ಅಂಕಣಗಳು

ಹಳ್ಳಿಹಕ್ಕಿಯ ಮಲ್ಲಿಗೆಯ ಮಾತು...

ಹಳ್ಳಿಹಕ್ಕಿಯ ಮಲ್ಲಿಗೆಯ ಮಾತು...
Published On :

ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರ ಮಲ್ಲಿಗೆಯ ಮಾತು ಕೃತಿ ಇಂದು ಲೋಕಾಪರ್ಣೆಯಾಗಲಿದೆ. ಜೀವನದಲ್ಲಿ ಎದುರಾಗುವ ಅನೇಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿಯ ಆಯ್ದ ಭಾಗ ಇಲ್ಲಿದೆ...

ಧರ್ಮ: ಧರ್ಮ ದೃಷ್ಟಿಗೆ ಗೋಚರವಾಗುವುದಿಲ್ಲ, ಅದು ಹೃದಯಕ್ಕೆ ತಿಳಿಯುವಂಥದು. ಧರ್ಮ ಒಳ್ಳೆಯ ವಿಚಾರಗಳಲ್ಲಿದೆ, ಒಳ್ಳೆಯದೆಲ್ಲವೂ ಧರ್ಮವೇ. ಪ್ರಾಮಾಣಿಕನಾಗಿರುವುದು, ಕಾಯಕ ಮಾಡುವುದು, ಯಾರನ್ನೂ ನೋಯಿಸದಿರುವುದು ಇವೇ ಧರ್ಮ. ಜಗತ್ತಿನ ಎಲ್ಲ ಧರ್ಮಗಳ ಗುರಿಯೂ ಒಂದೇ. ಅದೇನೆಂದರೆ ಮನುಷ್ಯನನ್ನು ಉತ್ತಮನನ್ನಾಗಿಸುವುದು. ನಾವು ನಮ್ಮ ಸಣ್ಣತನದಿಂದ ಧರ್ಮವನ್ನು ಸಂಕುಚಿತ ಅರ್ಥಕ್ಕೆ ಇಳಿಸಿ, ಸಂಕೀರ್ಣಗೊಳಿಸಿದ್ದೇವೆ. ಧರ್ಮ ಪೂಜೆಗಳಲ್ಲಿಲ್ಲ, ಆಚಾರದಲ್ಲಿಲ್ಲ, ಸ್ನಾನ-ದಾನಗಳಲ್ಲಿಲ್ಲ, ಆಹಾರ ಪದ್ಧತಿಗಳಲ್ಲಿಲ್ಲ, ವ್ರತ-ನೇಮಗಳಲ್ಲಿಲ್ಲ, ಮಠಗಳಲ್ಲಿಲ್ಲ, ಆಶ್ರಮಗಳಲ್ಲಿಲ್ಲ. ಅದು ನಮ್ಮ ಸಂಕಲ್ಪದಲ್ಲೇ ಇದೆ.

ಭಕ್ತಿ: ಮನುಷ್ಯನ ಪ್ರೇಮ, ಶ್ರದ್ಧೆ, ಕೃತಜ್ಞತೆ, ಶರಣಾಗತಿಯ ಇನ್ನೊಂದು ಹೆಸರೇ ಭಕ್ತಿ. ನಾನು ಬಲ್ಲಂತೆ ಜನರು ಪರಮಾತ್ಮನನ್ನು ಭಕ್ತಿಯಿಂದ ಪೂಜಿಸುತ್ತಾರೆ, ಅಳುತ್ತಾರೆ, ನಗುತ್ತಾರೆ, ವರ್ಣಿಸುತ್ತಾರೆ, ಮಾತನಾಡುತ್ತಾರೆ, ಕುಣಿಯುತ್ತಾರೆ, ಹಾಡುತ್ತಾರೆ. ನಾನು ಮೌನದಲ್ಲಿ, ಏಕಾಂತದಲ್ಲಿ, ಪಶ್ಚಾತ್ತಾಪದಲ್ಲಿ ಭಕ್ತಿಭಾವವನ್ನು ಅನುಭವಿಸುತ್ತೇನೆ. ಹೀಗೆ ಭಕ್ತಿಯಮನದ ಅವಧಿ ಮುಗಿದಂತೆಲ್ಲ ಚಿತ್ತಶುದ್ಧಿಯಾದ ನವಚೈತನ್ಯ ನನ್ನನ್ನು ಸ್ಪರ್ಶಿಸುತ್ತದೆ, ಸಂತೈಸುತ್ತದೆ. ನಮಗೆ ಭಗವಂತನಿಂದ ಸಿಗುವ ಭರವಸೆ, ಸಾಂತ್ವನ ಭಕ್ತಿಯ ಬಳುವಳಿಯೇ ಸರಿ.

ಪೂಜೆ: ಪೂಜೆ ಎಂಬುದು ಭಗವಂತನನ್ನು ಅರಸುವ ಕ್ರಿಯೆ, ಪೂಜೆ ಧೂಪ, ದೀಪಗಳಿಂದ, ಹೂವು-ಹಣ್ಣುಗಳ ನಿವೇದನೆಯಿಂದ, ಗಂಟೆ-ಝಾಗಟೆ- ಶಂಖಗಳ ಸದ್ದಿನಿಂದ ಪೂರ್ಣವಾಗುವುದಿಲ್ಲ. ಆಡಂಬರ ಪೂಜೆಗೆ ಸಲ್ಲದು, ಯಾವಾಗ, ಎಲ್ಲಿ, ಹೇಗೇ ಇರಲಿ ದಿನದ ಕೆಲವು ಕ್ಷಣಗಳಾದರೂ ಏಕಾಗ್ರತೆಯಿಂದ ಭಗವಂತನನ್ನು ನೆನೆದು ಮೈಮರೆಯುವುದೇ ಪೂಜೆ. ತನ್ಮಯತೆಯೇ ಪೂಜೆ. ಹೃದಯದಿಂದ ಸಹಜವಾಗಿ ಚಿಮ್ಮುವ ಪ್ರಾರ್ಥನೆ, ಪೂರ್ಣ ಶರಣಾಗತಿಯೊಡನೆ ಮಾಡಿದ ಪೂಜೆ ಇವೆರಡೂ ಖಂಡಿತ ಪರಮಾತ್ಮನಿಗೆ ಮುಟ್ಟಿಯೇ ತೀರುತ್ತದೆ.

ಅನುಭವ: ಬದುಕಿನಲ್ಲಿ ಅನುಭವದ ಪಾತ್ರ ಹಿರಿದು. ಅದನ್ನು ವ್ಯಕ್ತಿ ತನ್ನ ಸ್ವಂತ ಪರಿಶ್ರಮದಿಂದಲೇ ಪಡೆಯಬೇಕು. ಹಾಗಿಲ್ಲದೆ ಬೇರೆ ಯಾವುದೂ ಸುಲಭ ದಾರಿಗಳಿಲ್ಲ. ಅನುಭವ ಅನುವಂಶಿಕವಲ್ಲ, ಅದನ್ನು ಯಾರಿಗೆ ಯಾರೂ ಕಾಣಿಕೆಯಾಗಿ ಕೊಡಲಾರರು. ಜ್ಞಾನವನ್ನು ಪುಸ್ತಕಗಳಿಂದ, ಇತರೆ ಮೂಲಗಳಿಂದ ಪಡೆದರೂ, ಅನುಭವ ಹಾಗಲ್ಲ, ಜೀವಿಸುವುದರ ಮೂಲಕ, ಏಳು-ಬೀಳುಗಳ ಮೂಲಕ ತಾನೇ ಪಡೆದು ತಲುಪಬೇಕಾದ ಗಮ್ಯವೇ ಅನುಭವದ ಪಾಠಶಾಲೆ. ಅದನ್ನೇ ಡಿ.ವಿ.ಜಿ.ಯವರು "ಗಿಣಿಯೋದು ಪುಸ್ತಕ ಜ್ಞಾನ-ನಿನ್ನನುಭವವೆ ನಿನಗೆ ಧರುಮದ ದೀಪ- ಮಂಕುತಿಮ್ಮ" ಎಂದಿದ್ದಾರೆ. ಅನುಭವಗಳ ಸರಮಾಲೆಯ ಕೊನೆಗೆ ಬರುವುದೇ ವಿವೇಕ.

ಬಾಲ್ಯ: ಪ್ರತಿ ಮಗುವಿಗೂ ದೇವರು ಕೊಡುವ ಕೊಡುಗೆಗಳಲ್ಲಿ ಅತಿ ಮೌಲ್ಯವುಳ್ಳದ್ದೆಂದರೆ ಬಾಲ್ಯ ಕಾಲದ ಸುಖ. ಆ ಅನಿರ್ಭಂಧತೆ, ಮುಕ್ತತೆ ಹಾಗೂ ಸ್ವಚ್ಛಂಧತೆ ಮುಂದೆ ಎಂದೂ ದೊರಕದು. ಕುತೂಹಲ ತಿಳಿಯುವ, ತಿಳಿಯುವ ಉತ್ಸಾಹ, ಸ್ನೇಹಪರತೆ, ಕರುಣೆ, ದಯೆಗಳು ಮೊಳಕೆಯೊಡೆಯುವ ಕಾಲವದು. ನನ್ನ ತಾಯ್ತಂದೆಯರು ಅಕ್ಷರವನ್ನೇ ತಿಳಿಯದವರಾಗಿದ್ದರು. ಆದರೆ ಜೀವನದ ಸೌಂದರ್ಯ ಘನತೆಗಳನ್ನು ತಿಳಿದಿದ್ದರು. ಹೀಗಾಗಿ ತಮ್ಮ ಸರಳತೆ ಹಾಗೂ ಅಮಾಯಕೆಯಿಂದ ನನ್ನ ಹಾಗೂ ನನ್ನ ಒಡಹುಟ್ಟಿದವರ ಬಾಲ್ಯವನ್ನು ಶ್ರೀಮಂತಗೊಳಿಸಿದರು.

ಆಡಳಿತ: ನನ್ನ ದೇಶ ಶ್ರೀಮಂತವಾಗಿದೆ. ಇಂದು ಅದು ತನ್ನ ಮನೆಗೆ ತಾನು ಯಜಮಾನನಾಗಿದೆ. ಈಗ ನಾವೆಲ್ಲ ನಮ್ಮ ಸ್ವಂತ ಮನೆಯಲ್ಲಿ ವಾಸಿಸುವಂತೆ ಹಾಯಾಗಿ ಇದ್ದೇವೆ. ಆದರೆ ನಮ್ಮ ಜವಾಬ್ದಾರಿಗಳ ಬೆಟ್ಟದಷ್ಟಿವೆ. ನಮ್ಮದು ಮಹಾಕುಟುಂಬ, ಇದರ ನಿರ್ವಹಣೆ, ಪೋಷಣೆ ಯಾವುದೇ ಸರ್ಕಾರಕ್ಕೂ ಕಷ್ಟವೇ ಸರಿ. ಜನತೆಯ ಆಶೋತ್ತರಗಳನ್ನು ಅರಿತು ಸ್ಪಂದಿಸುವುದು ಮಹಾಕಾರ್ಯವೇ ಸರಿ. ಆಡಳಿತದ ಚುಕ್ಕಾಣಿಗೆ ಎಲ್ಲಾ ಪಕ್ಷಗಳು ಗುದ್ದಾಡಿದರೂ ಆಡಳಿತದ ಮರ್ಮ ತಿಳಿದು ದೇಶವನ್ನು ಮುನ್ನಡೆಸುವುದು ಸುಲಭವಲ್ಲ. ಇಂದು ಆಡಳಿತದ ಹಪಾಹಪಿ ಕಾಣುತ್ತೇವೆ. ಆದರೆ ಆಡಳಿತದ ಗುಣಾತ್ಮಕತೆಯ ಬಗೆಗಿನ ಪ್ರೀತಿ ಕಾಳಜಿ ಮರೆಯಾಗುತ್ತಿದೆ. ಆಡಳಿತ ಕಲಿತು ಮಾಡಲಾಗುವುದಿಲ್ಲ. ಆಡಳಿತಗಾರರು ತಾವೇ ಆವಿರ್ಭವಿಸಬೇಕು. ಅದಕ್ಕೆ ಆಡಳಿತವೆಂದರೆ ಮುಗಿವಿಲ್ಲದ ಸಾಹಸ, "ಎಂಡ್‌ಲೆಸ್ ಅಡ್ವೆಂಚರ್‌" ಅಂತ ಹೇಳುವುದು.

ಕನಕಗೋಪುರ: ಉಡುಪಿಯ ಮಠಾಧೀಶರು ಕನಕಗೋಪುರವನ್ನು ಏಕಾಏಕಿ ಕೆಡವಿದ್ದಕ್ಕೆ ನನ್ನ ತೀವ್ರ ವಿರೋಧವಿತ್ತು. ದೇಶದ ಎಲ್ಲ ಕನಕನ ಅನುಯಾಯಿಗಳು ಈ ಘಟನೆಯಿಂದ ನೊಂದಿದ್ದರು. ಇಂತಹ ಸೂಕ್ಷ್ಮ ಸಮಯದಲ್ಲಿ ನಾನು ಧ್ವನಿ ಎತ್ತಿದ್ದನ್ನು ಕೆಲವರು ಸಹಿಸಲಿಲ್ಲ. ಈ ವಿಚಾರ ಮೇಲ್ವರ್ಗಗಳ ಬಗ್ಗೆ ಅಸಹನೆ ಉಳ್ಳ ಮನುಷ್ಯ. ಬ್ರಾಹ್ಮಣರ ಬಗ್ಗೆ, ಅವರ ಮಠಗಳ ಬಗ್ಗೆ ಮಠಾಧೀಶರ ಬಗ್ಗೆ ಹಗುರ ಮಾತುಗಳನ್ನು ಆಡುತ್ತಾರೆ ಎಂಬ ಆರೋಪಗಳ ಮಾಲೆ ನನ್ನ ಕೊರಳಿಗೆ ಬಂತು. ಬ್ರಾಹ್ಮಣ ಮಠಗಳ ಬಗ್ಗೆ ನನ್ನ ತಕರಾರೇನಿಲ್ಲ. ಬದಲಿಗೆ ನಾನೂ ಒಬ್ಬ ಶ್ರೀಕೃಷ್ಣನ ಭಕ್ತನಾಗಿ ಆಗಾಗ ಉಡುಪಿಗೆ ಹೋಗುವ ಕ್ರಮ ಇದೆ. ಅದು ನನ್ನ ಶ್ರದ್ಧಾಕೇಂದ್ರ ಕೂಡ. ನಾನು ನಾಸ್ತಿಕನಲ್ಲ. ನಾನು ವಿರೋಧ ಮಾಡಿದ್ದು ಅದಕ್ಕಲ್ಲ. ನಾಡಿನ ಜನತೆಯ ಅಭಿಪ್ರಾಯಗಳನ್ನು ತಿಳಿದು ಇತಿಹಾಸತಜ್ಞರು, ಪುರಾತತ್ವ ಇಲಾಖೆಯ ಅಭಿಪ್ರಾಯಪಡಯಬೇಕಿತ್ತು. ಇಂತಹ ಇತಿಹಾಸವುಳ್ಳ ಕನಕಗೋಪುರವನ್ನು ಏಕಾಏಕಿ ಕೆಡವಿ ಹಾಕಿದ್ದು ಸರಿಯಲ್ಲ ಎಂಬುದು ನನ್ನ ಸ್ಪಷ್ಟವಾದ ನಿಲುವಾಗಿತ್ತು. ಜನಾಭಿಪ್ರಾಯ ಪಡೆಯದೆ ಇಂತಹ ಹೆಜ್ಜೆ ಸರಿಯಾಗಿಲ್ಲ ಅಂತ ನಾನು ಹೇಳಿದ್ದಕ್ಕೆ ಅದು ಹೇಗೋ ಜಾತಿಯ ಬಣ್ಣ ಸಿಕ್ಕಿತು.
ಸಾಮಾಜಿಕ ಸಮಾನತೆಗಾಗಿ ನಾನು ಸಾಕಷ್ಟು ಹೋರಾಟಗಳನ್ನು ಮಾಡಿದ್ದು ನಿಜ. ಅದರರ್ಥ ಬೇರೆ ಜಾತಿಯವರನ್ನು ದ್ವೇಷಿಸುತ್ತೇನೆ ಎಂದಲ್ಲ. ತೀರ ಅಂತಹ ಕೆಳಮಟ್ಟಕ್ಕೆ ನಾನು ಎಂದಿಗೂ ಇಳಿಯಲಾರೆ. ಶೋಷಿತ ಸಮಾಜಗಳ ಬಗೆಗಿನ ನನ್ನ ಕಾಳಜಿ ಒಮ್ಮೊಮ್ಮೆ ತಪ್ಪು ಗ್ರಹಿಕೆಗಳಿಗೆ ಕಾರಣವಾಗಿದ್ದಿದೆ.

ದೇಶ: ನಮ್ಮನ್ನು ಹೊತ್ತು, ಪೊರೆದು ಸಲಹುತ್ತಿರುವ ದೇಶದ ಬಗೆಗೆ ಯಾವ ದೇಶವಾಸಿಗೂ ತಾನೆ ಅಭಿಮಾನವಿರದು? ಅಂತಹ ಕೋಟಿಗಟ್ಟಲೆ ಜನರಲ್ಲಿ ನಾನೂ ಒಬ್ಬ. ನಾನು ದೇಶವನ್ನು ಉತ್ಕಟವಾಗಿ ಪ್ರೀತಿಸುತ್ತೇನೆ. ನಮ್ಮ ದೇಶದಲ್ಲಿ ಹರಿಯುವ ನದಿಗಳನ್ನ, ಬೆಳೆದ ಮರಗಳನ್ನ, ಹುಲ್ಲಿನ ಪರಿಮಳವನ್ನ, ಘನವಾದ ಗಿರಿಗಳನ್ನ, ಕಡಲ ತೀರಗಳನ್ನ, ದಟ್ಟ ಅರಣ್ಯಗಳನ್ನ, ಪುಟ್ಟ ಹಕ್ಕಿಗಳನ್ನ ನಾನು ಪ್ರೀತಿಸುತ್ತೇನೆ. ನನ್ನ ದೇಶದ ಮಕ್ಕಳಿಗಾಗಿ. ವಿದ್ಯಾರ್ಥಿಗಳಿಗಾಗಿ. ನವತರುಣರಿಗಾಗಿ ನಾನು ಏನು ಮಾಡಬಹುದು? ನಾನು ಉಳಿಸಬೇಕೇ ನನ್ನ ಹೆಜ್ಜೆ ಗುರುತುಗಳನ್ನು? ನನ್ನ ವಿಚಾರಗಳನ್ನು ಹಂಚಿಕೊಳ್ಳಲೇ ನನ್ನ ದೇಶದ ಜನರೊಡನೆ? ಈ ದೇಶದ ಮಹಾನ್ ಚರಿತ್ರೆಯಲ್ಲಿ ನಾನೊಂದು ನೀರ ಬಿಂದು ಮಾತ್ರ.

ಪ್ರೇಮ: ಅದೊಂದು ಮಾಂತ್ರಿಕತೆ, ಸಮ್ಮೋಹಿನಿ, ಅಗ್ನಿದಿವ್ಯ ಹಾಗೂ ಹುಚ್ಚುತನ. ಜೀವನದಲ್ಲಿ ಪ್ರೀತಿಸುವ ಪ್ರೀತಿಸಲ್ಪಡುವ ಅನನ್ಯ ಅನುಭವ ನನಗೆ ದಕ್ಕಿತು. ಒಮ್ಮೆಯಾದರೂ ಒಲವು ತಾಗದೇ ಇರುವ ಮನುಷ್ಯನ ಬಗ್ಗೆ ನನಗೆ ಮರುಕ ಉಂಟಾಗುತ್ತದೆ. ನಿಜವಾದ ಪ್ರೇಮ ಮಾತ್ರ ನಿಮ್ಮನ್ನು ಉನ್ನತಿಗೇರಿಸುತ್ತದೆ. ಪ್ರೇಮ ಚಿಗುರದ ಎದೆಗೂಡಿನ ತೋಟ ಬರಿ ಕಾಡು. ಅದನ್ನೇ ಖಯ್ಯಾಂ ಹೃದ್ಯವಾಗಿ "ಒಲವಿನಿಂ ಬೇಯದವನೆದೆಯಿದೇಂ ಬರಿಪಾಳು" ಎಂದಿದ್ದಾನೆ. ನನ್ನ ಕಾಲೇಜು ದಿನಗಳಲ್ಲೇ ಒಲವು ನನ್ನನ್ನು ವರಿಸಿತು, ಆವರಿಸಿತು, ಮಾಗಿಸಿತು, ಪೀಡಿಸಿತು ಆದರೆ ಫಲಿಸಲಿಲ್ಲ. ಅದಕ್ಕೆಂದೇ ನನಗೆ ಪ್ರಪಂಚದ ಎಲ್ಲ ಪ್ರೇಮಿಗಳೆಂದರೆ, ಪ್ರೇಮವಂಚಿತರೆಂದರೆ ಸಹಾನುಭೂತಿ. ನಾವು ಸಮಾನ ದುಃಖಿಗಳು. ಪ್ರೇಮ ಜಗತ್ತನ್ನೇ ಮರೆಯುವಂತೆ ಮಾಡಬಲ್ಲುದು. ನಾನೂ ನನ್ನ ಬದುಕಲ್ಲಿ ಪ್ರೇಮಕ್ಕೆ ಶರಣಾದೆ.

ವಿವಾಹ: ವಿವಾಹವೆನ್ನುವುದು ಎಲ್ಲ ಜೀವಿಗಳ ಬಾಳಿನಲ್ಲಿ ಘಟಿಸುವ ನೈಸರ್ಗಿಕ ಅಂಶ. ಪತಿ-ಪತ್ನಿಯರ ನಡುವಿನ ಗಾಢ ಸ್ನೇಹ, ಜೀವನದುದ್ದಕ್ಕೂ ಸಾಹಚರ್ಯ. ಇದೇ ವಿವಾಹದ ಉದ್ದೇಶ. ಇಂತಹ ಸುಂದರ ಅನುಬಂಧ ಆರಂಭವಾಗುವ ಘಳಿಗೆಯನ್ನು ಆಡಂಬರದ ಪ್ರದರ್ಶನಕ್ಕೆ ಯಾಕೆ ಬಳಸಬೇಕೋ ಕಾಣೆ. ನಾನಂತೂ ಅದ್ಧೂರಿ ವಿವಾಹಗಳನ್ನು ವಿರೋಧಿಸುತ್ತೇನೆ. ನನ್ನ ಮಕ್ಕಳೆಲ್ಲರೂ ಸಾಮೂಹಿಕ ವಿವಾಹ, ಸರಳ  ವಿವಾಹಗಳನ್ನೇ ಆಯ್ಕೆ ಮಾಡಿಕೊಂಡು ದಾಂಪತ್ಯಕ್ಕೆ ಅಡಿಯಿಟ್ಟರು. ನನ್ನ ದೇಶದ ಜನ ತಮ್ಮ ಮಕ್ಕಳ ಮದುವೆಗಾಗಿ ಆಸ್ತಿ ಮಾರುತ್ತಾರೆ. ಸಾಲ ಮಾಡುತ್ತಾರೆ. ಸಮಾಜ ಅದ್ಧೂರಿ ವಿವಾಹಗಳನ್ನು ಪ್ರೋತ್ಸಾಹಿಸಬಾರದು. ವಿದ್ಯಾವಂತರು ಸರಳ ವಿವಾಹಗಳನ್ನು ಆಚರಣೆಗೆ ತರಬೇಕು. ನಮ್ಮ ದೇಶಬಾಂಧವರೆಲ್ಲರ ಸರಳ ವಿವಾಹಗಳನ್ನು ಬೆಂಬಲಿಸಿ, ರೂಢಿಗೆ ತರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.