'ವಿದ್ವಾಂಸರು' ನಾವು, ವಿಧ್ವಂಸದಲ್ಲೇ ಸಂತಸ ಅರಸುವೆವು...
'ಎಡ'ಬಿಡದ ಚಿಂತಕರು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಗ್ರ ಪ್ರತಿಪಾದಕರ ಸಾಲಿಗೆ ಸೇರುವ ಲೇಖಕಿಯೊಬ್ಬಳ ಸ್ವಗತವನ್ನು ಹೆಕ್ಕಿದಾಗ.....
ನಾನು ಭಂಡಿ. ಶತಭಂಡಿ, ಮಹಾಭಂಡಿ ಹೀಗೆ ಏನಾದರೂ ಸರಿ ಹೊಂದಬಹುದು. ಎಲ್ಲೂ ಕೇಳಿರದ ಹೆಸರು ಇದಾದರೂ ಒಂಥರಾ ಇದು ವೆಂಡಿ, ಡುಂಢಿಗಳನ್ನೆಲ್ಲ ನೆನಪಿಸುವಂತಿದೆ ಎಂದು ನಿಮಗನಿಸಿದರೆ ನಾನದಕ್ಕೆ ಜವಾಬ್ದಾರಳಲ್ಲ. ಅಂದಹಾಗೆ, ನಾನು ಯಾವುದಕ್ಕೂ ಜವಾಬ್ದಾರಳಲ್ಲ! ನಾನು ಬೆಂಕಿ ಹೊತ್ತಿಸುತ್ತೇನೆ. ನೀವಾಗ 'ಅಯ್ಯೋ ಇದು ಮನೆಮಾರುಗಳನ್ನು ಸುಡುತ್ತಿದೆ' ಅಂತ ಬೊಬ್ಬೆ ಹಾಕುತ್ತೀರಾದರೆ ಅದಕ್ಕೂ ನೀವೇ ಜವಾಬ್ದಾರರಾಗುತ್ತೀರಿ. ಏಕೆಂದರೆ ಮೂಲತಃ ನಾನು ವಿದ್ವಾಂಸಳು. ಹಾಗೆಂದು ಅಮೆರಿಕದ ಅಧ್ಯಯನ ವ್ಯವಸ್ಥೆಯಿಂದ ಠಸ್ಸೆ ಒತ್ತಿಸಿಕೊಂಡುಬಿಟ್ಟಿದ್ದೇನೆ. ನೀವೀಗ ಅದು ಹಾಗಲ್ಲ.... ಎಂದು ಏನೇ ಹೇಳುವುದಕ್ಕೆ ಹೊರಟರೂ ನಿಮ್ಮ ಮಾತುಗಳನ್ನು ನನ್ನ 'ವಿದ್ವತ್ಪೂರ್ಣ' ಬಾಣಗಳಿಂದ ವಿಧ್ವಂಸಗೊಳಿಸುವ ಹಿಕ್ಮತ್ತು ನನಗಿದೆ.
ಉದಾಹರಣೆಗೆ ಬೆಂಕಿ ಹೊತ್ತಿಸಿದ ಆರೋಪ ಹೊರೆಸುವ ನಿಮ್ಮ ಪ್ರಯತ್ನವನ್ನೇ ತೆಗೆದುಕೊಳ್ಳೋಣ. ನಾನು ಹೇಳುತ್ತೇನೆ- 'ಈ ಕ್ಷುಲ್ಲಕ, ಅಸಹಿಷ್ಣು, ಸಂಕುಚಿತ ಜನರಿಗೆ ಯಾವುದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಬೆಂಕಿ ಹಚ್ಚಬಾರದು ಎಂದು ನನಗೆ ಉಪದೇಶಿಸುತ್ತಿರುವ ಈ ಮಂದಿಯದ್ದೇ ಮತಾಂಧ ಮನಸ್ಸು. ಇಷ್ಟಕ್ಕೂ ಬೆಂಕಿ ಅಂದರೆ ಏನು? ಅದು ಬೆಳಕು. ನಿಮ್ಮ ವೇದಗಳಲ್ಲೇ 'ತಮಸೋಮಾ ಜ್ಯೋತಿರ್ಗಮಯ' ಎಂದಿದ್ದಾರೆ. ಅಂದರೆ ಕತ್ತಲಿನಿಂದ ಬೆಳಕಿನೆಡೆ. ನೀವು ದೇವರಿಗೆ ಎಣ್ಣೆಯ ದೀಪ ಹಚ್ಚಿದರೆ ಸರಿ, ನಾನು ಬೆಂಕಿ ಹಚ್ಚಿ ಪೆಟ್ರೋಲು ಸುರಿದರೆ ಅದು ತಪ್ಪು ಹೇಗಾಗುತ್ತದೆ' ಎಂದು ಪ್ರತಿಪ್ರಶ್ನೆ ಎಸೆಯುತ್ತೇನೆ. ಆಗ ನೀವು ತಬ್ಬಿಬ್ಬಾಗಿ, ಸ್ವಲ್ಪ ಆಕ್ರೋಶವನ್ನೂ ತಂದುಕೊಂಡು- ನಾವು ದೇವರಿಗೆ ಬೆಳಗುವ ಜ್ಯೋತಿಯೊಂದಿಗೆ ನಿನ್ನ ದ್ವೇಷದ ಬೆಂಕಿಯನ್ನು ಹೋಲಿಸಿ ಸಮರ್ಥಿಸಿಕೊಳ್ಳುತ್ತೀಯಾ? ಅಂತ ಬೊಬ್ಬೆ ಹಾಕುತ್ತೀರಿ. 'ಬೆಂಕಿ ಹಚ್ಚುವುದಷ್ಟೇ ನನ್ನ ಕೆಲಸ, ಅದರಿಂದ ಬೆಚ್ಚಗಾಗಿಸಿಕೊಳ್ಳುವುದು ನಿಮ್ಮ ಹೊಣೆ ಮತ್ತು ಸಾಮರ್ಥ್ಯಕ್ಕೆ ಬಿಟ್ಟಿದ್ದು. ಹಾಗಲ್ಲದೇ ಅಯ್ಯಯ್ಯೋ ಸುಡುತ್ತಿದೆ ಅಂತ ಕೂಗಿಕೊಂಡರೆ ಅದು ನಿಮ್ಮ ಅಸಾಮರ್ಥ್ಯ ಹಾಗೂ ಅನುಭವಿಸಬೇಕಾದ ಕರ್ಮ. ನೀವು ಕರ್ಮ ಸಿದ್ಧಾಂತವನ್ನು ನಂಬುತ್ತೀರೋ ಬಿಡುತ್ತೀರೋ?' ಅಂತ ಕತ್ತಿ ಬೀಸುತ್ತೇನೆ. ನಿಮಗೆ ಹುಚ್ಚು ಹಿಡಿಯೋದೊಂದೇ ಬಾಕಿ. ನನಗೆ, ನನ್ನಂಥವರಿಗೆ ಬೇಕಾಗಿದ್ದೂ ಅದೇ!
ವಾಸ್ತವ ಏನೆಂದರೆ ನಾನು ಮತ್ತು ನನ್ನಂಥವರ ಗುಂಪಿಗೆ ಮಾನಸಿಕ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ಪಡೆಯುವ ಮಾರ್ಗ ಕಷ್ಟದ್ದು. ಒಳ್ಳೆಯವರ ಸಹವಾಸದಲ್ಲಿರಬೇಕು. ಉತ್ತಮ, ಹಿತಕರವಾದ ಸಂಗತಿಗಳನ್ನು ನಮ್ಮದಾಗಿಸಿಕೊಳ್ಳಬೇಕು. ಅಧ್ಯಯನ- ಅನುಭವಗಳಿಗೆ ತೆರೆದುಕೊಳ್ಳಬೇಕು. ಹೀಗೆಲ್ಲ ಮಾಡಿ ಸಾಧನೆಯ ಶಿಖರ ಏರಿದವರು ಎಷ್ಟು ಮಂದಿ ಹೇಳಿ? ಇದೆಲ್ಲ ಆಗುವ ಕೆಲಸವಾ? ನಾವು ಅಂಥ ಹಂತ ಮುಟ್ಟಲಾಗುವುದಿಲ್ಲ ಎಂಬುದು ಖಾತ್ರಿಯಾದಾಗ ಸಾಗಬಹುದಾದ ಬೆಸ್ಟ್ ಮಾರ್ಗ ಎಂದರೆ ಆ ಹಂತದಲ್ಲಿರುವವರನ್ನೇ ನಮ್ಮ ಪ್ರಪಾತಕ್ಕೆ ಪ್ರಚೋದಿಸಿ ಎಳೆದುಕೊಳ್ಳುವುದು. ಸಾಮಾನ್ಯವಾಗಿ ಜಗತ್ತು ಈ ಪ್ರಚೋದನೆಗೆ ಪಿಗ್ಗಿ ಬೀಳುತ್ತದೆ. ಸೆಣೆಸಾಡಿಯೇ ಸಿದ್ಧ ಎಂದು ನಮ್ಮ ಬಳಿ ಬರುವವರಿಗೆ ತಾವು ಗುದ್ದಾಡುತ್ತಿರುವುದು ಹಂದಿಯ ಜತೆ ಎಂದು ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಹಂದಿಯ ಜತೆ ಸೆಣೆಸಾಡುವುದರ ಅಪಾಯವೆಂದರೆ ಅದು ಎದುರಾಳಿಯನ್ನು ತನ್ನ ಹೊಲಸು ಗುಂಡಿಗೇ ಕರೆದು ಎಳೆದಾಡುತ್ತದೆ. ಕೊನೆಯಲ್ಲಿ ಎದುರಾಳಿಯೇ ಗೆದ್ದರೂ ಒಟ್ಟಾರೆ ಮಜ ಸಿಗುವುದು ಹಂದಿಗೇ. ಗೆಲುವಿನ ನಗು ಸೂಸಲಾಗದಷ್ಟರಮಟ್ಟಿಗೆ ಎದುರಾಳಿ ಮೈತುಂಬ ಕೆಸರು. ನಮ್ಮಲ್ಲಿ ಈ ತಂತ್ರಗಾರಿಕೆ ಇರುವುದರಿಂದಲೇ ನಾವು ಉತ್ಕಟ ಭಂಡತನದಿಂದ ನೀವು ಆರಾಧಿಸುವ ವ್ಯಕ್ತಿಗಳಿಗೆ, ದೈವಗಳಿಗೆ ಸಲಿಂಗ ಕಾಮದ, ವ್ಯಭಿಚಾರದ ಬಣ್ಣಗಳನ್ನೆಲ್ಲಾ ಹೊರೆಸಿ ಸಾಹಿತ್ಯದ ಹೆಸರಲ್ಲಿ ನಮ್ಮ ಸ್ಯಾಡಿಸ್ಟ್ ಮನಸ್ಥಿತಿಯನ್ನು ತೀರಿಸಿಕೊಳ್ಳುತ್ತೇವೆ. ನೀವು ಈ ಸ್ಯಾಡಿಸ್ಟ್ ಕೃತಿಯನ್ನು ನಿರ್ಬಂಧಿಸುವ ಪ್ರಯತ್ನ ಮಾಡಿದಾಗ ನಾವು ಹೂಂಕರಿಸುತ್ತೇವೆ. 'ಒಂದು ಕೃತಿಯನ್ನು ಇನ್ನೊಂದು ಕೃತಿಯಿಂದ ಎದುರಿಸಬೇಕೇ ಹೊರತು ನಿರ್ಬಂಧದಿಂದಲ್ಲ' ಎಂಬ ಮತ್ತೊಂದು 'ವಿದ್ವತ್ಪೂರ್ಣ' ಆಣಿಮುತ್ತು. ಇದು ಹೇಗೆಂದರೆ, 'ಟ್ರಾಫಿಕ್ನಲ್ಲಿ ಯಾರಾದರೂ ನಿಮ್ಮನ್ನು ಅವಾಚ್ಯ ಶಬ್ದದಲ್ಲಿ ಬಯ್ದರೆ ಅದನ್ನು ಆಕ್ಷೇಪಿಸಬಾರದು. ಇನ್ನಷ್ಟು ಕೆಟ್ಟ ಶಬ್ದಗಳಲ್ಲಿ ಬಯ್ಯುವ ಸಾಮರ್ಥ್ಯ ತೋರಿಸಬೇಕು' ಎಂದಂತೆ.
ಸಾರಸ್ವತ ಲೋಕಕ್ಕೆ ಮುಂದಿನ ದಿನಗಳಲ್ಲಿ ನಮ್ಮಂಥ ಸಂತಾನವೇ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಯಾವ ನಿಟ್ಟಿನಲ್ಲೂ ನೀವು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ನೀವೆಷ್ಟೇ ಬುದ್ಧಿವಂತರಾಗಿರಬಹುದು. ಆದರೆ ಅದಕ್ಕೊಂದು ಮಿತಿ ಇದ್ದೇ ಇದೆ. ಆದರೆ ನಮ್ಮ ತೆವಲು- ಹುಚ್ಚುತನಕ್ಕೆ ಮಿತಿ ಇಲ್ಲ!
-ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

