ಅಂಕಣಗಳು

ಮೋದಿ ಭಯದಿಂದ ಶಾದಿ ಭಾಗ್ಯ

Published On :

'ಶಾದಿ ಭಾಗ್ಯ' ಕುರಿತಂತೆ ಪಿ. ತ್ಯಾಗರಾಜ್ ಅವರ ಲೇಖನ ಹಾಗೂ ಬಾನುಮುಷ್ತಾಕ್ ಸಂದರ್ಶನ ವಿಚಾರಪೂರ್ಣವಾದವು. ಹಿಂದಿನ ಸರ್ಕಾರದ ಕೆಲವೊಂದು ಸಮಾಜ ಕಲ್ಯಾಣ ಯೋಜನೆಗಳನ್ನು ಹಾಗೆಯೇ ಮುಂದುವರಿಸುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ 'ಶಾದಿ ಭಾಗ್ಯ' ಎಂಬ ಹೆಸರಿನಲ್ಲಿ 'ಮತೀಯ ಬ್ಯಾಂಕ್‌' ಯೋಜನೆಗೆ ಮುಂದಾಗಿದ್ದಾರೆ. 'ಶಾದಿ' ಎಂಬ ಪದದಿಂದಾಗಿಯೇ ಅದು ಒಂದು ಕೋಮಿನವರಿಗಾಗಿ ಹುಟ್ಟು ಹಾಕಿದ್ದೆಂದು ಅರ್ಥವಾಗುತ್ತದೆ. ಅಲ್ಪಸಂಖ್ಯಾತರ 'ಶಾದಿ ಭಾಗ್ಯ' ಕ್ಕಾಗಿ ಬಜೆಟ್‌ನಲ್ಲಿ 5 ಕೋಟಿ ರೂ. ತೆಗೆದಿರಿಸಿರುವುದಾಗಿ ಹೇಳಿರುವುದಾದರೂ, ಇದರ ಪರಿಧಿಯಲ್ಲಿ ಕ್ರಿಶ್ಚಿಯನ್, ಪಾರ್ಸಿ, ಬೌದ್ಧ-ಮುಂತಾದವರೇಕೆ ಸೇರಿಲ್ಲ? ಇದಕ್ಕೆ ಕಾರಣವೆಂದರೆ -ಕ್ರಿಶ್ಚಿಯನ್ನರ ಉದ್ಧಾರಕ್ಕೆ ವಿದೇಶಗಳಿಂದ ಹಣ ಬರುತ್ತದೆ. ಅದನ್ನವರು ಮತಾಂತರ ಸೇರಿದಂತೆ ಏನೆಲ್ಲಕ್ಕೂ ಬಳಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ಮತದವರು ರಾಜಕಾರಣಿಗಳ ಬದಲಿಗೆ ಚರ್ಚಿನ ಹಂಗಿನಲ್ಲೇ ಇರಲು ಬಿಷಪ್ಪುಗಳು -ಧರ್ಮಾಧಿಕಾರಿಗಳು ಬಯಸುತ್ತಾರೆ. ಪಾರ್ಸಿಗಳು ಉದ್ಯಮಶೀಲರೂ ಸ್ವಾಭಿಮಾನಿಗಳೂ ಆಗಿದ್ದು ಅವರು ಸರ್ಕಾರದ ಕಾಸಿಗೆ ಎಂದಿಗೂ ಕೈಯೊಡ್ಡುವುದಿಲ್ಲ. ಬೌದ್ಧರಿಗೆ ಪರಿಶಿಷ್ಟ ಜಾತಿ-ಪಂಗಡಗಳಿಗಿರುವ ಮೀಸಲಾತಿ ಮತ್ತಿತರ ಸರ್ಕಾರಿ ಸೌಲತ್ತು ಸಿಗುತ್ತವೆ. ಜೊತೆಗೆ ಅವರ ಸಂಖ್ಯೆಯೂ ಕಮ್ಮಿ. ಅಂದಾಗ ಶಾದಿ ಭಾಗ್ಯ ಒಂದೇ ಮತದವರನ್ನು ದೃಷ್ಟಿಯಲ್ಲಿ ಇರಿಸಿಕೊಂಡಿರುವ ಯೋಜನೆ!    
ಸಂವಿಧಾನದ ರೀತ್ಯ ನಮ್ಮದು ಜಾತ್ಯತೀತ ಪ್ರಜಾಪ್ರಭುತ್ವ ದೇಶ. ಇಲ್ಲಿ ಜಾರಿಗೊಳಿಸಲಾಗುವ ಯಾವುದೇ ಜನಕಲ್ಯಾಣ ಯೋಜನೆ ನಿರ್ದಿಷ್ಟ ಮತೀಯರಿಗಷ್ಟೇ ಮೀಸಲಾಗುವುದಾದರೆ, ಅದನ್ನು ಅಸಾಂವಿಧಾನಿಕ ಅಥವಾ ಸಂವಿಧಾನ ದ್ರೋಹವೆಂದೇ ತಿಳಿಯಬೇಕಾಗುತ್ತದೆ. ಮದುವೆಗಿರುವ ಹೆಣ್ಣು ಮಕ್ಕಳು ಕೇವಲ ಮುಸ್ಲಿಮರಲ್ಲಿ  ಮಾತ್ರವೇನಾ? ಸಿದ್ದರಾಮಯ್ಯನವರು ಹುಟ್ಟಿದ ಕುರುಬ ಜಾತಿಯಲ್ಲೇ ಇಲ್ಲವಾ?
   'ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿ' ಯೋಜನೆಯಿಂದ ಎ.ಪಿ.ಎಲ್. ಕಾರ್ಡುದಾರರನ್ನು ಹೊರಗಿಟ್ಟಿದ್ದು, ಹೊಸದಾಗಿ ಪಡಿತರ ಚೀಟಿ ನೀಡಲಿದ್ದೇವೆಂದು ಗೊಂದಲ ಹುಟ್ಟಿಸಿರುವುದು, ಅಕ್ಕಿ ದಾಸ್ತಾನು ಮಳಿಗೆಗಳಿಂದಲೇ ಕಳ್ಳದಂಧೆ ಹೆಚ್ಚುತ್ತಿರುವುದು- ಇವೆಲ್ಲವೂ ವಿವೇಚನೆಯಿಲ್ಲದೆ ಕೈಗೊಂಡ ಯೋಜನೆಗಳ ಫಲವೇ. ಇದೀಗ 'ಶಾದಿ ಭಾಗ್ಯ' ವೆಂಬ ಹೆಸರಿನ ಹಗಲು ದರೋಡೆ ಯೋಜನೆ! ಮದುವೆಯಾಗುವ ಹೆಣ್ಣಿನ ತಂದೆಯ ಕೈಗೆ 10 ಸಾವಿರ ಇರಿಸುವುದು, ಆ ನಂತರದ 40 ಸಾವಿರ ರೂ.ಗಳ ಲೆಕ್ಕದಲ್ಲಿ ಮಂಚ-ದಿಂಬು-ಹಾಸಿಗೆ-ಮೊದಲಾದವುಗಳನ್ನು ವಸ್ತು ರೂಪದಲ್ಲಿ ನೀಡುವುದು! ಅಂದಾಗ ಇಡೀ ಯೋಜನೆ ರಾಜಕಾರಣಿಗಳು, ಪೀಠೋಪಕರಣಗಳ ಮಾರಾಟಗಾರರು ಮತ್ತು ದಲ್ಲಾಳಿಗಳ ನಡುವೆ ಏರ್ಪಡುವ ಕಳ್ಳ ವ್ಯವಹಾರವಲ್ಲದೇ ಮತ್ತೇನು?
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮುಸ್ಲಿಮರಲ್ಲಿ ಬಡತನ ಹೆಚ್ಚುತ್ತಲೇ ಇದೆಯಾದರೆ, ಅದಕ್ಕೆ ಕಾರಣ ಮತಬ್ಯಾಂಕ್ ಓಲೈಕೆಯ ರಾಜಕಾರಣಿಗಳು (ವಿಶೇಷವಾಗಿ ಸೆಕ್ಯುಲರ್‌ವಾದಿಗಳು) ಹಾಗೂ ಧರ್ಮದ ಹೆಸರಿನಲ್ಲಿ ಮೂಢ ನಂಬಿಕೆ ಬೆಳೆಸಿರುವ ಮುಲ್ಲಾಗಳೇ! ಶಾದಿ ಭಾಗ್ಯವನ್ನು 'ಮುಸ್ಲಿಮ್ ಮಹಿಳೆಯರ ದೌರ್ಭಾಗ್ಯ' ಎಂಬುದಾಗಿ ಬಾನು ಮುಷ್ತಾಕ್ ಹೇಳಿರುವುದು ಸೂಕ್ತವಾಗಿದೆ. ಕೇಂದ್ರ ಮಂತ್ರಿ ರೆಹಮಾನ್ ಖಾನರಿಗೆ ಮುಸ್ಲಿಮರಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯ ಮಾಡುವ ಮಹತ್ವಾಕಾಂಕ್ಷೆ, ಸಿದ್ದರಾಮಯ್ಯನವರ ಸುತ್ತಲೂ ಇರುವ ಬುದ್ಧಿಜೀವಿಗಳಿಗೆ ಹಿಂದೂಗಳ ನಂಬಿಕೆ-ಭಾವನೆಗಳೊಂದಿಗೆ ಚೆಲ್ಲಾಟವಾಡುವ ಚಟ, ತಲೆತಿರುಕ ವಿಚಾರವಾದಿಗಳಿಗೆ ಉಡುಪಿಯ ಶ್ರೀಕೃಷ್ಣ ಮಠವನ್ನು ಕೇಳುತ್ತಿರುವ ಹಠ-ಇವೆಲ್ಲಕ್ಕೂ ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯ ಇದೀಗ ಇನ್ನೊಂದು ಮುಸ್ಲಿಂ ಓಲೈಕೆ ಗಿಮಿಕ್‌ಗೆ ಮುಂದಾಗಿದ್ದಾರೆ. ಇವೆಲ್ಲವೂ ಪ್ರಾಯಶಃ ಕಾಂಗ್ರೆಸ್ಸಿನ ಆತ್ಮವಿಶ್ವಾಸ ಕುಗ್ಗುತ್ತಿರುವುದರ ಪ್ರತೀಕ. ದೇಶದೆಲ್ಲೆಡೆ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆಗೆ ವಿರುದ್ಧ ಅಸ್ತ್ರವಾಗಿ ಈಗ ಮುಸ್ಲಿಮ್ ಓಲೈಕೆ, ಹಿಂದೂಗಳ ನಡುವೆ ಹೆಚ್ಚಿಸುವ ಜಾತಿ ದ್ವೇಷ- ಇವೆರಡೇ ಕಾಂಗ್ರೆಸ್ಸಿಗಿರುವುದು. ಆದ್ದರಿಂದ 'ಮೋದಿ ಭಯದ' ಕೂಸೇ 'ಶಾದಿ ಭಾಗ್ಯ' ಎನ್ನಬಹುದು.

- ಕೆ.ಎನ್. ಭಗವಾನ್, ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.