ಡಬ್ಬಿಂಗ್ ಅಂದರೆ ಯಾಕೆ ಎದೆ ಡಬ್?

ಡಬ್ಬಿಂಗ್ ಭೂತ!
ಹಾಗಂತ ಸಿಕ್ಕಾಪಟ್ಟೆ ಹೆದರಿಸುತ್ತಿದ್ದಾರೆ. ಡಬ್ಬಿಂಗ್ಗೆ ಅವಕಾಶ ಕೊಡಬೇಕೋ, ಬೇಡವೋ ಎಂಬುದರ ಕುರಿತು ಕನ್ನಡ ಚಿತ್ರರಂಗ ಕಣ್ ಬಿಟ್ಟಾಗಿನಿಂದಲೂ ವಾದ-ವಿವಾದ ಇದ್ದೇ ಇದೆ. ಆದರೆ, ಈ ವಿವಾದ ತಾರಕಕ್ಕೇರಿದ್ದು ಕಳೆದ 2 ವರ್ಷಗಳಿಂದ. ಕನ್ನಡದಲ್ಲಿ ಡಬ್ಬಿಂಗ್ಗೆ ಅವಕಾಶ ಕೊಡಬೇಕು ಎಂದು ಗ್ರಾಹಕರ ಕೂಟದ ಅಧ್ಯಕ್ಷ ಗಣೇಶ್ ಸತೀಶ್ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ)ಕ್ಕೆ ಮನವಿ ಮಾಡಿಕೊಂಡಾಗಿನಿಂದ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಇದೀಗ, ಸಿಸಿಐ ನೇಮಿಸಿದ್ದ ತನಿಖಾ ಸಮಿತಿ ತನ್ನ ವರದಿಯನ್ನು ಆಯೋಗಕ್ಕೆ ಸಲ್ಲಿಸಿದೆ. ಆ ವರದಿ ಡಬ್ಬಿಂಗ್ ಪರವಾಗಿದೆ ಎಂದು ಗೊತ್ತಾಗುತ್ತಿದ್ದಂತೆ, 'ಡಬ್ಬಿಂಗ್' ಬೇಡ ಎನ್ನುವವರು ಮೈಮೇಲೆ 'ಭೂತ' ಬಂದವರಂತೆ ವರ್ತಿಸುತ್ತಿದ್ದಾರೆ. ಈ ಭೂತ ಕನ್ನಡ ನಾಡು, ನುಡಿಯನ್ನು ನುಂಗಿ ನೀರು ಕುಡಿದು ಬಿಡುತ್ತದೆ ಎಂದು ತಾರಕಸ್ವರದಲ್ಲಿ ಕೂಗುತ್ತಿದ್ದಾರೆ. ಟಿವಿಗಳ ಪ್ಯಾನೆಲ್ ಡಿಸ್ಕಸ್ಗಳಲ್ಲೂ ಗಂಟಲು ಹರಿಯುವಂತೆ ಮಾತನಾಡುತ್ತಿದ್ದಾರೆ.
ಅಷ್ಟಕ್ಕೂ ಡಬ್ಬಿಂಗ್ ಬೇಡ ಎನ್ನಲು ಅವರಿಗಿರುವ ಕಾರಣಗಳೆಂದರೆ - ಮಾರುಕಟ್ಟೆ ಚಿಕ್ಕದು. ಇಲ್ಲಿನ ಕಲಾವಿದರು, ತಂತ್ರಜ್ಞರು, ಕಿರುತೆರೆ- ಹಿರಿತೆರೆಯನ್ನು ಪರೋಕ್ಷ, ಅಪರೋಕ್ಷವಾಗಿ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿ ಪಾಲಾಗುತ್ತವೆಂಬ ಆತಂಕ. ಹಾಗೆ ನೋಡಿದರೆ, ಇದು ಕೇವಲ ಆತಂಕವಷ್ಟೇ. ವಾಸ್ತವದಲ್ಲಿ ಹಾಗಾಗಲು ಸಾಧ್ಯವೇ ಇಲ್ಲ. ಒಂದು ವೇಳೆ, ಹಾಗಾಗುವುದಿದ್ದರೆ ಇಷ್ಟೊತ್ತಿಗೆ ತಮಿಳು, ತೆಲಗು ಮತ್ತು ಮಲೆಯಾಳಿ ಚಿತ್ರರಂಗ ಬಾಗಿಲು ಹಾಕಿಕೊಂಡು ಹೋಗಬೇಕಿತ್ತು!
'ಕನ್ನಡ ಭಾಷೆಯ ನಿಜ ರಾಯಭಾರಿ' ರಾಜಕುಮಾರ್ ಅವರಿದ್ದ ಕಾಲದಲ್ಲಿ ಡಬ್ಬಿಂಗ್ ಬೇಡ ಎನ್ನುವುದಕ್ಕೂ ಒಂದು ತಾರ್ಕಿಕ ಕಾರಣವಿತ್ತು. ಕನ್ನಡ ಚಿತ್ರರಂಗ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿತ್ತು. ಇಂಥ ಸಂದರ್ಭದಲ್ಲಿ ಹೊರಗಿನ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಂದರೆ, ಕನ್ನಡ ಚಿತ್ರಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಂದಿನ ಎಲ್ಲ ಮಹನೀಯರು ವಿರೋಧಿಸುತ್ತಿದ್ದರು. ಇದೀಗ ಕಾಲ ಬದಲಾಗಿದೆ. ಕನ್ನಡದಲ್ಲೇ ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯವಾಗಿ ಕನ್ನಡ ಚಿತ್ರಗಳು ಗಮನ ಸೆಳೆಯುತ್ತಿವೆ. ಹೀಗಿರುವಾಗ, ಹಿಂದಿನವರು ಮಾಡಿದ ನಿಯಮಕ್ಕೆ ಜೋತು ಬಿದ್ದರೆ ಹೇಗೆ? ಇಂದಿನ ಪ್ರೇಕ್ಷಕರು ಬದಲಾಗಿದ್ದಾರೆ. ಅವರಿಗೆ ಬೇರೆ ಬೇರೆ ಭಾಷೆ ಚಿತ್ರಗಳನ್ನು ತಮ್ಮ ಮಾತೃಭಾಷೆಯಲ್ಲಿ ನೋಡುವ ಹಂಬಲ. ಅವರ ಹಂಬಲ ಈಡೇರಿಸುವವರು ಯಾರು? ಇದಕ್ಕೆ ಉತ್ತರ ಕೊಡುವವರು ಯಾರೂ ಇಲ್ಲ. ಆದರೆ, ಕನ್ನಡ ಚಿತ್ರಗಳನ್ನು ಮಾತ್ರ ಇಂಗ್ಲಿಷ್, ಹಿಂದಿ, ತೆಲಗು, ತಮಿಳು ಭಾಷೆಗೆ ಡಬ್ ಮಾಡಬಹುದು. ಕನ್ನಡಕ್ಕೆ ಬೇಡ ಎನ್ನುವ ಇವರು, ಆ ಭಾಷೆಗಳಿಗೆ ಕನ್ನಡ ಚಿತ್ರ ಡಬ್ ಮಾಡುವಾಗ ಯಾಕೆ ಬೇಡ ಎನ್ನುವುದಿಲ್ಲ?
ಆಯಿತು. ಕನ್ನಡ ಭಾಷೆ ಅಳಿಯುತ್ತದೆ, ನಮ್ಮ ಚಿತ್ರರಂಗ ನಾಶವಾಗುತ್ತದೆ ಎಂಬ ವಾದವನ್ನೇ ಒಪ್ಪೋಣ. ಡಬ್ಬಿಂಗ್ ಬೇಡ ಎಂದು ಹೇಗೆ ಈಗ ನಿಯಮ ಮಾಡಿಕೊಂಡು ಅದನ್ನು ಕಷ್ಟಪಟ್ಟು ಪಾಲಿಸಿಕೊಂಡು ಬರುತ್ತಿದ್ದಾರೋ ಹಾಗೆಯೇ, ಡಬ್ಬಿಂಗ್ಗೂ ಇಂತಿಂಥ ಕಟ್ಟಳೆಗಳನ್ನು ಮಾಡಿಕೊಂಡು ಯಾಕೆ ಅವಕಾಶ ಕೊಡಬಾರದು? ಇದೇ ನಿಯಮವನ್ನು ಕಿರುತೆರೆ ಕಾರ್ಯಕ್ರಮ, ಧಾರಾವಾಹಿಗಳಿಗೂ ಅನ್ವಯಿಸಲಿ. ಡಬ್ಬಿಂಗ್ ಬೇಡ ಎಂದು ಕೂಗುವವರು ಎಂದಾದರೂ ರಿಮೇಕ್ ಬೇಡ, ಕನ್ನಡದ ಸ್ವಂತ ಕಥೆಗಳನ್ನೇ ಸಿನಿಮಾ ಮಾಡಿ ಎಂದು ಜೋರಾಗಿ ಹೇಳಿದ್ದಿದೆಯೇ? ಈ ವಿಚಾರದಲ್ಲಿ ಕನ್ನಡ ಭಾಷೆ ನೆನಪಾಗುವುದಿಲ್ಲ. ನಾಡು ನೆನಪಾಗುವುದಿಲ್ಲ! ಡಬ್ಬಿಂಗ್ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಹೀಗೆ? ಯಾಕೆ ಈ ಇಬ್ಬಂದಿತನದ ನಿಲವು? ಡಬ್ಬಿಂಗ್ಗೆ ಅವಕಾಶ ಕೊಟ್ಟರೆ ಭಾಷೆ ಅಳಿಯುತ್ತದೆ ಎಂಬ 'ಕೊಳ್ಳಿ ದೆವ್ವ'ವನ್ನು ತೋರಿಸಿ ಹೆದರಿಸುತ್ತಿರುವ ನೀವು, ಈ ನಾಡನ್ನು ಒಡೆಯುವ ಅಪಸ್ವರ ಕೇಳಿ ಬಂದಾಗ ಎಲ್ಲಿ ಹೋಗಿದ್ದಿರಿ? ನಾಲ್ಕು ಎಂಇಎಸ್ ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂದು ಹುಂಬತನದ ಹೇಳಿಕೆಯನ್ನು ಶಾಸಕರೊಬ್ಬರು ನೀಡಿದರು. ಆಗ ನೀವು ಎಲ್ಲಿದ್ದಿರಿ? ಆಗೆಲ್ಲ, ಕನ್ನಡ ನಾಡು, ನುಡಿ ನೆನಪಾಗಲಿಲ್ಲವೇ? ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಮಾಜಿ ಸಚಿವ ಉಮೇಶ್ ಕತ್ತಿ ಮೂರ್ನಾಲ್ಕು ಬಾರಿ ಹೇಳಿದರೂ ಇಡೀ ಕನ್ನಡ ಚಿತ್ರರಂಗ ಅವರ ವಿರುದ್ಧ ಒಂದೇ ಒಂದು ಮಾತು ಆಡಲಿಲ್ಲ(ಬೆರಳೆಣಿಕೆ ಜನರನ್ನು ಬಿಟ್ಟು) ಯಾಕೆ? ರಾಜಕುಮಾರ ಅವರು ಇದ್ದ ಕಾಲವನ್ನು ಬಿಟ್ಟು, ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಕುತ್ತು ಬಂದಾಗ ಎಷ್ಟು ಸಾರಿ ಕನ್ನಡ ಚಿತ್ರರಂಗ, ಕಿರುತರೆಯವರು ಬೆನ್ನಿಗೆ ನಿಂತಿದ್ದೀರಿ(ಕಾವೇರಿ ವಿವಾದ ಹೊರತುಪಡಿಸಿ)? ಕೇವಲ ಡಬ್ಬಿಂಗ್ ವಿಷಯಕ್ಕೆ ಮಾತ್ರ ನಿಮಗೆ ಕನ್ನಡ ಭಾಷೆ ಮೇಲಿನ ಪ್ರೀತಿ, ಅಭಿಮಾನ ಹೆಚ್ಚಾಗುತ್ತದೆ. ಯಾಕೆಂದರೆ, ಕೇವಲ ನಿಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಂಥ ಅಭಿಮಾನ ಹೊಳೆಯಾಗಿ ಹರಿಯುತ್ತದೆ.
ಸ್ಪರ್ಧೆ ಇದ್ದಾಗಲೇ ನಿಜವಾದ ಫಲಿತಾಂಶ ದೊರೆಯುತ್ತದೆ. ಸ್ಪರ್ಧೆಗೆ ಸಿದ್ಧರಾಗಿ. ಡಬ್ಬಿಂಗ್ ಬಂದಾಕ್ಷಣ ಎಲ್ಲ ಭಾಷೆ ಚಿತ್ರಗಳು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತವೆ ಎಂಬುದು ಕೇವಲ ಭಯವಷ್ಟೇ. ಅಷ್ಟಕ್ಕೂ ಡಬ್ಬಿಂಗ್ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ಪ್ರಭು ಗೆಲ್ಲಿಸುತ್ತಾನೆಂದು ಯಾವ ಆಧಾರದಲ್ಲಿ ಹೇಳುತ್ತೀರಿ? ಡಬ್ಬಿಂಗ್ ಬೇಡ ಎನ್ನುವುದು ಕೇವಲ ಪಲಾಯನ ವಾದವಷ್ಟೇ.
ಸುಮಾರು 2000 ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಅಷ್ಟು ಸರಳವಾಗಿ ಮತ್ತೊಬ್ಬರ ಅಧೀನವಾಗುವುದಿಲ್ಲ. ಸಾಯುವುದೂ ಇಲ್ಲ. ಹೆದರಿಕೆ ಬೇಡ. ಮತ್ತೊಂದು ವಿಷಯ ಎಂದರೆ, ಕೇವಲ ಕನ್ನಡ ಚಿತ್ರರಂಗ ಮತ್ತು ಕಿರುತೆರೆಗಳಿಂದಲೇ ಭಾಷೆ ಬೆಳೆಯುತ್ತಿದೆ ಎಂಬ ಕಲ್ಪನೆ ಏನಾದರೂ ಇದ್ದರೆ ಮೊದಲು ಅದನ್ನು ತೊಡೆದು ಹಾಕಿ. ಸಿನಿಮಾಗಳ ಇತಿಹಾಸ ತೀರಾ ಇತ್ತೀಚಿನದ್ದು. ಅಂದರೆ, ಕೇವಲ ಒಂದು ಶತಮಾನದಷ್ಟು. ಅದರಲ್ಲೂ ಕರ್ನಾಟಕದ್ದು 75 ವರ್ಷಗಳಷ್ಟೇ. ಹೀಗಿರುವಾಗ ಸುಮ್ಮನೆ, ಡಬ್ಬಿಂಗ್ಗೆ ಅವಕಾಶ ಕೊಟ್ಟರೆ, ಭಾಷೆಗೆ ತೊಂದರೆ, ನಾಡು ನಶಿಸುತ್ತದೆ ಎಂಬ ಹುಸಿ ಆತಂಕವನ್ನು ಜನರಲ್ಲಿ ಹುಟ್ಟಿಸಬೇಡಿ.
ಹೋಗಲಿ, ಕನ್ನಡ ಚಿತ್ರರಂಗದಿಂದಲೇ ಭಾಷೆ ಉಳಿಯುತ್ತಿದೆ ಎಂದಾದರೆ, ನೀವು ಉಳಿಸಿ ಬೆಳೆಸುತ್ತಿರುವ ಕನ್ನಡವಾದರೂ ಎಂಥದ್ದು? ನಿಮ್ಮ ಸಿನಿಮಾಗಳಲ್ಲಿ ಬರುವ ಸಾಹಿತ್ಯ- ಸಂಭಾಷಣೆಯನ್ನು ಸ್ವಲ್ಪ ಗಮನಿಸಿ, 'ಕೈ ಕೈಯ್ಯಾ ಕಚ್ಚಾಸುಡ, ಅಸಡ ಬಸಡ...' 'ಅಮ್ಮ ಲೂಸಾ.. ಅಪ್ಪಾ ಲೂಸಾ...', 'ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್ ತರಹ ಹೋಯಿ... ಈ ಪ್ರೀತಿ, ಈ ಪ್ರೇಮ...' ಇದ್ಯಾವ ಸೀಮೆ ಕನ್ನಡ? ಇದನ್ನೂ ಸಮರ್ಥಿಸಿಕೊಳ್ಳುತ್ತಾರೆ. ಹೊಸ ಯುಗದ ಪ್ರೇಕ್ಷಕರಿಗೆ ಇಂಥದ್ದೇ ಸಾಹಿತ್ಯ ಇಷ್ಟವಾಗುತ್ತದೆ ಎನ್ನುತ್ತಾರೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲಿ ಎಷ್ಟು ಸಿನಿಮಾಗಳು ಇಡೀ ಕುಟುಂಬಸಹಿತ ಯಾವುದೇ ಮುಜುಗರ ಇಲ್ಲದೇ ನೋಡುವಂಥ ಸಿನಿಮಾಗಳಿವೆ ಹೇಳಿ ನೋಡೋಣ? ಕೇವಲ ಬೆರಳೆಣಿಕೆ ಸಿನಿಮಾಗಳನ್ನು ಹೊರತುಪಡಿಸಿ, ಎಲ್ಲಾ ಸಿನಿಮಾಗಳು, ಹಳೆ ಪಾತ್ರೆ... ಹಳೆ ಕಬ್ಬಿಣವೇ! ಹೀಗಾಗಿ, ದಯವಿಟ್ಟು, ಕನ್ನಡ ಸಿನಿಮಾದಿಂದಲೇ ಕನ್ನಡ ಭಾಷೆ ಉದ್ಧಾರವಾಗುತ್ತಿದೆ ಎಂದು ಹೇಳಬೇಡಿ.
ಇಡೀ ಜಗತ್ತೇ ಒಂದು ಮನೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಮಾತ್ರ ಯಾಕೆ ದ್ವೀಪದ ತರಹ ಇರಬೇಕು ಹೇಳಿ? ನಮ್ಮ ಚಿತ್ರಗಳನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ. ಅಲ್ಲಿರುವ ಚಿತ್ರಗಳನ್ನು ಇಲ್ಲಿಗೆ ಡಬ್ ಮಾಡಿ. ಪ್ರೇಕ್ಷಕನಿಗೆ ಯಾವುದೇ ಇಷ್ಟವಾಗುತ್ತದೆಯೋ ಅದನ್ನು ನೋಡುತ್ತಾನೆ. ಮಿಕ್ಕಿದ್ದನ್ನು ಥೇಟರ್ನಿಂದ ಅವನೇ ಎತ್ತಂಗಡಿ ಮಾಡಿಸುತ್ತಾನೆ. ಅಂತಿಮವಾಗಿ ನಿಮ್ಮ ಸಿನಿಮಾಗಳ ಯಶಸ್ಸು ಪ್ರೇಕ್ಷಕ ಮರ್ಜಿಯನ್ನೇ ಅವಲಂಬಿಸಿದೆ ಎನ್ನುವುದನ್ನು ದಯವಿಟ್ಟು ಮರೆಯಬೇಡಿ.
-ಮಲ್ಲಿಕಾರ್ಜುನ ತಿಪ್ಪಾರ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


