ಭಾರತರತ್ನದ ಹೊಳಪಿಗೇಕೆ ಕೆಸರು?

ಇದುವರೆಗೆ ನಮ್ಮ ದೇಶದಲ್ಲಿ 1954 ರಿಂದ 2013 ರ ವರೆಗಿನ ಈ 59 ವರ್ಷಗಳಲ್ಲಿ 43 ಮಹಾನ್ ವ್ಯಕ್ತಿಗಳಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ. ಇಂದು ಭಾರತದ ರತ್ನಗಳ ಹಾಗೂ ಭಾರತ ರತ್ನಗಳಾಗ ಬಹುದಾದವರ ಹಾಗೂ ಭಾರತದ ರತ್ನಗಳಿಸುವ ಅರ್ಹತೆ ಇದ್ದರೂ ಅದೃಷ್ಟ ಇಲ್ಲದವರ ಕುರಿತು ಎಲ್ಲೆಡೆ ಜಿಜ್ಞಾಸೆ, ಚರ್ಚೆ, ವಾದ, ಕೊನೆಗೆ ವಿವಾದವೂ ಪ್ರಾರಂಭವಾಗಿದೆ.
ಕೊನೆಯ ಟೆಸ್ಟ್ ಪಂದ್ಯ ಮುಗಿಸಿದ ರಾತ್ರಿ ಸಚಿನ್ ಅವರಿಗೆ ದೇಶದ ಮಹೋನ್ನತ ಪ್ರಶಸ್ತಿ ಭಾರತರತ್ನ ಘೋಷಣೆ ಹೊರಬಿದ್ದಿತು. ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು ಹಾಗೂ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ಕೀರ್ತಿಯೂ ತೆಂಡೂಲ್ಕರ್ ಅವರದಾಯಿತು. ದೇಶದ ಲಕ್ಷಾಂತರ ಮಂದಿ ಈ ಘೋಷಣೆಗಾಗಿ ಕಾಯುತ್ತಿದ್ದರೇನೋ ಎಂಬಂತೆ ಹರ್ಷೋದ್ಗಾರದಿಂದ ಈ ಪ್ರಕಟಣೆಯನ್ನು ಸ್ವಾಗತಿಸಿದರು. ಈ ಪುರಸ್ಕಾರವನ್ನು ಸಚಿನ್ ವೀನೀತ ಭಾವನೆಯಿಂದಲೇ ಸ್ವೀಕರಿಸಿದರು.
ಸಚಿನ್ರಿಗೆ ಈ ಸನ್ಮಾನ ಸಂದಿದ್ದರ ಬಗ್ಗೆ ತಕರಾರೇನೂ ಇಲ್ಲವಾದರೂ, ಕಿರಿಯ ವಯಸ್ಸಿನ ತೆಂಡೂಲ್ಕರ್ಗೆ ಭಾರತರತ್ನ ಕೊಡಬಹುದಾದರೆ ಹಾಕಿ ಆಟಗಾರ ಧ್ಯಾನ್ಚಂದ್ ಅವರಿಗೆ ಭಾರತರತ್ನ ನೀಡಬೇಕು ಎಂಬ ಹಲ ದಶಕಗಳ ಬೇಡಿಕೆಗೆ ಮನ್ನಣೆ ಸಿಗಲಿಲ್ಲವೇಕೆ ಎಂಬ ಚರ್ಚೆ ಪ್ರಾರಂಭವಾಯಿತು. ನಿಸ್ಸಂಶಯವಾಗಿ ಧ್ಯಾನ್ಚಂದ್ ಈ ಪ್ರಪಂಚ ಕಂಡ ಅಪ್ರತಿಮ ಹಾಕಿ ಆಟಗಾರ. ಹಾಕಿ ಆಟದಿಂದ ಧ್ಯಾನ್ಚಂದ್ ಎಷ್ಟು ಪ್ರಸಿದ್ಧಿ ಪಡೆದರೋ ಅಷ್ಟೇ ಹೆಮ್ಮೆಯನ್ನು ತನ್ನ ಆಟದಿಂದ ಹಾಕಿ ಕ್ರೀಡೆಗೆ ಧ್ಯಾನ್ಚಂದ್ ನೀಡಿದರು. ಮೈದಾನದಲ್ಲಿ ಅವರೊಬ್ಬ ಮಾಂತ್ರಿಕನೇ ಆಗಿದ್ದರು. ಮಹಾನ್ ಕ್ರೂರಿ ಹಿಟ್ಲರ್, ಧ್ಯಾನ್ಚಂದ್ ಆಟಕ್ಕೆ ಎಷ್ಟರಮಟ್ಟಿಗೆ ಆಕರ್ಷಿತನಾಗಿದ್ದನೆಂದರೆ ಭಾರತದ ಸೈನ್ಯದಲ್ಲಿ ಸಾಮಾನ್ಯ ಸಿಪಾಯಿ ಆಗಿದ್ದ ಧ್ಯಾನ್ಚಂದ್ಗೆ ಜರ್ಮನಿ ಸೈನ್ಯದಲ್ಲಿ ಕರ್ನಲ್ ಹುದ್ದೆ ಕೊಡುವುದಾಗಿ ಆಹ್ವಾನ ನೀಡಿದ್ದ. ಆದರೆ ಅತ್ಯುತ್ತಮ ಹಾಕಿ ಆಟಗಾರನಾಗಿದ್ದ ಧ್ಯಾನ್ಚಂದ್ ಅಷ್ಟೇ ಅಪ್ರತಿಮ ದೇಶ ಭಕ್ತನೂ ಆಗಿದ್ದರು. ಅಂತಹ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರು. ಬಡ ಸಿಪಾಯಿಯೇ ಆದರೂ ಸರಿ ನಾನು ಭಾರತಮಾತೆಯ ಪುತ್ರನಾಗಿಯೇ ಉಳಿಯುತ್ತೇನೆ ಎಂಬ ದೃಢ ಸಂಕಲ್ಪವನ್ನು ತೋರಿದರು.
ದಂತಕತೆಯೇ ಆಗಿರುವ ಧ್ಯಾನ್ಚಂದರ ಜೀವನದ ಅನೇಕ ಘಟನೆಗಳನ್ನು ಇಂದಿನ ಜನಾಂಗ ನಂಬದಿರಲಿಕ್ಕೂ ಸಾಧ್ಯವಿದೆ. ಖ್ಯಾತ ಕ್ರಿಕೆಟ್ ತಾರೆ ಡಾನ್ ಬ್ರಾಡ್ಮನ್ 1935 ರಲ್ಲಿ ಅಡಿಲೇಡ್ನಲ್ಲಿ ಧ್ಯಾನ್ಚಂದ್ ಆಟನೋಡಿ-ಧ್ಯಾನ್ಚಂದ್ ಹಾಕಿಯಲ್ಲಿ ಗೋಲುಗಳನ್ನು ಕ್ರಿಕೆಟ್ನಲ್ಲಿ ರನ್ಗಳನ್ನು ಗಳಿಸಿದಂತೆ ಸಂಪಾದಿಸುತ್ತಾರೆ ಎಂದಿದ್ದರು! ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಶ್ರೇಷ್ಠ ಆಟಗಾರ ಧ್ಯಾನ್ಚಂದ್. ಒಟ್ಟು ತನ್ನ ಹಾಕಿ ಜೀವನದಲ್ಲಿ 1926 ರಿಂದ 1948 ರವರೆವಿಗೆ ತಮ್ಮ ಹಾಕಿ ಜೀವನದಲ್ಲಿ 1000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿಯ ಧ್ಯಾನ್ಸಿಂಗ್ ಧ್ಯಾನ್ಚಂದ್ ಆಗಿ ಪರಿವರ್ತನೆ ಆಗಿದ್ದು ವಿಶೇಷ ಕಾರಣಕ್ಕಾಗಿ. ರಾತ್ರಿ ಚಂದ್ರ ಬರುವುದನ್ನು ಕಾದು (ಆ ದಿನಗಳಲ್ಲಿ ಫ್ಲಡ್ಲೈಟ್ ಎಂಬುದು ಇರಲಿಲ್ಲ) ಆ ಬೆಳಕಿನಲ್ಲಿ ತನ್ನ ಹಾಕಿ ಆಟವನ್ನು ಅಭ್ಯಾಸ ಮಾಡುತ್ತಿದ್ದುದ್ದರಿಂದ ಅವರನ್ನು ಚಾಂದ್ ಎಂದು ಅವರ ಸಹ ಆಟಗಾರರು ಕರೆಯಲಾರಂಭಿಸಿದರು. ಆಗಿನಿಂದ ಅವರು ಧ್ಯಾನ್ಚಂದ್ ಆದರು.
1936 ರ ಬರ್ಲಿನ್ ಒಲಂಪಿಕ್ಸ್ ಧ್ಯಾನ್ಚಂದ್ ಜೀವನದ ಪ್ರಮುಖ ಪಂದ್ಯಗಳಲ್ಲಿ ಒಂದು. ಫೈನಲ್ ಪಂದ್ಯ ಜರ್ಮನಿ ವಿರುದ್ಧ. ಮಧ್ಯಾಂತರದಲ್ಲಿ ತಮ್ಮ ಆಟದ ಬೂಟನ್ನು ತೆಗೆದು ಬರೀ ಕಾಲಿನಲ್ಲಿ ಆಡಿ 3 ಗೋಲ್ಗಳನ್ನು ಗಳಿಸಿ ಭಾರತದ ಗೆಲುವಿಗೆ ಕಾರಣಕರ್ತರಾದ ಕೀರ್ತಿ ಧ್ಯಾನ್ಚಂದ್ರದ್ದು. ಆ ಪಂದ್ಯದ ನಂತರ ಅವರ ಹಾಕಿಸ್ಟಿಕ್ ಕೊಂಡುಕೊಳ್ಳಲು ಸ್ವತಃ ಹಿಟ್ಲರ್ ಬಯಸಿದ್ದರೆಂಬುದು ಧ್ಯಾನ್ಚಂದ್ ಹಾಕಿ ಮಹಾತ್ಮೆಯನ್ನು ತಿಳಿಸುತ್ತದೆ. ಆ ದಿನ ಜರ್ಮನಿಯ ಪತ್ರಿಕೆಯೊಂದು ಇಂದಿನ ಆಟದಲ್ಲಿ ಇಂದ್ರಜಾಲವನ್ನು ನೋಡುವ ಅವಕಾಶವಿದೆ, ಮಾಂತ್ರಿಕನೊಬ್ಬನು ಪಂದ್ಯದಲ್ಲಿ ಆಡುತ್ತಿದ್ದಾನೆ ಎಂದು ಬಣ್ಣಿಸಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರಚಾರ ಮಾಡಿತು. ಅದಕ್ಕೆ ಪೂರಕವಾಗಿ, ಬರ್ಲಿನ್ನ ರಸ್ತೆಗಳಲ್ಲೆಲ್ಲಾ ಧ್ಯಾನ್ಚಂದ್ ಅವರ ಭಾವಚಿತ್ರ ಸಮೇತ ಪೋಸ್ಟರ್ಗಳು ಪ್ರಕಟವಾಗಿ ಕ್ರೀಡಾಂಗಣ ತುಂಬಿ ತುಳುಕುತಿತ್ತು. ಆ ಪೋಸ್ಟರ್ಗಳನ್ನು ಇಂದು ರಸ್ತೆ ರಸ್ತೆಗಳಲ್ಲಿ ಕಾಣುವ ನಾಯಕರುಗಳ ಹುಟ್ಟುಹಬ್ಬದ ಫ್ಲೆಕ್ಸ್ ಜತೆ ದಯವಿಟ್ಟು ಹೋಲಿಸುವುದು ಬೇಡ. ಅವು ಇಡೀ ಜರ್ಮನಿ ದೇಶವನ್ನು ಹಾಗೂ ಹಾಕಿ ಅಭಿಮಾನಿಗಳನ್ನು ತನ್ನ ಆಟದ ಮೋಡಿಯಿಂದ ಸೂರೆಮಾಡಿದ ಧ್ಯಾನ್ಚಂದ್ ಆಟ ಕುರಿತು ಆ ವಿದೇಶಿಯರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿಮಾನದಿಂದ ಹಾಕಿದ ಪೋಸ್ಟರ್ಗಳು.
ಹಾಲೆಂಡ್ ದೇಶದಲ್ಲಂತೂ ಇವರ ಆಟವನ್ನು ಆಸ್ವಾದಿಸಿದ, ಪರೀಕ್ಷಿಸಿದ ರೀತಿ ಅದ್ಭುತ. ಆ ದೇಶದಲ್ಲಿ ಇವರ ಆಟವನ್ನು ನೋಡಿ ಆಶ್ಚರ್ಯಗೊಂಡ ಜನ ಧ್ಯಾನ್ಚಂದ್ ಅವರ ಹಾಕಿಸ್ಟಿಕ್ ಮುರಿದು ಒಳಗಡೆ ಮ್ಯಾಗ್ನೆಟ್ ಏನಾದರೂ ಇದೆಯಾ ಎಂದು ಪರೀಕ್ಷಿಸಿದ್ದೂಉಂಟು. ಇನ್ನೊಂದು ಸಂದರ್ಭದಲ್ಲಿ ಮಹಿಳೆಯೊಬ್ಬಳು ಹಾಕಿ ಸ್ಟಿಕ್ ಬದಲು ತನ್ನ ವಾಕಿಂಗ್ ಸ್ಟಿಕ್ನಲ್ಲಿ ಆಟವಾಡಲು ಧ್ಯಾನ್ಚಂದ್ಗೆ ಸವಾಲು ಹಾಕಿದಾಗ, ಆ ಮಹಾನ್ ಆಟಗಾರ ಆಕೆಯ ವಾಕಿಂಗ್ಸ್ಟಿಕ್ನಲ್ಲಿಯೇ ಆಟವಾಡಿ 3 ಗೋಲ್ ಸಂಪಾದಿಸಿ ತನ್ನ ಕೌಶಲ್ಯ ಪ್ರದರ್ಶಿಸಿದರು. ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ ಹಾಕಿ ಗಾರುಡಿಗ ಧ್ಯಾನ್ಚಂದ್ ಅವರ ಪ್ರತಿಮೆಯನ್ನು ನಿಲ್ಲಿಸಿ, ನಾಲ್ಕು ಕೈಗಳನ್ನು ಸೃಷ್ಟಿಸಿ, ಅವುಗಳಿಗೆ ನಾಲ್ಕು ಹಾಕಿ ಸ್ಟಿಕ್ಗಳನ್ನು ತೋಡಿಸಿ ಅವರ ಹಾಕಿ ಸಾಮರ್ಥ್ಯವನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.
ತನ್ನ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಈ ಅದ್ಭುತ ಆಟಗಾರ ಒಂದು ರೈಲ್ವೆ ಹಳಿಯ ಮೇಲೆ ಹಾಕಿ ಚೆಂಡನ್ನು ಇಟ್ಟು ಇನ್ನೊಂದು ಹಳಿಯ ಮೇಲೆ ತಾನು ಓಡುತ್ತಾ ಚೆಂಡನ್ನು ನಿಯಂತ್ರಿಸುತ್ತಾ ಅಭ್ಯಾಸ ಮಾಡುತ್ತಿದ್ದರಂತೆ. ಇವರನ್ನು ಸ್ಮರಿಸಲು 2012 ರಲ್ಲಿ ಲಂಡನ್ನಿನ ಟ್ಯೂಬ್ ಸ್ಟೇಷನ್ಗೆ ಧ್ಯಾನ್ಚಂದ್ ಹೆಸರಿಟ್ಟಿರುವುದು ಅತ್ಯಂತ ಗಮನಸೆಳೆಯುವ ಸಂಗತಿ. ಅಂದು 24x7 ಪ್ರಚಾರ ಮಾಧ್ಯಮಗಳು ಇಲ್ಲದಾಗ ಭಾರತಕ್ಕೆ ಕೀರ್ತಿ ತಂದುಕೊಟ್ಟು ಇಡೀ ಪ್ರಪಂಚದಲ್ಲಿ ಹೆಸರುವಾಸಿಯಾದ ಭಾರತದ ಈ ರತ್ನಕ್ಕೆ ಭಾರತರತ್ನ ಪ್ರಶಸ್ತಿ ಬಂದಿಲ್ಲದಿರುವುದು ಬಹಳಷ್ಟು ಕ್ರೀಡಾ ಪ್ರೇಮಿಗಳಿಗೆ ನೋವಿದೆ. ಧ್ಯಾನ್ಚಂದ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು, ಇದರಿಂದ ಆ ಮಹಾನ್ ಪ್ರತಿಭೆಗೆ ಗೌರವ ಸಲ್ಲಿಸುವ ಜೊತೆಗೆ ಕ್ಷೀಣವಾಗುತ್ತಿರುವ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಜನಪ್ರಿಯಗೊಳಿಸಬೇಕು ಎಂಬ ಬೇಡಿಕೆ ಹಲವರ್ಷಗಳಿಂದ ಇದೆ. ಆದರೆ ಧ್ಯಾನ್ಚಂದ್ಗೆ ಭಾರತರತ್ನ ಪ್ರಶಸ್ತಿ ಕೊಟ್ಟರೆ ನಮಗಿದರಿಂದ ಏನು ಲಾಭ ಎಂಬ ಲೆಕ್ಕಾಚಾರದಿಂದಲೋ ಏನೋ ಆಡಳಿತ ಪ್ರಮುಖರು ಈ ಬೇಡಿಕೆಯನ್ನು ಉಪೇಕ್ಷಿಸಿದ್ದಾರೆ.
ಧ್ಯಾನ್ಚಂದ್ ಉದಾಹರಣೆ ಮಾತ್ರ. ಭಾರತರತ್ನ ಪ್ರಶಸ್ತಿಗೆ ರಾಜಕೀಯ ವಾಸನೆ ತಗುಲಿರುವುದು ಸುಳ್ಳೇನಲ್ಲ. ಇದಕ್ಕೆ ಕೆಲವು ಉದಾಹರಣೆಗಳಿವೆ. ಜವಹರ್ಲಾಲ್ ನೆಹರುರವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿದ್ದು 1955 ರಲ್ಲಿ, ಅವರು ಪ್ರಧಾನ ಮಂತ್ರಿಯಾಗಿದ್ದಾಗಲೇ. ಆದರೆ ಅವರ ಜೊತೆಯಲ್ಲಿಯೇ ಭಾರತದ ಮೊದಲ ಗೃಹ ಸಚಿವರಾಗಿದ್ದ, ಉಕ್ಕಿನ ಮನುಷ್ಯನೆಂದೇ ಲೋಕಪ್ರಸಿದ್ದಿ ಪಡೆದಿದ್ದ, ಭಾರತದ ನೂರಾರು ರಾಜ್ಯಗಳನ್ನು ಒಟ್ಟಿಗೆ ತಂದು ಭಾರತ ಇಂದು ಭಾರತವಾಗಿ ಉಳಿಯಲಿಕ್ಕೆ ದೊಡ್ಡ ಕೊಡುಗೆ ನೀಡಿರುವ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಭಾರತರತ್ನ ಪ್ರಶಸ್ತಿ ದಯಪಾಲಿಸಿದ್ದು 1991ರಲ್ಲಿ. ಅಂದರೆ ಅವರು ಮೃತರಾದ 41 ವರ್ಷಗಳ ನಂತರ. ಆಗಲೂ ಸಹ ಪಟೇಲರಿಗೆ ಭಾರತರತ್ನ ಕೊಟ್ಟಿದ್ದು ಆಶ್ಚರ್ಯವೆನಿಸುವ ಆದರೆ ಸತ್ಯವಾದ ಒಂದು ಕಾರಣಕ್ಕಾಗಿ. 1991ರಲ್ಲಿ ರಾಜೀವ್ ಗಾಂಧಿಯವರು ಉಗ್ರಗಾಮಿಗಳ ಕೈಯಲ್ಲಿ ಮರಣ ಹೊಂದಿದ ಕೆಲವೇ ತಿಂಗಳಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಲಾಯಿತು. ಅದಾದ ನಂತರ ಯಾವ ಮುಜುಗರದ ಕಾರಣವೋ ಗೊತ್ತಿಲ್ಲ, ಪಟೇಲರನ್ನು ನೆನಪಿಸಿಕೊಂಡು ಪ್ರಶಸ್ತಿ ನೀಡಲಾಯಿತು.
ಭಾರತದ ಸಂವಿಧಾನ ಎಂದರೆ ಮನಸ್ಸಿಗೆ ತಕ್ಷಣ ಜ್ಞಾಪಕ ಬರುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್. ಧ್ವನಿ ಇಲ್ಲದ ದೊಡ್ಡ ಸಂಖ್ಯೆಯ ಭಾರತೀಯರಿಗೆ ಧ್ವನಿಯಾದ, ಸಮಾನತೆಯ ಶಕ್ತಿ ನೀಡಿದ ಈ ಮಹಾನ್ ನಾಯಕನಿಗೆ ಭಾರತ ರತ್ನ ದೊರಕಿದ್ದು 1990 ರಲ್ಲಿ. ಅಂದರೆ ಅಂಬೇಡ್ಕರ್ ಮೃತರಾಗಿ 34 ವರ್ಷಗಳ ನಂತರ. ಅಂದೂ ಸಹ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ವಿ. ಪಿ. ಸಿಂಗ್ ಅವರ ಸರ್ಕಾರ ಇದ್ದಾಗ. ಆದರೆ ಶ್ರೀಮತಿ ಇಂದಿರಾಗಾಂಧಿಯವರು ಭಾರತರತ್ನ ವಾಗಿದ್ದು ಅವರು ಪ್ರಧಾನ ಮಂತ್ರಿಯಾಗಿದ್ದಾಗಲೇ, 1971ರಲ್ಲಿ. ತಂದೆಯಂತೆ ಮಗಳು. ಲೋಕನಾಯಕ ಜಯಪ್ರಕಾಶ್ ನಾರಾಯಣರಿಗೆ ಈ ಸರ್ವೋನ್ನತ ಪ್ರಶಸ್ತಿ ದೊರಕಿದ್ದು ಅವರು ಮೃತರಾಗಿ 19 ವರ್ಷಗಳ ನಂತರ, 1998 ರಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಬಂದಾಗ. ಅಂದರೆ ಅಂಬೇಡ್ಕರ್ ಅವರಿಗೆ, ಜಯಪ್ರಕಾಶ್ ನಾರಾಯಣರವರಿಗೆ ಭಾರತರತ್ನ ಪ್ರಶಸ್ತಿ ಬರಲು ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳೇ ಬರಬೇಕಾಯಿತು.
ಭಾರತರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮ ಶ್ರೀ,... ಯಾವುದೇ ಪ್ರಶಸ್ತಿಗಳು ಲೆಕ್ಕಾಚಾರದಿಂದ ಕೂಡಿರಬಾರದು. ನಾವು ಇದ್ದಾಗ ನಮ್ಮವರಿಗೆ ಪ್ರಶಸ್ತಿ ಕೊಡುವುದು ನಮ್ಮ ಜನ್ಮಸಿದ್ಧವಾದ ಹಕ್ಕು, ನಮ್ಮ ವಿರುದ್ಧ ಇರುವವರನ್ನು ಅಪ್ಪಿತಪ್ಪಿಯೂ ನೆನಪಿಸಿಕೊಳ್ಳಲಿಕ್ಕೂ ಹೋಗುವುದಿಲ್ಲ ಎಂಬ ಧೋರಣೆ ಈ ಉನ್ನತ ಪ್ರಶಸ್ತಿಗಳಿಗೆ ಬಗೆಯುವ ದ್ರೋಹ. ಇದರೊಂದಿಗೆ ಯಾವ ವ್ಯಕ್ತಿಗೆ ಪ್ರಶಸ್ತಿಕೊಟ್ಟರೆ ನಮಗೇನು ಲಾಭ ಎಂದು ಲೆಕ್ಕಾಚಾರ ಹಾಕುವುದು ಅಕ್ಷಮ್ಯ. ಅದೇ ರೀತಿ ಈ ಹಿಂದೆ ಪ್ರಶಸ್ತಿ ಪಡೆದಿರುವ ಮಹನೀಯರು ನಮ್ಮ ವಿರುದ್ಧ್ದ ವಿಚಾರ ವ್ಯಕ್ತ ಪಡಿಸಿದರೆ, ಹೇಳಿಕೆ ನೀಡಿದರೆ ಅವರಿಂದ ಪ್ರಶಸ್ತಿ ವಾಪಸ್ಸು ಪಡೆಯಬೇಕೆಂಬ ಕೂಗೂ ಕೇಳಿಬರುತ್ತಿರುವುದು ನೈತಿಕ ದಿವಾಳಿತನ. ಲತಾಮಂಗೇಶ್ಕರ್, ಅಮರ್ಥ್ಯಸೇನ್ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ನಾವು ಆ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದಿರಬಹುದು. ಆದರೆ ನಮಗೆ ಪಥ್ಯವಾಗದಿರುವ ಅಭಿಪ್ರಾಯ ಅವರಿಂದ ಬಂದಾಗ ಈ ಸಾಧಕರಿಂದ ಭಾರತರತ್ನ ವಾಪಸ್ಸು ಪಡೆಯ ಬೇಕೆಂದು ಹೇಳುವುದು ಮೂರ್ಖತನದ ಪರಮಾವಧಿ.
ಇಂತಹ ಉನ್ನತ ಪ್ರಶಸ್ತಿಗಳು ರಾಜಕೀಯ ದಾಳಗಳಾದಾಗ ಪ್ರಶಸ್ತಿಗಳ ಮೌಲ್ಯ ಕುಸಿಯುತ್ತದೆ. ಪ್ರಶಸ್ತಿ ಪಡೆದವರನ್ನು ಅನುಮಾನದ ದೃಷ್ಟಿಯಿಂದ ನೋಡಲಾರಂಭಿಸುತ್ತಾರೆ. ಅದು ಎಂದೆಂದಿಗೂ ಆರೋಗ್ಯಕರವಲ್ಲ. ಭಾರತದ ರತ್ನಗಳನ್ನು ಗೌರವಿಸೋಣ. ಈ ಪ್ರಶಸ್ತಿ ರಾಜಕೀಯದ ಲೆಕ್ಕಾಚಾರದ ಆಯ್ಕೆ ಆಗದಿರಲಿ. ಹಾಕಿ ಗಾರುಡಿಗ ಧ್ಯಾನ್ಚಂದ್, ಭಾರತದ ರಾಜಕೀಯ ಕಂಡ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ಪ್ರಶಸ್ತಿ ನೀಡುವುದು ಅತ್ಯಂತ ಸೂಕ್ತ ಹಾಗೂ ಅಗತ್ಯ. ವಾಜಪೇಯಿಯವರಿಗೆ ಭಾರತರತ್ನ ದೊರಕಲು ಕಾಂಗ್ರೆಸ್ಸೇತರ ಸರ್ಕಾರವೇ ಬರಬೇಕೇ?
- ಎಸ್. ಸುರೇಶ್ಕುಮಾರ್, ಮಾಜಿ ಸಚಿವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


