ಮತಯಂತ್ರ ಮಾಡಿರುವ ಸದ್ದು

ವಿದ್ಯುನ್ಮಾನ ಮತಯಂತ್ರವನ್ನು 1980ರಲ್ಲಿ ಎಂ.ಬಿ. ಹನೀಫಾ ಎಂಬುವವರು ವಿನ್ಯಾಸಗೊಳಿಸಿದರು. ಅದು 1980ರ ಅಕ್ಟೋಬರ್ 15ರ ಗೆಝೆಟ್ನಲ್ಲಿ ಪ್ರಕಟವಾಯಿತು. ಯಂತ್ರದ ಮೂಲ ವಿನ್ಯಾಸವನ್ನು ಚೆನ್ನೈ, ತಿರುಚಿ, ಕೊಯಮತ್ತೂರು, ಸೇಲಂ, ಮಧುರೈ, ತಿರುನಲ್ವೇಲಿಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಯಿತು. ಮತಯಂತ್ರಗಳನ್ನು ಮೊದಲು ಉಪಯೋಗಿಸಿದ್ದು ಕೇರಳದ ಉತ್ತರ ಪರಾವುರ ವಿಧಾನಸಭಾ ಕ್ಷೇತ್ರದ 1981ರ ಉಪಚುನಾವಣೆಯಲ್ಲಿ. ಅದೂ ಅಲ್ಲಿಗಷ್ಟೇ ಸೀಮಿತವಾಗಿತ್ತು.
50 ಮತಗಟ್ಟೆಗಳಲ್ಲಿ. ವಿದ್ಯುನ್ಮಾನ ಯಂತ್ರದಲ್ಲಿ ಎರಡು ಯೂನಿಟ್ಗಳಿರುತ್ತವೆ-ಒಂದು ಕಂಟ್ರೋಲ್ ಯೂನಿಟ್, ಇನ್ನೊಂದು ಬ್ಯಾಲಟಿಂಗ್ ಯುನಿಟ್. ಎರಡೂ ಯೂನಿಟ್ಗಳು 5 ಮೀಟರ್ ಉದ್ದದ ತಂತಿಯಿಂದ ಜೋಡಿಸಲ್ಪಟ್ಟಿರುತ್ತದೆ. ಕಂಟ್ರೋಲ್ ಯೂನಿಟ್ ಪ್ರಿಸೈಡಿಂಗ್ ಆಫೀಸರ್ ಅಥವಾ ಪೋಲಿಂಗ್ ಆಫೀಸರ್ ಬಳಿಯಿದ್ದರೆ ಬ್ಯಾಲಟಿಂಗ್ ಯೂನಿಟ್ ಓಟಿಂಗ್ ಕಂಪಾರ್ಟ್ಮೆಂಟಿನಲ್ಲಿರುತ್ತದೆ. ಪೋಲಿಂಗ್ ಆಫೀಸರ್ ಆಗಿರುವವರು ಬ್ಯಾಲಟ್ ಬಟನ್ ಒತ್ತುತ್ತಾರೆ. ಆಗ ಮತದಾರ ತನ್ನಿಚ್ಛೆಯ ಅಭ್ಯರ್ಥಿಯ ಹೆಸರು ಮತ್ತು ಚಿನ್ಹೆಯ ಮುಂದೆ ನೀಲಿ ಬಟನ್ ಒತ್ತುತ್ತಾನೆ. ಅವನ ಒಟು ದಾಖಲಿಸಲ್ಪಡುತ್ತದೆ. ಮತಯಂತ್ರವು ಬೆಂಗಳೂರಿನ ಬಿಇಎಲ್ ಮತ್ತು ಹೈದರಾಬಾದ್ನ ಇಸಿಐಎಲ್ ತಯಾರಿಕೆಯ 6 ವೋಲ್ಟೇಜಿನ ಆಲ್ಕಲೈನ್ ಬ್ಯಾಟರಿಯಿಂದ ಚಾಲನೆಗೊಳ್ಳುತ್ತದೆ. ದೇಶದ ಬಹಳಷ್ಟು ಕಡೆ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಅನಿಶ್ಚಿತವಾಗಿರುವುದರಿಂದ ದೇಶಾದ್ಯಂತ ಮತದಾನಕ್ಕೆ ಬ್ಯಾಟರಿಚಾಲಿತ ಮತಯಂತ್ರಗಳೇ ಸೂಕ್ತವಾಗಿವೆ.
ಮತಯಂತ್ರಗಳ ಬಳಕೆ 1999ರಿಂದ ಭಾಗಶಃ ಆರಂಭವಾಯಿತು. ದೆಹಲಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪು ಮತ್ತು ವಿವಿಧ ರಾಜಕೀಯ ಪಕ್ಷಗಳ ಒತ್ತಾಯದ ನಂತರ 2004ರಿಂದ ವಿದ್ಯುನ್ಮಾನ ಮತಯಂತ್ರಗಳನ್ನು ದೇಶಾದ್ಯಂತ ಎಲ್ಲ ಚುನಾವಣೆಗಳಲ್ಲಿ ಬಳಸಲು ಚುನಾವಣಾ ಆಯೋಗ ನಿರ್ಧರಿಸಿತು. ಬಿಇಎಲ್ ಮತ್ತು ಇಸಿಐಎಲ್ಗಳು ಮತಯಂತ್ರವನ್ನು ಅಭಿವೃದ್ಧಿಪಡಿಸುತ್ತಾ ಬಂದಿವೆ. ಒಂದು ಮತಯಂತ್ರ 3840 ಮತಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಒಂದು ಮತಗಟ್ಟೆಗೆ ಇಷ್ಟು ಸಾಮರ್ಥ್ಯದ ಮತಯಂತ್ರ ಸಾಕಾಗುತ್ತದೆ. ಒಂದು ಮತಗಟ್ಟೆಯ ವ್ಯಾಪ್ತಿಯೊಳಗೆ ಬರುವ ಮತದಾರರ ಸಂಖ್ಯೆ 1400ಕ್ಕಿಂತ ಹೆಚ್ಚು ಇರುವುದಿಲ್ಲ. ಒಂದು ಮತಯಂತ್ರದಲ್ಲಿ 64 ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆಗಳಿಗಾಗುವಷ್ಟು ಸ್ಥಳಾವಕಾಶವಿರುತ್ತದೆ. ಮತದಾರನು ಬ್ಯಾಲಟಿಂಗ್ ಯೂನಿಟ್ನಲ್ಲಿರುವ ನೀಲಿ ಬಟನ್ ಒತ್ತಿದ ಕೂಡಲೇ ಚಿನ್ಹೆಯ ಎಡಭಾಗದಲ್ಲಿ ಒಂದು ಸಣ್ಣ ಕೆಂಪು ಬೆಳಕು ಕಾಣಿಸುತ್ತದೆ ಮತ್ತು ಸಣ್ಣ ದನಿಯೂ ಕೇಳಿಬರುತ್ತದೆ. ಅದು ಮತದಾರನು ತನ್ನ ಓಟು ದಾಖಲಿಸಲ್ಪಟ್ಟಿದ್ದನ್ನು ಖಾತ್ರಿಪಡಿಸಿಕೊಳ್ಳಲು. ಮತದಾರನು ಮತ್ತೊಮ್ಮೆ ಅಂದರೆ ಅವನ ಒಟು ದಾಖಲಿಸಲ್ಪಟ್ಟ ಮೇಲೂ ತಿಳಿಯದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ನೀಲಿ ಬಟನ್ ಒತ್ತಿದರೆ ಅವನ ಇನ್ನೊಂದು ಓಟು ದಾಖಲಾಗುವುದಿಲ್ಲ.
ವಿದ್ಯುನ್ಮಾನ ಮತಯಂತ್ರಗಳ ಬಳಕೆ ಹಿಂದಿನ ಮತಪತ್ರ ವ್ಯವಸ್ಥೆಗಿಂತ ಸರಳವಾಗಿದೆ. ಮತಪತ್ರದ ಮೇಲೆ ತನ್ನಿಚ್ಛೆಯ ಅಭ್ಯರ್ಥಿಯ ಹೆಸರು ಮತ್ತು ಚಿನ್ಹೆಯ ಮುಂದೆ ಮುದ್ರೆಯೊತ್ತಿ ಅದನ್ನು ಉದ್ದ ಮತ್ತು ಅಡ್ಡ ಮಡಿಚಿ ಮತಪೆಟ್ಟಿಗೆಯೊಳಗೆ ತೂರಿಸುವುದು ಅನಕ್ಷರಸ್ಥ ಮತತದಾರನಿಗೆ ಗೊಂದಲವುಂಟು ಮಾಡುತ್ತಿತ್ತು. ಮತಪತ್ರ ವ್ಯವಸ್ಥೆಯಲ್ಲಿನ ಒಬ್ಬ ಖೊಟ್ಟಿ (ನಕಲಿ) ಮತದಾರ ನೂರಾರು ಮತಗಳನ್ನು ಮತಪೆಟ್ಟಿಗೆಯೊಳಗೆ ಹಾಕಬಹುದಾಗಿತ್ತು. ಆದರೆ ಮತಯಂತ್ರ ವ್ಯವಸ್ಥೆಯಲ್ಲಿ ಖೊಟ್ಟಿ ಮತದಾನಕ್ಕೆ ಅವಕಾಶವೇ ಇಲ್ಲ. ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು, ವಯಸ್ಸು, ವಿಳಾಸ ಒಳಗೊಂಡ ಮಾಹಿತಿ ತಪ್ಪು ತಪ್ಪಾಗಿದ್ದಲ್ಲಿ ಕುಲಗೆಡುವ ಮತಗಳನ್ನು ಹೊರತುಪಡಿಸಿ ಅಕ್ರಮವಾಗಿ ಬಲವಂತದಿಂದ ಹಾಕಲಾಗುವ ಖೊಟ್ಟಿ ಮತಗಳ ಸಂಖ್ಯೆ ಮತಯಂತ್ರಗಳು ಬಂದ ಮೇಲೆ ಶೇ. 0.02ಕ್ಕೆ ಇಳಿದಿದೆ.
ಒಂದು ಮತಯಂತ್ರದ ಬೆಲೆ 1989-90ರಲ್ಲಿ ರೂ. 5500. ಈಗ ಹೆಚ್ಚಾಗಿರಬಹುದು. ಆದರೂ ಲಕ್ಷಗಟ್ಟಲೆ ಮತಪತ್ರಗಳ ಮುದ್ರಣ, ಸಾಗಾಣಿಕೆ ವೆಚ್ಚಕ್ಕಿಂತ ಹೆಚ್ಚೇನಲ್ಲ. ಅಂದು ಮತ ಎಣಿಕೆಗೆ ನಿಯೋಜಿಸಲ್ಪಡುತ್ತಿದ್ದ ಸಿಬ್ಬಂದಿಗೆ ನೀಡಲಾಗುತ್ತಿದ್ದ ಸಂಭಾವನೆಗೆ ಹೆಚ್ಚು ಹಣ ಖರ್ಚಾಗುತ್ತಿತ್ತು. ಆಗ ಫಲಿತಾಂಶ 2-3 ದಿನಗಳಷ್ಟು ವಿಳಂಬವಾಗುತ್ತಿತ್ತು. ಈಗ ಫಲಿತಾಂಶ 2-3 ತಾಸುಗಳಲ್ಲಿ ಹೊರಬೀಳುತ್ತದೆ.
ಮತಯಂತ್ರದೊಳಗೆ ಪ್ರೋಗ್ರಾಂಗಳ ಮಧ್ಯೆ ಮೆಮೋರಿ ಇರುತ್ತದೆ. ಅದು ಕೇವಲ ಸ್ಟೋರೇಜ್ಗಾಗಿ. ಯಂತ್ರದ ಮೇಲ್ಭಾಗದಲ್ಲಿ ಒಂದು ಚಿಪ್ ಒಳಗೊಂಡ ಸಣ್ಣ ಕ್ಲಿಪ್ ಇರುತ್ತದೆ. ಅದು ಪೋಲಿಂಗ್ ಆಫೀಸರ್ ಮತದಾನ ಕ್ರಿಯೆಯನ್ನು ದಕ್ಷತೆಯಿಂದ ನಿರ್ವಹಿಸಲು ವಿನಃ ಒಬ್ಬ ಅಭ್ಯರ್ಥಿಗೆ ಮತಗಳೆಷ್ಟು ಎಂಬುದನ್ನು ತಿಳಿದುಕೊಳ್ಳಬಹುದು. 2004ರ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದ ನಂತರ ಮುಂಬೈ ನಗರದ ಯಾವ ಪ್ರದೇಶದಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಬಿದ್ದವು ಎಂಬ ಮಾಹಿತಿ ಅಂಕಿ ಸಂಖ್ಯೆಗಳೊಂದಿಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು. ಕಾಂಡಿವಲಿಯಲ್ಲಿ ಗೋವಿಂದಾ ಅವರಿಗೆ, ಬೋರಿವಲಿಯಲ್ಲಿ ಗೋವಿಂದಾ ಅವರ ಪ್ರತಿಸ್ಫರ್ಧಿ ರಾಮಾನಾಯಕ ಅವರಿಗೆ ಹೆಚ್ಚು ಮತಗಳು ಬಂದಿದ್ದವು. ಮತದಾರನು ಮತದಾನ ಮಾಡಿದುದರ ಗುರುತಿಗಾಗಿ ಅವನ ಹೆಸರಿನಲ್ಲಿ ಒಂದು ಚೀಟಿ (ಖಟ್ಝಠ)ಯಂತ್ರದಿಂದ ಬರಬೇಕು. ಮತಯಂತ್ರಗಳನ್ನು ಹಾಗೆ ಸುಧಾರಣೆಗೊಳಿಸಬೇಕೆಂದು ಕೋರಿ ರಾಜೇಂದ್ರ ಸತ್ಯನಾರಾಯಣ ಗಿಲ್ಡಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮತಯಂತ್ರಗಳು ಗುಪ್ತ ಪ್ರಭಾವ ನಿರೋಧಕ ಅಲ್ಲವೆಂದು ಅವುಗಳ ಬಳಕೆಯನ್ನು ಪ್ರಶ್ನಿಸಿ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಗುಪ್ತ ಪ್ರಭಾವ ನಿರೋಧಕ ವ್ಯವಸ್ಥೆ ಮತಯಂತ್ರದೊಳಗಿರಬೇಕು ಮತ್ತು ಮಾಡಿದುದರ ಸಂಕೇತವಾಗಿ ಒಂದು ಚೀಟಿ ಮತಯಂತ್ರದಿಂದ ಮತದಾರನ ಕೈಗೆ ಬರಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿನ ಬೇಡಿಕೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಚುನಾವಣಾ ಆಯೋಗ 2010ರಲ್ಲಿ ಪ್ರೊ. ಪಿ.ವಿ. ಇಂದಿರೇಷನ್ ನೇತೃತ್ವದಲ್ಲಿ ತಂತ್ರಜ್ಞರ ಸಮಿತಿಯನ್ನು ನೇಮಕ ಮಾಡಿತು. ವಿದ್ಯುನ್ಮಾನ ಮತಯಂತ್ರಗಳು ಗುಪ್ತಪ್ರಭಾವ ನಿರೋಧಕಗಳಲ್ಲ ಎಂದು ದೆಹಲಿ ಹೈಕೋರ್ಟ್ 2012 ಜನವರಿ 17ರಂದು ತೀರ್ಪು ನೀಡಿತು. ಮತಯಂತ್ರಗಳ ಇನ್ನಷ್ಟು ಸುಧಾರಣೆಗಾಗಿ ಚುನಾವಣಾ ಆಯೋಗವು ಬಿಇಎಲ್ ಮತ್ತು ಇಸಿಐಎಲ್ಗಳಿಗೆ ಆದೇಶಿಸಿತು.
ಹೀಗೆ ಮತಯಂತ್ರಗಳ ಸಾಚಾತನದ ಬಗ್ಗೆ ಆಕ್ಷೇಪಗಳಿವೆ ಮತ್ತು ಅವುಗಳನ್ನು ಇನ್ನಷ್ಟು ಸುಧಾರಣೆಗೊಳಿಸುವ ಪ್ರಯತ್ನವೂ ನಡೆದಿದೆ. ಮತಯಂತ್ರಗಳಿಂದ ಚುನಾವಣಾ ಸುಧಾರಣೆ ಆಗಿಲ್ಲವೆಂದು ಹೇಳಲಿಕ್ಕಾಗದು. ಮತದಾನದಲ್ಲಿ ಮತ್ತು ಫಲಿತಾಂಶ ಹೊರಬೀಳುವುದಲ್ಲಿ ಆಗುತ್ತಿದ್ದ ವಿಳಂಬ ತಪ್ಪಿರುವುದು, ಕುಲಗೆಡುವ ಮತಗಳ ಸಂಖ್ಯೆ ಕಡಿಮೆಯಾಗಿರುವುದು ಇವೇ ಮತಯಂತ್ರಗಳಿಂದಲೇ.
-ಮಾಣಿಕರಾವ ಪಸಾರ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


