ನಮ್ಮ ಬದುಕಿಗೂ ಬೇಕಿದೆ ಅಭಯ
ಕೋಡ್ತಳ್ಳಿ ಗ್ರಾಮದ ನಿವಾಸಿಗಳಾದ ನಾವು ಉಳವಿ ಪಂಚಾಯತ್ ಜೋಯಿಡಾ ತಾಲೂಕಿವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸವಾಗಿದ್ದು ಕೃಷಿಯಿಂದ ಬದುಕನ್ನು ಸಾಗಿಸುತ್ತಿದ್ದೇವೆ.
ನಾವೆಲ್ಲರೂ ಅಣಶಿ- ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 200 ವರ್ಷಗಳಿಂದ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡ ತಲೆಮಾರಿನವರು.
ಈ ಅಭಯಾರಣ್ಯದಲ್ಲಿ ಇರುವ ಪ್ರತಿಯೊಬ್ಬ ನಾಗರಿಕನಿಗೂ ನಮ್ಮ ನಾಡು, ಜಲ, ನೆಲ, ಕಾಡು, ದೇಶ ಎಂಬ ಭಾವನೆ, ಪ್ರೀತಿ ಸದಾ ಕಾಲ ಜಾಗೃತವಾಗಿ ಇರುವುದರಿಂದ ಇವತ್ತು ಅಭಯಾರಣ್ಯವಾಗಲು ಸಾಧ್ಯವಾಗಿದೆ ಹೊರತು ಬೇರೆ ಯಾವ ವ್ಯಕ್ತಿಯಿಂದ ಅಥವಾ ಸರ್ಕಾರದಿಂದ ಅಲ್ಲ ಎಂಬುದು ಸತ್ಯ. ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯಾದ್ದರಿಂದ ಹುಲಿಗಳ, ಪ್ರಾಣಿಗಳ ರಕ್ಷಣೆ ಆಗಬೇಕು. ಅದಾಗಬೇಕಾದರೆ ಅಲ್ಲಿ ವಾಸವಾಗಿರುವ ಜನರಿಗೆ ಸರಿಯಾದ ಪರಿಹಾರ, ಪುನರ್ವಸತಿ ಕೊಟ್ಟು ಪ್ರಾಣಿಗಳು ಬದುಕುವುದಕ್ಕೂ ಅವಕಾಶ ಮಾಡಬೇಕು. ಅದಲ್ಲದೇ ಯಾವುದೋ ಯೋಜನೆ ಮುಖೇನ ಸ್ಥಳೀಯ ಜನರ ಸಹಭಾಗಿತ್ವದ ಹೊರತಾಗಿ ಸರ್ಕಾರವು ಅರಣ್ಯ ಸಂರಕ್ಷಣೆ ಮಾಡುತ್ತೇನೆಂಬುದು ಬರಿ ಭ್ರಮೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಕಾಡಿನ ಪ್ರಮಾಣದೊಂದಿಗೆ ಈಗಿನದನ್ನು ಹೋಲಿಸಿದರೆ ಪರಿಸರ ರಕ್ಷಣೆ ವಿಷಯದಲ್ಲಿ ಸರ್ಕಾರದ ಅರ್ಹತೆ ಜಾಹೀರಾಗುತ್ತದೆ.
ಪ್ರಾಣಿ ರಕ್ಷಣೆಯ ಪ್ರದೇಶದ ಬಳಿಯ ಜನರ ಬದುಕು ಹೇಗಿದೆ? ನಮಗೆ ಅನಾರೋಗ್ಯವಾಯಿತೆಂದರೆ ವೈದ್ಯರನ್ನು ಕಾಣಲು 5 ಮೈಲು ನಡೆದುಕೊಂಡೆ ಹೋಗಬೇಕು. ಮಳೆಗಾಲ ಬಂತು ಅಂದರೆ ಇನ್ನೂ ಕಷ್ಟ. ಜಿಗಣೆಗಳೂ ಸಹ ನಮ್ಮ ರಕ್ತವನ್ನು ಹೀರುತ್ತವೆ. ಹಿರಿಯ ನಾಗರಿಕರಿಗೆ ಅನಾರೋಗ್ಯವಾಯಿತೆಂದರೆ ಅವರನ್ನು ಕಂಬಳಿಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ. ಯಾವುದೇ ಬೆಳೆ ಬೇಳೆದರೂ ಸರಿಯಾದ ಮಾರಾಟ ಮಳಿಗೆಗಳಿಲ್ಲ. ಸಾಗಾಟಕ್ಕೆ ಬೆಳೆಯುವುದಕ್ಕೆ ವ್ಯಯಿಸಿದ 2 ಪಟ್ಟು ಹಣವನ್ನು ಖರ್ಚುಮಾಡಬೇಕಾಗಿ ಬಂದಿದೆ.
ನಮ್ಮ ಊರಿನ ಜನರು ಬಸ್ಸನ್ನೆ ಹತ್ತದವರು.
ನಿಜವಾಗಲೂ ಅರಣ್ಯರಕ್ಷಣೆ ಅಗಿರುವುದು ಸರ್ಕಾರದಿಂದ ಅಲ್ಲ, ಅಲ್ಲಿ ಬದುಕುತ್ತಿರುವ ಜನರಿಂದ ಮಾತ್ರ. ವಿದ್ಯುತ್ ದೀಪ ಇಲ್ಲದೆ ಸೀಮೆಎಣ್ಣೆಯ ದೀಪದಿಂದ ರಾತ್ರಿ ಕಳೆಯುವ ಜನರಿಗೆ ಅರಣ್ಯದ ಮಧ್ಯೆ ಜೀವನಕ್ಕೆ ಕನಿಷ್ಠ ಸೌಕರ್ಯಗಳಾದರೂ ಬೇಕಲ್ಲವೇ?
- ಕೋಡ್ತಳ್ಳಿ ನಾಗರಿಕರು
ಉಳವಿ ಪಂಚಾಯತ್, ಜೋಯಿಡಾ, ಉತ್ತರ ಕನ್ನಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

