'ಅಲ್ಪ'ರಾಗುವುದಕ್ಕೆ ಏಕಿಂಥ ಓಟ?

ವಿಮಾನಯಾನಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಸೌಲಭ್ಯಗಳು ಹೆಚ್ಚಾಗಲಿವೆ ಎನ್ನುವ ಸುದ್ದಿ ಕೇಳಿ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಈಗ ಈ ದೇಶ, ವಿಶೇಷಾಧಿಕಾರ ಹೊಂದಿದ ಜನರ ವಿವಿಧ ಗುಂಪುಗಳ ಸಮುಚ್ಛಯವಾಗಿಯಷ್ಟೇ ಉಳಿದಿದೆ.
ಇಡೀ ದೇಶದ, ಇಡೀ ದೇಶವಾಸಿಗಳ, ಇಡೀ ಸಮಾಜದ ಬಗ್ಗೆ ಮಾತನಾಡುವವರೇ ಇಲ್ಲ. ಈಗೇನಿದ್ದರೂ ಕೇವಲ ವಿಶೇಷ ಸವಲತ್ತುಗಳು, ವಿಶೇಷ ಪ್ಯಾಕೇಜ್, ವಿಶೇಷ ಭದ್ರತೆ, ವಿಶೇಷ ಯೋಜನೆಯನ್ನು ಪಡೆಯುವ ಕೆಲವು ವರ್ಗಗಳ ಸಮೂಹವಾಗಿ ಬದಲಾಗಿಬಿಟ್ಟಿದೆ ಭಾರತ. ಅಲ್ಪಸಂಖ್ಯಾತರೆಂಬ ಹೆಸರಲ್ಲಿ ವಿಶೇಷ ಸೌಲಭ್ಯಗಳಿವೆ! ಈಗ ಜೈನ ಸಮಾಜವೂ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರಂತೆ ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ವರ್ಗವೆಂದು ಘೋಷಿತವಾಗಿದೆ. ಅಲ್ಪಸಂಖ್ಯಾತರಾಗುವಲ್ಲಿ ಲಾಭವಿರಲಿಲ್ಲ ಎಂದರೆ, ಅದಕ್ಕಾಗಿ ಇಷ್ಟೆಲ್ಲಾ ಹೊಡೆದಾಟಗಳು ಆಗುತ್ತಲೇ ಇರಲಿಲ್ಲ. ನನ್ನ ಗೆಳೆಯನೊಬ್ಬ ಮುಂಬೈನಿಂದ ಫೋನ್ ಮಾಡಿ, ಬ್ರಾಹ್ಮಣರನ್ನೂ ಅಹಿಂದುಗಳೆಂದು ಘೋಷಿಸಲು ನಾವು ಧ್ವನಿಯೇರಿಸಬೇಕು ಎಂದು ಹೇಳಿದ! ರಾಮಕೃಷ್ಣ ಮಿಷನ್ ಮತ್ತು ಆರ್ಯ ಸಮಾಜಗಳು ಆದಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ, ತಮ್ಮನ್ನು ಅಲ್ಪಸಂಖ್ಯಾತ ವರ್ಗಗಳು ಎಂದು ಘೋಷಿಸಬೇಕೆಂದು ಬೇಡಿಕೆಯಿಟ್ಟಿದ್ದವು. ಎರಡೂ ಅಹವಾಲುಗಳು ವಜಾ ಆದವು ಎನ್ನುವುದು ಬೇರೇ ಮಾತು. ಆದರೆ ಹಿಂದು ಧರ್ಮದ ಮಹೋನ್ನತ ಸಂಸ್ಥೆಗಳೆಲ್ಲ ತಮ್ಮನ್ನು ಅಹಿಂದು ಎಂದು ಘೋಷಿಸಿಕೊಳ್ಳುವಲ್ಲಿ ಉತ್ಸಾಹತೋರಿದರೆ, ಇನ್ನು ಉಳಿಯುವುದೇನು?
ಒಟ್ಟಿನಲ್ಲಿ ಏನಾದರೂ ಕರೆಯಿರಿ, ಆದರೆ ಹಿಂದು ಎಂದು ಮಾತ್ರ ಕರೆಯದಿರಿ. ಇದರಲ್ಲೇ ಲಾಭವಿದೆ!
ಬ್ರಾಹ್ಮಣರಿರಲಿ ಅಥವಾ ಅಬ್ರಾಹ್ಮಣರಿರಲಿ, ಅವರೂ ಕೂಡ, ಹೇಗೆ ರಾಮಕೃಷ್ಣ ಮಿಷನ್ ತನ್ನನ್ನು ತಾನು 'ರಾಮಕೃಷ್ಣವಾದಿ' ಎಂದು ಕರೆದುಕೊಂಡಿತೋ, ಆರ್ಯ ಸಮಾಜ ತನ್ನನ್ನು ತಾನು 'ದಯಾನಂದವಾದಿ' ಎಂದು ಕರೆದುಕೊಂಡಿತೋ, ಅದೇ ರೀತಿಯಲ್ಲಿ ತಾವೂ ಅಹಿಂದುಗಳೆಂದು ಘೋಷಿಸಿಕೊಳ್ಳಬಹುದು. ಪಾಕಿಸ್ತಾನ- ಬಾಂಗ್ಲಾದೇಶಗಳಲ್ಲಷ್ಟೇ ಅಲ್ಲ, ಒಂದೊಮ್ಮೆ ಹಿಂದುಸ್ತಾನ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮ ಈ ರಾಷ್ಟ್ರದಲ್ಲೂ ಈಗ ಹಿಂದುಗಳು ಅಪಾಯವೆದುರಿಸುತ್ತಿದ್ದಾರೆ. ಬಹುಶಃ ಈ ವಿಷಯ ಯಾರ ಗಮನಕ್ಕೂ ಬಂದಿಲ್ಲವೆನಿಸುತ್ತದೆ. ಇಲ್ಲದಿದ್ದರೆ, ಸೆಕ್ಯುಲರ್ ನೀತಿಯ ನಮ್ಮ ಬುದ್ಧಿಜೀವಿಗಳು ಹಿಂದುಸ್ತಾನ ಎನ್ನುವ ಪದವನ್ನೂ ನಿಷೇಧಿಸಿಬಿಡುತ್ತಿದ್ದರೇನೋ? ಒಂದು ಜಾತಿ ಅಥವಾ ಧರ್ಮದ ಹೆಸರನ್ನು ಈ ನೆಲಕ್ಕೆ ಇಡುವುದೆಂದರೇನು? ಶಾಂತಂ ಪಾಪಂ!!
ಈ ಅಹಿಂದುತ್ವದ ಬೇರುಗಳು ಎಲ್ಲಿವೆ ಎನ್ನುವುದನ್ನು ನಾನೂ ಹುಡುಕಲು ಶುರುಮಾಡಬೇಕು. ಒಂದು ವೇಳೆ ಏನೂ ಸಿಗದಿದ್ದರೆ, ನನ್ನನ್ನು ನಾನು ಅಹಿಂದು ಆತ್ಮವಾದಿ ಎಂದು ಘೋಷಿಸಿಕೊಂಡುಬಿಡಬಹುದು. ಇನ್ನು ಹಿಂದು ಧರ್ಮದಲ್ಲಿ ಯಾರು ಬೇಕಾದರೂ ತಮ್ಮನ್ನು ತಾವು 'ದೇವರು' ಎಂದು ಕರೆದುಕೊಳ್ಳಬಹುದು. ಜನ ನಂಬಿದರೆ, ಕೂಡಲೇ ನಮ್ಮದೇ ಹೆಸರಿನ ಮೇಲೆ ಒಂದು ಪಂಥವನ್ನು ಅಥವಾ ಧರ್ಮವನ್ನು ಹುಟ್ಟುಹಾಕಬಹುದು. ಹಿಂದುಗಳ್ಯಾರೂ ಇದರ ಬಗ್ಗೆ ಚಿಂತಿಸುವುದೂ ಇಲ್ಲ, ಇದನ್ನು ತಡೆಯುವ ಪ್ರಯತ್ನವನ್ನೂ ಮಾಡುವುದಿಲ್ಲ ಎನ್ನುವುದಂತೂ ಗೊತ್ತಿದ್ದೇ ಇದೆ. ಕೆಲವು ಸಮಯದ ನಂತರ ನಾವು ಅಹಿಂದು ಅಲ್ಪಸಂಖ್ಯಾತರಾಗಿಬಿಟ್ಟರಾಯಿತು. ಆಮೇಲೆ ಕೇಳೋದೇನಿದೆ? ಕೇಂದ್ರೀಯ ಮತ್ತು ಪ್ರಾಂತೀಯ ಸಹಾಯ, ಪಾರ್ಟಿಗಳಿಂದ ಔತಣಕೂಟಗಳಿಗೆ ಆಹ್ವಾನ, ಅಲ್ಪಸಂಖ್ಯಾತ ಆಯೋಗ... ಅದೂ ಇದೂ...ಅಬ್ಬಬ್ಬಾ ಎಷ್ಟೊಂದು ಸೌಲಭ್ಯಗಳು!!
ಹಿಂದುಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವವರು, ತಮ್ಮ ಧರ್ಮದ ಮತ್ತು ದೇಶದ ರಕ್ಷಣೆ ಮಾಡಲು ಕೇವಲ ಅಸಮರ್ಥರಾಗಿರುವುದಷ್ಟೇ ಅಲ್ಲ, ಹಿಂದು ಧರ್ಮದ ವಿರುದ್ಧ ಮಾತನಾಡುವುದೇ ರಾಜಕೀಯ ಪ್ರಗತಿಗೆಹಾದಿ ಎಂದು ಭಾವಿಸುದ್ದಾರೆ. ಇಂಥವರನ್ನೆಲ್ಲ ಕಟ್ಟಿಕೊಂಡು ಹಿಂದು ಧರ್ಮವನ್ನು ಉಳಿಸಲು ಸಾಧ್ಯವೇ? ಇದಕ್ಕಿಂತ ಒಳ್ಳೆಯದು, ಹಿಂದು ಧರ್ಮವನ್ನೇ ಅಳಿಸಿಹಾಕಿಬಿಡುವುದು. ಆಗ ದೇಶದ ವಾತಾವರಣ ನಿಸ್ಸಂಶಯವಾಗಿಯೂ ಬದಲಾಗುತ್ತದೆ. ಅಳಿದುಳಿದ ಹಿಂದುಗಳ ಮೇಲೆ ಅತ್ಯಾಚಾರವೆಸಗಿದರೂ, ಕೇಳುವವರೇ ಇರುವುದಿಲ್ಲ. ಹೇ ದೇವನೆ... ಹೇಗಾದರೂ ಮಾಡಿ ಶಿವ-ಪಾರ್ವತಿ, ರಾಮ ಮತ್ತು ಕೃಷ್ಣರೆಲ್ಲ ಯಾವುದಾದರೂ ಸ್ಥಾನೀಯ ಜನಜಾತಿಯ ಅಥವಾ ಹರಪ್ಪಾ- ದ್ರಾವಿಡ ಪಂಥದ ದೇವರೆಂದು ಘೊಷಣೆಯಾಗುವಂತೆ ಮಾಡಿಬಿಡು. ಆಗ ಕ್ಷಣಾರ್ಧದಲ್ಲೇ ಹಿಂದು ಧರ್ಮ ನೆಲಕಚ್ಚಿ ಧೂಳು ತಿನ್ನುತ್ತದೆ. ಆಗ ಮಾತ್ರ ದೇಶದಲ್ಲಿ ಸತ್ಯದ ಮಾರ್ಗವಾದ ಸೆಕ್ಯುಲರಿಸಂನ ಸೂರ್ಯ ಉದಯಿಸಲು ಸಾಧ್ಯ!
ಈ ರಾಜಕೀಯದಲ್ಲೀಗ ಹಣ, ವೋಟ್ ಮತ್ತು ಜಾತಿಯದ್ದೇ ಮೇಲಾಟವಿದೆ. ಉಳಿದದ್ದೆಲ್ಲವೂ ನಾಟಕ ಶುರುವಾಗುವುದಕ್ಕಿಂತ ಮುಂಚೆ ರಂಗಮಂಚದ ಮೇಲೆ ಬಂದು ನಾಟ್ಯ ಮಾಡಿಹೋಗುವ ಹುಡುಗಿಯಷ್ಟೇ ಅರ್ಥಹೀನವಾದುವು. ಅಸಲಿ ಪ್ರದರ್ಶನವೇನಿದ್ದರೂ ಪರದೆ ಸರಿದ ಮೇಲೆಯೇ ಅಲ್ಲವೆ? ಅದೂ ಚುನಾವಣೆಯೆಂಬ ಪರದೆ ಸರಿದಾಗ!
ನಾವೆಲ್ಲಿದ್ದೆವು? ಹಾಂ..ವಿಮಾನಯಾನಗಳಲ್ಲಿ ತಮಗೆ ಹೆಚ್ಚಿನ ಸೌಲಭ್ಯಗಳು ಬೇಕು ಎಂದು ಸಂಸದರು ಮತ್ತು ಶಾಸಕರು ಬೇಡಿಕೆಯಿಟ್ಟಿರುವ ಸುದ್ದಿಯಲ್ಲಿ! ಅವರ ಬೇಡಿಕೆ ನ್ಯಾಯಸಮ್ಮತವಾದದ್ದೇ.ಪಾಪ ಬಡತನ ಮತ್ತು ದಾರಿದ್ರ್ಯದಿಂದ ಕಂಗೆಟ್ಟುಹೋಗಿರುವ ಅವರಿಗೆ ಇಷ್ಟಾದರೂ ಸೌಲಭ್ಯಗಳು ಬೇಕೇ ಬೇಕಲ್ಲವೇ? ಇಂದಿಗೂ ಜನತೆ ಸಾವಿರಾರು ಕೋಟಿ ರುಪಾಯಿಗಳ ಒಡೆಯರನ್ನೇ ಸಂಸದರಾಗಿ ನೋಡಲು ಬಯಸುತ್ತಾರೆ. ಏಕೆಂದರೆ ಈ ಕೊಬ್ಬಿದ ಶ್ರೀಮಂತ ಸಂಸದರಿಗೆ ಅಪೌಷ್ಠಿಕತೆ ಮತ್ತು ಬಡತನದ ಬಗ್ಗೆ ಗಟ್ಟಿಯಾಗಿ ಮಾತನಾಡಲು ಶಕ್ತಿಯಿರುತ್ತದೆ. ದರಿದ್ರ ಬಡಿದ, ಹಸಿವಿನಿಂದ ಕಂಗಾಲಾದ ವ್ಯಕ್ತಿಯನ್ನು ಸಂಸತ್ತಿಗೆ ಕಳುಹಿಸುವುದರಲ್ಲಿ ಅರ್ಥವೇನಿದೆ? ತನ್ನ ಹೊಟ್ಟೆಯನ್ನೇ ತುಂಬಿಸಿಕೊಳ್ಳಲಾರದವನು, ದೇಶದ ಹೊಟ್ಟೆಯನ್ನು ಹೇಗೆ ತುಂಬಿಸುತ್ತಾನಲ್ಲವೇ? ಸಂಸತ್ತಿನಲ್ಲಿ ಜೋರಾಗಿ ಆರ್ಭಟಿಸುವ ಶಕ್ತಿಯಾದರೂ ಆ ಬಡಪಾಯಿಗೆ ಹೇಗೆ ಬರಬೇಕು? ಅವನು ಇಡೀ ದಿನ ಸಂಸತ್ತಿನ ಸೆಂಟ್ರಲ್ ಹಾಲ್ ಕ್ಯಾಂಟೀನಿನಲ್ಲಿ ಸಬ್ಸಿಡಿಯಲ್ಲಿ ಸಿಗುವ ಚಹ ಮತ್ತು ಊಟಕ್ಕಾಗಿ ಕಾದು ಕುಳಿತುಕೊಳ್ಳುತ್ತಾನಷ್ಟೆ.
ಸೆಂಟ್ರಲ್ ಹಾಲ್ ಅನ್ನು ದೇಶದ ಕನ್ನಡಿ ಎಂದೇ ಕರೆಯಬಹುದು. ನಾನಂತೂ ಅಲ್ಲಿ ಎಂತೆಂಥಾ ದೊಡ್ಡ ಸರ್ಗಳನ್ನು ನೋಡಿದ್ದೇನೆಂದರೆ, ಅವರು 2 ರುಪಾಯಿ ಚಹ ಮತ್ತು 4 ರುಪಾಯಿ ಬ್ರೆಡ್ ತಿಂದು, ಮಾಣಿಗೆ 500 ರುಪಾಯಿ ನೋಟ್ ಕೊಟ್ಟು ಹೋಗಿಬಿಡುತ್ತಾರೆ. ಅಲ್ಲಿನ ಮಾಣಿಗಳಿಗೆ ಈ ರೀತಿಯ ಹಣ ಗಳಿಕೆಯೇ ಅಭ್ಯಾಸವಾಗಿಬಿಟ್ಟಿದೆ. ಹಾಗಾಗೇ, ಹತ್ತು ರುಪಾಯಿ ಕೊಟ್ಟು ಚಿಲ್ಲರೆಗಾಗಿ ಕಾಯುವ ಮುಖಗಳನ್ನು ಅವರು ಕಣ್ಣೆತ್ತಿಯೂ ನೋಡುವುದಿಲ್ಲ. ಅದೇ ದೊಡ್ಡ ಸರ್ ಬಂದರೆ ಸಾಕು, ಟವಲ್ ಎತ್ತಿಕೊಂಡು ಎಲ್ಲರೂ ಅವನತ್ತ ಓಡಿಹೋಗಿ ಕೇಳುತ್ತಾರೆ- "ಸರ್, ಏನು ಕೊಡಲಿ?"
ಇಂದು ದೇಶ ಕೂಡ ಇದೇ ರೀತಿಯಲ್ಲಿ ನಡೆಯುತ್ತಿದೆ. ಸರ್ಗೆ ಏನು ಬೇಕು ಎನ್ನುವುದು ಸರ್ನಿಂದ ಲಾಭ ಪಡೆದ ಜನರಿಗಷ್ಟೇ ಗೊತ್ತಿದೆ. ವಿವಿಧ ರೀತಿಯ ವೋಟ್ ಬ್ಯಾಂಕ್ಗಳನ್ನು ಇದೇ ರೀತಿಯಲ್ಲಿ ಸೃಷ್ಟಿಮಾಡಲಾಗುತ್ತದೆ. ಏನಾದರೂ ಕೊಟ್ಟರೆ ತಾನೆ, ಏನಾದರೂ ಸಿಗುವುದು? ಇನ್ನು ಹಣ ಮತ್ತು ಜಾತಿಯಾಟ ಜೊತೆಯಾದರೆ ಕೇಳುವುದೇನಿದೆ?
ಸಂಸದರು ಮತ್ತು ಶಾಸಕರನ್ನೂ ಅಲ್ಪಸಂಖ್ಯಾತರೆಂದು ಘೋಷಿಸಿಬಿಡುವುದು ಒಳ್ಳೆಯದು. ಆಗ ಸವಲತ್ತುಗಳನ್ನು ಹೆಚ್ಚಿಸುವುದು ಸರಳವಾಗುತ್ತದೆ. ಸಂಸದರಿಗೆ ಸವಲತ್ತುಗಳನ್ನು ಹೆಚ್ಚಿಸುವುದನ್ನು ಖಂಡಿಸಿದ್ದು ಸೀತಾರಾಮ್ ಯೇಚೂರಿ ಮಾತ್ರ. ಇನ್ನೂ ಕೆಲವರು ವಿರೋಧಿಸಿರಬಹುದಾದರೂ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಜ ಹೇಳಬೇಕೆಂದರೆ ಇಂಥ ಸವಲತ್ತುಗಳಿಂದ ಸೀತಾರಾಮ್ ಯೇಚೂರಿ ಯಾವಾಗಲೂ ವಂಚಿತರೇ. ಪಾಪ! ಬಹುಶಃ ಅವರು ತಮ್ಮಂತೆಯೇ ಎಲ್ಲರನ್ನೂ ಬದಲಾಯಿಸಲು ವ್ಯರ್ಥ ಪ್ರಯತ್ನ ಪಡುತ್ತಿದ್ದಾರೇನೋ?
ಸಂಸದರಿಗೆ ಸಿಗುತ್ತಿರುವ ಸವಲತ್ತುಗಳನ್ನು ನಿಲ್ಲಿಸಬೇಕು ಎಂದು ಯಾರಾದರೂ ಧ್ವನಿಯೆತ್ತಿ ನೋಡಲಿ. ಆಗ ದೊಡ್ಡ ಭೂಕಂಪವೇ ಆಗಿಬಿಡುತ್ತದೆ. ಇತ್ತೀಚೆಗಂತೂ ಎಲ್ಲ ಸಂಬಂಧಗಳೂ ಸಂಸದ ನಿಧಿಯ ಮೇಲೆಯೇ ನಿಂತಿವೆ. ಎಸ್ಎಂಎಸ್ಗಳ ಮೂಲಕ ಅನುದಾನಕ್ಕಾಗಿ ಬೇಡಿಕೆಗಳು ಬರುತ್ತವೆ. ಯಾರಾದರೂ ಸತ್ತರೆ, ಯಾರಾದರೂ ಕಷ್ಟದಲ್ಲಿದ್ದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೇ ಇಲ್ಲ. ಆ ಬಗ್ಗೆ ಮಾತನಾಡುವುದೂ ಅಪಾಯಕಾರಿ. ಮುಖ್ಯವಾಹಿನಿಯಲ್ಲಿ ಬದುಕುಳಿಯಬೇಕಾದರೆ, ಸೆಂಟ್ರಲ್ ಹಾಲ್ನ ಅಲ್ಪಸಂಖ್ಯಾತವಾದವನ್ನು ಸ್ವೀಕಾರ ಮಾಡಲೇಬೇಕು!
ತರುಣ್ ವಿಜಯ್
tarunvijay2@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


