ಅಂಕಣಗಳು

ದೇವರ ಆಸ್ತಿ ಎಷ್ಟು ಸುರಕ್ಷಿತ?

Published On :

ಘಟನೆ  1:  ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ  ದೇವಾಲಯದ ದೇವರ ವಜ್ರಾಂಗಿಯ 800 ಗ್ರಾಂ ಚಿನ್ನದಮಣಿ ಕಳುವಾಗಿದ್ದು, ಈ ಆಭರಣ ಕೊಟ್ಯಂತರ ರೂಪಾಯಿ ಬೆಲೆ ಉಳ್ಳದ್ದಾಗಿದೆ. ತನಿಖೆ ನಡೆಸಿದಾಗ ದೇವಾಲಯದ ಪ್ರಮುಖ ಅರ್ಚಕರಾದ ನರಸರಾಜ ಭಟ್ಟರೇ ಈ ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಬಯಲಾಯಿತು. ಎಚ್ಚೆತ್ತುಕೊಂಡ ಸರ್ಕಾರ ಅರ್ಚಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ವರದಿಯಾಗಿದೆ.

ಘಟನೆ  2:  ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರ್ಮಮಣ್ಯ ದೇವಾಲಯ ದ ದೇವರ ನೈವೇದ್ಯದ ಬೆಳ್ಳಿ ತಟ್ಟೆ ಕಾಣೆಯಾಗಿದೆ. ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.

ಘಟನೆ  3:  ಉತ್ತರ ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರ ಮಧೂರು ಸಿದ್ಧಿವಿನಾಯಕ ದೇವಾಲಯದ ಸುಮಾರು ರು.25 ಕೋಟಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದು, ಕಳೆದ ವರ್ಷದ ಲೆಕ್ಕಪತ್ರ ಪರಿಶೋಧನಾ ವಿಭಾಗದ ವಾರ್ಷಿಕ ತಪಾಸಣೆಯ ಸಂದರ್ಭದಲ್ಲಿ ಈ ನಾಪತ್ತೆ ಪ್ರಕರಣ ಬಯಲಾಗಿತ್ತು.

ಘಟನೆ  4: 
ಕರಾವಳಿಯ ಸುಮಾರು 800 ವರ್ಷಗಳಷ್ಟು ಪ್ರಾಚೀನ ದೇವಾಲಯವೊಂದರ ನವೀಕರಣಕ್ಕಾಗಿ ದೇವಾಲಯದ ಈ ಹಿಂದಿನ ಕಟ್ಟಡವನ್ನು ಕೆಡವಿದಾಗ ಕೆಲವು ಶತಮಾನಗಳ ಹಿಂದೆ ಆ ದೇವಾಲಯಕ್ಕೆ ಕಾಣಿಕೆ ಯಾಗಿ ನೀಡಿದ ಚಿನ್ನಾಭರಣಗಳ ಕುರಿತ ಆ ಕಾಲದ ದಾಖಲೆಯೊಂದು ಪತ್ತೆಯಾಯಿತು. ಲಕ್ಷಾಂತರ ರುಪಾಯಿ ಮೌಲ್ಯದ ಆಭರಣಗಳು ಅವಾಗಿತ್ತು. ಆದರೆ ಆ ದಾಖಲೆಯಲ್ಲಿರುವಂತೆ ಪ್ರಸ್ತುತ ಆ ಯಾವುದೆ ಆಭರಣಗಳು ದೇವರ ಭಂಡಾರದಲ್ಲಿ ಲಭ್ಯವಿಲ್ಲ. ಹಾಗೆಂದು ಈ ನಡುವಿನ ನೂರಾರು ವರ್ಷಗಳಲ್ಲಿ ಎಂದೂ ಆ ದೇವಾಲಯದ ಮೇಲೆ ಪರಕೀಯ ದಾಳಿ ಅಥವಾ ಕಳ್ಳತನ ನಡೆದ ಸಂಗತಿಯ ಉಲ್ಲೇಖವಿಲ್ಲ. ಹಾಗಾದರೆ ಈ ಆಭರಣಗಳು ಎಲ್ಲಿಗೆ ಹೋದವು? ಈ ಮೇಲಿನ ಒಂದೊಂದು ಘಟನೆಯೂ ಕೂಡ ಆಘಾತಕಾರಿಯಾದುದು. ಜಗತ್ತು ಅಚ್ಚರಿ ಪಡುವಷ್ಟು ಪ್ರಾಚೀನ ದೇವಾಲಯಗಳು ನಮ್ಮ ದೇಶದಲ್ಲಿವೆ. ಕೊಟ್ಯಂತರ ಭಕ್ತರ ಮಿಲಿಯಗಟ್ಟಲೆ ರುಪಾಯಿ ಮೌಲ್ಯದ ಕಾಣಿಕೆಗಳು ಈ ದೇವಾಲಯಗಳಿಗೆ ಪ್ರತೀ ವರ್ಷ ಸಮರ್ಪಿತವಾಗುತ್ತವೆ. ಭಾರತೀಯರ ಸಂಪತ್ತಿನ ಒಂದು ದೊಡ್ಡ ಪಾಲು ದೇವಾಲಯಗಳಲ್ಲಿರುತ್ತದೆ ಎಂಬ ಸತ್ಯ ಈ ಹಿಂದೆ ದಾಳಿಕೋರರಾಗಿ ಬಂದವರಿಗೂ ತಿಳಿದಿತ್ತು. ಕೇರಳದ ಅನಂತ ಪದ್ಮನಾಭ ದೇವಾಲಯದಲ್ಲಿ ಸಂಗ್ರಹಗೊಂಡ ಚಿನ್ನಾಭರಣ ಇದಕ್ಕೆ ಜೀವಂತ ಸಾಕ್ಷಿ.
ಭಾರತೀಯರ ಬದುಕಿನಲ್ಲಿ ದೇವಾಲಯಗಳು ಅವರ ಒಂದು ಭಾಗವೇ ಆಗಿಬಿಟ್ಟಿವೆ. ಇದರ ಪರಿಣಾಮವಾಗಿ ದೇಶದೆಲ್ಲೆಡೆ ದಿನನಿತ್ಯವೂ ಹೊಸ ಹೊಸ ದೇವಾಲಯಗಳು ತಲೆ ಎತ್ತುವ, ಹಳೆಯ ದೇವಾಲಯಗಳು ನವೀಕರಣಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳೂ ಭಕ್ತಜನರ ಸಹಯೋಗ, ಸಹಕಾರದಿಂದಲೇ ನಡೆಯುತ್ತಿವೆ. ದೇವರ ಕುರಿತು ಶ್ರದ್ಧೆ ಇಟ್ಟುಕೊಂಡು ದೇವಾಲಯಕ್ಕೆ ಬರುವ ಭಕ್ತರ ಭಾವನೆಗಳಿಗೂ, ದೇವಾಲಯವನ್ನು ನಿರ್ವಹಿಸುವ ಆಡಳಿತ ಮಂಡಳಿ, ಅರ್ಚಕ ವರ್ಗದ ಭಾವನೆಗಳಿಗೂ ದೊಡ್ಡ ಅಂತರ ಇದೆ. ಭಕ್ತರ ಪಾಲಿಗೆ ದೇವಾಲಯ ಕಷ್ಟಗಳನ್ನು ನಿವಾರಿಸುವ ಶ್ರದ್ಧಾ ಕೇಂದ್ರವಾಗಿ ಇರುತ್ತದೆ. ಆದರೆ ಆಡಳಿತ ವರ್ಗಕ್ಕೆ ಅದೊಂದು ವ್ಯಾವಹಾರಿಕ ಸ್ಥಳವಾಗಿರುತ್ತದೆ.
  ಭಕ್ತರು ದೇವಾಲಯಕ್ಕೆ ಹಣದ ರೂಪದಲ್ಲಿ, ಚಿನ್ನಾಭರಣ, ವಸ್ತುಗಳ ರೂಪದಲ್ಲಿ ಕಾಣಿಕೆ, ಹರಕೆ ಒಪ್ಪಿಸುತ್ತಾರೆ. ಸಾಮಾನ್ಯವಾಗಿ ಭಕ್ತರು ತಾವು ಒಪ್ಪಿಸಿದ ಕಾಣಿಕೆಗಳ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಭಕ್ತರ ಈ ನಡವಳಿಕೆಗಳೇ ನಮ್ಮ ವ್ಯವಸ್ಥೆಯೊಳಗಿನ ದುರುಪಯೋಗಕ್ಕೆ ಕಾರಣ ಎಂದೂ ಹೇಳಬಹುದು.
  ಜನಸಾಮನ್ಯರು ತಾವು ದೇವರಿಗೆ ಹರಕೆ ಹಾಕುವುದರ ಕುರಿತು ಚಿಂತಿಸುತ್ತಾರೆಯೇ ಹೊರತು ತಮ್ಮ ಹಣ, ವಸ್ತುಗಳ ಬಳಕೆ ಹೇಗಾಯಿತು, ಯಾವ ರೀತಿಯಲ್ಲಿ ಆ ಹಣದ ನಿರ್ವಹಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುವುದಿಲ್ಲ. ಕಾರಣ ಅವರಿಗೆ ವ್ಯವಸ್ಥೆಯ ಕುರಿತು ಇರುವ ಗಾಢವಾದ ನಂಬಿಕೆ. ಆದರೆ ಎಂದೂ ಉತ್ತರದಾಯಿತ್ವವನ್ನು ಪ್ರದರ್ಶಿಸದ ಇಂತಹ ಕೇಂದ್ರಗಳು ಎಷ್ಟೋ ವೇಳೆ ಅವ್ಯವಹಾರದ, ಅವ್ಯವಸ್ಥೆಯ ತಾಣಗಳೂ ಆಗಿರುತ್ತವೆ. ಸಾರ್ವಜನಿಕ ಆಡಳಿತಕ್ಕೆ ಒಳಪಟ್ಟ ದೇವಾಲಯಗಳು, ಅಂದರೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಈ ಉತ್ತರದಾಯಿತ್ವ  ಸ್ವಲ್ಪಮಟ್ಟಿಗಾದಾರೂ  ಇರುವುದಾದರೂ ಸಂಪೂರ್ಣ ಖಾಸಗಿ ವ್ಯಕ್ತಿಗಳ ಸ್ವತ್ತಾಗಿರುವ ಅನೇಕ ದೇವಾಲಯ, ಮಠಗಳಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.
  ಇಂಥ ಘಟನೆಗಳು ಎಲ್ಲೋ ದೊಡ್ಡ ದೇವಾಲಯಗಳಲ್ಲಿ ನಡೆದಾಗ ಮಾತ್ರ ಒಂದಷ್ಟು ಚರ್ಚೆಗೆ ಗ್ರಾಸವಾಗಿ, ತನಿಖೆಗೊಳಪಡಬಹುದಾದರೂ ಸಾವಿರಾರು ಸಂಖ್ಯೆಯ ಸಾಮಾನ್ಯ ದೇವಾಲಯಗಳಲ್ಲಿ ಇವೆಲ್ಲ ಮುಚ್ಚಿ ಹೋಗುವ ಸಾಧ್ಯತೆಯೇ ಹೆಚ್ಚು. ಇತ್ತೀಚೆಗೆ ಮಿತ್ರರೊಬ್ಬರ ಜತೆಗೆ ಮಾತನಾಡುವಾಗ ಅವರು ಹೊಸ ಪ್ರಶ್ನೆಯೊಂದನ್ನು ಮುಂದಿಟ್ಟರು. "ದೇವರಿಗಾಗಿ ಪ್ರತಿವರ್ಷವೂ ನೂರಾರು ಕೋಟಿ ರುಪಾಯಿಗಳ ಆಭರಣಗಳು, ಕಿರೀಟ, ಚಿನ್ನ, ವಜ್ರದ ಕವಚಗಳು ತಯಾರಾಗುತ್ತವೆ. ಇಂತಹ ಆಭರಣಗಳ ಕೊಡುಕೊಳ್ಳುವಿಕೆಯ, ತಯಾರಿಕೆಯ ವ್ಯವಹಾರ ಬೆರಳೆಣಿಕೆಯ ಆಡಳಿತ ಮಂಡಳಿಯ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ನಡೆಯುತ್ತಿದೆ. ಇಲ್ಲಿ ಆಭರಣಕ್ಕೆ ಬಳಸಿದ ಚಿನ್ನದ ಗುಣಮಟ್ಟ, ಬೇರೆ ಲೋಹಗಳ ಕಲಬೆರಕೆಯ ಸಾಧ್ಯತೆಯ ಕುರಿತು ಪರೀಕ್ಷೆಗಳು ನಡೆದಿರಬಹುದೆ? ಒಂದು ಗ್ರಾಮ್ ಚಿನ್ನಕ್ಕೂ ಸಾವಿರಾರು ರುಪಾಯಿ ಬೆಲೆಯಿರುವಾಗ, ಈ ಲೋಹದಿಂದ ಕಿಲೋಗಟ್ಟಲೆ ತೂಕದ ಚಿನ್ನ ಖರೀದಿ ನಡೆದು ರಚನೆಯಾಗುವ ಆಭರಣಗಳ ವ್ಯವಹಾರ ಪ್ರಕ್ರಿಯೆ ಪಾರದರ್ಶವಾಗಿರಬಹುದೆ? ಏಕೆಂದರೆ ಕೆಲವು ಕಡೆ ದೇವರ ಆಭರಣಗಳನ್ನು ಒಳಗಿನ ವ್ಯಕ್ತಿಗಳೇ ಯಾರಿಗೂ ಗೊತ್ತಾಗದಂತೆ ಬದಲಿಸಿ ನಕಲಿ ಆಭರಣಗಳನ್ನು ತೊಡಿಸಿರುವುದಿದೆ" ಎಂದರು. ಅನುವಂಶೀಯ ಆಡಳಿತ ಮಂಡಳಿಯ ವಶದಲ್ಲಿದ್ದ ಕೆಲವು ದೇವಾಲಯಗಳನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಂಡಾಗ, ದೇವರ ಭಂಡಾರಕ್ಕೆ ಸೇರಬೇಕಾದ ಎಷ್ಟೋ ವಸ್ತುಗಳನ್ನು ಈ ಆಡಳಿತ ಮಂಡಳಿಯ ವಂಶಸ್ಥರೇ ತಮ್ಮ ವಶದಲ್ಲಿ ಇರಿಸಿಕೊಂಡ, ಅದರ ಹಕ್ಕು ಸಾಧಿಸಲು ಕೋರ್ಟ್ ಮೆಟ್ಟಿಲೇರಿದ ಉದಾಹರಣೆಗಳು ಸಿಕ್ಕವು. ಹೀಗಿರುವಾಗ ದೇವರ ಆಸ್ತಿಯ ಸುರಕ್ಷತೆಯ ಬಗ್ಗೆ ಯಾಕೆ ಇನ್ನೂ ಗಂಭೀರ ಚಿಂತನೆ ಆರಂಭವಾಗಿಲ್ಲ?
  ದೇವರ ಹೆಸರಿನಲ್ಲಿ ದೇವಾಲಯಗಳಿಗೆ ಹರಕೆ ಸಲ್ಲಿಸುವ ಭಕ್ತರೂ ಕೂಡ ಆ ದೇವಾಲಯಗಳ ವ್ಯವಹಾರಗಳ ಬಗೆಗೂ ಒಂದಷ್ಟು ಗಮನ ನೀಡಬೇಕು. ಇಲ್ಲವಾದರೆ ಭಕ್ತರು ಭಕ್ತಿಯಿಂದ ಸಮರ್ಪಿಸಿದ ಹಣ, ಆಭರಣಗಳು ವಂಚಕರ ಪಾಲಾಗಬಹುದು. ಸ್ವಾಮಿ ವಿವೇಕಾನಂದರ "ದರಿದ್ರ ದೇವೋಭವ " ಎಂಬ ಮಾತಿನಂತೆ ತನ್ನ ಸುತ್ತಲಿನ ದೀನ ದುಃಖಿಗಳ, ದರಿದ್ರರ ಬದುಕನ್ನು ಹಸನು ಮಾಡುವುದಕ್ಕಾಗಿ ದೇವಾಲಯದ ಹಣವನ್ನು ವಿನಿಯೋಗಿಸಬಹುದಲ್ಲವೆ? ಮನುಷ್ಯರನ್ನು ಬಡವರನ್ನಾಗಿಸಿ ದೇವರು- ದೇವಾಲಯವನ್ನಷ್ಟೇ ಶ್ರೀಮಂತವಾಸುವ ವ್ಯವಸ್ಥೆ ಒಂದು ಆರೋಗ್ಯಪೂರ್ಣ ವ್ಯವಸ್ಥೆಯಾಗಲು ಸಾಧ್ಯವಿಲ್ಲ.
ದೇವಾಲಯಕ್ಕೆ ಸೇರಿದ ಆಭರಣ, ವಸ್ತುಗಳು, ಆಸ್ತಿ ಅನ್ಯರ ಪಾಲಾದ ಬಗ್ಗೆ ಹೊರಬಂದ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಸರ್ಕಾರವೂ ಧಾರ್ಮಿಕ ಮುಖಂಡರಿಂದ ಸಮ್ಮತಿ ಪಡೆದ ಒಂದು ಪರಿಶೀಲನಾ ಸಮಿತಿಯನ್ನು ನೇಮಿಸಿ ರಾಜ್ಯದ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ಮತ್ತು ಅವಕ್ಕೆ ಸೇರಿದ ಆಸ್ತಿ, ಕಟ್ಟಡ,ಚಿನ್ನಾಭರಣಗಳ ದಾಖಲೀಕರಣವನ್ನು ಮಾಡಬೇಕು. ಎಲ್ಲಾ ಸ್ಥಿರ ಹಾಗೂ ಚರ ಆಸ್ಥಿಗಳ ಮೌಲ್ಯಮಾಪನ ಮತ್ತು ಅವುಗಳ ಅಸಲೀತನವನ್ನು ಪರೀಕ್ಷೆಗೆ ಒಳಪಡಿಸಿ ವರದಿಯನ್ನು ತಯಾರಿಸುವುದರ ಬಗ್ಗೆ ಗಮನ ಹರಿಸಬೇಕು. ಇದನ್ನು ಧಾರ್ಮಿಕ ಮುಖಂಡರು, ಆಡಳಿತ ಮಂಡಳಿಗಳು, ಧಾರ್ಮಿಕ ಕೇಂದ್ರದ ಮೇಲೆ ಸರ್ಕಾರದ ಹಸ್ತಕ್ಷೇಪ ಎಂದು ಭಾವಿಸದೆ, ಭಕ್ತ ಜನ ಶ್ರದ್ಧೆಯಿಂದ ನೀಡಿದ ಕಾಣಿಕೆಗಳಿಗೆ ದೇವಾಲಯಗಳು ಸೂಕ್ತ ಭದ್ರತೆಯನ್ನು ಒದಗಿಸುವುದಕ್ಕೆ, ವಂಚನೆಯನ್ನು ತಡೆಯಲು ಒಂದು ಸೂಕ್ತ ಪರಿಹಾರವಾಗಿ ಭಾವಿಸಬೇಕು. ಇಲ್ಲವಾದರೆ ಭಕ್ತರ ಆಶಯಕ್ಕೆ, ಅವರ ಭಾವನೆಗಳಿಗೆ ಭಂಗ ತರುತ್ತಿರುವ ಇಂತಹ ಪ್ರಕರಣಗಳು ದೇವಾಲಯಗಳೆಂಬ ಶ್ರದ್ಧಾ ಕೇಂದ್ರಗಳ ಮೇಲಿನ ಭಕ್ತರ ನಂಬಿಕೆಯನ್ನು ಹಾಳುಮಾಡಬಹುದಾಗಿದೆ. ಸರ್ಕಾರ ಮತ್ತು ಭಕ್ತ ಜನರು ಈ ಕುರಿತು ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.

- ರೋಹಿಣಾಕ್ಷ ಶಿರ್ಲಾಲು,
ಉಪನ್ಯಾಸಕರು
rohishirlalu@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.