ಅಂಕಣಗಳು

ಮಹಿಳೆಯ ಆರ್ಥಿಕ ಸಬಲತೆಗೆ ಸ್ವ-ಸಹಾಯ ಪದ್ಧತಿ ಆಶಾಕಿರಣ

Published On :

ಶಾಲಿನಿ: 2004-05ರಲ್ಲಿ ನಾನು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕಿಯಾಗಿ ದೆಹಲಿಯಲ್ಲಿ ಸೇವೆ ಸಲ್ಲಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡುವ ಮೂರು ಯೋಜನೆಗಳ ಅನುಷ್ಠಾನದ ಪರಿಶೀಲನಾ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ.  ಆ ಯೋಜನೆಗಳು ಹೆಸರು 'ಸ್ವಯಂಸಿದ್ಧ', 'ಸ್ವಾಧಾರ್‌' ಮತ್ತು 'ತಂತ್ರಜ್ಞಾನ/ಮಾಧ್ಯಮ'. ಸ್ವಯಂಸಿದ್ಧ ಯೋಜನೆಯಲ್ಲಿ ಭಾರತ ಸರ್ಕಾರವು ವಿಶ್ವ ಬ್ಯಾಂಕ್‌ನಿಂದ ಸಿಕ್ಕಿರುವ ಹಣವನ್ನು ರಾಜ್ಯಗಳಿಗೆ ಮಂಜೂರು ಮಾಡಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ದೈನಂದಿನ ಜೀವನದ ಗುಣಮಟ್ಟವನ್ನು ಏರಿಸಿಕೊಳ್ಳಲು ಸಹಾಯ ಮಾಡುವುದಾಗಿತ್ತು. ಹರಿಯಾಣ ವಿಭಾಗದ ಐ.ಎ.ಎಸ್. ಅಧಿಕಾರಿ ಶ್ರೀಮತಿ ರೇವಾ ನಯ್ಯರ್ ಎಂಬುವವರು ನಮ್ಮ ಕಾರ್ಯದರ್ಶಿಯಾಗಿದ್ದರು. ಆಕೆ ಮತ್ತು ನಮ್ಮ ತಂದೆ ಒಟ್ಟಿಗೇ ಕೆಲಸ ಮಾಡಿದ್ದರಿಂದ ನನ್ನನ್ನು ಸ್ವಂತ ಮಗಳಂತೆ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಕೈಕೆಳಗೆ ಕೆಲಸ ಮಾಡುವ ಎಲ್ಲರನ್ನೂ ಉತ್ತಮವಾಗಿ ಮತ್ತು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು. ಪ್ರತಿ ಸೋಮವಾರ ಬೆಳಿಗ್ಗೆ ಒಂದು ಗಂಟೆ ಸಭೆಯನ್ನು ನಡೆಸಿ ಹಿಂದಿನ ವಾರ ನಡೆದ ಕೆಲಸದ ಪರಿಶೀಲನೆ ಮತ್ತು ಈ ವಾರ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಮಧ್ಯಪ್ರದೇಶ ವಿಭಾಗದ ಶ್ರೀಮತಿ ಲೋವೆಲಿನ್ ಕಾಕರ್ ಎಂಬುವರು ಜಂಟಿ ಕಾರ್ಯದರ್ಶಿಯಾಗಿದ್ದರು. ಇಡೀ ತಂಡ ಅತ್ಯಂತ ಜವಾಬ್ದಾರಿಯಿಂದ ಮತ್ತು ಉತ್ಸುಕತೆಯಿಂದ ಕೆಲಸ ಮಾಡುತ್ತಿತ್ತು.
ನಾವು ಪ್ರತಿ ರಾಜ್ಯದ ಮಹಿಳೆಯರನ್ನು ಅರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಪಣ ತೊಟ್ಟು ಕೆಲಸ ಮಾಡಬೇಕೆಂದು ಆಶಿಸಿದೆವು. ಕರ್ನಾಟಕದಲ್ಲಿ ಅದಾಗಲೇ ಸ್ವಸಹಾಯ ಸಂಘಗಳು ನಿರ್ಮಾಣವಾಗಿ ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವ ಕೆಲಸದಲ್ಲಿ ದಾಪುಗಾಲು ಹಾಕುತ್ತಿದ್ದವು. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಇಟ್ಟುಕೊಂಡು, ಬೇರೆ ರಾಜ್ಯಗಳು ಅವುಗಳನ್ನು ಅನುಸರಿಸುವಂತೆ ಮಾಡಿದೆವು. ನಮ್ಮ ದೇಶದ ಮಹಿಳೆಯರು ಉತ್ತಮ ಪ್ರತಿಭೆ, ಸಾಮರ್ಥ್ಯ ಮತ್ತು ನೈಪುಣ್ಯತೆ ಹೊಂದಿರುವುದರಲ್ಲಿ ಅನುಮಾನವೇ ಇಲ್ಲ. ಅವರು ಉತ್ಪಾದಿಸುವ ವಸ್ತುಗಳಲ್ಲಿ ಅದರಲ್ಲೂ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಗುಣಮಟ್ಟಕ್ಕಿಂತ ನಮ್ಮ ಸ್ವಸಹಾಯ ಸಂಘದ ಮಹಿಳೆಯರು ಉತ್ತಮ ಗುಣಮಟ್ಟವನ್ನು ನೀಡಬಲ್ಲವರಾಗಿದ್ದಾರೆ. ಆದರೆ ಅವರಿಗೆ ತಾವು ತಯಾರಿಸಿದ ಉತ್ಪನ್ನಗಳನ್ನು ಯಾವ ರೀತಿ ಆಕರ್ಷಕವಾಗಿ ಪೊಟ್ಟಣಗಳಲ್ಲಿ ಹಾಕಿ (packaging) ಗಿರಾಕಿಗಳನ್ನು ಸೆಳೆಯುವುದು ಎನ್ನುವುದರ ಬಗ್ಗೆ ಯಾವುದೇ ಅರಿವಿಲ್ಲ. ಈ ಕೆಲಸವನ್ನು ಸರ್ಕಾರ ಮಾಡಬೇಕು. ಅದರೆ ದುರದೃಷ್ಟವಶಾತ್ ಈವರೆಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆಯಾಗಲೀ, ತಮ್ಮದೇ ಬ್ರ್ಯಾಂಡ್‌ಗಳ ನಿರ್ಮಾಣ ಮಾಡಿಕೊಳ್ಳುವುದರ ಬಗ್ಗೆಯಾಗಲೀ ಸರಿಯಾದ ಮಾರ್ಗ ರೂಪಿಸಿಕೊಡುವುದರಲ್ಲಿ ಸರ್ಕಾರ ಗಮನಾರ್ಹ ಕೆಲಸ ಮಾಡಿಲ್ಲ. ಸ್ವಸಹಾಯ ಸಂಘಗಳಿಗೆ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಮತ್ತು ದೇಶದ ಮಟ್ಟದಲ್ಲಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸ್ಥಳ ಸತತವಾಗಿ ಸಿಗುವಂತೆ ಮಾಡಬೇಕಾಗಿದೆ. ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾಧ್ಯಮಗಳ ಸಹಾಯದಿಂದ ಪರಿಚಯಿಸುವುದನ್ನು ಹೇಳಿಕೊಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಅವರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವಂತೆ ಮಾಡಿಕೊಳ್ಳುವುದರ ಬಗ್ಗೆ ಗುರಿ ಇಟ್ಟುಕೊಂಡು ಕೆಲಸ ಮಾಡುವುದನ್ನು ಹೇಳಿಕೊಡಬೇಕಾಗಿದೆ. ಸ್ವಸಹಾಯ ಸಂಘಗಳ ಬೆಳವಣಿಗೆ ಹಳ್ಳಿಯ ಮತ್ತು ರಾಜ್ಯ ಮಟ್ಟದಿಂದ ದೇಶದ ಮಟ್ಟದವರೆಗೆ ಸಂಘಟಿತಗೊಂಡು ಇನ್ನೂ ಸದೃಢವಾಗಬೇಗಿದೆ. ಇದನ್ನು ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ತೆಗೆದುಕೊಳ್ಳಬೇಕೆನ್ನುವ ಮಾತು ಕೇಳಿಬರುತ್ತಿದೆ.    
ಈ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲು ನಾನು ಎಲ್ಲಾ ರಾಜ್ಯಗಳಲ್ಲಿ ತಿರುಗಾಡಿದೆ. ಒಂದು ಘಟನೆ ನನಗೆ ಈಗಲೂ ಚೆನ್ನಾಗಿ ನೆನಪಿದೆ. ರಾಜಸ್ಥಾನದ ಒಂದು ಹಳ್ಳಿಯಲ್ಲಿ ಸ್ವಯಂಸಿದ್ಧ ಮಹಿಳಾ ಸಂಘದವರು ಮೂವತ್ತು ಸಾವಿರ ರುಪಾಯಿಗಳನ್ನು ಉಳಿಸಿ ಸಂಗ್ರಹಿಸಿದ್ದರು. ಆ ಹಣದಿಂದ ತಾವು ಏನು ಮಾಡಬಹುದು ಎಂದು ಯೋಚಿಸುತ್ತಿದ್ದರು. ಎಂ.ಬಿ.ಎ. ಓದುವಾಗ ನಮಗೆ ಕಲಿಸಿರುತ್ತಾರೆ, 'ಎಲ್ಲಿ ಅಪೇಕ್ಷೆ ಇದೆಯೋ, ಅಲ್ಲಿ ಮಾರುಕಟ್ಟೆಯೂ ಇದೆ' ಎಂದು. ಅಂದರೆ ಎಲ್ಲಿ ಜನ ತಮಗೆ ಯಾವುದು ಬೇಕು ಎಂದು ಆಶಿಸುತ್ತಾರೋ, ಅಲ್ಲಿ ಮಾರುಕಟ್ಟೆಯ ಅವಕಾಶವೂ ಇರುತ್ತದೆ. ನಾವು ಅದನ್ನು ಗುರುತಿಸಿ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಅಷ್ಟೆ. ಆದರೆ ಯಾವುದೆ ಪದವಿಯನ್ನೂ ಹೊಂದದ ಆ ಗುಂಪಿನವರು ಹೇಳಿದರು, 'ನೋಡಿ, ಯಾವಾಗಲೂ ನಮ್ಮ ಮನೆಗಳಲ್ಲಿ ಮದುವೆಯಾದಾಗ ನಾವು ಬೇರೆ ಊರಿನಿಂದ ಬಾಡಿಗೆಯ ಮೇಲೆ ಪಾತ್ರೆ, ಪಡಗ, ಶಾಮಿಯಾನ, ಕುರ್ಚಿ ಮುಂತಾದವುಗಳನ್ನು ತರಬೇಕಾಗುತ್ತದೆ. ಒಂದು ಮದುವೆಗೆ ಬೇಕಾದ ಪರಿಕರಗಳನ್ನು ನಾವೇ ನಮ್ಮ ಊರಿನಲ್ಲಿ ಬಾಡಿಗೆಗೆ ಕೊಟ್ಟರೆ ಹೇಗೆ?'
ಅಲ್ಲಿಂದ ಅವರ ಯಶೋಗಾಥೆ ಪ್ರಾರಂಭವಾಯಿತು. ಬೆಳೆಯುತ್ತಾ ಬೆಳೆಯುತ್ತಾ ಅವರು ಒಂದು ಜನರೇಟರನ್ನು ಸಹ ಖರೀದಿಸಿ, ಕೆಲವೇ ವರ್ಷಗಳಲ್ಲಿ ಆ ಸದಸ್ಯರುಗಳೆಲ್ಲಾ ಊರಿನ ಸಾಹುಕಾರರುಗಳಾದರು. ಈ ಕೆಲಸ ಒಬ್ಬ ಮಹಿಳೆಯಿಂದ ಸಾಧ್ಯವಾಗದಿರಬಹುದು, ಆದರೆ ಗುಂಪಿನ ಸಹಕಾರದಿಂದ ತುಂಬಾ ಸುಲಭವಾಯಿತು. ದೇವರು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಶಕ್ತಿಯನ್ನು ನೀಡಿರುತ್ತಾನೆ. ಅವಳು ಏನನ್ನೂ ಕಲಿಯದೇ ಮನೆಯ ಆಯವ್ಯಯ ಮತ್ತು ಲೆಕ್ಕವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ಕುಟುಂಬದ ಎಲ್ಲ ಸದಸ್ಯರ ಪೋಷಣೆ ಮಾಡುತ್ತಾ ಹಿತ-ಮಿತವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಾಳೆ. ಸದಸ್ಯರ ಎಲ್ಲ ಪೂರೈಕೆಗಳನ್ನು ಅರಿತು, ಮಾರುಕಟ್ಟೆಯಲ್ಲಿ ಯಾವ ಸಾಮಾನು ಎಲ್ಲಿ ಯೋಗ್ಯ ದರದಲ್ಲಿ ಉತ್ತಮ ಮಟ್ಟದಲ್ಲಿ ದೊರಕುತ್ತದೆ ಎಂಬ ಸಂಪೂರ್ಣ ಜ್ಞಾನವನ್ನು ಅನುಭವದಿಂದ ಪಡೆದಿರುತ್ತಾಳೆ. ಅಂದರೆ ಪ್ರತಿ ಮನೆಯಲ್ಲೂ ಒಬ್ಬ ಎಂ.ಬಿ.ಎ. ಪಧವೀದರೆ ಇದ್ದಾಳೆ ಎಂದರ್ಥ! ಈ ಬಹುಮೂಲ್ಯ ಸಂಪನ್ಮೂಲವನ್ನು ಬ್ಯಾಂಕುಗಳು ಹಾಗೂ ಸಮಾಜ ಪ್ರೋತ್ಸಾಹಿಸಬೇಕಷ್ಟೆ. ಮಹಿಳೆಯರು ತಯಾರಿಸಿದ ವಸ್ತುಗಳನ್ನು ನಾನು ವಸ್ತುಪ್ರದರ್ಶನಗಳಲ್ಲಿ ನೋಡಿದ್ದೇನೆ. ಅಂಗಡಿಗಳಲ್ಲಿ ಅದೇ ಸಾಮಾನುಗಳ ಬೆಲೆ ದುಪ್ಪಟ್ಟು ಇರುತ್ತದೆ. ಅಂದರೆ ಮಹಿಳೆಯರು ನೇರವಾಗಿ ತಮ್ಮ ಉತ್ಪನ್ನಗಳನ್ನು ತಮ್ಮದೇ ಮಾರುಕಟ್ಟೆಗಳ ಮುಖಾಂತರ ಮಾಡಿದರೆ ಗ್ರಾಹಕರಿಗೆ ಉತ್ತಮ ಪದಾರ್ಥಗಳು ಯೋಗ್ಯ ಬೆಲೆಯಲ್ಲಿ ಸಿಗುವುದರಿಂದ ದಳ್ಳಾಳಿಗಳು ದಿವಾಳಿಯಾಗುವುದರಲ್ಲಿ ಸಂದೇಹವಿಲ್ಲ!
ಸ್ವಾಧಾರ್ ಯೋಜನೆಯ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ ನೀಡಬೇಕು. ಈ ಯೋಜನೆ ಪ್ರಾರಂಭವಾಗಿದ್ದು ಮಥುರಾ ನಗರದಲ್ಲಿ ವೃಂದಾವನದ ಹತ್ತಿರ ಸಾವಿರಾರು ವಿಧವೆಯರನ್ನು ಸಮಾಜದಿಂದ ಹೊರಗೆ ಹಾಕಿ ನಿರ್ಗತಿಕರನ್ನಾಗಿ ಮಾಡುವಂತಹ ಪದ್ಧತಿಯನ್ನು ಸರಿಪಡಿಸಲೆಂದು. ಅತ್ಯಂತ ದುರದೃಷ್ಟಕರ  ವಿಷಯವೆಂದರೆ ಮಹಿಳೆಯರ ಬಗ್ಗೆ ಅವರ ಬಂಧು ಬಳಗದವರಾಗಲೀ, ಸಮಾಜವಾಗಲೀ ಸರಿಯಾಗಿ ನಡೆದುಕೊಳ್ಳದಿರುವ ಪರಿಣಾಮವಾಗಿ ಅವರು ಬೀದಿಗೆ ಬಿದ್ದ ನಿರ್ಗತಿಕರಾಗಿದ್ದರು. ಮಥುರಾದಲ್ಲಿ ಈ ರೀತಿ ತಿರಸ್ಕಾರಕ್ಕೆ ಒಳಗೊಂಡ ವಿಧವೆಯರು ಹೊಟ್ಟೆ ಬಟ್ಟೆಗೆ ಗತಿ ಇಲ್ಲದ ಕಾರಣ ದೇವದಾಸಿಯರಾದರು. ಇನ್ನು ನಮ್ಮ ಉತ್ತರ ಕರ್ನಾಟಕದಲ್ಲೂ ಸಹ ಇದೇ ರೀತಿ ಶೋಷಣೆಗೆ ಒಳಗಾದ ಮಹಿಳೆಯರು ದೇವದಾಸಿಯರಾಗಿರುವುದನ್ನು ನಾವು ಕಾಣಬಹುದು. ತಂದೆ ತಾಯಿಯರು ಏನೋ ಹರಕೆ ಹೊತ್ತು ಅದಕ್ಕಾಗಿ ತಮಗೆ ಹುಟ್ಟುವ ಮಗಳನ್ನು ದೇವದಾಸಿಯನ್ನಾಗಿ ಮಾಡಿ ದೇವರಿಗೆ ಎಂದು ಬಿಟ್ಟು ಬಿಡುತ್ತಾರೆ. ಅಂತಹ ಮಹಿಳೆಯರು ತಮಗಾಗಿಯೇ ಇರುವವರು ಎಂದು ಊರಿನ ಪುರುಷರು ಅವರನ್ನು ಬಳಸಿಕೊಳ್ಳುತ್ತಾರೆ. ಇದು ಅಮಾನವೀಯ. ಸರ್ಕಾರ ದೇವದಾಸಿ ಪದ್ಧತಿಯನ್ನು ನಿರ್ಬಂಧಿಸಿದ್ದರೂ ದೇವರ ಹೆಸರಿನಲ್ಲಿ ಸರ್ಕಾರದ ಕಣ್ಣಿಗೆ ಬೀಳದಂತೆ ಈ ದೌರ್ಜನ್ಯ ನಮ್ಮ ಸುತ್ತ ಮುತ್ತಲೂ ನಡೆಯುತ್ತಲೇ ಇದೆ. ಅಂಥಹ ದೌರ್ಭಾಗ್ಯ ಮಹಿಳೆಯರಿಗೆ ವಾಸಿಸಲು ಸಾಧ್ಯವಾಗುವಂತಹ ಆಶ್ರಯ ಮನೆಗಳನ್ನು ನಿರ್ಮಿಸಿ, ಮೊಟ್ಟ ಮೊದಲಿಗೆ ಅಂತಹ ಮಹಿಳೆಯರಿಗೆ ಆಶ್ರಯ ನೀಡಿ, ನಂತರ ಅವರ ಕಷ್ಟಗಳನ್ನು ಪರಿಹರಿಸಿ ಅವರಿಗೆ ಆಸಕ್ತಿ ಇರುವ ಕೆಲಸಗಳಲ್ಲಿ ತರಬೇತಿ ಕೊಟ್ಟು ತಮ್ಮ ಕಾಲ ಮೇಲೆ ತಾವು ನಿಂತು ಸಮಾಜದಲ್ಲಿ ಎಲ್ಲರಂತೆ ತಲೆ ಎತ್ತಿ ನಿಲ್ಲುವಂತೆ ಮಾಡುವ ಯೋಜನೆಯೇ ಸ್ವಾಧಾರ.
ಇನ್ನು ಮೂರನೆಯದು ತಂತ್ರಜ್ಞಾನ ಮತ್ತು ಮಾಧ್ಯಮಗಳ ಮೂಲಕ ವಸ್ತುಸ್ಥಿತಿಯ ಬಗ್ಗೆ ಜನಜಾಗೃತಿ ಮೂಡಿಸುವ ಯೋಜನೆ. ನಾನು ಪತ್ರಿಕೆಗಳ ಮತ್ತು ಟಿ.ವಿ. ಮಾಧ್ಯಮಗಳ ಮೂಲಕ ಎಲ್ಲರನ್ನೂ ಬೆಚ್ಚಿಬೀಳಿಸುವಂತಹ ಕಾರ್ಯಾಚರಣೆಯನ್ನು ಆರಂಭಿಸಿದೆ. 'ನಿಮಗೆ ಗೊತ್ತಾ ಒಂದು ಸೆಕೆಂಡ್‌ಗೆ ಎಷ್ಟು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ, ಎಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಎಷ್ಟು ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ' ಇತ್ಯಾದಿ. ಅಂಕಿ ಅಂಶಗಳನ್ನು ಕೊಟ್ಟು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಶಿಕ್ಷಿಸದೆ ಬಿಟ್ಟುಬಿಡಬಾರದೆಂಬ ಮನೋಭಾವ ಸಮಾಜದಲ್ಲಿ ಎಲ್ಲರಿಗೂ ಉಂಟಾಗುವಂತೆ ಮಾಡುವುದರಲ್ಲಿ ಸಫಲಳಾದೆ. ಇದೇ ವಿಧಾನವನ್ನು ಪ್ರತಿ ರಾಜ್ಯಗಳು ಅನುಸರಿಸಿ ಜನ ಜಾಗೃತಿ ಮೂಡಿಸುವುಂತೆ ಮಾಡುವುದಲ್ಲೂ ಬಹು ಮಟ್ಟಿಗೆ ಯಶಸ್ವಿ ಆದೆ.  ನಾನು ಅಲ್ಲಿ ಕೆಲಸ ಮಾಡಿದ ಪ್ರತಿ ಕ್ಷೇತ್ರದಲ್ಲೂ ಅತ್ಯಂತ ಸಂತೋಷದಿಂದ, ಮನಸ್ಸಿಗೆ ತೃಪ್ತಿ ಆಗುವಂತೆ ಕೆಲಸ ಮಾಡಿದೆ ಎಂದು ಹೇಳಬಹುದು.
(ಮುಂದುವರೆಯುವುದು)

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.