಾಧ್ಯವಿತ್ತೇ? ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗುತ್ತಿದ್ದರೇ...?!
ಆ ವಿಷಯ ಪಕ್ಕಕ್ಕಿರಲಿ. ದೇವೇಗೌಡರು ಈಗ ತೃತೀಯ ರಂಗದ ಮಾತಾಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ನಾಯಕರ ವಿಶ್ವಾಸದ ಕೊರತೆಯಿಂದ ಪಕ್ಷದಲ್ಲಿ ನಿರಾಶಾವಾದ ತುಂಬಿ ತುಳುಕುತ್ತಿರುವ ಸಂದರ್ಭದಲ್ಲಿ, ಇದು ಕಷ್ಟವಲ್ಲವೇ? ಹಿಂದಾದರೆ ಅಖಂಡ ಕರ್ನಾಟಕದಲ್ಲಿ ಜನತಾ ಪರಿವಾರದ ಅಸ್ತಿತ್ವವನ್ನು ಆಯಾ ಭಾಗದ ನಾಯಕರು ತಮ್ಮದೇ ಆದ ಶಕ್ತಿ-ಯುಕ್ತಿಯಿಂದ ಕಾಯ್ದುಕೊಂಡಿದ್ದರು. ಉತ್ತರ ಕನ್ನಡದಲ್ಲಿ ರಾಮಕೃಷ್ಣ ಹೆಗಡೆ, ಹಾಸನದಲ್ಲಿ ದೇವೇಗೌಡರು, ಉತ್ತರ ಕರ್ನಾಟಕದಲ್ಲಿ ಎಸ್.ಆರ್. ಬೊಮ್ಮಾಯಿ, ಶಿವಮೊಗ್ಗದಲ್ಲಿ ಜೆ.ಎಚ್. ಪಟೇಲ್, ಮೈಸೂರಿನಲ್ಲಿ ಸಿದ್ದರಾಮಯ್ಯ, ಕೋಲಾರದಲ್ಲಿ ಬೈರೇಗೌಡ - ಹೀಗೆ ವಿಭಾಗವಾರು ನಾಯಕರು ಪಕ್ಷವನ್ನು ಕಟ್ಟಿಟ್ಟುಕೊಂಡಿದ್ದರು, ಕಾಪಿಟ್ಟುಕೊಂಡಿದ್ದರು. ಆದರೆ ಈಗ ಆ ರೀತಿಯ ನಾಯಕರು ಎಲ್ಲಿದ್ದಾರೆ?  ಅದೂ ಕುಮಾರಸ್ವಾಮಿ ಅವರು ಯಾರನ್ನೂ ನಂಬದಿರುವಾಗ, ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ. ಈಗಲಾದರೂ ತಮ್ಮ ನಡೆ-ನುಡಿಯಲ್ಲಿ ಪರಿವರ್ತನೆ ತಂದುಕೊಳ್ಳದಿದ್ದರೆ, ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗದಿದ್ದರೆ, ಮುಂದಾಗುವ ಅನಾಹುತಗಳಿಗೆ ಅವರೇ ಸೂತ್ರಧಾರರಾಗುತ್ತಾರೆ. ನಂಬಿಕೆ-ವಿಶ್ವಾಸ ಎಲ್ಲರನ್ನೂ ಗೆಲ್ಲುತ್ತದೆ. ಇವು ಇಲ್ಲದವ ತನ್ನನ್ನೂ ತಾನು ಗೆಲ್ಲಲಾರ.

ಲಗೋರಿ: ಅತ್ಮಬಲ ಇಲ್ಲದವನನ್ನು ನಾಮಬಲ ರಕ್ಷಿಸದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com