ಅಂಕಣಗಳು

ಜಂಬೂ ಸವಾರಿ; ತಪ್ಪಿಸಿ ಕಿರಿಕಿರಿ

Published On :

ಮೈಸೂರು ದಸರಾದಲ್ಲಿ ಜಂಬೂ ಸವಾರಿ ಮೆರವಣಿಗೆಯೇ ಪ್ರಮುಖ ಆಕರ್ಷಣೆ. ಅನೇಕ ವರ್ಷಗಳಿಂದ ನಾನು ಗಮನಿಸಿರುವಂತೆ ಅದು ಅತ್ಯಂತ ವೈಭವ, ಸಂಭ್ರಮದಿಂದ ಕೂಡಿದ್ದರೂ ಅತ್ಯಂತ ಅಶಿಸ್ತಿನ, ಗದ್ದಲ, ಗೊಂದಲದ ಮೆರವಣಿಗೆ ಎನ್ನಲು ವಿಷಾದವೆನಿಸುತ್ತದೆ. ಬಹಳ ಜನ ಈ ಅಭಿಪ್ರಾಯ ಒಪ್ಪದಿರಬಹುದು. ಆದರೆ ನಮ್ಮ ದೇಶದ ಹೆಮ್ಮೆಯ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿನ ಶಿಸ್ತು ಮತ್ತು ದಸರೆಯಲ್ಲಿನ ಮೆರವಣಿಗೆ ಶಿಸ್ತು ಗಮನಿಸಿ. ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಂದ ಹಿಡಿದು ಶಿಸ್ತನ್ನು ಕಾಪಾಡಬೇಕಾದ ಪೊಲೀಸರವರೆಗೂ ಎಲ್ಲವೂ ಅಶಿಸ್ತಿನಿಂದ ತಾಂಡವವಾಡುತ್ತಿರುತ್ತದೆ. ನೋಡುಗರಿಗೆ ಅಂಬಾರಿ ಹೊತ್ತ ಗಜಪಡೆಯಷ್ಟೇ ಭವ್ಯವಾಗಿ ಕಾಣಬೇಕೆ ಹೊರತು ಆ ಅಂಬಾರಿಯ ಹಿಂದೆ ಮುಂದೆ ನೂರಾರು ಜನರ ಬೇಡದ ಮೆರವಣಿಗೆ ಅಲ್ಲ!
ಆದುದರಿಂದ ದಸರೆಯ ಹೊಣೆ ಹೊತ್ತವರು ಕೆಲ ಅಂಶಗಳನ್ನು ಪರಿಗಣಿಸಲು ಸಾಧ್ಯವೇ?

1. ಸ್ವಯಂ ಸೇವಕರು, ಸರ್ಕಾರಿ ಅಧಿಕಾರಿಗಳು ಹಾಗೂ ಕೆಲವೊಮ್ಮೆ ಇತರರಿಗೆ ಪರವಾನಿಗೆ ಇದೆ ಎಂದು ಅನಗತ್ಯವಾಗಿ, ಕೆಲಸವೇ ಇಲ್ಲದೆ ಮೆರವಣಿಗೆಯಲ್ಲಿ ಬರಲು ಬಿಡಬೇಡಿ. ಹಾಗೊಮ್ಮೆ ಬರಲೇ ಬೇಕೆಂದರೆ ವಸ್ತ್ರ ಸಂಹಿತೆ ಮತ್ತು ಮಾರ್ಗಸೂಚಿ ನಿಗದಿಪಡಿಸಿ.
2. ಕಲಾವಿದರೊಂದಿಗೆ ಬಹಳಷ್ಟು ಬಾರಿ ಬೇಡದವರೆಲ್ಲ ಮೆರವಣಿಗೆಯಲ್ಲಿ ಸೇರಿಕೊಂಡಿರುತ್ತಾರೆ. ಇವರೆಲ್ಲ ಏಕೆ ಬೇಕು? ಕೆಲವೊಮ್ಮೆ ಈ ಕಲಾ ತಂಡಗಳು ತಮ್ಮ 'ಬ್ಯಾನರ್‌'ಗಳು ಹಿಡಿದು ಹೇಗೇಗೋ ಸಾಗುತ್ತಿರುತ್ತಾರೆ. ಇದರ ಬದಲು ಕ್ರೀಡಾಕೂಟಗಳಲ್ಲಿ ಇದ್ದಂತೆ ಮೆರವಣಿಗೆ ಸಮಿತಿಯವರೆ ಆಯ್ಕೆ ಮಾಡಿದ ಒಬ್ಬ ಆ ಕಲಾಪ್ರಕಾರ ಮತ್ತು ಕಲಾ ತಂಡದ ಪರಿಚಯದ ಫಲಕ ಹಿಡಿದು ಆ ಕಲಾವಿದರನ್ನು ಮುನ್ನೆಡಸಬಹುದಲ್ಲವೆ?
3. ಮೆರವಣಿಗೆ ಸಾಗುವ ಹಾದಿ ಉದ್ದಕ್ಕೂ, ಎಲ್ಲರಿಗೂ ಕಾಣುವಂತ ನಿರ್ದಿಷ್ಟ ಸ್ಥಳಗಳನ್ನು ಗುರ್ತಿಸಿ. ಆ ಸ್ಥಳದಲ್ಲೇ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ನಿರ್ದಿಷ್ಟ ಸಮಯದಲ್ಲಿ ಪ್ರದರ್ಶಿಸಿ ಸಾಗಿದರೆ ಉತ್ತಮ ಅಲ್ಲವೆ? ಈಗ ಏನಾಗುತ್ತಿದೆ ಎಂದರೆ ದೂರದ ಊರುಗಳಿಂದೆಲ್ಲ ಬರುವ ಅವರು ಮನಸ್ಸಿಗೆ ಬಂದ ಜಾಗದಲ್ಲಿ ಅರೆಬರೆ ಪ್ರದರ್ಶನ ತೋರಿ ಹೋಗುತ್ತಿರುವುದರಲ್ಲಿ ಏನಾದರೂ ಅರ್ಥವಿದೆಯೆ?
4. ಅನಪೇಕ್ಷಿತ ವ್ಯಕ್ತಿಗಳೆಲ್ಲ ಮೆರವಣಿಗೆಯಲ್ಲಿ ತುಂಬಿಕೊಂಡಿರುವ ಕಾರಣದಿಂದ ಸ್ತಬ್ಧ ಚಿತ್ರಗಳನ್ನು ಹೊತ್ತ ವಾಹನಗಳು ಸರಿಯಾದ ಅಂತರ ಹಾಗೂ ಕ್ರಮದಿಂದ ಸಾಗುವುದಿಲ್ಲ. ಜೊತೆಗೆ ಯಾರ್ಯಾರೋ ಮನಸ್ಸಿಗೆ ಬಂದಂತೆ ವಾಹನದ ಚಾಲಕನಿಗೆ ಮಾರ್ಗದರ್ಶನ ಮಾಡುತ್ತಾ ಗೊಂದಲ ಎಬ್ಬಿಸುತ್ತಾರೆ. ಆದುದರಿಂದ ರಸ್ತೆ ಕ್ಲಿಯರ್ ಆಗಿದ್ದರೆ ಸ್ತಬ್ಧ ಚಿತ್ರಗಳ ವಾಹನಗಳು ನಿರ್ದಿಷ್ಟ ಅಂತರದಲ್ಲಿ ಸುಲಭವಾಗಿ ಸಾಗಬಲ್ಲವು.
5. ಪತ್ರಿಕೆ, ಟಿ.ವಿ. ಮಾಧ್ಯಮ ಮತ್ತು ಇತರ ಖಾಸಗಿ ಚಿತ್ರ ಗಾಯಕರಿಗೆ ಕಲಾವಿದರು ಕಲಾಪ್ರದರ್ಶನ ಮಾಡಲು ನಿಗದಿ ಮಾಡಿದ ಸ್ಥಳದ ಹತ್ತಿರವೇ, ರಸ್ತೆಯ ಅಕ್ಕಪಕ್ಕ ಅಟ್ಟಣಿಗೆಗಳನ್ನು ಕಟ್ಟಿಕೊಟ್ಟರೆ ಅವರು ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ಅವರು ಯಾವುದೇ ಶಿಸ್ತಿಲ್ಲದೆ ಮೆರವಣಿಗೆ ಮಧ್ಯ ತೂರುವುದು ತಪ್ಪುವುದಿಲ್ಲ.
6. ನಿಜವಾಗಲೂ ಮೇಲ್ಕಂಡಂತೆ ಜಂಬೂಸವಾರಿ ಸಫಲವಾಗಬೇಕೆಂದರೆ ಪೊಲೀಸರ ಸಹಕಾರ ಮತ್ತು ಶಿಸ್ತು ಅತ್ಯಗತ್ಯವಾಗಿ ಬೇಕು. ಆದರೆ ಈಗ ಏನಾಗುತ್ತಿದೆ ಎಂದರೆ ಪೇದೆಗಳು ತಮಗೆ ತೋಚಿದಂತೆ ನಿಂತಿದ್ದರೆ ಮೇಲಿನ ಅಧಿಕಾರಿಗಳು ಸುಮ್ಮನೆ ಗುಂಪುಗೂಡಿರುತ್ತಾರೆ. ಜಂಬೂಸವಾರಿಗೆ ರಕ್ಷಣೆ ಬೇಕು ನಿಜ. ಆದರೆ ಯಾವುದೇ ಶಿಸ್ತಿಲ್ಲದೆ ಗಜಪಡೆಯ ಹಿಂದೆ ಮುಂದೆ ತುಂಬಿಕೊಂಡು ಬರುವುದೇಕೆ? ಪೇದೆಗಳು ರಸ್ತೆಯ ಎರಡು ಪಕ್ಕ 20-30 ಅಡಿಗೆ ಒಬ್ಬರಂತೆ ಜನಗಳತ್ತ ಮುಖ ಮಾಡಿ ಖಡಕ್ಕಾಗಿ ನಿಂತರೆ ಮೆರವಣಿಗೆ ಒಂದೇ ಅಲ್ಲ ಜನರು ಎಚ್ಚೆತ್ತು ಶಿಸ್ತಿನಿಂದ ಮೆರವಣಿಗೆ ವೀಕ್ಷಿಸುತ್ತಾರೆ. ಜಂಬೂಸವಾರಿಯೊಂದಿಗೆ ಸರ್ಕಾರಿ ಅಧಿಕಾರಿಗಳು ಬರುವುದು ಅನಿವಾರ್ಯವಾಗಿದ್ದರೆ ಅವರಿಗೆ ವಸ್ತ್ರಸಂಹಿತೆ ಜಾರಿ ಮಾಡಿ. ಇವರು ಮತ್ತು ಪೊಲೀಸರು ಗಜಪಡೆಯ ಮುಂದೆ ಅಥವಾ ಹಿಂದೆ 50-60 ಅಡಿ ಅಂತರ ಕಾಯ್ದುಕೊಂಡು ಒಂದು ಕ್ರಮದ ಸಾಲು ಮಾಡಿಕೊಂಡು ಸಾಗಲಿ ಅಥವಾ ಗಜಪಡೆಯ ಅಕ್ಕಪಕ್ಕ ಸಾಲು ಮಾಡಿಕೊಂಡು ಸಾಗಲಿ. ಗಜಪಡೆಯ ಹಿಂದೆ ಬರುವ ರಕ್ಷಣಾ ವಾಹನಗಳು 100-200 ಅಡಿ ಅಂತರ ಕಾಪಾಡಿಕೊಂಡು ಬಂದರೆ ಜಂಬೂಸವಾರಿಯ ದೃಶ್ಯಕ್ಕೆ ಅಡಚಣೆ ಉಂಟಾಗುವುದಿಲ್ಲ.
ಕಡೆಯದಾಗಿ ನಾನು ಹೇಳುವುದೇನೆಂದರೆ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಖಾಸಗಿ ವ್ಯಕ್ತಿಗಳು ಈ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವುದು ಪ್ರತಿಷ್ಠೆ ಎಂದುಕೊಂಡು ಅಗತ್ಯವಿಲ್ಲದಿದ್ದರೂ ಭಾಗವಹಿಸುವುದನ್ನು ಜನರು ತಡೆಯಲಾರರು. ಆದರೆ ಜನರು ಬರುವುದು ನಿಮ್ಮ ಮುಖಗಳನ್ನು ನೋಡಲು ಅಲ್ಲ. ಮೆರವಣಿಗೆ ಮೇಲ್ಕಂಡಂತೆ ಶಿಸ್ತುಬದ್ಧವಾಗಿ ನಡೆದರೆ ಅದೇ ಜನ ನೀವು ಬೇಡವೆಂದರೂ ನಿಮ್ಮನ್ನು ಹೊಗಳುತ್ತಾರೆ ಎಂಬುದು ನೆನಪಿರಲಿ.

- ಸಂಜಯ್. ಹೆಚ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.