ಅಂಕಣಗಳು

ಕನಕದಾಸರ ಬಗೆಗಿನ ಗೊಂದಲಗಳು

ಕನಕದಾಸರ ಬಗೆಗಿನ ಗೊಂದಲಗಳು
Published On :

ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ತಮ್ಮ ಕೀರ್ತನೆಗಳಲ್ಲಿ ಜಾತಿಯ ಬಗ್ಗೆ ಲೇವಡಿ ಮಾಡಿರುವ ಐತಿಹಾಸಿಕ ಪುರುಷ ಕನಕದಾಸರನ್ನು ಜಾತಿ, ಧರ್ಮಗಳ ಮೂಲಕ ವಿವಾದಕ್ಕೆ ಗುರಿಪಡಿಸಿ ಚರ್ಚಿಸುತ್ತಾ ಇರುವುದು ಅತ್ಯಂತ ವಿಪರ್ಯಾಸವೇ ಆಗಿದೆ. ಆದರೂ ಸತ್ಯ ಸಂಗತಿಗಳು ಚರ್ಚೆಯ ಮೂಲಕವೇ ಬಯಲಾಗಬೇಕಾಗುತ್ತದೆ. ಇದೇನು ಸಮಾಜಕ್ಕೆ ಹೊಸತಲ್ಲ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಮ್ಮ ಸಮಾಜದ ಕೆಲ ಜನಾಂಗಗಳು ಶ್ರೇಷ್ಠತೆಯ ವ್ಯಸನಕ್ಕೆ ಗುರಿಯಾಗಿದ್ದು, ವೀರಶೈವರು ತಮ್ಮನ್ನು ಲಿಂಗಿಬ್ರಾಹ್ಮಣರೆಂದು ಕರೆಯಬೇಕೆಂದು ಕೋರ್ಟ್ನ  ಮೆಟ್ಟಿಲೇರಿ ತೀರ್ಪು ಪಡೆದುಕೊಂಡು ಬಂದಿದ್ದರು.  ಅದೇರೀತಿ ಪತ್ತಾರರೂ(ಅಕ್ಕಸಾಲಿಗರು) ಕೂಡಾ ಕೋರ್ಟ್ಗೆ ಹೋಗಿ ವಿಶ್ವಕರ್ಮ ಬ್ರಾಹ್ಮಣರೆಂದು ಮಾಡಿಕೊಂಡರು. ಹಾಗೆಯೇ ಮೈಸೂರಿನಲ್ಲಿ ಹರಿಜನರೂ ಕೋರ್ಟ್ಗೆ ಹೋಗಿ ತಾವು ಮಾತಂಗ ಬ್ರಾಹ್ಮಣರೆಂದು ತೀರ್ಪು ತಂದರು. ಈ ಜಾತಿ ವ್ಯವಸ್ಥೆ ಇಂದು ಕೇವಲ ಸಾಮಾಜಿಕ ಸ್ತರದಲ್ಲಿ ಉಳಿಯದೆ ಅದು ಧರ್ಮದಲ್ಲಿಯೂ ಬಂದು ಸೇರಿಕೊಂಡು ಎರಡು ಜನಾಂಗಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿರುವುದನ್ನು ನಾವಿಂದು ಕಾಣುತ್ತಿದ್ದೇವೆ.
ಕುರುಬರು ಮೂಲತಃ ಶೈವರೇ. ಅವರ ಕುಲಗುರು ರೇವಣಸಿದ್ದ. ಕುಲದೇವರು ಬೀರಲಿಂಗೇಶ್ವರ. ಬೀರೇಶ್ವರ, ಕರಿಸಿದ್ದೇಶ್ವರ, ಬೀರಪ್ಪ, ಬೀರೇದೇವರು ಎಂದು ಕರೆಸಿಕೊಂಡಿರುವ ಶಿವನೇ ಆಗಿದ್ದಾನೆ. ಆದರೂ ಇಷ್ಟೆಲ್ಲಾ ಸತ್ಯಗಳಿದ್ದಾಗ್ಯೂ ತಮ್ಮ ಸಾಂಸ್ಕೃತಿಕ ನಾಯಕನಾಗಿರುವ ಕನಕದಾಸರನ್ನು ಆರಾಧಿಸುತ್ತಿರುವ ಒಂದು ಜನಾಂಗದವರನ್ನು ವೈಷ್ಣವ ದೀಕ್ಷೆ ಪಡೆಯಲು ಆಹ್ವಾನಿಸಿದ್ದುದು ಅಷ್ಟೊಂದು ಸಮಂಜಸವಾಗಿ ಕಾಣದು. ಕನಕದಾಸರ ಜಾತಿಯ ಬಗೆಗೇ ವಿವಾದಗಳಿರುವಾಗ ಅವರ ಧರ್ಮದ ಬಗೆಗೂ ಇರುವುದು ಸಹಜವಾಗಿಯೇ ಇದೆ.
ಕನಕದಾಸರು ರಾಮಾನುಜ ಗುರುವನ್ನೂ, ತಾತಾಚಾರ್ಯರನ್ನು ಸ್ತುತಿಸಿರುವುದರಿಂದ ಅವರು ಶ್ರೀ ವೈಷ್ಣವರ ಶಿಷ್ಯನಾಗಿದ್ದಂತೆ ತೋರುತ್ತದೆ ಎಂದು 1907 ರಲ್ಲಿಯೇ ಕವಿಚರಿತೆಕಾರರು ಹೇಳಿದ್ದರೂ ಅವನು ಮಾಧ್ವಮತೀಯನೆಂದು ಪ್ರಚಾರ ಪಡೆದದ್ದು ವಿಚಿತ್ರವಾಗಿದೆ.  ಪ್ರಾಯಶಃ ಇವರ ಹೆಸರಿನಲ್ಲಿ ದಾಸ ಪದ ಇರುವುದು, ವಿಷ್ಣು ಭಕ್ತನಾಗಿರುವುದು ಪುರಂದರದಾಸರಂತೆ ಕೀರ್ತನೆ ಬರೆದದ್ದೂ ಕಾರಣವಾಗಿ ಈ ತಪ್ಪು ತಿಳಿವಳಿಕೆ ಬೆಳೆಯುತ್ತಾ ಬಂದಿರಬಹುದು. ಅನೇಕರು ಅವನ ಕಾವ್ಯಗಳನ್ನು ಆಧರಿಸಿ ಅವನು ರಾಮಾನುಜ ಪಂಥೀಯನೆಂದು ಬರೆದಿದ್ದಾರೆ.  ಇವರ ಕಾವ್ಯವಾದ ಮೋಹನತರಂಗಿಣಿಯ ಆರಂಭದಲ್ಲಿ 'ಶ್ರೀ ರಾಮಾನುಜಮುನಿ ಶರಣು ರಾಮಾನುಜರೊಳು ವಾದಿ ಸಂಪರ್ಕ ನಿಲ್ಲುದೇ ನಿಲ್ಲಲರಿದು' ಎಂದು ಕನಕದಾಸರು ಸ್ತುತಿಸಿದ್ದಾರೆ. ಅದರಲ್ಲಿಯೇ ಮುಂದೆ ಶ್ರೀ ವೈಷ್ಣವ ಪ್ರಸಿದ್ದಗುರು ತಾತಾಚಾರ್ಯರನ್ನು ಸ್ತುತಿಸಿದ್ದಾರೆ. ಆದರೆ ಮಧ್ವಾಚಾರ್ಯರ ಹೆಸರಾಗಲೀ ಅವರ ಧರ್ಮದ ಪ್ರಸ್ತಾಪವಾಗಲೀ ಕನಕದಾಸರ ರಚನೆಗಳಲ್ಲಿ ಇಲ್ಲ. ಶ್ರೀ ವೈಷ್ಣವ ಮತದಲ್ಲಿ ಬ್ರಾಹ್ಮಣೇತರರನ್ನು ಮತಾಂತರ ಮಾಡಿಕೊಳ್ಳುವುದಿಲ್ಲ. ಮಂತ್ರ ದೀಕ್ಷೆಯ ಮೂಲಕ ಒಕ್ಕಲು ಮಾಡಿಕೊಳ್ಳುತ್ತಾರೆ. ಈ ರೀತಿ ಕನಕದಾಸರು ಆ ಮತಕ್ಕೆ ಒಕ್ಕಲಾದವರಿರಬೇಕು. ಆದರೆ ಮಾಧ್ವಮತದಲ್ಲಿ ಮತಾಂತರಕ್ಕಾಗಲೀ ಒಕ್ಕಲು ಮಾಡಿಕೊಳ್ಳುವುದಕ್ಕಾಗಲೀ ಅವಕಾಶವೇ ಇಲ್ಲ ಹೀಗಿರುವಾಗ ಕನಕದಾಸರನ್ನು ಮಾಧ್ವದಾಸ, ಮಾಧ್ವಮತೀಯ ಎನ್ನುವುದಕ್ಕೆ ಅರ್ಥವೇ ಇಲ್ಲ.
ಶೈವಾರಾಧಕರಾದ ಕುರುಬರಿಗೆ ರೇವಣಸಿದ್ದರು ಧರ್ಮಗುರುಗಳೇ ಆ ಧಾರ್ಮಿಕತೆಗೆ ನೆಲೆಗಟ್ಟನ್ನು ಒದಗಿಸಿದವರು. ಶಾಂತಮುತ್ತಯ್ಯ, ಸಿದ್ದಮಂಕ, ಅಮೋಘಸಿದ್ದ, ಶೈವದೇವತೆಗಳನ್ನೇ ಆರಾಧಿಸುವ ಇವರು ಶೀವೈಷ್ಣವರ ನಾಮ, ಮುದ್ರೆ, ಲಾಂಛನಗಳನ್ನೂ ಧರಿಸುವುದಿಲ್ಲ. ಸ್ಥಳೀಯ ಕಾರಣಗಳಿಂದಾಗಿ ಹಾಗೂ ಪ್ರಭಾವಗಳಿಂದಾಗಿ ಕನಕದಾಸ ವಿಷ್ಣುವಿನ ಭಕ್ತನಾಗಿರಬಹುದು. ಇವರ ಕುಟುಂಬದವರು ವಿಜಯನಗರ ಚಕ್ರವರ್ತಿಗಳ ಅಧೀನದಲ್ಲಿ ದಂಡನಾಯಕರಾಗಿದ್ದರು. ಆ ಸಂದರ್ಭದಲ್ಲಿ ವಿಜಯನಗರದ ರಾಜಗುರುಗಳಾದ ತಿರುಮಲೆ ತಾತಾಚಾರ್ಯರು ಶ್ರೀ ವೈಷ್ಣವರಾಗಿದ್ದು ತೆಲುಗು, ತಮಿಳು, ಕನ್ನಡಗಳಲ್ಲಿ ವೆಂಕಟೇಶನ ಭಕ್ತಿ ಸಾಹಿತ್ಯ ರಚಿಸುತ್ತಾ ಎಲ್ಲ ಜನಾಂಗದವರಿಗೆ ಮಂತ್ರ ದೀಕ್ಷೆಯ ಮೂಲಕ ತಮ್ಮ ಮತದ ಕಕ್ಷೆಯೊಳಗೆ ತರುವ ಪ್ರಯತ್ನ ಮಾಡಿದ್ದರಿಂದ ಅನೇಕ ತಳಸಮುದಾಯಗಳು ಅವರ ಪ್ರಭಾವಕ್ಕೆ ಒಳಗಾದವು. ಹೀಗೆ ಕನಕನಾಯಕನ ಮನೆತನವೂ ಅದಕ್ಕೆ ಒಳಗಾಗಿದ್ದಿರಬೇಕು.
ಹೀಗೇ ಮೂಲ ಶೈವದಲಿದ್ದು ರಾಮಾನುಜ ಪಂಥೀಯನಾದವನನ್ನು ಮಾದ್ವಪಂಥೀಯ ದಾಸತ್ವಕ್ಕೆ ಎಳೆದು ತಂದುದಲ್ಲದೆ, ಇತ್ತೀಚೆಗೆ ಕನಕದಾಸ ಜಗದ್ಗುರುಪೀಠ ಕಲ್ಪಿಸಿ ಅದಕ್ಕೆ ಶಂಕರಪಂಥೀಯ ಪುರಿ ವಿಶೇಷಣ ಜೋಡಿಸಿ ಕನಕದಾಸರನ್ನು ಕೂರಿಸಲಾಗಿದೆ. ಹಿಂದುಳಿದ ಸಮಾಜ ಸಂಘಟನೆಯಾಗುವುದು ತಪ್ಪಲ್ಲ ಆ ಸಂಘಟನೆಯ ಮೂಲಕ ಅದು ಭೌತಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿದ ಸಮಾಜಗಳ ಮಟ್ಟಕ್ಕೆ ಏರಬೇಕು. ಆದರೆ ಅವರು ತಮ್ಮ ತಮ್ಮ ಪರಂಪರೆಗಳ ನೆಲೆಯಲ್ಲಿಯೇ ಸಂಘಟಿತರಾಗಬೇಕು. ಅದರಲ್ಲಿಯೂ ಆ ಪರಂಪರೆಯನ್ನು ಪರಿಷ್ಕರಿಸಿಕೊಂಡು ಸಂಘಟನೆಯಾಗಬೇಕು.
ಸಾವಿರಾರು ವರ್ಷಗಳ ಚಾರಿತ್ರಿಕ ಹಿನ್ನೆಲೆ ಇರುವ ಹಾಲು ಮತದವರು ತಮ್ಮ ಪರಂಪರಾಗತ ಮೂಲ ಗುರುಗಳಾದ ರೇವಣಸಿದ್ದರನ್ನು ಹಾಗೂ ಶಾಂತಮುತ್ತಯ್ಯ, ಅಮೋಘಸಿದ್ದ, ಸಿದ್ದಮಂಕ ಎಂಬ ಗುರುಪರಂಪರೆಯನ್ನೇ ಬದಿಗೆ ಸರಿಸಿ ಕೇವಲ 500 ವರ್ಷಗಳ ಹಿಂದಿನ ಒಬ್ಬ ಕೀರ್ತನಕಾರ ಸಂತನನ್ನು ರೇವಣಸಿದ್ದರ ಸ್ಥಾನದಲ್ಲಿ ಕೂರಿಸಿರುವುದು ನಿಜಕ್ಕೂ ಆಶ್ಚರ್ಯವೇ ಆಗಿದೆ.  ಕನಕದಾಸರೊಬ್ಬರು ಕರ್ನಾಟಕದ ಭಕ್ತ ಶ್ರೇಷ್ಠರು, ಕವಿಗಳು. ಅವರ ಭಕ್ತ ಮನೋಧರ್ಮ ಅವರಿಂದ ಕೀರ್ತನೆಗಳನ್ನು ನುಡಿಸಿದೆ. ಆದರೆ ಕುರುಬ ಸಮಾಜದವರು ಏಕತೆಗಾಗಿ ಸಂಘಟನೆಯನ್ನು ಬಯಸಿ ತಮಗಾಗಿ ಇತಿಹಾಸದಲ್ಲಿ ಒಬ್ಬ ಸಾಂಸ್ಕೃತಿಕ ಮಹಾಪೋಷಕನನ್ನು ಹುಡುಕತೊಡಗಿದ ಸಂದರ್ಭದಲ್ಲಿ ಅದೇ ಜನಾಂಗದ ಕನಕದಾಸರ ಕಣ್ಣಿಗೆ ಬಿದ್ದುದರಿಂದ ಅವನನ್ನು ಅಪ್ಪಿಕೊಂಡಿದ್ದು ತಪ್ಪಲ್ಲ. ಆದರೆ ಅವರ ಮೂಲಗುರು ಶಿವೋಪಾಸಕನಾದ ರೇವಣಸಿದ್ದನೇ ಹೊರತು ಬೇರೆ ಇನ್ನಾರು ಅಲ್ಲ.

- ಡಾ.ಡಿ.ಎನ್.ಯೋಗಿಶ್ವರಪ್ಪ
ಸಂಶೋಧಕ, ಪ್ರಾಧ್ಯಾಪಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.