ಆಡುಭಾಷೆಯ ಶಬ್ದಮಣಿ ದರ್ಪಣ

ಕನ್ನಡ ಭಾಷೆಯ ಪದಸಂಪತ್ತನ್ನೂ ಧ್ವನಿರಮ್ಯತೆಯನ್ನೂ ಈ ಲೇಖನ ಪದಗಳ ಜತೆ ಆಟವಾಡುತ್ತಲೇ ನಿರೂಪಿಸುತ್ತದೆ
ಯಾವುದೇ ಒಂದು ಭಾಷೆಯ ಜೀವಕೋಶಗಳೇ ಶಬ್ದಗಳು. ಶಬ್ದ ಹೊರಗಿನ ಕವಚವಾದರೆ ಆತ್ಮ ಅದರ ಅರ್ಥ. ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂದೇ ನಿತ್ಯ ಸಂಯುಕ್ತ ಪಾರ್ವತೀಪರಮೇಶ್ವರರನ್ನು ಶಬ್ದಾರ್ಥಗಳಿಗೆ ಹೋಲಿಸಲಾಗಿದೆ. ನಿತ್ಯಪ್ರವಾಹರೂಪವಾದ ಭಾಷೆಯು ಕಾಲಘಟ್ಟಗಳೊಂದಿಗೆ ನಿರಂತರವಾಗಿ ಢಿಕ್ಕಿ ಹೊಡೆಯುತ್ತಾ ಒಮ್ಮೊಮ್ಮೆ ರೂಢಿಯ ಪಥವನ್ನು ಬಿಟ್ಟು ಹೊಸ ಹೊಸ ಶಬ್ದಗಳನ್ನು ಸೃಜಿಸುತ್ತಾ ಸಾಗುತ್ತದೆ. ಶಬ್ದ ಮತ್ತು ಅರ್ಥಗಳು ಪರಸ್ಪರ ಒಂದು ಇನ್ನೊಂದರ ಬೆನ್ನು ಬಿಡದು ಎಂಬುದು ಸತ್ಯವಾದರೂ ದಿನನಿತ್ಯ ಲಕ್ಷ ಲಕ್ಷ ಶಬ್ದಗಳು ಅವಿರತವಾಗಿ ಬಾಯಿಂದ ಬಾಯಿಗೆ ಸಂಕ್ರಮಿಸುವಾಗ ಯಾವುದೋ ಶಬ್ದದ ಬೆನ್ನನ್ನು ಇನ್ಯಾವುದೋ ಅರ್ಥ ಬೆನ್ನತ್ತಿ ಇನ್ನೊಂದೇ ರೂಪದಲ್ಲಿ ಅದು ಜಗತ್ತಿನೆದುರು ಅನಾವರಣಗೊಳ್ಳುವುದು. ಹೀಗೆ ಶಬ್ದಾರ್ಥಗಳು ಸಾಮಾನ್ಯನ ನಿಲುಕಿಗೆ ಸಿಲುಕದಂತೆ ನಿಗೂಢವಾಗಿ ಪ್ರವಹಿಸುತ್ತಲೇ ಇರುತ್ತದೆ.
ಪದ-ಪದಾರ್ಥಗಳ ಬಗೆಗಿನ ಜಿಜ್ಞಾಸೆ ಇಂದು ನಿನ್ನೆಯದಲ್ಲ ಮತ್ತು ಅದು ನಿರ್ಣಯಕ್ಕೆ ಸಿಗುವಂಥದ್ದು ಎಂದೂ ಅನಿಸುವುದಿಲ್ಲ. ಯಾವುದೇ ಜೀವಂತ ಭಾಷೆಯ ಒಂದು ಮುಖ್ಯ ಲಕ್ಷಣ ಯಾವುದೆಂದರೆ ನಿರಂತರವಾಗಿ ಅದು ತನ್ನ ಪದ ಸಂಪತ್ತನ್ನು ಹಿಗ್ಗಿಸಿಕೊಳ್ಳುವುದೇ ಆಗಿದೆ. ದೈನಂದಿನ ವ್ಯವಹಾರದಲ್ಲಿ ಬಳಸಲ್ಪಡುವ ಮೂಲಕ ಆಡುಭಾಷೆಯು ಗ್ರಾಂಥಿಕ ಭಾಷೆಗಿಂತ ಭಿನ್ನವಾಗುತ್ತಾ ಸಾಗುತ್ತದೆ. ಆಡುಭಾಷೆಯ ಬೆಳವಣಿಗೆಯ ವೇಗ ಗ್ರಂಥ ಭಾಷೆಗಿಂತ ಹೆಚ್ಚು ತೀವ್ರವಾದದ್ದು ಎಂಬ ಕಾರಣಕ್ಕಾಗಿಯೇ ಅವುಗಳ ನಡುವಿನ ಅಂತರವೂ ಹೆಚ್ಚುತ್ತದೆ.
ಹಾಗೆ ನೋಡಿದರೆ ಕನ್ನಡ ಭಾಷೆಯು ಇತರ ಎಲ್ಲ ಭಾಷೆಗಳಿಗಿಂತಲೂ ಹೆಚ್ಚು ಬದಲಾವಣೆಗೆ ಒಗ್ಗಿಕೊಳ್ಳುವ ನಮ್ಯತೆಯನ್ನು ಹೊಂದಿದೆ ಎನಿಸುತ್ತದೆ. ಇಲ್ಲಿ ಮಾರು ಮಾರಿಗೆ ಭಾಷೆ ತನ್ನ ಸ್ವರೂಪವನ್ನು ಬದಲಿಸುತ್ತಾ ಸಾಗುತ್ತದೆ. ಕೋಶ ಓದುವಾಗ ಏಕರೂಪವಾಗಿದೆ ಎನಿಸಿದರೂ ದೇಶ ಸುತ್ತುವಾಗ ಅದರ ಭಿನ್ನವಾದ ಒಳಹರಿವಿನ ಹರವು ತುಂಬ ವಿಶಾಲವಾದದ್ದು ಎಂಬ ಅರಿವಾಗುತ್ತದೆ. ನಮ್ಮ ನಾಡಿನ ಯಾವ ಪ್ರದೇಶಕ್ಕೆ ಹೋದರೂ ಇಂಥ ವ್ಯತ್ಯಾಸವನ್ನು ಗುರುತಿಸಬಹುದು. ಜಿಲ್ಲೆಯಿಂದ ಜಿಲ್ಲೆಗೆ ಸ್ವಲ್ಪವಾದರೂ ಭಾಷಾ ಭಿನ್ನತೆ ಇದ್ದೇ ಇರುವುದನ್ನು ನಾವು ಕಾಣಬಹುದು. ಅದೇ ನಮ್ಮ ಕನ್ನಡ ಭಾಷೆಯ ವೈಶಿಷ್ಟ್ಯ.
ಮೊದಲೇ ಹೇಳಿದಂತೆ ಆಡುಭಾಷೆಯಲ್ಲಿ ಕೆಲವೊಮ್ಮೆ ಇತರ ಭಾಷೆಗಳ ಸಾಹಚರ್ಯದಿಂದಲೋ, ಸಾಂಕರ್ಯದಿಂದಲೋ ಅಥವಾ ಉಚ್ಚಾರಣೆಯ ಭಿನ್ನತೆಯಿಂದಲೋ ಅಥವಾ ಗ್ರಹಿಕೆಯ ವ್ಯತ್ಯಾಸದಿಂದಲೋ ಒಂದರ್ಥದ ಶಬ್ದ ಇನ್ನೊಂದು ಶಬ್ದವಾಗಿ ಪರಿಣಮಿಸಿ ಮತ್ತೊಂದೇ ಅರ್ಥವನ್ನು ಪ್ರತಿನಿಧಿಸುವ ಸಂದರ್ಭವನ್ನು ನಾವು ಹೆಚ್ಚಾಗಿ ಕಾಣಬಹುದು. ಕೆಲವೊಂದು ಶಬ್ದಗಳು ತಮ್ಮ ಮೂಲ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಿಸಿಕೊಂಡರೆ, ಇನ್ನು ಕೆಲವು ಮುಖವಾಡಗಳನ್ನಷ್ಟೇ ಬದಲಿಸುತ್ತಿರುತ್ತವೆ. ಇನ್ನು ಕೆಲವು ಶಬ್ದಗಳು ಆತ್ಮವನ್ನೇ ಬದಲಿಸಿಕೊಳ್ಳುವ ಮೂಲಕ ಅರ್ಥಾಂತರದ ಅವಾಂತರಕ್ಕೆ ಕಾರಣವಾಗುತ್ತವೆ. ಅದೇನೇ ಇರಲಿ, ಸದ್ಯಕ್ಕೆ ಕನ್ನಡದಲ್ಲಿ ಅರ್ಥವ್ಯತ್ಯಾಸ, ರೂಪವ್ಯತ್ಯಾಸಗಳನ್ನು ಪಡೆದ, ಮೂಲವನ್ನೇ ಹುಡುಕುವುದಕ್ಕಾಗದ, ರೂಢಿಗತವಾಗಿ ಬಂದಿರುವ, ಶಬ್ದಕ್ಕೂ ಅರ್ಥಕ್ಕೂ ತಾಳೆಯೇ ಇಲ್ಲ ಎನಿಸುವಂಥ ಅಸಂಖ್ಯ ಪದಗಳಿವೆ. ಇಂಥ ಕೆಲವು ವಿಚಿತ್ರ ಶಬ್ದರೂಪಗಳನ್ನು ಸಂಕ್ಷಿಪ್ತವಾಗಿ ಲಘುಧಾಟಿಯಲ್ಲಿ ಪರಿಚಯಿಸುವುದು ಈ ಲೇಖನದ ಉದ್ದೇಶ.
ಕರ್ನಾಟಕದಲ್ಲಿ ನಿಮಗೆ ಹೆಜ್ಜೆಹೆಜ್ಜೆಗೆ ಭಾಷಾಭೇದಗಳ ಜೊತೆಜೊತೆಗೆ ಪದ ವೈಚಿತ್ರ್ಯಗಳೂ ಕಾಣಸಿಗುತ್ತವೆ. ಪ್ರದೇಶ, ಆಚಾರ-ವಿಚಾರಗಳೆಲ್ಲ ಭಾಷೆಯ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳು. ಮೈಸೂರು ಕನ್ನಡ ಸ್ವಲ್ಪ ಸೌಮ್ಯ ಎನಿಸಿದರೆ, ಉತ್ತರ ಕರ್ನಾಟಕದ ಕಡೆ ಹೋದರೆ ಭಾಷೆ ಸ್ವಲ್ಪ ಒರಟು. ಅಲ್ಲಿಯ ಗಟ್ಟಿ ರೊಟ್ಟಿಯಂತೆ. ಮಂಡ್ಯದ ಕಡೆಯವರ ಭಾಷೆ ಒಂಥರಾ ರಾಗಿ ಮುದ್ದೆ ಹಲ್ಲಿಗೆ ಅಂಟಿಸಿಕೊಂಡವರು ಮಾತನಾಡಿದಂತಿದ್ದರೆ, ದಕ್ಷಿಣಕನ್ನಡದವರ ಭಾಷೆ ಮಂಡೆಬಿಸಿಯಾಗದಂತೆ ತಂಪಾಗಿರುತ್ತದೆ. ಇನ್ನು ಶೆಟ್ರ ಭಾಷೆ, ಭಟ್ರ ಭಾಷೆ, ಇತ್ಯಾದಿ ಜಾತಿಗೊಂದೊಂದು ಭಾಷೆಯೂ ಇದೆ. ಹವ್ಯಕ ಬ್ರಾಹ್ಮಣರ ಭಾಷೆ ಒಂದು ರೀತಿಯಾದರೆ ಶಿವಳ್ಳಿ ಬ್ರಾಹ್ಮಣರದ್ದು ಇನ್ನೊಂದು ರೀತಿ. ಹೀಗೆ ಒಳಜಾತಿಯಲ್ಲೂ ಭಾಷಾವೈವಿಧ್ಯಕ್ಕೆ ಒಳ ಮೀಸಲಾತಿಯಿದೆ.
ಆಯಾ ಪ್ರದೇಶಕ್ಕೆ ಅನುಸಾರವಾಗಿ ಸ್ಥಳೀಯ ನುಡಿಗಟ್ಟುಗಳು ವಿಭಿನ್ನವೂ, ವಿಶಿಷ್ಟವೂ (ಕೆಲವೊಮ್ಮೆ ಶಿಷ್ಟವಾಗಿರುವುದಿಲ್ಲ ಎಂಬುದು ಬೇರೆ ವಿಷಯ) ಆಗಿರುತ್ತವೆ. ದಕ್ಷಿಣಕನ್ನಡದಲ್ಲಿ ತಲೆಗೆ 'ಮಂಡೆ' ಎಂದರೆ ಅಲ್ಲೇ ಪಕ್ಕದ ಉತ್ತರಕನ್ನಡದಲ್ಲಿ ಮಂಡೆಗೆ ಇನ್ನೊಂಚೂರು ಮೇಲಿನ ಸ್ಥಾನ ಕೊಟ್ಟಿದ್ದಾರೆ. ಅಲ್ಲಿ ಮಂಡೆಯೆಂದರೆ ತಲೆಯ ಮೇಲಿರುವ ಕೂದಲು. 'ಗುರು- ಶಿಷ್ಯ' ಎಂಬ ಪದಗಳ ಸಾಮಾನ್ಯ ಅರ್ಥವನ್ನು ಮನಸಿನಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದವರಿಗೆ ಸ್ವಲ್ಪ ಗೊಂದಲವಾಗುವುದು ಗ್ಯಾರಂಟಿ. ಅರ್ಧದಲ್ಲೇ ಶಾಲೆ ಬಿಟ್ಟವನೂ ಇಲ್ಲಿ ಗುರು ಎನಿಸಿಕೊಳ್ಳುತ್ತಾನೆ. 'ಏನ್ ಗುರೂ ಕಾಫಿ ಆಯ್ತಾ' ಎನ್ನುವುದು ಇಲ್ಲಿನ ಸಾಮಾನ್ಯ ಪ್ರಯೋಗ. ನೂರಾರು ಜನರಿಗೆ ನಿತ್ಯ ಪಾಠ ಮಾಡುವವನೂ ಅವನ ಅಡ್ಡಾದಲ್ಲಿ 'ಶಿಷ್ಯ' ಎನಿಸಿಕೊಳ್ಳಬಹುದು. ಇನ್ನು ಕೆಲವು ಕಡೆ ಪದೇ ಪದೇ ವಾಕ್ಯದ ಕೊನೆಯಲ್ಲಿ 'ಆಯ್ತಾ' ಎಂದು ಬಳಸುವುದುಂಟು. ಹಾಗಂತ ಅದು ಮುಗಿಯಿತಾ ಎಂಬರ್ಥದ ಪ್ರಶ್ನೆಯಲ್ಲ, ಬದಲಿಗೆ ಅದು 'ಸರೀನಾ' ಎಂಬರ್ಥದಲ್ಲಿ ಬಳಕೆಯಲ್ಲಿದೆ. ಮದುವೆಗೆ ಮುದ್ದಾಂ ಬರಬೇಕು ಆಯ್ತಾ ಎನ್ನುತ್ತಾರೆ. ಯಾರಾದರೂ ಮನೆಗೆ ಬಂದಾಗ ಶೃಂಗೇರಿಯಂಥ ಮಲೆನಾಡಿನಲ್ಲಿ ನಿಮಗೆ ಕಾಫಿ ಆಯ್ತಾ ಮಜ್ಜಿಗೆನಾ ಎನ್ನುತ್ತಾರೆ. ಅದಕ್ಕೆ ಉತ್ತರ ರೂಪದಲ್ಲಿ ನೀವು ಇನ್ನೂ ಯಾವುದೂ ಆಗಿಲ್ಲ ಎಂದರೆ ಅವರು ಮುಸಿಮುಸಿ ನಗಬಹುದು. ಇಲ್ಲಿ ಆಯ್ತಾ ಎಂದರೆ ನಿಮಗೆ ಯಾವುದು ಓಕೆ ಎಂಬುದಷ್ಟೇ.
ಇನ್ನು ಕುತಂತ್ರಿಗಳಿಗೆ ಕನ್ನಡದಲ್ಲಿ ಒಳ್ಳೊಳ್ಳೆಯ ಬಿರುದುಗಳಿವೆ. ಯಾರಾದರೂ ಅವನೊಬ್ಬ ಪಕ್ಕಾ 'ಛತ್ರಿ' ಮಾರಾಯಾ ಅಂದರೆ ಆತ 'ಕನ್ನಿಂಗ್'ಹಾಮ್ನಿಂದ ಬಂದವನು, ಅವನನ್ನು ನಂಬಬೇಡಿ ಎಂದೇ ಅರ್ಥ. ಅದೇ ಚಮಚಾ ಎಂಬ ಶಬ್ದ ಪ್ರಯೋಗವಿದೆ, ಇದನ್ನು ಎಲ್ಲೆಂದರಲ್ಲಿ 'ಸೌಟು ತಿರುಗಿಸುವವ'ರಿಗೆ ಬಳಸಲಾಗುತ್ತದೆ.
ಇವತ್ತಿನ ರಾಜಕಾರಣದ ಕಣಕಣದಲ್ಲೂ 'ಚಮಚಾಗಿರಿ'ಯೇ ತುಂಬಿಹೋಗಿದೆ. ಚುನಾವಣೆ ಬಂತೆಂದರೆ ಸಾಕು ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದೆಲ್ಲಾ ರಾಜಕಾರಣಿಗಳು 'ಕಾಗೆ ಹಾರಿಸು'ತ್ತಾರೆ. ಆದರೂ ನಾವು ಅವರ ಮಾತನ್ನು ನಂಬುತ್ತೇವೆ. ನಾವು ನಂಬುವವರೆಗೂ ಅವರು ಇದೇ ರೀತಿ 'ಗಾಳಿಪಟ ಹಾರಿಸು'ವುದನ್ನು ಬಿಡುವುದಿಲ್ಲ. ಮೊದಲಿನ ಕಾಲದ ರಾಜಕಾರಣಿಗಳಿಗೆ ನೈತಿಕತೆ ಇರುತ್ತಿತ್ತು ಎಂದು ಹಿರಿಯರು ಬಡಬಡಿಸುವುದನ್ನು ಕೇಳುತ್ತೇವೆ. ಆದರೆ ಇವತ್ತಿನ ಕಾಲದಲ್ಲಿ ನೈತಿಕತೆಗಳೆಲ್ಲ ನೀತಿಕತೆಗಳಿಗೆ ಮಾತ್ರ ಸೀಮಿತವಾಗಿದೆ. ಎಲ್ಲರೂ 'ಪಡಪೋಶಿ'ಗಳೇ ತುಂಬಿಹೋಗಿದ್ದಾರೆ. ಮರಿ ಪುಢಾರಿಯಿಂದ ಹಿಡಿದು ಹಿರಿ ಪುಢಾರಿಯವರೆಗೆ ಎಲ್ಲರೂ ತಮ್ಮದೇ 'ಕೋಲು' ಎನ್ನುವವರೇ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ಎಲ್ಲರೂ ಒಂದಾದ ಮೇಲೊಂದು 'ಭೋಂಗು ಬಿಡು'ತ್ತಾ ಜನರ ತಲೆಗೆ 'ಎಣ್ಣೆ ಸವರು'ತ್ತಾರೆ. ಮೊಟ್ಟ ಮೊದಲಿಗೆ ಈ ಪ್ರಕ್ರಿಯೆ ಪ್ರಣಾಳಿಕೆ ಬಿಡುಗಡೆಯ ಮೂಲಕ ಶುಭಾರಂಭಗೊಂಡರೆ ಚುನಾವಣೆ ಮುಗಿಯುವ ತನಕವೂ ಒಂದರ ಮೇಲೆ ಒಂದರಂತೆ 'ಪೊಕಳೆ' ಬಿಡುವುದೇ ಇವರ ಕೆಲಸ. ಮತ ಕೇಳಲು ಬಂದಾಗ ಇವರಿಗೆಲ್ಲಾ ಚೆನ್ನಾಗಿ 'ಉಗೀಬೇಕು' ಅನ್ನಿಸಿದರೂ ನಮ್ಮ ಜನರ ಔದಾರ್ಯ ಅಪಾರ.
ಹಾಂ...ಉಗಿಯುವುದು ಎಂದಕೂಡಲೇ ನೆನಪಾಯ್ತು ನೋಡಿ. ನಮ್ಮಲ್ಲಿ ಬೇರೆಯವರನ್ನು ಹೊಗಳುವ ಸಂದರ್ಭದಲ್ಲಿ ಶಬ್ದಗಳೇ ಸಿಗುತ್ತಿಲ್ಲ ಎನ್ನುತ್ತೇವೆ. ಆದರೆ, ಮತ್ತೊಬ್ಬನ್ನನ್ನು ಬಯ್ಯುವಾಗ ನಮಗೆ ಈ ಶಬ್ದ ದಾರಿದ್ರ್ಯ ಉಂಟಾಗುವುದೇ ಇಲ್ಲ. ನಮ್ಮಲ್ಲಿ ಬೈಗುಳಗಳು ಬೇಕಾದಷ್ಟಿವೆ. ಬೇರೆ ಬೇರೆ ವೆರೈಟಿಯಲ್ಲಿ ಉಗುಳು ಪದಗಳು ಲಭ್ಯವಾಗುತ್ತವೆ. ಹುಟ್ಟಿನ ಬಗ್ಗೆ ಪ್ರಶ್ನಿಸುವ ಮೂಲಕ 'ಹುಟ್ಲಿಲ್ಲಾ ಎನಿಸು'ವಂತೆ ಮಾಡುವ ಶಬ್ದಗಳಿಂದ ಹಿಡಿದು, ಆ ಮಗನೆ, ಈ ಮಗನೆ, ಡ್ಯಾಶ್ ಮಗನೆ ಎನ್ನುವವರೆಗೆ ಇದರ ವ್ಯಾಪ್ತಿ ಹರಡಿದೆ. ಇನ್ನು ಇತರರನ್ನು ಮೂದಲಿಸುವುದಕ್ಕೆಂದೇ ಕೆಲವು ಶಬ್ದಗಳನ್ನು ಉಪಯೋಗಿಸುತ್ತೇವೆ. ಯಾವಾಗಲೂ ಬಿದ್ದಲ್ಲೇ ಬಿದ್ದಿರುವ ಸೋಂಬೇರಿಗಳಿಗೆ ನಮ್ಮಲ್ಲಿ 'ಖಾಸಾಭದ್ರ' ಎಂದು ಬೈಯ್ಯುವುದುಂಟು. ಒಂದು ಕಡ್ಡಿಯನ್ನೂ ಇಲ್ಲಿಂದಲ್ಲಿ ಎತ್ತಿಡದ ಖಾಸಾಭದ್ರರು ನಮ್ಮಲ್ಲನೇಕರಿದ್ದಾರೆ. ಬಾಲ್ಯದಿಂದಲೇ ಆ ಥರದ 'ಜಬ್ಬುತನ' ರೂಢಿಯಾದರೆ ಮತ್ತೆಂದೂ ಅವರು ಬದಲಾಗಲಾರರು. ಅವರನ್ನು ಆಲಸಿ ಎನ್ನುವುದಕ್ಕಿಂತ 'ಖಡ್ಡ' ಎನ್ನುವುದೇ ಹೆಚ್ಚು ಸೂಕ್ತ.
ಅವರವರ ಸ್ವಭಾವಕ್ಕನುಗುಣವಾಗಿ ಕೆಲವು ಪದ ಪ್ರಯೋಗಗಳಿವೆ. ಕೆಲವರು ಸೊಕ್ಕಿನ ಮೂಟೆಯಂತಾ ಸ್ವಭಾದವರಿಗೆ 'ಸೊಣಕ' ಎಂದು ಕರೆಯುವ ರೂಢಿಯಿದೆ. ಯಾವುದಕ್ಕೂ ಸರಿಯಾಗಿ ಸ್ಪಂದಿಸದ ಒಂಟು ಹಿಡಿತದವರಿಗೆ 'ಕೊಂಗ' ಎನ್ನುತ್ತಾರೆ. ವಸ್ತುತಃ ಕೊಂಗರು ತಮಿಳುವಂಶದ ರಾಜ ಮನೆತನವಂತೆ. ಗಂಗರು, ಚೋಳರು, ಕದಂಬರು ಇದ್ದಹಾಗೆ. ತಮಿಳಿನವರು ಎಲ್ಲಿಯೇ ಹೋಗಲಿ ಅವರು ಮಾತನಾಡುವುದು ತಮಿಳಿನಲ್ಲೇ. ನೀವು ಬೇರೆ ಭಾಷೆಯಲ್ಲಿ ಅವರನ್ನು ಪ್ರಶ್ನಿಸಿದರೂ ಉತ್ತರಿಸುವುದು ತಮಿಳಿನಲ್ಲೇ ಎಂಬಷ್ಟರ ಮಟ್ಟಿಗೆ ಅವರ ಭಾಷಾಭಿಮಾನವಿದೆ. ಅದು ಇತರರಿಗೆ ಕೆಲವೊಮ್ಮೆ ಕಿರಿಕಿರಿ ಎನಿಸಿದ್ದಕ್ಕೋ ಏನೋ ಅಂಥ ಪಟ್ಟು ಬಿಡದ ಪಟ್ಟುಭದ್ರರಿಗೆಲ್ಲಾ ಕೊಂಗ ನನ್ಮಗ ಎನ್ನುವ ರೂಢಿ ಬೆಳೆಯಿತು. ಇನ್ನು 'ಪೆಂಗ' ಎಂದರೇನೆಂದು ನಿಮಗೆ ಗೊತ್ತೇ ಇದೆ. ಪದೇ ಪದೆ 'ಪಿಗ್ಗಿ ಬೀಳು'ವ ಮಂಗ ಸ್ವಭಾವದವರಿಗೆ ಈ ನಾಮಕರಣ ಮಾಡಲಾಗುತ್ತದೆ. ತಲೆ ಇದ್ದರೂ ತಲೆ ಇಲ್ಲ ನಿನಗೆ, ಶುದ್ಧ ಹೆಡ್ಡ ಎಂದು ಬೈಸಿಕೊಳ್ಳುವ ಕರ್ಮ ಇವರದ್ದು.
ಕೆಲವರು ಮಾತನಾಡುವವರೇ ಮಹಾಶೂರ ಎಂದು ತಿಳಿದುಕೊಂಡವರಂತೆ 'ಖಂಡಾಪಟ್ಟೆ' ಮಾತನಾಡುತ್ತಾರೆ. ಅವರ ಮಾತಿಗೆ ಬ್ರೇಕು ಹಾಕುವುದಕ್ಕೇ ಆಗುವುದಿಲ್ಲ. ಸಮಯಕ್ಕೆ ಸರಿಯಲ್ಲದ್ದನ್ನೂ ಬಡಬಡಿಸುವ ಇಂಥ ಅನಿಯಂತ್ರಿತ ವಾಚಾಳಿತನಕ್ಕೆ 'ಹಲುಬುವಿಕೆ' ಎಂಬ ಪದ ಪ್ರಯೋಗವಿದೆ. ಏನು ಹಲುಬುತ್ತಾನೆ ಮಹಾಶಯ.. ಎಂದು ಉದ್ಘರಿಸುವುದುಂಟು. ಮತ್ತೊಬ್ಬರ 'ತಲೆ ತಿನ್ನು'ವುದೇ ಅವರ ಉದ್ಯೋಗ. ಅವರು ಯಾರ ಎದುರಿಗೆ ಯಾವ ರೀತಿ ವರ್ತಿಸಬೇಕೆಂಬ ಸಾಮಾನ್ಯ ಜ್ಞಾನವೂ ಇರದ 'ಅಸಡ್ಡಾಳ'ರಾಗಿರುತ್ತಾರೆ. ಮಾತು ಎಂಬುದು ವ್ಯಕ್ತಿತ್ವದ ಸೂಚಕ. ಹೇಗೆ ಮಾತನಾಡಬೇಕು, ಏನು ಮಾತನಾಡಬೇಕು ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲದವನನ್ನು ಸಮಾಜ ಗೌರವಿಸುವುದಿಲ್ಲ. ಮಾತು ನಮ್ಮೊಳಗಿನ ಬುದ್ಧಿಮಟ್ಟವನ್ನೂ, ಮೂರ್ಖತನವನ್ನೂ ಸಮಾಜದೆದುರಿಗೆ ತೆರೆದಿಡುತ್ತದೆ. ಮನಸಿಗೆ ಬಂದಂತೆ ವರ್ತಿಸುವವ 'ಮುಟ್ಠಾಳ' ಎನಿಸಿಕೊಳ್ಳುತ್ತಾನೆ. ಒಬ್ಬರ ಮಾತನ್ನು ಇನ್ನೊಬ್ಬರ ಕಿವಿ ತಲುಪಿಸಿ 'ಫಿಟ್ಟಿಂಗ್' ಇಡುವವನನ್ನು 'ಕಿತಾಪತಿ' ಎನ್ನುತ್ತಾರೆ.
ಇನ್ನು ಕೆಲವರಿರುತ್ತಾರೆ. ಅವರಿಗೆ ಮಾಡಲು ಸ್ವಂತದ್ದೇನೂ ಇರುವುದಿಲ್ಲ ಮತ್ತು ಬೇರೆಯವರು ಹೇಳುವುದನ್ನೂ ಕೇಳುವುದಿಲ್ಲ. ಇತರರ ಕಾಲೆಳೆಯುತ್ತಾ ಮಜಾ ಅನುಭವಿಸುವ ಇಂಥವರಿಗಾಗಿಯೇ ದಕ್ಷಿಣ ಕನ್ನಡದ ಪ್ರದೇಶದಲ್ಲಿ 'ಅಂಡೆಪಿರ್ಕಿ' ಎಂಬ ವಿಶಿಷ್ಟ ಶಬ್ದ ಪ್ರಯೋಗವಿದೆ. ಅಂಡೆಪಿರ್ಕಿ ಎಂದರೆ 'ಒಂದು ಸುತ್ತು ಕಮ್ಮಿ' ಎನ್ನುವಂಥ ಅರ್ಧ ಮತಿವಿಕಲರು. ಇವರಿಗೆ ವಸ್ತುತಃ ತುಂಬಾ 'ಪುರಸೊತ್ತು' ಇರುತ್ತದೆ ಮತ್ತು ಸದಾ ಇನ್ನೊಬ್ಬರ ಕುರಿತು ವ್ಯಂಗ್ಯವಾಡುತ್ತಲೇ ಕಾಲ ಕಳೆಯುತ್ತಾರೆ. ಸದಾ ಸರ್ವದಾ ತಮ್ಮನ್ನೇ ತಾನು ಹೊಗಳಿಕೊಳ್ಳುವುದು ಮತ್ತು ಮಾತು ಮಾತಿಗೆ 'ಬಂಡಲ್ ಬಿಡು'ವುದು ಇವರ ಸ್ವಭಾವ. ಇಂಥ 'ಎಕಡಪನ್ನಾಸು'ಗಳನ್ನು ಹತ್ತಿರಬಿಟ್ಟುಕೊಳ್ಳಬಾರದು. ಒಮ್ಮೆ ಬಿಟ್ಟುಕೊಂಡರೆ ತಮ್ಮ 'ಹಲ್ಕಟ್' ಸ್ವಭಾವವನ್ನು ನಮ್ಮ ಮೇಲೂ ಪ್ರದರ್ಶಿಸಿ ನಮ್ಮನ್ನೇ 'ಪರಾಮಶಿ'ಯಾಗುವಂತೆ ಮಾಡುತ್ತಾರೆ. ಅಂಡೆಪಿರ್ಕಿ ಅಷ್ಟೇ ಅಲ್ಲ, ಯವಡಾಸ, ಅಮಶಾಣ್ಯಾ, ಹಲ್ಗಣ್ಣ, ತಿರಸಟ್ಟು ಎಂಬಿತ್ಯಾದಿ ಪದ ಪ್ರಯೋಗಗಳೂ ಇದೇ ಅರ್ಥದಲ್ಲಿ ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿವೆ.
ಕೆಲವೊಮ್ಮೆ ಯಾವುದಾದರೂ ಹೊಸ ಪ್ರದೇಶಕ್ಕೆ ಭೇಟಿಯಿತ್ತಾಗ ಇಂಥ ಹೊಸ ಹೊಸ ಪದಪ್ರಯೋಗಗಳನ್ನು ಕೇಳಿ ಅರ್ಥವಾಗದೇ ಪೆಕರನಾಗಬೇಕಾಗುತ್ತದೆ. ಇಂದಿನ ಕಾಲೇಜು ವಿದ್ಯಾರ್ಥಿಗಳ ಕನ್ನಡ ಕೇಳಿದರೆ 'ಕನ್ನಡ ಎನೆ ಕಿವಿ ನಿಮಿರುವುದು' ನಿಂತು ಹೋಗುತ್ತದೆ. ಮಚ್ಚಾ, ಸಿಸ್ಯಾ, ಇತ್ಯಾದಿ ಶಬ್ದಗಳಿಂದ ಕಿವಿಯ ತೂತು ತುಂಬಿ ಹೋಗುವುದು. ಪರೀಕ್ಷೆ ಚೆನ್ನಾಗಿ ಆಗದಿದ್ದರೆ ಈ ಸಲ ಎಕ್ಸಾಮ್ನಲ್ಲಿ 'ಹೊಗೆ ಹಾಕಿಸ್ಕೋಬೇಕೇನೋ' ಅನ್ನಿಸತ್ತೆ 'ಮಚ್ಚಾ' ಎಂಬುದು ಮಾಮೂಲಿ ಡೈಲಾಗ್. ಇಲ್ಲಿ ಹೊಗೆ ಹಾಕಿಸ್ಕೊಳ್ಳೋದು ಅಂದರೆ ಈ ಸಲವೂ 'ಢುಮ್ಕಿ' ಗ್ಯಾರಂಟಿ ಎಂದೇ ಅರ್ಥ. ಹೊಗೆ ಎಂಬ ಶಬ್ದಕ್ಕೆ ಹೇಗೆ ಆ ಅರ್ಥ ಬಂತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇನ್ನು 'ಬೆಂಕಿ' ಎಂಬ ಶಬ್ದ ಪ್ರಯೋಗವೇ ನಮ್ಮನ್ನು ಸುಡುವಂತಿರುತ್ತದೆ. ನೋಡು ಮಗಾ ಬೆಂಕಿ ಫಿಗರ್ರು ಹೋಗ್ತಾವ್ಳೆ... 'ಮೀಟರ್' ಇದ್ರೆ ಇವ್ಳನ್ನ 'ಪಟಾಯ್ಸು' ನೋಡೋಣ...ಎಂಬೆಲ್ಲಾ ವಿಚಿತ್ರ ಎನಿಸುವ ಮಾತುಗಳು, 'ಡವ್ ಹೊಡೆ'ಯೋದು, 'ಕಾಳ್ ಹಾಕೋದು', ಇತ್ಯಾದಿ ತರಹೇವಾರಿ ಶಬ್ದಗಳು ಕಾಲೇಜ್ ಕ್ಯಾಂಪಸ್ನಲ್ಲಿ ಅನುರಣಿಸುತ್ತಿರುತ್ತವೆ. ಇವನ್ನು ಕೇಳಿದಾಗ ಇದೂ ಒಂದು ಕನ್ನಡಾನಾ ಎನಿಸದಿರದು.
ಇನ್ನು ಕೆಲವು ಶಬ್ದಗಳಿಗೆ ವ್ಯಾಕರಣ ರೀತ್ಯಾ ಶಬ್ದ ಸಾಧುತ್ವವನ್ನು ಹೇಳುವುದು ಸಾಧ್ಯವಿಲ್ಲ. ಅಷ್ಟೇಕೆ ಶಬ್ದಕ್ಕೂ ಅರ್ಥಕ್ಕೂ ಸಂಬಂಧವೇ ಇರುವುದಿಲ್ಲ. ರೀಲು ಸುತ್ತೋದು, ರೈಲು ಬಿಡೋದು, ಬಂಡಲ್ ಹೊಡೆಯೋದು, ಗುಳಿಗೆ ಪ್ರಯೋಗ ಇವೆಲ್ಲಾ ಸುಳ್ಳು ಹೇಳುವಿಕೆ ಎಂಬ ಒಂದೇ ಅರ್ಥವು ಪ್ರಕಟಗೊಳ್ಳುವ ಹಲವಾರು ಮುಖಗಳು. ಕೆಲವರು ತಮ್ಮ ಕಾರ್ಯ ಸಾಧನೆಗಾಗಿ ಇತರರನ್ನು ಹಿಗ್ಗಾಮುಗ್ಗಾ ಹೊಗಳಿ ಅಟ್ಟವೇರಿಸುತ್ತಾರೆ. ಇಂಥ ಭಟ್ಟಂಗಿತನಕ್ಕೆ ಗಾಳಿ ತುಂಬೋದು, ಪಂಪ್ ಹಾಕೋದು, ಮರ ಹತ್ತಿಸುವುದು, ಪುಂಗಿ ಊದುವುದು ಎಂಬ ಪ್ರಯೋಗಗಳಿವೆ. ಇನ್ನು ವಿಪರೀತ ಮಾತಾಡಿ ತಲೆ ಚಿಟ್ಟು ಹಿಡಿಸುವ ಪ್ರತಿಭೆಗೆ ಪಿಟೀಲು ಕುಯ್ಯೋದು, ಮೊಳೆ ಹೊಡೆಯೋದು ಎಂಬಿತ್ಯಾದಿ ಬಿರುದುಗಳನ್ನು ಪ್ರದಾನ ಮಾಡಲಾಗುತ್ತದೆ.
ನಿರ್ಣಯ ತೆಗೆದುಕೊಳ್ಳುವ ಸಮಯದಲ್ಲಿ ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲದವರೂ 'ಮೀನ-ಮೇಷ ಎಣಿಸು'ತ್ತಾರೆ. ಕೆಲವರು ಶ್ರಾವಣದಲ್ಲೂ ತಮ್ಮ 'ಆಷಾಢಭೂತಿತನ' ಮುಂದುವರೆಸುತ್ತಾರೆ. ಇನ್ನು ಕೆಲವರ ಬಳಿ ಸುಮ್ಮನೇ 'ಕುಶಾಲು' ಮಾಡಿದರೂ ಸಹಿಸದೇ ಸಿಟ್ಟಿನಿಂದ 'ಶಾಲು ಕೊಡವು'ತ್ತಾರೆ. ನಮ್ಮಷ್ಟಕ್ಕೆ ನಾವಿದ್ದರೂ ಕೆಲವರು 'ಹಿಂದಿನಿಂದ ಬೊಗಳು'ತ್ತಾರೆ. ಕಾರಣವಿಲ್ಲದೇ ಕೆಲವರು 'ಏಕ್ದಮ್' ಜಗಳಕ್ಕೆ ನಿಲ್ಲುತ್ತಾರೆ. ಕೆಲವರು ಸಮಯವಲ್ಲದ ಸಮಯದಲ್ಲಿ 'ಮಶ್ಕಿರಿ' ಮಾಡುತ್ತಾರೆ. ಬೊಗಳೆ ಬಿಟ್ಟು ರಗಳೆ ಎಬ್ಬಿಸುತ್ತಾರೆ. ಆಮೇಲೆ ಸಂದರ್ಭ ವಿಪರೀತಕ್ಕೆ ಹೋಗಿ 'ಅಪರಾತಪರಾ' ಆಗಿ ಕೆನ್ನೆಗೆ ನಾಲ್ಕು ತಪರಾಕಿ ಬೀಳುವ ಮಟ್ಟ ತಲುಪಿದಾಗ ಹಲ್ಲು ಕಿರಿದು ತಮ್ಮ 'ಚಪರಾಸಿ ಬುದ್ಧಿ'ಯನ್ನು ಪ್ರದರ್ಶಿಸುತ್ತಾರೆ. ಕೆಲವರು ಸ್ವಭಾವತಃ 'ಅಗ್ದೀ ಲಫಂಗ'ರಾಗಿರುತ್ತಾರೆ. 'ಖಂಡತುಂಡ'ವಾಗಿ ಅವರ ದೋಸ್ತಿಯನ್ನು ನಿರಾಕರಿಸಬೇಕು. ಇಲ್ಲವೆಂದರೆ ಅವರ ಜೊತೆ ನಮ್ಮನ್ನೂ ಜನ 'ಬೆಂಡೆತ್ತು'ತ್ತಾರೆ. ಕೆಲವರಂತೂ ಶುರು ಮಾಡಿದ ಕೆಲಸವನ್ನು ಮುಗಿಸುವುದೇ ಇಲ್ಲ. ಅರ್ಧಕ್ಕೇ ಬಿಟ್ಟು ಮತ್ತೊಂದು ಕೆಲಸವನ್ನು ಶುರು ಹಚ್ಚಿಕೊಳ್ಳುವ 'ಜೋಭದ್ರ' ಸ್ವಭಾವದವರಾಗಿರುತ್ತಾರೆ. ಅವರು ಮಾಡುವ ಕೆಲಸವೆಲ್ಲಾ ಅರ್ಧಂಬರ್ಧ 'ಅಟ್ರಾಕಣಿ'ಯೇ ಆಗಿರುತ್ತದೆ.
ಒಟ್ಟಿನಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಸ್ವಭಾವ. ಮನುಷ್ಯನ ಇಂಥಾ ಎಲ್ಲ ಹಳವಂಡಗಳನ್ನು ಸಮರ್ಥವಾಗಿ ಪ್ರತಿನಿಧಿಸುವ ಶಬ್ದಗಳು ಕನ್ನಡದಲ್ಲಿವೆ ಎಂಬುದೇ ಹೆಮ್ಮೆಯ ವಿಷಯ.
ಕನ್ನಡದಲ್ಲಿ ಅನುಕರಣಾವ್ಯಯಗಳು ಹೇರಳವಾಗಿವೆ. ಗೊಳ್ ಎಂದು ನಗುವುದು, ಗೋಳೋ ಎಂದು ಅಳುವುದೂ, ತುಪುತುಪು ಎಂದು ಉದುರುವುದು, ವಟವಟಗುಡುವುದು, ಧುಮುಧುಮು ಹೆಜ್ಜೆ ಹಾಕುವುದು, ಧೋ ಎಂದು ಸುರಿಯುವುದು, ಝಗಮಗ ಹೊಳೆಯುವುದು, ಕಿಟಾರನೆ ಕಿರುಚುವುದು, ಬುಸುಬುಸು ಹೊಗೆಯಾಡುವುದು ಇತ್ಯಾದಿ ಶಬ್ದಗಳು ಆಯಾ ಘಟನೆಯನ್ನು ಸಶಬ್ದವಾಗಿ ವಿವರಿಸುತ್ತವೆ.
ಪದಗಳೊಂದಿಗೆ ಸೆಣಸಲು ಹೋದವರಾರೂ ಗೆದ್ದುಬಂದಿಲ್ಲ. ಅದರ ಬದಲು ಪದಗಳೊಂದಿಗೆ ಸ್ನೇಹ ಬೆಳೆಸುವುದೇ ಉತ್ತಮ. ಪದವಿ ಗಳಿಸಿದ ಮಾತ್ರಕ್ಕೆ, ಪದಕ ಗಳಿಸಿದ ಮಾತ್ರಕ್ಕೆಲ್ಲ ಪದಗಳು ಒಲಿಯುವುದಿಲ್ಲ. ಅದಕ್ಕೆ 'ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿದ್ರೂನೆ ಮೂಗ್ನಲ್ ಮಾತಾಡ್ತೀನಿ' ಅನ್ನೋ ನಿಷ್ಠೆ ಬೇಕು. ಸದಾ ಕಾಲ ಮೆದುಳಿನ ಮೂಲೆಯಲೆಲ್ಲೋ ಪದಗಳು ಗುನ್ಗುನ್ಗುಡುತ್ತಿರಬೇಕು. ಆಗ ಮಾತ್ರ ಪದ ಲೋಕದಲ್ಲಿ ಶಾಶ್ವತ ಪದವಿಯನ್ನು ಪಡೆಯಬಹುದು.
- ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


