ಅಂಕಣಗಳು

ದೀಪಾವಳಿಯ ವಿಜ್ಞಾನದ ಬೆಳಕು

Published On :

ನೂರಾರು ವರ್ಷಗಳಿಂದ ನಾವು ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಪುರಾಣದ ಪ್ರಕಾರ ಈ ಹಬ್ಬದ ಇತಿಹಾಸ ಈ ರೀತಿ ಇದೆ: "ಶ್ರೀರಾಮಚಂದ್ರ ಪ್ರಭು ರಾವಣನನ್ನು ಸಂಹರಿಸಿ, ಹದಿನಾಲ್ಕು ವರ್ಷ ವನವಾಸ ಮುಗಿಸಿ, ತನ್ನ ಮಡದಿ ಸೀತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಹಿಂದಿರುಗಿದಾಗ, ಅಲ್ಲಿನ ಪ್ರಜೆಗಳು ಅತ್ಯಾನಂದದಿಂದ ಅವರನ್ನು ಸ್ವಾಗತಿಸುತ್ತಾರೆ, ಸಂಭ್ರಮಿಸುತ್ತಾರೆ." ಆ ಸಂಭ್ರಮವನ್ನೇ ನಾವಿಂದು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದೇವೆ. ಇದೇನೇ ಇದ್ದರೂ ಈ ಆಚರಣೆಯಲ್ಲಿ 'ಸಮಗ್ರ ಪೀಡೆ ಹತೋಟಿ'ಯ ತತ್ವ ಯಾವ ರೀತಿಯಲ್ಲಿ ಅಡಕವಾಗಿದೆ ಎಂಬುದನ್ನು ಗಮನಿಸೋಣ.
ದೀಪಾವಳಿ ಹಬ್ಬ ಪ್ರತಿ ವರ್ಷದಂತೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ. ಈ ಹಬ್ಬದ ಪ್ರಯುಕ್ತ ಮನೆಗಳನ್ನು ಸ್ವಚ್ಛಗೊಳಿಸಿ ಸುಣ್ಣ ಹೊಡೆಯುವುದು, ಹಣತೆಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಿಸಿ ಅವುಗಳನ್ನು ಸಾಲಾಗಿ ಕಿಟಕಿಗಳ ಮೇಲೆ, ಹೊರ ಆವರಣದಲ್ಲಿ ಹಾಗೂ ಕಾಂಪೌಂಡುಗಳ ಮೇಲೆ ಇಡುವುದು ಮತ್ತು ಪಟಾಕಿಗಳನ್ನು ಹಚ್ಚುವುದು ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿವೆ. ಇವೆಲ್ಲವೂ ಸಂತೋಷ, ಸಂಭ್ರಮದ ಸಂಕೇತ. ಇರಲಿ. ಆದರೆ ಇವುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಈ ಸಂಕೇತಗಳು ಬೇರೆಯದ್ದೇ ರೂಪ ತಾಳಿ ನಮ್ಮೆದುರಾಗುತ್ತವೆ.
ದೀಪಾವಳಿಯನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ತಿಂಗಳು ಸುಗ್ಗಿಯ ಕಾಲ. ಬತ್ತ, ಗೋದಿ, ಜೋಳ, ರಾಗಿ ಮುಂತಾದ ಬೆಳೆಗಳು ಕೊಯ್ಲಿಗೆ ಬರುತ್ತವೆ. ಈ ತಿಂಗಳುಗಳಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಬೆಳೆಗಳು ಶಿಲೀಂಧ್ರ ರೋಗಕ್ಕೆ (ಫಂಗಲ್ ಡಿಸೀಸ್) ತುತ್ತಾಗುವ ಸಂಭವ ಹೆಚ್ಚು. ಅಲ್ಲದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಕೀಟಗಳ, ಅದರಲ್ಲೂ ಪಂತಂಗಗಳ ಚಟುವಟಿಕೆ ಅಧಿಕವಾಗಿರುತ್ತದೆ. ಸಾವಿರಾರು ಪತಂಗಗಳನ್ನು ಗದ್ದೆಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಕಾಣಬಹುದು. ದವಸಧಾನ್ಯಗಳು ಕೊಯಿಲಾಗಿರಲಿ ಅಥವಾ ಬೆಳೆಯಲ್ಲೇ ಇರಲಿ, ಈ ಕೀಟಗಳ ಬಾಧೆಗೆ ತುತ್ತಾಗುತ್ತವೆ.
ಪತಂಗಗಳು ರಾತ್ರಿಯಲ್ಲಿ ಬೆಳಕಿಗೆ ಆಕರ್ಷಿತವಾಗುತ್ತವೆ. ಇದನ್ನು ಫ್ಯಾಟಲ್ ಅಟ್ರ್ಯಾಕ್ಷನ್ ಎನ್ನುತ್ತಾರೆ. ಒಂದು ಸಣ್ಣ ದೀಪ ಕೂಡ ಅನೇಕ ಪತಂಗಗಳಿಗೆ ಮೃತ್ಯಾಕರ್ಷಣೆಯಾಗಬಲ್ಲದು. ಇದು ಪುರಾತನ ಕಾಲದಿಂದಲೂ ತಿಳಿದಿರುವ ವಿಷಯ ಎಂಬುದರಲ್ಲಿ ಸಂದೇಹವಿಲ್ಲ. ಆದುದರಿಂದಲೇ ಉರಿಯುವ ದೀಪಗಳನ್ನು ಸಾಲುಸಾಲಾಗಿ ಮನೆಮನೆಗಳಲ್ಲಿ ಹಲವಾರು ದಿನ ಇಡುವ ಸಂಪ್ರದಾಯವನ್ನು ದೀಪಾವಳಿ ಹಬ್ಬದ ಮೂಲಕ ಆಚರಿಸುತ್ತಾ ಬರಲಾಗುತ್ತಿದೆ. ಈ ದೀಪಗಳು ಸಾವಿರಾರು ಪತಂಗಗಳನ್ನು ನಾಶ ಮಾಡುತ್ತವೆ. ಅಲ್ಲದೆ ಅನೇಕ ಕೀಟಗಳ ಸಂತಾನಾಭಿವೃದ್ಧಿಗೂ ದೀಪಗಳು ಘಾಸಿ ಮಾಡುವುದರಿಂದ ಬೆಳೆಗಳ ರಕ್ಷಣೆಯಾಗುತ್ತದೆ. ಇತ್ತೀಚೆಗೆ ವಿದ್ಯುತ್ ದೀಪ ಅಥವಾ ಬೋನುಗಳನ್ನು ಬಳಸಲಾಗುತ್ತಿದೆ.
ಪಟಾಕಿಗಳನ್ನು ಸುಡುವುದು ದೀಪಾವಳಿಯ ವಿಶೇಷ ಸಂಭ್ರಮ. ಇದರಲ್ಲೂ ಕೀಟ ಹಾಗೂ ರೋಗ ನಿವಾರಣೆಯಸೂತ್ರ ಅಡಗಿದೆ. ಪಟಾಕಿಯಲ್ಲಿ ಗಂಧಕವಿರುತ್ತದೆ. ಇದನ್ನು ಸುಟ್ಟಾಗ ಇದು ಗಂಧಕದ ಡಯಾಕ್ಸೈಡ್(ಸಲ್ಫರ್ ಡಯಾಕ್ಸೈಡ್) ಆಗಿ ಬದಲಾಗುತ್ತದೆ. ಇದಕ್ಕೆ ಕೀಟ ಹಾಗೂ ಶಿಲೀಂಧ್ರವನ್ನು ನಿಯಂತ್ರಿಸುವ ಶಕ್ತಿಯಿದೆ. ಒಂದು ಪ್ರದೇಶದಲ್ಲಿ, ಅದರಲ್ಲೂ ಹೊಲಗದ್ದೆಗಳ ಸುತ್ತಮುತ್ತ ಪಟಾಕಿ ಹೊಡೆದಾಗ, ಬೆಳೆಗಳ ಸಂರಕ್ಷಣೆಯಾಗುತ್ತದೆ.
ಸುಣ್ಣ ಕೂಡ ಒಂದು ಅತ್ಯುತ್ತಮ ಶಿಲೀಂಧ್ರ ನಾಶಕ. ವರ್ಷಕ್ಕೊಮ್ಮೆಯಾದರೂ ಹಬ್ಬದ ನೆಪದಿಂದ ಮನೆಯನ್ನು ಸ್ವಚ್ಛ ಮಾಡಿದಾಗ ಮನೆಯಲ್ಲಿ ಅಡಗಿರುವ ಜಿರಳೆ, ತಿಗಣೆ ಮುಂತಾದವುಗಳನ್ನು ಹೊರಹಾಕಿ ನಾಶ ಮಾಡಬಹುದು. ಮನೆಗೆ ಹೊಸದಾಗಿ ಸುಣ್ಣ ಬಳಿದಾಗ ರಂಧ್ರಗಳು ಮುಚ್ಚಿಹೋಗುತ್ತವೆ ಹಾಗೂ ಶಿಲೀಂಧ್ರದ ಹತೋಟಿಯಾಗುತ್ತದೆ. ಮನೆಯೂ ನೋಡಲು ಶುಭ್ರವಾಗುತ್ತದೆ. ಇದರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಹಬ್ಬದ ಪ್ರಯುಕ್ತ ಸುಣ್ಣ ಬಳಿಯುವುದನ್ನು ಒಂದು ಆಚರಣೆ ಮಾಡಲಾಗಿದೆ.
ಈ ರೀತಿ ದೀಪಾವಳಿ ಹಬ್ಬದ ಆಚರಣೆಯಲ್ಲಿ ನಮ್ಮ ಹಿರಿಯರು "ಪೀಡೆ ಹತೋಟಿಯ" ನಾನಾ ಕ್ರಮಗಳನ್ನು ಸೂಕ್ಷ್ಮವಾಗಿ ಸೇರಿಸಿದ್ದಾರೆ. ಪೀಡೆ ಹತೋಟಿಯ ಸಾಂಪ್ರದಾಯಿಕ ಕ್ರಮ(ಹಬ್ಬವನ್ನು ಸುಗ್ಗಿಯ ಕಾಲದಲ್ಲಿ ಆಚರಿಸುವುದು), ಭೌತಿಕ ಕ್ರಮ(ಜಿರಳೆ ಮುಂತಾದವುಗಳನ್ನು ಸಾಯಿಸುವುದು), ದೀಪದ ಬೋನುಗಳ ಬಳಿ(ಪತಂಗಗಳ ಆಕರ್ಷಣೆಗಾಗಿ) ಹಾಗೂ ರಾಸಾಯನಿಕ ಕೀಟನಾಶಕಗಳ ಬಳಕೆ (ಸುಣ್ಣ ಬಳಿಯುವ ಹಾಗೂ ಪಟಾಕಿ ಹೊಡೆಯುವ ಮೂಲಕ) ಎಲ್ಲವನ್ನೂ ಒಳಗೊಂಡಿದೆ. ಆದ್ದರಿಂದ ಸಮಗ್ರ ಪೀಡೆ ಹತೋಟಿಯ ಪ್ರಕ್ರಿಯೆ ನಮಗೆ ಹೊರದೇಶದಿಂದ ಬಂದದ್ದಲ್ಲ. ಇದು ನಮ್ಮ ದೇಶದಲ್ಲಿ ವೇದಕಾಲಗಳಿಂದಲೂ ಬಳಕೆಯಲ್ಲಿದೆ. ನಮ್ಮ ಸಂಪ್ರದಾಯಗಳಲ್ಲಿ ವಿಜ್ಞಾನವೂ ಮೇಳೈಸಿರುವುದು ನಮ್ಮ ಹಿರಿಯರಲ್ಲಿದ್ದ ಹಿರಿತನವನ್ನು ಸ್ಪಷ್ಟವಾಗಿ ತೋರಿಸುತ್ತದೆ.  

- ಡಾ. ಟಿ.ಎಂ. ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.