ನೈತಿಕ ಅಧಃಪತನದ ವಿಚಾರದಲ್ಲಿ ಭಾರತದ ಇಂದಿನ ಸ್ಥಿತಿಯು ರೋಮನ್ ಸಾಮ್ರಾಜ್ಯದ ಅವನತಿಯ ವರ್ಷಗಳಲ್ಲಿ ಇದ್ದ ಪರಿಸ್ಥಿತಿಯಂತೆಯೇ ಇದೆ. ನಮ್ಮದು ಅಂಥ ಸಾಮ್ರಾಜ್ಯವೇನೂ ಅಲ್ಲ. ಆದರೂ ಇತಿಹಾಸದಲ್ಲಿನ ಅತ್ಯಂತ ಬಲಿಷ್ಠ ಶಕ್ತಿಯೊಂದನ್ನು ನೆಲಕಚ್ಚಿಸಿದ ಎಲ್ಲ ದುರ್ಗುಣ, ದುರಾಚಾರಗಳನ್ನು ನಾವಿಂದು ಹೊಂದಿದ್ದೇವೆ. ರೋಮನ್ ವೀರಗಾಥೆಯ ಒಬ್ಬ ಚರಿತ್ರಕಾರ ಹೇಳಿದಂತೆ, 'ಸ್ವತಃ ಭ್ರಷ್ಟನಾಗಬೇಕು ಮತ್ತು ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡಬೇಕು ಎಂಬುದೇ ಆ ಕಾಲದ ಮನೋಧರ್ಮವಾಗಿತ್ತು'. ಇನ್ನೊಬ್ಬ ಚರಿತ್ರಕಾರ ಉಲ್ಲೇಖಿಸಿದ್ದು ಹೀಗೆ- 'ಅಂದಿನ ಆಡಳಿತಗಾರರು ಅಪರಾಧದ ಪೆಡಂಭೂತದಂತಿದ್ದರು.'
ಇದೆಲ್ಲ ಸಹಜ, ವಿಶೇಷವೇನೂ ಇಲ್ಲ ಎನಿಸುತ್ತಿದೆಯೇ? ಇಂದಿನ ಯಾವುದೇ ವ್ಯವಸ್ಥೆ, ಯಾವುದೇ ಯೋಜನೆಯನ್ನು ನೋಡಿ. ಭಾರತೀಯ ಜಾಯಮಾನ ಅದನ್ನು ದುರ್ಬಳಕೆ ಮಾಡಿಕೊಳ್ಳಲು ದಾರಿ ಕಂಡುಕೊಳ್ಳುತ್ತದೆ. ಅದು ಚುನಾವಣೆಯೇ ಇರಲಿ, ರಕ್ಷಣಾ ಸಾಧನ ಖರೀದಿಯೇ ಇರಲಿ, ಸಾಲಮನ್ನಾವೇ ಇರಲಿ, ಕಸ ವಿಲೇವಾರಿಯೇ ಇರಲಿ- ನಮ್ಮ ಜನರ ಮನೋಭಾವ ಏನೆಂದರೆ, ಭ್ರಷ್ಟಾಚಾರ ಎಸಗಬೇಕು, ಭ್ರಷ್ಟಾಚಾರಕ್ಕೆ ತುತ್ತಾಗಬೇಕು. ನಮ್ಮ ಶಾಸನಸಭೆಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ 'ಅಪರಾಧದ ಪೆಡಂಭೂತ'ಗಳೇ ವಿಜೃಂಭಿಸುತ್ತವೆ. ನೂರು ಅಪರಾಧ ಕೃತ್ಯಗಳಲ್ಲಿ ಒಂದು ಮಾತ್ರ ರಾಷ್ಟ್ರಮಟ್ಟದ ಸುದ್ದಿ ಆಗುತ್ತದೆ, ದೇಶದ ಗಮನ ಸೆಳೆಯುತ್ತದೆ. ಆಗ ಪೆಡಂಭೂತಗಳು ಕೆಲ ಕಾಲ ಸದ್ದಿಲ್ಲದೆ ಕೂರುತ್ತವೆ. ಕಾಲ ಸರಿದಂತೆ ಸದ್ದುಗದ್ದಲ, ಆಕ್ರೋಶ ತಣ್ಣಗಾಗುತ್ತದೆ. ಪೆಡಂಭೂತಗಳು ತಮ್ಮ ಕೃತ್ಯವನ್ನು ಮುಂದುವರಿಸುತ್ತವೆ.
ಎಲ್ಲ ಪಕ್ಷಗಳು, ಎಲ್ಲ ಜನರು ಒಪ್ಪುವ ಒಂದು ವಿಚಾರವೆಂದರೆ, ರಾಜಾ ಭಯ್ಯಾ ಒಬ್ಬ ಅಪಾಯಕಾರಿ ಮನುಷ್ಯ ಎಂಬುದು. ತನ್ನ ಕುಂಡಾ ಕ್ಷೇತ್ರದಿಂದ ಆ ವ್ಯಕ್ತಿ ಚುನಾವಣೆಗೆ ನಿಂತರೆಂದರೆ, ಜನ ಹೆದರಿ ನಡುಗುತ್ತಾರೆ. ಅದು ಅಕ್ಷರಶಃ 'ಒಂದೇ ಒಂದು ಕುದುರೆಯ ರೇಸ್' ಆಗಿರುತ್ತದೆ. ಬಿಜೆಪಿಯ ಕಲ್ಯಾಣ್‌ಸಿಂಗ್ ಒಮ್ಮೆ ಅವರನ್ನು 'ಕುಂಡಾ ಕಾ ಗೂಂಡಾ' ಎಂದು ಕರೆದದ್ದುಂಟು. ಹಾಗಿದ್ದೂ ಕೂಡಾ ರಾಜಾ ಎರಡು ಬಿಜೆಪಿ ಸರ್ಕಾರಗಳ ಸಚಿವ ಸಂಪುಟದಲ್ಲಿದ್ದರು. ಕಲ್ಯಾಣ್‌ಸಿಂಗ್ ಮತ್ತು ರಾಜನಾಥ್ ಸಿಂಗ್ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಕ್ಯಾಬಿನೆಟ್‌ನಲ್ಲೂ ಸೇರಿಕೊಂಡಿದ್ದರು. ಅವರ ವಿರುದ್ಧದ ಅನೇಕ ಕೇಸುಗಳನ್ನು ಹಿಂತೆಗೆದುಕೊಳ್ಳಲಾಯಿತು. ಎಂಟು ಕೇಸುಗಳು ಇನ್ನೂ ಬಾಕಿ ಉಳಿದಿವೆ. ಅವುಗಳಲ್ಲಿ ಐದು ಪ್ರಕರಣಗಳು ಪಾಶವಿಕ ಕೃತ್ಯಗಳಿಗೆ ಸಂಬಂಧಿಸಿದವು.
ಇತ್ತೀಚಿನ ಪ್ರಕರಣವೆಂದರೆ, ಕುಂಡಾ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನೀಡಿದ ಚಿತ್ರಹಿಂಸೆ ಮತ್ತು ಅವರ ಹತ್ಯೆ. ಇದರಲ್ಲಿ ಯಾವುದೇ ಪಾತ್ರವನ್ನು ರಾಜಾ ಭಯ್ಯಾ ನಿರಾಕರಿಸಿದ್ದಾರೆ. ಆದರೂ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರೀಗ ತಲೆಮರೆಸಿಕೊಂಡಿರುವುದರಿಂದ ಸಾಕ್ಷ್ಯ ನಾಶಕ್ಕೆ ಅವಕಾಶ ನೀಡಿದಂತಾಗಿದೆ. ಇತ್ತ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಿದ್ದೂ ಆಗಿದೆ. ಇಟಲಿಯ ಹೆಲಿಕಾಪ್ಟರ್ ಹಗರಣದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ 30 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚಿಸಿದಂತೆ ಇಲ್ಲೂ ಒಂದು ತನಿಖೆ ಅಷ್ಟೆ. ಆಡಳಿತಗಾರರು ಅಪರಾಧದ ಪೆಡಂಭೂತಗಳಷ್ಟೇ ಅಲ್ಲ, ನ್ಯಾಯವನ್ನು ಬುಡಮೇಲು ಮಾಡುವ ಪೆಡಂಭೂತಗಳು ಕೂಡಾ!
ಇಲ್ಲಿನ ವಿಪರ್ಯಾಸವು ನಿಜಕ್ಕೂ ಆಘಾತ ಹುಟ್ಟಿಸುವಂಥದ್ದು. ಮಾಯಾವತಿಯ ನಿರಂಕುಶ ಪ್ರಭುತ್ವದಡಿಯಲ್ಲಿ ಉತ್ತರ ಪ್ರದೇಶ ಉಸಿರುಗಟ್ಟಿ ನಿಂತಿತ್ತು. ಆಕೆಯ ಸಚಿವರು ಮತ್ತು ಶಾಸಕರೆಲ್ಲ ಅಪರಾಧ ಹಿನ್ನೆಲೆಯವರೇ ಆಗಿದ್ದರು. ಅಧಿಕಾರದಿಂದ ಆಕೆ ಕಿತ್ತೊಗೆಯಲ್ಪಟು,್ಟ ಯುವ ಹಾಗೂ ಸುಶಿಕ್ಷಿತ ನಾಯಕ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗ, ಅದು ಉತ್ತಮ ಬೆಳವಣಿಗೆಯಂತೆ ಕಂಡುಬಂತು. ಆದರೆ ಆಗಿದ್ದೇನು? ಕ್ರಿಮಿನಲ್‌ಗಳ ಒಂದು ಹೊಸ ತಂಡ ಮೇಲೇರಿ ಬಂದಿತು. ಯಶಸ್ಸು ಎಂಬುದು ಪೆಡಂಭೂತಗಳಿಗೆ ಮಾತ್ರ ಕಟ್ಟಿಟ್ಟದ್ದೇ?
ಇನ್ನು, ಪಂಜಾಬ್‌ನತ್ತ ಗಮನ ಹರಿಸಿ. ಅಲ್ಲಿ ಏನಾಗಿದೆ ನೋಡಿ. ಟ್ಯಾಕ್ಸಿ ಚಾಲಕರಿಂದ ಕಿರುಕುಳಕ್ಕೊಳಗಾದ ಯುವತಿಯೊಬ್ಬಳು ದೂರು ನೀಡಲು ಸಮೀಪದಲ್ಲೇ ಇದ್ದ ಪೊಲೀಸ್ ಅಧಿಕಾರಿಗಳ ಬಳಿ ಹೋಗುತ್ತಾಳೆ. ಆ ಅಧಿಕಾರಿಗಳು ಆಕೆಗೆ ಒದೆಯುತ್ತಾರೆ, ಕೆನ್ನೆಗೆ ಬಾರಿಸುತ್ತಾರೆ, ರಸ್ತೆಯಲ್ಲಿ ಬಿದ್ದು ಹೊರಳಾಡುವವರೆಗೂ ಲಾಠಿ ಬೀಸುತ್ತಾರೆ. ಆಕೆಯ ವೃದ್ಧ ತಂದೆಯ ಮೇಲೂ ಹಲ್ಲೆ ನಡೆಸುತ್ತಾರೆ. ಇಡೀ ದೃಶ್ಯವನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದವು. ಯಾರೂ ಅಲ್ಲಗಳೆಯಲಾಗದಂಥ ಸಾಕ್ಷ್ಯವನ್ನು ಒದಗಿಸಿದವು. ಅಷ್ಟಾದರೂ ಪಂಜಾಬ್ ಪೊಲೀಸ್ ಮುಖ್ಯಸ್ಥರು ಎಲ್ಲವನ್ನೂ ಅಲ್ಲಗಳೆದರು. ಯುವತಿಯೇ ಪೊಲೀಸರನ್ನು ಕೆರಳಿಸಿದ್ದಳು ಎಂದು ವಾದಿಸಿದರು. ನಮ್ಮ ಆಡಳಿತಗಾರರು ತಮ್ಮನ್ನು ತಾವೇ ದೇವತೆಗಳೆಂದು ತಿಳಿದುಕೊಳ್ಳುವ ಪೆಡಂಭೂತಗಳು. ಅವರು ದೇವತೆಗಳನ್ನೇ ಪೆಡಂಭೂತಗಳಂತೆ ಕಾಣುತ್ತಾರೆ!
ನೆರೆಯ ಹರ್ಯಾಣದಲ್ಲಿ, ಸಚಿವ ಗೋಪಾಲ್ ಕಾಂಡಾ ಅವರ ದುಷ್ಕೃತ್ಯವನ್ನು ಮರೆಯುವಂತಿಲ್ಲ. ಅವರು ನೇಮಿಸಿಕೊಂಡಿದ್ದ ಗಗನಸಖಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಕಾಂಡಾ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಪತ್ರವನ್ನೂ ಬರೆದಿಟ್ಟಿದ್ದಳು ಆಕೆ. ಹಲವು ದಿನಗಳವರೆಗೆ ಆ ಸಚಿವ ರಾಜಾರೋಷವಾಗಿ ಓಡಾಡುತ್ತಲೇ ಇದ್ದರು. ಆದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದರು ಪೊಲೀಸರು. ಅನೇಕ ಕ್ರಿಮಿನಲ್ ಕೇಸ್‌ಗಳನ್ನು ಹೊತ್ತ ವ್ಯಕ್ತಿಯೊಬ್ಬ ಸಚಿವ ಸ್ಥಾನ ಗಿಟ್ಟಿಸಿಕೊಂಡ, ಕಾನೂನನ್ನೇ ಉಲ್ಲಂಘಿಸಿದ ಇನ್ನೊಂದು ಪ್ರಕರಣವಿದು.
ಅಪರಾಧ ಹಿನ್ನೆಲೆಯುಳ್ಳ ಸಂಸದರು ಮತ್ತು ಶಾಸಕರ ಬಗ್ಗೆ ನಾವು ಪದೇಪದೆ ಕೇಳುತ್ತಿರುತ್ತೇವೆ. ಅಮೆರಿಕದ ನಾಗರಿಕ ಪರಮಾಣು ಒಪ್ಪಂದದ ವಿಚಾರದಲ್ಲಿ ಸಂಸತ್ತಿನಲ್ಲಿ ಮನಮೋಹನ್ ಸಿಂಗ್ ಅವರು ಅಳಿವು- ಉಳಿವಿನ ಮತವನ್ನು ಗೆಲ್ಲಲೇಬೇಕಾಗಿ ಬಂದಾಗ, ಕೆಲ 'ಗೌರವಾನ್ವಿತ' ಸದಸ್ಯರು ಮತ ಚಲಾಯಿಸಲು ಜೈಲಿನಿಂದಲೇ ಸಂಸತ್ತಿಗೆ ಬಂದರು. ಅವರಲ್ಲಿ ಒಬ್ಬನಂತೂ ನ್ಯಾಯಾಲಯದಿಂದಲೇ ಕೊಲೆಗಾರನೆಂದು ಶಿಕ್ಷೆಗೆ ಗುರಿಯಾದವನು. ನಮ್ಮ ವ್ಯವಸ್ಥೆ ಇಷ್ಟೊಂದು ಕೊಳೆತುಹೋಗಿದೆಯೇ? ಅದಕ್ಕೆ ಕೊಲೆಗಾರರು ಮತ್ತು ರೇಪಿಸ್ಟ್‌ಗಳ ನೆರವಿಲ್ಲದಿದ್ದರೆ ಉಳಿಯಲು ಸಾಧ್ಯವಿಲ್ಲವೇ?
ಕೆಟ್ಟ ಆಡಳಿತಗಾರರನ್ನು ಕಿತ್ತೆಸೆಯುವಷ್ಟು ವಿವೇಕ ಭಾರತೀಯ ಮತದಾರರಲ್ಲಿ ಖಂಡಿತ ಇದೆ. ಉತ್ತಮವಾದ ಚುನಾವಣೆ ವ್ಯವಸ್ಥೆಯನ್ನೂ ನಾವು ಹೊಂದಿದ್ದೇವೆ. ಆದರೆ, ಚುನಾವಣೆ ವ್ಯವಸ್ಥೆಯಿಂದ ಅಪರಾಧಿಗಳನ್ನು ಹೊರಗಿಡಲು ಅಗತ್ಯವಾದ ಕಾನೂನು ನಮ್ಮಲ್ಲಿ ಇಲ್ಲ. ಏಕೆಂದರೆ, ಶಾಸನಸಭೆಗಳಲ್ಲಿ ಕ್ರಿಮಿನಲ್‌ಗಳೇ ಕೂತಿರುತ್ತಾರೆ. ಜನರ ಪ್ರತಿನಿಧಿಗಳೇ ಅಲ್ಲದ ನೀತಿಗೆಟ್ಟ ವ್ಯಕ್ತಿಗಳು ಜನರ ಪ್ರತಿನಿಧಿಗಳಾಗಿಬಿಡುತ್ತಾರೆ. ಇಂಥ ಪೆಡಂಭೂತಗಳನ್ನು ನಾವು ಸಕಾಲದಲ್ಲಿ ತಡೆಯದೇ ಹೋದರೆ, ರೋಮನ್ ಸಾಮ್ರಾಜ್ಯಕ್ಕೆ ಅವು ಯಾವ ಗತಿಯನ್ನು ಕಾಣಿಸಿದವೋ ಅದೇ ಗತಿಯನ್ನು ನಮ್ಮ ದೇಶಕ್ಕೂ ಕಾಣಿಸಬಹುದು ಅಷ್ಟೆ.
-ಟಿ.ಜೆ.ಎಸ್ ಜಾರ್ಜ್