ಗುಜರಾತ್ನ ಯಶೋಗಾಥೆ ಬರೀ ಕಥೆಯೇ?

ಪ್ರಧಾನಮಂತ್ರಿ ಹುದ್ದೆಗಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸದ್ದು ಮಾಡುತ್ತಿರುವ ಸಮಯದಲ್ಲೇ, ಗುಜರಾತ್ ಅಭಿವೃದ್ಧಿ ಕಥೆಯ ಮೇಲಿನ ದಾಳಿಯೂ ತೀವ್ರವಾಗುತ್ತಿದೆ.
ಆ ಹುದ್ದೆಗಾಗಿನ ಸ್ಪರ್ಧೆ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಡುವೆಯಷ್ಟೆ ನಡೆದಿದೆಯೇನೋ ಅನಿಸತೊಡಗಿದೆ. ಹೀಗಿರುವಾಗ ವಿಮರ್ಶಕರೆನಿಸಿಕೊಂಡವರು ನರೇಂದ್ರ ಮೋದಿ ಅಡಿಯಲ್ಲಿ ಗುಜರಾತ್ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ಅಡಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಯನ್ನು ತುಲನೆ ಮಾಡಿ ನೋಡಬೇಕು ಎಂದು ಎಲ್ಲರೂ ಆಶಿಸುವುದು ಸಹಜ. ಆದರೆ ಯಾವ ವಿಮರ್ಷಕನೂ ಕೂಡ ಅಂಥ ದುರಂತ ಕೆಲಸಕ್ಕೆ ಮುಂದಾಗಲು ಸಿದ್ಧನಿಲ್ಲ!
ಔದ್ಯೋಗೀಕರಣ, ಕೃಷಿ ಅಭಿವೃದ್ಧಿ ಮತ್ತು ಒಟ್ಟಾರೆ ಬೆಳವಣಿಗೆಯಲ್ಲಿ ಗುಜರಾತ್ನ ಸಾಧನೆಯನ್ನು ಅಂಕಿ ಸಂಖ್ಯೆಗಳ ಆಧಾರದಲ್ಲಿ ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಹಾಗಾಗೇ ವಿಮರ್ಷಕರು ಹೊಸ ವಾದವೊಂದನ್ನು ಮುಂದಿಡುತ್ತಿದ್ದಾರೆ. ಗುಜರಾತ್ ರಾಜ್ಯ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿಯಾದದ್ದಲ್ಲ, ಅದು ಮೊದಲಿನಿಂದಲೇ ಅಭಿವೃದ್ಧಿಶೀಲ ರಾಜ್ಯವಾಗಿತ್ತು ಎಂಬುದು ಅವರ ವಾದ. ಇವರ ವಾದವನ್ನೇ ಒಪ್ಪುವುದಾದರೆ ಇನ್ನೊಂದು ಪ್ರಶ್ನೆ ಉದ್ಭವವಾಗುತ್ತದೆ. ಅತಿ ದೊಡ್ಡ ಮಾರ್ವಾಡಿ ಉದ್ಯಮಪತಿಗಳನ್ನು ಹೊಂದಿರುವ ರಾಜಸ್ಥಾನವೇಕೆ ಇದುವರೆಗೂ ಅಭಿವೃದ್ಧಿಯ ಕೇಂದ್ರವಾಗಿಲ್ಲ? ನಿಜ ಹೇಳಬೇಕೆಂದರೆ ಗುಜರಾತ್ನಲ್ಲಿ ಉದ್ಯಮ ವಲಯಕ್ಕಿರುವ ಉತ್ತಮ ವಾತಾವರಣವನ್ನು ನೋಡಿ ಆ ಉದ್ಯಮಿಗಳೆಲ್ಲರೂ ಆ ರಾಜ್ಯಕ್ಕೆ ಗುಳೆ ಹೋಗಿದ್ದಾರೆ!
ಇನ್ನು ಗುಜರಾತ್ ಮೊದಲಿನಿಂದಲೂ ಅಭಿವೃದ್ಧಿಶೀಲ ರಾಜ್ಯವಾಗಿತ್ತು ಎನ್ನುವ ಮಾತಂತು ದೊಡ್ಡ ಸುಳ್ಳು. ಅರ್ಥಶಾಸ್ತ್ರಜ್ಞರಾದ ಅರ್ಚನಾ ಢೋಲಕಿಯಾ ಮತ್ತು ರವೀಂದ್ರ ಢೋಲಕಿಯಾ ಅವರ ಇತ್ತೀಚಿನ ಸಂಶೋಧನಾ ವರದಿಯೊಂದು ಹೇಳುವ ಪ್ರಕಾರ ಗುಜರಾತ್ನ ಅಭಿವೃದ್ಧಿಯ ಪ್ರಮಾಣ 1960ರ ಸಮಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಬಹಳ ಕೆಳಗಿತ್ತು, 1970ರಲ್ಲಿ ಅದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಯಿತು ಮತ್ತು ಕೊನೆಗೆ 1980ರಲ್ಲಿ ಮತ್ತೆ ಕೆಳಕ್ಕಿಳಿದಿತ್ತು.
ಮೋದಿ ಬರುವುದಕ್ಕಿಂತಲೂ ಮುಂಚೆಯೇ ಗುಜರಾತ್ ವೇಗವಾಗಿ ಬೆಳೆಯುತ್ತಿತ್ತು ಎನ್ನುವ ಇವರ ವಾದ ಒತ್ತಟ್ಟಿಗಿರಲಿ. ಅಂಕಿ ಸಂಖ್ಯೆಗಳನ್ನು ನೋಡಿದಾಗ, ಗುಜರಾತ್ನ ಅಭಿವೃದ್ಧಿಯ ವೇಗ ಹಿಂದೆಲ್ಲ ರಾಷ್ಟ್ರೀಯ ಅಭಿವೃದ್ಧಿ ಸರಾಸರಿಗಿಂತಲೂ ಕಡಿಮೆಯೇ ಇತ್ತು ಎನ್ನುವುದು ತಿಳಿಯುತ್ತದೆ.
ಇನ್ನು ಮುಸ್ಲಿಂ ಮತ್ತು ಪರಿಶಿಷ್ಟ ಜಾತಿಗಳಲ್ಲಿ ಬಡತನದ ಪ್ರಮಾಣ ಕಡಿಮೆಯಾಗಿರುವುದರ ಶ್ರೇಯಸ್ಸು ನಿಸ್ಸಂಶಯವಾಗಿಯೂ ಗುಜರಾತ್ನ ಬಿಜೆಪಿ ಸರ್ಕಾರಕ್ಕೇ ಸಲ್ಲುತ್ತದೆ. 2004-2005 ಮತ್ತು 2011-12 ರ ನಡುವೆ ಪರಿಶಿಷ್ಟ ಜಾತಿಗಳಲ್ಲಿನ ಬಡತನ ಪ್ರಮಾಣ 21.8 ಪ್ರತಿಶತ ಕಡಿಮೆಯಾಗಿರುವುದನ್ನು ನಾನು ಮತ್ತು ವಿಶಾಲ್ ಮೋರೆ ಎಂಬ ಅರ್ಥಶಾಸ್ತ್ರಜ್ಞ ನಮ್ಮ ಸಂಶೋಧನಾ ವರದಿಯಲ್ಲಿ ಸ್ಪಷ್ಟವಾಗಿ ತೋರಿಸಿದ್ದೇವೆ. ಗುಜರಾತ್ನ ಉಳಿದ ನಾಗರಿಕರಿಗಿಂತ ಪರಿಶಿಷ್ಟ ಜಾತಿಯ ಬಡತನ ಪ್ರಮಾಣ ಕೇವಲ 1.4 ಪ್ರತಿಶತದಷ್ಟು ಅಧಿಕವಿದೆ. ಈ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡದಿದೆ.
ಇನ್ನು ಗುಜರಾತ್ನ ಗ್ರಾಮೀಣ ಭಾಗದ ಮುಸಲ್ಮಾನರಲ್ಲಿನ ಬಡತನದ ಅನುಪಾತ ಕೇವಲ 7.7 ಪ್ರತಿಶತದಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಹಿಂದುಗಳಿಗಿಂತ ಕಡಿಮೆ ಬಡತನ ಅನುಪಾತವನ್ನು ಮುಸಲ್ಮಾನರು ಹೊಂದಿದ್ದಾರೆ. ಈ ಸಾಧನೆ ಕೆಲವೇ ರಾಜ್ಯಗಳಿಗೆ ಮಾತ್ರ ಸಾಧ್ಯವಾಗಿದೆ.
ಇದು ಸಾಧ್ಯವಾದದ್ದು 2004-2004ರಲ್ಲಿ ಗ್ರಾಮೀಣ ಭಾಗದ ಮುಸಲ್ಮಾನರಲ್ಲಿ ಬಡವರ ಸಂಖ್ಯೆಯನ್ನು 23.3 ಪ್ರತಿಶತ ಮತ್ತು ನಗರ ಭಾಗದ ಮುಸಲ್ಮಾನರಲ್ಲಿ 27.7 ಪ್ರತಿಶತ ಕಡಿಮೆಗೊಳಿಸಿದ್ದರಿಂದಲೇ. ಇನ್ನು ವಿಶ್ಲೇಷಕರು ಮಕ್ಕಳ ಅಪೌಷ್ಟಿಕತೆಯನ್ನು ದೂರಮಾಡುವಲ್ಲಿ ಗುಜರಾತ್ ಹೀನಾಯವಾಗಿ ಸೋತಿದೆ ಎಂದು ಜಾಡಿಸುತ್ತಾರೆ. ಆದರೆ ಈ ದೂಷಣೆಗಳೆಲ್ಲ 2005-2006ರಲ್ಲೇ ಕೊನೆಗೊಂಡಿದ್ದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನೇ ಆಧರಿಸಿವೆ! ಇಂಟಿಗ್ರೇಟೆಡ್ ಚೈಲ್ಡ್ ಡೆವಲೆಪ್ಮೆಂಟ್ ಸರ್ವಿಸ್ (ಇಸಿಡಿಎಸ್)ನ ಇಲ್ಲಿಯವರೆಗಿನ ಅಂಕಿ ಸಂಖ್ಯೆಗಳು ಬೇರೆಯ ಕಥೆಯನ್ನೇ ಹೇಳುತ್ತವೆ. ಆದರೆ ಅಪ್ಪಿತಪ್ಪಿಯೂ ಗುಜರಾತ್ ವಿರೋಧಿಗಳು ಆ ವರದಿಯತ್ತ ದೃಷ್ಟಿ ಹರಿಸುವುದಿಲ್ಲ.
ಭಾರತೀಯ ಮಹಾಲೇಖಪಾಲರು 2012ರ ವರದಿಯೊಂದರಲ್ಲಿ ನೀಡಿರುವ ಅಂಕಿ ಸಂಖ್ಯೆಗಳನ್ನು ನೋಡಿದಾಗ, 2006-07 ಮತ್ತು 2010-2011 ರ ನಡುವೆ ಗುಜರಾತ್ನಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ 32 ಪ್ರತಿಶತ ಕಡಿಮೆಯಾಗಿದೆ! ರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಈ ಪ್ರಮಾಣ 9 ಪ್ರತಿಶತದಷ್ಟು ಕಡಿಮೆಯಿದೆ. ಗುಜರಾತ್ನ ಅಧಿಕಾರಿಗಳು ಇತ್ತೀಚೆಗೆ ಪತ್ರಿಕೆಗಳಿಗೆ ನೀಡಿದ ಅಂಕಿ ಸಂಖ್ಯೆಯಲ್ಲಿ 2011-2012 ಮತ್ತು 2012-2013ರ ನಡುವೆ ಅಪೌಷ್ಟಿಕತೆಯ ಪ್ರಮಾಣ ಇನ್ನೂ 14 ಪ್ರತಿಶತ ಇಳಿಕೆಯಾಗಿದೆ.
ಗುಜರಾತ್ ಸರ್ಕಾರ ಕೆಲವೊಂದು ಸಮಸ್ಯೆಗಳನ್ನು ಗುರುತಿಸುವಲ್ಲಿ ವಿಫಲವಾಯಿತು ಎಂದು ದೂಷಿಸಿದರೆ ಯಾವ ತಕರಾರೂ ಇಲ್ಲ. ಆದರೆ ಸಮಸ್ಯೆಗಳನ್ನು ಗುರುತಿಸಿದಾಗ ಅವನ್ನು ಬಗೆಹರಿಸಲು ನರೇಂದ್ರ ಮೋದಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎನ್ನುವುದಂತೂ ಸುಳ್ಳಲ್ಲ. 2001ರ ಜನಗಣತಿ, ಗುಜರಾತ್ನಲ್ಲಿ ಹೆಣ್ಣು-ಗಂಡಿನ ಲಿಂಗಾನುಪಾತದಲ್ಲಿ ಬಹಳ ವ್ಯತ್ಯಾಸ ಎದುರಾಗಿದೆ ಎಂದು ಯಾವಾಗ ಹೇಳಿತೋ, ಆ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲು ಗುಜರಾತ್ ಸರ್ಕಾರ "ಸೇವ್ ಗರ್ಲ್ ಚೈಲ್ಡ್" ಎನ್ನುವ ಹೆಸರಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿತು. 2004-06ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 865 ಹೆಣ್ಣು ಮಕ್ಕಳ ಅನುಪಾತವಿತ್ತು. 2008-2010ರಲ್ಲಿ ಈ ಅನುಪಾತ 903ಕ್ಕೆ ಏರಿತು! ರಾಷ್ಟ್ರೀಯ ಮಟ್ಟದಲ್ಲಿ ಈ ಅನುಪಾತ, ಮೇಲೆ ತಿಳಿಸಿದ ವರ್ಷಗಳಲ್ಲಿ 892ರಿಂದ 905ಕ್ಕೆ ಏರಿತಷ್ಟೆ.
ಇನ್ನು ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಕೆಲವು ನಿಯಮಗಳು ಪ್ರಾಥಮಿಕ ಶಿಕ್ಷಣದ ಮೇಲೆ ಮಾಡಬಹುದಾದ ಹಾನಿಯನ್ನು ಗುರುತಿಸಿದ ಗುಜರಾತ್ ಅತ್ಯಂತ ಹೊಸತನದಿಂದ ಕೂಡಿರುವ ನಿಯಮಗಳನ್ನು ಅನುಷ್ಟಾನಕ್ಕೆ ತಂದಿತು. ಬಹುತೇಕ ರಾಜ್ಯಗಳು ಶಿಕ್ಷಣ ಹಕ್ಕು ಕಾಯ್ದೆಯ ಕಠಿಣ ನಿಯಮಗಳನ್ನು ಅಳವಡಿಸಿಕೊಂಡು "ಉತ್ತಮ ಶಿಕ್ಷಣ ನೀಡುತ್ತಿದ್ದರೂ ಉತ್ತಮ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳನ್ನು ಮುಚ್ಚಲು" ಮುಂದಾದವು. ಆದರೆ ಗುಜರಾತ್ ಮಾತ್ರ ಉತ್ತಮ ಫಲಿತಾಂಶವನ್ನು ಹೊರತರುವ ಶಾಲೆಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಿತು. ಒಂದಂತೂ ಸತ್ಯ, ಇಷ್ಟೆಲ್ಲ ಆದರೂ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಇಂದಿಗೂ ಕೇರಳ ರಾಜ್ಯ ಮುಂಚೂಣಿಯಲ್ಲಿದೆ. ಆದರೆ ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಕೇರಳ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದಲೂ ಸಾಧನೆ ಮಾಡುತ್ತಲೇ ಬಂದಿದೆ. ಇನ್ನು ತಮಿಳುನಾಡು ಕೂಡ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿರುವುದೂ ಸುಳ್ಳಲ್ಲ.
ಹಾಗಂತ ಶಿಕ್ಷಣ ಕ್ಷೇತ್ರದಲ್ಲಿ ಗುಜರಾತ್ ಮಾಡಿರುವ ಸಾಧನೆಯನ್ನು ಬದಿಗೆ ಸರಿಸುವುದು ತರವಲ್ಲ. ಈ ರಾಜಕೀಯ ವಿಶ್ಲೇಷಕರು ಉತ್ತಮ ಸಾಧನೆ ಮಾಡಿದವರನ್ನು ಕಳಪೆ ಕೆಲಸ ಮಾಡಿದವರೆಂದು ಬಿಂಬಿಸಿ, ನಿಜಕ್ಕೂ ಕಳಪೆ ಸಾಧನೆ ಮಾಡಿರುವವರಿಗೆ ಬೆನ್ನುತ್ತಟ್ಟುತ್ತಿದ್ದಾರೆ. ಆದರೆ ಈ ಆಟ ಈಗ ನಡೆಯುವುದಿಲ್ಲ.
ಇಷ್ಟೆಲ್ಲ ಪ್ರತಿವಾದವನ್ನು ನಾವು ಮುಂದಿಟ್ಟಾಗ ಗುಜರಾತ್ನ ದೂಷಕರು ಇನ್ನೊಂದು ಹಾದಿಯನ್ನು ಹಿಡಿಯುತ್ತಾರೆ. ರಾಷ್ಟ್ರವನ್ನು ನಡೆಸಿದ ಅನುಭವ ನರೇಂದ್ರ ಮೋದಿಯವರಿಗಿಲ್ಲ ಎಂದು ಹೇಳಿ ನಕ್ಕು ಬಿಡುತ್ತಾರೆ. ಮೊದಲನೆಯದಾಗಿ, ಗುಜರಾತ್ ಬನಾನಾ ರಿಪಬ್ಲಿಕ್ ಅಂತೂ ಅಲ್ಲ! ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ನಷ್ಟು ಭೂಪ್ರದೇಶ ಮತ್ತು ಜನಸಂಖ್ಯೆ ಹೊಂದಿರುವ ರಾಜ್ಯವದು.
ಎರಡನೆಯದಾಗಿ, ಒಬ್ಬ ಮುಖ್ಯಮಂತ್ರಿಗಿರುವ ಬೇರು ಮಟ್ಟದ ಜ್ಞಾನ ಬಹುತೇಕ ರಾಷ್ಟ್ರೀಯ ನಾಯಕರಲ್ಲಿ ಇರುವುದಿಲ್ಲ. ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾಗಿ ಯಶಸ್ವಿಯಾಗಿದ್ದು ಅವರು ಆಂಧ್ರ ಪ್ರದೇಶದಲ್ಲಿದ್ದಾಗ ಗಳಿಸಿದ ಬೇರು ಮಟ್ಟದ ಜ್ಞಾನದಿಂದಲೇ. ಇದು ನಮ್ಮ ದೇಶದ ಕಥೆಯಷ್ಟೇ ಅಲ್ಲ. ಇದುವರೆಗೂ ಅಮೆರಿಕದ ರಾಷ್ಟ್ರಪತಿಗಳಾಗಿ ಯಶಸ್ವಿಯಾದವರೆಲ್ಲರೂ ಸ್ಟೇಟ್ ಗವರ್ನರ್ಗಳಾಗಿ ಕೆಲಸ ಮಾಡಿದವರು ಮತ್ತು ರಾಷ್ಟ್ರ ರಾಜಕೀಯದ ಬಗ್ಗೆ ಹೆಚ್ಚು ಜ್ಞಾನವಿಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಬಂದವರು. ರೋನಾಲ್ಡ್ ರೇಗನ್, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಡಬ್ಲೂ ಬುಷ್ ಕೂಡ ಅಧ್ಯಕ್ಷರಾಗುವುದಕ್ಕೆ ಮುಂಚೆ ಗವರ್ನರ್ಗಳಾಗಿದ್ದವರು. ಸ್ಟೇಟ್ ಗವರ್ನರ್ ಆಗಿ ಅನುಭವವಿಲ್ಲದ, ಬೇರು ಮಟ್ಟದ ಜ್ಞಾನವಿಲ್ಲದ ಬರಾಕ್ ಒಬಾಮಾ ಅವರ ಆಡಳಿತದಲ್ಲಿ ಅಮೆರಿಕ ಯಾವ ಹಾದಿ ಹಿಡಿಯುತ್ತಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವಲ್ಲ?!
- ಅರವಿಂದ್ ಪಾನಗರಿಯಾ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


