ಧೀಮಂತ ಯೋಜನೆಯೊಂದರ ಮರುಹುಟ್ಟು

1972, ನವೆಂಬರ್ 5. ಆ ದಿನದ ಕನ್ನಡದ ಪುಟಾಣಿಗಳಿಗೆ 'ರಾಷ್ಟ್ರೋತ್ಥಾನ ಸಾಹಿತ್ಯ' ಎಂಬ ಪ್ರಕಾಶನ ಸಂಸ್ಥೆಯು ಅಪೂರ್ವವಾದ ಕೊಡುಗೆಯೊಂದನ್ನು ನೀಡಿತು. ನಾಡಿನ ಮಕ್ಕಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆಯಲಾದ, ಕ್ರೌನ್, 1/16 ಆಕಾರದ ವಸ್ತುವೈವಿಧ್ಯದಿಂದ ಶೋಭಿಸುತ್ತಿದ್ದ 10 ಕನ್ನಡ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯವು ಅಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿತು. ಮುಂದಿನ 8 ವರ್ಷ ಎರಡು ತಿಂಗಳ ಅವಧಿಯಲ್ಲಿ ಅದು ನಾಡಿಗೆ ನೀಡಿದ 510 ಪುಸ್ತಕಗಳಿಗೆ ಆ ಹತ್ತು ಪುಸ್ತಕಗಳು ನಾಂದಿ ಹಾಡಿದವು.
ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಮಾಡಿರುವ ಮಹತ್ತರವಾದ ಸಾಧನೆಯೊಂದನ್ನು ಕಂಡಾಗ ಈ ಬಾಹುಳ್ಯದ ಕೆಲಸದ ಕಲ್ಪನೆ ಆ ವ್ಯಕ್ತಿಗೆ ಅಥವಾ ಸಂಸ್ಥೆಗೆ ಹೇಗೆ ಬಂತು? ಈ ಕಾರ್ಯವನ್ನು ಕುರಿತ ಆಲೋಚನೆಗೆ ಬೀಜಾಂಕುರ ಆದದ್ದೆಲ್ಲಿ? ಯಾವ ಹೊತ್ತಿನಲ್ಲಿ? ಎಂಬ ಬೆರಗು ಕೆಲವರಲ್ಲಾದರೂ ಮೂಡುವುದುಂಟು.
ರಾಷ್ಟ್ರೋತ್ಥಾನ ಸಾಹಿತ್ಯ, ಪುಸ್ತಕ ಪ್ರೇಮಿಗಳ ವಲಯಗಳಲ್ಲಿ ಈ ಪ್ರಕಾಶನದ ಹೆಸರು ಸುಪರಿಚಿತ. ಅದೊಂದು ವಿಶಿಷ್ಟ ಪ್ರಕಾಶನ ಸಂಸ್ಥೆ. ಮಕ್ಕಳ ಜ್ಞಾನವರ್ಧನೆಗೆ ಪಠ್ಯೇತರ ಮಾರ್ಗದ ಮೂಲಕ ನೆರವಾಗುವ ಆಶಯ ಸಂಸ್ಥೆಯದ್ದಾಗಿದೆ. ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಕ್ಕಳ ಮನಸ್ಸನ್ನು ಸೆರೆಹಿಡಿಯಬಲ್ಲಂಥ ಒಂದಷ್ಟು ಕನ್ನಡ ಪುಸ್ತಕಗಳನ್ನು ನಾಡಿನ ಪುಟಾಣಿಗಳಿಗೆ ಒದಗಿಸಿಕೊಟ್ಟರೆ ಹೇಗೆ ಎಂಬ ಆಲೋಚನೆ ರಾಷ್ಟ್ರೋತ್ಥಾನ ಸಾಹಿತ್ಯದ ರೂವಾರಿಗಳಾದ ದಿವಂಗತ ನಂ. ಮಧ್ವರಾವ್ ಅವರಂಥ ಕಾರ್ಯಶೀಲ ಕನಸುಗಾರರಿಗೆ ಮಾತ್ರ ಬರುವುದು ಸಾಧ್ಯ. 1971ರ ಸುಮಾರಿನಲ್ಲಿ ನಂ. ಮಧ್ವರಾಯರಿಗೆ ಹೊಳೆದ ಯೋಜನೆಯ ಬಗೆಗೆ ಅವರದೇ ಮಾತುಗಳು ಹೀಗಿವೆ.
"ನಿತ್ಯ ಪ್ರವಾಸಿಯಾದ ನಾನು ಬೆಂಗಳೂರಿಗೆ ಬಂದಾಗಲೆಲ್ಲಾ ಶಂಕರಪುರದಲ್ಲಿರುವ 'ಕೇಶವ ಕೃಪಾ'ದಲ್ಲಿ ಇಳಿದುಕೊಳ್ಳುತ್ತಿದ್ದೆ. ಅಲ್ಲಿರುವವರೆಲ್ಲ ದಿನಂಪ್ರತಿ ಬೆಳಗಿನ ಹೊತ್ತು ಸೇರಿ ಪ್ರಾತಃ ಸ್ಮರಣ ಎಂಬ ಶ್ಲೋಕಗಳನ್ನು ಹೇಳಿಕೊಳ್ಳುತ್ತಿದ್ದುದು ವಾಡಿಕೆ. ಶ್ಲೋಕಗಳಲ್ಲಿ ನಮ್ಮ ದೇಶದಲ್ಲಿ ಆಗಿ ಹೋದ ನೂರಾರು ಮಹಾವ್ಯಕ್ತಿಗಳ ಹೆಸರುಗಳು ಬರುತ್ತವೆ. ಅವರುಗಳನ್ನು ಕುರಿತು ಒಂದೊಂದು ಪುಸ್ತಕ ಬರೆದರೆ/ಬರೆಸಿದರೆ ಹೇಗೆ ಎಂಬ ಯೋಚನೆ ಬಂತು. ಮರುಕ್ಷಣವೇ ಇದು ಅಗಾಧವಾದ ಕೆಲಸ ಎಂಬ ಅಳುಕೂ ಹುಟ್ಟಿತು. ಅಳುಕನ್ನು ಹೆಚ್ಚು ಹೊತ್ತು ಇರಗೊಡದೆ ಕಾರ್ಯಾರಂಭ ಮಾಡಿದೆ..." ನಂ. ಮಧ್ವರಾಯರ ಮನಸ್ಸಿನಲ್ಲಿ ಮೂಡಿದ ಈ ಆಲೋಚನೆಯೇ 'ಭಾರತ ಭಾರತಿ ಪುಸ್ತಕ ಸಂಪದ'ದ ಮೊದಲ ಅವತರಣಿಕೆ. ಈ ಪುಸ್ತಕ ಮಾಲೆಯ ಭವ್ಯ ಬದುಕು ಒಟ್ಟು ಎಂಟು ವರ್ಷ ಎರಡು ತಿಂಗಳ ಅವಧಿಗೆ ಚಾಚಿಕೊಂಡು ಕನ್ನಡದ ಮಕ್ಕಳ ಸಾಹಿತ್ಯ ವಾಂಜ್ಞಯಕ್ಕೆ 510 ಮೌಲಿಕ ಕೃತಿಗಳನ್ನು ಕೊಡ ಮಾಡಿತು. ನಾಡಿನ ಖ್ಯಾತ ವಿಮರ್ಶಕ ಹಾಗೂ ಲೇಖಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಮಹಾಶಯರು ಪುಸ್ತಕ ಮಾಲೆಯ ಪ್ರಧಾನ ಸಂಪಾದಕತ್ವವನ್ನು ವಹಿಸಿಕೊಂಡು ಕೆಲಸಕ್ಕೆ ಖಚಿತತೆ, ಬಿಗಿ ಹಾಗೂ ಅಚ್ಚುಕಟ್ಟುತನಗಳನ್ನು ತಂದುಕೊಟ್ಟರು. 'ಭಾರತ-ಭಾರತಿ ಪುಸ್ತಕ ಸಂಪದ' ಮಾಲೆಯ ಐನೂರು ಪುಸ್ತಕಗಳು ವಿಷಯದ ದೃಷ್ಟಿಯಿಂದ ಅಸಾಧಾರಣ ವೈವಿಧ್ಯವನ್ನು ಸಾಧಿಸಿವೆ. ಪುರಾಣಗಳ ಲೋಕದ ಶ್ರೀರಾಮ, ಶ್ರೀಕೃಷ್ಣ, ಅಭಿಮನ್ಯು ಮುಂತಾದವರಿಂದ ಮೊದಲು ಮಾಡಿಕೊಂಡು ಹಾಕಿ ಆಟದ ಮಾಂತ್ರಿಕ ಧ್ಯಾನ್ಚಂದ್, ಕ್ರಿಕೆಟ್ ಕ್ರೀಡೆಯ ದಂತಕಥೆ ವಿನೂ ಮಂಕಡ್ ತನಕ ಪುಸ್ತಕಗಳು ವಿಸ್ತರಿಸಿಕೊಳ್ಳುತ್ತವೆ. ಚಾರಿತ್ರಿಕ ಮಹಾ ವ್ಯಕ್ತಿಗಳಾದ ಬುದ್ಧ, ಮಹಾವೀರ, ಗಾಂಧೀಜಿ, ವಿವೇಕಾನಂದರ ಬಗೆಗಿನ ಪುಸ್ತಕಗಳು ಈ ಮಾಲೆಯಲ್ಲಿ ಬಂದಿವೆ. ಈ ಮಾಲೆಯ ಪುಸ್ತಕಗಳು ಪ್ರಕಟವಾಗುವ ಕಾಲಕ್ಕೆ (1972-81) ಸಾಹಿತ್ಯರಂಗದ ಧ್ರುವತಾರೆಗಳಾಗಿ ಹೋಗಿದ್ದ ಬಿ. ವೆಂಕಟಾರ್ಯ, ಎ.ಆರ್. ಕೃಷ್ಣಶಾಸ್ತ್ರೀ, ಎಂ.ಎಸ್. ಪುಟ್ಟಣ್ಣ ಮೊದಲಾದವರೆಲ್ಲ ಈ ಮಾಲೆಯ ಪುಸ್ತಕಗಳಿಗೆ ವಸ್ತುವಾಗಿ ವಿಜೃಂಭಿಸಿದ್ದಾರೆ. ಸಂಗೀತ ಕ್ಷೇತ್ರದ ಹೆಚ್ಚು ಕಡಿಮೆ ಎಲ್ಲ ಖ್ಯಾತನಾಮರ ಬಗೆಗೆ (ತ್ಯಾಗರಾಜ, ಪುರಂದರದಾಸ, ಶ್ಯಾಮಾಶಾಸ್ತ್ರೀ ಇತ್ಯಾದಿ) ಪುಸ್ತಕಗಳು ಈ ಮಾಲೆಯಲ್ಲಿ ಪ್ರಕಟವಾಗಿವೆ. ಪ್ರಕಟಣೆಗೆ ಪುಸ್ತಕಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಿರಪೇಕ್ಷ ಚಿತ್ತವೃತ್ತಿಯನ್ನೇ ಎತ್ತಿ ಹಿಡಿದಿರುವ 'ಭಾರತ -ಭಾರತಿ ಪುಸ್ತಕ ಸಂಪದ-1'ರ ಮಾಲಿಕೆಗೆ ಕೃತಿಗಳನ್ನು ರಚಿಸಿಕೊಟ್ಟಿರುವ ಮಹನೀಯರಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ರಂ.ಶ್ರೀ.ಮುಗಳಿ, ಜಿ.ಎಸ್. ಶಿವರುದ್ರಪ್ಪ, ಹಾ.ಮಾ. ನಾಯಕ, ಎಚ್.ಕೆ. ರಾಮಚಂದ್ರರಾವ್ ಸೇರಿದಂತೆ ನೂರಾರು ಉದ್ಧಾಮ ಸಾಹಿತಿಗಳಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಈ ಮಾಲಿಕೆಯಲ್ಲಿ ಬಂದ 510 ಪುಸ್ತಕಗಳ ಬಗೆಗಿನ ಅಂಕಿ ಅಂಶಗಳು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಲು ಅರ್ಹವಾಗಿವೆ. ಈ ಮಾಲಿಕೆಯ ಮೊದಲ ಹತ್ತು ಪುಸ್ತಕಗಳು ಬಿಡುಗಡೆಗೊಂಡ ಸಮಾರಂಭದ ದಿನದಂದೇ (5.11.72) 1,30,000 ಪ್ರತಿಗಳು ಮಾರಾಟವಾದವು. ಈವರೆಗೆ ಒಂದು ಕೋಟಿಗೂ ಮೀರಿ ಪ್ರತಿಗಳು ಮುದ್ರಿತವಾಗಿವೆ. ಈ ಯೋಜನೆಗೆ ಬಳಸಲಾದದ್ದು 14,000 ರೀಮ್ ಅಥವಾ 255 ಟನ್ ಮುದ್ರಣ ಕಾಗದ ಇತ್ಯಾದಿ. ಕೆಲವರ ಬಗೆಗೆ ಆ ಹೊತ್ತಿಗೆ ಯಾವ ಭಾರತೀಯ ಭಾಷೆಯಲ್ಲಾದರೂ ಪುಸ್ತಕ ಬಂದಿತ್ತೆ ಎಂಬ ಅನುಮಾನ ಹುಟ್ಟುವ ಮಟ್ಟಿಗೆ ಜನರಲ್ ತಿಮ್ಮಯ್ಯ, ಹೋಮಿ ಭಾಭಾ ಅವರ ಬಗೆಗಿನ ಪುಸ್ತಕಗಳು ಪ್ರಕಟವಾದವು.
ದೇಶವು ಹೊಸ ದಿಗಂತಗಳೆಡೆಗೆ ಹೆಜ್ಜೆ ಇಡುತ್ತಿರುವುದನ್ನು ಮನಗಂಡು, ಪುಸ್ತಕಗಳಿಗೆ ವಸ್ತುವಾಗಬಲ್ಲ ಮಹನೀಯ ಸಂಖ್ಯೆ ಬೆಳೆದಿರುವುದನ್ನು ಗಮನಿಸಿ ರಾಷ್ಟ್ರೋತ್ಥಾನ ಸಾಹಿತ್ಯವು ಪ್ರಸಕ್ತ ಕಾಲದ ಕರೆಗೆ ಮತ್ತೊಮ್ಮೆ ಓಗೊಟ್ಟಿದೆ. 'ಮಕ್ಕಳಿಗಾಗಿ ಪುಸ್ತಕ ಪ್ರಕಟಣೆ ಒಂದು ಚಳವಳಿ ಆಗಬೇಕು' ಎಂಬ ಧ್ಯೇಯದಿಂದ ಕಾರ್ಯಾರಂಭ ಮಾಡಿದ 'ಭಾರತ-ಭಾರತಿ ಪುಸ್ತಕ ಸಂಪದ' ಇದೀಗ ತನ್ನ ಎರಡನೆಯ ಇನ್ನಿಂಗ್ಸ್ ಆರಂಭಿಸಿದೆ. ಮೊದಲ ಕಂತಿನ 510 ಪುಸ್ತಕಗಳು ಹೊರ ಬಂದ ತರುವಾಯ ಪುಸ್ತಕ ಪ್ರಕಟಣೆಯನ್ನು ನಿಲ್ಲಿಸಿದ್ದ ರಾಷ್ಟ್ರೋತ್ಥಾನ ಸಾಹಿತ್ಯವು 'ಭಾರತ-ಭಾರತಿ ಪುಸ್ತಕ ಸಂಪದ-2' ಎಂಬ ಹೆಸರಿನಲ್ಲಿ ಪುನರವತರಿಸಿ ಹೊಸದಾಗಿ 200 ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಇವುಗಳಲ್ಲಿ ಮೊದಲ ಐವತ್ತು ಪುಸ್ತಕಗಳು ಇದೇ ಜನವರಿ 28ರಂದು ಶಿವಮೊಗ್ಗದಲ್ಲಿ ಲೋಕಾರ್ಪಣೆ ಆಗಲಿವೆ. ಮೊದಲ 510 ಪುಸ್ತಕಗಳಲ್ಲಿ ಡಿ.ವಿ.ಜಿ. ಅವರನ್ನು ಕುರಿತು ಕೃತಿಯೊಂದನ್ನು ರಚಿಸಿಕೊಟ್ಟಿದ್ದ ಖ್ಯಾತ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನಾ. ಡಿಸೋಜ ಅವರು ಪುಸ್ತಕಗಳನ್ನು ಮಕ್ಕಳಿಗೆ ಅರ್ಪಿಸಲಿದ್ದಾರೆ.
'ಭಾರತ-ಭಾರತಿ ಪುಸ್ತಕ ಸಂಪದ-2' ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. 'ಸಂಪದ-1'ಕ್ಕೆ ಯಾವ ಯಾವ ಲೇಖಕರು ಪುಸ್ತಕಗಳನ್ನು ಬರೆದುಕೊಟ್ಟಿದ್ದರೋ ಆ ಮಹನೀಯರೇ ಸಂಪದ-2 ಮಾಲೆಯ ಪುಸ್ತಕಗಳ ವಸ್ತುಗಳಾಗಿ ವಿಜೃಂಭಿಸಿರುವುದು. ಹಾಗಾಗಿ ಈ ಮಾಲಿಕೆಯಲ್ಲಿ ಶಿವರಾಮ ಕಾರಂತ, ಕುವೆಂಪು, ಪಾ.ವೆಂ. ಆಚಾರ್ಯ, ಡಾ. ಎಂ. ಶಿವರಾಂ ಅವರನ್ನು ಕುರಿತ ಪುಸ್ತಕಗಳಿವೆ. ಪ್ರಸಿದ್ಧ ಕನ್ನಡಿಗರಾಗಿ ಇಂಗ್ಲಿಷಿನಲ್ಲಿ ಕೃತಿ ರಚನೆ ಮಾಡಿದ ಹಾಸನ ರಾಜಾರಾವ್, ಆರ್.ಕೆ. ನಾರಾಯಣ್ ಅವರ ಬಗೆಗೆ ಪುಸ್ತಕಗಳು ಹೊರಬರಲಿವೆ. ಈ ಸಲವೂ ಪುಸ್ತಕಗಳನ್ನು ಬರೆಸುವಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ವಿಶಾಲವಾದ ಸೆಕ್ಯುಲರ್ ಮಾನದಂಡವನ್ನು ಬಳಸಿದೆ. ಸುಗಮ ಸಂಗೀತ ಕ್ಷೇತ್ರದ ಅಶ್ವಿನೀ ದೇವತೆಗಳೆನಿಸಿಕೊಂಡ ಸಿ. ಅಶ್ವತ್ ಹಾಗೂ ಮೈಸೂರು ಅನಂತಸ್ವಾಮಿದ್ವಯರು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತ್ಯಸಾಯಿ ಬಾಬಾ ಭಕ್ತರಿಗೆ ಹಾಗೂ ಎಂ.ಜಿ. ರಾಮಚಂದ್ರನ್ರ ಅಭಿಮಾನಿಗಳಿಗೆ ಸಂತೋಷ ಆಗಲಿದೆ. ಆಡಳಿತಗಾರರು (ದಿವಾನ್ ಪೂರ್ಣಯ್ಯ), ಉದ್ಯಮಿಗಳು (ಡಾ. ಟಿ.ಎಂ.ಎ. ಪೈ), ಯಕ್ಷಗಾನ ಕಲಾವಿದರು (ಕೆರೆಮನೆ ಶಿವರಾಮ ಹೆಗಡೆ), ಸಾಹಿತಿಗಳು (ಗೋಪಾಲಕೃಷ್ಣ ಅಡಿಗ, ನಾ. ಕಸ್ತೂರಿ), ಅವಧೂತರು (ಗೊಂದಾವಲೆ ಬ್ರಹ್ಮಚೈತನ್ಯ) - ಹೀಗೆ ಸಮಾಜದ ಎಲ್ಲ ಸ್ತರಗಳಿಗೆ ಸೇರಿದ ಮಾನ್ಯರನ್ನು ಕುರಿತ ಪುಸ್ತಕಗಳ ರಸದೌತಣ ನಾಡಿನ ಮಕ್ಕಳಿಗೆ ನೀಡಲಿದೆ 'ಭಾರತ -ಭಾರತಿ ಪುಸ್ತಕ ಸಂಪದ-2' ನುರಿತ ಕಥೆಗಾರರೂ, ಖ್ಯಾತ ಪತ್ರಿಕೋದ್ಯಮಿಯೂ ಆದ 'ಚಿರಂಜೀವಿ' 'ಸಂಪದ-2 'ರ ಪ್ರಧಾನ ಸಂಪಾದಕರು. ಕನ್ನಡದ ಈಗಿನ ಹಿರಿ-ಕಿರಿ ಲೇಖಕರು ಬರೆದುಕೊಟ್ಟಿರುವ ಪುಸ್ತಕಗಳು ಇವಾಗಿರುವುದರ ಜೊತೆಗೆ ಆಧುನಿಕ ಮುದ್ರಣ ತಂತ್ರದ ಬಳಕೆ, ಮೋಹಕ ಬಣ್ಣದ ರಕ್ಷಾ ಹೊದಿಕೆ ಈಗ ಬರಲಿರುವ ಪುಸ್ತಕಗಳ ಹೆಗ್ಗಳಿಕೆಗಳಾಗಿರುತ್ತವೆ.
ನಮ್ಮ ನಾಡಿನ ಸಂಸ್ಕೃತಿ ಏಳಿಗೆಗಾಗಿ ಹಲವು ಹತ್ತು ರೀತಿಗಳಲ್ಲಿ ದಣಿವರಿಯದೆ ದುಡಿಯುತ್ತ ಬಂದಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಪುಸ್ತಕ ಸಮಾರಾಧನೆಯ ಈ ಕಾರ್ಯ ಪುಸ್ತಕ ಪ್ರೇಮಿಗಳಿಗೆ ಇಷ್ಟವಾಗಬೇಕು. 'ಭಾರತ -ಭಾರತಿ ಪುಸ್ತಕ ಸಂಪದ -1' ಮಾಲಿಕೆಯ 510 ಪುಸ್ತಕಗಳು ಹೊಸ ಕಳೆಯಿಂದ ಅಚ್ಚಾಗಿ ಹೊರಬಂದಿವೆ. 'ಸಂಪದ -2'ರ 200 ಪುಸ್ತಕಗಳೂ ಅವುಗಳನ್ನು ಕೂಡಿಕೊಳ್ಳಲಿವೆ. ಇದು ಸ್ವಾಗತಕ್ಕೆ ಅರ್ಹವಾದ ವಿದ್ಯಮಾನ.
-ಎಂ.ಕೆ. ಗೋಪಿನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


