ಆಹಾರ ಭದ್ರತೆ, ಆಲೋಚನೆಯ ಕೊರತೆ
ಯುಪಿಎ ಸರ್ಕಾರವು ಬಹಳ ದಿನಗಳಿಂದ ಹೊರತರಲು ಉದ್ದೇಶಿಸಿದ್ದ ಆಹಾರ ಭದ್ರತೆ ಕಾಯಿದೆಗೆ ಕೇಂದ್ರದ ಕ್ಯಾಬಿನೆಟ್ನ ಅನುಮೋದನೆ ದೊರೆತಿದ್ದು, ಅದನ್ನು ದೇಶವ್ಯಾಪಿ ಜಾರಿಗೊಳಿಸಲು ಸಜ್ಜಾಗಿದೆ. ಇಂಥದ್ದೊಂದು ಕಾಯ್ದೆಯ ಅಗತ್ಯ, ಪ್ರಯೋಜನಗಳೇನು, ಕೇಂದ್ರ ಮತ್ತು ರಾಜ್ಯಗಳ ಬೊಕ್ಕಸಕ್ಕೆ ಇದರಿಂದ ಬೀಳುವ ಹೊಡೆತವೇನು, ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರವೇನು, ಕೇಂದ್ರ ರಾಜ್ಯಗಳ ಸಂಬಂಧದ ಮೇಲೆ ಇದರ ಪರಿಣಾಮವೇನು, ಈಗಾಗಲೇ ಇರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ ಹುಳುಕುಗಳೇನು, ಈ ತೊಂದರೆಗಳನ್ನು ಬಗೆಹರಿಸದೆ ಇಂತಹದೊಂದು ಯೋಜನೆಯನ್ನು ತರುವಲ್ಲಿ ಆಗುವ ತೊಡಕುಗಳು, ಪ್ರಸಕ್ತ ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಇದರಿಂದಾಗುವ ಪರಿಣಾಮಗಳನ್ನು ಗಮನಿಸಿ ಸೂಕ್ತವಾದ ಏರ್ಪಾಟುಗಳನ್ನು ಮಾಡಿಕೊಳ್ಳುವ ತುರ್ತು ನಮ್ಮ ಮುಂದಿದೆ.
ಏನಿದು ಆಹಾರ ಭದ್ರತೆ ಯೋಜನೆ? ಇದೊಂದು ಆಹಾರದ ಖಾತ್ರಿಯನ್ನೊದಗಿಸುವ ದೊಡ್ಡ ಪ್ರಮಾಣದ ಮರುಹಂಚಿಕೆ ಅನ್ನಬಹುದು. ಇದು ಗ್ರಾಮೀಣ ಭಾಗದ ಶೇಕಡ 75 ಮತ್ತು ನಗರ ಪ್ರದೇಶದ ಶೇಕಡ 50 ರಷ್ಟು ಜನರಿಗೆ ಆಹಾರದ ಖಾತ್ರಿಯನ್ನೊದಗಿಸುವ ಯೋಜನೆಯಾಗಿರುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಹೊಣೆ ಹೊತ್ತು ಅನುಷ್ಠಾನಗೊಳಿಸಬೇಕಾದ, ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ಈ ಕಾಯಿದೆಯಲ್ಲಿರುವ ಪ್ರಮುಖ ಅಂಶಗಳೆಂದರೆ:
ಈ ಕಾಯಿದೆಯಡಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ತಿಂಗಳಿಗೆ ಐದು ಕೆಜಿಯಷ್ಟು ಆಹಾರಧಾನ್ಯಗಳನ್ನು ಗರಿಷ್ಠ ರಿಯಾಯಿತಿ ದರದಲ್ಲಿ ಒದಗಿಸುವುದು. ಆರು ತಿಂಗಳಿಂದ, ಆರು ವರ್ಷ ವಯಸ್ಸಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕ ಆಹಾರವನ್ನು ನೀಡುವುದು. ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಊಟವನ್ನು ಒದಗಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಸುಧಾರಿಸುವುದು.
ಕೇಂದ್ರ ತಾನು ಒಟ್ಟು ಮಾಡಿಟ್ಟುಕೊಂಡಿರುವ ದಾಸ್ತಾನಿನಿಂದ ಅಗತ್ಯವಾದ ಆಹಾರ ಧಾನ್ಯವನ್ನು ರಾಜ್ಯಗಳಿಗೆ ಒದಗಿಸಲಿದೆ. ಧಾನ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಮಾತ್ರ ಭರಿಸುತ್ತದೆ. ಇದರ ನಂತರ ಈ ಯೋಜನೆಯನ್ನು ಕೇಂದ್ರವು ನೀಡುವ ಮಾರ್ಗಸೂಚಿಗೆ ಅನುಸಾರವಾಗಿ ಕಾರ್ಯರೂಪಕ್ಕೆ ತರುವುದು ರಾಜ್ಯಸರ್ಕಾರದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು, ಸಾಗಾಟ ಮಾಡಿಕೊಳ್ಳುವುದು, ಶೇಖರಣೆ ಮಾಡಿಟ್ಟುಕೊಂಡು ಹಂಚುವುದು, ಇದರ ಮೇಲುಸ್ತುವಾರಿಗಾಗಿ ಉನ್ನತ ಮಟ್ಟದ ಕಮಿಷನ್ ಒಂದನ್ನು ರಚಿಸುವ ಜವಾಬ್ದಾರಿಯೂ ರಾಜ್ಯ ಸರ್ಕಾರಗಳದ್ದು. ಈ ಕಮಿಷನ್ನ ನಿರ್ವಹಣೆ ಆಡಳಿತ ವೆಚ್ಚಗಳು ಮತ್ತಿತರ ವೆಚ್ಚಗಳನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕಿದ್ದು, ಹೀಗೆ ನೇಮಕವಾಗಿರುವ ಕಮಿಷನ್ಗಳು ವರ್ಷಕ್ಕೊಮ್ಮೆ ವರದಿಯನ್ನು ತಯಾರಿಸಿ ರಾಜ್ಯಸರ್ಕಾರದ ಮುಂದೆ ಮಂಡಿಸಬೇಕಿರುತ್ತದೆ.
ಇಲ್ಲಿ ರಾಜ್ಯಸರ್ಕಾರಗಳು ಕೇಂದ್ರದ ಆಣತಿಯಂತೆ ಕೆಲಸ ಮಾಡಬೇಕಿರುತ್ತದೆ, ಸೂಚನೆಗಳನ್ನು ಪಾಲಿಸಬೇಕಿರುತ್ತದೆ ಮತ್ತು ಆಹಾರಧಾನ್ಯಗಳ ವೆಚ್ಚವನ್ನು ಹೊರತು ಪಡಿಸಿ ಇತರ ಎಲ್ಲಾ ಆಡಳಿತಾತ್ಮಕ ಖರ್ಚುಗಳನ್ನು ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದಲೇ ಭರಿಸಬೇಕಿರುತ್ತದೆ. ಈಗಾಗಲೇ ಕರ್ನಾಟಕ ರಾಜ್ಯ ತನ್ನ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ರಿಯಾಯಿತಿ ದರದಲ್ಲಿ ಪಡಿತರ ಪೂರೈಸುತ್ತಿದೆ, ಅಲ್ಲದೇ ಅದಕ್ಕೆ ತಗಲುವ ಆಡಳಿತಾತ್ಮಕ ವೆಚ್ಚವೆಲ್ಲವನ್ನು ಭರಿಸುತ್ತಿದೆ. ಸಮರ್ಥವಾಗಿ ಈಗಾಗಲೇ ಪಡಿತರ ಹಂಚಿಕೆಯನ್ನು ನಿಭಾಯಿಸುತ್ತಿರುವ ರಾಜ್ಯಗಳ ಮೇಲೆ ಕೇಂದ್ರ ಈಗ ಆಹಾರ ಭದ್ರತೆ ಅನ್ನುವ ಜನಪ್ರಿಯ ನೆಲೆಯ, ಮುಂದಿನ ಚುನಾವಣೆಯ ಮೇಲೆ ಕಣ್ಣಿರಿಸಿ ರೂಪಿಸಿದ ಕಾರ್ಯಕ್ರಮವನ್ನು ಹೇರಲು ಹೊರಟಿರುವ ಹಾಗಿದೆ. ಈ ಹೆಜ್ಜೆ ಎಂದಿನಂತೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರದ ಸವಾರಿಯ ಮುಂದುವರೆದ ಭಾಗವೇ ಅನ್ನಬಹುದು.
ನಿಜಕ್ಕೂ ಈಗ ಆಗಬೇಕಿರುವುದು ಈಗಾಗಲೇ ಇರುವ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳುವುದಾಗಿದೆಯೇ ಹೊರತು ಹೊಸತೊಂದು ಬಿಳಿಯಾನೆ ಸಾಕುವ ಯೋಚನೆಯಲ್ಲ. ಪಡಿತರ ವ್ಯವಸ್ಥೆಯಲ್ಲಿ ಇರುವ ಆಹಾರ ಧಾನ್ಯಗಳು ಗೋದಾಮಿನಲ್ಲಿ ಪೋಲಾಗದಂತೆ ತಡೆಯುವ ಯೋಜನೆಗಳು ಬೇಕು. ಸಾಗಾಟದಲ್ಲಿನ ಸೋರಿಕೆ, ಹಂಚಿಕೆಯಲ್ಲಿನ ಭ್ರಷ್ಟಾಚಾರ, ಫಲಾನುಭವಿಗಳನ್ನು ಗುರುತಿಸುವಲ್ಲಿ ಆಗುತ್ತಿರುವ ಎಡವಟ್ಟು, ಅರ್ಹರಲ್ಲದವರು ಫಲಾನುಭವಿಗಳ ಪಟ್ಟಿ ಸೇರುತ್ತಿರುವುದು, ರೇಶನ್ ಅಂಗಡಿಯ ತೂಕದಲ್ಲಿನ ಮೋಸ ಹೀಗೆ ದಂಡಿಯಾಗಿ ಬಗೆಹರಿಸಬೇಕಾದ ಸಮಸ್ಯೆಗಳಿವೆ. ಅಲ್ಲದೇ ಈ ಯೋಜನೆ ಬೊಕ್ಕಸದ ಮೇಲೆ ತರುವ ಹೊರೆಯ ಬಗ್ಗೆ ಯುಪಿಎ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ. ಆರ್ಥಿಕ ತಜ್ಞರಪ್ರಕಾರ ಬರುವ ಮೂರು ವರ್ಷಗಳಲ್ಲಿ ಈ ಯೋಜನೆಯ ಅನುಷ್ಟಾನಕ್ಕೆ ಬೇಕಿರುವ ಮೊತ್ತ 6,00,000 ಕೋಟಿಗಳಾಗಿದ್ದರೆ ಅದರಲ್ಲಿ ಸರಿ ಸುಮಾರು 40-50 ಶೇಕಡ ಅಂದರೆ ಸುಮಾರು 3,00,000 ಕೋಟಿಯಷ್ಟು ಹಣ ಭ್ರಷ್ಟಾಚಾರಕ್ಕೆ ಬಲಿಯಾಗಿ ಸೋರಿಕೆಯಾಗಲಿದೆ. ಸಾರ್ವಜನಿಕ ನೀತಿಯೊಂದನ್ನು ರೂಪಿಸುವಾಗ ಆದ್ಯ ಗಮನ ಕೊಡಬೇಕಿರುವುದೇ ಆ ಯೋಜನೆಯ ಆರ್ಥಿಕ ಆಯಾಮದ ಬಗ್ಗೆ. ನಮ್ಮ ದೇಶದ ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮರುಹಂಚಿಕೆಯಂತಹ ವ್ಯವಸ್ಥೆಯ ಅಗತ್ಯವಿದೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಆದರೆ ಯಾವುದೇ ದೇಶದ ಅರ್ಥವ್ಯವಸ್ಥೆ ಮರುಹಂಚಿಕೆ ಯೋಜನೆಗಳತ್ತ ದೊಡ್ಡ ಪ್ರಮಾಣದ ಸಂಪನ್ಮೂಲ ವ್ಯಯಿಸುವ ಮುನ್ನ ಅದನ್ನು ನೀಗಿಸಿಕೊಳ್ಳುವಂತೆ ತೆರಿಗೆ ಸಂಗ್ರಹವಾಗಲಿದೆಯೇ ಅನ್ನುವತ್ತ ಗಮನ ಹರಿಸುತ್ತೆ. ದೇಶದ ಆರ್ಥಿಕ ಬೆಳವಣಿಗೆ ಕೇವಲ 5 ಶೇಕಡ ಸುತ್ತ ಮುತ್ತ ಇರುವಾಗ ಇಂತಹದೊಂದು ಹಿಮಾಲಯಸದೃಶ ಯೋಜನೆಗೆ ಸಂಪನ್ಮೂಲ ಜೋಡಿಸುವುದು ಹೇಗೆ ಅನ್ನುವುದರತ್ತ ಗಮನವೇ ಹರಿಸದೇ ಯುಪಿಎ ಈ ಯೋಜನೆ ಜಾರಿಗೆ ಮುಂದಾಗಿರುವುದನ್ನು ಕಂಡಾಗ ಜನಪ್ರಿಯ ಯೋಜನೆಗಳ ಬಲದಿಂದ ಚುನಾವಣೆ ಗೆಲ್ಲುವುದೊಂದೇ ಗುರಿಯಾಗಿದ್ದಂತೆ ಕಾಣುತ್ತಿದೆ. ಮುಂದೆ ಯುಪಿಎ ಬದಲು ಇನ್ನಾವುದೇ ಸರ್ಕಾರ ಬಂದರೂ ಇಂತಹ ಜನಪ್ರಿಯ ಯೋಜನೆಗಳನ್ನು ಮರುಪರಿಶೀಲಿಸಲು ಮುಂದಾದರೆ ಜನವಿರೋಧಿ ಅನ್ನುವ ಪಟ್ಟ ಕಟ್ಟಿಕೊಳ್ಳುವ ಭಯದಲ್ಲಿ ಇದನ್ನು ಮುಂದುವರೆಸಬೇಕಾಗುತ್ತದೆ. ಇಂತಹ ದೂರಾಲೋಚನೆಯಿಲ್ಲದ, ತಕ್ಷಣದ ಲಾಭದ ಯೋಜನೆಗಳು ಬೇಕಾಬಿಟ್ಟಿ ಖರ್ಚು ಮಾಡಿ ಈಗ ಬಾಯಿ ಬಡಿದುಕೊಳ್ಳುತ್ತಿರುವ ಯುರೋಪಿನ ಕೆಲ ದೇಶಗಳ ಸ್ಥಿತಿಗೆ ಭಾರತವನ್ನೂ ದೂಡಿದರೆ ಅಚ್ಚರಿಯಿಲ್ಲ.
- ಗಿರೀಶ್ ಕಾರ್ಗದ್ದೆ
ಚಿಕ್ಕಮಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

