ವ್ಯಾಪಾರವೆಂದರೆ ಬರೀ ಮೋಸವೇ?
ನಿಮಗೆ ತರಕಾರಿ ಬೇಕು. ಅದಕ್ಕಾಗಿ ತರಕಾರಿ ಅಂಗಡಿಗೆ ಹೋಗುತ್ತೀರಿ. ಟೊಮೊಟೋ ಕೇಜಿಗೆ 20 ರುಪಾಯಿ ಎಂದು ಹೇಳುತ್ತಾನೆ ಅಂಗಡಿಯವನು. 'ಎಲ್ಲಾ ಕಡೆ ಹತ್ತು ರುಪಾಯಿ, ನೀವು ಇಪ್ಪತ್ತು ಅಂತೀರಲ್ಲ' ಎಂದು ಪ್ರಶ್ನಿಸಿದರೆ, ಅವನು "ನೋಡಿ ಅಲ್ಲಿ, ಎರಡು ಮೂಟೆ ಟೊಮೋಟೋ ಕೊಳೆತು ಹೋಗಿದೆ ಇದರ ನಷ್ಟ ನಾವೇಕೆ ಹೊರಬೇಕು" ಎಂದು ತನ್ನ ಹೊರೆಯನ್ನು ನಿಮ್ಮ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಾನೆ. ಇದು ಕೇವಲ ತರಕಾರಿ ಅಂಗಡಿಗೆ ಸೀಮಿತವಾದದ್ದಲ್ಲ. ಇಂದು ಏನನ್ನಾದರೂ ಖರೀದಿಸಲು ಮಾರುಕಟ್ಟೆಗೆ ಹೋದರೆ ಸಾಕು, ಅಂಗಡಿಯವರು ನಮ್ಮನ್ನು ಮೂರ್ಖರನ್ನಾಗಿಸಿಯೇ ಮನೆಗೆ ಕಳುಹಿಸುತ್ತಾರೆ. ಪ್ರತಿ ಅಂಗಡಿಗಳೂ ಎಂಆರ್ಪಿಗಿಂತ ಹೆಚ್ಚಿನ ದರದಲ್ಲಿಯೇ ವಸ್ತುಗಳ ಮಾರಾಟ ಮಾಡುತ್ತವೆ. ಸಾವಿರಾರು ರುಪಾಯಿಗಳ ಸಾಮಾನುಗಳನ್ನು ಕೊಂಡಾಗ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಅಂಗಡಿಯವರು ಮಾರಾಟಮಾಡಿದರೆ, ಗ್ರಾಹಕ ಸೇವಾ ಆಯೋಗಕ್ಕೆ ದೂರು ಕೊಡಬಹುದೇನೋ? ಆದರೆ ಚಿಕ್ಕ ಪುಟ್ಟ ವಸ್ತುಗಳಿಗೆ ತುಸು ಹೆಚ್ಚು ಹಣತೆತ್ತು ಖರೀದಿಸಿದಾಗ ಯಾರೂ ಕೂಡ ಇದರ ಬಗ್ಗೆ ದೂರು ಕೊಡುವುದಕ್ಕೆ ಮುಂದಾಗುವುದಿಲ್ಲ. ಒಂದೆರಡು ರುಪಾಯಿಗೆ ಏಕೆ ಓಡಾಡುವುದು ಎಂದು ಸುಮ್ಮನಾಗುತ್ತಾರೆ. ಇದರ ಅರಿವಿರುವುದರಿಂದಲೇ ವ್ಯಾಪಾರಿಗಳು ಗ್ರಾಹಕರ ದೌರ್ಬಲ್ಯದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ವ್ಯಾಪಾರಿಗಳು ಕೊಡುವ ಉತ್ತರಗಳೇ ವಿಚಿತ್ರವಾಗಿರುತ್ತವೆ. "ಅಂಗಡಿ ಬಾಡಿಗೆ ಜಾಸ್ತಿ ಇದೆ", "ಈ ವಸ್ತು ಇಲ್ಲಿ ಸಿಗೋದಿಲ್ಲ ಮಾರುಕಟ್ಟೆಯಿಂದ ತರಬೇಕು" "ನಾವೂ ಅಸಹಾಯಕರು" ಇತ್ಯಾದಿ. ಅವರ ಉತ್ತರಕ್ಕೆ ಮರು ಪ್ರಶ್ನೆ ಹಾಕುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ನಾವೂ ಅಸಹಾಯಕರೇ!
ಇನ್ನು ಕೆಲವು ವ್ಯಾಪಾರಿಗಳಂತೂ ಮೋಸ ಮಾಡುವುದರಲ್ಲಿ ಎತ್ತಿದ ಕೈ. ನಾನು ಸುಮಾರು 12 ವರ್ಷಗಳ ಹಿಂದೆ ಚಿನ್ನದ ಅಂಗಡಿಯಲ್ಲಿ ಆಭರಣ ಖರೀದಿಸಿದ್ದೆ. ಯಾವುದೋ ಕಾರಣಕ್ಕಾಗಿ ಅದನ್ನು ಮಾರಬೇಕಾದ ಪ್ರಸಂಗ ಎದುರಾಯಿತು. ಒಂದು ಚಿನ್ನದ ಅಂಗಡಿಗೆ ಹೋಗಿ ಅದಕ್ಕೆ ಎಷ್ಟು ಹಣ ಸಿಗಬಹುದೆಂದು ಪ್ರಶ್ನಿಸಿದೆ. ಆಭರಣವನ್ನು ಪರೀಕ್ಷಿಸಿದ ಅಂಗಡಿಯಾತ, "ಇದು 18 ಕ್ಯಾರೆಟ್ ಚಿನ್ನ" ಎಂದು ಕಡಿಮೆ ಮೊತ್ತವನ್ನು ನೀಡಲು ಮುಂದಾದ. ಹಣದ ಅಡಚಣೆಯಿದ್ದ ಕಾರಣ ನಿರ್ವಾಹವಿಲ್ಲದೆ ಆಭರಣ ಮಾರಿ ಬಂದೆ. ಚಿನ್ನದ ದರ ಹೆಚ್ಚಾಗಿದೆ ಎನ್ನುವ ಕಾರಣದಿಂದ ಅಂದು ನಾನು ಖರೀದಿಸಿದ್ದಕ್ಕಿಂತ ತುಸು ಹೆಚ್ಚು ಬೆಲೆಗೆ ಅದು ಮಾರಾಟವಾಯಿತಷ್ಟೆ! ಇನ್ನು ಬಟ್ಟೆ ಅಂಗಡಿಗಳಲ್ಲಂತೂ ನಾವು ಪಿಗ್ಗಿ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಏಕೆಂದರೆ ಯಾವುದೇ ಬಟ್ಟೆಯ ಮೇಲೆ ತಯಾರಕರ ಎಮ್ಆರ್ಪಿ ಇರುವುದಿಲ್ಲ. ಅಂಗಡಿಯವರು ಹಾಕಿದ ದರ ಮಾತ್ರ ಅಲ್ಲಿರುತ್ತದೆ. ಅದೇ ನಿಜವಾದ ದರ ಎಂದು ತಿಳಿಯದೆ ಬೇರೆ ಮಾರ್ಗವೇ ಇಲ್ಲ. ನನ್ನ ಹೆಂಡತಿ 2500 ರುಪಾಯಿ ಕೊಟ್ಟು ಸೀರೆಯೊಂದನ್ನು ಖರೀದಿಸಿದಳು. ನೆರೆಮನೆಯಾಕೆ ತಾನೂ ಅಂಥದ್ದೇ ಸೀರೆಯನ್ನು ಕೇವಲ 1500 ರುಪಾಯಿಯಲ್ಲಿ ಖರೀದಿಸಿರುವುದಾಗಿ ಹೇಳಿ ತಂದು ತೋರಿಸಿದಾಗ, ನನ್ನವಳ ಮುಖ ಹೇಗಿರಬೇಡ!
ಎಂಆರ್ಪಿ ದರಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಮಾರಿದರೂ ವ್ಯಾಪಾರಿಗಳಿಗೆ ಲಾಭವಾಗೇ ಆಗುತ್ತದೆ. ಆದರೂ ಹಣದಾಸೆಗೆ ಬಿದ್ದು ಅವರು ಮೋಸಕ್ಕೆ ಮುಂದಾಗುತ್ತಾರೆ. ಹಾಗಾಗೇ ಇಂದು ವ್ಯಾಪಾರವೆನ್ನುವುದು ಮೋಸಕ್ಕೆ ಪರ್ಯಾಯ ಪದವಾಗಿ ಕಾಣಿಸುತ್ತಿದೆ. ಪ್ರತಿ ಬಾರಿಯೂ ಈ ರೀತಿ ಮೋಸವಾದಾಗ ಅದನ್ನು ಪ್ರಶ್ನಿಸುವುದಕ್ಕೆ, ದೂರು ಹೊತ್ತೊಯ್ಯುವುದಕ್ಕೆ ನಮ್ಮ ಬಳಿ ಸಮಯವಿರುವುದಿಲ್ಲ. ರಭಸದಿಂದ ಹರಿಯುವ ನೀರಿನಲ್ಲಿ ಎಲ್ಲರಂತೆ ನಾವೂ ಕೊಚ್ಚಿಕೊಂಡು ಹೋಗಬೇಕಷ್ಟೆ ಎಂದು ಪ್ರತಿರೋಧವೊಡ್ಡದೆ ಗೊಣಗುತ್ತಲೇ ಇಂಥ ಅನ್ಯಾಯಕ್ಕೆ ಪ್ರತಿರೋಧ ಒಡ್ಡದೆ ಸುಮ್ಮನಾಗುತ್ತೇವೆ. ವ್ಯಾಪಾರಿಗಳು ಗ್ರಾಹಕರ ಈ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳದಿರುವುದೇ ಈ ಸಮಸ್ಯೆಗೆ ಇರುವ ಏಕೈಕ ಪರಿಹಾರ.
- ಯಶವಂತ ಶೆಣೈ, ಕಾರ್ಕಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

