ಪರಿಸರ ಕಾಳಜಿಗೆ ಬೇಕು ತಾಯಿಭಾವ
'ವಂದೇ ಮಾತರಂ, ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ ವಂದೇ.. ಶುಭ್ರ ಜ್ಯೋತ್ಸ್ನ ಪುಲಕಿತಯಾಮಿನೀಂ, ಫೂಲ್ಲ ಕುಸುಮಿತ ದ್ರುಮದಲ ಶೋಭಿನೀಂ, ಸುಹಾಸಿನೀಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಂ..ವಂದೇ...ಮಾತರಂ.' ಅಂದರೆ, ಅಮ್ಮಾ ನಿನಗೆ ಪ್ರಣಾಮ, ಸಮೃದ್ಧ ನೀರು, ಫಲವತ್ತಾದ ನೆಲ, ದಕ್ಷಿಣ ಪರ್ವತಗಳ ತಂಗಾಳಿ, ವನಸಂಪತ್ತಿನಿಂದ ಹಸಿರಾದ ನನ್ನಮ್ಮ ನಿನಗೆ ವಂದನೆಗಳು ಪ್ರಣಾಮಗಳು, ಬೆಳದಿಂಗಳ ಬೆಳಕು ನಿನ್ನ ರಾತ್ರಿಗಳನ್ನು ಬೆಳಗಿಸಿವೆ, ಹೂಬಿಟ್ಟ ನಿನ್ನ ನೆಲ ಶೋಭಿಸುತ್ತಿದೆ, ನಗುಮುಖದವಳು, ಸುಮಧುರವಾಗಿ ಮಾತನಾಡುವಳು, ಸುಖಕೊಡುವ, ವರಕೊಡುವ ನನ್ನಮ್ಮ.. ಅಮ್ಮಾ ನಿನಗೆ ಪ್ರಣಾಮ.. ಇದು ನಮ್ಮ ದೇಶದ ಆತ್ಮಗೀತೆಯಾದ ವಂದೇ ಮಾತರಂ ಹಾಡಿನ ಮೊದಲ ಚರಣ. ಇಲ್ಲಿ ನಮ್ಮ ಪ್ರಕೃತಿಯನ್ನೇ ಭಾರತ ಮಾತೆಗೆ ಹೋಲಿಸಿ ಆಕೆಗೆ ಧನ್ಯವಾದಗಳನ್ನು ಮನತುಂಬಿ ಹೇಳುವಂತೆ ಮಾಡಿದೆ.
ಎಲ್ಲಿ ಯಾವುದು ಪೂಜ್ಯವೋ ಗೌರವಾರ್ಹವೋ ಅದು ಪವಿತ್ರವಾಗಿರುತ್ತದೆ. ಎಲ್ಲಿ ಈ ಭಾವದ ಅಭಾವವೋ ಅಲ್ಲಿ ಮಲಿನವೆಂಬುದು, ಕೊಳಕು ಎಂಬುದು ಆವರಿಸುತ್ತದೆ. ಪರಿಸರ ಅಥವಾ ಪ್ರಕೃತಿ ಎಂಬುದು ನಮ್ಮ ಹಳ್ಳಿಪರಂಪರೆಯಲ್ಲಿ ಹೇಗೆ ವೈಜ್ಞಾನಿಕವಾಗಿ ನಡೆದು ಬಂದಿದೆ ಎಂಬುದನ್ನು ತಿಳಿಯೋಣ. ನಮ್ಮ ಸಂಸ್ಕೃತಿಯಲ್ಲಿ ಮನೆಯೇ ಮಂತ್ರಾಲಯ, ಶಾಲೆ ಎಂಬುದು ದೇವಾಲಯ ನಮ್ಮ ಊರು ನಮ್ಮ ತವರು ಎಂದು ಹೇಳಿಕೊಡುವುದರೊಂದಿಗೆ ಶಿಕ್ಷಣವು ಆರಂಭವಾಗುತ್ತದೆ. ಮನೆಯಲ್ಲಿ ದೇವರ ಮನೆ ಇರುವುದರಿಂದ ಇಡೀ ಮನೆಯೇ ಒಂದು ದೇವಾಲಯದಂತೆ, ಹೊರ ಆವರಣದಲ್ಲಿ ತುಳಸಿಕಟ್ಟೆ ಇರುವುದರಿಂದ ಅದರ ಸುತ್ತಮುತ್ತಲೂ ಶುಭ್ರ. ಇನ್ನು ಹೊರಬಂದರೆ ಅಲ್ಲಿ ಬಾವಿಕಟ್ಟೆ. ಅದು ಗಂಗಾಮಾತೆಯ ಆವಾಸಸ್ಥಾನ. ಅದರ ಆವರಣವೂ ಮಲಿನ ಮುಕ್ತ. ನಂತರ ತೋಟ ಅಲ್ಲಿ ಎಕ್ಕದ ಗಿಡ, ಬೇವು, ಕಲ್ಪವೃಕ್ಷವಾದ ತೆಂಗಿನಮರ. ಅದೂ ದೇವತಾಸಂಭೂತ. ಅಲ್ಲಿಂದ ಹೊರಟರೆ ಶಾಲೆ, ಸರಸ್ವತಿಯ ಗರ್ಭಗುಡಿ. ಶಾಲೆಯ ಗುರುಗಳು ಅರ್ಚಕರ ಸ್ವರೂಪ. ಅವರ ಮಾತೇ ವೇದವಾಕ್ಯ. ಪರಿಸರ ಎಂಬ ದೈವಪ್ರಜ್ಞೆ ಮೂಡುವುದೇ ಅಲ್ಲಿಂದ.
ಇಂದು ವಿದ್ಯಾವಂತ ನಗರಜೀವಿಗಳಾದ ನಮ್ಮ ಮನೆ ಮತ್ತು ಮನಗಳಿಂದಲೇ ದೇವರೆಂಬುದು, ಪೂಜ್ಯತೆ ಎಂಬುದು ಮಾಯವಾಗುತ್ತಿದೆ. ಅಂತಹುದರಲ್ಲಿ ನಮ್ಮದಲ್ಲದ (?) ನಮ್ಮ ರಸ್ತೆಯಲ್ಲಿ ಇನ್ನಾವ ದೇವರನ್ನು ಕಾಣಲು ಸಾಧ್ಯ? ಪರಿಸರ ಮತ್ತು ಪ್ರಕೃತಿ ಎಂಬುದು ನೈಜ ಮತ್ತು ಜೀವಂತವಾಗಿರುವುದೇ ಹಳ್ಳಿಗಳಲ್ಲಿ. ಅಲ್ಲಿ ಮನೆ, ಗುಡಿ, ಶಾಲೆಗಳ ಸುತ್ತಮುತ್ತಲು ದೈವಪ್ರಜ್ಞೆಯಿಂದ ಕೂಡಿದ್ದರೆ, ಇಂದು ಅದೇ ದೇವರುಗಳನ್ನು ಹೊರಗೋಡೆಯಾದ ಕಾಂಪೌಂಡಿಗೆ ಅಂಟಿಸಿ ಮಲಮೂತ್ರವನ್ನು ತಡೆಯುವಂತ ಗತಿ ಬಂದಿದೆ. ಹಳ್ಳಿಗಳಲ್ಲಿ ಒಂದು ಗೋವು ಅಸುನೀಗಿದರೆ ಅದನ್ನು ಮನುಷ್ಯನಂತೆ ಕಂಡು ಭೂಮಿಯಲ್ಲಿ ಸಂಸ್ಕಾರ ಮಾಡಲಾಗುತ್ತದೆ. ಆದರೆ ನಗರದ ತಮ್ಮ ಮನೆಯೊಳಗೆ ಒಂದು ಇಲಿ ಅಥವಾ ಹೆಗ್ಗಣ ಸತ್ತರೆ ಅದು ರಸ್ತೆಯಲ್ಲಿ ಕೊಳೆತು ನಾರುತ್ತಿರುತ್ತದೆ. ರಸ್ತೆಯಲ್ಲಿ ನಾಯಿಯೊಂದು ಸತ್ತು ಬಿದ್ದರೆ ಅದರಿಂದ ಮೂಗು ಮುಚ್ಚಿಕೊಳ್ಳುವವರೆಗೂ ಕಣ್ಣುಮುಚ್ಚಿಕೊಂಡು ಓಡಾಡುತ್ತಿರುತ್ತೇವೆ. ಇಂದು ಒಂದು ರಸ್ತೆಯ ಸ್ಥಿತಿ ಆ ಊರಿನ ಗತಿ ಹೇಗಿದೆ ಎಂದು ತಿಳಿಸುತ್ತದೆ. ಹಾಗೇ ಒಂದು ಊರಿನ ಪರಿಸರ ಅಲ್ಲಿನ ಜನವಾಸಿಗಳ ವ್ಯಕ್ತಿತ್ವ, ಬದುಕು ಮತ್ತು ಆರೋಗ್ಯವನ್ನು ರೂಪಿಸುತ್ತದೆ. ನಾವು ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವಂತೆ ನಮ್ಮ ಸುತ್ತಲಿನ ಪರಿಸರದಲ್ಲೂ ಮುಖವನ್ನು ನೋಡಿಕೊಂಡರೆ ನಮ್ಮ ಮುಖವಷ್ಟೇ ನಮ್ಮ ಆವರಣವನ್ನು ರಸ್ತೆಯನ್ನೂ ಆಕರ್ಷಕವಾಗಿ ತೋರಿಸಿಕೊಳ್ಳಬಹುದು. ಏಕೆಂದರೆ ನಮ್ಮ ಮುಂದಿನ ಪರಿಸರವೂ ಒಂದು ಕನ್ನಡಿಯಂತೆ. ಆಗಾಗ ಅದರಲ್ಲಿ ನಮ್ಮನ್ನು ಕಾಣಬೇಕಿದೆ.
ಶುಭಸಮಾರಂಭಗಳಲ್ಲಿ ಹಣ ಉಡುಗೊರೆ ನೀಡುವ ಬದಲಾಗಿ ಒಂದೊಂದು ಗಿಡವನ್ನು ನೀಡುವಂತಾಗಲಿ. ಪಡಿತರದೊಂದಿಗೆ ಗಿಡವನ್ನು ನೀಡುವಂತಾಗಲಿ. ಶಾಲೆಯ ಮಕ್ಕಳಿಗೆ ಒಂದೊಂದು ಗಿಡವನ್ನು ಬೆಳೆಸಿ ಸಂರಕ್ಷಿಸುವ ಜವಾಬ್ದಾರಿ ನೀಡಿ ಅದಕ್ಕೂ ಅಂಕವನ್ನು ನೀಡುವಂತಾಗಲಿ. ಮರಗಿಡಗಳನ್ನು ಬೆಳೆಸಿರುವ ಮನೆಗಳಿಗೆ ವಿದ್ಯುತ್ನಲ್ಲಿ, ನೀರಿನ ಬಿಲ್ನಲ್ಲಿ ರಿಯಾಯಿತಿ ನೀಡುವಂತಾಗಲಿ. ವಿಶ್ವ ಪರಿಸರದಿನದಂದು ಭೂತಾಯಿಯ ಪವಿತ್ರ ವಸ್ತ್ರರೂಪವಾದ ಹಸಿರು ಪ್ರಕೃತಿಯನ್ನು ರಕ್ಷಿಸುವ ಪ್ರಮಾಣ ಮಾಡೋಣ.
-ದೇ. ವಿ. ಮಹೇಶ್ವರ ಹಂಪಿ
gathavaibhava1336@ gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

