ನೀತಿಗೆಟ್ಟ ರಾಜಕಾರಣದ ಮಧ್ಯೆ ಅರಾಜಕತೆಯೇ ಗತಿಯೇ?

ಅದು ಗ್ರೀಕ್ ಕಥೆಯಾಗಿರಲಿ, ಶೇಕ್ಸ್‌ಪಿಯರ್‌ನ ನಾಟಕಗಳಾಗಿರಲಿ ಅಥವಾ...
Updated on: 

ಅದು ಗ್ರೀಕ್ ಕಥೆಯಾಗಿರಲಿ, ಶೇಕ್ಸ್‌ಪಿಯರ್‌ನ ನಾಟಕಗಳಾಗಿರಲಿ ಅಥವಾ ಭಾರತೀಯ ಪುರಾಣಗಳಾಗಿರಲಿ- ಪ್ರಾಚೀನ ದುರಂತ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ದುರಂತ ನಾಯಕನು ತನಗೆ ತಾನು ಸಹಾಯ ಮಾಡಲು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥನಾಗುವುದಿಲ್ಲ. ತಾವು ಸಂಕಷ್ಟದತ್ತ ಸಾಗುತ್ತಿದ್ದೇವೆ ಎಂಬ ಅರಿವು ಆ್ಯಂಟಿಗೊನಿ ಮತ್ತು ಹ್ಯಾಮ್ಲೆಟ್‌ಗೆ ಇತ್ತು. ಆದರೆ, ದುರಂತವನ್ನು ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ. ದುರ್ಯೋಧನ ಮಾತ್ರ ಕಪಟ ತಂತ್ರದಲ್ಲಿ ಸಿಲುಕಿಕೊಂಡಿದ್ದನ್ನು ಅರ್ಥ ಮಾಡಿಕೊಂಡಿದ್ದ, ಆ ಬಗ್ಗೆ ಹೇಳಿಕೊಂಡಿದ್ದ. ಧರ್ಮ ಎಂದರೇನು ಎಂಬುದು ಆತನಿಗೆ ತಿಳಿದಿತ್ತು. ಆದರೂ ಆತ ಹೇಳಿದ್ದ- 'ಆ ಧರ್ಮವನ್ನು ನಾನು ಪಾಲಿಸಲಾರೆ'. ಆತನಿಗಿದ್ದ ಒಂದೇ ಒಂದು ಗುರಿ ಎಂದರೆ, ಯಾವುದೇ ಕ್ಷಣದಲ್ಲಿ ತನ್ನ ಮನಸ್ಸಿಗೆ ತೋಚಿದ್ದನ್ನು ಸಾಧಿಸುವುದು.
ಖಳನಾಯಕರಾಗಿದ್ದರೂ ಪ್ರಾಚೀನ ದುರಂತ ಕಥೆಗಳ ಇಂಥ ಪಾತ್ರಗಳು ನಮ್ಮ ಅನುಕಂಪ ಮತ್ತು ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತವೆ. ಆಧುನಿಕ ರಾಜಕೀಯ ದುರಂತ ಕಥೆಗಳ ಹೀರೋಗಳು ಮ್ಯಾಕ್‌ಬೆತ್ ಮತ್ತು ಒಥೆಲೋರಂತೆ ಅಲ್ಲ, ಸದ್ಗುಣ ಮತ್ತು ಮನಶ್ಶುದ್ಧಿಯಿಲ್ಲದೆ ನಿಜವಾದ ಖಳನಾಯಕರಂತೆಯೇ ವರ್ತಿಸುತ್ತಾರೆ. ಓಂ ಪ್ರಕಾಶ್ ಚೌತಾಲಾ ಮತ್ತು ಜನಾರ್ದನ ರೆಡ್ಡಿಯನ್ನೇ ನೋಡಿ. ತಾವು ಬಲಿಪಶುಗಳಲ್ಲ, ಅಧಿಕಾರ ದುರ್ಬಳಕೆ ಮಾಡಬೇಕಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಆದರೂ ಕೂಡ ದುರ್ಯೋಧನನಲ್ಲಿದ್ದ ತಿಳಿವಳಿಕೆಯನ್ನು ಅವರು ಪ್ರದರ್ಶಿಸಲಿಲ್ಲ, ರಾವಣನಲ್ಲಿದ್ದ ವಿವೇಚನೆಯನ್ನೂ ಪ್ರದರ್ಶಿಸಲಿಲ್ಲ. ಬದಲಾಗಿ, ಅಧಿಕಾರದ ಹುಚ್ಚನ್ನು ಬಹಿರಂಗಪಡಿಸಿದರು. ಅಧಿಕಾರವನ್ನು ದುರುಪಯೋಗವಾಡಿಕೊಂಡ ಇಂಥ ಸಹಸ್ರಾರು ಮಂದಿ ಇನ್ನೂ ತೆರೆಯ ಹಿಂದೆಯೇ ಇದ್ದಾರೆ.
 ಪಕ್ಷದ ಲೇಬಲ್ ಯಾವುದೇ ಆಗಿರಲಿ, ಸಿದ್ಧಾಂತ ಯಾವುದೇ ಆಗಿರಲಿ, ನೀತಿಗೆಟ್ಟ ರಾಜಕಾರಣದ ಇಂಥ ಸಂಸ್ಕೃತಿಯ ವಿಚಾರದಲ್ಲಿ ಭಿನ್ನತೆ ಕಾಣುವುದಿಲ್ಲ. ಆಡಳಿತದ ಹಕ್ಕು ಕೇಳುತ್ತಿರುವ ಎರಡು ಪಕ್ಷಗಳನ್ನೇ ತೆಗೆದುಕೊಳ್ಳಿ. ಭ್ರಷ್ಟಾಚಾರದಿಂದಾಗಿಯೇ ಬಿಜೆಪಿಯು ಕರ್ನಾಟಕದಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಬೇಕಾಯಿತು, ಇಬ್ಬರು ಅಧ್ಯಕ್ಷರ ನಿರ್ಗಮನ ಕಾಣಬೇಕಾಯಿತು.  ಆದರೂ ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಲು ಹೊರಟಿದೆ ಆ ಪಕ್ಷ. ಈ ವಾರ ಅದರ ಗಮನವೆಲ್ಲ 'ಜೈಲ್ ಭರೋ' ಚಳವಳಿಯ ಮೇಲೆ. ವಿಷಾದದ ವಿಚಾರವೆಂದರೆ, ಜೈಲ್ ಭರೋ ಎಂದರೆ ಜೈಲಿಗೆ ಹೋಗುವುದು ಮತ್ತು ಬಳಿಕ ಹೊರಗೆ ಬರುವುದು. ಅನೇಕ ಪ್ರಕರಣಗಳಲ್ಲಿ ಇಂಥ ವ್ಯಕ್ತಿಗಳು ಕಂಬಿಗಳ ಹಿಂದೆ ಕೊನೆಯವರೆಗೂ ಇರುವುದೇ ಹೆಚ್ಚು ಸೂಕ್ತವೆನಿಸುತ್ತದೆ.
 ಇತ್ತ, ಕಾಂಗ್ರೆಸ್ ಹಿಂದೆಂದೂ ಇಂದಿನಷ್ಟು ಅಪನಂಬಿಕೆಗೆ ಒಳಗಾಗಿರಲಿಲ್ಲ. ಅನೇಕ ಹಗರಣಗಳು ಕ್ಷಮಿಸಲಾರದಂಥವು. ಮುಂದಿನ ಚುನಾವಣೆಯಲ್ಲಿ ಅದರ ಭವಿಷ್ಯವು ತುರ್ತು ಪರಿಸ್ಥಿತಿ ನಂತರದ 1977ರ ಚುನಾವಣೆಯಲ್ಲಾದ ಗತಿಯಂತೇ ಆಗುವುದು ಖಚಿತ. ಆದರೂ ಕೂಡ, ಜನರ ಒಳಮನಸ್ಸನ್ನು ಅರಿಯದ ಆ ಪಕ್ಷವು ಭ್ರಷ್ಟಾಚಾರಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದರಲ್ಲೇ ನಿರತವಾಗಿದೆ, ಅಧಿಕಾರದ ಒಂಬತ್ತು ವರ್ಷವನ್ನು ಆಚರಿಸಿಕೊಳ್ಳುತ್ತಿದೆ.
 ನಾವು ಯಶಸ್ಸಿಗೆ ಸಂಭ್ರಮಪಡುತ್ತೇವೆ. ಸಂಭ್ರಮವನ್ನು ಆಚರಿಸುತ್ತೇವೆ, ಆದರೆ ವೈಫಲ್ಯವನ್ನಲ್ಲ. ಪ್ರಧಾನಿಯಾಗಿ ಎರಡು ಅವಧಿ ಪೂರ್ಣಗೊಳಿಸುವುದು ಮನಮೋಹನ್ ಸಿಂಗ್ ಪಾಲಿಗೆ ನಿಜಕ್ಕೂ  ಸಂಭ್ರಮದ ವಿಚಾರವೇ. ಆದರೆ, ಇತ್ತೀಚಿನ ಇತಿಹಾಸದಲ್ಲಿ ಯಾವ ಸರ್ಕಾರ ತಾನೇ ದೇಶಕ್ಕಾಗಿ ಸಾಧನೆ ತೋರಲು ಇಷ್ಟೊಂದು ಕಾಲಾವಕಾಶ  ಪಡೆದಿದ್ದರೂ ಅಂಥ ಸಾಧನೆ ತೋರಲು ವಿಫಲವಾಗಿದೆ? ಯಾವ ಸರ್ಕಾರ ತಾನೇ ಇಷ್ಟೊಂದು ಹಗರಣಗಳನ್ನು ಕಂಡಿದೆ? ದೇಶದ ಜನರು ವಿಷಾದ ಪಡುತ್ತಿದ್ದರೆ, ಕಾಂಗ್ರೆಸ್ ಸಂಭ್ರಮ ಆಚರಿಸಿಕೊಳ್ಳುತ್ತಿದೆ!
 ಸಾಲುಸಾಲು ಹಗರಣಗಳು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ನ 'ವಿಶಿಷ್ಟ ಗುಣ'ವನ್ನು, ಜನರ ಭಾವನೆಗಳನ್ನು ಗುರುತಿಸುವಲ್ಲಿ ಅದರ ನಿರ್ಲಕ್ಷ್ಯವನ್ನು ಪ್ರದರ್ಶಿಸಿದವು. ಇಂದಿರಾ ಗಾಂಧಿ ಕೂಡ ಯಾವುದೋ ಸಮಯದಲ್ಲಿ, ಯಾವುದೋ ರೂಪದಲ್ಲಿ ಜನರ ಮೆಚ್ಚುಗೆಗಾಗಿ ಹಂಬಲಿಸಿದ್ದುಂಟು. ಆದರೆ, ಅಂಥ ಮೆಚ್ಚುಗೆ ಪಡೆಯುವ ವಿಚಾರದಲ್ಲಿ ಸೋನಿಯಾಗೆ ಆಸಕ್ತಿ ಇರುವಂತೆ ಕಾಣುತ್ತಿಲ್ಲ. ಸಿಬಿಐ ಮುಖ್ಯಸ್ಥರು, ಕೇಂದ್ರ ಜಾಗೃತ ಆಯುಕ್ತರು ಮತ್ತು ಇತ್ತೀಚಿನ ಮಹಾಲೇಖಪಾಲರ ನೇಮಕ ವಿಚಾರದಲ್ಲಿ ಆಕೆಯ ನಿರ್ಲಜ್ಜ ಕಾರ್ಯಶೈಲಿಯನ್ನು ಗಮನಿಸಬಹುದು.
 ಲೋಕಾಯುಕ್ತಕ್ಕೆ ಸಂತೋಷ್ ಹೆಗ್ಡೆ, ಚುನಾವಣೆ ಆಯೋಗಕ್ಕೆ ಟಿ.ಎನ್. ಶೇಷನ್ ಏನು ಮಾಡಿದರೋ, ಯಾವ ಸಾಧನೆ ಮೆರೆದರೋ, ವಿನೋದ್ ರಾಯ್ ಸಿಎಜಿ ಆಗಿ ಅಂಥದ್ದೇ ಸಾಧನೆ ತೋರಿದ್ದಾರೆ, ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರು ವಿನೋದ್ ರಾಯ್ ಕುರ್ಚಿಯಲ್ಲಿ ಶಶಿಕಾಂತ್ ಶರ್ಮಾ ಅವರನ್ನು ಕೂರಿಸಿದರು. ಈ ವ್ಯಕ್ತಿ ನಿವೃತ್ತಿ ನಂತರದ ಅವಧಿಯೂ ಸೇರಿದಂತೆ 10 ವರ್ಷಗಳ ಕಾಲ ರಕ್ಷಣಾ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದವರು. ಆ 10 ವರ್ಷಗಳಲ್ಲಿ ರಕ್ಷಣಾ ಬಜೆಟ್ 25,000 ಕೋಟಿಯಿಂದ 2 ಲಕ್ಷ ಕೋಟಿ ರು.ಗೆ ನೆಗೆದಿತ್ತು. ಮಿಸ್ಟರ್ ಕ್ಲೀನ್ ಎ.ಕೆ. ಆ್ಯಂಟನಿ ಅವರು ಕೇಂದ್ರ ಸ್ಥಾನದಲ್ಲಿದ್ದರೂ ಯಾವುದೋ ಕಾರಣಗಳಿಗಾಗಿ ಅನೇಕ ಬೃಹತ್ ಖರೀದಿ ವ್ಯವಹಾರಗಳು ಸುದ್ದಿ ಮಾಡಿದವು. ಹೀಗಿರುವಾಗ, ಹೊಸ ಮಹಾಲೇಖಪಾಲರ ಅಡಿಯಲ್ಲಿ ರಕ್ಷಣಾ ಖರೀದಿಯ ಲೆಕ್ಕ ಪರಿಶೋಧನೆ ನಡೆದರೆ ಅದು ವಿಶ್ವಾಸಕ್ಕೆ ಅರ್ಹವಾಗಬಲ್ಲದೇ? ಸಾರ್ವಜನಿಕರ ಭಾವನೆಗಳನ್ನು ನಿರ್ಲಕ್ಷಿಸುವ ಪ್ರವೃತ್ತಿ ಇಲ್ಲೂ ಕಂಡುಬರುತ್ತದೆ.
 ಮುಂದೆ ಇನ್ನಷ್ಟು ಕೆಟ್ಟ ದಿನಗಳು ಕಾದಿವೆ. ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಮೈತ್ರಿಕೂಟವನ್ನು ರೂಪಿಸುವಲ್ಲಿ ಕಾಂಗ್ರೆಸ್‌ಗೆ ಕಷ್ಟವೆನಿಸಬಹುದು. ಕಾಂಗ್ರೆಸ್‌ನಿಂದ ಭ್ರಮನಿರಸನಗೊಂಡ ಮತದಾರರು ಬಿಜೆಪಿಯತ್ತ ವಾಲಬಹುದು. ಆದರೆ, ಅಲ್ಲಿಯೂ ಸಮಸ್ಯೆಗಳಿಗೆ ಮುಕ್ತಿ ದೊರೆಯದು. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಮೈತ್ರಿಕೂಟದ ಭವಿಷ್ಯವಾಣಿಯ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಇಂದಿನ ಗೊಂದಲ, ಅರಾಜಕತೆ ಇನ್ನಷ್ಟು ವಿಷಮ ಸ್ಥಿತಿಗೆ ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಅರಾಜಕತೆಯ ಆಡಳಿತದ ಸಮಸ್ಯೆ ಎಂದರೆ, ಅಂಥ ಆಡಳಿತವು ಹೇಗೋ ನಡೆಯುತ್ತದೆ, ಅದು ತನ್ನ ಕಾರ್ಯವನ್ನು  ಸ್ಥಗಿತಗೊಳಿಸಿತೆಂದರೆ ಗೊಂದಲ, ಅವ್ಯವಸ್ಥೆಯು ಸಹಿಸಲಸಾಧ್ಯ ಮಟ್ಟಕ್ಕೆ ತಲುಪುತ್ತದೆ. ಅದರಿಂದಲೇ ಇನ್ನೊಂದು   ತೆರನಾದ ವ್ಯವಸ್ಥೆಯು ತಲೆಯೆತ್ತುತ್ತದೆ. ಇತರ ರಾಷ್ಟ್ರಗಳ ಮಟ್ಟಿಗೆ ಹೇಳುವುದಾದರೂ ಇದು ಸತ್ಯ ಎಂದೇ ಹೇಳಬೇಕು.

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com