ಸೀಮಾಂಧ್ರಕ್ಕೂ ಸಿಗಲಿ ನ್ಯಾಯ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಪ್ರಸ್ತಾಪ ಸಂಸತ್ತಿನಲ್ಲಿ ಚರ್ಚೆಗೆ ಬರಲಿದೆ. ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಪ್ರತ್ಯೇಕ ತೆಲಂಗಾಣದ ಪರವಾಗಿ ಧ್ವನಿಯೆತ್ತುತ್ತಲೇ ಬಂದಿದೆ. ಆದರೆ ಅದೇ ವೇಳೆಯಲ್ಲೇ, ಸೀಮಾಂಧ್ರ ಕ್ಷೇತ್ರಕ್ಕೂ ನ್ಯಾಯ ದೊರಕಬೇಕು ಎಂದು ನಾವು ಆಶಿಸುತ್ತೇವೆ.
ಕಾಂಗ್ರೆಸ್ ಪಕ್ಷ ಯಾವ ರೀತಿ ಈ ವಿಷಯದಲ್ಲಿ ವರ್ತಿಸುತ್ತಿದೆ ಎನ್ನುವುದನ್ನು ನೋಡಿದಾಗ, ಶಾಸನ ಕಲೆಯಲ್ಲಿ ಅದರ ಅಸಡ್ಡೆ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ. 2000ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಡಿಯ ಎನ್ಡಿಎ ಸರ್ಕಾರ, ಮೂರು ರಾಜ್ಯಗಳ-ಉತ್ತರಾಖಂಡ, ಜಾರ್ಖಂಡ, ಮತ್ತು ಛತ್ತೀಸ್ಗಢದ ಸ್ಥಾಪನೆಯ ನಿರ್ಧಾರ ಕೈಗೊಂಡಿತು. ಯಾವ ಸೌಲಭ್ಯಗಳು ಸಿಗಬೇಕು ಎಂದು ಆ ರಾಜ್ಯಗಳ ರಚನೆಯಾಯಿತೋ, ಆ ಸೌಲಭ್ಯಗಳೆಲ್ಲ ಆ ಮೂರೂ ರಾಜ್ಯಗಳು ಅಸ್ತಿತ್ವಕ್ಕೆ ಬಂದ ನಂತರ ಅವಕ್ಕೆ ದೊರಕಿತು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ತತ್ಕಾಲೀನ ಗೃಹಮಂತ್ರಿ ಎಲ್.ಕೆ. ಆಡ್ವಾಣಿಯವರು ಈ ಮೂರು ರಾಜ್ಯಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಛತ್ತೀಸ್ಗಢ ಮತ್ತು ಉತ್ತರಾಖಂಡ ಸ್ಥಾಪನೆಯ ವೇಳೆ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲವಾದರೂ, ಜಾರ್ಖಂಡ ರಚನೆಯ ವೇಳೆ ಮಾತ್ರ ಅಧಿಕಾರಾರೂಢ ಆರ್ಜೆಡಿಯಿಂದ ಕೆಲವು ಅಡಚಣೆಗಳು ಎದುರಾದವು. ಗೃಹಮಂತ್ರಿಗಳು ಎಲ್ಲಾ ರಾಜ್ಯಗಳೊಂದಿಗೆ ವಿಸ್ತೃತವಾಗಿ ವಿಚಾರ-ವಿಮರ್ಶೆ ಮಾಡಿದರು. ಹೊಸ ರಾಜ್ಯಗಳಿಗೆ ಎಲ್ಲಾ ರೀತಿಯಲ್ಲೂ ಸಹಾಯಮಾಡಲಾಗುವುದು ಮತ್ತು ಅವುಗಳಿಂದಾಗಿ ಉಳಿದ ರಾಜ್ಯಗಳಿಗೆ ಯಾವುದೇ ರೀತಿಯಲ್ಲಿ ಪ್ರತೀಕೂಲ ಪರಿಣಾಮವುಂಟಾಗದು ಎನ್ನುವ ಭರವಸೆಯನ್ನು ನೀಡಲಾಯಿತು. ವಿಧಾನಸಭೆಗಳಲ್ಲಿ ಈ ಮೂರೂ ರಾಜ್ಯಗಳ ಬಗ್ಗೆ ಒಮ್ಮತದ ನಿರ್ಣಯಗಳು ಪಾಸಾದವು. ನಂತರ ಸಂಸತ್ತಿನ ಎರಡೂ ಮನೆಗಳಲ್ಲೂ ಈ ಕುರಿತು ಚರ್ಚೆಗಳಾಗಿ, ಕೊನೆಗೆ ಹೊಸ ರಾಜ್ಯಗಳ ರಚನೆಗೆ ಒಪ್ಪಿಗೆ ಸಿಕ್ಕಿತು. ಈ ರಾಜ್ಯಗಳ ಕುರಿತಾದ ಆಂತರಿಕ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಡೆಹ್ರಾಡೂನ್ ಅನ್ನು ಉತ್ತರಾಖಂಡದ ರಾಜಧಾನಿಯನ್ನಾಗಿ ಮಾಡಲಾಯಿತು. ನೈನಿತಾಲ್ನಲ್ಲಿ ಹೈಕೋರ್ಟ್ ಅನ್ನು ಸ್ಥಾಪಿಸಿ ಅಲ್ಮೋರಾಗೆ ಪರಿಹಾರ ನೀಡಲಾಯಿತು. ಛತ್ತೀಸ್ಗಢದ ರಾಜಧಾನಿಯಾಗಿ ರಾಯ್ಪುರ್ ಆಯ್ಕೆಯಾಯಿತು ಮತ್ತು ಬಿಲಾಪುರದಲ್ಲಿ ಹೈಕೋರ್ಟ್ ನ್ಯಾಯಾಲಯದ ಪೀಠವನ್ನು ಸ್ಥಾಪಿಸಲಾಯಿತು. ಸಚಿವಾಲಯ ಮತ್ತು ಹೈಕೋರ್ಟ್ ಆವರಣಕ್ಕಾಗಿ ಅಲ್ಲಿ ಅಸ್ತಿತ್ವದಲ್ಲಿದ್ದ ಕಟ್ಟಡಗಳನ್ನೇ ರಾತ್ರೋರಾತ್ರಿ ನವೀಕರಿಸಿಲಾಯಿತು. ಆಗ ಯಾವ ರೀತಿಯ ಅಸಮ್ಮತಿಗಳೂ ಎದುರಾಗಲಿಲ್ಲ. ಯಾವ ರಾಜ್ಯಗಳಲ್ಲೂ ಒಂದೇ ಒಂದು ಪ್ರತಿಭಟನೆ ನಡೆಯಲಿಲ್ಲ. ಆ ಸಮಯದಲ್ಲಿ ಕಾನೂನು ಮಂತ್ರಿಯಾಗಿದ್ದ ನಾನು ಆ ಮೂರೂ ರಾಜ್ಯಗಳಲ್ಲಿನ ಉಚ್ಚ ನ್ಯಾಯಾಲಯಗಳ ಉದ್ಘಾಟನೆಗಾಗಿ ತೆರಳಿದ್ದೆ. ಜನರ ಮನಸ್ಸಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಅವರು ಎನ್ಡಿಎ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸತೊಡಗಿದರು.
ಆದರೆ ಆಂಧ್ರಪ್ರದೇಶದಲ್ಲಾಗುತ್ತಿರುವ ವಿದ್ಯಮಾನಗಳು ಬಹಳ ಭಿನ್ನವಾಗಿವೆ. ತೆಲಂಗಾಣ ಮತ್ತು ಸೀಮಾಂಧ್ರ ಪ್ರದೇಶದ ಜನರಿಗೆ ಕಾಂಗ್ರೆಸ್ನ ಉದ್ದೇಶಗಳ ಮೇಲೆ ಅನುಮಾನವಿದೆ. ಸರಿಯಾದ ತಯಾರಿ ನಡೆಯಲಿಲ್ಲ ಎನ್ನುವುದು ಸ್ಪಷ್ಟ. ಸೀಮಾಂಧ್ರದ ಜನತೆಯ ಮನದಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ಭಾವನೆ ಉದ್ಭವವಾಗದಂತೆ ತಡೆಯಲು ಯಾವ ಕೆಲಸಗಳೂ ಆಗಲಿಲ್ಲ. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ರಾಜ್ಯ ರಚನೆಯ ವೇಳೆ ಸಮತೋಲನ ಕಾಯ್ದುಕೊಳ್ಳಲು ಅವಶ್ಯಕವಿದ್ದ ಪ್ರಬುದ್ಧ ರಾಜಕೀಯ ಪ್ರಜ್ಞೆಯಂತೂ ಇಲ್ಲಿಯವರೆಗೂ ಕಾಣಿಸೇ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಸಂಕ್ಷೋಭೆಯಿದೆ. ಆಡಳಿತಾರೂಢ ಒಕ್ಕೂಟವೇ ಈಗ ಇಬ್ಭಾಗವಾಗಿ ಮುರಿದುಬೀಳುವ ಅಪಾಯವನ್ನು ಎದುರಿಸುತ್ತಿದೆ. ಕೇಂದ್ರದ ಪ್ರಸ್ತಾವನೆಗೆ ರಾಜ್ಯ ವಿಧಾನಸಭೆ ಪ್ರತೀಕೂಲ ಪ್ರತಿಕ್ರಿಯೆಯನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ಒಳಗೇ ಈ ಕುರಿತು ಸಹಮತವಿಲ್ಲ. ಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಉದ್ದೇಶದ ಹೆಜ್ಜೆಯಾಗಬೇಕಿದ್ದ ತೆಲಂಗಾಣ ರಾಜ್ಯರಚನೆ, ಈಗ ರಾಜಕೀಯ ನಿರ್ವಹಣಾ ವೈಫಲ್ಯದಿಂದಾಗಿ ವಿವಾದದಲ್ಲಿ ಸಿಲುಕಿದೆ.
ಈಗಲೂ ಸಮಯ ಮಿಂಚಿಲ್ಲ. ಎರಡೂ ಕ್ಷೇತ್ರಗಳ ಆಕಾಂಕ್ಷೆಗಳನ್ನು ಪರಿಗಣನೆಗೆ ತೆಗೆದುಕೊಂಡು ವಿದ್ಯುತ್, ಕೃಷಿ ಮತ್ತು ಸೀಮಾಂಧ್ರಕ್ಕೆ ಹೊಸ ರಾಜಧಾನಿಯ ಸ್ಥಾಪನೆಯ ಕುರಿತು ನ್ಯಾಯ ಒದಗಿಸುವ ಕೆಲಸವಾಗಬೇಕು. ಒಂದು ಉತ್ತಮ ಉದ್ದೇಶವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಉದ್ದೇಶಕ್ಕೇ ಹಾನಿಯಾಗುವ ಸಾಧ್ಯತೆಯಿರುತ್ತದೆ. ಈ ವಿಷಯವಾಗಿ ಅವಶ್ಯಕ ಕ್ರಮಗಳನ್ನು ಕೈಗೊಂಡು, ತೆಲಂಗಾಣ ಹೊಸ ಬೆಳಕಲ್ಲಿ ಮಿಂಚುವಂತೆ ಮಾಡಬೇಕು ಎಂದು ಆಶಿಸುತ್ತೇನೆ.
-ಅರುಣ್ ಜೇಟ್ಲಿ, ರಾಜ್ಯಸಭೆ ಪ್ರತಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

