ಆಹಾರ ಭದ್ರತೆಯೋ, ಅಧಿಕಾರ ಭದ್ರತೆಯೋ?

ಭಾರತಕ್ಕೆ ನಿಜವಾಗಲು ಆಹಾರ ಭದ್ರತೆಯ ಅವಶ್ಯಕತೆಯೆನೋ ಇದೆ, ಆದರೆ ದೇಶದಲ್ಲಿ ನಡೆಯುತ್ತಿರುವ ಇಂದಿನ ಎಲ್ಲ ಸಮಸ್ಯೆಗಳಿಗೆ ಇದೊಂದೇ ಪರಿಹಾರ ಎನ್ನುವಂತೆ ಬಿಂಬಿಸುವ ಅವಶ್ಯಕತೆ ಇಲ್ಲ. ಸರಣಿ ಹಗರಣಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋದ ಕಾಂಗ್ರೆಸ್ ಒಂಬತ್ತು ವರ್ಷಗಳ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ಈ ಬಿಲ್ ಗೊಂದಲಗಳ ಗೂಡು. ಕಾಂಗ್ರೆಸ್ ಅಂತೂ 2014 ರ ಚುನಾವಣೆ ಗೆಲ್ಲಲೆಂದೇ ತಾನು ನಾಲ್ಕೂವರೆ ವರ್ಷಗಳಿಂದ ಬಚ್ಚಿಟ್ಟ ಬ್ರಹ್ಮಾಸ್ತ್ರ, ಈ ಆಹಾರ ಭದ್ರತಾ ಬಿಲ್ ಎನ್ನುವಂತೆ ಬೀಗುತ್ತಿದೆ.
"ಮೊನ್ನೆ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ಸಿನ ಮಾಧ್ಯಮ ಮುಖ್ಯಸ್ಥರಾದ ಅಜಯ್ ಮೆಕನ್ ಆಹಾರ ಭದ್ರತೆ ಇಂದು ದೇಶದ ಅತ್ಯಂತ ದೊಡ್ಡ ಅವಶ್ಯಕತೆ. ಇದು ಅವಶ್ಯಕತೆ ಇರುವ ಎಲ್ಲ ಭಾರತೀಯರಿಗೂ ಅವರ ಆಹಾರ ಹಕ್ಕನ್ನು ಕೊಡುವ ಪ್ರಯತ್ನ. ಈ ಕೂಡಲೇ ಈ ಮಸೂದೆಯನ್ನು ಜಾರಿಗೆ ತರುವುದು ತುಂಬಾ ಮುಖ್ಯ.
ತಡ ಮಾಡಿದರೆ ಅದೆಷ್ಟೋ ಸಾವುಗಳು ಸಂಭವಿಸಬಹುದು. ಅದಕ್ಕೆಲ್ಲ ಇದನ್ನು ವಿರೋಧಿಸುವವರೇ ಹೊಣೆಯಾಗಬೇಕಾಗಬಹುದು" ಎಂದು ಹೇಳಿದರು. ಅಜಯ್ ಸಾಹೇಬರೇ, ಕಾಂಗ್ರೆಸ್ ಆಹಾರ ಭದ್ರತೆಯ ವಿಷಯ ಮೊದಲ ಬಾರಿಗೆ ತೆಗೆದಿದ್ದು 2009ರ ಜೂನ್ನಲ್ಲಿ ನಾವೀಗ ಇರೋದು 2013ರಲ್ಲಿ. ನಾಲ್ಕೂವರೆ ವರ್ಷಗಳ ನಂತರ ಇಷ್ಟೊಂದು ವಿರೋಧಗಳ ನಡುವೆಯ ಚರ್ಚೆ ಮಾಡದೇ ಕಾಯಿದೆ ಜಾರಿಗೆ ತಂದಿದ್ದೀರಲ್ಲ, ಅಂದರೆ ಇಷ್ಟು ದಿನಗಳಲ್ಲಿ ನಡೆದ ಅದೆಷ್ಟೋ ಸಾವುಗಳಿಗೆ ತಾವೇ ಹೊಣೆಗಾರರೇನು?
ಕೇವಲ ಮೂರು ತಿಂಗಳುಗಳ ಹಿಂದೆ ನಿಮ್ಮದೇ ಸರ್ಕಾರ ದೇಶದಲ್ಲಿ ಬಡತನ ಕಡಿಮೆ ಆಗಿದೆ, ಅದರ ಪ್ರಮಾಣ 37 ಪ್ರತಿಶತದಿಂದ 22 ಪ್ರತಿಶತಕ್ಕೆ ಬಂದಿದೆ ಎಂದು ಹಗಲಿರುಳು ವಾದ ಮಾಡುತ್ತಿತ್ತು! ಆದರೆ, ಇಂದು ಒಮ್ಮಿಂದೊಮ್ಮೇಲೆ ದೇಶದ 69 ಪ್ರತಿಶತ ಜನಕ್ಕೆ, ಅಂದರೆ 62 ಕೋಟಿ ಜನಕ್ಕೆ ಆಹಾರದ ಕೊರತೆಯಿದೆ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ಬಡತನ ಕಡಿಮೆಯಾಗಿದೆ ಎನ್ನುವ ನಿಮ್ಮ ಮಾತು ಶುದ್ಧ ಸುಳ್ಳು ಎಂದಂತಾಯಿತಲ್ಲವೇ? ಅಥವಾ ಇದು ಜಾರಿಗೆ ಬರಬೇಕೆಂದೇ ಈಗ ಸಂಖ್ಯೆ ಹೆಚ್ಚಿಸಿ ಸುಳ್ಳು ಹೇಳುತ್ತಿದ್ದೀರಿ. ನಿಜವಾದ ಸಂಖ್ಯೆ ತಿಳಿಯಬೇಕೆಂದರೆ ದೇಶದೆಲ್ಲೆಡೆ ಒಂದು ನೈಜ ಸಮೀಕ್ಷೆಯಾಗಬೇಕು. ಅದರಲ್ಲಿ ಬರುವ ಅನೇಕ ವಿಷಯಗಳನ್ನು ಪರಿಗಣಿಸಿ ಎಷ್ಟು ಜನಕ್ಕೆ ಆಹಾರ ಭದ್ರತೆಯ ಅವಶ್ಯಕತೆಯಿದೆಯೆಂದು ನಿರ್ಧಾರವಾಗಬೇಕು. ಆದರೆ, ಯಾವುದೇ ಸಮೀಕ್ಷೆಯಾಗದೆ ನೀವು ಫಲಾನುಭವಿಗಳ ಸಂಖ್ಯೆ ಅದ್ಹೇಗೆ ಮೊದಲೇ ಹೇಳುತ್ತಿದ್ದೀರಿ?
ಇಂದು ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದೇಶಗಳಿಗೆ ಭಾರತದ ಮೇಲೆ ನಂಬಿಕೆ ಹೊರಟುಹೋಗಿ ಅವರು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಬೆಲೆಯೇರಿಕೆ ಹಾಗು ಹಣದುಬ್ಬರ ಸಾಮಾನ್ಯ ಜನರನ್ನು ಕಾಡುತ್ತಿದೆ. ನಿರುದ್ಯೋಗ ಸಮಸ್ಯೆ ಎಲ್ಲ ಸಮಯಕ್ಕಿಂತ ಹೆಚ್ಚಿದೆ. ಭ್ರಷ್ಟಾಚಾರ ಅತಿಯಾಗಿದೆ. ರೈತರಿಗೆ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ, ಆದರೂ ಗೊಬ್ಬರದ ಬೆಲೆ ಗಗನಕ್ಕೇರಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕೈಗೆಟಕುತ್ತಿಲ್ಲ. ಇಂಥಹ ಅನೇಕ ಸಮಸ್ಯೆಗಳ ಮಧ್ಯೆ, ದೇಶದ ಬೊಕ್ಕಸಕ್ಕೆ ಕೈ ಹಾಕಿ ಒಂದು ಲಕ್ಷ ಇಪ್ಪತ್ತುನಾಲ್ಕು ಸಾವಿರ ಕೋಟಿ ರುಪಾಯಿಯ ಈ ಹೊಸ ಕಾಯ್ದೆ ಜಾರಿಗೆ ತರುವುದು ಸರಿಯೇ?
ದಿನವೊಂದಕ್ಕೆ 2,500 ಜನ ರೈತರು ಉಳುಮೆಯ ಕೆಲಸವನ್ನು ಬಿಟ್ಟು ಬೇರೆ ಕೆಲಸಕ್ಕೆ ತೆರಳುತ್ತಿದ್ದಾರೆ. ಇಂದಿಗೂ ನಿಮ್ಮದೇ ಸರ್ಕಾರವಿರುವ ಮಹಾರಾಷ್ಟ್ರದಲ್ಲಿ ದಿನಕ್ಕೆ ಮೂರು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ನೈಜವಾಗಿ ರೈತನಿಗೆ ಬೇಕಿರುವುದು ನಿಮ್ಮ ಕಡಿಮೆ ದರದ ಆಹಾರ ಧಾನ್ಯಗಳಲ್ಲ, ಬದಲಾಗಿ ಉತ್ತಮ ಗುಣ ಮಟ್ಟದ ಬೀಜಗಳು, ವಿದ್ಯುತ್, ಸಾಕಷ್ಟು ಡೀಸೆಲ್ ಹಾಗೂ, ಬೆಳೆಗೆ ಉತ್ತಮ ಬೆಲೆ. ಆಹಾರ ಭದ್ರತೆ ಯಶಸ್ಸು ಆಗುವುದು 350 ಮಿಲಿಯನ್ ಟನ್ ಧಾನ್ಯ ಬೆಳದಾಗ ಮಾತ್ರ. ಅಷ್ಟು ಬೆಳೆದರೆ ಆಹಾರ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ಅಷ್ಟಕ್ಕೂ ಬೆಳೆಯದೆ ಇರುವುದನ್ನು ನೀವು ಅದ್ಹೇಗೆ ವಿತರಿಸುವಿರಿ?
ಇನ್ನು ಹಣ ಸಂಗ್ರಹಣೆ ಬಗ್ಗೆ ಬರುವುದಾದರೆ, ಕಳೆದ ವರ್ಷ ಹಾಗೂ ಈ ವರ್ಷ ಬಜೆಟ್ನಲ್ಲಿ ಇದಕ್ಕಾಗಿ ಮಿಸಲಾತಿ ಇಟ್ಟಿದ್ದೀವಿ ಎಂದು ಹೇಳುತ್ತದೆ ಕಾಂಗ್ರೆಸ್. ಆದರೆ ಸ್ವಾಮಿ ಬಜೆಟ್ನಲ್ಲಿ ಹೇಳುವ ಗುರಿಗೂ ನಿಜವಾದ ಸಂಗ್ರಹಣೆಗೂ ಅಜಗಜಾಂತರ ವ್ಯತ್ಯಾಸ. ದೇಶದ ಅರ್ಥಿಕ ಪರಿಸ್ಥಿತಿ ಇಷ್ಟು ಹದಗೆಟ್ಟಾಗ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗುವುದಾದರು ಹೇಗೆ? ಈಗಾಗಲೇ ಇಡೀ ದೇಶದಲ್ಲಿ ಫೇಕ್ ರೇಶನ್ ಕಾರ್ಡ್, ರೇಶನ್ ಅಂಗಡಿಯವರ ಅವ್ಯವಹಾರಗಳು ಲೆಕ್ಕವಿಲ್ಲದೇ ನಡೆಯುತ್ತಿರುವಾಗ ನಿಮ್ಮ ಆಹಾರ ಭದ್ರತೆ ನಿಜವಾಗಲು ಬೇಕಾದವರಿಗೆ ಹೇಗೆ ಮುಟ್ಟಲು ಸಾಧ್ಯ? ಕೇಂದ್ರದ ಬೊಕ್ಕಸ ತುಂಬಿದಾಗ ಇಂಥ ದೊಡ್ಡ ಮೊತ್ತದ ನೀತಿ ಜಾರಿಗೆ ತರಲು ಸಾಧ್ಯ. ಆದರೆ, ಪ್ರಸಕ್ತ ಅರ್ಥಿಕ ಪರಿಸ್ಥಿತಿ ನೋಡಿದರೆ ಮಧ್ಯಮವರ್ಗದವರ ಒಂದು ಪಾಕೆಟ್ನಿಂದ ಜಾಸ್ತಿ ಹಣ ತೆಗೆದು ಅವರ ಇನ್ನೊಂದು ಪಾಕೆಟ್ಗೆ ಹಣ ಹಾಕಿ ನೀವೇ ನಿಮ್ಮ ಬೆನ್ನು ತಟ್ಟಿಕೊಳ್ಳಲು ಪಿತೂರಿ ನಡೆಸುತ್ತಿದ್ದೀರಿ!
ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವ ಐದು ಸದಸ್ಯರಿರುವ ಮನೆಗೆ 35 ಕೆಜಿ ಅಕ್ಕಿ ದೊರೆಯುತ್ತದೆ. ಆದರೆ ನಿಮ್ಮ ಹೊಸ ಕಾಯಿದೆಯಿಂದ ಅವರಿಗೆ 25 ಕೆಜಿ, ಅಂದರೆ 10 ಕೆಜಿ ಅಕ್ಕಿ ಕಡಿಮೆ ಸಿಗುತ್ತದೆ. ಈ ಬಿಲ್ ನಿಂದ ಅವರಿಗೆ ನಷ್ಟವಾಗುವ ಹತ್ತು ಕೆಜಿ ಅಕ್ಕಿಯನ್ನು ಹೊರಗಡೆಯಿಂದ ಖರೀದಿ ಮಾಡಬೇಕು. ಇದು ಬಡವರಿಗೆ ನೀವು ಮಾಡುತ್ತಿರುವ ಅನ್ಯಾಯವಲ್ಲದೆ ಇನ್ನೇನು? ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಬಿಸಿಯೂಟದ ಕಾರ್ಯಕ್ರಮದಲ್ಲಿ ಒಂದು ಮಗುವಿಗೆ 180 ಗ್ರಾಂ ಆಹಾರ ಒಂದು ಹೊತ್ತಿಗೆ ಕೊಡಲಾಗುತ್ತದೆ. ಆದರೆ ನಿಮ್ಮ ಈ ಆಹಾರ ಭದ್ರತೆಯಲ್ಲಿ ವಯಸ್ಕರಿಗೆ ಎರಡು ಹೊತ್ತಿನ ಊಟ ಸೇರಿಸಿ 160 ಗ್ರಾಂ ಸಾಕು ಎಂದು ಹೇಳಿದ್ದೀರಿ. ಇದ್ಯಾವ ಲೆಕ್ಕ, ಇದೆಂಥ ಆಹಾರ ಭದ್ರತೆ?
ಇನ್ನು ದೇಶದ ಬಹುತೇಕರನ್ನು ಕಾಡುತ್ತಿರುವುದು ಆಹಾರದಲ್ಲಿ ಪೌಷ್ಟಿಕತೆಯ ಕೊರತೆ ಹಾಗು ಆಹಾರದಲ್ಲಿ ಕ್ಯಾಲೋರಿಗಳ ಅಭಾವ. ಈಗಿನ ಕಾಯಿದೆಯಲ್ಲಿ ಈ ಬಗ್ಗೆ ಯಾವ ವಿಶೇಷ ಕಾಳಜಿಯನ್ನೂ ವಹಿಸಿಲ್ಲ. ಕಡಿಮೆ ಬೆಲೆಯ ಈ ಧಾನ್ಯಗಳಲ್ಲಿ ಅದೆಷ್ಟು ಪರಿಣಾಮಕಾರಿಯಾಗಿ ಈ ಎರಡು ಸಮಸ್ಯೆಗಳನ್ನು ಬಗೆಹರಿಸುತ್ತದೆ ಅನ್ನುವುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.
ಇಷ್ಟೊಂದು ಆಹಾರ ಧಾನ್ಯಗಳನ್ನು ಸರ್ಕಾರ ಖರೀದಿಸಿ ಕಡಿಮೆ ಬೆಲೆಯಲ್ಲಿ ಜನಕ್ಕೆ ಕೊಡುವುದಾದರೆ, ಮತ್ತೊಂದೆಡೆ ರೈತರ ಸಂಖ್ಯೆ ಕುಗ್ಗಿ ಒಟ್ಟಾರೆ ಕೃಷಿ ಉತ್ಪನ್ನ ಕಡಿಮೆಯಾದರೆ, ಹೊರೆ ಬೀಳುವುದು ಸಾಮಾನ್ಯ ಜನರ ಮೇಲೆ ಮಾತ್ರ. ಈಗಾಗಲೇ ಛತ್ತೀಸ್ಗಡದಲ್ಲಿ ಒಂದು ಅದ್ಭುತ ಆಹಾರ ಭದ್ರತಾ ಯೋಜನೆ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಸುಪ್ರೀಂ ಕೋರ್ಟು ಆ ಮಾದರಿಯನ್ನು ಕೇಂದ್ರವೂ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಈಗಾಗಲೇ ತಮಿಳುನಾಡು ಹಾಗು ಛತ್ತಿಸಗಡಗಳು ಕೊಡುತ್ತಿರುವ ಆಹಾರ ಧಾನ್ಯದ ಬೆಲೆಗಿಂತ ಆಹಾರ ಭದ್ರತೆಯ ಈ ಯೋಜನೆಯಲ್ಲಿ ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ.
ನಲವತ್ತು ವರ್ಷಗಳ ಹಿಂದೆ ಇಂದಿರಾ ಗಾಂಧಿಯವರು "ನಾವು ಭಾರತದಿಂದ ಬಡತನ ಹೊಡೆದೋಡಿಸುತ್ತೇವೆ" ಎಂದು ಹೇಳಿ ಚುನಾವಣೆ ಗೆದ್ದಿದ್ದರು. ಸ್ವಾತಂತ್ರ್ಯನಂತರ ಅತಿ ಹೆಚ್ಚು ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಇಂದಿಗೂ ಅದೇ ಮಾತು ಹೇಳಿ ಚುನಾವಣೆ ಎದುರಿಸಲು ಹೊರಟಿದೆ. ವ್ಯತ್ಯಾಸವೇನೆಂದರೆ ಇಂದು ಆ ಮಾತನ್ನು ಹೇಳುತ್ತಿರುವದು ಸೋನಿಯಾ ಗಾಂಧಿ. ಮೊದಲು ನಾಲ್ಕೂವರೆ ವರ್ಷ ಸುಮ್ಮನಿದ್ದ ಕಾಂಗ್ರೆಸ್ ಈಗ ಈ ಆಹಾರ ಭದ್ರತೆಯ ಹೆಸರಿನಲ್ಲಿ ವೋಟು ಅಥವಾ ಸೀಟು ಸೆಕ್ಯುರಿಟಿ ಎದುರು ನೋಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
- ಅನಿಲ್ ಚೆಳಗೇರಿ
anil.chalageri@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


