ಬಾತ್ರಾ ಎಂಬ ಹೋರಾಟದ ಹಿರಿಜೀವ

ಅಮೆರಿಕದ ಲೇಖಕಿ ವೆಂಡಿ ಡೊನಿಗರ್ ಬರೆದ ದಿ ಹಿಂದೂಸ್- ಆ್ಯನ್ ಆಲ್ಟರ್ನೇಟಿವ್ ಹಿಸ್ಟರಿ ಪುಸ್ತಕದಲ್ಲಿ ಒಂದು ವರ್ಗದ ಬಗ್ಗೆ ಆಕ್ಷೇಪಾರ್ಹ ಅಂಶಗಳಿವೆ ಎಂದು ನ್ಯಾಯಾಲಯದ ಮೂಲಕ ಮನವಿ ಸಲ್ಲಿಸಿ, ಪೆಂಗ್ವಿನ್ ಪ್ರಕಾಶನ ಆ ಪುಸ್ತಕವನ್ನು ಹಿಂಪಡೆಯುವಂತೆ ಮಾಡಿ ಈಗ ಡೊನಿಗರ್ರಷ್ಟೇ ಚರ್ಚೆಯ(ವಿವಾದದ) ವಿಷಯವಾಗಿರುವ ಹೆಸರು ದೀನಾನಾಥ್ ಬಾತ್ರಾ ಅವರದ್ದು. ನಿಜಕ್ಕೂ ನೋಡಿದರೆ ಬಾತ್ರಾ ಸಾಹಸವನ್ನು ಮೆಚ್ಚಲೇಬೇಕು. ಯಾವುದೇ ಗಲಾಟೆ ಇಲ್ಲದೆ, ಆಕ್ಷೇಪಾರ್ಹ ಅಂಶಗಳು ಇದೆ ಎಂದು ಅನ್ನಿಸಿದ್ದರಿಂದಲೇ ದೆಹಲಿಯ ಕೋರ್ಟ್ಗೆ ಮನವಿ ಸಲ್ಲಿಸಿ ಪುಸ್ತಕ ಹಿಂಪಡೆಯಬೇಕು ಎಂದು ಅರಿಕೆ ಮಾಡಿಕೊಂಡಿದ್ದರು. ಕೆಲವು ಮಾಧ್ಯಮಗಳಲ್ಲಿ ಬಾತ್ರಾ ಅವರು ಮಾಡಿದ್ದು ಬಲುದೊಡ್ಡ ಅಪರಾಧವೆಂಬಂತೆಯೇ ಬಿಂಬಿಸಿ ಅವರನ್ನು 'ಬುಕ್ ಪೊಲೀಸ್' ಎಂಬಲ್ಲಿಯವರೆಗೂ ಟೀಕೆ ಮಾಡಲಾಗುತ್ತಿದೆ. ಮಾಧ್ಯಮಗಳ ಈ ಆರ್ಭಟಕ್ಕೆ ಕಾರಣವೂ ಇಲ್ಲವೆಂದಲ್ಲ. ಏಕೆಂದರೆ ಬಾತ್ರಾ ಒಂದು ಪುಸ್ತಕ ಅಥವಾ ಆಲೋಚನೆಯ ವಿರುದ್ಧ ಹೋರಾಟ ನಡೆಸಿದ್ದು ಇದೇ ಮೊದಲೇನಲ್ಲ!
30 ವರ್ಷಗಳವರೆಗೆ ಪಂಜಾಬ್ನ ಬಸ್ಸಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಶಿಕ್ಷಕರಾಗಿ, ನಂತರ ಹರ್ಯಾಣದ ಕುರುಕ್ಷೇತ್ರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ದುಡಿದು ನಿವೃತ್ತಿ ಪಡೆದ ಅವರು, ಸದ್ಯಕ್ಕೆ ಶಿಕ್ಷಾ ಬಚಾವೋ ಆಂದೋಲನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಭಾರತೀಯ ಶಿಕ್ಷಣದಲ್ಲಿ 'ಭಾರತೀಯತೆ' ಇರಬೇಕೇ ಹೊರತು, ಪಾಶ್ಚಿಮಾತ್ಯರ ವಿಚಾರಧಾರೆಯಲ್ಲ ಎನ್ನುವ ಬಾತ್ರಾ ಮೊದಲಿನಿಂದಲೂ ಭಾರತೀಯ ಪಠ್ಯಕ್ರಮದ ಅತೀ ಆಧುನೀಕರಣ ಮತ್ತು ತಿರುಚಿದ ಇತಿಹಾಸವನ್ನು ಖಂಡಿಸುತ್ತಲೇ ಬಂದವರು.
ಅವರು ಮೊದಲು ಸುದ್ದಿ ಮಾಡಿದ್ದು 2001ರಲ್ಲಿ. "ಭಾರತೀಯತೆಯ ಶತ್ರುಗಳು: ಮಾರ್ಕ್ಸ್, ಮೆಕಾಲೆ ಮತ್ತು ಮದರಸಾದ ಮಕ್ಕಳು" ಎಂಬ ಪುಸ್ತಕವನ್ನು ಸಂಪಾದಿಸಿ ಅದರಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ರಚಿಸಿದ ಸಿಬಿಎಸ್ಸಿ ಪಠ್ಯಗಳಲ್ಲಿನ ಸುಮಾರು 75 ತಿರುಚಿದ ಸಂಗತಿಗಳನ್ನು ಗುರುತಿಸಿದ್ದರು. ಆ ಸಮಯದಲ್ಲಿ ಆರ್ಎಸ್ಎಸ್ನ ಶೈಕ್ಷಣಿಕ ಘಟಕವಾದ 'ವಿದ್ಯಾಭಾರತಿ'ಯ ಮುಖ್ಯಕಾರ್ಯದರ್ಶಿಯಾಗಿದ್ದ ಬಾತ್ರಾ, ಅಂದಿನ ಮಾನವಸಂಪನ್ಮೂಲಾಭಿವೃದ್ಧಿ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿಯವರ ಸಲಹೆಗಾರರೂ ಆಗಿದ್ದರು. ಬಾತ್ರಾರ ಸಲಹೆಯ ಮೇರೆಗೆ ಆ ಪಠ್ಯಪುಸ್ತಕಗಳಿಂದ ಆಕ್ಷೇಪಾರ್ಹ ಅಂಶಗಳನ್ನು ಜೋಶಿ ತೆಗೆದುಹಾಕಲು ಆಜ್ಞಾಪಿಸಿದರು. ಇನ್ನು ಎ.ಕೆ. ರಾಮಾನುಜನ್ ಅವರ 300 ರಾಮಾಯಣ ಎಂಬ ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದಾಗಲೂ, 2008ರಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು ಬಾತ್ರಾ. ಇಷ್ಟೇ ಅಲ್ಲದೆ ಲೈಂಗಿಕ ಶಿಕ್ಷಣವನ್ನು ಶಾಲಾ ಆವರಣದಲ್ಲಿ ಬಿಟ್ಟುಕೊಳ್ಳಬಾರದು ಎನ್ನುವ ಅವರ ಒತ್ತಡಕ್ಕೆ ಮಣಿದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ರಾಜ್ಯದ 9 ಮತ್ತು 10ನೇ ತರಗತಿಯ ಪಠ್ಯಕ್ರಮದಿಂದ ಲೈಂಗಿಕ ಶಿಕ್ಷಣವನ್ನು ಹಿಂಪಡೆಯಬೇಕಾಯಿತು!
ತಮ್ಮ ಪುಸ್ತಕ ನಿಷೇಧದಿಂದ ಭಾರತದಲ್ಲಿ ವಾಕ್ಸ್ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎನ್ನುವುದು ಅಮೆರಿಕದ ಲೇಖಕಿ ವೆಂಡಿ ಡೊನಿಗರ್ ವಾದ. ಆದರೆ ವೆಂಡಿಯ ಇದೊಂದೇ ಪುಸ್ತಕವಲ್ಲ, ಇದೇ ರೀತಿಯಲ್ಲಿ ಹಿಂದು ಧರ್ಮವನ್ನು ಹೀಯಾಳಿಸುವ ಅನೇಕ ಪುಸ್ತಕಗಳು ನಿಷೇಧಕ್ಕೆ ಅರ್ಹವಾಗಿವೆ ಎನ್ನುವುದು ದೀನಾನಾಥ್ರ ಪ್ರತಿವಾದ. ಅದರಲ್ಲಿ 'ಆನ್ ಹಿಂದುಯಿಸಂ' ಎನ್ನುವ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಸದ್ಯದಲ್ಲೇ ಕೋರ್ಟ್ಗೆ ಹೋಗಲಿದ್ದಾರಂತೆ.
ಇನ್ನು ಎನ್ಸಿಆರ್ಟಿ ಸಲಹಾ ಸಮಿತಿಯ ಯೋಗೇಂದ್ರ ಯಾದವ್(ಆಪ್ ನಾಯಕ) ವಿರುದ್ಧವೂ ಅವರು ಹರಿಹಾಯುತ್ತಾ- "ಪಠ್ಯ ಪುಸ್ತಕ ಸಮಿತಿಗಳಲ್ಲಿ ಸೇರಿಕೊಂಡಿರುವ ಇಂಥವರು ತಮ್ಮ ಮಾರ್ಕ್ಸಿಸ್ಟ್ ವಿಷವನ್ನು ಭಾರತೀಯ ಮಕ್ಕಳಿಗೆ ಉಣಬಡಿಸಲು ಪ್ರಯತ್ನಿಸುತ್ತಿದ್ದಾರೆ. ಆ ತಂಡ ರಚಿಸಿರುವ ಹೊಸ ಪಠ್ಯವೂ ವಿದ್ಯಾರ್ಥಿಗಳ ಮಧ್ಯೆ ಒಡಕು ಮೂಡಿಸುವಂಥ ಅಂಶಗಳಿಂದಲೇ ತುಂಬಿದೆ, ಹಾಗಾಗಿ ಅದರ ವಿರುದ್ಧವೂ ಕಾನೂನಿನ ಮೂಲಕ ಹೋರಾಡುತ್ತೇನೆ" ಎನ್ನುತ್ತಾರೆ ಈ 84 ವರ್ಷದ ಅಜ್ಜ!
ತಮ್ಮ ಈ ವಯಸ್ಸಿನಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಸಾಧನೆ ಮಾಡುತ್ತಿರುವ, ಆ ನಿಟ್ಟಿನಲ್ಲಿ ಏನೆಲ್ಲ ಶ್ರಮವಹಿಸುತ್ತಿರುವ ಇಂಥವರೇ ಹಿಂದುತ್ವದ ನಿಜರಕ್ಷಕರು. ಹಿಂದುತ್ವ ಒಪ್ಪದವರೂ ಈ ಹಿರಿಜೀವದ ಸ್ಪಿರಿಟ್ ಒಪ್ಪಿಯಾರು!
- ಸದಾಶಿವ. ಕೆ., ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


