ನಂಬಿದರೆ ನಂಬಿ, ಬಿಟ್ಟರೆ ಬಿಡಿ- ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿಗೆ ರಾಹುಲ್ ಗಾಂಧಿಯ ಪ್ರಚಾರ ಭಾಷಣವೇ ಕಾರಣ ಎಂದು ಬಹಿರಂಗವಾಗಿ ವಿಶ್ಲೇಷಿಸಿದ್ದಾರೆ ರಾಜ್ಯದ ಕೆಲ ರಾಜಕೀಯ ಪಂಡಿತರು. ನರೇಂದ್ರ ಮೋದಿಯದು ಎಲ್ಲವೂ ಡಾಂಭಿಕ ಮಾತುಗಳು. ಆದರೆ, ರಾಹುಲ್ ಜನರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು, ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು, ತನ್ಮೂಲಕ ಅವರ ಮತಗಳನ್ನು ಗೆದ್ದರು ಎಂದು ವಿಶ್ಲೇಷಿಸುತ್ತಾರೆ ಆ ಪರಿಣತರು.
ಇದು ನಿಜಕ್ಕೂ ಕಾಂಗ್ರೆಸ್‌ನ ದುರಂತ, ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ ದೇಶದ ದುರಂತ. ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ತೋರಿರುತ್ತಿದ್ದರೆ ಸ್ಥಳೀಯ ನಾಯಕರ ಮೇಲೆಯೇ ಸೋಲಿನ ಹೊಣೆ ಹೊರಿಸಲಾಗುತ್ತಿತ್ತೇನೋ. ಜಯ ಗಳಿಸಿದಾಗ ಮಾತ್ರ ಎಲ್ಲ ಗೌರವ, ಕೀರ್ತಿ ಹೈಕಮಾಂಡ್‌ಗೇ ಸಲ್ಲುತ್ತದೆ. ಕಾಂಗ್ರೆಸ್‌ನ ಇಂಥ ಸಂಸ್ಕೃತಿಯ ಕಾರಣದಿಂದಾಗಿ, ರಾಜ್ಯದ ಹೊಸ ಸರ್ಕಾರದ ಬಗ್ಗೆ ನಾವು ಹೆಚ್ಚೇನೂ ಆಶಾವಾದ ಇರಿಸಿಕೊಳ್ಳುವಂತಿಲ್ಲ. ಹೊಸ ಸರ್ಕಾರದ ಆದ್ಯತೆಯು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಅಥವಾ ಉತ್ತಮ ಆಡಳಿತ ನೀಡುವುದಾಗಿರಲಿಕ್ಕಿಲ್ಲ. ಬದಲಾಗಿ, ಹೈಕಮಾಂಡ್ ಅನ್ನು ಸಂತುಷ್ಟಗೊಳಿಸುವುದೇ ಆಗಿರಬಹುದು!
ಹೈಕಮಾಂಡನ್ನು ನಿಜಕ್ಕೂ ಸಂತಸಗೊಳಿಸುವುದು ಯಾವುದು? ಜನರ ಗ್ರಹಿಕೆಯ ಪ್ರಕಾರ, ಹೈಕಮಾಂಡ್‌ಗೆ ಯಾವುದು ಉತ್ತಮವೆಂದು ತೋರುತ್ತದೋ ಆ ಹೆಜ್ಜೆಯಲ್ಲಿ ನಡೆದರೆ ಅದು ಸಂತುಷ್ಟಗೊಳ್ಳುತ್ತದೆ. ಆದರೆ, ಹೈಕಮಾಂಡ್‌ಗೆ ಉತ್ತಮವೆಂದು ತೋರುವ ವಿಚಾರಕ್ಕೂ ದೇಶಕ್ಕೆ ಉತ್ತಮವೆಂದು ತೋರುವ ವಿಚಾರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಜನರ ಈ ಗ್ರಹಿಕೆ ದಿಢೀರನೆ ಹುಟ್ಟಿಕೊಂಡಿದ್ದೇನೂ ಅಲ್ಲ. ಹೈಕಮಾಂಡ್‌ನ ಕೆಲಸಗಳು, ನಿಷ್ಕ್ರಿಯತೆಯನ್ನು ನೋಡಿ ಜನ ಹಲವಾರು ವರ್ಷಗಳಿಂದ ಬೆಳೆಸಿಕೊಂಡು ಬಂದದ್ದು. ಕಳೆದ ಎರಡು ದಶಕಗಳಿಂದ ನಡೆದ ಹಗರಣಗಳು ಮತ್ತು ಅವುಗಳ ಬಗ್ಗೆ ಹೈಕಮಾಂಡ್ ತೋರಿದ ವಿಚಿತ್ರ ಪ್ರತಿಕ್ರಿಯೆಯನ್ನು ಕಂಡು ಜನ ಬೆಳೆಸಿಕೊಂಡ ಗ್ರಹಿಕೆ ಅದು.
ಎಲ್ಲ ಹಗರಣಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಅಂಶವೆಂದರೆ, ಸರ್ಕಾರವೂ ಸೇರಿದಂತೆ ಕಾಂಗ್ರೆಸ್ ಸಮೂಹ ತಪ್ಪಿತಸ್ಥರನ್ನು ಶಿಕ್ಷಿಸಲು ಯಾವುದೇ ಗಂಭೀರ ಪ್ರಯತ್ನ ನಡೆಸದೇ ಇರುವುದು. ಬದಲಾಗಿ, ತಪ್ಪಿತಸ್ಥರು ಮುಕ್ತವಾಗಿ ಓಡಾಡುವಂತಾಗಲು ಅದು ಎಲ್ಲ ಅವಕಾಶವನ್ನೂ ಕಲ್ಪಿಸಿತು. ಅತ್ಯಂತ ಕುಖ್ಯಾತ ಉದಾಹರಣೆ, ಒಟ್ಟಾವಿಯೋ ಕ್ವಟ್ರೋಕಿ ಪ್ರಕರಣ. ಬೊಫೋರ್ಸ್ ಫಿರಂಗಿ ವ್ಯವಹಾರವನ್ನು ಕುದುರಿಸುವಲ್ಲಿ ಮತ್ತು ಕಮಿಷನ್ ಬಾಚಿಕೊಳ್ಳುವಲ್ಲಿ ಇಟಲಿಯ ಈ ಮಧ್ಯವರ್ತಿಯ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿದ್ದರೂ ಕೇಂದ್ರದ ಸಚಿವರು ಆ ವ್ಯಕ್ತಿಗೆ ಬೇಕಾದ ಎಲ್ಲ ಸಹಾಯ ಮಾಡಿದರು. ಮಲೇಷ್ಯಾಕ್ಕೆ ಪರಾರಿಯಾಗಲು ನೆರವಾದರು. ಆ ಬಳಿಕ ಭಾರತೀಯ ತನಿಖಾ ಸಂಸ್ಥೆಗಳು ತಮಗೆ ತಾವೇ ಅಪಕೀರ್ತಿ ತಂದುಕೊಂಡವು. ವಿದೇಶಿ ನ್ಯಾಯಾಲಯಗಳಲ್ಲಿ ಕ್ವಟ್ರೋಕಿ ಎದುರು ಸೋಲು ಕಾಣಲು ಯುಕ್ತಿ ಹೂಡಿದವು. ಕೊನೆಗೆ ಆತನ ವಿರುದ್ಧದ ಎಲ್ಲ ಕೇಸುಗಳನ್ನು ವಾಪಸ್ ಪಡೆಯಲು ಭಾರತ ಮುಂದಾಯಿತು. ಆತನ ಬ್ಯಾಂಕ್ ಖಾತೆಗಳ ಮುಟ್ಟುಗೋಲನ್ನು ಹಿಂದೆಗೆಯಲಾಯಿತು. ಕ್ವಟ್ರೋಕಿಗೆ ದೊರೆತಷ್ಟು ವಿಶೇಷ ವಿನಾಯಿತಿ, ರಕ್ಷಣೆ ಹಿಂದೆಂದೂ ಯಾವ ದಲ್ಲಾಳಿಗೂ ದೊರೆತಿರಲಿಲ.್ಲ ಭಾರತದ ಜನತೆ ಆತನನ್ನು ಹೈಕಮಾಂಡ್‌ನ ಒಬ್ಬ ಸದಸ್ಯ ಎಂಬಂತೆಯೇ ಕಾಣುವಂತಾಯಿತು!
ಮೊದಮೊದಲ ಹಗರಣಗಳಲ್ಲಿ ಸರ್ಕಾರ ತಪ್ಪಿತಸ್ಥರನ್ನು ರಕ್ಷಿಸಿಕೊಂಡು ಬಂದ ಕಾರಣ, ಇನ್ನಷ್ಟು ಹೊಸ ಹಗರಣಗಳು ತಲೆಯೆತ್ತಿದವು. ಪ್ರತಿಯೊಂದು ಹಗರಣದಲ್ಲೂ ಈ ಹಿಂದಿನಂತೆಯೇ ತಪ್ಪಿತಸ್ಥರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸಿತು. ಸರ್ಕಾರ ಎಂಬುದು ಹೈಕಮಾಂಡ್‌ನ ಸೃಷ್ಟಿಯಾದ್ದರಿಂದ ಪ್ರತಿಯೊಂದು ಹಗರಣದಲ್ಲೂ ಸಂಶಯದ ದೃಷ್ಟಿ ಹೈಕಮಾಂಡ್‌ನತ್ತಲೇ ಹೊರಳಿತು. ಪ್ರಾರಂಭದಲ್ಲಿ, ಕೆಲ ಗಣ್ಯರ ಹೆಸರು ಬಹಿರಂಗವಾಗುವುದನ್ನು ವ್ಯಕ್ತಿ- ಪಕ್ಷನಿಷ್ಠೆಯು ತಪ್ಪಿಸಿತು. 2ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಂಚಿಕೆ, ಸಿಬಿಐ ದುರ್ಬಳಕೆ, ರೇಲ್ವೆ ಮಂಡಳಿ ಲಂಚ ಪ್ರಕರಣಗಳು ದೇಶಕ್ಕೇ ಕಳಂಕ ತಂದ ಕಾರಣ ಉನ್ನತ ಮಟ್ಟದ ಭ್ರಷ್ಟಾಚಾರದಲ್ಲಿ ಹೈಕಮಾಂಡ್‌ನ ಪಾತ್ರದ ಬಗ್ಗೆ ಬಹಿರಂಗ ಚರ್ಚೆ ಆರಂಭವಾಯಿತು.
ಹೈಕಮಾಂಡ್‌ನ ಪಾತ್ರವಿಲ್ಲದೆ ಇಷ್ಟೆಲ್ಲ ನಡೆಯಲು ಸಾಧ್ಯವೇ? ತಮ್ಮ ರಕ್ಷಕರ ನೆರವಿಲ್ಲದೆ ಕಾನೂನು ಸಚಿವರು ಮತ್ತು ರೇಲ್ವೆ ಸಚಿವರಿಗೆ ಇಷ್ಟೆಲ್ಲ ಮಾಡಲು ಹೇಗೆ ತಾನೇ ಸಾಧ್ಯ? ಅಶ್ವಿನಿ ಕುಮಾರರು ಮತ್ತು ಪವನ್ ಬನ್ಸಲ್‌ಗಳು ಹೈಕಮಾಂಡ್ ಎಂಬ ಚಕ್ರದ ಹಲ್ಲುಗಳಾಗಿ ರಾಜಕೀಯದಲ್ಲಿ ಮೇಲೆ ಬಂದವರು.
ಸಮರ್ಪಕವಾಗಿ ಕಾರ್ಯಾಚರಿಸದ ಗಾಲಿಹಲ್ಲುಗಳು ತಮ್ಮಿಂದ ಸಾಧ್ಯವಾದಷ್ಟೂ ಹೊಲಸು ಸೃಷ್ಟಿಸಿದವು. ಇಷ್ಟೆಲ್ಲ ಆದ ಮೇಲೆ ಮುರಿದುಹೋದವು. ಇದರ ಗೌರವವು ಖಂಡಿತ ಸೋನಿಯಾ ಗಾಂಧಿ ಅವರಿಗೇ ಸಲ್ಲಬೇಕು- ಕರ್ನಾಟಕ ಗೆಲವಿನ ಕೀರ್ತಿ ರಾಹುಲ್ ಗಾಂಧಿಗೆ ಸಂದಂತೆ. ಹಾಗಾದರೆ, ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಆ ನೀಚ ಸಚಿವರು ಪ್ರಯತ್ನಿಸುತ್ತಿದ್ದಾಗ, ಆ ಏಳು ದಿನಗಳ ಕಾಲ ಸೋನಿಯಾ ಮಾಡಿದ್ದೇನು? ನಿಜಕ್ಕೂ ಕಳಂಕಿತ ಸಚಿವರ ವಜಾಕ್ಕೆ ಕಾರಣವಾಗಿದ್ದು ಸಿಬಿಐ ಮತ್ತು ಸುಪ್ರೀಂಕೋರ್ಟ್. ಸಿಬಿಐ ಬನ್ಸಲ್ ಕುಟುಂಬದ ಹಗರಣಗಳನ್ನು ಬಯಲಿಗೆಳೆದರೆ, ಸುಪ್ರೀಂಕೋರ್ಟ್ ನಿಷ್ಕ್ರಿಯ ಸರ್ಕಾರಕ್ಕೆ ಕಟುವಾದ ಎಚ್ಚರಿಕೆ ನೀಡಿತು. ಪಂಜರದ ಗಿಳಿ ಸಿಬಿಐಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೊಸ ಶಾಸನವನ್ನು ಜಾರಿಗೆ ತನ್ನಿ, ಇಲ್ಲದೇ ಹೋದರೆ ನ್ಯಾಯಾಲಯವೇ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿತು ಸುಪ್ರೀಂಕೋರ್ಟ್.
ಸಚಿವರು ರಾಜಿನಾಮೆ ನೀಡಿದ್ದು- ವಜಾ ಎಂದರೂ ತಪ್ಪಾಗಲಾರದು- ಆನಂತರವೇ. ಪ್ರಜಾಪ್ರಭುತ್ವದ ಸಭ್ಯತೆ, ಶಿಷ್ಟಾಚಾರದ ದೃಷ್ಟಿಯಿಂದ ಈ ಕೆಲಸ ಮೊದಲೇ ಆಗಬೇಕಿತ್ತು. ಆದರೆ, ಯಾಕೆ ಆಗಿಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬಲ್ಲರು. ಹೈಕಮಾಂಡ್ ಮುಂದಡಿ ಇಡದಿದ್ದರೆ ಏನೂ ನಡೆಯುವುದಿಲ್ಲ.
ಆದರೆ, ಎಲ್ಲದರಲ್ಲೂ ಹೈಕಮಾಂಡ್ ಕೈ ಇದೆ ಎಂಬುದು ನಿಜ. ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಕರ್ನಾಟಕದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅನುದ್ದಿಷ್ಟವಾಗಿ ಒಂದು ಮಾತು ಹೇಳಿದ್ದಾರೆ, ಆ ಮಾತಿನಲ್ಲಿ ಖಂಡಿತ ಅರ್ಥವಿದೆ- “ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮನಮೋಹನ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಲು ನಾನು ಬಯಸುತ್ತೇನೆæ’. ಖಂಡಿತವಾಗಿಯೂ ನಿಜ!
ಟಿ.ಜೆ.ಎಸ್ ಜಾರ್ಜ್