ಅಂಕಣಗಳು

ನಂಬಿಕೆಗಳೆಲ್ಲ ಮೂಢ ತಾನೆ?

ನಂಬಿಕೆಗಳೆಲ್ಲ ಮೂಢ ತಾನೆ?
Published On :

'ಫಜಿ ಲಾಜಿಕ್‌' ಎಂಬ ಪುಸ್ತಕವಿದೆ. ಅದನ್ನು ಬರೆದಿರುವಾತ ಕಂಪ್ಯೂಟರ್ ವಿಜ್ಞಾನಿ. ಅದರ ಆರಂಭದಲ್ಲಿ ಆತ ನಾವು ವೈಜ್ಞಾನಿಕ ಎಂದು ನಂಬಿರುವ ಭೌತಶಾಸ್ತ್ರ ನಿಯಮಗಳೆಲ್ಲಾ ಕೇವಲ ನಂಬಿಕೆಗಳೇ, ಅವು ನಿನ್ನೆ, ಮೊನ್ನೆ ಹೀಗಿದ್ದುದರಿಂದ ನಾಳೆಯೂ ಹೀಗೇ ಇರುತ್ತದೆ ಎಂದು ನಂಬಿದ್ದೇವಷ್ಟೇ ಎನ್ನುತ್ತಾನೆ. ಇದು ಅತಿರೇಕದ ಹೇಳಿಕೆಯೆನಿಸುತ್ತದೆ. ಆದರೆ ಇದರ ಹಿಂದಿನ ತರ್ಕವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಮತ್ತೊಬ್ಬ ವಿಜ್ಞಾನಿ  'ದಿ ಬ್ಲಾಕ್ ಸ್ವಾನ್‌' ಎಂಬ ಪುಸ್ತಕದಲ್ಲಿ ನಾವು ಸಾವಿರ ಬಿಳಿಯ ಹಂಸಗಳನ್ನು ನೋಡಿ ಕರಿಯ ಹಂಸವಿಲ್ಲ ಎಂಬ ತೀರ್ಮಾನಕ್ಕೆ ಬಂದಿರುತ್ತೇವೆ. ಆದರೆ ವಾಸ್ತವದಲ್ಲಿ ಕೇವಲ ಬಿಳಿಯ ಹಂಸಗಳು ಕರಿಯ ಹಂಸವಿಲ್ಲ ಎಂಬುದಕ್ಕೆ ಋಜುವಾತಾಗಲಾರದು ಎನ್ನುತ್ತಾನೆ. ಇವತ್ತು ವಿಜ್ಞಾನಿಗಳೆನ್ನಿಸಿಕೊಂಡ, ವೈಚಾರಿಕರೆನ್ನಿಸಿಕೊಂಡ ಕೆಲವರು ತಮ್ಮ ಗ್ರಹಿಕೆಗೆ ಬರದ ವಿಷಯಗಳೆಲ್ಲವನ್ನೂ ಮೂಢನಂಬಿಕೆ ಎಂದು ಕರೆಯುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಸರ್ಕಾರ ಮೂಢನಂಬಿಕೆ ಆಚರಣೆ ಪ್ರತಿಬಂಧಿಸುವ ಉದ್ದೇಶದಿಂದ ರೂಪಿಸಿದ ಸಮಿತಿಯ ಹಲವು ಸಲಹೆಗಳನ್ನು ನೋಡಿದರೆ ಅದು ತನ್ನ ವ್ಯಾಪ್ತಿ ಮೀರಿದ ಕೆಲಸಕ್ಕೆ ಕೈಹಾಕಿದೆಯೇನೋ ಎನ್ನಿಸುತ್ತದೆ. ವೇದವೇದಾಂತಗಳಲ್ಲಿ ನುರಿತ ವಿದ್ವಾಂಸರೊಬ್ಬರು ತಮಗೆ ಇನ್ನೂ ದೇವರ ಅನುಭವವೇನೂ ಆಗಿಲ್ಲವೆಂದೂ, ರಮಣ, ರಾಮಕೃಷ್ಣರ ಮಾತುಗಳಲ್ಲಿ ಅವರಿಗೆ ದೈವಸಾಕ್ಷಾತ್ಕಾರ ಆಗಿದೆಯೆನಿಸುವುದರಿಂದ ಅದನ್ನು ನಂಬಬೇಕಾಗಿದೆಯೆಂದೂ ವಿಜ್ಞಾನಿಯೊಬ್ಬರಿಗೆ ಒಮ್ಮೆ ಹೇಳಿದಾಗ, ವಿಜ್ಞಾನಿಯು ಅಂತಿಮವಾಗಿ ನಂಬಿಕೆಗಳ ಆಧಾರದ ಮೇಲೆಯೇ ನಮ್ಮ ಬದುಕು ನಿಂತಿದೆಯೆಂದು ಹೇಳಿದರು.
ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಇಲ್ಲೇ ತಕ್ಲೀಫ ಬರುವುದು. ಶಿವರಾಮ ಕಾರಂತರನ್ನು ದೇವರ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ಕೇಳಿದಾಗ ಅವರು  ದೇವರು ಎಂದರೆ ಏನೆಂದು 'ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತಾಡಲಾರೆ' ಎಂದರು. ಅದು ನಿಜವಾದ ವೈಚಾರಿಕನ ಮಾತು. ಆದರೆ ಶಶಿಕಾಂತ್ ಓಕ್ ಅವರು ನಾಡಿ ಓಲೆಗ್ರಂಥಗಳ ಬಗ್ಗೆ ಕುತೂಹಲ ತಳೆದು ಅವನ್ನು ಹೊಂದಿರುವ ಹಲವಾರು ಮಂದಿಯನ್ನು ಸಂದರ್ಶಿಸಿ, ಅವರಲ್ಲಿ ಕೆಲವರು ತಮಗೆ ಬೆರಗಾಗುವಂತೆ ಹಲವು ಸಂಗತಿಗಳನ್ನು ಹೇಳಿದ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ.
ಇದೆಲ್ಲ ವಿವರಗಳನ್ನು ನೀಡಿ ಅವರು ಶ್ರೇಷ್ಠ ಭೌತವಿಜ್ಞಾನಿಯೆನಿಸಿದ ಜಯಂತ್ ನಾರ್ಲಿಕರ್‌ಗೆ ಬರೆದು, ಇದರ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸಬೇಕೆಂದು ಕೋರಿದಾಗ ಅವರಿಂದ ಬಂದ ಒಂದೇ ಸಾಲಿನ ಉತ್ತರ 'ಕ್ಷಮಿಸಿ, ನನಗೆ ಇದರಲ್ಲಿ ನಂಬಿಕೆಯಿಲ್ಲ' ಎಂದು. ಅಂದರೆ ನಾರ್ಲಿಕರ್ ಪ್ರಕಾರ ವಿಜ್ಞಾನಿಯು ಯಾವುದೇ ವಿಷಯದ ಬಗ್ಗೆ ಪರಿಶೀಲಿಸಬೇಕಾದರೆ ಆತನಿಗೆ ಮೊದಲೇ ಅದರಲ್ಲಿ ನಂಬಿಕೆಯಿರಬೇಕು. ಇದೆಂಥ ವಿಜ್ಞಾನ? ವಿಜ್ಞಾನಿಯ ಪದಕೋಶದಲ್ಲಿ ನಂಬಿಕೆ ಎಂಬ ಪದಕ್ಕೇ ಅವಕಾಶವಿರದು. ಆತ ಒಂದು ವಿಷಯ ತನಗೆ ಗೊತ್ತಿದೆ ಎನ್ನಬೇಕು, ಇಲ್ಲವೇ ಗೊತ್ತಿಲ್ಲ ಎನ್ನಬೇಕು. ಕೇವಲ ನಂಬಿಕೆ ಕೇವಲ ಮೌಢ್ಯ.
ಮೂಢನಂಬಿಕೆಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಸಮಿತಿಯು ಯಾವ್ಯಾವುದು ಮೂಢನಂಬಿಕೆ ಎಂಬ ದೊಡ್ಡಪಟ್ಟಿಯನ್ನೇ ಕೊಟ್ಟಿದೆ. ಇದು ಅನವಶ್ಯಕವಾಗಿ ವಿವಾದವನ್ನು ಹುಟ್ಟುಹಾಕಿದಂತೆ. ಈ ಸಮಿತಿಯ ಸದಸ್ಯರಿಗೆ ಹಲವು ನಂಬಿಕೆಗಳು ಮೂಢ ಎನ್ನಿಸಬಹುದು. ಆದರೆ ಹಾಗೆಂದು ಇತರರಿಗೆ ಅಪ್ಪಣೆ ಕೊಡಿಸಲು ಇವರಿಗೇನು ಎಲ್ಲ ವಿಷಯಗಳ ಬಗ್ಗೆ ದಿವ್ಯಜ್ಞಾನವಿದೆಯೆ? ನಾನು ಜ್ಯೋತಿಷ್ಯ, ನಾಡಿ ಓಲೆಗರಿ, ಅಂಜನ ಕುರಿತಾಗಿ ಹಲವರನ್ನು ಭೇಟಿ ಮಾಡಿ ಅವರಲ್ಲಿ ಕೆಲವರು ಹೇಳಿದ್ದು ಸೋಜಿಗವೆನಿಸುವಷ್ಟು ದಿಟವಾದಾಗ ಇವುಗಳಲ್ಲಿ ಸ್ವಲ್ಪಮಟ್ಟಿಗೆ ತಥ್ಯವಿದ್ದರೂ ಇರಬಹುದು ಎಂದು ನಂಬಿಕೆ ತಳೆದಿದ್ದೇನೆ. ಆದರೆ ಈ ಸಮಿತಿಯು ವೈಜ್ಞಾನಿಕವಾಗಿ ಇವುಗಳ ಬಗ್ಗೆ ಎಷ್ಟರ ಮಟ್ಟಿಗೆ ಪರಿಶೀಲನೆ ನಡೆಸಿದೆ? ನಡೆಸಿರಲಾರದು. ಏಕೆಂದರೆ ನಾರ್ಲಿಕರ್ ತಾತ್ವಿಕತೆ ಪ್ರಕಾರ ಇವುಗಳಲ್ಲಿ ನಂಬಿಕೆಯಿದ್ದಲ್ಲಿ ಮಾತ್ರ ಇವುಗಳ ಬಗ್ಗೆ ಪರಿಶೀಲನೆ ನಡೆಸಬೇಕು!
ವೈಜ್ಞಾನಿಕ ಮನೋಭಾವ ಎಂದರೇನು ಪ್ರಯೋಗ ಮತ್ತು ವೀಕ್ಷಣೆ ಮೂಲಕ ತೀರ್ಮಾನಕ್ಕೆ ಬರುವುದು. ಇದಕ್ಕೆಲ್ಲಾ ಮೊದಲೇ ಸಿದ್ಧಾಂತವೊಂದಿರಬೇಕು. ಇದು ಪಾಶ್ಚಾತ್ಯ ದೃಷ್ಟಿಕೋನ. ಆದರೆ ಭಾರತದಲ್ಲಿ ಇದನ್ನು ಮೀರಿದ ಅತೀಂದ್ರಿಯ ಜ್ಞಾನದ ಕಲ್ಪನೆಯಿದೆ. ಇದನ್ನು ಎಲ್ಲರೂ ಒಪ್ಪಲೇಬೇಕೆಂದೇನೂ ಇಲ್ಲ, ಆದರೆ ಈ ಕಲ್ಪನೆಯಿರುವುದು ನಿಜ.
ಇಡೀ ಆಯುರ್ವೇದವೇ ಅವೈಜ್ಞಾನಿಕ. ಅದರ ತತ್ವಗಳು ಪಾಶ್ಚಾತ್ಯ ವಿಜ್ಞಾನದ ದೃಷ್ಟಿಕೋನದಿಂದ ಅಂಗೀಕೃತವಾದುವಲ್ಲ. ಎಂತಲೇ ಅಮೆರಿಕದಲ್ಲಿ ಇವತ್ತಿಗೂ ಆಯುರ್ವೇದ ಅಭ್ಯಾಸಕ್ಕಾಗಲೀ, ಆಯುರ್ವೇದೀಯ ಔಷಧಿಗಳ ಮಾರಾಟಕ್ಕಾಗಲೀ ಅನುಮತಿ ದೊರಕದು. ಇಷ್ಟಕ್ಕೂ ಆಯುರ್ವೇದದ ಮೂಲಭೂತ ತತ್ವವಾದ ತ್ರಿದೋಷ ಸಿದ್ಧಾಂತ ಇವತ್ತಿನ ವೈಜ್ಞಾನಿಕ ತತ್ವದ ಪರಿಮಿತಿಗೆ ನಿಲುಕುವುದಲ್ಲ. ಅದರಲ್ಲಿನ ವಾತ, ಪಿತ್ಥ, ಕಫ ಎಂಬುದು ಆಂಗ್ಲಭಾಷೆಯಲ್ಲಿ ಸಡಿಲವಾಗಿ ಹೇಳುವಂತೆ ವಿಂಡ್, ಬೈಲ್, ಫ್ಲೇಮ್ ಅಲ್ಲ.  ಅವು ನಾಡಿ ಪರೀಕ್ಷೆ, ರೋಗಿಯ ಸ್ಥಿತಿಗತಿ ಮುಂತಾದವುಗಳ ಖುದ್ದು ಪರಿಶೀಲನೆಯಿಂದ ತಜ್ಞವೈದ್ಯನ ಗ್ರಹಿಕೆಗೆ ಮಾತ್ರ ಬರುವಂತಹ ಮೂರು ವೇಗಗಳು. ಇವು ಸ್ಟೆತಸ್ಕೋಪ್, ಎಕ್ಸ್‌ರೆ, ಸಿ.ಟಿ. ಸ್ಕ್ಯಾನ್, ಡಯಾಗ್ನೋಸ್ಟಿಕ್ ಲ್ಯಾಬ್ ವ್ಯಾಪ್ತಿಗೆ ಬರುವಂಥದಲ್ಲ. ಹಾಗೆಂದು ಆಯುರ್ವೇದವನ್ನು ಮೂಢನಂಬಿಕೆ ಎಂದು ತಳ್ಳಿಹಾಕೋಣವೇ?
ಹೋಮಿಯೋಪತಿಯನ್ನು ಇಪ್ಪತ್ತನೇ ಶತಮಾನದ ಬೃಹತ್ ವಂಚನೆ ಎಂದು ವೈಜ್ಞಾನಿಕ ಸಮೀಕ್ಷೆಯೊಂದರಲ್ಲಿ ಹೇಳಲಾಯಿತು. ಅಮೆರಿಕದ 'ಸ್ಪ್ಯಾನ್‌' ನಿಯತಕಾಲಿಕವು ಈ ಬಗ್ಗೆ ಮುಖಪುಟ ಲೇಖನವನ್ನೇ ಪ್ರಕಟಿಸಿತು. ಹೋಮಿಯೋಪತಿಯ ಮೇಲಿನ ಈ ಗದಾಪ್ರಹಾರಕ್ಕೆ ಕಾರಣ ಅದರ ಮೂಲಭೂತ ತತ್ವ ಸಾಮಾನ್ಯ ಗ್ರಹಿಕೆಗೆ ನಿಲುಕದಿದ್ದುದು. ಅಂದರೆ ಒಂದು ಔಷಧಿ ಹಾಲಿನದೋ ಆಲ್ಕೋಹಾಲಿನದೋ ನೂರರಲ್ಲಿ ಒಂದು ಅಂಶವಿದ್ದು ಪರಿಣಾಮ ನೀಡದಿದ್ದಾಗ ಅದನ್ನು ಇನ್ನೂ ಶಕ್ತಿಯುತವನ್ನಾಗಿ ಮಾಡಲು ಸಾವಿರದಲ್ಲಿ ಒಂದು ಅಂಶ ಮಾಡುವುದು. ಯಾವುದೇ ಔಷಧಿ ತೆಳುವಾದಷ್ಟೂ ಅದರ ಪರಿಣಾಮ ದೃಢವಾಗುತ್ತದೆ ಎಂಬ ಸಿದ್ಧಾಂತವೇ ಪೊಳ್ಳೆನಿಸುತ್ತದೆ. ಆದರೆ ಹೋಮಿಯೋಪತಿಯಿಂದ ಗುಣ ಹೊಂದಿರುವುದಾಗಿ ಹೇಳುವವರು ಲಕ್ಷಗಟ್ಟಲೆಯಿದ್ದಾರೆ. ಇದಕ್ಕೆ ಅಲೋಪತಿಯವರು ಕೊಡುವ ಕಾರಣ ಪ್ಲಸಿಬೋ ಎಫೆಕ್ಟ್ ಎಂದು. ಅಂದರೆ ಔಷಧವಲ್ಲದುದನ್ನು ಔಷಧವೆಂದು ಕೊಟ್ಟಾಗ ರೋಗಿಯ ಮನಸ್ಸಿನಲ್ಲಿ ಉಂಟಾಗುವ ಸಮಾಧಾನದಿಂದ ಗುಣವಾಗತಕ್ಕಂತಹುದು. ಹಾಗಿದ್ದರೆ ಇದೇ ರೋಗಿಗಳನ್ನು ಅಲೋಪತಿ ವೈದ್ಯರೂ ತಮಗಿರುವ ಅಗಾಧ ಪ್ರಚಾರದ ಪ್ರಭಾವದಿಂದ ಗುಣಪಡಿಸಲು ಏಕೆ ಸಾಧ್ಯವಾಗಿರುವುದಿಲ್ಲ? ಇದೀಗ ನ್ಯಾನೋ ವಿಜ್ಞಾನದಲ್ಲಿ ಯಾವುದೇ ವಸ್ತುವು ಸೂಕ್ಷ್ಮಾತಿಸೂಕ್ಷ್ಮ ಸ್ಥಿತಿಯಲ್ಲಿರುವಾಗ ತನ್ನ ಮೂಲಭೂತ ಗುಣವನ್ನೇ ಬದಲಾಯಿಸಿಕೊಳ್ಳುವುದೆಂದು ಸ್ಥಿರಪಟ್ಟಿರುವುದರಿಂದ ಹೋಮಿಯೋಪತಿಗೆ ಇನ್ನಷ್ಟು ರೆಕ್ಕೆಪುಕ್ಕೆ ಬಂದಿದೆ!
ಇಲ್ಲೇ ನಂಬಿಕೆಗಳ ಪ್ರಶ್ನೆ ಬರುವುದು. ನನಗೆ ಬೆತ್ತಲೆ ಸೇವೆ, ಮಡೆಸ್ನಾನ, ಜ್ಯೋತಿಷ್ಯ, ಹಸ್ತಸಾಮುದ್ರಿಕ, ದೇವರುದಿಂಡರು ಮುಂತಾದವುಗಳಲ್ಲಿ ನಂಬಿಕೆಯಿದೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಇವುಗಳಲ್ಲಿ ನಂಬಿಕೆಯಿದ್ದು ಸಾಂತ್ವನ ಪಡೆಯುವವರಿಗೆ ನಂಬಬೇಡಿ ಎಂದು ಒತ್ತಾಯಪೂರ್ವಕವಾಗಿ ತಡೆಹಾಕಲು ನನಗೇನು ಅಧಿಕಾರವಿದೆ? ಪ್ರತಿಯೊಂದಕ್ಕೂ ವೈಜ್ಞಾನಿಕ ಮನೋಭಾವದ ಹೆಸರು ಹೇಳಿ ಅಪ್ಪಣೆ ಕೊಡಬಯಸುವವರು ನಾಳೆ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂತ್ರಾಲಯ ಇವುಗಳಲ್ಲಿನ ನಂಬಿಕೆಗೂ ಆಧಾರವಿಲ್ಲ ಎಂದು ಹೇಳಿ ಅಲ್ಲಿನ ದರ್ಶನಕ್ಕೆ ನಿಷೇಧ ತರಲು ಅಡ್ಡಿಯೇನು? ಇದನ್ನು ಅತಿರೇಕದ ಕಲ್ಪನೆ ಎನ್ನಬಹುದು. ಆದರೆ ಮತಗಳಿಕೆಗಾಗಿ ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ ಕೊಡುವ ಸರ್ಕಾರ ಇಂತಹದೊಂದು ಕಾನೂನು ತಂದು ಅಲ್ಪಸಂಖ್ಯಾತರಿಗೆ ಮಾತ್ರ ಅದರಿಂದ ವಿನಾಯ್ತಿ ಕೊಡಲಡ್ಡಿಯಿಲ್ಲ ತಾನೆ?
ಇವತ್ತು ವೈಜ್ಞಾನಿಕ ಎನಿಸಿಕೊಂಡಿರುವುದು ಕೆಲವೊಮ್ಮೆ ಎಷ್ಟು ಪೊಳ್ಳಾಗಿರುತ್ತದೆ ಎನ್ನುವುದಕ್ಕೆ ಎರಡು ನಿದರ್ಶನ ಕೊಡಬಯಸುತ್ತೇನೆ. ಒಂದು, ನ್ಯೂಯಾರ್ಕ್ ಮತ್ತು ಸ್ಟಾಕ್‌ಹೋಮ್‌ನಲ್ಲಿ ಸಹಸ್ರಾರು ರೋಗಿಗಳ ಮೇಲೆ ಇಪ್ಪತ್ತು ವರ್ಷಗಳಷ್ಟು ಸುದೀರ್ಘ ಕಾಲ ಪರಸ್ಪರ ಸ್ವತಂತ್ರವಾಗಿ ನಡೆದ ಪ್ರಯೋಗ. ಎರಡು ಕಡೆಯೂ ತಲಾ ಸಹಸ್ರ ರೋಗಿಗಳನ್ನು ಔಷಧಗಳು, ಪಥ್ಯ, ವ್ಯಾಯಾಮ ಇತ್ಯಾದಿ ನಿಯಂತ್ರಣಗಳಿಗೆ ಒಳಪಡಿಸಿ ಅಷ್ಟೇ ಸಂಖ್ಯೆಯ ಇನ್ನೊಂದು ಗುಂಪನ್ನು ಅವರಿಗಿಷ್ಟ ಬಂದಹಾಗೆ ಇರಲು ಬಿಡಲಾಯಿತು. ಇಪ್ಪತ್ತು ವರ್ಷಗಳ ನಂತರ ಎರಡೂ ದೇಶಗಳ ವೈದ್ಯರನ್ನು ದಿಗ್ಭ್ರಮೆಗೊಳಪಡಿಸಿದ ಫಲಿತಾಂಶವೆಂದರೆ ಎಲ್ಲ ನಿಯಂತ್ರಣಗಳೂ ಇದ್ದ ರೋಗಿಗಳಲ್ಲಿ ಹೆಚ್ಚಿನ ಸಂಖ್ಯೆಯ ಹೃದಯಾಘಾತಗಳು, ಪಾರ್ಶ್ವವಾಯು, ಸಾಂಕ್ರಾಮಿಕ ರೋಗಗಳು, ಮರಣದ ಪ್ರಮಾಣ ಕಂಡುಬಂದುದು. ಕೊನೆಗೆ ವೈದ್ಯರ ತೀರ್ಮಾನವೆಂದರೆ ರೋಗಿಗಳ ಮೇಲಿನ ನಿಯಂತ್ರಣದ ಒತ್ತಡವೇ ಅವರನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುತ್ತದೆ ಎಂದು!
ಎರಡನೆಯ ನಿದರ್ಶನವೆಂದರೆ, ವಿಶ್ವಾದ್ಯಂತ ಅಲೋಪತಿ, ಹೋಮಿಯೋಪತಿ, ನ್ಯಾಚುರೋಪತಿ, ಹೈಡ್ರೋಪತಿ, ಕೊನೆಗೆ ವೆಂಕಟಾಚಲಪತಿಯೂ ಸೇರಿದಂತೆ ನಾನಾ ಪರಿಹಾರಗಳನ್ನನುಸರಿಸಿದ ರೋಗಿಗಳಲ್ಲಿ ಯಾವುದೇ ಪರಿಹಾರದಲ್ಲೂ ಶೇಕಡಾ ಎಪ್ಪತ್ತೈದರಷ್ಟೋ ಏನೋ ಗುಣ ಕಂಡುಬಂದುದು. ಯಥಾಪ್ರಕಾರ ವೈಜ್ಞಾನಿಕ ಸಿದ್ಧಾಂತವೊಂದನ್ನು ಕೊಡಬೇಕಲ್ಲಾ, ಕೊಟ್ಟರು. ಪ್ಲಸಿಬೋ ಎಫೆಕ್ಟ್ ಎಂದು. ಇದು ತಮಗರ್ಥವಾಗದು ಎಂಬುದನ್ನು ವೈಜ್ಞಾನಿಕ ಮಾತಿನಲ್ಲಿ ಹೇಳುವ ವಿಧಾನ!
ಮೊನ್ನೆ ತಾನೆ ಇಸ್ರೋ ವಿಜ್ಞಾನಿ ರಾಧಾಕೃಷ್ಣರವರು ಮಂಗಳಗ್ರಹಯಾನದ ರಾಕೆಟ್ಟಿನ ಮಾದರಿಯನ್ನು ತಿರುಪತಿ ವೆಂಕಟರಮಣಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಮಾಡುತ್ತಿರುವ ಚಿತ್ರ 'ಕನ್ನಡ ಪ್ರಭ'ದಲ್ಲೇ ಪ್ರಕಟವಾಗಿದೆ. ತಿರುಪತಿ ದೇವರ ಬಗ್ಗೆ ವೈಜ್ಞಾನಿಕವಾಗಿ ಏನು ಸಮೀಕ್ಷೆ ನಡೆದಿದೆ? ನಡೆದಿಲ್ಲವಾದರೆ ರಾಧಾಕೃಷ್ಣರವರು ಮೂಢನಂಬಿಕೆ ಪ್ರಚೋದಿಸುತ್ತಿರುವರೆ? ಇದೆಲ್ಲ ಮುಜುಗರದ ಪ್ರಶ್ನೆಗಳು. ಆದರೂ ಸಾಮಾನ್ಯವಾಗಿ ಒಂದು ನೀತಿ ತಳೆಯಬಹುದಾದರೆ, ಎಲ್ಲಿ ಒತ್ತಾಯವಿಲ್ಲವೋ ಅಲ್ಲಿ, ನಂಬಿಕೆಯಿರುವವರು ತಮಗೆ ಸಮಾಧಾನ ಕೊಡುವ ಯಾವುದೇ ಆಚರಣೆಯಲ್ಲಾದರೂ ತೊಡಗಬಹುದು ಎಂಬುದು. ನಂಬಿಕೆಯಿಲ್ಲದವರು ನಂಬಿಕೆಯಿರುವವರ ಆಚರಣೆಗಳ ವಿರುದ್ಧ ಒತ್ತಾಯ ತರುವುದನ್ನು ವಿರೋಧಿಸಲೇಬೇಕು.

 - ಸಿ. ಸೀತಾರಾಮ್
ಹಿರಿಯ ಪತ್ರಕರ್ತರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.