ಸಂಸತ್ತಿನಲ್ಲಿ ಚಾಕೂ, ಪೆಪ್ಪರ್‌ಸ್ಪ್ರೇನ ಹುಚ್ಚಾಟ!

Updated on: 

ಕಳೆದ ವಾರ ಸಂಸತ್ತಿನಲ್ಲಿ ನಡೆದ ದುಷ್ಕಾರ್ಯವನ್ನು ನೋಡಿ, ಎಲ್ಲರೂ ಬೆಚ್ಚಿಬಿದ್ದರು. ಆದರೆ ಯಾರಿಗಾದರೂ ಆಶ್ಚರ್ಯವಾಯಿತೇ? ಸಂಸತ್ತಿನಲ್ಲಿ ಇಂಥ ಘಟನೆಗಳು ಮತ್ತೊಮ್ಮೆ ನಡೆಯುವುದಿಲ್ಲ ಎನ್ನುವ ನಂಬಿಕೆ ಯಾರಿಗಾದರೂ ಇದೆಯೇ? ನಮ್ಮ ರಾಜಕೀಯ, ಕ್ರಿಮಿನಲ್ ಆಗಿ ಬದಲಾದದ್ದು, ಕ್ರಿಮಿನಲ್‌ಗಳು ರಾಜಕಾರಣಿಗಳಾಗಿ ಬದಲಾದಾಗ! ಈ ತಪ್ಪಿನಲ್ಲಿ ಎಲ್ಲಾ ಪಕ್ಷಗಳೂ ಭಾಗಿಯಾಗಿವೆ. ಅಪರಾಧಿ ಶಾಸಕರನ್ನು ರಕ್ಷಿಸಲು ಎಲ್ಲಾ ಪಕ್ಷಗಳೂ ಕುತಂತ್ರ ನಡೆಸಿದವು. ಜೈಲಿನಲ್ಲಿ ಅಥವಾ ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿಗಳನ್ನು ಚುನಾವಣೆ ಎದುರಿಸದಂತೆ ಅನರ್ಹಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನೂ ಅವರು ಬುಡಮೇಲು ಮಾಡಲು ಪ್ರಯತ್ನಿಸಿದರು. ನೀವು ಗಾಳಿಯನ್ನು ಬಿತ್ತಿದರೆ, ಬೆಳೆಯುವುದು ಬಿರುಗಾಳಿಯನ್ನೇ ತಾನೆ?
ತಪ್ಪಿತಸ್ಥರನ್ನು ಶಿಕ್ಷಿಸದೆ ಇದ್ದದ್ದಕ್ಕೇ ಅನೈತಿಕತೆ ಹೆಚ್ಚಿತು. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸುತ್ತಿದ್ದ 11 ಜನ ಸಂಸದರು 2005ರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು. ಅವರಲ್ಲಿ ಬಿಜೆಪಿ, ಕಾಂಗ್ರೆಸ್, ಲಾಲು ಪಕ್ಷದವರು, ಮಾಯಾವತಿ ಪಕ್ಷದವರೂ ಇದ್ದರು. 2007ರಲ್ಲಿ ಬಿಜೆಪಿಯ ಸಂಸದನೊಬ್ಬ ಒಬ್ಬ ಮಹಿಳೆ ಮತ್ತು ಹುಡುಗನನ್ನು ಕೆನೆಡಾಕ್ಕೆ ಸಾಗಿಸಲು ತನ್ನ ಕುಟುಂಬದ ಪಾಸ್‌ಪೋರ್ಟ್‌ಗಳನ್ನು ಬಳಸಿ ಸಿಕ್ಕಿಬಿದ್ದ. ಈ ಘಟನೆಯಲ್ಲಿ ಕಡೇಪಕ್ಷ ಬಂಧನವಾದರೂ ಆಯಿತು. ಏಕೆಂದರೆ ಅದು ನಡೆದದ್ದು ವಿಮಾನನಿಲ್ದಾಣದಲ್ಲಿ. ಬೇರೆಲ್ಲಾದರೂ ಆಗಿದ್ದರೆ, ಇಂಥ ಸಂಸದರು ಒಂದು ಎಚ್ಚರಿಕೆ ಅಥವಾ ಉಚ್ಚಾಟನೆಯಿಲ್ಲದೇ ತಪ್ಪಿಸಿಕೊಂಡುಬಿಡುತ್ತಿದ್ದರು. ಇತ್ತೀಚೆಗೆ ಸಂಸತ್ತಿನ ಬಾವಿಗೆ ನುಗ್ಗಿ ಗದ್ದಲವೆಬ್ಬಿಸಿದ 16 ಸಂಸದರನ್ನು ಅಮಾನತುಗೊಳಿಸಲಾಯಿತು. ಅದೂ ಕೇವಲ 5 ದಿನಗಳಿಗಷ್ಟೆ.
ಇತ್ತೀಚಿನ ಗದ್ದಲ ಏನಾದರೂ ನಿರೂಪಿಸುತ್ತದೆಯೆಂದರೆ, ಅದು, ನಮ್ಮ ರಾಜಕಾರಣಿಗಳಿಗೆ ತೆಲಂಗಾಣಾದ ಕುರಿತು ನಿಜಕ್ಕೂ ಚಿಂತೆಯಿಲ್ಲ ಎನ್ನುವುದನ್ನು ಮಾತ್ರ. ರಾಜಕೀಯ ಮೇಲಾಟವೇ ಇವರೆಲ್ಲರಿಗೂ ಮುಖ್ಯವಾಗಿದೆ. ಇದೆಲ್ಲ ಶುರುವಾಗಿದ್ದು, 2009ರಲ್ಲಿ ವಿವೇಚನೆಯಿಲ್ಲದ ಚಿದಂಬರಂ ಅವರು ವಿಚಾರ ಮಾಡದೆಯೇ "ನಮ್ಮ ಸರ್ಕಾರ ತೆಲಂಗಾಣ ರಾಜ್ಯ ರಚನೆಯ ಪ್ರಕ್ರಿಯೆಯನ್ನು ಶುರು ಮಾಡಲು ಸಿದ್ಧವಾಗಿದೆ" ಎಂದು ಹೇಳಿದಾಗ. ವೈ. ಎಸ್. ರಾಜಶೇಖರ್ ರೆಡ್ಡಿ ಮತ್ತು ತೆಲುಗು ದೇಶಂ ಪಕ್ಷದೊಂದಿಗೆ ವೈಷಮ್ಯ ಕಟ್ಟಿಕೊಂಡು ಆಂಧ್ರದಲ್ಲಿ ಅವಸಾನವಾಗಲಿದ್ದ ಕಾಂಗ್ರೆಸ್, ಕನಿಷ್ಠ ತೆಲಂಗಾಣಾದಲ್ಲಾದರೂ ಭದ್ರವಾಗಿ ಕೂರಬೇಕು ಎನ್ನುವ ಲೆಕ್ಕಾಚಾರದಲ್ಲಿ ಈ ಕೆಲಸಕ್ಕೆ ಮುಂದಾಯಿತು. ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ತನ್ನದೇ ನಾಯಕರ ವೈರ ಕಟ್ಟಿಕೊಳ್ಳಬೇಕಾಯಿತು. ಇನ್ನು ಪಿ. ಚಿದಂಬರಂ ಅವರ ಭರವಸೆ ಈಡೇರದೇ ಇರುವುದನ್ನು ನೋಡಿ ತೆಲಂಗಾಣಾ ಪರ ನಾಯಕರೂ ಗೊಂದಲಗೊಂಡರು. ಆಂಧ್ರದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಕೆಲವು ಶಾಸಕರು- ಸಂಸದರ ವಿರೋಧ, ಜೊತೆಗೆ ತೆಲಂಗಾಣಾ ನಾಯಕರ ಅಸಮಾಧಾನವೆಲ್ಲವೂ ಒಟ್ಟಾಗಿ ಕಾಂಗ್ರೆಸ್ ಆಂಧ್ರದಿಂದಲೇ ಕಾಣೆಯಾಗುವ ಪರಿಸ್ಥಿತಿ ಉದ್ಭವವಾಯಿತು. ಈ ಕಾರಣಕ್ಕಾಗಿಯೇ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸುವ ಅವಸರ ಮಾಡಲಾಯಿತು.
ವ್ಯಂಗ್ಯವೆಂದರೆ, ಕೆಲವು ಸಂಸದರು ಮಸೂದೆಯ ಮಂಡನೆಯ ದಿನ ಗದ್ದಲವೆಬ್ಬಿಸುವ ಸಂಚು ರೂಪಿಸಿದ್ದಾರೆ ಎನ್ನುವ ಬಹಳಷ್ಟು ಎಚ್ಚರಿಕೆಗಳು ಸಿಕ್ಕಿದ್ದವು. ಗುಪ್ತಚರ ದಳಗಳು ಸಂಸತ್ತಿನಲ್ಲಿ ಹಿಂಸಾಚಾರ ನಡೆಯಬಹುದು ಎಂದು ಆಗಲೇ ಎಚ್ಚರಿಸಿದ್ದವು. ಆದರೆ ಅಧಿಕಾರ ವರ್ಗ ಮಾಡಿದ್ದೇನು? ಸುಮ್ಮನೇ ನಿಂತು ಎಲ್ಲವನ್ನೂ ನೋಡಿತು. ಕಾಂಗ್ರೆಸ್‌ನ "ದೈಹಿಕ ಬಲಾಢ್ಯ" ಸಂಸದರಿಗೆ ಆಂಧ್ರದ "ಗದ್ದಲವೆಬ್ಬಿಸಿದ" ನಾಯಕರೊಂದಿಗೆ ಸೆಣಸಲು, ಸದನದ ಬಾವಿಗೆ ಧುಮುಕಲು ಅನುವು ಮಾಡಿಕೊಡಲಾಯಿತು. ಆ ನಂತರದ ಹೊಡೆದಾಟದಲ್ಲಿ ಕೆಲವು ಸಚಿವರೂ ಜೊತೆಯಾದರು. ಕೊನೆಯಲ್ಲಿ, ಈ ಅಪರಾಧಮಯವಾದ ಪ್ರಜಾಪ್ರಭುತ್ವಕ್ಕೆ ಗೌರವ ಸೂಚಿಸಲೋ ಎನ್ನುವಂತೆ, ನಾಯಕನೊಬ್ಬ ಪೆಪ್ಪರ್ ಸ್ಪ್ರೇ(ಮೆಣಸಿನ ಸ್ಪ್ರೇ) ಮತ್ತು ಚಾಕು ಹಿಡಿದುಕೊಂಡು ಕುಣಿದಾಡಿದ. ರಾಷ್ಟ್ರದ ಜನತೆ ಈ ಹೀನ ಕೃತ್ಯವನ್ನು ಖಂಡಿಸಿದರು. ಆದರೆ ಗದ್ದಲ ಮಾಡಿದವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೀರೋಗಳಾದರು. ರಾಜಕಾರಣಿಗಳಿಗೆ ಬೇಕಾಗಿರುವುದೂ ಇದೇ ಅಲ್ಲವೇ?
1975ರಲ್ಲಿ ಇಂದಿರಾಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗಲೇ ಭಾರತದ ಪ್ರಜಾಪ್ರಭುತ್ವಕ್ಕೆ ಗಂಭೀರ ಗಾಯಗಳಾದವು. ನಂತರದ ಕೆಲವೊಂದು ಬೆಳವಣಿಗೆಗಳಿಂದ ಗಾಯ ವಾಸಿಯಾಗುವ ಲಕ್ಷಣಗಳು ಗೋಚರಿಸಿದವಾದರೂ, ತುಸು ಕಾಲದಲ್ಲಿಯೇ ಗಾಯ ಮತ್ತೆ ದೊಡ್ಡದಾಯಿತು. ಆಗಲೇ ಗೊತ್ತಾಗಿದ್ದು, ಭಾರತದ ರಾಜಕೀಯ ಸಂಸ್ಕೃತಿಯ ಡಿಎನ್‌ಎ ಇಂದಿರಾ ಆಡಳಿತಾವಧಿಯಲ್ಲೇ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆಯೆಂದು. ಈ ಕಾರಣಕ್ಕಾಗಿಯೇ ಅನೇಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣವನ್ನು ಮುಕ್ತವಾಗಿ ಅಪ್ಪಿಕೊಳ್ಳಲಾಯಿತು. ಈಗ ನಮ್ಮೆದುರಿಗಿರುವುದು ಆತ್ಮವೇ ಇರದ ಪ್ರಜಾಪ್ರಭುತ್ವದ ದೇಹವಷ್ಟೆ. ನೀಚರೆಲ್ಲ 'ಜನರ ಚುನಾಯಿತ ಪ್ರತಿನಿಧಿಗಳಾದರು'. ತಮ್ಮ ಗುಣಕ್ಕೆ ತಕ್ಕಂತೆ ಇವರೆಲ್ಲರೂ ಜನರನ್ನು ವಂಚಿಸಿದರು. ತಮ್ಮ ತಾಯ್ನಾಡಿನ ಮೇಲೆ ಬೂಟುಕಾಲು ಊರಿ ಗಹಗಹಿಸಿದರು. ನಮ್ಮ ಸಂಸತ್ತು "ರಾಷ್ಟ್ರೀಯ ಅವಮಾನ"ವಾಗಿ ಬದಲಾಯಿತು.
ಈಗ ನಡೆದಿರುವ ಘಟನೆಯ ಸಂಪೂರ್ಣ ತಪ್ಪು ಕಾಂಗ್ರೆಸ್‌ನದ್ದು ಎಂದು ಬಿಜೆಪಿ ಹೇಳುತ್ತಿದೆ. ಎಲ್ಲಾ ತಪ್ಪೂ ಬಿಜೆಪಿಯದ್ದು ಎನ್ನುವುದು ಕಾಂಗ್ರೆಸ್ ವಾದ. ಆದರೆ ಅವಶ್ಯಕವಿರುವ ಕಠಿಣ ಹೆಜ್ಜೆಯನ್ನಿಡಲು ಯಾರೂ ಮುಂದಾಗುತ್ತಿಲ್ಲ. ಸದನದ ಬಾವಿಗೆ ನುಗ್ಗುವ ಸದಸ್ಯರನ್ನು ಅಧಿವೇಶನದಿಂದ ಹೊರಗೆ ಕಳುಹಿಸಬೇಕು. "ಸ್ವಯಂ ರಕ್ಷಣಾ" ಸಾಧನಗಳನ್ನು (ಉದಾ: ಪೆಪ್ಪರ್ ಸ್ಪ್ರೇ) ಬಳಸುವವರನ್ನೆಲ್ಲ ಚುನಾವಣೆಗೆ ಸ್ಪರ್ಧಿಸದಿರುವಂತೆ ಮಾಡಬೇಕು. ಇನ್ನು, ದಯವಿಟ್ಟೂ ಈ ಸಂಸದರಿಗೆ ವಿಮಾನನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ವಿಐಪಿ ಸೌಲಭ್ಯಗಳನ್ನು ಕೊಡುವುದನ್ನು ನಿಲ್ಲಿಸಿ-ಅವರು ವಿಮಾನದ ಕ್ಯಾಬಿನ್‌ನಲ್ಲಿ ಅಶ್ರುವಾಯು ಬಳಸಿದರೂ ಕೂಡ!!

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com