ಬೇಕೇ ಮೊಬೈಲ್ ನಿಷೇಧ?

ಯುವತಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದ ವಿಧಾನಸಭೆಯ ಸದನ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಅದರಲ್ಲಿ ಒಂದು- 'ಕರ್ನಾಟಕ ಸರ್ಕಾರ ಕೂಡಲೇ ಶಿಕ್ಷಣ ಇಲಾಖೆಗೆ ಸೂಚನೆಗಳನ್ನು ನೀಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಮೊಬೈಲ್ ಫೋನ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು' ಎಂಬುದು. ಅತ್ಯಾಚಾರ ಪ್ರಕರಣ ಹೆಚ್ಚಲು ಮೊಬೈಲ್ ಬಳಕೆ ಒಂದು ವಾಹಕವೇನೋ ಹೌದು. ಆದರೆ, ಈ ಶಿಫಾರಸು 'ಶೀತವೆಂದು ಮೂಗನ್ನೇ ಕೊಯ್ದ ಹಾಗಾಗಲಿಲ್ಲವೇ?' ಎಂಬ ಪ್ರಶ್ನೆ ಮೂಡಿಸುತ್ತಿದೆ.
ಹೌದು, ಕರಾವಳಿ ಭಾಗದಲ್ಲಿ ಕೆಲ ವರ್ಷಗಳಿಂದ ವರದಿಯಾದ ಯುವತಿಯರ ನಾಪತ್ತೆ ಪ್ರಕರಣ, ಲವ್ ಜಿಹಾದ್, ಅತ್ಯಾಚಾರ ಇತ್ಯಾದಿ ಪ್ರಕರಣಗಳ ಆರಂಭಕ್ಕೆ ಮೊಬೈಲ್ ಮಾಧ್ಯಮವಾಗಿದ್ದು ದೃಢಪಟ್ಟಿದೆ. ಮೊಬೈಲ್ಗೆ ಬಂದ ಮಿಸ್ಡ್ ಕಾಲ್ ಅಥವಾ ತಪ್ಪಿ ಬಂದ ಮೆಸೇಜ್ನ ಜಾಡು ಹಿಡಿದು ಯುವತಿಯರ ಪರಿಚಯ ಮಾಡಿಕೊಳ್ಳುವ ಯುವಕರು ಅದರ ದುರ್ಬಳಕೆ ಮಾಡಿ, ಅದು ಅತ್ಯಾಚಾರಕ್ಕೋ, ಅಪಹರಣದ ವರೆಗೋ ತಲುಪಿರುವ ಪ್ರಕರಣಗಳು ನಡೆದಿವೆ. ಹಾಗೆಂದು ಅತ್ಯಾಚಾರಕ್ಕೆ ಮೊಬೈಲ್ ಒಂದು ವಾಹಕವೇ ಹೊರತು ಅದುವೇ ಸರ್ವತ್ರ ಕಾರಣವೇನೂ ಅಲ್ಲವಲ್ಲ?
ಮೊಬೈಲ್ನ್ನು ದುಷ್ಕೃತ್ಯಗಳಿಗೆ ಹೇತುವೆಂದೇ ಬಿಂಬಿಸಲಾಗುತ್ತಿದೆ. ಎಷ್ಟೋ ಮಂದಿ ಮಧ್ಯಮ ವರ್ಗದ ಯುವತಿಯರಿಗೆ ಮೊಬೈಲ್ ವರದಾನವೂ ಹೌದಲ್ವೇ? ಮನೆ ಬಿಟ್ಟು ದೂರದ ಹಾಸ್ಟೆಲ್ನಲ್ಲಿ ಓದುತ್ತಿರುವ ಯುವತಿಯರಿಗೆ ಮನೆಯವರನ್ನು ಸಂಪರ್ಕಿಸಲು ಮೊಬೈಲ್ ಉತ್ತಮ ಸಾಧನವಲ್ಲವೇ? ಹಾಸ್ಟೇಲ್ನಲ್ಲಿರೋ ಒಂದೇ ಒಂದು ಕಾಯಿನ್ ಫೋನ್ ನಂಬಿ ದಿನಾ ಮಾತನಾಡಲು ಸಾಧ್ಯವೇ? ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಯುವತಿಯರು ತಮ್ಮ ರಕ್ಷಣೆಗೋಸ್ಕರ ಮೊಬೈಲ್ನಲ್ಲಿ ಪರಿಚಯದವರೊಡನೆ ಸಂಭಾಷಿಸುತ್ತಾ ನಡೆದರೆ ಅವರಿಗೂ ಒಂದು ಭದ್ರತಾ ಭಾವನೆ ಬರಲು ಸಾಧ್ಯ ಅಲ್ಲವೇ? ಕಂಪ್ಯೂಟರ್, ಲ್ಯಾಪಟಾಪ್ ತೆಗೆಯಲು ಶಕ್ತರಲ್ಲದ ಮಧ್ಯಮ ವರ್ಗದ ವಿದ್ಯಾರ್ಥಿನಿಯರು ಅಗ್ಗದ ಸ್ಮಾಟ್ ಫೋನ್ಗಳ ಮೂಲಕ ಅಂತರ್ಜಾಲ ಲೋಕದಿಂದ ಬೇಕಾದ ಮಾಹಿತಿಗಳನ್ನು ಡೌನ್ಲೋಡ್ ಮಾಡಲು ಸಾಧ್ಯ.
ತಂತ್ರಜ್ಞಾನದ ಸರಿಯಾದ ಬಳಕೆ, ಅದಕ್ಕೆ ಸೂಕ್ತ ಮಾರ್ಗದರ್ಶನ, ನೀತಿಸಂಹಿತೆಗಳಿಂದ ಸದುಪಯೋಗ ಸಾಧ್ಯ ಹೊರತು ನಿಷೇಧಿಸಿದರೆ ಅದು ಇನ್ನೊಂದು ರೂಪದಲ್ಲಿ ಹೊರ ಬಂದೀತು ಅಷ್ಟೆ! ನಿಷೇಧ ತಾತ್ಕಾಲಿಕ, ಜಾಗೃತಿ ಶಾಶ್ವತ. ಕ್ಯಾಂಪಸ್ಗಳಲ್ಲಿ ಮೊಬೈಲ್ ನಿಷೇಧಿಸಿದ ಮಾತ್ರಕ್ಕೆ ಜಾಗೃತಿ ಮೂಡುತ್ತದೆಯೇ? ಹಾಸ್ಟೆಲ್ಗಳಲ್ಲಿ, ಮನೆಗಳಲ್ಲಿ, ಅಷ್ಟೇ ಯಾಕೆ ಸ್ನೇಹಿತೆಯರ ಮೊಬೈಲ್ಗಳನ್ನು ಎಲ್ಲೆಂದರಲ್ಲಿ ಬಳಸಬಹುದು. ಇದಕ್ಕೆಲ್ಲಾ ಕಡಿವಾಣ ಹಾಕುವವರು ಯಾರು? ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸಿದರೆ ಸಾಕೇ? ಅವರೇನು ಮಾಡುತ್ತಿದ್ದಾರೆ, ಅವರ ಚಟುವಟಿಕೆಗಳು ಹೇಗೆ ಬದಲಾಗುತ್ತಿವೆ ಎಂದು ಗಮನಿಸಬೇಕಾದ ಜವಾಬ್ದಾರಿ ಪೋಷಕರಿಗಿಲ್ಲವೇ? ವಾಸ್ತವವಾಗಿ ಯಾವ ವಯಸ್ಸಿನಲ್ಲಿ ಮಗಳಿಗೆ,ಮಗನಿಗೆ ಮೊಬೈಲ್ ಕೊಡಿಸಬೇಕು ಎಂಬ ಸೂಕ್ತ ನಿರ್ಧಾರದ ಅರಿವು ಪೋಷಕರಿಗಿರಬೇಕು, ಸರ್ಕಾರಕ್ಕಲ್ಲ.
ನಂತರ ಅದಕ್ಕೆ ಬರುವ ಕರೆಗಳು, ಮೆಸೇಜ್ಗಳು, ಇತರ ಚಟುವಟಿಕೆಗಳ ಬಗ್ಗೆ ನಿಗಾ ಬೇಕು. ಮಿಸ್ಡ್ ಕಾಲ್ ಬಂದು, ಪರಿಚಯಾಗಿ, ಓಡಿ ಹೋಗುವ ತನಕವೂ ಹೆತ್ತವರಿಗೆ ಗೊತ್ತಾಗುವುದಿಲ್ಲ ಎಂದಾದರೆ, ಕೊನೆಗೆ ಅತ್ಯಾಚಾರವೆಂದು ಪ್ರಕರಣ ದಾಖಲಾದ ಬಳಿಕ ಅಲವತ್ತು ಪ್ರಯೋಜನವೇನು? ಅಷ್ಟರ ಮಟ್ಟಿಗೂ ಮಕ್ಕಳನ್ನು ನಿಯಂತ್ರಿಸಲು ಅಸಾಧ್ಯವಾದರೆ ಹೆತ್ತವರೇ ಮಕ್ಕಳಿಗೆ ಮೊಬೈಲ್ ಕೊಡಿಸುವ ಮೊದಲು ಯೋಚಿಸಬೇಕು.
ತಪ್ಪು ಮೊಬೈಲ್ನದ್ದಲ್ಲ, ಅದರ ಬಳಕೆಯ ವಿಧಾನದ್ದು. ಅದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಪೋಷಕರು, ಶಿಕ್ಷಕರು, ಹಾಗೂ ಸರ್ಕಾರಕ್ಕೂ ಇದೆ. ಮೊಬೈಲ್ ರಿಚಾರ್ಜ್, ಟಾಪ್ಅಪ್ ಹಾಕಿಸುವ ಶಾಪ್ಗಳಲ್ಲೂ ಮಹಿಳೆಯರು, ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆ ಅಥವಾ ಭದ್ರತೆ ಇರುವ (ನಂಬರ್ ಲೀಕ್ ಆಗದ) ವ್ಯವಸ್ಥೆಯನ್ನೂ ರೂಪಿಸಬಹುದು.
ಎರಡನೆಯದಾಗಿ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಎಷ್ಟು ಮಂದಿಗೆ ಕಠಿಣ ಶಿಕ್ಷೆ ಆಗುತ್ತದೆ ಹೇಳಿ? ಕಠಿಣ ಶಿಕ್ಷೆ ಆಗದಿರುವುದರಿಂದಲೇ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸರ್ಕಾರ ಮೊದಲು, ರಾಜ್ಯದ ಠಾಣೆಗಳಲ್ಲಿ ಖಾಲಿ ಬಿದ್ದಿರುವ ಪೊಲೀಸ್ ಸಿಬ್ಬಂದಿ ನೇಮಕದ ಬಗ್ಗೆ ಗಮನ ಹರಿಸಲಿ. ಆ ಮೂಲಕ ತಪ್ಪಿತಸ್ಥರನ್ನು ಶೀಘ್ರ ಸೆರೆ ಹಿಡಿದು ಸೂಕ್ತ ಬುದ್ಧಿ ಕಲಿಸಿದರೆ ಅದೊಂದು ಪಾಠವಾದರೂ ಆದೀತು. ಇದು ಮುಕ್ತ ಮಾರುಕಟ್ಟೆ ಯುಗ. ನೀವು ಮೊಬೈಲ್ ನಿಷೇಧಿಸಿದರೆ ಇನ್ನೊಂದು ವಸ್ತು ಯುವಜನರನ್ನು ಹುಡುಕಿಕೊಂಡು ಬರುತ್ತದೆ. ಅಂತಹವುಗಳನ್ನು ನಿಷೇಧಿಸುತ್ತಲೋ ಹೋಗಬೇಕಾಗುತ್ತದೆ. ಅದರ ಬದಲು ಇವುಗಳ ಬಗ್ಗೆ ಅರಿವು ಮೂಡಿಸುವುದೇ ಸರಿಯಾದ ಮಾರ್ಗ.
ನಮ್ಮಲ್ಲಿ ಎಷ್ಟು ನಿಷೇಧದ ಕಾನೂನುಗಳು ಸಮರ್ಪಕವಾಗಿ ಜಾರಿಯಲ್ಲಿವೆ ಯೋಚಿಸಿ? ವರದಕ್ಷಿಣೆ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡುವುದು ನಿಷೇಧ... ಹೀಗೆ ಕಾನೂನುಗಳ ಸರಮಾಲೆಯೇ ಇವೆ. ಇವೆಲ್ಲ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುದು ಸರ್ವ ವಿಧಿತ. ಹಾಗಾಗಿ ಪಾಲಿಸಲು ಸಾಧ್ಯವಾಗುವ, ಬದಲಾವಣೆಗೆ ಒಗ್ಗಿಕೊಳ್ಳುವ, ಸಕಾರಾತ್ಮಕ ಧೋರಣೆಯ ಶಿಫಾರಸುಗಳು ಬಂದರೆ 'ಲೋಕಾ ಸಮಸ್ತಾ ಸುಖಿನೋ ಭವಂತು'.
- ಕೃಷ್ಣಮೋಹನ ತಲೆಂಗಳ ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


