ಅಂಕಣಗಳು

ಕೊನೆಯಿಲ್ಲದ ಗುರುತಿನ ಗೋಜಲು

Published On :

ನಂದನ್ ನೀಲೇಕಣಿ ನೇತೃತ್ವದಲ್ಲಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡುತ್ತಿರುವ ಆಧಾರ್ ಗುರುತಿನ ಚೀಟಿ ಕಡ್ಡಾಯವಾದದ್ದು ಎಂಬ ಕೇಂದ್ರದ ಪರೋಕ್ಷ ಹಠಕ್ಕೆ ಸುಪ್ರೀಂಕೋರ್ಟ್ ಕೆಲ ದಿನಗಳ ಹಿಂದೆ ಬ್ರೇಕ್ ಹಾಕಿದೆ ಎಂದು ಹೇಳಬಹುದು. ಇದರಿಂದಾಗಿ ಜನಸಾಮಾನ್ಯರಲ್ಲಿ ಕಾರ್ಡನ್ನು ಹೊಂದಬೇಕೇ ಬೇಡವೇ ಎಂಬ ಗೊಂದಲಕ್ಕೆ ತೆರೆಬಿದ್ದಿದೆ. ಇಷ್ಟಕ್ಕೂ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ವಿತರಣೆ, ವಾಹನ ಚಾಲನಾ ಪರವಾನಗಿ, ಮದುವೆ ನೋಂದಣಿ ಸೇರಿದಂತೆ ಹಲವು ಅಗತ್ಯ ವಿಚಾರಗಳಿಗೆ ಆಧಾರ್ ಕಾರ್ಡ್ ಅಗತ್ಯವೇ ಎಂಬ ವಿಚಾರಕ್ಕೆ ಯಾರಲ್ಲಿಯೂ ಉತ್ತರವಿಲ್ಲ.
ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾಯರು ಸಾರ್ವಜನಿಕರಿಗೆ ಪಡಿತರ ವಿತರಣೆಗೆ ಕಾರ್ಡ್ ಕಡ್ಡಾಯ ಎಂದು ಹೇಳಿದ್ದರು. ಇದರಿಂದಾಗಿ ನೂರಾರು ಜನರು ಫಜೀತಿಗೆ ಒಳಗಾಗಿದ್ದಾರೆ. ಕಾರಣ ಇಷ್ಟೇ. ಆಧಾರ್ ಕಾರ್ಡ್‌ಗೆ ಹೆಸರು ನೋಂದಾಯಿಸಿದ ತಕ್ಷಣ, ಫೋಟೋ ತೆಗೆಸಿಕೊಂಡ ಕೂಡಲೇ ಅದು ಸಿಗುವುದಿಲ್ಲ. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಅದು ಕೈಸೇರಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಹಾಗಿದ್ದರೆ ಕಾರ್ಡ್ ಇಲ್ಲದಿದ್ದರೆ ಪಡಿತರವೇ ಸಿಗುವುದಿಲ್ಲವೇ?
10 ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಗುರುತಿನ ಚೀಟಿ ವಿತರಿಸುವ ಕಾರ್ಯಕ್ಕೆ ಅದು ಮುಂದಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳೂ ಹುಯಿಲೆಬ್ಬಿಸಿದ್ದವು. ಒಂದರ್ಥದಲ್ಲಿ ನೋಡುವುದಿದ್ದರೆ ಯುಪಿಎ ಸರ್ಕಾರ ಜಾರಿ ಮಾಡಿದ್ದು ವಾಜಪೇಯಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಗುರುತಿನ ಚೀಟಿ ಯೋಜನೆಯನ್ನೇ! ಅದನ್ನು ನೀಲೇಕಣಿ ಅವರ ನೇತೃತ್ವದಲ್ಲಿ ಜಾರಿ ಮಾಡಿದೆ ಅಷ್ಟೇ.
ಈಗ ಏನಾಗಿದೆ ಅಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಯಾವುದೇ ಒಂದು ಯೋಜನೆಯ ಫಲವನ್ನು ಜನರು ಪಡೆಯಬೇಕು ಎಂದಾದರೆ ಮೊದಲು ಕೇಳುವ ಪ್ರಶ್ನೆ ಎಂದರೆ ನಿಮ್ಮಲ್ಲಿ ಆಧಾರ್ ಕಾರ್ಡ್ ಇದೆಯಾ ಎಂದು. ಎಲ್ಲಿಯವರೆಗೆ ಪರಿಸ್ಥಿತಿ ಇದೆ ಎಂದರೆ ಗುರುತು ಪ್ರಾಧಿಕಾರದಿಂದ ಕೊಡಮಾಡುವ ಚೀಟಿ ಇಲ್ಲದಿದ್ದರೆ ಈ ದೇಶದ ಪ್ರಜೆಗಳೇ ಅಲ್ಲ ಎಂಬಂಥ ವಾತಾವರಣವನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ. ಅಂಥದ್ದೊಂದು ಘಟನೆಯನ್ನು ಇಲ್ಲಿ ಹೇಳಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ ಆಧಾರ್ ಕಾರ್ಡ್‌ಗಾಗಿ ಬೆಂಗಳೂರಿನ ರಾಜಾಜಿನಗರದ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಕುಟುಂಬಕ್ಕೆ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಪಡಿತರ ವಸ್ತುಗಳನ್ನು ಕೊಡದೆ ನ್ಯಾಯಬೆಲೆ ಅಂಗಡಿಯಾತ ವಾಪಸ್ ಕಳುಹಿಸಿದ ಘಟನೆಯನ್ನು ಪ್ರಸ್ತಾಪಿಸಿದ್ದರು.
ಒಂದು ಹೊಸ ವ್ಯವಸ್ಥೆ ಜಾರಿಗೆ ಬರುವ ಮುನ್ನವೇ ಅದನ್ನು ಎಲ್ಲರೂ ಹೊಂದಬೇಕೆಂದು ತಾಕೀತು ಮಾಡಿದರೆ ಹೇಗೆ? ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಎಲ್ಲವೂ ಕ್ರಮಪ್ರಕಾರವಾಗಿ ನಡೆಯಿತು, ಆತ ಈ ದೇಶದ ಪ್ರಜೆ ಎನ್ನುವುದಕ್ಕೆ ಮಾನ್ಯತೆ ಸಿಕ್ಕಂತಾಯಿತೆ? ಇಲ್ಲದಿದ್ದರೆ ಆತ ಪರದೇಶದವನೇ?
2011ರ ಆ.11ರಂದು ಮಹಾರಾಷ್ಟ್ರದ ತೆಂಬ್ಲಿ ಗ್ರಾಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ಮಹತ್ವಾಕಾಂಕ್ಷೆ ಎಂದು ಹೇಳಿಕೊಳ್ಳಲಾಗಿದ್ದ ಯೋಜನೆಗೆ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದವರೆಲ್ಲ ಯೋಜನೆಯ ಬಗ್ಗೆ ಮಾರುದ್ದದ ಭಾಷಣ ಮಾಡಿ, ಕನಸುಗಳನ್ನು ಬಿತ್ತಿದ್ದಿದ್ದರು. ಆದರೆ ವಾಸ್ತವವೇ ಬೇರೆಯಿದೆ. ಕೇಂದ್ರ ಸರ್ಕಾರದ ಈ ಯೋಜನೆಯಿಂದ ಜನರಿಗೆ ಎಷ್ಟು ಲಾಭವಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿತ್ತೇ ವಿನಃ ಹಳ್ಳಿ ಹಳ್ಳಿಗಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಲಿಲ್ಲ.  ಈ ಹಿಂದಿನ ವರ್ಷಗಳಲ್ಲಿ ಕಾರ್ಡು ಇಲ್ಲದೆ ದೇಶದ ಜನರ ಜೀವನ, ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಸಿಕ್ಕಿರಲಿಲ್ಲವೇ? ಈಗ ಹೊಸತಾಗಿ ಯಾಕೆ ಆಧಾರ್ ಬೇಕು, ಅದಿಲ್ಲದಿಲ್ಲದಿದ್ದರೆ ಏನೂ ಸಿಗುವುದಿಲ್ಲ ಎಂಬ ಭಯವನ್ನು ಕೇಂದ್ರ ಸರ್ಕಾರ ಜನರಲ್ಲಿ ಉಂಟು ಮಾಡುತ್ತಿರುವುದೇಕೆ? ಹೀಗಾಗಿ ಯಾವುದೋ ಒಂದು ಲಾಬಿಗೆ ಕೇಂದ್ರ ಮಣಿದಿದೆ ಎಂಬ ಸಂಶಯ ಜನರಲ್ಲಿ ಮೂಡುತ್ತದೆ. ಏಕೆಂದರೆ ಚುನಾವಣಾ ಆಯೋಗದ ಗುರುತಿನ ಚೀಟಿ, ಬ್ಯಾಂಕ್ ವ್ಯವಹಾರದ ಪಾಸ್  ಪುಸ್ತಕ, ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ ಹಲವು ಗುರುತಿನ ಚೀಟಿಗಳಿವೆ. ಅಡುಗೆ ಅನಿಲ ಸಬ್ಸಿಡಿ ವಿತರಣೆ, ಯೋಜನೆಗಳ ಫಲಾನುಭವಿಗಳ ಗುರುತಿಸಲು ಇವುಗಳನ್ನು ಸಮರ್ಥವಾಗಿ ಬಳಸಬಹುದಲ್ಲವೇ?
ಸುಪ್ರೀಂಕೋರ್ಟ್ ಆಕ್ಷೇಪಕ್ಕೆ ಉತ್ತರಿಸುವ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಆಧಾರ್ ಕಾರ್ಡನ್ನು ಫಲಾನುಭವಿಗಳನ್ನು ಗುರುತಿಸಲು ಕಡ್ಡಾಯ ಮಾಡಿಲ್ಲ. ಅದೇನಿದ್ದರೂ ಜನರ ಇಚ್ಛೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಹಾಗಿದ್ದರೆ ಪ್ರಮುಖ ಪತ್ರಿಕೆಗಳಲ್ಲಿ ಅಡುಗೆ ಅನಿಲ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ. ಇಲ್ಲದಿದ್ದರೆ ಅದು ಸಿಗುವುದೇ ಇಲ್ಲ ಎಂಬರ್ಥದಲ್ಲಿ ಯಾಕೆ ಸರ್ಕಾರ ಜಾಹೀರಾತು ನೀಡಬೇಕು? ಹಾಗಿದ್ದಲ್ಲಿ ಯೋಜನೆ ಜಾರಿಗೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಗಳ ಒತ್ತಡಕ್ಕೆ ಸರ್ಕಾರ ಮಣಿದಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇದರ ಜತಗೆ ಈ ಹಿಂದೆ ಕೇಂದ್ರ ಗೃಹ ಸಚಿವ ಪಳನಿಯಪ್ಪನ್ ಚಿದಂಬರಂ ಕೂಡ ಜನರಿಂದ ಸಂಗ್ರಹಿತವಾಗಿರುವ ಮಾಹಿತಿಗಳ ರಕ್ಷಣೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜತೆಗೆ ಹಣಕಾಸಿಗಾಗಿನ ಸಂಸತ್ತಿನ ಸ್ಥಾಯಿ ಸಮಿತಿ ಕೂಡ ಯೋಜನೆ ತಿರಸ್ಕರಿಸಿತ್ತು.
ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಶುಕ್ಲಾ ಚಳಿಗಾಲದ ಅಧಿವೇಶನದಲ್ಲಿ ಗುರುತು ಪ್ರಾಧಿಕಾರಕ್ಕೆ ಕಾನೂನಿನ ಮಾನ್ಯತೆ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದಿದ್ದಾರೆ. ಇಷ್ಟೆಲ್ಲ ಸರ್ಕಸ್ ಯಾಕೆ ಸ್ವಾಮಿ?
ಜತೆಗೆ ರಾಷ್ಟ್ರೀಯ ಜನಸಂಖ್ಯಾ ಕೋಷ್ಟಕ (ಎನ್‌ಪಿಆರ್) ಕೂಡ ತನ್ನದೇ ಆದ ಗುರುತು ಚೀಟಿ ಜಾರಿಗೆ ತರುತ್ತದಂತೆ. ಹಾಗಿದ್ದರೆ ಮುಂದಿನ ದಿನಗಳಲ್ಲಿ ಯಾವುದೆಲ್ಲ ಗುರುತಿನ ಚೀಟಿ ಇದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೊಂದು ಚೀಟಿ ತರುವ ಪ್ರಯತ್ನ ಕೇಂದ್ರದಿಂದ ಆಗಲಿದೆಯೋ ಯಾರಿಗೆ ಗೊತ್ತು?

 - ಮಿತ್ತಾಳ ನಾರಾಯಣ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.