ವೋಟೂ ಕೊಡ್ತಾರೆ ಏಟೂ ಕೊಡ್ತಾರೆ!
ಗಾಂಧಿ, ಮೋದಿಗಿಂತ ಕುಜ್ರೀವಾಲ್ ಮೋಡಿ ನೋಡಿ ದಂಗಾದ ಮೂರುಕಾಸೀಮ ನೇರವಾಗಿ ಮೋದಿ ಸಂದರ್ಶನ ಬಳಿಕ ಕುಜ್ರಿವಾಲ್ ಇಂಟರ್ವ್ಯೂಗೆ ಟ್ರೈ ಮಾಡಿದ. ಕುಜ್ರಿವಾಲ್ ಪಿಎ ಹೇಳಿದ, "ಪಕ್ಷಕ್ಕೆ ದೇಣಿಗೆ ಹೆಚ್ಚು ಬರೋ ಹಾಗೆ ಮೀಟಿಂಗ್ ಇದೆ, ನಾಳೆ ರ್ಯಾಲಿಯಲ್ಲಿ ಹೊಡೆಯೋ ಚಾನ್ಸ್ ಇರೋದ್ರಿಂದ ಕುಜ್ರಿವಾಲ್ ಚರ್ಮದ ಮುಖವಾಡ ತಯಾರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ". ಮೂರುಖಾಸೀಮ ಹಠ ಬಿಡಲಿಲ್ಲ. ಮಾಧ್ಯಮಕ್ಕೆ ಎಷ್ಟೇ ಬೈದ್ರೂ ಅದರಿಂದಲೇ ಬದುಕೋದು ಸಾಧ್ಯ ಎಂದು ಕುಜ್ರಿವಾಲ್ಗೂ ಗೊತ್ತು. ಹೀಗಾಗಿ ಸಂದರ್ಶನ ಅವಕಾಶ ಸಿಕ್ಕಿತು.
ಮೂರ್ಖಾಸೀಮನ ಮೊದಲ ಪ್ರಶ್ನೆ ಚಪ್ಪಲಿಯಂತೆ ತೂರಿ ಅಲ್ಲಲ್ಲ, ಬಾಣದಂತೆ ತೂರಿ ಬಂತು: "ನಿಮ್ಮ ಮೇಲೆ ಹಲ್ಲೆ ನಡೆದ ಪ್ರತಿ ಬಾರಿಯೂ ಆ ದಿನದಲ್ಲಿ ಕೋಟಿಗೂ ಮಿಕ್ಕಿ ನಿಮ್ಮ ಪಕ್ಷಕ್ಕೆ ದೇಣಿಗೆ ಹರಿದು ಬಂದಿದೆ. ಬೇರೆ ದಿನ 10 ಲಕ್ಷವೂ ದಾಟೋದಿಲ್ವಂತೆ, ಏನಿದರ ಮರ್ಮ?!". ಕುಜ್ರಿವಾಲ್ ತುರಿಸಿಕೊಂಡು, "ಆಯ್ಯೋ ಸ್ವಲ್ಪ ಸುಮ್ನೆ ಇರಿ. ಪೆಟ್ಟು ತಿಂದ್ರೂ ಪರ್ವಾಗಿಲ್ಲ, ಒಂದುಕೋಟಿ ಬರುತ್ತೆ. ಅವರಿಗೆಲ್ಲ ಅಂಬಾನಿ, ಅದಾನಿ ಕೊಡ್ತಾರೆ, ನಮಗೆ ಆಮ್ ಆದ್ಮಿ ಏಟೂ ಕೊಡ್ತಾರೆ, ಒಟೂ ಕೊಡ್ತಾರೆ, ನೋಟೂ ಕೊಡುತ್ತಾರೆ. ಸದ್ಯಕ್ಕೆ ಹಣ ಇದೆ, ಕಡಿಮೆಯಾದ್ರೆ ಮತ್ತೆ ಏಟು ತಿನ್ನಬೇಕು, ಆದ್ರೆ ದಯವಿಟ್ಟು ಇದೆಲ್ಲ ಬರೀ ಬೇಡಿ, ಬೇಕಾದರೆ ನಿಮಗೆ ಪಾಪ್ ಪಕ್ಷದಂದ ಟಿಕೆಟ್ ಕೊಡ್ತೇನೆ. ನಮ್ಮಲ್ಲಿ ನಿಮ್ಮಂಥ ಅರೆಬೆಂದ ಪತ್ರಕರ್ತರಿಗೆ ಹೆಚ್ಚು ಮಹತ್ವ." ಮೂರ್ ಖಾಸಿಗೂ ಆಸೆ, "ಹೇಗೆ ಕೊಡ್ತಿರಾ ಟಿಕೆಟ್?" ಎಂದ. ಕುಜ್ರಿ ಅಂದ್ರು. "ಒಂದು ಕೆಲ್ಸ ಮಾಡಿ, ನನ್ನ ಮೇಲೆ ಒಂದು ಶೂ ಎಸೀರಿ". ತಕ್ಷಣ ಮೂರುಖಾಸಿ ಶೂ ಲೇಸ್ ಬಿಚ್ಚತೊಡಗಿದ. ಕುಜ್ರಿವಾಲ್ ತಡೆದು "ಈಗ ಎಸಿಯಬೇಡಿ. ಶೂ ಎಸೆಯುವಾಗ ಎಲ್ಲ ಚಾನೆಲ್ನವರು ಇರಬೇಕು. ಇಡೀ ದಿನ ಸುದ್ದಿ ಆಗಬೇಕು, ಆಗ ಹಣಾನೂ ಬರುತ್ತೆ. ಆಮೇಲೆ ನಿಮಗೆ ಟಿಕೆಟ್ ಕೊಡುತ್ತೇನೆ. ಚಿದಂಬರಮ್ಗೆ ಶೂ ಎಸೆದೆ ಗರ್ನಲ್ ಸಿಂಗ್ಗೆ ಟಿಕೆಟ್ ಕೊಟ್ಟಿದ್ದೇ ನಾನು. ನಿಮಗೂ ಟಿಕೆಟ್ ಕೊಟ್ಟೆ ಅಂದ್ರೆ ಆಗ ನನ್ನನ್ನು ಅಹಿಂಸಾ ಗಾಂಧಿ ಎಂದು ಇಡೀ ದಿನ ಈ ಮಾಧ್ಯಮದವರು ಹೇಳ್ತಾ ಇರ್ತಾರೆ...ಹೇಗೇ?" ನಾನು ತಪ್ಪು ಮಾಡಿದ್ರೂ ಟಿಕೆಟ್ ಕೊಡ್ತೀರಾ? ಎಂದು ಭೋಳೆ ಪ್ರಶ್ನೆ ಎಸೆದ ಮೂರ್ಖಾಸಿ. "ತಪ್ಪು ಯಾರು ಮಾಡೋದಿಲ್ಲ? ಜನಸಾಮಾನ್ಯರು ತಪ್ಪು ಮಾಡದೇ ಬೇರೆ ಯಾರು ಮಾಡ್ತಾರೆ? ನಮ್ಮದೇ ಸಮಿತಿಯಿಂದ ನಿಮಗೆ ಕ್ಲೀನ್ ಚಿಟ್ ಕೊಡ್ತೇವೆ. ಇದೇ ದಾಖಲೆ ಮಾಧ್ಯಮಕ್ಕೆ ತೋರಿಸಿ ಟಿಕೆಟ್ ನೀಡುತ್ತೇವೆ" ಅಂದ್ರು.
ಮೂರುಖಾಸಿಗೆ ಖುಷಿಯಾದರೂ ಸಂಪಾದಕರ ನೆನಪಾಗಿ ಇನ್ನೊಂದು ಖಡಕ್ ಪ್ರಶ್ನೆಗೆ ತೂರಿದ. ದಿಲ್ಲಿ ಗ್ಯಾಂಗ್ರೇಪ್ನಲ್ಲಿ ಅತ್ಯಂತ ಘೋರರೂಪ ತೋರಿದ ಬಾಲಾರೋಪಿಗೆ ಹೆಚ್ಚಿನ ಶಿಕ್ಷೆ ಆಗಬಾರದು ಎಂದು ವಾದ ಮಾಡಿದ ಮಕ್ಕಳ ರಕ್ಷಣೆ ಅಧ್ಯಕ್ಷೆ 'ನೀನಾಗೆ' ನೀವಾಗಿಯೇ ಬೆಂಗಳೂರಲ್ಲಿ ಟಿಕೆಟ್ ಕೊಟ್ರಂತೆ, ಅದು ಸರೀನಾ?" ಟಿಕೆಟ್ ಕೊಡ್ತೇನೆ ಅಂದ್ರೂ ಮುದುರದ ಖಾಸಿ ಖದರ್ ನೋಡಿ ಕುಜ್ರಿವಾಲ್ಗೆ ಉರಿದುಹೋಯಿತು. "ನೀವು ಮಾಧ್ಯಮದವರು ನೀವೇ ಒಂದು ಸಾರಿ ಅತ್ಯಾಚಾರ ಮಾಡಿದ್ದನ್ನು ನೂರು ಬಾರಿ ತೋರಿಸುತ್ತೀರಿ, ಅಂದರೆ 99 ಬಾರಿ ನೀವೇ ಅತ್ಯಾಚಾರ ಮಾಡುತ್ತೀರಿ ಎಂದರ್ಥ, (ಪಾಪ್ ಕಾರ್ಯಕರ್ತರಿಂದ ಚಪ್ಪಾಳೆ)" ಎಂದು ಹಳೆ ಕ್ಯಾಸೆಟ್ ಹಾಕಿದಾಗ, ಖಾಸಿ ಮಧ್ಯಪ್ರವೇಶಿಸಿ ಅಲ್ಲ ಸಾರ್ ಬಾಲಾರೋಪಿ ಬಗ್ಗೆ....ಅಂದ. ಕುಜ್ರಿಯೂ ಬಿಡಲಿಲ್ಲ. "ವಕೀಲೆ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಅವರು ಆಮ್ ಆದ್ಮಿ. ಹೀಗಾಗಿ ಟಿಕೆಟ್ ಕೊಡುತ್ತೇವೆ." ನಿಮ್ಮ ಅಭ್ಯರ್ಥಿಗಳಲ್ಲಿ ಕೋಟ್ಯಧಿಪತಿಗಳಿದ್ದರಲ್ಲ ಎಂದ ಪಟ್ಟು ಬಿಡದ ಖಾಸಿ ಪ್ರಶ್ನಿಸಿದ. "ಏನು ಆಮ್ ಆದ್ಮಿಗಳಲ್ಲಿ ಹಣ ಇರಬಾರದೇ? ಜನಸಾಮಾನ್ಯರು ಬಡವರಾಗೇ ಇರ್ಬೇಕಾ? ನಿವೆಲ್ಲಾ ಕಾರ್ಪೊರೇಟ್ ಸಂಸ್ಥೆಗೆ ಸೇಲ್ ಆಗಿದ್ದೀರಿ, ನಿಮ್ಮನ್ನು ಮೋದಿಯೇ ಕಳುಹಿಸಿರಬೇಕು, ನಿಮಗೆ ಅಂಬಾನಿ, ಅದಾನಿ ಹಣ ಕೊಡುತ್ತಾರೆ" ಎನ್ನುತ್ತಿದ್ದಂತೆಯೇ, ಇನ್ನು ಮಾತನಾಡಿದರೆ ಆಮ್ ಆದ್ಮಿಗಳೇ ಹೊಡೆದರೆ ಕಷ್ಟ ಎಂದು ಮೂರ್ಖಾಸಿಮ ಮೆಲ್ಲನೆ ಜಾಗ ಖಾಲಿ ಮಾಡಿದ.
ಅತ್ಯಂತ ಹೆಚ್ಚು ಮಾತನಾಡುವ ವ್ಯಕ್ತಿಯ ಸಂದರ್ಶನದ ಜತೆ ಅತ್ಯಂತ ಕಡಿಮೆ ಮಾತನಾಡುವ ವ್ಯಕ್ತಿ ಮೌನ ಮೋಹನ್ ಸಿಂಗ್ ಸಂದರ್ಶನಕ್ಕೆ ಖಾಸಿ ಶತಪ್ರಯತ್ನಕ್ಕೆ ತೊಡಗಿದ. ಆದರೆ ಮೇನಿಯಾ ಗಾಂಧಿ ಅನುಮತಿ ಸಿಕ್ಕಿದ ತಕ್ಷಣ ಮಾಹಿತಿ ನೀಡುತ್ತೇವೆ ಎಂದು ಸಚಿವಾಲಯದಿಂದ ಉತ್ತರ ಬಂತು. ಕೊನೆಗೆ ಅಲ್ಪಸಂಖ್ಯೆ ಕೋಟಾದಲ್ಲಿ ಮೂರ್ಖಾಸಿಗೆ ಸಂದರ್ಶನಕ್ಕೆ ಅವಕಾಶ ಸಿಕ್ಕಿತು. ಬೊಗಸೆ ತುಂಬಾ ಪ್ರಶ್ನೆ ರೆಡಿ ಮಾಡಿಕೊಂಡು ಸಂದರ್ಶನ ಶುರು ಮಾಡಿದ. ಪ್ರತಿ ಪ್ರಶ್ನೆಗೂ ಮೌನಮೋಹನ್ ಉತ್ತರ, "2 ಜಿ, 3ಜಿ, ಹಾಜಿ"! ಮೂರ್ ಖಾಸಿ ಅಂದ, "ಇದಕ್ಕಿಂತ ನೀವು ತುಳುವಿನಲ್ಲಿ ಇಜ್ಜಿ (ಇಲ್ಲ) ಎಂದಿದ್ದರೆ ಸಂದರ್ಶನಕ್ಕೇ ಬರುತ್ತಿರಲಿಲ್ಲ"!
= ಜಿತೇಂದ್ರ ಕುಂದೇಶ್ವರ , ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

