ಅಂಕಣಗಳು

ಎಚ್ಚರಿಕೆ: ನಾಲಿಗೆಗೆ ಎಲುಬಿಲ್ಲ

Published On :

ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ನಪುಂಸಕ ಅಥವಾ ಷಂಡ ಎಂದು ಟೀಕಿಸಿರುವುದು ನಮ್ಮ ಸಾರ್ಜಜನಿಕ ಜೀವನದ ಮಟ್ಟ ಪಾತಾಳಕ್ಕೆ ಇಳಿದಿರುವುದಕ್ಕೆ ಸಾಕ್ಷಿ. ಆ ಪದ ಪ್ರಯೋಗಕ್ಕೆ ಸಾರ್ವಜನಿಕ ಖಂಡನೆ ಪ್ರಕಟವಾದ ಅನಂತರವೂ ಪದಗಳನ್ನು ಸಮರ್ಥಿಸಿಕೊಂಡಿದ್ದು, ಅವರ ಅಹಂಕಾರದ ಪರಮಾವಧಿ.
ನಿಜ. ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ "ಇಂಪೊಟೆಂಟ್‌" ಪದಕ್ಕೆ ಹಲವು ಅರ್ಥಗಳಿವೆ. ಅದು ಇಂಗ್ಲಿಷ್ ಪಂಡಿತರ ಮಾತಾಯಿತು. ಆದರೆ ಭಾರತೀಯ ಸನ್ನಿವೇಶದಲ್ಲಿ ಆ ಪದದ ಬಳಕೆಯಾಗುವುದು ಷಂಡತನವನ್ನು ಸೂಚಿಸುವುದಕ್ಕೇ. ಆ ಪದವನ್ನು ಬಳಸಿದ ಸಲ್ಮಾನ್ ಖುರ್ಷಿದ್ ಅವರಿಗೆ ಆಕ್ಸ್‌ಫರ್ಡ್ ಇಂಗ್ಲಿಷಿನ ಪಾಂಡಿತ್ಯ ಇರಬಹುದು. ಆದರೆ ಇಲ್ಲಿ ಅವರ ಪದಗಳನ್ನು ಕೇಳುವವರಿಗೆ ಇಂಗ್ಲಿಷ್ ವ್ಯಾಕರಣ ಪ್ರಭೇದಗಳ ಪರಿಚಯ ಕಡಿಮೆ. ಆದ್ದರಿಂದ ಸಾರ್ವಜನಿಕವಾಗಿ ಬಳಸುವ ಭಾಷೆಯ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕೆನ್ನುವುದು, ದೀರ್ಘಕಾಲ ಉನ್ನತ ರಾಜಕೀಯ ಹುದ್ದೆಗಳಲ್ಲಿ ಕೆಲಸ ಮಾಡಿದವರಿಗೆ ಗೊತ್ತಿಲ್ಲದೇ ಇಲ್ಲ. ಆದರೂ ಅವರು ಆ ಪದವನ್ನು ಬಳಸಿದ್ದು, ನರೇಂದ್ರ ಮೋದಿ ಅವರನ್ನು ಹೀಯಾಳಿಸುವ ಉದ್ದೇಶದಿಂದಲೇ.
"ಇಂಪೊಟೆಂಟ್‌" ಪದಬಳಕೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲಗಾಂಧಿ ಅವರೂ ಒಪ್ಪಿಲ್ಲ. ರಾಹುಲಗಾಂಧಿ ಅವರಷ್ಟೇ ಯಾಕೆ ಸಾರ್ವಜನಿಕ ಜೀವನದಲ್ಲಿನ ಮಾನ-ಮರ್ಯಾದೆಯನ್ನು ಗೌರವಿಸುವವರು ಯಾರೂ ಒಪ್ಪುವುದಿಲ್ಲ.
ನಿಜ. ಸಲ್ಮಾನ್ ಖುರ್ಷಿದ್ ಅಂತಹವರಿಗೆ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಕಂಡರೆ ಆಗುವುದಿಲ್ಲ. ಆ ವಿಚಾರ ಅವರಿಗೇ ಬಿಟ್ಟದ್ದು. ಆದರೆ ಆ ದ್ವೇಷವನ್ನು ಸಾರ್ವಜನಿಕವಾಗಿ ಈ ರೀತಿಯಲ್ಲಿ ಪ್ರದರ್ಶಿಸುವುದು ಯಾರಿಗೂ ಮರ್ಯಾದೆ ತರುವ ವಿಚಾರವಲ್ಲ. ಈ ವಿಚಾರದಲ್ಲೇ ಒಂದು ಟಿ.ವಿ. ಕಾರ್ಯಕ್ರಮದಲ್ಲಿನ ಚರ್ಚೆಯಲ್ಲಿ 2002ರ ಗುಜರಾತ್‌ನ ದೊಂಬಿಯನ್ನು ತಡೆಗಟ್ಟುವುದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಂದ ಆಗಲಿಲ್ಲ. ಆ ದೃಷ್ಟಿಯಿಂದ, ಅವರ ವೈಫಲ್ಯವನ್ನು ಕುರಿತು ಬಳಸಿದ ಪದ ನಪುಂಸಕತೆ. ಅಂತಹ ಪ್ರಯೋಗ  ಜಾರಿಯಲ್ಲಿದೆ ಎನ್ನುವ ವಿವರಣೆಯನ್ನು ನೀಡಿದ್ದರು. ಆ ಸಮಯದಲ್ಲಿ ಕಾರ್ಯಕ್ರಮವನ್ನು ನೆಡಸುತ್ತಿದ್ದವರು, ಹಾಗಿದ್ರೆ, 1984ರ ದೆಹಲಿಯ ಸಿಖ್ ವಿರೋಧಿ ಹಿಂಸಾಚಾರವನ್ನು ತಡೆಯುವುದು ಕಾಂಗ್ರೆಸ್ಸಿಗೂ ಆಗಿರಲಿಲ್ಲವಾದ್ದರಿಂದ ಆಗಿನ ಕಾಂಗ್ರೆಸ್ ನಾಯಕರನ್ನೂ ನಪುಂಸಕರೆಂದೇ ಕರೆಯಬಹುದೇ ಎಂದು ಪ್ರಶ್ನಿಸಿದಾಗ ಸಲ್ಮಾನ್ ಖುರ್ಷಿದ್, ಹಾಗೇನೂ ಇಲ್ಲ. ನಾನು ಪ್ರಸ್ತಾಪಿಸಿದ್ದು ಗುಜರಾತ್ ಹತ್ಯಾಕಾಂಡವನ್ನು ಮಾತ್ರ ಎಂದು ನುಣುಚಿಕೊಂಡರು.
ಸಲ್ಮಾನ್ ಖುರ್ಷಿದ್ ತಾವು ಬಳಸಿದ ಪದಕ್ಕೆ ಯಾವ ರೀತಿಯ ಸಮರ್ಥನೆ, ಸಮಾಧಾನವನ್ನು ನೀಡಿದರೂ,. ಅದನ್ನು ಪ್ರಜ್ಞಾವಂತ ಸಮುದಾಯಗಳು ಒಪ್ಪುವುದಿಲ್ಲ. ಇದು ನಿಸ್ಸಂದೇಹವಾಗಿ, ಅಹಂಕಾರದ ಹಾಗೂ ಅಸಹನೆಯ ವರ್ತನೆ. ಅದು ಖಂಡನೀಯ. ಈ ಪದಪ್ರಯೋಗಕ್ಕೆ ಕ್ಷಮೆಯಾಚಿಸಿ ಎಂದು ಖುರ್ಷಿದ್‌ರನ್ನು ಕೇಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಒಂದು ವೇಳೆ ಅವರು ಸಾರ್ವಜನಿಕರ ಒತ್ತಡಕ್ಕೆ ಮಣಿದು ಕ್ಷಮೆ ಕೇಳುವ ಪದಗಳನ್ನು ಉಚ್ಚರಿಸಿದರೂ ಅದೊಂದು ನಾಟಕ ಅಷ್ಟೇ. ಜನತಂತ್ರ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಸಂಯಮ ಇರಲೇಬೇಕು. ಇತರರ ವಿಚಾರದಲ್ಲಿ ಸಹನೆಯೂ ಇರಬೇಕು. ರಾಜಕೀಯ ಹಲ್ಲಾಹಲ್ಲಿಯಲ್ಲಿ ಅಂತರಂಗದಲ್ಲಿ ಸಜ್ಜನಿಕೆಯನ್ನು ಅಪೇಕ್ಷಿಸುವುದು ಕಷ್ಟ. ಆದರೆ ಕನಿಷ್ಠ ಬಹಿರಂಗವಾಗಿ ಸಹನೆಯನ್ನು ಪ್ರದರ್ಶಿಸುವ ಸಜ್ಜನಿಕೆ ಬೇಕು. ಆ ಮಾರ್ಗವನ್ನು ಬಿಟ್ಟರೆ, ನಮ್ಮ ಸಾರ್ವಜನಿಕ ಜೀವನ ಬೀದಿ ಜಗಳದಲ್ಲೇ ನಡೆಯಬೇಕಾದೀತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.