ಅಂಕಣಗಳು

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಅರುಂಧತಿ ಅಧಿಕಪ್ರಸಂಗ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಅರುಂಧತಿ ಅಧಿಕಪ್ರಸಂಗ
Published On :

ಇತ್ತೀಚೆಗೆ ಕೇರಳ ವಿಶ್ವವಿದ್ಯಾಲಯದ ವಿಚಾರಗೊಷ್ಠಿಯೊಂದರಲ್ಲಿ ಲೇಖಕಿ ಅರುಂಧತಿ ರಾಯ್, ಮಹಾತ್ಮ ಗಾಂಧಿ ಜಾತಿವಾದಿಯಾಗಿದ್ದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಕೇರಳ ಪೊಲೀಸರು ರಾಯ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಒಂದು ವೇಳೆ ಬೇರೆ ಯಾರಾದರೂ ಇಂಥ ಹೇಳಿಕೆ ನೀಡಿದ್ದರೆ ದೊಡ್ಡ ವಿವಾದವಾಗಿ ಹೋಗುತ್ತಿತ್ತು. ಆದರೆ 'ಎಡಪಂಥೀಯ ವಿಚಾರವಾದಿಗಳೆನಿಸಿಕೊಂಡವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾತನಾಡಬಹುದೇ?" ಎನ್ನುವುದನ್ನು ಪ್ರಶ್ನಿಸುತ್ತಿದೆ ಈ ಲೇಖನ...
ಕೇರಳದ ತಿರುವನಂತಪುರದ ಪ್ರತಿಷ್ಠಿತ ವೇದಿಕೆಯಲ್ಲಿ ಲೇಖಕಿ ಅರುಂಧತಿ ರಾಯ್ "ಗಾಂಧೀಜಿ ಒಬ್ಬ ಜಾತಿವಾದಿ. ಅವರು ದಲಿತರನ್ನು ಕಡೆಗಣಿಸಿದ್ದರು. ಭಾರತ ದೇಶ ತಪ್ಪು ವ್ಯಕ್ತಿಗಳನ್ನು ರಾಷ್ಟ್ರ ನಾಯಕರನ್ನಾಗಿ ಪೂಜಿಸುತ್ತಿದೆ.  ಗಾಂಧೀಜಿ ಹೆಸರಿನಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಹೆಸರು ಬದಲಿಸಬೇಕಾದ ಜರೂರತ್ತು ಇದೆ" ಎಂದೆಲ್ಲ ಹೇಳಿದ್ದಾರೆ. ಗಾಂಧೀಜಿಯವರ ಒಟ್ಟಾರೆ ಅಭಿಪ್ರಾಯಗಳನ್ನು ಅವಲೋಕಿಸದೇ ಅವರ ಬರವಣಿಗೆಗಳಲ್ಲಿನ ತಮಗೆ ಬೇಕಾದ ತುಂಡು ಭಾಗವನ್ನು ಆಯ್ಕೆ ಮಾಡಿ ತಿರುಚಿದ ಹೇಳಿಕೆಯನ್ನು ನೀಡಿದ್ದಾರೆ ರಾಯ್. ಒಂದು ವೇಳೆ ಬೇರೆ ಯಾರಾದರೂ ಈ ರೀತಿ ಮಾತನಾಡಿದ್ದರೆ ಅವನನ್ನು ಆರ್‌ಎಸ್‌ಎಸ್ ಚೇಲಾ, ಹಿಂದುತ್ವವಾದಿ ಎಂದು ಕ್ಷಣದಲ್ಲಿ ಜರೆದು ಗದ್ದಲ ಮಾಡಲಾಗುತ್ತಿತ್ತು. ಮಾಧ್ಯಮಗಳೂ ಆ ವ್ಯಕ್ತಿಯ ವಿರುದ್ಧ ಮುಗಿಬೀಳುತ್ತಿದ್ದವು. ಆದರೆ ಈ ಹೇಳಿಕೆ ನೀಡಿದ್ದು ಅರುಂಧತಿ ಆಗಿದ್ದರಿಂದ ಈ ವಿಷಯದ ಬಗ್ಗೆ ಯಾರೂ ತುಟಿಬಿಚ್ಚುತ್ತಿಲ್ಲ!
ಮಂಡಲ ಕಮಂಡಲ ವಿವಾದಗಳು ಇಂದು ಸವಕಲಾಗಿದೆ. progress or perish ಎಂದು ಭಾರತದ ಸಮಾಜ ಧ್ರುವೀಕರಣವಾಗುತ್ತಿರುವ ಸಂದರ್ಭದಲ್ಲಿ ಅರುಂಧತಿ ಅವರ ಕಟೋಕ್ತಿ ಸಮಾಜದಲ್ಲಿ ಕಿಡಿ ಹಚ್ಚಲು ಸಾಕು. ಈಗ ರಾಜಕೀಯವಾಗಿ ರಾಡಿ ಹಬ್ಬಿಸಲು ಸಾಧ್ಯವಿಲ್ಲದಿರುವುದರಿಂದ ಬೌದ್ಧಿಕ ವಲಯದಿಂದ ಸುನಾಮಿ ಎಬ್ಬಿಸಿ ದಲಿತರನ್ನು ಉಳಿದವರಿಂದ ಪ್ರತ್ಯೇಕಿಸಿ ಇಟ್ಟುಕೊಂಡರೆ ಸ್ವಲ್ಪ ಕಾಲ ಭಾರತದಲ್ಲಾಗುವ ಗೊಂದಲ ಪರಿಸ್ಥಿತಿಯನ್ನು ಆಳಬಹುದೆನ್ನುವ ಹುನ್ನಾರ ಅವರ ಹೇಳಿಕೆಯಲ್ಲಿ ಅಡಗಿದೆ. ಅಲ್ಪಸಂಖ್ಯಾತರನ್ನು ಇಲ್ಲಿಯವರಗೆ ವೋಟ್ ಬ್ಯಾಂಕ್ ಆಗಿ ಇಟ್ಟುಕೊಂಡಿದ್ದ ಪಕ್ಷಗಳಿಂದ ಸೌಕರ್ಯ ಪಡೆಯುತ್ತಿದ್ದ ಬೌದ್ಧಿಕ ವಲಯದ ವ್ಯವಸ್ಥಿತ ಶೋಷಣೆಯನ್ನು ಕಳೆದ ಚುನಾವಣೆ ಕೊನೆಗೊಳಿಸಿತ್ತು!
ಅರುಂಧತಿ ರಾಯ್ ಎಂದರೆ ಭಾರತಕ್ಕೆ ಬೂಕರ್ ಪ್ರಶಸ್ತಿ ತಂದು ಕೊಟ್ಟ ಮಹಿಳಾ ಲೇಖಕಿ ಎಂದು ಯಾರಾದರೂ ಉತ್ತರಿಸುತ್ತಾರೆ. ಅವಶ್ಯಕತೆಯಿಲ್ಲದಿದ್ದರೂ ಹೇಳಬೇಕಾದ್ದೇನೆಂದರೆ ಆಕೆ ಪತ್ರಕರ್ತ ಪ್ರಣವ್ ರಾಯ್‌ನ ದೂರದ ಸಂಬಂಧಿ ಬೇರೆ! "ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌" ಕಾದಂಬರಿ ಬರೆದ ಮೇಲೆ ಜಾಗತಿಕ ಮಟ್ಟದಲ್ಲಿ ಆಕೆಗೆ ಮಾಹಾ ಮಾನವತಾವಾದಿಯೆಂಬ ಪಟ್ಟ! 2011ರಲ್ಲಿ ಅರುಂಧತಿ ರಾಯ್‌ಗೆ ವಿಶಿಷ್ಟ ವಿಶ್ಲೇಷಣಾತ್ಮಕ ಬರವಣಿಗೆಗಾಗಿ ಅಂತಾರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ 2014ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಬೇರೆ.
ಭಾರತದಲ್ಲಂತೂ ಅರುಂಧತಿ ರಾಯ್‌ಗೆ ಜಾತ್ಯತೀತ ಪ್ರಗತಿಪರ ಚಿಂತಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂಬ ಪಟ್ಟ. ಈ ಹಿನ್ನೆಲೆಯಲ್ಲಿ ಆಕೆ ಸಾರ್ವಜನಿಕ ಸನ್ನದು ಇಲ್ಲದೇ ರಾಜಕೀಯ ಪ್ರೇರಿತ ವಿಚಾರವನ್ನು ಹೇರಲು ಸ್ವತಂತ್ರ! ಮೊದ ಮೊದಲು ಭರವಸೆ ಮೂಡಿಸುವಂತಿರುತ್ತಿದ್ದ ಅರುಂಧತಿ ರಾಯ್ ವಿಚಾರಗಳಿಂದ ಮಾಧ್ಯಮಗಳು ಆಕೆಯನ್ನು ಅಂತಾರಾಷ್ಟ್ರೀಯ ವ್ಯಕ್ತಿಯನ್ನಾಗಿ ಬಿಂಬಿಸಿದವು. ಎಡಪಂಥೀಯ ಸಂಸ್ಥೆಗಳು ಆಕೆಗೆ ವೇದಿಕೆಗಳನ್ನು ಒದಗಿಸುತ್ತಾ ಹೋದಂತೆ ಅರುಂಧತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರೆಕ್ಕೆಪುಕ್ಕಗಳು ಬೆಳೆದವು. ಅಧಿಕಾರವೆನ್ನುವುದು ಭ್ರಷ್ಟಗೊಳಿಸುತ್ತದೆ ಎಂಬಂತೆ, ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ  ನಿರಂಕುಶತೆ ಆವರಿಸಿಕೊಂಡಿತು. ಇದರ ಮುಂದುವರಿದ ಭಾಗವಾಗಿ ಎಡಪಂಥೀಯ ಲೇಖಕರ ಮತ್ತು ಚಿಂತಕರ ಪಡೆಯಲ್ಲಿ ಅಘೋಷಿತವಾಗಿ ನಾಯಕಿ ಆಗಿರುವುದರಿಂದ ಆಕೆಯನ್ನು ಟೀಕಿಸಲು ಸಾಮಾನ್ಯರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವನಿಯಂತ್ರಣಕ್ಕೆ ಒಳಪಟ್ಟಿರಬೇಕಾಗುತ್ತದೆ!
ಮೊದಮೊದಲು ಅರುಂಧತಿ ರಾಯ್ ಸಂಸ್ಕೃತಿ ಮತ್ತು ರಾಜಕೀಯ ವಿಷಯಗಳ ಮೇಲೆ ಅರ್ಥಪೂರ್ಣ ಲೇಖನಗಳನ್ನು ಬರೆದಿದ್ದರಿಂದ ಆಕೆಯ ವಿಚಾರಗಳು ಗಂಭೀರವಾಗಿ ಚರ್ಚೆಗೊಳಗಾಗುತ್ತಿದ್ದವು. 1998ರಲ್ಲಿ ಭಾರತ ಅಣ್ವಸ್ತ್ರ ಹೊಂದುವುದನ್ನು ವಿರೋಧಿಸಿದಾಗ ಆಕೆಯನ್ನು ಶಾಂತಿಪ್ರಿಯ ಹೋರಾಟಗಾರ್ತಿ ಎಂದೂ ಕರೆಯಲಾಯಿತು. ಪ್ರತ್ಯೇಕವಾದಿಗಳ ಬೇಡಿಕೆಯಂತೆ ಕಾಶ್ಮೀರಕ್ಕೆ ಸ್ವಾಯತ್ತತೆ ಸಿಗಬೇಕು ಎಂದೆಲ್ಲ ಮಾಧ್ಯಮಗಳ ಸಂದರ್ಶನಗಳಲ್ಲಿ ಬಡಬಡಿಸಿದಾಗ ಸಮರ್ಥಕರು "ಸ್ವಾತಂತ್ರಹೋರಾಟಗಾರ್ತಿ" ಎಂದು ಬಣ್ಣಿಸಿದ್ದರು. ಆದರೆ 2002ರಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಿಂದ ನ್ಯಾಯಾಂಗ ನಿಂದನೆ ನೋಟಿಸ್ ಬಂದಾಗ ಕ್ಷಮೆ ಕೇಳದೇ ನ್ಯಾಯಾಂಗಕ್ಕೇ ಸವಾಲೆಸೆದಿದ್ದಳು. ಇದರಿಂದಾಗಿ ನ್ಯಾಯಾಲಯ ವಿಧಿಸಿದ ಒಂದು ದಿವಸದ ಸಾಂಕೇತಿಕ ಶಿಕ್ಷೆಯನ್ನು ಅನುಭವಿಸಿದಳು. ಜೊತೆಗೆ ವಿಧಿಸಿದ್ದ 2500 ರುಪಾಯಿ ದಂಡವನ್ನು ಪಾವತಿಸಿ, ತಪ್ಪಿದಲ್ಲಿ ಒಳಗಾಗುವ ಮೂರು ತಿಂಗಳು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದೂ ಆಯಿತು. ಸಂತ್ರಸ್ತರ ಪರ ತನ್ನ ಸಹಾನುಭೂತಿ ನೈಜವಾಗಿ ವ್ಯಕ್ತಪಡಿಸಲೇಬೇಕೆಂದಿದ್ದಲ್ಲಿ ನಿಸ್ಸಂಶಯವಾಗಿಯೂ ಅರುಂಧತಿ ರಾಯ್ ಆ ದಂಡವನ್ನು ಕಟ್ಟದೇ ಮೂರು ತಿಂಗಳು ಶಿಕ್ಷೆ ಅನುಭವಿಸಬೇಕಿತ್ತು. ಕೇವಲ ಜಾಗತಿಕ ಪ್ರಚಾರ ಪಡೆಯುವ ಕಾರಣದಿಂದ ದಿವಸ ಒಂದರ ಶಿಕ್ಷೆ ಅನುಭವಿಸಿ ದಂಡ ಕಟ್ಟಿ ಸಂಜೆ ಮನೆಗೆ ನಗುತ್ತಾ ಹೋದಾಗಲೇ ಆಕೆಯ ಆಷಾಢಭೂತಿತನದ ಮೊದಲ ದರ್ಶನವಾದದ್ದು.
ಭಾರತ ವಿರೋಧಿ ಭಾಷಣಗಳನ್ನು, ಇಸ್ರೇಲ್, ಶ್ರೀಲಂಕಾ ಮತ್ತು ಅಮೆರಿಕದ ದೂಷಣೆಯನ್ನು ಮಾಡುತ್ತಲೇ ಅರುಂಧತಿ ರಾಯ್ ಪ್ರತಿಷ್ಠಿತ "ದಿ ಗಾರ್ಡಿಯನ್‌" ನಂತಹ ಪತ್ರಿಕೆಗಳಿಗೆ ಬರೆಯುತ್ತಾ ಹೆಸರು ಮತ್ತು ದುಡ್ಡು ಮಾಡಿಕೊಂಡಳು. ಭಾರತದ ಉಪ್ಪು ತಿಂದು, ಇಲ್ಲಿನ ಶ್ರೀಮಂತ ಪರಂಪರೆಯಿಂದ ಬೆಳೆದು ಯಾವ ಉನ್ನತ ಮಟ್ಟಕ್ಕೆ ಹೋಗಿದ್ದಳೋ ಅದೇ ಸ್ಥಾನದ ಬಲದಿಂದ ಭಾರತವನ್ನೆ ಹೀಗಳೆಯಲು ಶುರುವಿಟ್ಟುಕೊಂಡಳು.
ಪ್ರಾಮಾಣಿಕವಾಗಿ ಇರುವುದು ಅಲ್ಲದೇ ಸಮಾಜದ ಪ್ರಾಮಾಣಿಕತೆಗೂ ಒತ್ತಾಯಿಸಿ ಹೋರಾಟ ಮಾಡುತ್ತಿದ್ದ ಅಣ್ಣಾ ಹಜಾರೆಯವರನ್ನು ಅನುಮಾನಿಸಿ ಟೀಕಿಸಿದ್ದಳು. ಅವರಿಗೆ ಬಂದ ಜನಪ್ರಿಯತೆಯನ್ನು ಸಹಿಸಲಾಗದೇ 2012ರ ಕ್ರಾಂತಿಯನ್ನು ಕೇವಲ ಮಾಧ್ಯಮಗಳ ಹೈಪ್ ಎಂದು ಷರಾ ಬರೆದಳು!  ಇಂತಹ ವ್ಯಕ್ತಿಯಿಂದ ಗಾಂಧೀಜಿ ಬಗ್ಗೆ ಇನ್ನೇನು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ?  Queen of double mentality ಎಂದು ಆಕೆಯನ್ನು ಕರೆಯಬಹುದಷ್ಟೆ.
ಪತ್ರಿಕೆಗೆ 'ಹರಿಜನ' ಎಂದು ಹೆಸರಿಟ್ಟು, ರಾಮ ಭಜನೆ ಮಾಡುತ್ತಾ ಮುಸ್ಲೀಮರನ್ನು ಸಹೋದರ ದೇಶವಾಸಿಗಳೆಂದು ಆದರಿಸಿ ಉಪವಾಸ ಮಾಡುತ್ತಾ ಸಾಮರಸ್ಯ ಮೂಡಿಸುತ್ತಿದ್ದ ಮಹಾತ್ಮ ಗಾಂಧೀಜಿಯವರು ಅರುಂಧತಿ ರಾಯ್ ಕಾಮಾಲೆ ಕಣ್ಣಿಗೆ ಜಾತಿವಾದಿ! ಎಂತಹ ಕಟ್ಟಾ ಕೋಮುವಾದಿಗಳೂ ಸಹ ಗಾಂಧೀಜಿ ಜಾತ್ಯತೀತರಾಗಿದ್ದರು ಎನ್ನುವುದನ್ನು ಒಪ್ಪುತ್ತಾರೆ. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಸ್ವತಃ ಅಧಿಕಾರಕ್ಕಾಗಿ ಹಪಹಪಿಸದೆ ಕೋಮು ಹಿಂಸೆಯನ್ನು ತಡೆಯಲು ಶ್ರಮಿಸಿದ ರಾಷ್ಟ್ರಪಿತ ದಲಿತರ ಶೌಚಾಲಯವನ್ನು ಸ್ವಚ್ಚಗೊಳಿಸಲು ಹಿಂದುಮುಂದು ನೋಡದವರಾಗಿದ್ದರು.  ರಾಮರಾಜ್ಯದ ಕನಸು ಕಾಣದೇ, ಹಿಂದೂಗಳನ್ನಷ್ಟೇ ಗಾಂಧೀಜಿಯವರು ತುಚ್ಛೀಕರಿಸಿದ್ದರೆ ಅರುಂಧತಿ ದೃಷ್ಟಿಯಲ್ಲಿ ಅವರು ಜಾತಿವಾದಿಗಳಾಗದೇ ಜಾತ್ಯತೀತವಾದಿಗಳಾಗುತ್ತಿದ್ದರು!  ಅರುಂಧತಿ ಎಷ್ಟು ಎಡಬಿಡಂಗಿ ಎನ್ನುವುದು ಆಕೆ ಮಾವೋವಾದಿಗಳನ್ನು ಗಾಂಧೀಜಿಗೆ ಹೋಲಿಸಿದಾಗ ಇನ್ನಷ್ಟು ಸ್ಪಷ್ಟವಾಯಿತು. ಆಗ ಮಹಾತ್ಮನನ್ನೇ ಮಾವೋವಾದಿಗಳ ಮಟ್ಟಕ್ಕೆ ಇಳಿಸಿದ್ದಳೋ ಅಥವಾ ಹಿಂಸಾವಾದಿಗಳಾದ ನಕ್ಸಲರನ್ನು ಅಹಿಂಸಾವಾದಿ ಬಾಪುವಿನೊಂದಿಗೆ ಸಮೀಕರಿಸಿದ್ದಳೋ ಎಂದು ಇನ್ನೂ ನಮ್ಮ ಪ್ರಗತಿಪರ ಬುದ್ಧಿಜೀವಿಗಳಿಂದ ಉತ್ತರ ಸಿಕ್ಕಿಲ್ಲ.
ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೋರ್ ವಿರುದ್ಧ ಕಳಪೆ ಹೇಳಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ  ಗಿರೀಶ್ ಕಾರ್ನಾಡರು ಉಚ್ಚರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದುರಂತವೆಂದರೆ ಇಂತಹ ಉಪದ್ವ್ಯಾಪದ ಅಭಿಪ್ರಾಯಗಳನ್ನು ಖಂಡಿಸುವ ಬಲಕ್ಕಿಂತ ಸಮರ್ಥಿಸುವ ಧ್ವನಿಗಳೇ ಜೋರಾಗಿರುತ್ತವೆ. ಕಳ್ಳನ ಬಾಯಿ ಜೋರು ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ಅನ್ವಯವಾಗುತ್ತದೆ!
ಸಾಹಿತ್ಯ ಕ್ಷೇತ್ರದಲ್ಲಿ ವಿದ್ವಾಂಸರಾದವರು ಉಳಿದ ಕ್ಷೇತ್ರಗಳಲ್ಲು ಅಷ್ಟೇ ಪರಿಣಿತಿ ಹೊಂದಿರುತ್ತಾರೆ ಎಂದು ನಾವುಗಳು ಇನ್ನೂ ಸಹ ಅಪೇಕ್ಷಿಸುವುದು ತಪ್ಪಾಗುತ್ತದೆ. ಆಯಾ ಕ್ಷೇತ್ರಗಳಲ್ಲಿಯ ಸಾಧಕರ ಕೌಶಲ್ಯವನ್ನು Art for art’s sake ಎಂದು ಅವರವರ ರಂಗಗಳಿಗಷ್ಟೇ ಸೀಮಿತಗೊಳಿಸಿ ಆಸ್ವಾದಿಸಿದರೆ ಚೆನ್ನ. ಸರಿಯಾಗಿ ಇತಿಹಾಸ ಜ್ಞಾನವಿಲ್ಲದೇ ಏರಿದ ವೇದಿಕೆಯಲ್ಲಿ ಆಹ್ವಾನ ನೀಡಿದವರನ್ನು ಮೆಚ್ಚಿಸುವ ಭರದಲ್ಲಿ ರಾಷ್ಟ್ರಪಿತನನ್ನು ಅಪ್ರಬುದ್ಧವಾಗಿ ಹೀಗಳೆಯುವುದು ಶೋಭೆಯಲ್ಲ.
"ನಮ್ಮ ಅರುಂಧತಿ ರಾಯ್ ತಮ್ಮ ನಂಬುಗೆಯನ್ನು ಈಗ ಸ್ಥಿರೀಕರಿಸುತ್ತಿದ್ದಾರೆ" ಎಂದು ಎಡಪಂಥೀಯ ಬುದ್ಧಿಜೀವಿಗಳು, ಆಕೆಯ ಆರಾಧಕರು ಹುಚ್ಚುಹುಚ್ಚಾಗಿ ಸಮರ್ಥಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ.
ಗಾಂಧೀಜಿಯವರು ಜಾತಿವಾದಿಯಾಗಿದ್ದಾರೆ ಎಂದಿ ದ್ದಾರೆ ಅರುಂಧತಿ ರಾಯ್. ಆದರೆ ಅರುಂಧತಿ ರಾಯ್‌ರಂಥವರು ಸಮಯಕ್ಕೆ ತಕ್ಕ ಹಾಗೆ ಸೋಗು ಹಾಕುವ ಸೊಗಲಾಡಿಗಳು ಎನ್ನುವ ವಿಷಯ ಪ್ರಸ್ತುತವಾಗುತ್ತದೆ.

-ಬಿ. ಸತೀಶ ಹೆಗಡೆ , ಬಸೂರು, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.