ಭೌತಿಕ ಸತ್ಯ ಮತ್ತು ಭಾವನಾತ್ಮಕ ಸತ್ಯ!

ಮಾನಸಿಕ ಅರಿವಿದ್ದರೂ, ಬಹುತೇಕರು ಗಮನಿಸಿರದ ಒಂದು ಸಂಗತಿಯೆಂದರೆ 'ಭೌತಿಕ ಸತ್ಯ'ದಂತೆಯೇ 'ಭಾವನಾತ್ಮಕ ಸತ್ಯ'ವೂ ಇದೆ. ವೈಜ್ಞಾನಿಕ ವಿಶ್ಲೇಷಣೆಗೆ ಒಳಗಾಗುವ ಭೌತಿಕ ಸತ್ಯವು ಸಾರ್ವಕಾಲಿಕ, ಸಾರ್ವದೇಶಿಕ-ನೀರು, ಗಾಳಿ, ಬೆಂಕಿ, ಸಸ್ಯ, ಮಾನವದೇಹ ಇವುಗಳ ರಚನೆಯನ್ನು ಮತ್ತು ಗಂಡು ಹೆಣ್ಣಿನ ದೇಹದ ರಚನೆಯನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಗಂಡು ಹೆಣ್ಣುಗಳ ಸಂಬಂಧದಿಂದ ಮಗು ಹುಟ್ಟುತ್ತದೆ ಎಂಬುದು ಮನುಷ್ಯನಿಗೆ ಹೇಗೋ ಹಾಗೆ ಪ್ರಾಣಿಗಳಿಗೂ ಅನ್ವಯಿಸುತ್ತದೆ. ಆದರೆ ಯಾರು ಯಾರನ್ನು ಮದುವೆ ಆಗಬಹುದು/ ಆಗಬಾರದು ಎಂಬುದನ್ನು ಸಂಪ್ರದಾಯವು, ಮೌಲ್ಯವು ನಿರ್ಣಯಿಸುತ್ತದೆ. ಉದಾಹರಣೆಗೆ ಕೆಲವೆಡೆ ಅಕ್ಕನ ಮಗಳನ್ನು ಮದುವೆಯಾಗಲು ಅವಕಾಶವಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕೆಲವು ಪಂಗಡಗಳಲ್ಲಿ ಅಣ್ಣನ ಮಗಳಂತೆ ಅಕ್ಕನ ಮಗಳ ಜೊತೆಯೂ ವಿವಾಹ ನಿಷಿದ್ಧ. ಉತ್ತರ ಕನ್ನಡ ಜಿಲ್ಲೆಯ ಗೆಳೆಯರೊಬ್ಬರು "ಅಕ್ಕನ ಮಗಳನ್ನು ಮದುವೆಯಾಗುವುದಾದರೆ ಅಣ್ಣನ ಮಗಳು ಏಕೆ ಬೇಡ?" ಎಂದು ನನ್ನನ್ನು ಕೇಳಿದಾಗ ಕಕ್ಕಾಬಿಕ್ಕಿಯಾದೆ. ತಾಯಿ ಹೆಣ್ಣು ನಿಜ- ಆದರೆ ಆಕೆ ಬರೀ ಹೆಣ್ಣಲ್ಲ; ಆಕೆ ತ್ಯಾಗ, ವಾತ್ಸಲ್ಯ ಭಕ್ತಿಗಳ ಸಂಕೇತ. ಕಲ್ಲಿನಲ್ಲಿ ಕೆತ್ತಿದ ಮೂರ್ತಿ ದೇವಾಲಯದ ಗರ್ಭಗುಡಿ ಸೇರಿ ಅಲ್ಲಿ ಪ್ರತಿಷ್ಠಾಪಿತವಾದರೆ ಅದು ಬರೀ ಕಲ್ಲಿನ ಶಿಲ್ಪ ಆಗುವುದಿಲ್ಲ- ಅದು ಪವಿತ್ರ, ತಾಯಿಯಂತೆ ಪೂಜಾರ್ಹ. ತಾಯಿ ಹೆಣ್ಣು, ಗರ್ಭಗುಡಿಯ ವಿಗ್ರಹವು ಶಿಲೆ ಎಂಬುದು ಭೌತಿಕ ಸತ್ಯ. ಆದರೆ ಆಕೆ ಬರೀ ಹೆಣ್ಣಲ್ಲ, ಆ ಶಿಲೆ ಬರೀ ಕಲ್ಲೂ ಅಲ್ಲ ಎಂಬುದು ಭಾವನಾತ್ಮಕ ಸತ್ಯ. ಗರ್ಭಗುಡಿಯ ಒಳಕ್ಕೆ ಪೂಜಾರಿಗಳು ಸೂಟು ಧರಿಸಿ, ಚಪ್ಪಲಿ ಧರಿಸಿ ಪ್ರವೇಶಿಸುವಂತಿಲ್ಲ. ತೀರ್ಥೋದಕ, ಬಿಲ್ವಪತ್ರೆ ಇವು ಬರೀ ನೀರು, ಎಲೆ ಅಲ್ಲ. ಮನುಷ್ಯನ ಬದುಕು, ಮೌಲ್ಯಗಳ ಗುಚ್ಛ. ಅಂದರೆ ಭೌತಿಕ ಸತ್ಯದಂತೆಯೇ ಭಾವನಾತ್ಮಕ ಸತ್ಯವೊಂದಿದೆ ಎಂದಾಯಿತು. ಅದೇ ಮನುಷ್ಯನ ಸಾಮಾಜಿಕ ಬುನಾದಿ. ಮನುಷ್ಯನ ಬದುಕು ಮೌಲ್ಯಗಳ ಗಂಟು. ರಾಷ್ಟ್ರಗೀತೆ ಬರೀ ಹಾಡಲ್ಲ, ರಾಷ್ಟ್ರಧ್ವಜ ಕೇವಲ ಬಣ್ಣದ ಬಟ್ಟೆ ಅಲ್ಲ. ಒಂದು ಸಮಾಜ, ರಾಷ್ಟ್ರ ಇವು ಭಾವನಾತ್ಮಕ ಸತ್ಯದ ಅಡಿಗಲ್ಲಿನ ಮೇಲೆ ರೂಪಿತವಾದಂಥವು. ಮನುಷ್ಯನ ದೃಷ್ಟಿಯಿಂದ ಭೌತಿಕ ಸತ್ಯಕ್ಕಿಂತ ಭಾವನಾತ್ಮಕ ಸತ್ಯವೇ ಹೆಚ್ಚು ಮುಖ್ಯ. ಆದರೆ ಪ್ರಾಣಿಗಳಿಗೆ ಭೌತಿಕ ಸತ್ಯವೊಂದೇ ಮುಖ್ಯ.
ವಿಘ್ನರಾಜ ಮತ್ತು ಗೌರಿ: ಗಣಪತಿ ಮತ್ತು ಪಾರ್ವತಿ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ದೇವತೆಗಳು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಜನತೆಯನ್ನು ಒಗ್ಗೂಡಿಸುವುದಕ್ಕಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಮನೆಗಳಲ್ಲಿ ಪೂಜೆಯಾಗುತ್ತಿದ್ದ ಗಣೇಶನ ಹಬ್ಬವನ್ನು ಸಾರ್ವಜನಿಕ ಹಬ್ಬವನ್ನಾಗಿ ಮಾಡಲು ಯಶಸ್ವಿಯಾದರು. ಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ ಹಳ್ಳಿಯ ಅವಿದ್ಯಾವಂತರು ಸೇರಿದಂತೆ ಎಲ್ಲ ಭಾರತೀಯರೂ ಗಣೇಶನ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಅವನು ನೋಡಲು ಭೀಮಕಾಯ, ಆನೆಯಂತೆ ಸಾಧು, ಅವನ ವಾಹನ ಇಲಿ, ಆದರೆ ಕೋಪ ಬಂದರೆ ಊರುಗಳನ್ನೇ ನಾಶ ಮಾಡಬಲ್ಲ. ಅವನು ಶಿಷ್ಟರಿಗೆ ಶಿಷ್ಟ, ದುಷ್ಟರಿಗೆ ಅತಿದುಷ್ಟ. ಅವನು ವಿಘ್ನನಿವಾರಕ. ವಿಘ್ನರಾಜ 'ಮೋದಕ ಪ್ರಿಯ'-ಜನರ ಕಷ್ಟಗಳನ್ನು ನಿವಾರಿಸಿ ಅವರು ಭಕ್ತಿಯಿಂದ ನೀಡುವ ಮೋದಕ (ಸಿಹಿಗಡುಬು)ವನ್ನು ಮುಕ್ಕುತ್ತಾನೆ. ಅವನಿಗೆ ಸಿಹಿಗಡುಬು ಅರ್ಪಿಸುವ ನೆಪದಲ್ಲಿ ಜನರೂ ಅದನ್ನು ಮುಕ್ಕುತ್ತಾರೆ. "ಗಣೇಶ ಬಂದ, ಕಾಯ್ಕಡುಬು ತಿಂದ-ಸಣ್ ಕೆರೇಲಿ ಬಿದ್ದ, ದೊಡ್ ಕೆರೇಲಿ ಎದ್ದ" ಎಂದು ಹಳ್ಳಿ ಹುಡುಗರಾದ ನಾವು ಕೂಗುತ್ತಿದ್ದೆವು. ವರ್ಷಕ್ಕೊಮ್ಮೆ ತಾಯಿ ಗೌರಿ ಅಥವಾ ಪಾರ್ವತಿಯ ಜೊತೆ ಮನೆಗೆ ಬಂದು ಒಂದು ದಿನ ಇದ್ದು ನಮ್ಮನ್ನು ಹರಸುತ್ತಾನೆ ಎಂಬ ಜನರ ಭಾವನೆ ನಿಜ. ಅವನ ತಾಯಿ ಕೈಲಾಸದ ಶಿವನ ಪತ್ನಿಯಾದರೂ ಅವಳ ತಂದೆ ಈ ಭೂಲೋಕದ ಹಿಮಗಿರಿ ಅಥವಾ ಹಿಮಾಚಲ-ಆದ್ದರಿಂದ ಅವಳು 'ಗಿರಿಜೆ'. ಅವಳು ತನ್ನ ಗಂಡನ ಮನೆಯಿಂದ ತವರು ಮನೆಗೆ ಭೂಮಿಗೆ ಮಗನ ಸಮೇತ ಬಂದು ಹೋಗುವುದು, ಹೆಣ್ಣು ತನ್ನ ಗಂಡನ ಮನೆಯಿಂದ ಮಗು ಸಮೇತ ತವರು ಮನೆಗೆ ಬರುವುದರ ಸಂಕೇತ. ಉಳಿದ ದೈವಗಳಿಗಿಂತ ಜನರಿಗೆ ಗಣಪತಿ ಬಹು ಆತ್ಮೀಯ. ಅವನನ್ನು ಗೌರಿಯನ್ನು ಒಟ್ಟಾರೆ ಪೂಜಿಸಿ ಸತ್ಕರಿಸಿ ಜನರು ಮತ್ತೆ ವಾಪಸ್ ಕಳುಹಿಸುತ್ತಾರೆ. ಅರ್ಥಾತ್ ಗೌರಿ ಗಣಪತಿ ಗೌರಿಯರ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಗಣಪತಿಯ ಮೂರ್ತಿಯನ್ನು ಹಲವು ಭಂಗಿಗಳಲ್ಲಿ ವೇಷಗಳಲ್ಲಿ, ಆದರೆ ಗಂಭೀರವಾಗಿ ಪೂಜಿಸುತ್ತಾರೆ.
ಗಣಪತಿಯ ಸ್ತೋತ್ರ ಭಾರತದ ಎಲ್ಲ ಪಂಥಗಳ ಕಾವ್ಯಗಳಲ್ಲಿ ದೊರಕುತ್ತದೆ. ಉದಾ: ಶಿವಭಕ್ತನಾದ ಭೀಮಕವಿಯ (1365) ಬಸವ ಪುರಾಣ, ವಿಷ್ಣುಭಕ್ತ ಕುಮಾರ ವ್ಯಾಸ (1350) ಭಾರತ. ಅವನನ್ನು ಕುರಿತಂತೆ ಹಲವು ಭಿನ್ನ ಭಿನ್ನ ಪೌರಾಣಿಕ ಕತೆಗಳಿವೆ. ಅವನು ಪಾರ್ವತಿಯ ಮೈಯಿಂದ ಉದುರಿದ ಬಣ್ಣದ ಪುಡಿಯಿಂದ ಹುಟ್ಟಿದ, ವ್ಯಾಸಮುನಿಯು ಭಾರತವನ್ನು ಬರೆಯುವ ಮೊದಲು ಗಣಪತಿಯಿಂದ ಒಪ್ಪಿಗೆ ಪಡೆದ ಇತ್ಯಾದಿ. ಇಪ್ಪತ್ತನೇ ಶತಮಾನದಲ್ಲಿ ರಾಷ್ಟ್ರಕವಿ ಕುವೆಂಪು ಬರೆದ 'ಗಣೇಶ ಗಾಥಾ' ಕವನವನ್ನು ನಾನು ಹಲವು ಗಣಪತಿ ಉತ್ಸವಗಳಲ್ಲಿ ಓದಿ, ವ್ಯಾಖ್ಯಾನಿಸಿ ಸಂತೋಷಪಟ್ಟಿದ್ದೇನೆ. ಅವನ ಉತ್ಸವದಲ್ಲಿ ಮಳೆ ಸಮೃದ್ಧವಾಗಿ ಬೀಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
'ಢುಂಢಿ' ಎಂಬುದು ಗಣೇಶನ ಇನ್ನೊಂದು ಹೆಸರು. ಪವಿತ್ರ ಗಂಗಾ ನದಿಯ ದಡದ ಪುಣ್ಯ ಕ್ಷೇತ್ರ ಕಾಶಿಯಲ್ಲಿ 'ಢುಂಢಿ' ಗಣಪತಿ ದೇವಾಲಯವಿದೆ. ಇಂತಹ 'ಢುಂಢಿ' ದೇವತೆಯನ್ನು ಯೋಗೇಶ್ ಮಾಸ್ಟರ್ ಅಪಮಾನಪಡಿಸಿದ್ದಾರೆ. ಅವರ ಕಾದಂಬರಿ 'ಢುಂಢಿ'ಯಲ್ಲಿ -ಗಂಗಾನದಿ ದಡದ ಅರಣ್ಯದಲ್ಲಿ ಗಿರಿಜನರಂತೆ ಅನಾಗರೀಕನಾಗಿ ಶಿವ, ಪಾರ್ವತಿಯರ ಜೊತೆ ಢುಂಢಿ ತಿರುಗಾಡಿಕೊಂಡಿದ್ದ ಎಂದಿದ್ದಾರೆ. ಆದರೆ ಈ ಕಾದಂಬರಿ ವಸ್ತು ಯಾವುದೇ ಪುರಾಣವನ್ನಾಗಲಿ, ನಂಬಿಕೆಯನ್ನಾಗಲಿ ಅವಲಂಬಿಸಿ ಬರೆದದ್ದಲ್ಲ. ಅದು ಪೂರ್ಣ ಸ್ವಕಪೋಲಕಲ್ಪಿತ. ಅಲ್ಲಿಯ ಕೆಲವು ವಾಕ್ಯಗಳು ಹೀಗಿವೆ-(1) "ಯಾರೇ ಬಂದರೂ ಈ ಢುಂಢಿಯಂತಹ ಗಣಪತಿ ಬರಲಾರರು. ಇವನೊಬ್ಬ ಬರಲಿ, ಕ್ರೂರಿ, ಅನಾರ್ಯತನ... ಅಬ್ಬಬ್ಬ ಇವನು ಅಷ್ಟು ಪ್ರಖ್ಯಾತನಾಗಿರುವುದೇ ತನ್ನ ಕ್ರೂರತನದಿಂದ "(ಪು. 110); (2) "ಓ ನಿನ್ನ ಅಮ್ಮ ರುದ್ರನ ಕಡೆಯವರ ಜೊತೆಗೆಲ್ಲಾ ಇರುತ್ತಿದ್ದಳು. ಮಾತಂಗದವರ ಗುಂಪಿನಲ್ಲೆಲ್ಲ ಮಲಕ್ಕೊಂಡು ಬರುತ್ತಿದ್ದಳು. ಬರೀ ಸೋಗಲಾಡಿ". (ಪು. 85, ಮಾತಂಗದವರು = ಕಾಡು ಜನರು. ಎಂದರೆ ಪಾರ್ವತಿ ಹಲವು ಕಾಡು ಜನರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದಳು); (3) "ನಮ್ಮ ಗಣನಾಯಕ ಢುಂಢಿಗೂ ಅವನ ತಂದೆ ಯಾರೋ ತಿಳಿಯದು. ಈಗ ಗಣಪತಿಯಾದ ಮೇಲೆ ಶಿವನಿಗೆ ಮಗನೆನ್ನುತ್ತಾರೆ. ಅಂದುಕೊಳ್ಳಲಿ. ತಾಯಿ ಎಂಬುದು ಸತ್ಯ, ತಂದೆ ಎಂಬುದು ಅಭಿಪ್ರಾಯ" (ಪು. 139. ಅವನು ಅಕ್ರಮ ಸಂತಾನ. ಅವನ ತಾಯಿ ಪಾರ್ವತಿ ಎಂಬುದು ಸತ್ಯ. ಆದರೆ ಅವನ ತಂದೆ ಯಾರು ಎಂಬುದನ್ನು ಯಾರೂ ಅರಿಯರು) (4) "ಹೇ ಪಾರ್ವತಿ, ನಾನು ಸಿದ್ಧನಿದ್ದೇನೆ, ನಿನಗೆ ಬೀಜಗಳನ್ನು ಕೊಡಲು. ನನ್ನ ವೀರ್ಯದಾನವನ್ನು ತೆಗೆದುಕೋ, ಹೇ ದೇವಿ ಎಂದು ಢುಂಢಿಯ ಮನಸ್ಸು ಕೂಗಿ ಹೇಳುತ್ತಿತ್ತು" (ಪು. 206. ಅಂದರೆ ಢುಂಢಿಯು ತನ್ನ ತಾಯಿಯ ಜೊತೆ ಲೈಂಗಿಕ ಸಂಪರ್ಕವನ್ನು ಬೆಳೆಸಲು ಕಾತರನಾಗಿದ್ದ) (5) ಗಣಪತಿಯ ಮೆರವಣಿಗೆಯಲ್ಲಿ ರಥಗಾರರು, ಬಡಗಿಗಳು, ಪಾಲನ್ನರು (ಪುಲ್ಕಸರು, ಅಸ್ಪೃಶ್ಯರು) ಇತ್ಯಾದಿ ಶೂದ್ರ ವರ್ಗದವರು ಮಾತ್ರ ಭಾಗವಹಿಸುತ್ತಿದ್ದರು. ಅದನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ದೂರದಿಂದ ನೋಡುತ್ತಿದ್ದರು. (ಅಂದರೆ ಗಣಪತಿ ಶೂದ್ರರಿಗೆ ಮಾತ್ರ ಪೂಜ್ಯ, ಮೇಲ್ಜಾತಿಯವರಿಗಲ್ಲ) (5) ಗಣಪತಿ ಹಲವು ಬ್ರಾಹ್ಮಣರ ಮನೆಗಳನ್ನು ಲೂಟಿ ಮಾಡಿ ಸಂಪತ್ತನ್ನು ಅಪಹರಿಸುತ್ತಿದ್ದ ಕಳ್ಳ (ಪು. 323). (7) "ದಕ್ಷಿಣದ ಮಹಿಷೂರಿನಲ್ಲಿರುವ ಮಹಾಬಲಾದ್ರಿಯಲ್ಲಿ ಪಾರ್ವತಿಯು ದೇವತೆಗಳು ಬಿಡದೇ ಕುಡಿಸಿದ ಸುರೆಯ ಮತ್ತಿನಲ್ಲಿ ಮಹಿಷಾಗಣದ ಅಸುರಾಸುರನ ಕೊಂದಳು" (ಪು. 322. ವಿಶ್ವವಿಖ್ಯಾತ ಮೈಸೂರಿನ ಚಾಮುಂಡೇಶ್ವರಿ ಹೆಂಡದ ವ್ಯಸನದವಳು, ಮದ್ಯ ಪ್ರಿಯಳು. ಚಾಮುಂಡಿ ಬೆಟ್ಟವು ಹಿಂದೆ 'ಮಹಾಬಲಾದ್ರಿ' ಯೆಂದೇ ಪ್ರಖ್ಯಾತವಾಗಿತ್ತು). ಅಲ್ಲದೇ, ಕಾದಂಬರಿಯಲ್ಲಿ ಉದ್ದಕ್ಕೂ ಸಂಭೋಗ, ಸುರಾಪಾನ, ಕೊಲೆಯ ವಿಷಯಗಳೇ ತುಂಬಿವೆ. ಅದರಲ್ಲೂ ಇಡೀ ಕತೆ ನಡೆದುದು ಪವಿತ್ರ ಗಂಗಾನದಿಯ ದಡದ ಅರಣ್ಯದಲ್ಲಿ. ಇಂತಹ ವಿಕೃತ ಕೃತಿ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿಲ್ಲ.
ಇಡೀ ಭಾರತ ಶ್ರದ್ಧೆಯಿಂದ ಪೂಜಿಸುವ ದೈವಗಳನ್ನು ವಿಕೃತ ರೀತಿಯಲ್ಲಿ ಚಿತ್ರಿಸಿದರೆ ಇಡೀ ಜನಮಾನಸದ ಭಕ್ತಿ ಭಾವವನ್ನು ಅಪಮಾನ ಪಡಿಸಿದಂತೆ. ಇಡೀ ಹಿಂದು ಧರ್ಮಕ್ಕೆ, ಭಾರತಕ್ಕೆ, ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದಂತೆ. ಇಂತಹ ಕಾದಂಬರಿಯನ್ನು ಬರೆದ ಲೇಖಕನಾಗಲಿ, ಅವರನ್ನು ಬೆಂಬಲಿಸಿರುವ ಪ್ರಸಿದ್ಧ ಸಾಹಿತಿ-ವಿಚಾರವಂತರಾಗಲಿ, ತಮ್ಮ ವಿವೇಕವನ್ನು ಕಳೆದುಕೊಂಡಿದ್ದಾರೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಜ್ಞಾನಪೀಠ ಪ್ರಶಸ್ತಿ ಇರಲಿ, ಅಕ್ಷರ ಜ್ಞಾನವೇ ಇಲ್ಲದ ಹಳ್ಳಿಯವರಲ್ಲೂ 'ವಿವೇಕ' ಉಂಟು ಎಂಬುದು ಸ್ವತಃ ಹಳ್ಳಿಗನಾದ ನನ್ನ ಅನುಭವ.
-ಡಾ. ಎಂ. ಚಿದಾನಂದಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


