ಅಂಕಣಗಳು

ಮೋದಕ ಪ್ರಿಯನ ಮೂದಲಿಸುವ ಮುನ್ನ...

Published On :

'ಢುಂಢಿ' ಎಂಬ ಕೃತಿಯೊಂದು ಬಿಡುಗಡೆಯಾಗಿ ಗಣೇಶನೂ ಸೇರಿ ಹಿಂದು ದೇವರ ಅವಹೇಳನ ಮಾಡಿರುವ ಬಗ್ಗೆ ಭಾರೀ ವಿರೋಧವೇ ವ್ಯಕ್ತವಾಯಿತು ನಿಜ. ಹಾಗೆ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದವರೆಲ್ಲ ಢುಂಢಿಯನ್ನು ಸಮರ್ಥಿಸಿಕೊಂಡದ್ದೂ ಆಯಿತು.  ಈಗ ಏಳುತ್ತಿರುವ ಪ್ರಶ್ನೆ ನಿಜವಾಗಿಯೂ ಸಮಾಜದಲ್ಲಿ ವೈಮನಸ್ಯ ಸೃಷ್ಟಿಸುತ್ತಿರುವವರು ಯಾರು? 'ಬರೆಯುವುದು ಬರೆಯುವವನ ಧರ್ಮ, ಓದುಗರು ಸಹಿಸಿಕೊಳ್ಳಬೇಕು' ಎಂದು ಸಮರ್ಥನೆಗೆ ನಿಲ್ಲುವುದಾದರೆ  'ವಿಶ್ವರೂಪಂ' ಚಿತ್ರ ಬಿಡುಗಡೆಗೆ ವಿರೋಧಿಸಿದ್ದು ಏಕೆ? ಇದು 'ಅನುಕೂಲ ಸಿಂಧು' ಮನಸ್ಥಿತಿಯಲ್ಲದೆ ಮತ್ತೇನು?  ಢುಂಢಿಯ ಲೇಖಕರಿಗೆ ಬೇಕಿರುವುದು ಸಹಬಾಳ್ವೆಯೋ ಅಥವಾ ಸದಾ ಸಮಾಜದಲ್ಲಿ ಒಡಕಿರುವುದೋ?  ಗಣೇಶನನ್ನು ಅವಹೇಳನ ಮಾಡಿದವರು, ಆ ಅವಹೇಳನ ವನ್ನು ಸಮರ್ಥಿಸಿಕೊಳ್ಳುತ್ತಿರುವವರು ಭಾರತೀಯ ಸಮಾಜದಲ್ಲಿ ಗಣೇಶನ ಸ್ಥಾನವನ್ನೊಮ್ಮೆ ಅರಿಯಬೇಕಿದೆ.  
ಅದು 1893.  ಬ್ರಿಟಿಷ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿದ್ದ ಕಾಲ. ಜನ ಗುಂಪುಗೂಡುವಂತಿರಲಿಲ್ಲ, ಸಮಾರಂಭ, ಆಚರಣೆಗಳ ಹೊರತಾಗಿ.  ಆದರೆ ಸ್ವಾತಂತ್ರ್ಯದ ಕಿಚ್ಚನ್ನು ದೇಶಾದ್ಯಂತ ಪಸರಿಸಲೇಬೇಕಾಗಿತ್ತು. ಲೋಕಮಾನ್ಯ ತಿಲಕರಂತಹ ವ್ಯಕ್ತಿಯ ರೂಪದ ಶಕ್ತಿಗಳು ಹೋರಾಟದ ಮುನ್ನೆಲೆಗೆ ಬಂದಿದ್ದರು. ತಮ್ಮ ಸ್ವರಾಜ್ ಚಳವಳಿಯನ್ನು ಸಂಘಟಿಸಲು ತಂತ್ರ ಹೆಣೆಯುತ್ತಿದ್ದರು. ಆಗ ಪ್ರಾಚೀನ ಗ್ರೀಕರ ಒಲಿಂಪಿಯನ್, ಬರವಣಿಗೆಯನ್ನು ಪ್ರೋತ್ಸಾಹಿಸುವ ಪಿತಿಯಾನ್, ಕೌಶಲಗಳ ಪ್ರದರ್ಶನದ ನಿಮಿಯಾನ್ ತರಹದ ಆಚರಣೆಗಳನ್ನು ತಿಳಿದಿದ್ದ ತಿಲಕರ ಮನಸ್ಸಲ್ಲಿ ಹೊಸ ಯೋಚನೆಗಳು ಮೂಡಿದವು. ತಕ್ಷಣ ಜಾಗೃತರಾದ ತಿಲಕರು, ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಗಣೇಶ ಚತುರ್ಥಿಯನ್ನು 1893ರಿಂದ ಸಾರ್ವಜನಿಕವಾಗಿ ಆಚರಿಸುವ ರೂಢಿ ಶುರುವಿಟ್ಟರು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಹತ್ತನೇ ದಿನ ವಿಸರ್ಜಿಸುವುದು. ನಡುವಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಈ ನೆಪದಲ್ಲಿ ಜನರನ್ನು ಒಂದೆಡೆ ಸೇರಿಸಿ, ಸ್ವರಾಜ್ಯ, ಸ್ವಾತಂತ್ರ್ಯದ ಅರಿವು ಮೂಡಿಸುವ ಪ್ರಯತ್ನ ಮಾಡುವುದು. ಬ್ರಿಟಿಷ್ ಸರ್ಕಾರ ಕಸಿದುಕೊಂಡಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವುದು. ಇಂತಹ ಹಲವಾರು ಕಾರ್ಯಕ್ರಮಗಳನ್ನು ಪ್ರತಿವರ್ಷ ಅನುಸರಿಸಿಕೊಂಡು ಬರತೊಡಗಿದರು. ಇದರ ಪರಿಣಾಮ ಗಣೇಶ ಚತುರ್ಥಿ ರಾಷ್ಟ್ರೀಯ ಹಬ್ಬವೆನ್ನುವಂತೆ ಬದಲಾಗತೊಡಗಿತು. ಇದು ತಿಲಕರ ಸ್ವರಾಜ್ ಚಳವಳಿಗೆ ದೇಶಾದ್ಯಂತ ಸಂಘಟಿತ ರೂಪ ನೀಡಿತು. ಧಾರ್ಮಿಕ ಭಾವೋದ್ರೇಕಗಳನ್ನು ಬದಿಗೊತ್ತಿ ಮುಸಲ್ಮಾನರು, ಕ್ರಿಶ್ಚಿಯನ್ನರು, ಸಿಖ್ಖರು ಭೇದವಿಲ್ಲದೆ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಲ್ಲಿ ಏಕತೆ ಎಂಬುದು ಮನೆ ಮಾಡತೊಡಗಿತು. ರಾಷ್ಟ್ರೀಯವಾದಿ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಿಲಕ್ ಬ್ರಿಟಿಷ್ ಸರ್ಕಾರ ಹೇರಿದ್ದ ಪ್ರತಿಭಟನೆಯ ನಿಷೇಧಕ್ಕೆ ಗಣೇಶೋತ್ಸವದ ಮೂಲಕ ರಂಗೋಲಿ ಕೆಳಗೆ ತೂರಬಲ್ಲೆವೆನ್ನುವುದನ್ನು ಸಾಬೀತು ಮಾಡಿದರು. ಭಾರತದ ಪರಂಪರೆ ಮತ್ತು ತತ್ವಶಾಸ್ತ್ರದ ಆಧಾರದ ಮೇಲೆ ಭಾರತೀಯ ಸಮಾಜವನ್ನು ಪುನರ್ ನಿರ್ಮಿಸುವ ಕನಸು ಕಂಡರು. ಪಾಶ್ಚಮಾತ್ಯರೆಡೆಗಿನ ಕುರುಡು ಅನುಕರಣೆ ಮತ್ತು ಅವರ ಆಧ್ಯಾತ್ಮಿಕ ಮತ್ತು ನೈತಿಕ ದಿವಾಳಿತನ ಒತ್ತಿ ಹೇಳಿದರು. ಅಂದಿನಿಂದ ಸ್ವಾತಂತ್ರ್ಯ ಪಡೆಯುವವರೆಗೂ, ಪಡೆದ ನಂತರವೂ ಗಣೇಶೋತ್ಸವ ಜಾತಿಭೇದ, ಲಿಂಗಭೇದ, ವರ್ಗಭೇದ, ಸಂಪ್ರದಾಯ ಭೇದ, ವಯಸ್ಸಿನ ಭೇದಗಳಿಲ್ಲದೆ ಸಹಬಾಳ್ವೆಯ ತತ್ವವನ್ನು ಪ್ರಚುರಪಡಿಸುತ್ತಾ ಬಂದಿದೆ.
ಈ ಗಣೇಶ ಚತುರ್ಥಿಯನ್ನು ರಾಷ್ಟ್ರಕೂಟರು, ಚಾಲುಕ್ಯರು ಆಚರಿಸುತ್ತಿದ್ದರೂ ಕುಟುಂಬಕ್ಕಷ್ಟೇ ಸೀಮಿತವಾಗಿತ್ತು.  ಹಿಂದೂ ಧರ್ಮದ ಪ್ರಕಾರ ದೇವಾದಿದೇವತೆಗಳಲ್ಲೇ ಪ್ರಥಮ ಪೂಜಿತನು ಈ ನಮ್ಮ ವಿನಾಯಕ. ವಿದ್ಯೆಯ ಕರುಣಿಸು ಗಣಪ ಎಂದು ಬೇಡುವುದೇ ಈತನಿಗೆ ಬರುವ ಬೇಡಿಕೆಗಳಲ್ಲಿ ಅತಿ ಹೆಚ್ಚು. ಮಕ್ಕಳಿಗಂತೂ ಪ್ರಿಯವಾದ ದೇವರು. ಬುದ್ಧಿವಂತಿಕೆಗಾಗಿ, ಅಭ್ಯುದಯಕ್ಕಾಗಿ, ಉತ್ತಮ ಜೀವನಕ್ಕಾಗಿ ಆರಾಧನೆ ಮಾಡುವರು. ಸ್ವಾತಂತ್ರ್ಯ ಹೋರಾಟದ ಫಲವಾಗಿ ಬೀದಿ ಬೀದಿಯಲ್ಲಿಯೂ ಗಣಪನಿಗೆ ಪೂಜೆ. ಗಣೇಶ ಚತುರ್ಥಿಯ ಒಂದು ತಿಂಗಳ ಅವಧಿ ಪ್ರತಿ ದಿನವೂ ಹಬ್ಬ.  ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ (ವರ್ಧಿಸುತ್ತಿರುವ ಚಂದ್ರನ ಅವಧಿಯ ನಾಲ್ಕನೇ ದಿನ) ದೇಶಾದ್ಯಂತ ಗಣಪತಿಯ ಪಾರಿವಾರಿಕ ಪೂಜೆ ಮಾತ್ರವಲ್ಲದೆ ಸಾರ್ವಜನಿಕ ಉತ್ಸವಗಳು ನಡೆಯುತ್ತವೆ. ಜನರು ಮಣ್ಣಿನ ಗಜಾನನ ಗಣಪತಿಯ ಪ್ರತಿಮೆಯನ್ನು ತುಂಬಾ ಉತ್ಸಾಹದಿಂದ ಪ್ರತಿಷ್ಠಾಪಿಸುತ್ತಾರೆ.  ಆನಂತರ ತಮ್ಮ ತಮ್ಮ ಶಕ್ತಿ ಸಾಮರ್ಥ್ಯಗಳಿಗನುಸಾರವಾಗಿ ಬೇರೆ ಬೇರೆ ದಿನಗಳಲ್ಲಿ ಆ ಪ್ರತಿಮೆಯ ವಿಸರ್ಜನೆ ಮಾಡುತ್ತಾರೆ.
ಗಣಪತಿಯ ಜನನ, ಬಾಲ್ಯ, ಬೆಳವಣಿಗೆ, ಗಜಮುಖಗಳ ವಿಚಾರದಲ್ಲಿ ಪುರಾಣಗಳಲ್ಲಿ ದ್ವಂದ್ವವಿದೆ, ನಿಜ.  ಶಿವಪುರಾಣದ ಪ್ರಕಾರ ಪಾರ್ವತಿಯು ಸ್ನಾನ ಮಾಡುತ್ತಿರುವಾಗ ಕಾವಲಿಗೆ ನಿಂತ ಗಣೇಶ ಶಿವನನ್ನು ಒಳ ಬಿಡಲು ನಿರಾಕರಿಸುತ್ತಾನೆ. ಕೋಪೋದ್ರಿಕ್ತನಾದ ಶಿವ ಗಣಪನ ಶಿರಚ್ಛೇಧನ ಮಾಡುತ್ತಾನೆ. ಪಾರ್ವತಿಯ ಸಿಟ್ಟನ್ನು ತಣಿಸಲು ಆನೆಯ ಶಿರವನ್ನು ಜೋಡಿಸುತ್ತಾನೆ. ಬ್ರಹ್ಮವೈವರ್ತ ಪುರಾಣದ ಪ್ರಕಾರ ಆಗ ತಾನೆ ಹುಟ್ಟಿದ ಗಣಪನನ್ನು ನೋಡಲು ದೇವ-ದೇವತೆಗಳು ಬಂದು ಹೋಗುತ್ತಿರುತ್ತಾರೆ. ಏನನ್ನು ನೋಡಿದರೂ ಕುರೂಪವಾಗುವಂತೆ ಹೆಂಡತಿಯಿಂದ ಶಾಪ ಪಡೆದಿದ್ದ ಶನಿಯು ಮಗುವನ್ನು ನೋಡುತ್ತಾನೆ. ಇದರಿಂದ ಗಣಪನ ಮುಖ ವಿಕಾರವಾಗಿ ಹೋಗುತ್ತದೆ. ಆಗ ವಿಷ್ಣುವು ಗಜಮುಖವನ್ನು ತಂದು ಜೋಡಿಸುತ್ತಾನೆ ಎಂದಿದೆ.  ವರಾಹ ಪುರಾಣದ ಪ್ರಕಾರ ಶಿವನಂತೆಯೇ ರೂಪ, ತೇಜಸ್ಸು ಹೊಂದಿದ್ದರಿಂದ ತಾಯಿ ಪಾರ್ವತಿಯು ಗಂಡನಿಗೆ ಸಮನಿರಬಾರದೆಂದು ಈಗಿನ ಗಣಪನ ರೂಪ ಬರುವಂತೆ ಶಾಪ ನೀಡುತ್ತಾಳೆ. ಸ್ಕಂದ ಪುರಾಣದ ಪ್ರಕಾರ ವರೇಣ್ಯನೆಂಬ ರಾಜನ ಮಗನಾಗಿ ಹುಟ್ಟುವ ಗಣೇಶ ಕುರೂಪವಾಗಿರುತ್ತಾನೆ. ಇದರಿಂದ ರಾಜನು ಮಗುವನ್ನು ಕೊಲ್ಲಲು ಸೈನಿಕರಿಗೆ ಆದೇಶಿಸುತ್ತಾನೆ. ಕೊಲ್ಲಲೊಲ್ಲದ ಸೈನಿಕರು ಅರಣ್ಯದಲ್ಲಿದ್ದ ಪಾರ್ಶ್ವಮುನಿಯ ಆಶ್ರಮಕ್ಕೆ ಒಪ್ಪಿಸುತ್ತಾರೆ. ಸಂತಾನವಿಲ್ಲದ ಪಾರ್ಶ್ವಮುನಿಯ ದಂಪತಿ ಸ್ವಂತಮಗುವನಂತೆ  ಸಾಕುತ್ತಾರೆ.  ಹೆತ್ತ ತಾಯಿ, ಸಾಕು ತಾಯಿ ಇಬ್ಬರಿರುವುದರಿಂದಲೇ ಗಣಪನಿಗೆ ದ್ವೈಮಾತುರ ಎಂಬ ಹೆಸರಿದೆ ಎಂದು ವಿವರಿಸಿದೆ. ಗಣೇಶಪುರಾಣದಲ್ಲಿ ಮಾತ್ರ ಗಣಪ ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ರೂಪ ತಾಳುತ್ತಾನೆ ಎಂದಿದೆ.
ಮನ್ಮಥನಂತೆ ಸುಂದರನೂ ಅಲ್ಲದ, ವಿಷ್ಣುವಿನಂತೆ ಸೌಂದರ್ಯ ಪ್ರಿಯನೂ ಅಲ್ಲದ ಗಣಪ, ಭಕ್ತರ ಪಾಲಿಗೆ ಸರ್ವಾಂಗ ಸುಂದರ. ಹನುಮಾನ್ ಚಾಲಿಸಾ, ವಿಷ್ಣು ಸಹಸ್ರನಾಮಗಳ ರೀತಿ ಗಣಪನ ಆರಾಧನೆಗೂ ಗಣಪತಿ ಶತಕಂ ಎಂಬ ಜಪಶ್ಲೋಕಗಳಿದ್ದು ಪ್ರಸಿದ್ಧಿ ಹೊಂದಿವೆ. ಋಗ್ವೇದದಲ್ಲಿ ಗಣಪತಿ ಎಂದರೆ ವಾಕ್, ಧನ, ಅನ್ನ, ವೇದ-ಮಂತ್ರ ಇತ್ಯಾದಿಗಳ ಪಾಲಕ, ಗಣನೀಯ ಪದಾರ್ಥಗಳ ಸ್ವಾಮಿ ಎಂದು ಸಂಬೋಧಿಸಲಾಗಿದೆ. ಮಹಾನ್ ಸರಸ್ವತಿ ಭಕ್ತರಾಗಿದ್ದ ಮೈಸೂರು ಮಹಾರಾಜ ಶ್ರೀಕೃಷ್ಣರಾಜ ಒಡೆಯರು(1794-1869) ವಿದ್ವಾಂಸರ ಮೂಲಕ ಸಿದ್ಧಪಡಿಸಿರುವ ಶ್ರೀತತ್ತ್ವನಿಧಿಯಲ್ಲಿ ಗಣಪತಿಯ 32 ರೂಪಗಳನ್ನು ಪ್ರಸ್ತಾಪಿಸಲಾಗಿದೆ.
ಪುರಾಣದ ಕತೆಯಂತೆ ಎಲ್ಲಾ ದೇವ-ದೇವತೆಗಳಿಗಿಂತ ಚಿಕ್ಕವನು. ಆದರೆ ಬಹಳ ಪ್ರಭಾವಿ. ಗಣಪನ   ಹೆಸರು ಕೇಳದ ಮಕ್ಕಳಿಲ್ಲ, ಗುಡಿ ಇಲ್ಲದ ಊರಿಲ್ಲ, ಮಂದಿರವಿಲ್ಲದ ನಗರವಿಲ್ಲ. ಮಹಾರಾಷ್ಟ್ರದಲ್ಲಿ ಅಷ್ಟ ವಿನಾಯಕ ಗಣಪತಿ ಮಂದಿರಗಳು, ಕರ್ನಾಟಕದಲ್ಲಿ ಪಂಚಮುಖಿ ಗಣಪತಿ ದೇವಾಲಯಗಳು ಗಮನ ಸೆಳೆಯುತ್ತವೆ. ಮಧ್ಯಪ್ರದೇಶದ ಭೇರಾಘಾಟಿನಲ್ಲಿ ಯೋಗಿನೇ ದೇವಾಲಯದಲ್ಲಿ ಗಣೇಶನ ಸ್ತ್ರೀರೂಪದ ವಿಗ್ರಹವಿದೆ. ಅದನ್ನು ಗಣೇಶಾನಿ ಎಂದು ಕರೆಯಲಾಗುತ್ತದೆ. ಭಾರತದಾದ್ಯಂತ ಆಚರಿಸಿದರೂ, ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರಪ್ರದೇಶಗಳಲ್ಲಿ ಗಣೇಶೋತ್ಸವದ ಪ್ರಭಾವ ತುಸು ಹೆಚ್ಚೇ ಇರುತ್ತದೆ. ಕೆನಡಾ, ಮಾರಿಷಸ್, ಸಿಂಗಪೂರ್, ಥೈಲಾಂಡ್, ಕಾಂಬೋಡಿಯಾ, ಬರ್ಮಾ, ಫಿಜಿ, ಅಮೆರಿಕಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.
ಬಹುಸಂಖ್ಯಾತ ಹಿಂದೂ ಧರ್ಮೀಯರಿಗೆ ಗಣೇಶ ಆರಾಧ್ಯದೈವ. ಆದರೆ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ ಹೀಗೆ ಯಾವುದೇ ಧರ್ಮಗಳ ಅಡೆತಡೆಗಳಿಲ್ಲದೆ ಯುವಕರು ಭಾಗವಹಿಸುತ್ತಾರೆ. ಆ ಮೂಲಕ ಏಕತೆ, ಸಹಬಾಳ್ವೆಯ ಪ್ರತೀಕವಾಗಿ ಗಣೇಶ ಚತುರ್ಥಿ ಆಚರಿಸಿಕೊಂಡು ಬಂದಿದೆ. ಇಂತಹ ಗಣೇಶನನ್ನು ಅವಹೇಳನ ಮಾಡುವುದು ಹಾಗೂ ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ವಿದ್ಯಾವಂತರೆನಿಸಿಕೊಂಡವರು, ಬುದ್ಧಿಜೀವಿಗಳೆನಿಸಿಕೊಂಡವರು ಒಂದು ಸಮಾಜದ ನಂಬಿಕೆಗೆ ಪೆಟ್ಟು ನೀಡಲು ಹೊರಟಿದ್ದಾರೆ. ಈಗ ಹೇಳಿ ಸಮಾಜದಲ್ಲಿ ವೈಮನಸ್ಯ ಸೃಷ್ಟಿಸುತ್ತಿರುವವರು ಯಾರು?

- ಗೋಪಾಲಕೃಷ್ಣ ಕೆ. ಸಿ.
gkckm@yahoo.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.