ಅಂಕಣಗಳು

ಪರಮಾಧಿಕಾರ ಮತ್ತು ಸಂವಿಧಾನ

Published On :

ಈಗ 'ಅಧಿಕಾರ' ಪಡೆಯಬೇಕಾದರೆ ಜಾತಿ ಬೆಂಬಲ ಅಗತ್ಯ. ಅಧಿಕಾರಕ್ಕೆ ಬಂದಾತ ವಿವೇಕವಂತನಾದರೆ ಸಮಾಜದ ಇತರ ಜಾತಿ ಧರ್ಮದವರನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳುತ್ತಾನೆ. ಆಗ ಜನತೆ ನೆಮ್ಮದಿಯಿಂದ ಬದುಕುತ್ತಾರೆ. ಹಾಗಿಲ್ಲವಾದರೆ, ಆ ಜನರಿಗೆ ದುರ್ಗತಿಯೇ ಗತಿಯಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ 'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ಅಭಯಚಂದ್ರ ಜೈನ್‌ಗೆ ಧರ್ಮ ಮುಖ್ಯವೋ, ಸಂವಿಧಾನ ಮುಖ್ಯವೋ?' ಎಂಬ ಲೇಖನ.
ಅಭಯಚಂದ್ರ ಜೈನ್ ಅವರು ಮಾಡಿದ ತಪ್ಪೇನು? ಆತ ಶುದ್ಧ ಸಸ್ಯಾಹಾರಿ. ಮಾಂಸ ಸೇವಿಸುವ ವ್ಯಕ್ತಿಯಲ್ಲ. 'ನನಗೆ ಮೀನುಗಾರಿಕೆ ಖಾತೆ ಬೇಡ' ಎಂದು ಹೇಳಿದ್ದು ತಪ್ಪೇ? ಒಬ್ಬನಿಗೆ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ಅದನ್ನು ನಿರ್ವಹಿಸಲು ಸುಲಭವಾಗುತ್ತದೆ. 'ಮೀನು' ಏನೆಂದೂ ತಿಳಿಯದ ವ್ಯಕ್ತಿಗೆ ಮೀನುಗಾರಿಕೆ ಖಾತೆ! ನಮ್ಮ ಭಾರತೀಯ ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯವಿಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯಲ್ಲ? ಹಾಗಿದ್ದರೆ ಇಲ್ಲಿ ಜೈನ್ ತಮ್ಮ ಅಭಿಪ್ರಾಯ ತಿಳಿಸಿದ್ದು ತಪ್ಪೇ? ಅವರು ಸಂವಿಧಾನ ತತ್ವಕ್ಕೆ ಧಕ್ಕೆ ತಂದದ್ದು ಹೇಗೆ?
 ನಿಜ ಹೇಳಬೇಕೆಂದರೆ ಮುಖ್ಯಮಂತ್ರಿಗಳು 'ಪರಮಾಧಿಕಾರ' ಇದೆಯೆಂದು ಹೇಳಿ ಸಂವಿಧಾನದ ದುರುಪಯೋಗ ಮಾಡಿದ್ದಾರೆ. 'ಮುಖ್ಯಮಂತ್ರಿ ಹುದ್ದೆಗೆ ನಾನು ಯೋಗ್ಯ, ಅರ್ಹ' ಎಂದು ಮಾಧ್ಯಮಗಳಲ್ಲಿ ಹೇಳಿಕೊಂಡವರು, ಸೋನಿಯಾಗಾಂಧಿ ಕೃಪೆಯಿಂದ ಮುಖ್ಯಮಂತ್ರಿ ಪದವಿ ಸಿಕ್ಕ ತಕ್ಷಣ, ಅಂದರೆ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಅರ್ಧ ಡಜನ್‌ಗೂ ಹೆಚ್ಚು ವಿಷಯಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸದೆ ಘೋಷಣೆ ಮಾಡಿದ್ದು, ಸಂಪ್ರದಾಯದ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದು!
ವಿವೇಕ, ತಾಳ್ಮೆ ಇದ್ದಿದ್ದರೆ ಯಾವ ಮುಖ್ಯಮಂತ್ರಿಯೂ ಆ ರೀತಿ ಮಾಡುತ್ತಿರಲಿಲ್ಲ. 'ತಾನು ಬೇರೆ ಮುಖ್ಯಮಂತ್ರಿಗಳಿಂತ ಭಿನ್ನ' ಎಂದು ತೋರಿಸಿಕೊಳ್ಳಬೇಕೆಂಬ ಆತುರದಲ್ಲಿ ಅವರು ಆ ರೀತಿ ವರ್ತಿಸಿದ್ದಾರೆ. ಸಂವಿಧಾನದ ಮೊದಲ ದುರುಪಯೋಗ ಮುಖ್ಯಮಂತ್ರಿಗಳಿಂದಲೇ ಆಗಿದೆ. ಅದರ ಪರಿಣಾಮವೇ 1 ಕೆ.ಜಿ. ಅಕ್ಕಿಯನ್ನು ಒಂದು ರುಪಾಯಿಯಂತೆ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಣೆ ಮಾಡಲು ಹೊರಟ ಸಾಹಸ. ಈ ಸಾಲದ ಹೊರೆ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೇಲೆ ಬೀಳಲಿದೆ. ಇವರ ರಾಜ್ಯಭಾರ ಎತ್ತ ಸಾಗುತ್ತಿದೆಯೆಂದು ಇದರಿಂದ ಗೊತ್ತಾಗುತ್ತದೆ.
'ಅಭಯಚಂದ್ರ ಜೈನ್ ಕರಾವಳಿ ಪ್ರದೇಶದ ಜನ. ಅವರಿಗೆ ಕರಾವಳಿ ಪ್ರದೇಶದ ಪರಿಚಯವಿದೆ. ಮೀನುಗಾರಿಕೆ ಖಾತೆ ಕೊಟ್ಟಿದ್ದೇನೆ. ಹಾಗಾಗಿ ಖಾತೆ ಬದಲಾವಣೆ ಸಾಧ್ಯವಿಲ್ಲ' ಎನ್ನುವುದು ಪರಮಾಧಿಕಾರದ ಸಮರ್ಥನೆ. ಕರ್ನಾಟಕದ ಹೆಚ್ಚಿನ ಜನಗಳಿಗೆ ಕರಾವಳಿ ಪ್ರದೇಶದ ಜನರು ಮೀನು ತಿನ್ನುವರೆಂಬ ಕಲ್ಪನೆಯಿದೆ. ಅಲ್ಲಿ ಶುದ್ಧ ಸಸ್ಯಾಹಾರಿಗಳಿದ್ದಾರೆಂದೂ ಗೊತ್ತಿಲ್ಲ. ಈ ಭ್ರಮೆ ರಾಜ್ಯದ ಮುಖ್ಯಮಂತ್ರಿಗಳಿಗೂ ಇದೆ. ಕರಾವಳಿ ಪ್ರದೇಶದಿಂದ ಇತರ ಮೂರು ಮಂದಿ ಸಚಿವರಾಗಿದ್ದಾರೆ. ಅವರು ಸಸ್ಯಾಹಾರಿಗಳಲ್ಲ. ಅವರಲ್ಲಿ ಯಾರಾದರೊಬ್ಬರಿಗೆ ಆ ಖಾತೆ ಕೊಡಬಹುದಿತ್ತು. ಹಾಗೆ ಮಾಡದೆ ಅಭಯಚಂದ್ರ ಜೈನ್‌ರಿಗೆ ಸಚಿವ ಸ್ಥಾನ ನೀಡಿದ್ದರು. ಇದರ ಉದ್ದೇಶ 'ಜೈನ್ ಸಚಿವ ಸ್ಥಾನ ತೊರೆಯಬೇಕು' ಎಂಬುದೂ ಆಗಿರಬಹುದು. ಇದು ಅವರ ಕುಟಿಲ ತಂತ್ರ. ಅನ್ಯ ಧರ್ಮದವರನ್ನು ಸಮಾನ ದೃಷ್ಟಿಯಲ್ಲಿ ನೋಡುವ 'ಅರ್ಹ' ಮುಖ್ಯಮಂತ್ರಿಯ ಧೋರಣೆ.
ಈ ಸಾರಿ ಸೋನಿಯಾ ಕೃಪೆ ಮುಖ್ಯಮಂತ್ರಿಗೆ ಲಭಿಸದಿದ್ದರೆ, ಮೈಸೂರು, ಚಾಮರಾಜ ನಗರಗಳಲ್ಲಿ ಮುಖ್ಯಮಂತ್ರಿಗಳ ಅಭಿಮಾನಿಗಳಿಂದ, ಅವರ ಪಂಗಡದ ಜನರಿಂದ ಎಷ್ಟೋ ಬಸ್ಸು, ಲಾರಿಗಳು, ಟೈರ್‌ಗಳು ಬೆಂಕಿಗೆ ಆಹುತಿಯಾಗುತ್ತಿದ್ದವು! ಆದರೆ ಅಹಿಂಸಾ ಧರ್ಮ ಅನುಯಾಯಿ ಅಭಯಚಂದ್ರ ಜೈನ್ ಅಭಿಮಾನಿಗಳು ಇಂಥ ಸಾಹಸಕ್ಕೆ ಕೈ ಹಾಕಿಲ್ಲ. ಹಾಕುವುದೂ ಇಲ್ಲ. ಇದನ್ನು ತಿಳಿದ ಮುಖ್ಯಮಂತ್ರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.
ಇನ್ನು ಅಭಯಚಂದ್ರ ಜೈನ್ ಖಂಡಿತ ಜೈನ ಮತದಾರರಿಂದ ಆಯ್ಕೆಯಾದ ವ್ಯಕ್ತಿಯಲ್ಲ. ಎಲ್ಲಾ ಧರ್ಮದ, ಜಾತಿ ಪಂಗಡದ ಓಟಿನಿಂದ ಆಯ್ಕೆಯಾದ ವ್ಯಕ್ತಿ. ಅವರು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿಕೊಂಡು ಬಂದಿರುವುದರಿಂದಲೇ ಮೂಡಬಿದ್ರೆ ಕ್ಷೇತ್ರದಿಂದ ಸತತವಾಗಿ 4ನೇ ಬಾರಿ ಆಯ್ಕೆಗೊಂಡು ಶಾಸಕರಾಗಿದ್ದಾರೆ. ಅಂಥ ಗುಣ ಇಲ್ಲದಿದ್ದರೆ ಶಾಸಕರಾಗಲು ಸಾಧ್ಯವಿತ್ತೆ? ಅವರಿಗೆ ಸಂವಿಧಾನದ ನೀತಿ ಪಾಠ ಹೇಳಿಕೊಡುವ ಅಗತ್ಯವಿಲ್ಲ!
ಜೈನರು ಇಡೀ ದೇಶದ ಜನಸಂಖ್ಯೆಯ 0.04 ಪ್ರತಿಶತದಷ್ಟಿದ್ದಾರೆ. ಜನಸಂಖ್ಯೆ ಆಧಾರದಿಂದ ಖಂಡಿತವಾಗಿಯೂ ಒಬ್ಬನೇ ಒಬ್ಬ ಶಾಸಕನನ್ನು ಆಯ್ಕೆ ಮಾಡಲು ಜೈನರಿಂದ ಸಾಧ್ಯವಿಲ್ಲ. ಸಂಖ್ಯಾ ದೃಷ್ಟಿಯಲ್ಲಿ ಅವರು ಅಲ್ಪಸಂಖ್ಯಾತರು. ಆದರೆ ಜೈನರು ಎಲ್ಲಾ ಧರ್ಮದವರನ್ನು ಸಮಾನ ದೃಷ್ಟಿಯಿಂದ ಗೌರವಿಸುತ್ತಾರೆ. ಎಲ್ಲಾ ಜಾತಿಯವರ ಜತೆ ಸಹಬಾಳ್ವೆ ನಡೆಸುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಧರ್ಮಸ್ಥಳ ಕ್ಷೇತ್ರ. ಡಾ. ವೀರೇಂದ್ರ ಹೆಗ್ಗಡೆಯವರು ಜೈನರಾದರೂ ಹಿಂದುಗಳ ದೇವಾಲಯದ ಆಡಳಿತ ಮೊಕ್ತೇಸರರು. ಒಂದು ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಗ್ರಾಮೀಣ ಯೋಜನೆಯಲ್ಲಿ ಅವರು ಮಾಡುತ್ತಿದ್ದಾರೆ. ದೇಶಕ್ಕೆ ಧರ್ಮಸ್ಥಳದ ಗ್ರಾಮೀಣ ಯೋಜನೆ ಮಾದರಿಯಾಗಿದೆ. ನೀವು ದಕ್ಷಿಣ ಕನ್ನಡಕ್ಕೊಮ್ಮೆ ಬರಬೇಕು. ಅಲ್ಲಿನ ಬೀಡು, ಗುತ್ತು ಜೈನರಲ್ಲಿದೆ. ಅವರು ಹಿಂದುಗಳ ದೇವಾಲಯ, ದೈವಸ್ಥಾನಗಳ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಸಹಬಾಳ್ವೆಗೆ ಜೈನರ ಕೊಡುಗೆ ಅಪಾರ. ಯಾವತ್ತೂ ಜೈನರು ಕೋಮು ಗಲಭೆಗಳಲ್ಲಿ ಭಾಗಿಯಾಗಿಲ್ಲ. ಸಾಲಾಗಿ ಬಾಂಬು ಇಟ್ಟು ಸಿಡಿಸುವುದಿಲ್ಲ.
ಕರ್ನಾಟಕದ ಸಾಹಿತ್ಯ, ಶಿಲ್ಪಕಲೆಗೆ ಜೈನ ಧರ್ಮದ ಕೊಡುಗೆ ಅನನ್ಯ. ಅನೇಕ ಜೈನ ದೇವಾಲಯಗಳು ಇಂದು ಅನ್ಯಧರ್ಮೀಯರ ದೇವಾಲಯ ಮಂದಿರಗಳಾಗಿವೆ. ಈ ಸತ್ಯವನ್ನು ಮುಚ್ಚಿಡಲು ಸಾಧ್ಯವೇ? ಈ ಬಗ್ಗೆ ಅಸಹನೆ ಯಾಕೆ?
ವರೂರು ಕ್ಷೇತ್ರದ ಶ್ರೀ ಗುಣಧರನಂದಿ ಮುನಿಶ್ರೀ ಅವರು ವಿದ್ಯಾಕ್ಷೇತ್ರದಲ್ಲಿ ಮಾಡಿದ ಸಾಧನೆ ನೋಡಿ ನೀವು ಬೆತ್ತಲಾಗಬೇಡಿ. ಜೈನಮುನಿಗಳು ಪುರಪ್ರವೇಶ ಮಾಡಿದ ಸಂದರ್ಭದಲ್ಲಿ ನಿಮಗೆ ಅವರನ್ನು ನೋಡಲು ಅಸಾಧ್ಯವಾದರೆ, ಹಿಂದಿರುಗಿ ನಿಲ್ಲಿ. ಇಲ್ಲವಾದರೆ ನಿಮ್ಮ ವ್ಯಕ್ತಿತ್ವ ಬೆತ್ತಲೆಯಾಗುತ್ತದೆ. ಒಬ್ಬ ವ್ಯಕ್ತಿಯ ಹಿನ್ನೆಲೆ ತಿಳಿಯದೆ, ಆತ ನಡೆದು ಬಂದ ದಾರಿ ಅರಿಯದೆ, ಪೂರ್ವಗ್ರಹ ಪೀಡಿತರಾಗಿ ಬಳಲುವುದು ಎಷ್ಟು ಚೆನ್ನ? ಜೈನ ಧರ್ಮದ ತತ್ವ 'ಬದುಕು, ಬದುಕಲು ಬಿಡು' ಎನ್ನುವುದು. ಅದನ್ನೇ ಅವರು ತಮ್ಮ ಬದುಕಿನಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ. ಒಂದು ಬರವಣಿಗೆ ಬೇರೆ ಧರ್ಮದ ಜನರಿಗೆ ನೋವುಂಟು ಮಾಡಬಾರದಲ್ಲವೇ? ನಮ್ಮ ಸಂವಿಧಾನ ಹೇಳುವುದೂ ಅದನ್ನೇ ತಾನೇ?

- ಪಿ.ಆರ್. ಅಜ್ರಿ, ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.