ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ನಾನು ಏನಿಲ್ಲವೆಂದರೂ ಕನಿಷ್ಠ ಐವತ್ತು ಸಲ ಭೇಟಿಯಾಗಿರಬಹುದು. ಅವರು ಎಲ್ಲ ಐವತ್ತು ಸಂದರ್ಭಗಳಲ್ಲೂ ನನ್ನನ್ನು ಕಂಡಾಗ 'ನಮಸ್ಕಾರ ವಿಶ್ವೇಶ್ವರ ಹೆಗಡೆಯವರೇ' ಎಂದೇ ಮಾತಾಡಿಸುತ್ತಿದ್ದರು. ಹಲವಾರು ಸಲ ವೇದಿಕೆಯಲ್ಲಿ ಭಾಷಣದಲ್ಲೂ ಅವರ ಪಾಲಿಗೆ ನಾನು ವಿಶ್ವೇಶ್ವರ ಹೆಗಡೆಯೇ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚೀನಾ ಪ್ರವಾಸದಿಂದ ವಾಪಸ್ ಬಂದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡುತ್ತಾ ಅಲ್ಲಿ ತಮಗಾದ ಅನುಭವವನ್ನು ಸ್ವಾರಸ್ಯಕರವಾಗಿ ಬಣ್ಣಿಸಿದ್ದು ನೆನಪಿರಬಹುದು. ಅದರಲ್ಲೂ ವಿಶೇಷವಾಗಿ ಚೀನಾದ ನಾಯಕರ ಹೆಸರುಗಳನ್ನು ಉಚ್ಚರಿಸುವಾಗ ತಮಗಾದ ತೊಂದರೆ, ತಮ್ಮ ಹೆಸರನ್ನು ಹೇಳಲು ಚೀನಾ ನಾಯಕರು ಪಟ್ಟ ಹರಸಾಹಸದ ಬಗ್ಗೆ ಸಹ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ಕೊನೆಗೂ ಅಲ್ಲಿನ ನಾಯಕರಿಗೆ ನಮ್ಮ ಮುಖ್ಯಮಂತ್ರಿಯವರ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಲು ಬರಲೇ ಇಲ್ಲ. ಇದೇ ಮಾತನ್ನು ಇತ್ತೀಚೆಗೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯ ಔತಣಕೂಟದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹ ಹೇಳಿದರೆಂದು ತಡವಾಗಿ ವರದಿಯಾಗಿದೆ. ಪುಟಿನ್ ಅವರಿಗೆ ಚೀನಾ ಹಾಗೂ ಜಪಾನಿಯರ ಹೆಸರು ಹೇಳಲು ಅವರ ನಾಲಿಗೆ ಹೊರಳುವುದಿಲ್ಲವಂತೆ. ತಾವು ಭೇಟಿಯಾಗಲಿರುವ ಚೀನಾ ಹಾಗೂ ಜಪಾನಿ ನಾಯಕರ ಹೆಸರುಗಳನ್ನು ಹತ್ತಾರು ಸಲ ಸರಿಯಾಗಿ ಉಚ್ಚರಿಸಿ ಅಭ್ಯಾಸ ಮಾಡಿಕೊಳ್ಳುತ್ತಾರಂತೆ. ತಪ್ಪಾಗಿ ಅವರ ಹೆಸರನ್ನು ಹೇಳಿ ಪ್ರಮಾದವಾಗಬಾರದೆಂದು ಪುಟಿನ್ ಸಾಕಷ್ಟು ಎಚ್ಚರವಹಿಸುತ್ತಾರಂತೆ. ಹೀಗಿರುವಾಗ ನಮ್ಮ ಸಿದ್ದರಾಮಯ್ಯನವರಿಗೆ ಹೇಗಾಗಿರಬೇಡ?
ಚೀನಾದ ನಾಯಕರ ಹೆಸರುಗಳನ್ನು ಸರಿಯಾಗಿ ಉಚ್ಚರಿಸಿದರೂ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಕಷ್ಟ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಇದು ಪುಟಿನ್ ಅವರ ಸಮಸ್ಯೆಯೂ ಹೌದು. 'ಹೆಚ್ಚೆಂದರೆ ಮೂರು -ನಾಲ್ಕು ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಹೆಸರುಗಳು ಹಾರಿ ಹೋಗುತ್ತವೆ' ಎಂಬುದು ಅವರ ಅನುಭವ.
ಹೆಸರನ್ನು ಸರಿಯಾಗಿ ನೆನಪಿಟ್ಟುಕೊಳ್ಳುವುದು ಹಾಗೂ ಸ್ಪಷ್ಟವಾಗಿ ಉಚ್ಚರಿಸುವುದು ನಾವು ಆಯಾ ವ್ಯಕ್ತಿಗಳಿಗೆ ತೋರುವ ಗೌರವ ಎಂಬ ಮಾತಿದೆ. ಆದರೆ ಒಮ್ಮೊಮ್ಮೆ ನೆನಪು ಕೈ ಕೊಡುತ್ತದೆ. ಎದುರಿಗೆ ಬಂದ ವ್ಯಕ್ತಿಯ ಹೆಸರೇ ನೆನಪಾಗುವುದಿಲ್ಲ. ಇವರನ್ನು ಎಲ್ಲೋ ನೋಡಿದ್ದೇನಲ್ಲ ಎಂದು ನೆನಪಿನ ಬುಟ್ಟಿಯನ್ನು ಕೆದಕಲಾರಂಭಿಸುತ್ತೇವೆ. ಯಾರನ್ನೋ, ಇನ್ಯಾರೋ ಎಂದು ಭಾವಿಸಿ ಮಾತಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ನಾನು ಏನಿಲ್ಲವೆಂದರೂ ಕನಿಷ್ಠ ಐವತ್ತು ಸಲ ಭೇಟಿಯಾಗಿರಬಹುದು. ಅವರು ಎಲ್ಲ ಐವತ್ತು ಸಂದರ್ಭಗಳಲ್ಲೂ ನನ್ನನ್ನು ಕಂಡಾಗ 'ನಮಸ್ಕಾರ ವಿಶ್ವೇಶ್ವರ ಹೆಗಡೆಯವರೇ' ಎಂದೇ ಮಾತಾಡಿಸುತ್ತಿದ್ದರು. ಹಲವಾರು ಸಲ ವೇದಿಕೆಯಲ್ಲಿ ಭಾಷಣದಲ್ಲೂ ಅವರ ಪಾಲಿಗೆ ನಾನು ವಿಶ್ವೇಶ್ವರ ಹೆಗಡೆಯೇ. ಪ್ರತಿಸಲವೂ ನಾನು 'ಸಾರ್ ನಾನು ವಿಶ್ವೇಶ್ವರ ಹೆಗಡೆ ಅಲ್ಲ, ವಿಶ್ವೇಶ್ವರಭಟ್' ಎಂದು ಹೇಳುತ್ತಿದ್ದೆ. ಅವರು 'ಹೌದು ಹೌದು ವಿಶ್ವೇಶ್ವರಭಟ್' ಅಂತ ತಿದ್ದಿಕೊಳ್ಳುತ್ತಿದ್ದರು. ಒಮ್ಮೆ ಅವರು ನನ್ನನ್ನು ಸಂತೈಸಲೆಂದೋ, ತಮ್ಮ ತಪ್ಪಿಗೆ ಸಮಜಾಯಿಷಿ ನೀಡಲೆಂದೋ, 'ಭಟ್ಟರೇ ತಪ್ಪು ತಿಳಿಬ್ಯಾಡ್ರಿ, ನಾನು ನಿಮ್ಮ ಶಾಸಕ ಇದ್ದಾರಲ್ಲ ವಿಶ್ವೇಶ್ವರ ಹೆಗಡೆ ಸಿಕ್ಕಾಗಲೆಲ್ಲ ಅವರನ್ನು ವಿಶ್ವೇಶ್ವರ ಭಟ್ಟರೇ ಎಂದು ಮಾತಾಡಿಸುತ್ತೇನೆ' ಎಂದು ಪೆದ್ದುಪೆದ್ದಾಗಿ ಹೇಳಿದ್ದರು. ಕೆಲವರು ಹೆಸರಿನ ವಿಷಯದಲ್ಲೂ ಈ ರೀತಿ ಮಾಡುವುದುಂಟು.
ಪುಟಿನ್ ಅವರ ಅನುಭವ ಸಾರ್ವತ್ರಿಕವಾದುದು. ಕೆಲವರ ಹೆಸರುಗಳನ್ನು ಹೇಳಲು ಬಹಳ ಪ್ರಯಾಸ ಪಡಬೇಕಾಗುತ್ತದೆ. ಶಿಕ್ಷಣತಜ್ಞ ಮುಡಿಂಬಡಿತ್ತಾಯ ಅವರ ಹೆಸರನ್ನು ಕೇಳಿರಬಹುದು. ಇವರ ಹೆಸರನ್ನು ಹೇಳಲು ಅನೇಕರು ತಿಣುಕಾಡುತ್ತಾರೆ. ಒಮ್ಮೆ ಕಾರ್ಯಕ್ರಮದಲ್ಲಿ ಭಾಷಣಕಾರರೊಬ್ಬರು ನಾಲ್ಕೈದು ಬಾರಿ ಅವರ ಹೆಸರನ್ನು ಹೇಳಲು ಪ್ರಯಾಸಪಟ್ಟು ಕೊನೆಗೂ ಸರಿಯಾಗಿ ಹೇಳಲಾಗದೇ, ಕೊನೆಯ ಎರಡಕ್ಷರಗಳನ್ನು ನುಂಗಿದ್ದರು. ಪುಣ್ಯವಶಾತ್ ಆ ಸಭೆಯಲ್ಲಿ ಮುಡಿಂಬಡಿತ್ತಾಯ ಅವರು ಇರಲಿಲ್ಲ.
ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ಹೆಸರು ಬಹಳ ಸರಳವಾಗಿದೆಯೆಂದು ಅನಿಸಬಹುದು. ಆದರೆ ಅನೇಕರಿಗೆ ಅವರ ಹೆಸರು ಬಾಯಲ್ಲಿ ಸ್ಪಷ್ಟವಾಗಿ ಉಚ್ಚಾರವಾಗುವುದಿಲ್ಲ. ಮಾಜಿ ಉಪಮುಖ್ಯಮಂತ್ರಿ ಅಶೋಕ ಅವರಿಂದ ಶೋಭಾ ಕರಂದ್ಲಾಜೆಯವರ ಹೆಸರನ್ನು ಸರಿಯಾಗಿ ಹೇಳಿಸಿಬಿಡಿ, ಉಹುಂ, ಸಾಧ್ಯವೇ ಇಲ್ಲ. ವೇದಿಕೆಯ ಮೇಲಿದ್ದಾಗ ಶೋಭಾ ಅವರ ಹೆಸರನ್ನು ಹೇಳುವ ಸಂದರ್ಭದಲ್ಲಿ ಅಶೋಕ್ ಅವರು 'ಕರಂದ್ಲಾಜೆ' ಎಂದು ಅಪ್ಪಿತಪ್ಪಿಯೂ ಹೇಳುತ್ತಿರಲಿಲ್ಲ. ಅಡ್ಡ ಹೆಸರನ್ನು ಬಿಟ್ಟು ಹೆಸರನ್ನಷ್ಟೇ ಹೇಳುತ್ತಿದ್ದರು. ಅವರ ಹೆಸರನ್ನು ತಮಗೆ ಸ್ಪಷ್ಟವಾಗಿ ಉಚ್ಚರಿಸಲು ಬರುವುದಿಲ್ಲ ಎಂಬುದು ಅಶೋಕ್‌ಗೆ ಗೊತ್ತಿದೆ.
ಖ್ಯಾತ ಹಾಲಿವುಡ್ ನಟ Arnold Schwarzeneggeಗೆ ಹಾಗೆಂದು ಹೆಸರಿಟ್ಟವರು ಸಹ ಸರಿಯಾಗಿ ಉಚ್ಚರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಹೆಸರನ್ನು ಹೇಳುವಾಗ ಎಲ್ಲರೂ ಅವರು ಸಿನಿಮಾದಲ್ಲಿ ಮಾಡುವ ಸಾಹಸಕ್ಕಿಂತ ಹೆಚ್ಚು ಪ್ರಯಾಸ ಪಡುತ್ತಾರೆ. ತಮಾಷೆಯಿಂದ 'ಅರ್ನಾಲ್ಡ್ ಶಿವಾಜಿನಗರ' ಎಂದು ಹೇಳುವುದೂ ಉಂಟು. 'ಆರ್ನಾಲ್ಡ್ ಶ್ವೆನೆಗರ್' ಎಂಬುದು ಸರಿಯಾದ ಉಚ್ಚಾರ ಎಂದು ಹೇಳಿದರೆ, 'ಇಲ್ಲ, ಅದು ಸರಿ ಅಲ್ಲ. ಸರಿಯಾದ ಉಚ್ಚಾರ.....' ಎಂದು ವಾದಿಸುವವರೂ ಇದ್ದಾರೆ. ಅವರಿಗಿಂತ ಅವರ ಹೆಸರೇ ವಿವಾದ ಸೃಷ್ಟಿಸುತ್ತದೆ.
'ದಿ ಮಮ್ಮಿ ರಿಟರ್ನ್ಸ್' ಹಾಗೂ 'ಕಾಂಗೋ' ಸಿನಿಮಾದಲ್ಲಿ ನಟಿಸಿದ ಖ್ಯಾತ ನಟ Adewale Akinnuoye Agbaje ಹೆಸರನ್ನು ಸಹ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುವುದನ್ನು ಕೇಳಿದ್ದೇವೆ. ಆತನೊಬ್ಬನೇ ಸರಿಯಾಗಿ ಹೇಳಬಹುದು. ಖ್ಯಾತ ಅಮೆರಿಕನ್ ನಟಿMatthew Mcconaughey ಹೆಸರನ್ನು ಸಹ ಎಲ್ಲರೂ ಮ್ಯಾಥ್ಯೂ ಎಂದಷ್ಟೇ ಹೇಳಿ ಅಲ್ಲಿಗೇ ನಿಲ್ಲಿಸುತ್ತಾರೆ. ಖ್ಯಾತ ಗಾಯಕಿ, ಗೀತರಚನೆಗಾರ್ತಿ ಹಾಗೂ ಹವ್ಯಾಸಿ ನಟಿ «Ún Bjork Gudmundsdotti ಹೆಸರನ್ನು ಯಾರೂ ಸರಿಯಾಗಿ ಹೇಳಿದ್ದನ್ನು ನಾನಂತೂ ಕೇಳಿಲ್ಲ. ಅವಳ ಹೆಸರನ್ನು ಓದಿದ ತಕ್ಷಣ ಅನಿಸಿದ್ದೇನೆಂದರೆ ಆಕೆ ಐಸ್‌ಲ್ಯಾಂಡಿನವಳು ಅಂತ. ಯಾಕೆಂದರೆ ಐಸ್‌ಲ್ಯಾಂಡ್‌ನಲ್ಲಿ ಎಲ್ಲ ಮಹಿಳೆಯರ ಹೆಸರೂ dottir ನಿಂದಲೇ ಹಾಗೂ ಗಂಡಸರ ಹೆಸರು 'ಸನ್'ದಿಂದ (ಹಾಲಿ ಅಧ್ಯಕ್ಷರ ಹೆಸರು ಓಲಾಫರ್ ಗ್ರಿಮ್‌ಸನ್) ಅಂತ್ಯವಾಗುತ್ತದೆ.
ಹವಾಯ್ ದ್ವೀಪದ ಜೆನಿಸ್ ಎಂಬ ಮಹಿಳೆಯ ಸರ್‌ನೇಮ್ (ಅಡ್ಡ ಹೆಸರು)ನಲ್ಲಿ ಮೂವತ್ತೈದು ಅಕ್ಷರಗಳಿದ್ದ (KeihanaikukauaKahihuliheekahaunaele) ಕತೆ ಗೊತ್ತೇ ಇದೆ. ಅವಳ ಅಡ್ಡ ಹೆಸರನ್ನು ಅವಳೊಬ್ಬಳೇ ಬರೆಯಬಲ್ಲಳು ಹಾಗೂ ಉಚ್ಚರಿಸಬಲ್ಲಳು. ಇವಳಿಗಾಗಿ ಅವಳ ದೇಶದ ಪಾಸ್‌ಪೋರ್ಟ್, ಐಡೆಂಟಿಟಿ ಕಾರ್ಡ್ ನಿಯಮಗಳನ್ನು ಬದಲಿಸಲಾಯಿತು. ಅಡ್ಡಹೆಸರನ್ನು ಕಿರಿದುಗೊಳಿಸುವಂತೆ ಸೂಚಿಸಿದಾಗ ಆಕೆ ಕೋರ್ಟ್‌ಗೆ ಹೋದಳು. ಅದು ತನ್ನ ಗುರುತು, ಅಸ್ತಿತ್ವದ ಪ್ರತೀಕ ಎಂದು ವಾದಿಸಿ ಗೆದ್ದಳು.
ನನ್ನ ಸ್ನೇಹಿತರಾದ ಪ್ರವೀಣ್ ಎಂಬುವವರ ಅಡ್ಡಹೆಸರು 'ದೊಡ್ಡ ಕುಂಬಳಕಾಯಿ' ಅಂತ. ಅವರೆಂದೂ ತಮ್ಮನ್ನು ಪ್ರವೀಣ್ ಎಂದು ಎಂದೆಂದಿಗೂ ಪರಿಚಯ ಮಾಡಿಕೊಂಡಿಲ್ಲ. ನಾನು ಪ್ರವೀಣ್ ದೊಡ್ಡ ಕುಂಬಳಕಾಯಿ ಎಂದೇ ಪರಿಚಯಿಸಿಕೊಳ್ಳುತ್ತಾರೆ. ನಾವು ಚುಟುಕಾಗಿ ಪ್ರವೀಣ್ ಡಿ.ಕೆ. ಕಾಯಿ ಅಂದರೆ ಅಥವಾ ಪಿ.ಡಿ.ಕೆ. ಕಾಯಿ ಅಂದರೆ ಅಥವಾ ಪ್ರವೀಣ್ ಪಿ.ಡಿ.ಕೆ. ಅಂದರೆ 'ಇಲ್ಲ ಇಲ್ಲ ಪ್ರವೀಣ್ ದೊಡ್ಡಕುಂಬಳಕಾಯಿ' ಅಂತಾನೇ ಪರಿಚಯಿಸಿಕೊಂಡು, ಹಾಗೇ ಕರೆಯುವಂತೆ ಒತ್ತಾಯಿಸುತ್ತಾರೆ. ಅಚ್ಚರಿಯೆಂದರೆ ಅವರ ಎಂಟು ವರ್ಷದ ಮಗ ಸ್ಕಂದ ಸಹ 'ನಾನು ಸ್ಕಂದ ದೊಡ್ಡಕುಂಬಳಕಾಯಿ' ಎಂದು ಅಭಿಮಾನದಿಂದ ಹೇಳುತ್ತಾನೆ. 'ನನ್ನ ಹೆಸರಿನ ಮುಂದೆ ದೊಡ್ಡಕುಂಬಳಕಾಯಿ ಹೊರಟು ಹೋದರೆ ನನ್ನತನ ಹೊರಟು ಹೋದಂತೆ. ಅಮೆರಿಕಕ್ಕೆ ಹೋದಾಗ ಸ್ವಲ್ಪ ತೊಂದರೆಯಾಗುತ್ತದೆ. ಆ ಕಾರಣಕ್ಕೆ ನಾನ್ಯಾಕೆ ನನ್ನ ಹೆಸರು ಬದಲಿಸಿಕೊಳ್ಳಲಿ?' ಎಂಬುದು ಪ್ರವೀಣ್‌ನ ವಾದ. ಒಪ್ಪಬೇಕಾದ್ದೇ.
ಇನ್ನು ನನ್ನ ಹೆಸರು. ವಿದೇಶಿಯರಿಗೆ ಹತ್ತು ಸಲ ಹೇಳಿ ಅಂದ್ರೆ ಅದೇ ಅವರಿಗೆ ಶಿಕ್ಷೆಯಾದೀತು. 'ವಿಶ್...ವೇಶ್..ವಾರ್' ಎಂದು ಉಚ್ಚರಿಸುತ್ತಾರೆ.
ಹೆಸರಿನ ಬಗ್ಗೆ ಬಿchi ಹೇಳಿದ್ದು ಎಷ್ಟು ಸತ್ಯ ನೋಡಿ. 'ಹೆಸರಿಗೆ ಹೆಸರು ಎಂದು ಹೆಸರಿಟ್ಟು ಹೆಸರುವಾಸಿಯಾದವನ ಹೆಸರೇ ಹೇಳ ಹೆಸರಿಲ್ಲದಿರುವಾಗ ಹೆಸರಿಗೇಕೆ ಹೆಸರು?'
ಬಾಬುರಾವ್ ಪಟೇಲ್ ಪ್ರಶ್ನೋತ್ತರ
ಬಾಬುರಾವ್ ಪಟೇಲ್ ಅಂದ್ರೆ ಈಗಿನ ಪತ್ರಕರ್ತರಿಗಾಗಲಿ, ಓದುಗರಿಗಾಗಲಿ ಅಪರಿಚಿತ ಹೆಸರು. ಅದೇ ಅರವತ್ತು, ಎಪ್ಪತ್ತು ವರ್ಷ ದಾಟಿದವರು ಆ ಹೆಸರು ಕೇಳಿದಾಕ್ಷಣ ಪುಳಕಗೊಳ್ಳುತ್ತಾರೆ. ನಾನು 'ವಿಜಯ ಕರ್ನಾಟಕ' ದಲ್ಲಿದ್ದಾಗ ಬಾಬುರಾವ್ ಪಟೇಲ್ ಬಗ್ಗೆ ಸುಮಾರು ಮೂವತ್ತೈದು ವಾರಗಳ ಕಾಲ ಬರೆದಿದ್ದೆ. ಅವರು ಫಿಲ್ಮ್ ಇಂಡಿಯಾ ಹಾಗೂ ಮದರ್ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಆ ಪತ್ರಿಕೆಯಲ್ಲಿ ಓದುಗರು ಕೇಳುವ ಪ್ರಶ್ನೆಗಳಿಗೆ ಬಾಬುರಾವ್ ಪಟೇಲ್ ಉತ್ತರಿಸುತ್ತಿದ್ದರು. ಈ ಪ್ರಶ್ನೋತ್ತರಗಳೇ ಇಪ್ಪತ್ತು-ಇಪ್ಪತ್ತೈದು ಪುಟಗಳಿರುತ್ತಿದ್ದವು. ಇದನ್ನು ಓದಲೆಂದೇ ಜನ ಅವರ ಪತ್ರಿಕೆಯನ್ನು ಖರೀದಿಸುತ್ತಿದ್ದರು. ಪಟೇಲರು ಯಾರನ್ನೂ ಬಿಡುತ್ತಿರಲಿಲ್ಲ, ನೇರವಾಗಿ ತಿವಿಯುತ್ತಿದ್ದರು. ಕೆಲವು ಪ್ರಶ್ನೋತ್ತರಗಳನ್ನು ಮೆಲುಕು ಹಾಕಬಹುದು.
ರಿಷಿ ಕಪೂರ್ ಏನು ಮಾತಾಡುತ್ತಾರೆಂಬುದು ಗೊತ್ತೇ ಆಗುವುದಿಲ್ಲವಲ್ಲ?
-ಅದಕ್ಯಾಕೆ ಚಿಂತೆ? ಅವರಿಗೂ ಅರ್ಥವಾಗುವುದಿಲ್ಲ!
ನಟ ಧರ್ಮೇಂದ್ರನಿಗೆ ವೆರೈಟಿ ವೆರೈಟಿ ಫುಡ್ ಅಂದ್ರೆ ಬಹಳ ಇಷ್ಟವಂತೆ?
-ಅದನ್ನು ಅವನು ಫುಡ್‌ಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರೆ ಒಳ್ಳೆಯದಿತ್ತು!
ಆರೆಸ್ಸೆಸ್ ಒಂದು ಕೋಮುವಾದಿ ಸಂಘಟನೆ ಎಂದು ನನಗೆ ಅನಿಸುತ್ತಿಲ್ಲ?
-ಸರಿ, ಬೆನ್ನುಮೂಳೆ ಇಲ್ಲದವರು ಕೋಮುವಾದಿಯಾಗುವುದು ಸಾಧ್ಯವಿಲ್ಲ!
ನಮ್ಮ ಪತ್ರಕರ್ತರಿಗೆ ನಿಮ್ಮ ಉಪದೇಶವೇನು?
-ನೀವು ಬರೆದಿದ್ದೇ ವೇದವಾಕ್ಯ ಅಲ್ಲ. ಆದರೆ ದುರ್ದೈವ ಅಂದ್ರೆ ಜನ ಹಾಗೆ ಭಾವಿಸುತ್ತಾರೆ. ಅಯೋಗ್ಯತೆಯಿಂದ ಶೀಘ್ರ ಮುಕ್ತರಾಗಿ.
ಹಿಂದಿ ಸಿನಿಮಾ ನಟಿಯರ ಮೈ ನುಣುಪಾಗಿರಲು ಕಾರಣವೇನು?
-ಪೆದ್ದ! ಶೇವ್ ಮಾಡಿಕೊಂಡ ಮೈ ಎಂದೂ ನುಣುಪಾಗಿರಲು ಸಾಧ್ಯವಿಲ್ಲ.
ಹಿಂದುಗಳು ನಿಜಕ್ಕೂ ಸಹಿಷ್ಣುಗಳಾ?
-ಮೂಲತಃ ಹಿಂದುಗಳು ಪುಕ್ಕಲುಗಳು, ಕೈಲಾಗದವರು. ಇದನ್ನು ಮುಚ್ಚಿಕೊಳ್ಳಲು ಸಹಿಷ್ಣುಗಳು ಅಂತ ತಮ್ಮನ್ನು ಕರೆದುಕೊಳ್ಳುತ್ತಾರೆ.
ದೇವಾನಂದ ಶುದ್ಧ ಶಾಖಾಹಾರಿಯಂತೆ ನಿಜಾನಾ?
-ಈ ವಿಷಯದಲ್ಲಿ ಆತ ಮಹಾ ಸುಳ್ಳುಗಾರ. ಆತ ಕದ್ದು ಮಟನ್ ತಿಂತಾನೆ. ಆತನಿಗೆ ಎಳೆಯ ಕುರಿ ಮಾಂಸ ಅಂದ್ರೆ ಬಹಳ ಇಷ್ಟ!
- ವಿಶ್ವೇಶ್ವರ ಭಟ್