ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಬಳ್ಳಿಯ ಹೂಗಳು!

Updated on: 

ಪ್ರಧಾನಿಯಾಗಿ ರಾಜೀವ್ ಗಾಂಧಿಯವರ ಅಲ್ಪಾವಧಿಯ ಸಮಯ ಬಹಳಷ್ಟು ಐತಿಹಾಸಿಕ ಪ್ರಮಾದಗಳಿಗೆ ಕಾರಣವಾಯಿತು. ಅದರಲ್ಲೂ ಬಾಬ್ರಿ ಮಸೀದಿ ಮತ್ತು ಶಾಹ್ ಭಾನು ಪ್ರಕರಣಗಳಂತೂ ಅವರ ಸರ್ಕಾರದ ಅತಿದೊಡ್ಡ ಪ್ರಮಾದಗಳಾದವು. ಮುಸ್ಲಿಂ ಮತಗಳನ್ನು ಸೆಳೆಯಲು ಶಾಹ್ ಭಾನು ಪರವಾಗಿ ಸುಪ್ರಿಂ ಕೋರ್ಟ್ ನೀಡಿದ್ದ ತೀರ್ಪನ್ನೇ ವಿರೋಧಿಸಿದ್ದ ರಾಜೀವ್, ಹಿಂದು ಮತಗಳನ್ನು ಸೆಳೆಯಲು ಬಾಬ್ರಿ ಮಸೀದಿಯನ್ನು ಬಾಗಿಲನ್ನು ತೆರೆಸಿದರು. ಆದರೆ ಅವರ ಈ ಎರಡೂ ತಂತ್ರಗಳೂ ಉಲ್ಟಾ ಹೊಡೆದವು. ಈಗಲೂ ಈ ಘಟನೆಗಳ ಕಹಿ ನೆನಪು ನಮ್ಮ ದೇಶವನ್ನು ಕಾಡುತ್ತಲೇ ಇದೆ.
ಸರ್ಕಾರದ ಈ ದಡ್ಡತನ ಇನ್ನಷ್ಟು ಹೆಚ್ಚಾಗಲಾರದು ಎಂದುಕೊಂಡವರಿಗೆ, ತಾವಂದುಕೊಂಡಿದ್ದು ಸುಳ್ಳು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಯಿತು. ಈಗ ನಮ್ಮ ನ್ಯಾಯಾಲಯ ತನ್ನ ಕಾಮನ್‌ಸೆನ್ಸ್ ಅನ್ನು ಉಪಯೋಗಿಸಿ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಶಾಸಕನೊಬ್ಬ 2 ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾಗಿದ್ದರೆ ಆತನನ್ನು ಅನರ್ಹಗೊಳಿಸಬೇಕು ಎಂಬ ತೀರ್ಪು ನೀಡಿದೆ. ಈ ತೀರ್ಪನ್ನು ಪುನಃ ಪರಿಶೀಲಿಸಬೇಕು ಎಂಬ ಸರ್ಕಾರದ ಸಲ್ಲಿಸಿದ್ದ ಅಹವಾಲನ್ನು ಕೋರ್ಟ್ ತಿರಸ್ಕರಿಸಿದ್ದನ್ನು ನೋಡಿದರೆ, ಅದು ಬಹಳ ಎಚ್ಚರಿಕೆಯಿಂದಲೇ ಈ ಹೆಜ್ಜೆಯನ್ನು ಇಟ್ಟಿದೆ ಎನ್ನುವುದು ಗೊತ್ತಾಗುತ್ತದೆ. ಸಾಂವಿಧಾನಿಕ ನಿಯಮಗಳನ್ನು ಗೌರವಿಸುವ ಸರ್ಕಾರವೊಂದು ನ್ಯಾಯಾಲಯದ ತೀರ್ಪನ್ನು ಅರ್ಥಮಾಡಿಕೊಂಡು ಅದಕ್ಕೆ ಗೌರವ ಕೊಡುತ್ತದೆ. ಆದರೆ ಕಾಂಗ್ರೆಸ್ ಮಾಡಿದ್ದೇನು? ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಉಳಿಸಲು ನ್ಯಾಯಾಂಗದ ತೀರ್ಪನ್ನೇ ಉಲ್ಟಾ ಮಾಡಬಲ್ಲ ಶಾಸನದ ಕರಡನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಟ್ಟಿದೆ. ಕಾಂಗ್ರೆಸ್‌ನ ಈ ನಡೆ ನಿಜಕ್ಕೂ ಅನೈತಿಕವಾದದ್ದು.
ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜಕೀಯ ವರ್ಗದಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಸಂಸ್ಕೃತಿಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುತ್ತಿದೆ ಕಾಂಗ್ರೆಸ್‌ನ ಈ ಹೆಜ್ಜೆ. ಊಹಿಸಲಾರದಂಥ ಘಟನಾವಳಿಗಳಿಗೆ ನಮ್ಮ ಪ್ರಜಾಪ್ರಭುತ್ವ ಸಾಕ್ಷಿಯಾಗುತ್ತಿದೆ. ಅಪಹರಣಕಾರರು ಮತ್ತು ಕೊಲೆಗಡುಕರು ಜೈಲಿನಲ್ಲಿದ್ದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೈಲಿನಲ್ಲಿರುವ ಈ ಚುನಾಯಿತ ಎಂಪಿಗಳನ್ನು ಪ್ರಮಾಣ ವಚನ ಸ್ವೀಕರಿಸಲು ಪೋಲೀಸ್ ಭದ್ರತೆಯಲ್ಲಿ ಕರೆದುಕೊಂಡು ಹೋಗಿ ಮತ್ತು ವಾಪಸ್ ಕರೆದುಕೊಂಡು ಬಂದು ಜೈಲಿಗೆ ಬಿಡಲಾಗುತ್ತಿದೆ. ಕೇಂದ್ರ ಕ್ಯಾಬಿನೆಟ್ ಸಚಿವರು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ, ರಾಜ್ಯ ಕ್ಯಾಬಿನೆಟ್ ಸಚಿವರ ಅತ್ಯಾಚಾರ ಪ್ರಕರಣ ಬಹಿರಂಗವಾಗಿ ಅವರು ಭೂಗತರಾಗುತ್ತಾರೆ. ಬಹಳಷ್ಟು ರಾಜ್ಯಗಳಲ್ಲಿ ಮಂತ್ರಿಗಳು ಭೂ ಮಾಫಿಯಾ, ರಿಯಲ್ ಎಸ್ಟೇಟ್ ಮಾಫಿಯಾ, ಮರಳು ಮಾಫಿಯಾ, ಲಾಟರಿ ಮಾಫಿಯಾಗಳೊಂದಿಗೆ ಕೈಜೋಡಿಸಿ ಕುಣಿದಾಡುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಅವರು ಬಲಿಷ್ಠಗೊಳ್ಳುತ್ತಲೇ ಹೋಗುತ್ತಾರೆ.
ದೇಶದ ದುರ್ದೈವ ಮತ್ತು ವ್ಯಂಗ್ಯವೆಂದರೆ, ಈ ಕ್ರಿಮಿನಲ್‌ಗಳೇ ನಮ್ಮ ದೇಶದ ಕಾನೂನನ್ನು ರೂಪಿಸುವವರು ಎಂಬುದು. 161 ಎಂಪಿಗಳು(30 ಪ್ರತಿಶತ) ಇಂದು ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ 70 ಮಂದಿಯ ವಿರುದ್ಧ ಗಂಭೀರ ಆರೋಪಗಳಿವೆ. ಹಾಗಂತ ಇನ್ನುಳಿದ 70 ಪ್ರತಿಶತ ಎಂಪಿಗಳು ಸಂಭಾವಿದರೆಂದೇನೂ ಅಲ್ಲ. ಸ್ವಹಿತಾಸಕ್ತಿಯ ವಿಷಯ ಬಂದಾಗಲಂತೂ ತಮ್ಮ ರಾಜಕೀಯ ಭೇದವನ್ನು ಮರೆತು ಒಂದೇ ಬಳ್ಳಿಯ ಹೂಗಳಂತೆ ಇವರೆಲ್ಲ ವರ್ತಿಸುತ್ತಾರೆ. 'ಸ್ಥಳೀಯ ಪ್ರದೇಶ ಅಭಿವೃದ್ಧಿಯ' ಹೆಸರಲ್ಲಿ ಇವರುಗಳ ಹುಂಡಿಗೆ ಬಂದು ಬೀಳುವ ಹಣದ ಪ್ರಮಾಣ 1993ಕ್ಕೆ ಹೋಲಿಸಿದರೆ ಈಗ 5 ಪಟ್ಟು ಹೆಚ್ಚಾಗಿದೆ. 2011ರಲ್ಲಿ 2 ಕೋಟಿಯಷ್ಟಿದ್ದ ಆ ಮೊತ್ತ, ಈಗ 5 ಕೋಟಿಗೆ ಜಿಗಿದು ಕುಳಿತಿದೆ. ಹಾಗಂತ ಈ ಹಣವೆಲ್ಲ ಸದ್ಬಳಕೆ ಆಗುತ್ತಿದೆ ಎಂದುಕೊಳ್ಳುವುದು ಮೂರ್ಖತನವಾದೀತು. ಏಕೆಂದರೆ ಇದರಲ್ಲಿ ಬಹುಪಾಲು ಮೊತ್ತ ನಿಯಮಗಳಿಗೆ ವಿರುದ್ಧವಾಗಿ ರಾಜಕಾರಣಿಗಳ ಖಾಸಗಿ ಯೋಜನೆಗಳಿಗೇ ವಿನಿಯೋಗವಾಗುತ್ತದೆ.
ಈ ಆಟದಲ್ಲಿ ಎಲ್ಲಾ ಪಕ್ಷಗಳೂ ನಾಚಿಕೆ ಬಿಟ್ಟು ನುಗ್ಗುತ್ತಿವೆ. ಆರ್ಡಿನೆನ್ಸ್‌ಗೆ ಒಪ್ಪಿಗೆ ದೊರೆತ ತಕ್ಷಣ, ಬಿಜೆಪಿ ಅದನ್ನು ವಿರೋಧಿಸಿತು. ಆದರೆ ಅದು ಕೇವಲ ಬಿಜೆಪಿಯ ಚಾಲಾಕಿ ನಡೆಯಷ್ಟೇ ಹೊರತು, ಸೈದ್ಧಾಂತಿಕ ನಿಲುವಲ್ಲ. ಏಕೆಂದರೆ ಮೊದಲು ನ್ಯಾಯಾಲಯದ ತೀರ್ಪನ್ನು ಬಿಜೆಪಿ ಕೆಂಗಣ್ಣಿನಿಂದಲೇ ನೋಡಿತ್ತು! ಹಾಗೆ ನೋಡಿದರೆ ಕ್ರಿಮಿನಲ್ ಎಂಪಿಗಳನ್ನು ಹೊಂದಿರುವ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿಯೇ ಮುಂಚೂಣಿಯಲ್ಲಿದೆ. ಬಿಜೆಪಿಯಲ್ಲಿ 42 ಕ್ರಿಮಿನಲ್ ಹಿನ್ನೆಲೆ ಎಂಪಿಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ನಲ್ಲಿ ಅಂಥವರ ಸಂಖ್ಯೆ 41 ಇದೆ. ಇನ್ನು ಅದರ ಶೋ ಪೀಸ್ ಆದ ಗುಜರಾತ್ ರಾಜ್ಯದ ಕ್ಯಾಬಿನೆಟ್‌ನಲ್ಲಿ 11 ಜನ ಕಳಂಕಿತರಿದ್ದಾರೆ. ಗುಜರಾತ್‌ನ ಜಲಸಂಪನ್ಮೂಲ ಸಚಿವ ಬಾಬು ಭಾಯ್ ಬೋಖರಿಯಾ(ಬಿಜೆಪಿ) ಅಕ್ರಮ ಗಣಿಗಾರಿಕೆಯಲ್ಲಿ ಶಿಕ್ಷೆಗೊಳಗಾದರೂ, ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಗಿಲ್ಲ ಎಂದರೆ ಲೆಕ್ಕ ಹಾಕಿ! ರಾಜಕಾರಣ ಯಾವ ಹಂತಕ್ಕೆ ಬಂದು ಮುಟ್ಟಿದೆಯೆಂದು? ಇನ್ನು ಉತ್ತರಪ್ರದೇಶದಲ್ಲಿನ ಪಕ್ಷಗಳ ಬಗ್ಗೆ ಎಷ್ಟು ಕಡಿಮೆ ಮಾತನಾಡುತ್ತೀವೋ ಅಷ್ಟು ಒಳ್ಳೆಯದು!
ಇದು ಸಮೂಹ ಗುಣವಾಗಿದ್ದು, ಒಂದು ಚುನಾವಣೆ ಅಥವಾ ಸರ್ಕಾರದ ಬದಲಾವಣೆಯಿಂದ ಈ ಗುಣ ಬದಲಾಗುವಂಥದ್ದಲ್ಲ. ರಾಜಕೀಯ ವೈಖರಿ ಜನತಾ ವಿರೋಧಿಯಾಗೇ ಮುಂದುವರಿಯಲಿದೆ. ಬಂಗಾಳಿಗಳು ಕಮ್ಯುನಿಸ್ಟ್ ಪಕ್ಷದ ಬದಲು ತ್ರಿಣಮೂಲಕ್ಕೆ ಜಾಗ ಕೊಟ್ಟಾಗ ಏನಾಯಿತು? ಉತ್ತರ ಪ್ರದೇಶದಲ್ಲಿ ಮಾಯಾವತಿಯ ಸರ್ಕಾರ ಉರುಳಿಬಿದ್ದು ಮುಖ್ಯ ಪೀಠದಲ್ಲಿ ಯಾದವರು ಬಂದು ಕುಳಿತಾಗ ಏನಾಯಿತು? ಪಕ್ಷಗಳು ಬದಲಾದವಷ್ಟೇ ಹೊರತು, ಹಳವಂಡಗಳಲ್ಲಿ ಬದಲಾವಣೆಯಾಗಲಿಲ್ಲ! ಇಂಥ ಹಿನ್ನೆಲೆಯಲ್ಲಿ ರಾಹುಲ್ ಗಡ ಮೋದಿ ಎನ್ನುವ ಚರ್ಚೆಯನ್ನು ನೋಡಿದಾಗ, ಅದು ಹೆಚ್ಚು ಅರ್ಥ ಪಡೆಯುವುದಿಲ್ಲ. ಮೋದಿಯವರ ಮಾತಿನ ವೈಖರಿ, ಹಾವಭಾವಗಳು, ಅವರನ್ನು ಇರುವುದಕ್ಕಿಂತಲೂ ಹೆಚ್ಚು ದೊಡ್ಡವರನ್ನಾಗಿ ಬಿಂಬಿಸಿಬಿಸುತ್ತಿವೆ. ಇನ್ನೊಂದೆಡೆ ರಾಹುಲ್ ಗಾಂಧಿ ಪ್ರಮುಖ ವಿದ್ಯಮಾನಗಳಿಗೆಲ್ಲ ಹೆಚ್ಚು ಪ್ರತಿಕ್ರಿಯೆ ತೋರಿಸದೇ ಸುಮ್ಮನೇ ಇರುವುದರಿಂದ ಅವರು ನಿಜಕ್ಕೂ (ಇರುವುದಕ್ಕಿಂತಲೂ) ಕುಬ್ಜರಾಗಿ ಕಾಣಿಸುತ್ತಾರೆ. ಸತ್ಯವೇನೆಂದರೆ ಕ್ರಿಮಿನಲ್ ರಾಜಕಾರಣಿಗಳ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೇಗೆ ಭಿನ್ನತೆಯಿಲ್ಲವೋ, ಅದೇ ರೀತಿ ಮೋದಿ ಮತ್ತು ರಾಹುಲ್‌ರ ನಡುವೆಯೂ ಹೆಚ್ಚು ಫರಕ್ಕಿಲ್ಲ!


-ಟಿ.ಜೆ.ಎಸ್. ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com