-' ಮನೆ ಜಗಳ ಬೀದೀಗ್ ಬರ್‌ಬಾರ್‌ದು' ಅಂತಾರೆ, ಅಂಥಾದ್ರಲ್ಲಿ ನಿಮ್ಮ ' ಬಿಗ್‌ಬಾಸ್ ಮನೆ 'ಯ ಜಗಳನಾ ಎಲ್ಲಂದ್ರಲ್ಲೇ ಕ್ಯಾಮರಾ ಇಟ್ಟು ಎಲ್ಲರಿಗೂ ತೋರಿಸ್ತಿದೀರಲ್ಲ, ಇದು ಸರೀನಾ?
ಮಾತು ' ಮನೆ ' ಕೆಡಿಸಿತು ಅನ್ನೋ ಥೀಮ್ ನಮ್ದು. ಆದ್ರೆ, ಇನ್ಮೇಲೆ ಗಾಂಧಿನಗರದಲ್ಲಿ ನಮ್‌ದೂ ಕೂಡ ' ಬಿಗ್‌ಹೌಸ್ ' ಅಂತ ಹೇಳ್ಕೊಬಹುದಲ್ಲ, ಅಷ್ಟು ಸಾಕು!
-ಮಾತಲ್ಲಿ ಮನೆ ಕಟ್ಟೋದ್ ನೋಡಿದೀವಿ, ಆದ್ರೆ, ಇದು ಮನೆ ಮುರಿಯೋ ಪ್ರೋಗ್ರಾಮ್ ಅಂತೀರಾ, ಹೋಗ್ಲಿ, ಈ ಬಿಗ್'ಬಾಸ್ ಎಫೆಕ್ಟ್' ಹೇಗಿದೆ?
ಈಗಿನ್ನೂ ಇದು Beginning. ಆದರೂ ಆಗ್ಲೇ ನಮ್ಮ ಪ್ರೋಗ್ರಾಮ್ ' ಮನೆ ' ಮಾತಾಗಿದೆ. ಆದ್ರೆ ನಮ್ ಬಿಗ್ ಬಾಸ್ ಸ್ಪೆಷಾಲಿಟಿ ಅಂದ್ರೆ, ಹಿಟ್ ಆದ್ರೂ ಪ್ಲಾಪ್ ಆದ್ರೂ 100 ಡೇಸ್ ಮಾತ್ರ ಗ್ಯಾರಂಟಿ!
-ನಿಮ್ಮ ಕಾರ್ಯಕ್ರಮದಲ್ಲಿ ಇರೋರೆಲ್ಲ, ಕೆಲಸ ಇಲ್ಲದೆ ' ಮನೇಲಿ ಕೂತ್ಕೊಂಡಿದಾರೆ ' ಅಂತ ಜನ ಆಡ್ಕೊಂಡರೆ?
ಇದು ಕೆಲಸ ಇಲ್ಲದವರ ' ಮನೆವಾರ್ತೆ ' ಅಲ್ಲ, ಇದೊಂಥರಾ ' ವರ್ಕ್ ಫ್ರಮ್ ಹೋಮ್ ' ಕಾನ್ಸೆಪ್ಟ್!
-ಬಿಗ್‌ಬಾಸ್ ಮನೇಲಿ ನಿಮ್ ಫೇವರೆಟ್ ಜಾಗ ಯಾವ್ದು?
' ಕಿಚ 'ನ್ ಮತ್ತು ' ಬಚ್ಚಲ್ ' ಮನೆ!
-ಅದ್ಸರಿ, ರಮ್ಯಾ ಅವರನ್ನ ಬಿಗ್‌ಬಾಸ್‌ಗೆ ಯಾಕೆ ಕರೀಲಿಲ್ಲ?
ಅಯ್ಯೋ, ಆಯಮ್ಮ ಸಿನಿಮಾ ಫೋಟೋಗ್ರಾಫರ್ ಫೋಟೋ ತೆಗೆದಿದ್ದಕ್ಕೇ ಕೇಸು ಹಾಕ್ತಾಳೆ, ಇನ್ನು ಎಲ್ಲಂದ್ರಲ್ಲೆ ಕ್ಯಾಮೆರಾ ಇಟ್ರೆ ನಮ್ಮನ್ನ ಬಿಡ್ತಾಳಾ!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಶಾರ್ಟ್ ಅಂಡ್ ಸ್ವೀಟ್ ಎನ್ನುವುದು ಎಲ್ಲರಿಗೂ ಇಷ್ಟ. ಆದರೆ ಇದು ಸ್ವೀಟ್ ಅಲ್ಲದಿದ್ರೂ ಪರವಾಗಿಲ್ಲ ಆದರೆ ಶಾರ್ಟ್ ಆಗಿ ಇರಲಿ ಎನ್ನುವ ಥಿಯರಿ. ಇವತ್ತು MBBS, BE, IAS, KAS ನಂಥ ಕೋರ್ಸ್‌ಗಳಿಂದ ಹಿಡಿದು DDLJ, SOLS ಎನ್ನುವ ಸಿನಿಮಾಗಳವರೆಗೆ ಎಲ್ಲವೂ ಅಬ್ರಿವೇಟೆಡ್ ಆಗಿವೆ. ಹಾಗಾಗಿ ಇಂಗ್ಲಿಷ್‌ನ ಕೆಲವು ಅಬ್ರಿವೇಷನ್‌ಗಳ ಕಲೆಕ್ಷನ್ ನಿಮಗೂ ಅಗತ್ಯ ಎನಿಸಿದರೆ, ಅವುಗಳ ಬಗ್ಗೆ ಶಾರ್ಟ್ ಆದ ಮಾಹಿತಿ ಬೇಕೆಂದರೆ ಇಲ್ಲಿ ನೋಡಿ.
n bit.ly/YZLcgX n bit.ly/yBHR4l n bit.ly/4u4d2t n bit.ly/YR2zqX n bit.ly/9BrvXz
ಹರಿ-ಕಥೆ
ದುಬೈನಲ್ಲಿದ್ದ ಖೇಮು ತನ್ನ ಮದುವೆಗೆ ಅಂತ ಶೂಸ್ ತಗೋಬೇಕು ಅಂತ ಹೊರಟ. ಅವನ ಗೆಳೆಯರು ' ಮದುವೆ ಟೈಮು, ರಾಯಲ್ ಆಗಿರ್ಲಿ, ಒಳ್ಳೆ ಬ್ರ್ಯಾಂಡೆಡ್ ಕ್ಯಾಮೆಲ್ ಶೂನೇ ತಗೊ' ಅಂತ ಸಲಹೆ ಕೊಟ್ರು. ಖೇಮು ಅಂಗಡಿಗೆ ಹೋಗಿ ಕೇಳಿದ್ರೆ ಕ್ಯಾಮೆಲ್ ಶೂ ಬೆಲೆ ಸಿಕ್ಕಾಪಟ್ಟೆ ಇತ್ತು. ಅದು ಕ್ಯಾಮೆಲ್ ಲೆದರ್‌ನಿಂದ ಮಾಡಿದ ಶೂ ಆಗಿತ್ತು. ಹಾಗಾಗಿ, ಎಷ್ಟು ಚೌಕಾಸಿ ಮಾಡಿದ್ರೂ ಅಂಗಡಿಯವನು ರೇಟ್ ಕಡಿಮೆ ಮಾಡೋಕೆ ಒಪ್ಪದೆ, ಇದು ಒರಿಜಿನಲ್ ಕ್ಯಾಮೆಲ್ ಶೂ, ಇದಕ್ಕಿಂತ ಚೀಪ್ ಆಗಿ ಎಲ್ಲೂ ಸಿಗಲ್ಲ ಎಂದ. ಕೊನೆಗೆ ಖೇಮು ' ಅಯ್ಯೋ, ಮರಳುಗಾಡಲ್ಲಿ ಕ್ಯಾಮೆಲ್‌ಗೇನು ಕೊರತೆನಾ, ನಿಜವಾದ ಕ್ಯಾಮೆಲ್‌ನೇ ಹಿಡಿದು, ಚೀಪ್ ಆಗಿ ತಗೊತೀನಿ ನೋಡು ' ಎಂದು ಅಲ್ಲಿಂದ ಹೊರಟ. ಒಂದೆರಡು ಗಂಟೆಗಳ ನಂತರ, ಅಂಗಡಿಯವ, ಖೇಮು ಏನು ಮಾಡ್ತಿರಬಹುದು ಎನ್ನುವ ಕುತೂಹಲದಿಂದ ಅವನನ್ನು ಹುಡುಕಿಕೊಂಡು ಹೊರಟ. ಅಲ್ಲಿ, ಮರಳುಗಾಡಿನ ಒಂದು ಮರಳಿನ ಗುಡ್ಡೆಯ ಹಿಂದೆ ಖೇಮು ಕೈಯಲ್ಲಿ ಗನ್ ಹಿಡಿದುಕೊಂಡು ಬಚ್ಚಿಟ್ಟುಕೊಂಡು ನಿಂತಿದ್ದ. ಅವನ ಪಕ್ಕದಲ್ಲಿ ನೋಡಿದರೆ ಕಾಲಿಗೆ ಗುಂಡೇಟು ತಿಂದು ನಾಲ್ಕೈದು ಒಂಟೆಗಳು ಕೆಳಗೆ ಬಿದ್ದಿದ್ದವು. ಅದೇ ಸಮಯಕ್ಕೆ ಆ ಹಾದಿಯಲ್ಲಿ ಇನ್ನೊಂದು ಒಂಟೆ ಬಂತು. ಖೇಮು ಅದಕ್ಕಾಗಿ ಕಾದು ಕುಳಿತಿದ್ದವನು, ಆ ಒಂಟೆ ಬಂದ ಕೂಡಲೇ ಕೈಯಲ್ಲಿದ್ದ ಗನ್‌ನಿಂದ ಅದರ ಒಂದು ಕಾಲಿಗೆ ಶೂಟ್ ಮಾಡಿದ. ಪಾಪ, ಗುಂಡೇಟು ಬಿದ್ದು ಒಂಟೆ ಕೆಳಗೆ ಬಿತ್ತು. ಅದು ಕೆಳಗೆ ಬಿದ್ದ ಕೂಡಲೇ ಅದರ ಬಳಿಗೆ ಓಡಿ ಹೋದ ಖೇಮು, ಅದರ ಪಾದವನ್ನು ನೋಡಿ ಫ್ರಸ್ಟ್ರೇಟ್ ಆಗಿ ಬಯ್ದುಕೊಂಡ ' ಥೂತ್ತೇರಿಕೆ, ಈ ಒಂಟೆನೂ ಇವತ್ತು ಬರಿಗಾಲಲ್ಲೇ ಬಂದಿದೆ '.
ಸ್ಯಾಂಡಲ್‌ವುಡ್
ಹಿತ್ತಲ ಗಿಡ ಮದ್ದಲ್ಲ ಎಂಬುದು ಹಳೆಯ ಗಾದೆಯಾದರೂ ಗಾಂಧಿನಗರದಲ್ಲಂತೂ ಅದಕ್ಕೆ ಆಗಾಗ ಹೊಸ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಅನುಭವ ಪ್ರತಿಭೆ ಎರಡೂ ಇಲ್ಲದ ಕೆಲವು ಹೊಸ ನಿರ್ದೇಶಕರನ್ನು ನೋಡಿದರೆ ಇಂಥವರನ್ನು ನಂಬಿ ಅದು ಹೇಗೆ ಈ ನಿರ್ಮಾಪಕರು ದುಡ್ಡು ಹಾಕುತ್ತಾರೆ ಎಂದು ಭಯವಾದರೂ, ಇಂಥ ನಿರ್ದೇಶಕರಿಗೆ ಮರುಳಾಗುವ ನಿರ್ಮಾಪಕರು ಮಾತ್ರ ಕಡಿಮೆಯಾಗಿಲ್ಲ. ಆದರೆ, ಹೀಗೆ ಹಿಂದೆ ಮುಂದೆ ಗೊತ್ತಿಲ್ಲದ ಹೊಸಬರಿಗೆ ಹಣ ಹೂಡಲು ಹಿಂಜರಿಯದ ಇಂಥ ಎಷ್ಟೋ ನಿರ್ಮಾಪಕರ ನಡುವೆ, ನಮ್ಮ ನವೀನ್‌ಕೃಷ್ಣರಂಥ ಪ್ರತಿಭಾವಂತರು 'ಒಂದು ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದೇನೆ, ನಿರ್ಮಾಪಕರೇ ಸಿಗ್ತಿಲ್ಲ' ಎಂದು ಹೇಳುವ ಮಾತುಗಳನ್ನು ಕೇಳಿದರೆ ಖಂಡಿತ ಅದು ಅಚ್ಚರಿ ಅಷ್ಟೇ ಅಲ್ಲ ವಿಪರ್ಯಾಸ ಕೂಡ ಎನಿಸುವುದು ಸುಳ್ಳಲ್ಲ. ನಟ ನವೀನ್‌ಕೃಷ್ಣ ತಮ್ಮ ಚಿತ್ರಗಳಲ್ಲಿ ಕೇವಲ ನಟನೆಯನ್ನಷ್ಟೇ ಮಾಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಹಿತ್ಯ, ಸಂಭಾಷಣೆ, ಚಿತ್ರಕಥೆ ಎಲ್ಲದರಲ್ಲೂ ಕೈಯಾಡಿಸುವಷ್ಟು ಪ್ರತಿಭೆ ನವೀನ್ ಅವರದ್ದು. ಅದನ್ನು ಸಾಕಷ್ಟು ಬಾರಿ ಮಾಡಿ ಪ್ರೂವ್ ಮಾಡಿದ್ದಾರೆ ಕೂಡ. ಆದರೂ ಸಿನಿಮಾದ ಗಂಧಗಾಳಿ ಇಲ್ಲದ ಹುಂಬರಿಗೆಲ್ಲಾ ಸಿಗುವ ಅವಕಾಶ, ನವೀನ್‌ರಂಥವರಿಗೆ ಸಿಗುವುದು ಕಷ್ಟವಾಗಿದೆ ಎಂದರೆ ಅದನ್ನು ಡೈಜೆಸ್ಟ್ ಮಾಡಿಕೊಳ್ಳುವುದು, ಓದು ಬರಹ ಬರುವವರಿಗಂತೂ ಕಷ್ಟ. ಆದರೆ, ಅದೇನೇ ಇದ್ದರೂ, 'ಮೊದಲು, ಒಂದು ಶಾರ್ಟ್ ಫಿಲ್ಮ್ ಮಾಡುತ್ತೇನೆ, ಅದನ್ನು ನೋಡಿ, ಯಾವ ನಿರ್ಮಾಪಕರಿಗಾದರೂ ನನ್ನ ಮೇಲೆ ನಂಬಿಕೆ ಬಂದರೆ ಹಣ ಹೂಡಲಿ' ಎನ್ನುವ ಅವರ ತಾಳ್ಮೆ ಮತ್ತು ಸಜ್ಜನಿಕೆ ಮಾತ್ರ ಗಾಂಧಿನಗರದ ವ್ಯಾಪ್ತಿಗೆ ನಿಲುಕದಂಥದ್ದು.
ಡಬ್ಕುಡಬಲ್ ತುದಾಂಡಲ್...
-ಬಿಗ್‌ಬಾಸ್‌ಗೆ ಯಾರ್ಯಾರನ್ನ ಕರೆದ್ರೆ ಏನು ರಿಯಾಕ್ಷನ್ ಬರಬಹುದು?
-ಸಂಜಯ್ ದತ್
ಆ ಜೈಲಿಗಿಂತ ಈ ಜೈಲು ಎಷ್ಟೋ ವಾಸಿ ಬಿಡಿ.
-ಸಚಿನ್ ತೆಂಡೂಲ್ಕರ್
ಏನಾದ್ರೂ ಮಾಡ್ಕೊಳ್ಳಲಿ, ' ನೂರು ' ದಿನ ಇರೋಕೆ ಛಾನ್ಸ್ ಕೊಡ್ತಾರಲ್ಲ ಅಷ್ಟೇ ಸಾಕು.
-ಉಪೇಂದ್ರ ಅವ್ರನ್ನ ಕರೆದ್ರೆ
ನನ್ ಮಕ್ಳಾ, 13 ಜನ ಇರೋಕೆ ಇಷ್ಟು ದೊಡ್ಡ ಮನೆನಾ? ನಡೀರಿ ಹೊರಗೆ ಅಂತ ಎಲ್ಲರನ್ನೂ ಒಂದೇ ಸಲ ಹೊರಕ್ಕೆ ಹಾಕ್‌ಬಿಡ್ತಾರೆ.
-ಜಗ್ಗೇಶ್
ಮನೆ ಗಿನೆ ಅಂದ್ರೆ ನಮ್ಗೆ ಆಗಲ್ಲಪ್ಪಾ, ' ಮಠ 'ಕ್ಕಾದ್ರೆ ಹೇಳಿ ಬರ್ತೀವಿ.
-ಪ್ರತಾಪ್ ಸಿಂಹ ಬಿಗ್‌ಬಾಸ್‌ಗೆ ಹೋಗಿದ್ದಿದ್ರೆ
ಪೂನಮ್ ಪಾಂಡೆ ಆಫರ್ ಕೊಡ್ತಾ ಇದ್ಳು, ಪ್ರತಾಪ್ ಸಿಂಹ ಗೆದ್ರೆ, ನಾನು ' ಬೆತ್ತಲೆ ಜಗತ್ತು ' ತೋರಿಸ್ತೀನಿ ಅಂತ.
-ಮದನ್ ಪಟೇಲ್ ಪ್ರತಿಕ್ರಿಯೆ
ಬಿಗ್‌ಬಾಸ್ ಕಾರ್ಯಕ್ರಮನಾ ಅಲ್ಲೆಲ್ಲೋ ಮುಂಬೈನಲ್ಲಿ ಮಾಡೋದರ ಬದಲು ಇಲ್ಲೇ ಬಿಡದಿ ಆಶ್ರಮದೊಳಗೆ ಕ್ಯಾಮೆರಾ ಇಟ್ಟು ಮಾಡಿದ್ದಿದ್ದರೆ ಇನ್ನೂ ರೋಚಕವಾಗಿರ್ತಿತ್ತು.
-ಈ ಟೀವಿ ಬದಲು ಬಿಗ್‌ಬಾಸ್ ಉದಯ ಟಿವಿಯಲ್ಲಿದ್ದಿದ್ರೆ ಅದಕ್ಕೆ ಏನಂತ ಹೆಸರಿರ್ತಿತ್ತು?
ಮನೆಯೊಂದು ಮೂರು ಬಾಗಿಲು
-ಹರಿ
harikannadaprabha@gmail.com