ಹುಸಿ ಜಾತ್ಯತೀತರ ಹಸಿ ಸುಳ್ಳುಗಳು
ಜಮೀಯತ್-ಇ-ಉಲೇಮಾ ಹಿಂದ್ ಮುಖ್ಯಸ್ಥ ಮೌಲಾನಾ ಮೆಹ್ಮೂದ್ ಮದನಿ ಅವರು ನರೇಂದ್ರ ಮೋದಿಯವರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವು ಸಹಜ ಮತ್ತು ಸಾಂದರ್ಭಿಕ ಸತ್ಯವಾಗಿದೆ. ಅವರು ಮೋದಿಯವರ ಪರವಾಗಿ ಮಾತನಾಡಿದ್ದರೂ, ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿರುವ ವೋಟ್ ಬ್ಯಾಂಕ್ ರಾಜಕೀಯದ ಹುನ್ನಾರವನ್ನು ಹೊರಗೆಡವಿದ್ದಾರೆ. ಏರಲಾರದ ಮಂಗ ಮರ ಡೊಂಕು ಎಂದಿತಂತೆ ಎಂಬ ಮಾತಿನಂತೆ ಒಬ್ಬ ವ್ಯಕ್ತಿಯು ಸರಿ ಇಲ್ಲವೆನ್ನುವ ಮೂಲಕ ತಾನು ಸರಿ ಇದ್ದೇನೆ ಎಂದು ನೀಡುವ ಅನುಕೂಲಸಿಂಧು ಸಮರ್ಥನೆಯ ಸಂದೇಶ ಇಂದು ಮೋದಿಯವರನ್ನು ತೆಗಳುವವರ ಮನಸ್ಥಿತಿಯಾಗಿದೆ.
ಮುಸಲ್ಮಾನರಿಗೆ ಇಂದು ಬೇಕಿರುವುದು ಗೌರವ ಮತ್ತು ಪ್ರಗತಿ. ತಮ್ಮ ನಡುವಿನಲ್ಲೇ ನಿಂತು ಮಾತನಾಡುವ ನಾಯಕನೇ ಹೊರತು ತಮ್ಮನ್ನು ಕೆಳಗೆ ಕೂರಿಸಿ ಮೇಲೆ ನಿಂತು ಅನುಕಂಪ ತೋರುವ ಜಾತ್ಯತೀತರೆಂಬ ಅಡ್ಡಕಸುಬಿಗಳ ಅಬ್ಬರವಲ್ಲ. ಇಂದು ಪ್ರಜ್ಞಾವಂತ ಅಲ್ಪಾಸಂಖ್ಯಾತರು ಜಾತೀಯತೆಯನ್ನು ಹೋಗಲಾಡಿಸುವ ನೈಜವಾದ ಕೋಮು ಸೌಹಾರ್ದ ಬೆಳೆಸುವ ವೈಚಾರಿಕತೆಯನ್ನು ನರೇಂದ್ರ ಮೋದಿಯವರಲ್ಲಿ ಕಾಣುತ್ತಿದ್ದಾರೆ.
ಇಂದು ಭಾರತದ ರಾಜಕೀಯ ಸ್ಥಿತಿಗತಿಯನ್ನು ಗಮನಿಸಿದರೆ ಕಾಣಿಸುವುದು ಎರಡೇ ಅಂಶ. ಒಂದು ಯುಪಿಎದ ಭ್ರಷ್ಟಾಚಾರ ಮತ್ತು ಹಗರಣಗಳ ಪ್ರಪಾತ ಮತ್ತು ಎರಡನೆಯದು ನರೇಂದ್ರ ಮೊದಿ ಸಾರಥ್ಯದ ಗುಜರಾತಿನ ಪ್ರಗತಿ ಯಾತ್ರೆ. ಈ ಯಾತ್ರೆಯೇ ಇಂದು ಅವರನ್ನು ಪ್ರಧಾನ ಮಂತ್ರಿ ಹುದ್ದೆಯ ಸಮೀಪಕ್ಕೆ ತಂದು ನಿಲ್ಲಿಸಿದೆ. ಗುಜರಾತಿನ ಮುಸ್ಲಿಂ ಸಮುದಾಯವೂ ಸಹ ತಮ್ಮ ರಾಜ್ಯದ ಒಬ್ಬ ನಾಯಕ ಇಷ್ಟೊಂದು ಖ್ಯಾತಿಪಡೆದಿದ್ದಾರೆ ಎಂದು ಹೆಮ್ಮೆ ಪಟ್ಟು ಅವರನ್ನು ಹಾರೈಸುತ್ತಿದ್ದಾರೆ. ದೇಶದೆಲ್ಲೆಡೆ ಮೋದಿಯವರನ್ನು ಹೆಚ್ಚಾಗಿ ಬೆಂಬಲಿಸುತ್ತಿರುವುದು ಸಾಮಾಜಿಕ ಮತ್ತು ಉತ್ತಮ ಭವಿತವ್ಯದ ಪ್ರಜ್ಞೆಯುಳ್ಳ ವಿದ್ಯಾವಂತ ಯುವಕ-ಯುವತಿಯರ ಸಮೂಹ. ಅಷ್ಟುಮಾತ್ರವಲ್ಲದೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯತ್ತ ನೋಡುತ್ತಿರುವ ಪ್ರತೀ ಕ್ಷೇತ್ರದ ಪ್ರತೀ ಪಕ್ಷಗಳ ರಾಜಕಾರಣಿಯೂ ನರೇಂದ್ರ ಮೋದಿಯವರಿಂದಾಗುವ ಪ್ರಭಾವ, ಪರಿಣಾಮಗಳನ್ನು ಅರಿತೇ ತಮ್ಮ ನಿರ್ಧಾರವನ್ನು ಕೈಗೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದು ನಮ್ಮ ದೇಶದ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆ. ಇಂದು ಮೋದಿ ಅವರಿಗಿರುವ ಮೋಡಿಯನ್ನು ಕಂಡು ಅವರನ್ನು ತೆಗಳುತ್ತಿರುವ ಎದುರಾಳಿಗಳಿಗೆ ಮತ್ತು ಬುದ್ಧಿಜೀವಿಗಳಿಗೆ, ಅಂದರೆ, ಢೋಂಗಿಗಳ ಮುಖದಲ್ಲಿ ಸೂತಕದ ಛಾಯೆ ಆವರಿಸಿ ಕೂತಿದೆ. ಒಂದೆಡೆ ನಮ್ಮ ದೇಶದ ಒಳಗೇ ಇರುವ ಭಯೋತ್ಪಾದನೆಯ ವಿಷಬೀಜಗಳು ಮತ್ತು ದೇಶದ ಹೊರಗಿನಿಂದ ಕಾಡುತ್ತಿರುವ ಪಾಕಿ ಸೈನಿಕರ ಕುತಂತ್ರಗಳು ಮತ್ತು ಬಾಂಗ್ಲಾ, ಚೀನಾ ಸೈನಿಕರ ಅತಿಕ್ರಮಣಗಳನ್ನು ಖಂಡಿಸಿ ಎಚ್ಚರಿಕೆ ನೀಡಲಾಗದಂತಹ ಮುಖಗಳೇ ದಿಲ್ಲಿಯಲ್ಲಿ ಕಾಣುತ್ತಿವೆ. ಇನ್ನೊಂದೆಡೆ ಭಾರತದ ರುಪಾಯಿ ಮೌಲ್ಯವು ಹೀನಾಯ ಸ್ಥಿತಿ ತಲುಪಿದೆ. ದೇಶದ ಶ್ರೀಸಾಮಾನ್ಯನಿಗೆ ಅನಿವಾರ್ಯ ವಸ್ತುಗಳಾದ ಅಕ್ಕಿ, ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ಇಷ್ಟೆಲ್ಲಾ ಆದರೂ ಯೋಧರು ಮತ್ತು ಅನ್ನದಾತರು ಮಾತ್ರ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ. ಮೊದಲು ಅವರ ಕೈಗಳನ್ನು ಬಲಪಡಿಸುವ ಕೆಲಸ ಆಗಬೇಕಿದೆ. ದಿನದಿನಕ್ಕೂ ಶಿಕ್ಷಣದ ಹಾದಿ ದುಬಾರಿಯಾಗಿ ದುರ್ಗಮವಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಮಾರಕ. ಇನ್ನು ಸಮಾಜವನ್ನು ಹಾಳುಗೆಡಹುವ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಮತಾಂತರಗಳಿಂದಾಗಿ ಅನಾರೋಗ್ಯದ ದೇಶವಾಗಿರುವ ನಮ್ಮ ಭಾರತವನ್ನು ಸುವ್ಯವಸ್ಥಿತವಾಗಿಸುವ ದೊಡ್ಡ ಅನುಭವ, ದೂರಾಲೋಚನೆ, ನೈಪುಣ್ಯ, ಪ್ರಾಮಾಣಿಕತೆಯುಳ್ಳ ನಾಯಕ ನಮ್ಮ ದೇಶಕ್ಕೆ ತುರ್ತಾಗಿ ಬೇಕಿದೆಯೇ ಹೊರತು ಭಟ್ಟಂಗಿಗಳು ಸೃಷ್ಟಿಸುವ ಉತ್ತರಕುಮಾರರಲ್ಲ.
ಎಲ್ಲಕ್ಕಿಂತ ಮಿಗಿಲಾಗಿ ದೇಶದ ಯೋಧರ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ, ವಿಶ್ವದಲ್ಲಿ ಯಾವ ದೇಶವೇ ಆಗಲಿ ಭಾರತವನ್ನು ನಿಯಂತ್ರಿಸಲು ಆಸ್ಪದವಿರದಂತೆ ಬಲಿಷ್ಠ ರಾಷ್ಟ್ರವನ್ನಾಗಿಸುವ, ಮತ್ತು ಪ್ರತಿ ಪ್ರಜೆಯ ಮನಸ್ಸಿನಲ್ಲೂ "ಎಲ್ಲಕ್ಕಿಂತ ದೇಶವೇ ಮಿಗಿಲು" ಎಂಬ ಭಾವನೆಯನ್ನು ನೆಟ್ಟು ಸಾಮಾಜಿಕ ಕಾಳಜಿಯನ್ನು ಸೃಷ್ಟಿಸುವ, ಆ ಮೂಲಕ ವಿಶ್ವ ಭೂಪಟದಲ್ಲಿ ನಮ್ಮ ದೇಶವನ್ನು ಮಿಂಚುವಂತೆ ಮಾಡುವ ಸಮರ್ಥ ನಾಯಕನ ಜರೂರತ್ತಿದೆ. ಹುಸಿ ಜಾತ್ಯತೀತರ ಹಸಿ ಸುಳ್ಳುಗಳನ್ನು ಕೇಳಿ ಕೇಳಿ ದೇಶ ಕಂಗೆಟ್ಟಿದೆ ಎನ್ನುವುದಕ್ಕೆ ಮೌಲಾನಾ ಮೆಹ್ಮೂದ್ ಮದನಿ ಅವರ ಪ್ರತಿಕ್ರಿಯೆಯೇ ಸಾಕ್ಷಿ.
- ದೇ. ವಿ. ಮಹೇಶ್ವರ ಹಂಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

