ದೆಹಲಿ ಗ್ಯಾಂಗ್ರೇಪ್ನ ವಿಷಯವಾಗಿ ಜನರಲ್ಲಿದ್ದ ಸಿಟ್ಟು ಕಡಿಮೆಯಾಗಿರಲಿಲ್ಲ ಎನ್ನುವುದಕ್ಕೆ, ತೀರ್ಪು ಬಂದ ದಿನ ಅವರು ಸಂಭ್ರಮ ಪಟ್ಟ ಪರಿಯೇ ಸಾಕ್ಷಿ. ತೀರ್ಪನ್ನು ಕೆಲ ದಿನಗಳವರೆಗೆ ಮುಂದೂಡಿದಾಗ ರೊಚ್ಚಿಗೆದ್ದ ಜನ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದ್ದರು. ಕ್ರಿಮಿನಲ್ಗಳ ಪರ ವಹಿಸಿದ ವಕೀಲರ ವಿರುದ್ಧ ಕಿಡಿ ಕಾರಿದ್ದರು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕೂಗು ಎಲ್ಲಾ ವಲಯದಿಂದಲೂ ಮಾರ್ದನಿಸಿತು. ಇಡೀ ರಾಷ್ಟ್ರ ಸಿಟ್ಟಿನಿಂದ ಕುದಿಯತೊಡಗಿತ್ತು.
ಈ ಫ್ರಸ್ಟ್ರೇಶನ್ನಲ್ಲಿಯೇ ಕೆಲವರು 'ಗಲ್ಲು ಶಿಕ್ಷೆ ವಿಧಿಸುವುದರಿಂದ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವುದಿಲ್ಲ' ಎಂದು ಹೇಳುತ್ತಿದ್ದಾರೆ. 2011ರಲ್ಲಿ ನಡೆದ ಅಂತಾರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ, ಮಹಿಳೆಯರ ವಿರುದ್ಧ ಅತಿಕೆಟ್ಟದಾಗಿ ವರ್ತಿಸುವ ಕೆಟ್ಟ ಪಟ್ಟ ಭಾರತಕ್ಕೆ ಸಿಕ್ಕಿದೆ!(ಜಿ-20 ರಾಷ್ಟ್ರಗಳಲ್ಲಿ). ದೆಹಲಿ, ಮಣಿಪಾಲ್ ಮತ್ತು ಮುಂಬೈನಲ್ಲಿನ ಅತ್ಯಾಚಾರ ಪ್ರಕರಣಗಳು ದೇಶದ ಗಮನ ಸೆಳೆದಿರಬಹುದು. ಆದರೆ ಭಾರತದಲ್ಲಿ ಪ್ರತಿನಿತ್ಯವೂ ಇಂಥ ನೂರಾರು ಘಟನೆಗಳು ನಡೆಯುತ್ತವೆ ಆದರೆ ಸುದ್ದಿಯಾಗದೇಹೋಗುತ್ತವೆ. 5 ವರ್ಷದಿಂದ- 5 ತಿಂಗಳ ಮಕ್ಕಳೂ ಕೂಡ ಕಾಮುಕರಿಗೆ ಬಲಿಯಾಗಿವೆ.
ಕಠಿಣ ಕಾನೂನು ಮತ್ತು ಹೆಚ್ಚುತ್ತಿರುವ ಜನಜಾಗೃತಿಯ ನಡುವೆಯೂ ಇವೆಲ್ಲ ಘಟಿಸುತ್ತಿವೆ. ಇದಕ್ಕೆ ಕಾರಣವೆಂದರೆ, ಕಾನೂನು ರೂಪಿಸುವವರು ಮತ್ತು ಅದನ್ನು ಅನುಷ್ಠಾನಕ್ಕೆ ತರುವವರು ಅರೆಮನಸ್ಸಿನಿಂದ ಕೆಲಸ ಮಾಡುತ್ತಿರುವುದು. ಪೊಲೀಸರು ತಮ್ಮ ಬಳಿ ದೂರು ದಾಖಲಿಸಲು ಬರುವ ಮಹಿಳೆಯರನ್ನೇ ಅನುಮಾನದಿಂದ ನೋಡುತ್ತಾರೆ ಎನ್ನುವುದು ತಿಳಿಯದ ಸಂಗತಿಯೇನಲ್ಲ. ಅಷ್ಟೇ ಅಲ್ಲ, ಅದೆಷ್ಟೋ ಬಾರಿ ಪೊಲೀಸು ಠಾಣೆಗಳಲ್ಲಿಯೇ ಅತ್ಯಾಚಾರ ನಡೆದುಹೋಗುತ್ತದೆ. ಇನ್ನು ರಾಜಕಾರಣಿಗಳೂ ಈ ವಿಷಯದಲ್ಲಿ ಹಿಂದಿಲ್ಲ. ಉತ್ತರ ಪ್ರದೇಶ, ಬಿಹಾರ, ಹರ್ಯಾಣಾದ ಶಾಸಕರು ಮತ್ತು ಸಚಿವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಸಿಕ್ಕಿಬಿದ್ದ ಉದಾಹರಣೆಗಳು ನಮ್ಮ ಮುಂದಿಲ್ಲವೆ? ಇವರ ಕಾಟ ತಾಳಲಾರದೆ ದೌರ್ಜನ್ಯಕ್ಕೊಳಗಾದವರು ಆತ್ಮಹತ್ಯೆ ಮಾಡಿಕೊಂಡದ್ದೂ ಇದೆ. ಆದರೆ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್, ಮುಂಬೈ ಅತ್ಯಾಚಾರ ಪ್ರಕರಣದಿಂದ ಸ್ಫೂರ್ತಿ ಪಡೆದು(?) 'ಎಲ್ಲಾ ಮಹಿಳೆಯರು ಎಂಥ ಬಟ್ಟೆ ಧರಿಸಬೇಕು' ಎನ್ನುವದನ್ನು ಉಪದೇಶಿಸುತ್ತಾರೆ!
ರಾಜಕೀಯದಲ್ಲಿ ಅವಿವೇಕತನವನ್ನೇ ಪ್ರಮುಖ ಅರ್ಹತೆಯೆಂದು ಪರಿಗಣಿಸಲಾಗುತ್ತಿದೆಯೇನೋ? ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಂಥೋರಮ್, 'ಅತ್ಯಾಚಾರದ ಮೂಲಕ ಗರ್ಭ ಧರಿಸಿದರೆ ಅದನ್ನು ದೇವರ ಕೊಡುಗೆ ಎಂದು ಪರಿಗಣಿಸಬೇಕು' ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು! ಅವರಿಗಿಂತಲೂ ಯಾವ ರೀತಿಯಲ್ಲೂ ಕಮ್ಮಿಯೆನಿಸದ ಹೇಳಿಕೆಯನ್ನು ಆಸಾರಾಂ ಬಾಪೂ ಕೊಟ್ಟಿದ್ದರು. 'ಅತ್ಯಾಚಾರದಲ್ಲಿ ಆ ಯುವಕರದ್ದೆಷ್ಟು ತಪ್ಪಿದೆಯೋ, ಅಷ್ಟೇ ತಪ್ಪು ಆ ಹುಡುಗಿಯದ್ದೂ ಇದೆ. ಆಕೆ ಗುರು ದೀಕ್ಷೆ ತೆಗೆದುಕೊಂಡು, ಸರಸ್ವತಿ ಮಂತ್ರ ಪಠಿಸಬೇಕಿತ್ತು. ಅತ್ಯಾಚಾರಿಗೆ 'ಅಣ್ಣ' ಎಂದು ಕರೆದಿದ್ದರೆ'ಆ ಘಟನೆ ನಡೆಯುತ್ತಲೇ ಇರಲಿಲ್ಲ'
ಎಂದು ಹೇಳಿದ್ದರು. ಈಗ ಇದೇ ಆಸಾರಾಂ ಬಾಪೂ ಅತ್ಯಾಚಾರದ ಆಪಾದನೆ ಹೊತ್ತು ಜೈಲು ಸೇರಿದ್ದಾರೆ! ಹಾಗಿದ್ದರೆ ಇವರು ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ ಯಾರಾದರೂ ಸರಸ್ವತಿ ಮಂತ್ರ ಜಪಿಸಿ ಪಾರಾಗಿರಬಹುದೆ? ಅಪರಾಧಕ್ಕಿಂತ ಅಪರಾಧದ ಜೊತೆಗಿರುವ ಯೋಚನೆ ಇದೆಯಲ್ಲ? ಅದು ಬಹಳ ಅಪಾಯಕಾರಿಯಾದದ್ದು. ಕಳೆದ ವರ್ಷ ರಾಜಸ್ಥಾನದಲ್ಲಿ ತಂದೆಯೊಬ್ಬ, ಕೆಳ ಜಾತಿಯ ಹುಡುಗನೊಬ್ಬನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ ತನ್ನ ಮಗಳ ತಲೆಯನ್ನೇ ಕಡಿದ. ನಂತರ ಆಕೆಯ ತಲೆಯನ್ನು ಹಿಡಿದುಕೊಂಡು ಊರಿನ ತುಂಬೆಲ್ಲ ಅಡ್ಡಾಡಿದ. ಅಲ್ಲಿನ ಯುವತಿಯರು ಇನ್ನೆಂದಿಗೂ ಕೆಳಜಾತಿಯ ಹುಡುಗರತ್ತ ತಿರುಗಿಯೂ ನೋಡಬಾರದು ಎಂಬ ಎಚ್ಚರಿಕೆ ಅದಾಗಿತ್ತಂತೆ.
ಅತ್ಯಾಚಾರ ಇನ್ನಷ್ಟು ಘೋರ ರೂಪ ತಾಳುವುದು, ಅತ್ಯಾಚಾರವೆಸಗುವವನ ಮನಸ್ಸು ಇನ್ನಷ್ಟು ಕ್ರೌರ್ಯಕ್ಕೆ ಕರೆ ಕೊಟ್ಟಾಗ. ನಿರ್ಭಯಾಳ ಮೇಲೆ ಅತ್ಯಾಚಾರವೆಸಗಿದ ಪಾಪಿಗಳಿಗೆ ಕೇವಲ ಸೆಕ್ಸ್ನಿಂದ ತೃಪ್ತಿಯಾಗಲಿಲ್ಲ. ಹಿಂಸೆ ನೀಡಿ ಖುಷಿಪಡುವ ಮನೋವಿಕಾರವೂ ಅಂದು ಅವರಲ್ಲಿ ಕುಣಿದಾಡಿತ್ತು. ಯೋಚಿಸುವುದಕ್ಕೂ ಆಗದಂಥ ಹಿಂಸೆಯನ್ನು ಆ ಯುವತಿಗೆ ಈ ಪಾಪಿಗಳು ಕೊಟ್ಟರು. ಕಬ್ಬಣಿದ ರಾಡೊಂದನ್ನು ಆಕೆಯ ದೇಹದಲ್ಲಿ ತೂರಿಸಿ ಖುಷಿ ಪಟ್ಟರು. ಕಳೆದ ವರ್ಷ ಇಂದೋರ್ನಿಂದಲೂ ಇಂಥದ್ದೇ ಸುದ್ದಿಯೊಂದು ಹೊರಬಿತ್ತು. ವ್ಯಕ್ತಿಯೊಬ್ಬ ಪ್ರತಿದಿನ ಮನೆಯಿಂದ ಹೊರಗೆ ತೆರಳುವಾಗ ತನ್ನ ಹೆಂಡತಿಯ ಗುಪ್ತಾಂಗಗಳಿಗೆ ಬೀಗ ಹಾಕಿ ಹೋಗುತ್ತಿದ್ದನಂತೆ. ಅದಕ್ಕಾತ ಯಾವುದೋ ಆಧುನಿಕ ಉಪಕರಣವನ್ನೋ ಅಥವಾ ಬೆಲ್ಟೊಂದನ್ನೋ ಬಳಸಲಿಲ್ಲ. ಬದಲಾಗಿ ಈ ಕೆಲಸಕ್ಕೆ ಆತ, ಆಕೆಯ ದೇಹಕ್ಕೆ ರಂಧ್ರ ಕೊರೆದಿದ್ದ!
ಗಲ್ಲು ಶಿಕ್ಷೆಯಿಂದ ಕ್ರಿಮಿನಲ್ಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಆಶಿಸುವವರಿಗೆ ಇಂಥ ಮನಸ್ಥಿತಿಯ ಜನರು ನಿಜಕ್ಕೂ ಭಯ/ನಿರಾಸೆ ಹುಟ್ಟಿಸುತ್ತಾರೆ. ಆರೋಪಿಗಳ ಪರ ವಾದಿಸಿದ ವಕೀಲ ಕೂಡ ಇದೇ ರೀತಿಯ ಪ್ರಶ್ನೆಯನ್ನೇ ಕೇಳಿದ. ಅತ್ಯಾಚಾರಿಗಳನ್ನು ಕೊಂದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರಾ? ಗಲ್ಲು ಶಿಕ್ಷೆಯಿಂದ ಅಪರಾಧ ನಿಂತುಹೋಗುತ್ತದಾ? ಎಂದು. ಇದು ಎಷ್ಟು ಸರಿಯೋ, ಎಷ್ಟು ತಪ್ಪೋ ತಿಳಿಯದು. ಆದರೆ ಒಂದಂತೂ ಸತ್ಯ. ವಿವರಿಸಲಾರದಂಥ ಕ್ರೌರ್ಯದಿಂದ ಗಾಯಗೊಂಡ ಜನರ ಮನಸ್ಸುಗಳಿಗೆ ಈ ರೀತಿಯ ತೀರ್ಪು ಒಂದು ಧೈರ್ಯ ನೀಡುತ್ತದೆ, ಭರವಸೆ ನೀಡುತ್ತದೆ. ಅವರ ಭಯ, ನೋವನ್ನು ತುಸು ಶಮನಗೊಳಿಸುತ್ತದೆ.
ಶ್ರೀಕೃಷ್ಣ ಅಶ್ವತ್ಥಾಮನಿಗೆ ವಿಧಿಸಿದಂಥ ಶಿಕ್ಷೆಯನ್ನು ಈಗ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮನೋವಿಕಾರಿಗಳಿಗೆ ವಿಧಿಸಿದ್ದರೆ ಸೂಕ್ತವಾಗುತ್ತಿತ್ತು(ಮೂರು ಸಾವಿರ ವರ್ಷಗಳವರೆಗೆ ಎಲ್ಲಾ ರೋಗಗಳನ್ನು ಹೊತ್ತು ಭೂಮಿಯನ್ನು ಸುತ್ತುಹೊಡೆಯುವುದು). ಈ ಗುಂಪಿನಲ್ಲಿ ಎಲ್ಲರಿಗಿಂತ ಅತಿ ಹೀನವಾಗಿ/ಕ್ರೂರವಾಗಿ ವರ್ತಿಸಿದ ಬಾಲಾಪರಾಧಿಗೆ ಇಂಥ ಶಿಕ್ಷೆ ಸಿಗಲಿ!
ಟಿ.ಜೆ.ಎಸ್ ಜಾರ್ಜ್