ಇಂಥ ಉತ್ಸವಗಳು ಯಾರಿಗಾಗಿ?

ಸರ್ಕಾರ ಐತಿಹಾಸಿಕ ಸ್ಥಳಗಳಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಉತ್ಸವ ಆಚರಣೆ ಮಾಡುತ್ತಾ ಬಂದಿದೆ. ಹಂಪಿ ಉತ್ಸವವನ್ನು ಮೊದಲ ಬಾರಿಗೆ ಎಂ.ಪಿ. ಪ್ರಕಾಶ್ ಪ್ರಾರಂಭಿಸಿದಾಗ ಅದಕ್ಕೊಂದು ತಾತ್ವಿಕ ಹಿನ್ನೆಲೆ, ಶಿಸ್ತು ಮತ್ತು ನಿಜವಾಗಿಯೂ ಅದೊಂದು ಜನತೆಯ ಉತ್ಸವ ಎನ್ನುವಂತೆ ಮಾಡಿದ್ದನ್ನು ಕಂಡಿದ್ದೇವೆ. ನಂತರದ ಬಿಜೆಪಿ ಆಡಳಿತದ ಅವಧಿಯಲ್ಲಿ ಜನಾರ್ದನರೆಡ್ಡಿ ಅಂಥವರು ಶ್ರೀಕೃಷ್ಣ ದೇವರಾಯನ 500ನೇ ಜನ್ಮದಿನದ ನೆಪದಲ್ಲಿ ಅದ್ಧೂರಿ ಉತ್ಸವ ನಡೆಸಿ, ಹಲವಾರು ಕೋಟಿ ಸರ್ಕಾರದ ಹಣ ಖರ್ಚು ಮಾಡಿ ಮೆರೆದಿದ್ದನ್ನೂ ನೋಡಿದ್ದೇವೆ.
ಆದರೆ, ಈ ಉತ್ಸವ ಯಾರಿಗಾಗಿ, ಎನ್ನುವ ಪ್ರಶ್ನೆ ಕಾಡತೊಡಗಿದ್ದು ಮೊನ್ನೆ ನಡೆದ ಹಂಪಿ ಉತ್ಸವವನ್ನು ನೋಡಲು ಹೋದಾಗ. ಯಾಕೆಂದರೆ ಅಲ್ಲಿಯ ಅವ್ಯವಸ್ಥೆ, ಪೊಲೀಸರ ದರ್ಪದಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ, ಐದು ರುಪಾಯಿ ಪಡೆದು ತಂಗಳನ್ನ ನೀಡಿದ್ದು ಹಾಗೂ ಪುಸ್ತಕ ಮಳಿಗೆ ಪ್ರವೇಶಿಸಲು ಟಿಕೆಟ್ ಪಡೆಯಬೇಕಾದ ಅದ್ಭುತ ಪದ್ಧತಿ ಹುಟ್ಟು ಹಾಕಿದ್ದನ್ನು ಗಮನಿಸಿದಾಗ ಉತ್ಸವ ನೆಪದಲ್ಲಿ ಯಾರ್ಯಾರೋ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನಿಸಿತು.
ಸೈಕಲ್ ಮೋಟರ್ನಲ್ಲಿ ಹೋದವರಿಗೆ ಮೂರ್ನಾಲ್ಕು ಕಿ.ಮೀ. ದೂರದಲ್ಲಿಯೇ ಪೊಲೀಸರು ತಡೆದು, ಅಲ್ಲಿಯೇ ನಿರ್ಮಿಸಿದ ನಿಲ್ದಾಣದಲ್ಲಿ ನಿಲ್ಲಿಸಿ, ತಮ್ಮ ಹೆಂಡರು ಮಕ್ಕಳೊಂದಿಗೆ ನಡೆದು ಹೋಗುವಂತೆ ಮಾಡಿದ್ದರಿಂದ ಉತ್ಸವಕ್ಕೆ ಬಂದವರು ಅದನ್ನು ನೋಡಿ ರಾತ್ರಿ 11ರ ನಂತರ ಆ ವ್ಯವಸ್ಥೆಯನ್ನು ಶಪಿಸುತ್ತಾ ಮನೆಗೆ ಮರಳಿದರು. ನಮಗೆ ಸಚಿವರಾದ ಎಚ್.ಕೆ. ಪಾಟೀಲರು ಬರ ಹೇಳಿದ್ದರಿಂದ ಕೃಷ್ಣದೇವರಾಯ ಪ್ರಧಾನ ವೇದಿಕೆಯಲ್ಲಿದ್ದ ಅವರನ್ನು ಕಾಣುವುದು ಕೊನೆಗೆ ಅವರು ಕಾರ್ಯಕ್ರಮ ಬಿಟ್ಟ ಬಳಿಕ ಸಾಧ್ಯವಾಯಿತೆ ಹೊರತು, ಅಲ್ಲಿಯವರೆಗೂ ನಮಗೆ ಪೊಲೀಸರು ಅತ್ತ ತಲೆ ಹಾಕಲು ಅವಕಾಶ ನೀಡಲಿಲ್ಲ. ಎರಡು ಹೆಜ್ಜೆ ಮುಂದಿಟ್ಟು ಅವರು ಎಲ್ಲಿರಬಹುದು ಎಂದು ನೋಡಲು ಹೋಗುತ್ತಲೇ ಪೊಲೀಸರು ನಮ್ಮನ್ನು ಪ್ರಾಣಿಗಳಂತೆ ಓಡಿಸಲು ಬಂದರು. ಎಲ್ಲರಿಗೂ ಈ ರೀತಿ ನಿರ್ಬಂಧ ಮಾಡಿದ್ದರೆ ನಮಗೇನು ಅನಿಸುತ್ತಿರಲಿಲ್ಲ. ಅದು ಪೊಲೀಸ್ ವ್ಯವಸ್ಥೆ ಎಂದುಕೊಳ್ಳುತ್ತಿದ್ದೆವು. ಆದರೆ, ಅದೇ ದಾರಿಯಲ್ಲಿ ಸರ್ಕಾರಿ ವಾಹನದಲ್ಲಿ ಬಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಂಡಿರು, ಮಕ್ಕಳಿಗೆ ಸಲಾಮ್ ಹೊಡೆದು ಒಳಗೆ ಕರೆದುಕೊಂಡು ಹೋಗುವುದನ್ನು ಕಂಡಾಗ ಈ ರೀತಿ ಬ್ರಿಟಿಷರ ಆಡಳಿತದಲ್ಲಿಯೂ ಇರಲಾರದ್ದೆನಿಸಿತು.
ಅದೇನು ಯಾರದ್ದೋ ಖಾಸಗಿ ಕಾರ್ಯಕ್ರಮ ಅಲ್ಲ. ಸರ್ಕಾರ ಮತ್ತು ಸಾರ್ವಜನಿಕರ ಒಟ್ಟು ಏಳು ಕೋಟಿ ವೆಚ್ಚದಲ್ಲಿ ಪ್ರಾಯೋಜಿಸಿದ ಕಾರ್ಯಕ್ರಮವಾಗಿದ್ದರಿಂದ ಅಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ಇರಬೇಕಲ್ಲವೆ? ಸಾರ್ವಜನಿಕರನ್ನು ಯಾವ ರೀತಿ ಕಾಣಬೇಕು ಎನ್ನುವ ಸೌಜನ್ಯವೂ ಬೇಡವೇ? ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತಹ ನಾಡಿನ ಅಭಿಮಾನದ ಕಾರ್ಯಕ್ರಮಕ್ಕೆ ಕೋಟಿ, ಎರಡು ಕೊಡಲು ಮೀನಮೇಷ ಮಾಡುವ ಸರ್ಕಾರ ತಾವೇ ಆಯೋಜಿಸುವ ಇಂಥ ಕಾರ್ಯಕ್ರಮಗಳಲ್ಲಿ ಲೆಕ್ಕವಿಲ್ಲದಂತೆ ಖರ್ಚು ಮಾಡಿ, ಕೇವಲ ಅಧಿಕಾರಿಗಳು, ರಾಜಕಾರಣಿಗಳು ಮೆರೆಯುವುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲಾದೀತೆ? ಈ ಬಾರಿ ನಾಲ್ಕು ವೇದಿಕೆ ನಿರ್ಮಿಸಿ ಅಲ್ಲಿ ನೀಡಿದ ಕಾರ್ಯಕ್ರಮಗಳನ್ನು ಗಮನಿಸಿದಾಗ ಒಂದೆರಡನ್ನು ಹೊರತುಪಡಿಸಿದರೆ ಉಳಿದವು ತೀರಾ ಕಳಪೆಯಾಗಿದ್ದವು. ಪಾಪ್ ಸಂಗೀತ, ಹಿಂದಿ ಸಿನಿಮಾ ಹಾಡುಗಳನ್ನು ಪ್ರಧಾನ ವೇದಿಕೆಯಲ್ಲಿ ಗಮನಿಸಿದಾಗ ಎದೆಯಲ್ಲಿ ಗುದ್ದಿದ ಅನುಭವ ಬಿಟ್ಟರೆ ಬೇರೇನೂ ಆಗಲಿಲ್ಲ. ಅದರ ಪಕ್ಕದ ವೇದಿಕೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ನಡೆದ ಸಂಗೀತ ಕಾರ್ಯಕ್ರಮಕ್ಕೆ ಕಾರ್ಯಕ್ರಮ ನೀಡುವವರನ್ನು ಬಿಟ್ಟರೆ ಬೇರಾರೂ ಇಲ್ಲದೆ ಸಾವಿರಾರು ಖಾಲಿ ಖುರ್ಚಿಗಳನ್ನು ನೋಡಿದಾಗ ಕಲಾವಿದರಿಗೆ ಲಕ್ಷಾಂತರ ಖರ್ಚು ಮಾಡಿ, ನೀಡುವ ಇಂಥ ಕಾರ್ಯಕ್ರಮಗಳಿಂದ ಯಾರಿಗೆ ಪ್ರಯೋಜನ?
-ವಿಠ್ಠಪ್ಪ ಗೋರಂಟ್ಲಿ, ಕೊಪ್ಪಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


