ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ಸಂಸದೀಯ ಜನತಾಂತ್ರಿಕ ವ್ಯವಸ್ಥೆಯ ಆಡಳಿತವೆಂದರೆ, ಪರಸ್ಪರ ವಿಚಾರ ವಿನಿಮಯ, ಚರ್ಚೆ, ಅಭಿಪ್ರಾಯಗಳ ಸಂಘರ್ಷದಿಂದ ರೂಪಗೊಳ್ಳುವ ನಿರ್ಧಾರಗಳಿಗೆ ಬದ್ಧವಾಗಿರುವುದೇ ಎನ್ನುವ ಸಾರ್ವಕಾಲಿಕ ಸತ್ಯವನ್ನು ಮತ್ತೆ ಮತ್ತೆ ಉಚ್ಚರಿಸಿದ್ದಾರೆ. ಅದನ್ನು ಎಲ್ಲರೂ ಮೆಚ್ಚಿದ್ದಾರೆ.
ಆದರೆ ಸಂಸತ್ತಿನ ಈಗಿನ ಅಧಿವೇಶನದಲ್ಲಿ ಕಾರ್ಯಕಲಾಪ ನಡೆದ ವೈಖರಿಯನ್ನು ಗಮನಿಸಿದರೆ, ಈಗಿನ ಯಾವ ನಿರ್ಧಾರವೂ ಸಂಸದೀಯ ಜನತಂತ್ರದ ವಿಧಿ-ವಿಧಾನಗಳಿಗೆ ಅನುಗುಣವಾದದ್ದಲ್ಲ ಎನಿಸಿದೆ. ಆದರೂ ಆ ಎಲ್ಲ ನಿರ್ಧಾರಗಳಿಗೂ ದೇಶ ಬದ್ಧವಾಗಿರಬೇಕು. ಇಡೀ ವ್ಯವಸ್ಥೆಯೇ ನಿಯಂತ್ರಣ ತಪ್ಪಿದಂತಿದೆ. ಇದಕ್ಕೆ ಆಳುವ ಕೂಟದಲ್ಲಿ, ಅಧಿಕಾರದಲ್ಲಿ ಮುಂದುವರಿಯುವುದನ್ನು ಬಿಟ್ಟು ಬೇರೆ ಯಾವ ವಿಚಾರದಲ್ಲೂ ಸಹ ಚಿಂತನೆಗೆ, ಸಂಯೋಜನೆಗೆ ಅವಕಾಶವೇ ಇಲ್ಲದಿರುವುದೇ ಕಾರಣ. ಕಾಂಗ್ರೆಸ್‌ಗೇ ಸರ್ವಾಧಿಕಾರ ಇದ್ದಂತಿದೆ. ಆದರೆ ಕಾಂಗ್ರೆಸ್ ಸಂಗಾತಿಗಳಿಗೆ ಸಮುದಾಯಗಳ, ಹಿತದ ಚಿಂತನೆ ಇಲ್ಲದಿರುವುದರಿಂದ ಅವರು ಎಲ್ಲದಕ್ಕೂ 'ಅಸ್ತು' ಎನ್ನುತ್ತಿರುವಂತಿದೆ. ಯಾವ ದೃಷ್ಟಿಯಿಂದ ನೋಡಿದರೂ, ಈಗಿನ ಆಳುವ ಕೂಟದಲ್ಲಿ ಹೊಂದಾಣಿಕೆಯೇ ಇಲ್ಲ. ಕಾಂಗ್ರೆಸ್ ಸಂಗಾತಿಗಳ ವಿಚಾರದಲ್ಲಿ ಕಾಂಗ್ರೆಸ್ಸಿಗೇ ನಂಬಿಕೆ ಇಲ್ಲ.
ಈ ಪರಿಸ್ಥಿತಿಯಲ್ಲಿ ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಬಿಟ್ಟರೆ, ಬೇರೆಯವರು ಮಾತನಾಡಲೂ ಹಿಂಜರಿಯುತ್ತಿದ್ದಾರೆ. ಡಿಎಂಕೆ ಆಳುವ ಕೂಟದಿಂದಿ ಹೊರಬಿದ್ದಿದೆ. ಆದರೆ ಸಂಸತ್ತಿನಲ್ಲಿ ಒಮ್ಮೆಯೂ ಕಾಂಗ್ರೆಸ್ ವಿರುದ್ಧ ಓಟು ಮಾಡಿಲ್ಲ, ಮಾತೂ ಆಡಿಲ್ಲ. ಸಂಸತ್ತಿನ ಕಾರ್ಯಕಲಾಪವನ್ನು ಈಗ ನಿಯಂತ್ರಿಸುತ್ತಿರುವವರು ಯಾರು? ಕೆಲವೇ ವ್ಯಕ್ತಿಗಳು ತಮಗೆ ಬೇಕಾದ ವಿಷಯಗಳ ಅಂಗೀಕಾರವಾಯಿತು ಎನಿಸಿಕೊಳ್ಳುತ್ತಿದ್ದಾರೆ.
ಉಳಿದವರ ಪಾಲಿಗೆ? ಸಭಾಧ್ಯಕ್ಷರ ಪೀಠದ ಎದುರಿಗಿರುವ ಧರಣಿ ಸ್ಥಾನವೇ ಕದನದ ಕ್ಷೇತ್ರ. ಅಲ್ಲೇ ಪೆಪ್ಪರ್ ಸ್ಪ್ರೇ (ಮೆಣಸಿನ ಪುಡಿಯನ್ನು ಉಗುಳುವ ಸಾಧನ) ಪ್ರಯೋಗವಾಗಿದ್ದು, ಸಂಸದರು ಕೈ ಕೈ ಮಿಲಾಯಿಸಿದ್ದು, ವಿದೇಯಕದ ಪ್ರತಿಗಳನ್ನು ಹರಿದು ಹಾಕಿದ್ದು. ಈ ಕೋಳಿ ಜಗಳಕ್ಕೆ ಯಾವ ನಿಯಮವೂ ಇದ್ದಂತಿಲ್ಲ. ಈ ಅವಾಂತರದಲ್ಲಿ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ತಮ್ಮ ರೈಲ್ವೆ ಬಜೆಟ್ ಭಾಷಣವನ್ನು ಓದಲಿಕ್ಕೇ ಆಗಲಿಲ್ಲ. ವಿತ್ತಮಂತ್ರಿ ಚಿದಂಬರಮ್ ಹಟ ಹಿಡಿದು, ಯಾರಿಗಾದರೂ ಕೇಳಿಸಲಿ, ಬಿಡಲಿ, ತಮ್ಮ ಲೇಖಾನುದಾನದ ಭಾಷಣವನ್ನು ಓದಿ ಮುಗಿಸಿದ ಶಾಸ್ತ್ರ ಮಾಡಿದರು. ಅವರ ಭಾಷಣ ಒಂದು ಕಡೆ, ಸೀಮಾಂಧ್ರ - ತೆಲಂಗಾಣ ಘೋಷಣೆಗಳು ಇನ್ನೊಂದು ಕಡೆ ಏಕಕಾಲದಲ್ಲಿ ನಡೆದು ಗೊಂದಲವನ್ನು ನಿರ್ಮಿಸಿದವು . ಚರ್ಚೆಯೇ ಇಲ್ಲದೇ ಒಪ್ಪಿಗೆ.
ಇದನ್ನೆಲ್ಲ ತಡೆಗಟ್ಟುವುದು ಅಸಾಧ್ಯವಾಗಿತ್ತೇ? ಸಂಸದೀಯ ಸದನಗಳ ಕಾರ್ಯಕಲಾಪದ ನಿಯಂತ್ರಣ ನಿಯಮಗಳೇನಾದವು? ಅದರಲ್ಲಿ ಸದಸ್ಯರನ್ನು ಹೊರಗೆ ಹಾಕುವ, ಸಸ್ಪೆಂಡ್ ಮಾಡುವ ನಿಯಮಗಳೆಲ್ಲವೂ ಇವೆ. ಅವನ್ನು ಜಾರಿಗೆ ತರಲು ಇಷ್ಟವಿಲ್ಲದೇ ಹೋದರೆ ಆ ನಿಯಮಗಳು ಪುಸ್ತಕದಲ್ಲಿ ಯಾಕಿರಬೇಕು? ಸಂಸದೀಯ ನಡವಳಿಕೆಗೆ (ಹಾಗೆಂದು ಹೇಳಬಹುದಾದರೆ) ಶಿಖರಪ್ರಾಯದಂತೆ ನಡೆದಿತ್ತು, ಆಂಧ್ರ ಪ್ರದೇಶದ ವಿಭಜನೆ, ತೆಲಂಗಾಣದ ಉದಯದ ವಿಧೇಯಕದ ಅಂಗೀಕಾರದ ಬಯಲು ನಾಟಕ. ಲೋಕಸಭೆಯಲ್ಲಿನ ಸದನದ ನಾಯಕ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಏನು ಹೇಳಿದರೋ ಯಾರಿಗೂ ಗೊತ್ತಾಗಲಿಲ್ಲ.
ತೆರೆಮರೆಯ ಹಿಂದೆ ಕಾಂಗ್ರೆಸ್ - ಬಿಜೆಪಿಗಳು ಆಂಧ್ರ ವಿಭಜನೆಯ ವಿಧೇಯಕಕ್ಕೆ ಬದ್ಧವಾಗಿ, ಅದು ಅಂಗೀಕಾರವಾಯಿತೆಂದು ಪ್ರಕಟಿಸುವುದಕ್ಕೆ ಬದ್ಧವಾಗಿದ್ದವು . ಅದು ಆಯಿತು. ಬಿಜೆಪಿಯ ನಾಯಕರು ಹಿಂದೆ ಆಡಿದ್ದ "ಚರ್ಚೆಯ ನಂತರವೇ ಅಂಗೀಕಾರ" ವಚನಕ್ಕೆ ಬೆಲೆಯೇ ಇರಲಿಲ್ಲ.
ಇದ್ದಕ್ಕಿದ್ದಂತೆ ಸದನದ ನೇರ ಟಿವಿ ಪ್ರಸಾರ ಬಂದ್ ಆಯಿತು. ಅದಕ್ಕೆ ತಾಂತ್ರಿಕ ಕಾರಣಗಳಿದ್ದವಂತೆ. ಯಾವ ಎಳೆಯ ಮಗುವೂ ಆ ಕುಂಟು ನೆಪವನ್ನು ನಂಬುವುದಿಲ್ಲ. ಇಲ್ಲಿ ವಾಗ್ವಾದಗಳಿಗೆ ಇಂಟರ್‌ವಲ್ ಇರಲೇ ಇಲ್ಲ. ಭಾರತದ ಒಂದು ದೊಡ್ಡ ರಾಜ್ಯದ ವಿಭಜನೆಯ ಪ್ರಕ್ರಿಯೆ ಆರಂಭವಾದ ರೀತಿ ಇದು. ಇದೇನಾ ಜನತಂತ್ರ?
ಉತ್ತಮ ಅಭ್ಯರ್ಥಿಗಳೆಲ್ಲಿ?: ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೂ ಅನೇಕ ಕಡೆಗಳಲ್ಲಿ ಯೋಗ್ಯ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಅದನ್ನು ಮರೆಮಾಚುವುದು ಪಕ್ಷಗಳಿಗೆ ಸದ್ಯಕ್ಕೆ ಸಾಧ್ಯವಾಗಿಲ್ಲ.
ಸುಮಾರು ಒಂಬತ್ತು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನು ಗಳಿಸಿ ಅಧಿಕಾರದ ಸೂತ್ರಗಳನ್ನು ಹಿಡಿದಿರುವ ಕಾಂಗ್ರೆಸ್, ಈಗಷ್ಟೇ ಮಂತ್ರಿಗಳಾಗಿರುವ ಆಂಜನೇಯ, ಪ್ರಕಾಶ ಹುಕ್ಕೇರಿ, ಕೃಷ್ಣ ಬೈರೇಗೌಡ ಅವರಂತಹ ಮಂತ್ರಿಗಳನ್ನು ಕಣಕ್ಕಿಳಿಸುವ ಮಾತು ಕೇಳಿ ಬರುವಂತಹ ಪರಿಸ್ಥಿತಿ ಉದ್ಭವವಾಗಿದೆಯೇ? ಅವರಲ್ಲಿ ಯಾರು ಸ್ಪರ್ಧಿಸುತ್ತಾರೋ, ಯಾರು ಸ್ಪರ್ಧಿಸುವುದಿಲ್ಲವೋ ಎನ್ನುವುದು ಮುಖ್ಯವಲ್ಲ. ಆದರೆ ರಾಜ್ಯದಲ್ಲಿ ಪ್ರಬಲವಾಗಿರುವ ಕಾಂಗ್ರೆಸ್ಸಿಗೆ, ಈ ಚಿಂತನೆಯಾದರೂ ಮೂಡಿದ್ದೇಕೆ? ಅದಕ್ಕಿಂತಲೂ ಹೆಚ್ಚಾಗಿ, ಹಿರಿಯ ಸಮಾಜವಾದಿ, ದೀರ್ಘಕಾಲದ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ಆರಿಸಿ, ಕೆಲವೇ ತಿಂಗಳ ಅನಂತರ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಲು ಸಲಹೆ ಮಾಡುವಂತಹ ಪ್ರಮೇಯವೇನಿತ್ತು? 82ನೆಯ ವಯಸ್ಸಿನಲ್ಲಿ ಅವರನ್ನು ಈ ರೀತಿ ಹಿಂಸಿಸಬಾರದಾಗಿತ್ತು ಪಾಪ.
ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ, ಸೊರಬದಲ್ಲಿ ಬಂಗಾರಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಅವರನ್ನು ಹೂಡಿ, ಚುನಾವಣೆಯಲ್ಲಿ ಸೋತು ಪಕ್ಷಕ್ಕೆ, ತಿಮ್ಮಪ್ಪ ಅವರಿಗೆ ಅಪಮಾನ ಮಾಡಿದ್ದಾಯಿತು. ಅನಂತರ ಬಂಗಾರಪ್ಪ ಮುಖ್ಯಮಂತ್ರಿಯಾದಾಗ, ಕಾಗೋಡು ತಿಮ್ಮಪ್ಪ ಗೃಹಮಂಡಳಿಯ ಅಧ್ಯಕ್ಷರಾಗಿದ್ದು ಬೇರೆ ಮಾತು.
ಕಾಂಗ್ರೆಸ್ಸಿಗೆ ಈಗಲೂ ಅನೇಕ ಕಡೆಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇರುವುದು ನಿಜ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಅಲ್ಪ ಸಂಖ್ಯಾತ, ಹಿಂದುಳಿದ, ದಲಿತ ಸಮಾಜಗಳ ಏಳಿಗೆಗೆ ಬದ್ಧತೆಯನ್ನು ಪ್ರಕಟಿಸಿ, ಅದಕ್ಕೆ ತಕ್ಕಂತೆಯೇ ಬಜೆಟ್ ಮಂಡಿಸಿದ್ದರೂ, ರಾಜ್ಯದ ಅನೇಕ ಕಡೆಗಳಲ್ಲಿ ಆ ವರ್ಗಗಳ ಜನರೇ ಕಾಂಗ್ರೆಸ್ಸಿಗೆ ಮತ ನೀಡುವ ವಿಚಾರದಲ್ಲಿ ಉತ್ಸುಕರಾಗಿದ್ದಂತೆ ಇಲ್ಲ ಎನ್ನುವ ವರದಿಗಳೂ ಪ್ರಕಟವಾಗಿವೆ.
ಮಲೆನಾಡು, ಹೈದರಾಬಾದ್ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಪ್ರದೇಶಗಳಲ್ಲಿ ಈ ಭಾವನೆ ಮೂಡಿದೆ ಎನ್ನುವ ಅನಧಿಕೃತ ಅನಿಸಿಕೆಯ ಆಧಾರದ ವರದಿಗಳು ಕಾಣಿಸಿಕೊಂಡಿವೆ. ಜಾತ್ಯತೀತ ಜನತಾದಳದ ಭದ್ರ ಕೋಟೆಗಳನ್ನು ಲೋಕಸಭೆಯ ಉಪಚುನಾವಣೆಗಳ ಸಮಯದಲ್ಲಿ ಭೇದಿಸಿದ್ದರೂ ಅದೇನೂ ಶಾಶ್ವತವಾದ ವಿಜಯವಲ್ಲ. ಹಾಸನದಲ್ಲಂತೂ ದೇವೇಗೌಡರ ವಿರುದ್ಧ ಸ್ಪರ್ಧಿಸಬಲ್ಲ ಸಮರ್ಥ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆಯನ್ನು, ಒಬ್ಬ ವ್ಯಕ್ತಿಯ ಸ್ಪರ್ಧೆ ಅಲ್ಲ ಅದು ಒಂದು ರಾಜಕೀಯ ಸ್ಪರ್ಧೆ ಎನ್ನುವ ಭಾವನೆ ಕಾಂಗ್ರೆಸ್ಸಿನಲ್ಲಿ ಇನ್ನೂ ಮೂಡಿಲ್ಲ. ಕಾಂಗ್ರೆಸ್ ಈಗ ಅಂತಹ ಚಿಂತನೆಯಿಂದ ಬಹುದೂರ ಸಾಗಿದೆ.
ಹೊಸ ಪ್ರಯೋಗ ಸ್ಥಗಿತ: ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ, ಸ್ಥಳೀಯ ಕಾರ್ಯಕರ್ತರಲ್ಲೇ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಟ್ಟು ಗೆದ್ದವರನ್ನೇ ಆರಿಸುವ ನೂತನ ಜನತಾಂತ್ರಿಕ ವಿಧಾನದ ಪ್ರಯೋಗದ ಮಾತು ಕೇಳಿ ಬಂದಿತ್ತು. ವಾಸ್ತವದಲ್ಲಿ ಇದೇನೂ ಹೊಸ ವಿಚಾರವಲ್ಲ. 1977ರ ಸಂಪೂರ್ಣ ಕ್ರಾಂತಿಯ ದಿನಗಳಲ್ಲೇ ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರು ಇಂತಹ ಸಲಹೆಯನ್ನು ನೀಡಿದ್ದರು. ಬಿಹಾರದಲ್ಲಿ ಅದರ ಪ್ರಯೋಗವೂ ಆಗಿತ್ತು. ಆದರೆ ಅಲ್ಲಿ ಹೆಚ್ಚು ಕಡಿಮೆ ಜನತಾ ಪಾರ್ಟಿಯ ಎಲ್ಲ ಉಮೇದುವಾರರೂ ಗೆದ್ದಿದ್ದರಿಂದ ಹೊಸ ಪ್ರಯೋಗದ ನಿಜವಾದ ಪರಿಣಾಮ ಬೆಳಕಿಗೆ ಬರಲೇ ಇಲ್ಲ. ಈಗ ಕರ್ನಾಟಕದಲ್ಲಿ ಈ ಪ್ರಯೋಗಕ್ಕೆ ಆರಿಸಲಾಗಿದ್ದ ಮಂಗಳೂರು, ಸೆಂಟ್ರಲ್ ಬೆಂಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಟಿಕೆಟ್ ಕೇಳಿರುವವರಲ್ಲಿ 1971 ರಿಂದಲೂ ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕರಾಗಿಯೇ ಮುಂದುವರಿದಿರುವ ಬಿ. ಜನಾರ್ದನ ಪೂಜಾರಿ ಹಾಗೂ ಸಿ.ಕೆ. ಜಾಫರ್ ಷರೀಫ್ ಅವರೂ ಇರುವುದರಿಂದ, ಆ ಹಿರಿಯರನ್ನು ಪ್ರಯೋಗದಲ್ಲಿ ಸಿಲುಕಿಸಬಾರದು ಎನ್ನುವ ಸಲಹೆಯನ್ನು ವರಿಷ್ಠರು ಒಪ್ಪಿಕೊಂಡಿದ್ದಾರೆ. ಜನಾರ್ದನ ಪೂಜಾರಿ, ಜಾಫರ್ ಷರೀಫ್ ಅವರಿಗೆ ಟಿಕೆಟ್ ಸಿಗುವ - ಸಿಗದೇ ಇರುವ ವಿಚಾರ ಬೇರೆ. ಆದರೆ ಅವರ ಮರ್ಯಾದೆಯನ್ನು ಕಾಂಗ್ರೆಸ್ ಉಳಿಸಿದ್ದು ಸರಿಯಾದ ಕೆಲಸ.
ಸಂಯೋಜನೆ ಇಲ್ಲ: ಭಾರತೀಯ ಜನತಾ ಪಾರ್ಟಿಯಲ್ಲೂ ಅಭ್ಯರ್ಥಿಗಳ ಕೊರತೆ ಹಾಗೂ ಎರಡು ಗುಂಪುಗಳ ನಡುವೆ ಸಂಯೋಜನೆಯ ಅಭಾವ ಎದ್ದು ಕಂಡಿದೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದರು. ಅವರ ಹಿಂದೆ ಅಖಂಡ ವೀರಶೈವ ಜನಾಂಗದ ಬೆಂಬಲವಿತ್ತು.
ಈಗ ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲ. ಪಕ್ಷಕ್ಕೆ ಮರಳಿ ಬಂದಿರುವ ಬಂಡಾಯದ ನಾಯಕ. ಯಡಿಯೂರಪ್ಪ ಅವರನ್ನೇನೋ ಬಿಜೆಪಿ ನಾಯಕರು, ಮನಸ್ಸಿರಲಿ, ಇಲ್ಲದೇ ಇರಲಿ ಒಪ್ಪಿಕೊಂಡಿದ್ದೂ ಆಗಿದೆ. ಅವರನ್ನೇ ಶಿವಮೊಗ್ಗದಲ್ಲಿ ಅಭ್ಯರ್ಥಿಯನ್ನಾಗಿ ಆರಿಸುವ ನಿರ್ಧಾರವೂ ಆಗಿದೆ. ಆದರೆ, ಆ ನಿರ್ಧಾರದ ಹಿಂದೆ ಯಡಿಯೂರಪ್ಪ ಅವರ ಮೇಲಿನ ವಿಶ್ವಾಸವಿದೆಯೋ, ಅಥವಾ ಬೇರೆ ಏನಾದರೂ ಕೆಟ್ಟ ರಾಜಕೀಯ ಚಿಂತನೆ ಇದೆಯೋ ಎನ್ನುವ ಅನುಮಾನಗಳೂ ಇವೆ. ಯಡಿಯೂರಪ್ಪ ಅವರ ಜತೆಯಲ್ಲಿದ್ದ ಅನೇಕರು ಸ್ಥಳೀಯವಾಗಿ ಈಗಲೂ ಬಿಜೆಪಿಯಲ್ಲಿ ಮಿಲನವಾಗಿದ್ದಾರೆನ್ನುವ ಸ್ಥಿತಿ ಇಲ್ಲ. ಅವರಲ್ಲಿ ಯಾರ್ಯಾರು ಯಾವ ಕಡೆ ಹೋಗ್ತಾರೋ ಗೊತ್ತಿಲ್ಲ. ಯಡಿಯೂರಪ್ಪ ಅವರೇನೋ ಬಿಜೆಪಿಯ ಅಭ್ಯರ್ಥಿಗಳೆಲ್ಲ ತಮ್ಮವರೇ ಎಂದು ಹೇಳಿಕೊಂಡಿದ್ದಾರೆ. ಅದು ಕೇಳುವುದಕ್ಕೆ ಚಂದ. ನಂಬುವುದಕ್ಕಲ್ಲ.
ಕಿಡಿಗೇಡಿತನ: ಜಾತ್ಯತೀತ ಜನತಾದಳದ ನಾಯಕ ದೇವೇಗೌಡರಿಗೆ, ರಾಜ್ಯದಲ್ಲಿ ಕನಿಷ್ಠಪಕ್ಷ ಆರು ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕೆನ್ನುವ ಛಲ ಮೂಡಿದೆ ಎಂದು ವರದಿ. ಅದಕ್ಕೆ ಅವರು ಹಾಸನ, ಮಂಡ್ಯ, ರಾಮನಗರ ಜತೆ ಬಳ್ಳಾರಿಯನ್ನು ಸೇರಿಸಿಕೊಳ್ಳಲೇಬೇಕು. ಶ್ರೀರಾಮುಲು ಅವರು ಸಿದ್ಧವಾಗಿದ್ದಾರಾ?
-ಸತ್ಯ
anisikeprabha@gmail.com